ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಣೆ ಮಾಡಿದ್ದನ್ನು ವಿರೋಧಿಸಿ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆದಿದೆ.
ಬೆಂಗಳೂರು, ಬಳ್ಳಾರಿ, ವಿಜಯನಗರ, ತುಮಕೂರು, ಮೈಸೂರು, ಕೊಪ್ಪಳ, ಮಂಡ್ಯ, ಕಲಬುರ್ಗಿ, ಶಿವಮೊಗ್ಗ, ಗದಗ್ ಸೇರಿದಂತೆ ವಿವಿಧ ತಾಲ್ಲೂಕಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರಧಾನಿ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕ ಸರಕಾರ ಜುಲೈ ಒಂದರಿಂದ ಎಲ್ಲ ಬಿಪಿಎಲ್, ಅಂತ್ಯೋದಯ ಕಾರ್ಡದಾರರಿಗೆ ಈಗ ನೀಡಲಾಗುತ್ತಿದ್ದ 5 ಕೆಜಿ ಅಕ್ಕಿಯನ್ನು ಹೆಚ್ಚಿಸಿ ತಲಾ 10 ಕೆಜಿ ಅಕ್ಕಿ ಅಥವಾ ಆಹಾರಧಾನ್ಯ ನೀಡಲು ನಿರ್ಧರಿಸಿ ಪ್ರಕಟಿಸಿದ್ದು ಸ್ವಾಗತಾರ್ಹವಾಗಿದೆ. ಆದರೇ, ಒಕ್ಕೂಟ ಸರಕಾರವು ರಾಜ್ಯಕ್ಕೆ ಹೆಚ್ಚುವರಿ ಆಹಾರಧಾನ್ಯ ನೀಡುವಲ್ಲಿ ಸಂಕುಚಿತ ರಾಜಕೀಯ ಮಾಡುತ್ತಿರುವುದು ತೀವ್ರ ಖಂಡನೀಯವಾಗಿದೆ ಎಂದು ಪ್ರತಿಭಟನೆಕಾರರು ಆಕ್ರೋಶವ್ಯಕ್ತಪಡಿಸಿದರು.

ರಾಜ್ಯ ಸರಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಆಹಾರಧಾನ್ಯ ನೀಡಲು ಭಾರತ ಆಹಾರ ನಿಗಮದ ಅಧಿಕಾರಿಗಳು ಒಪ್ಪಿದ್ದರೂ ಕೂಡಾ, ಒಕ್ಕೂಟ ಸರಕಾರ ಬಡವರ ವಿರೋಧಿಯಾಗಿ ನಿಂತಿರುವುದು ಅಕ್ಷಮ್ಯವಾಗಿದೆ. ಬಿಜೆಪಿ ಮತ್ತು ಒಕ್ಕೂಟ ಸರಕಾರ ತಮ್ಮ ಸಂಕುಚಿತ ಜನ ವಿರೋದಿ ರಾಜಕಾರಣವನ್ನು ಈ ಕೂಡಲೇ ಕೈ ಬಿಟ್ಟು ಒಪ್ಪಂದದಂತೆ ಭಾರತ ಆಹಾರ ನಿಗಮದ ಮೂಲಕ ಆಹಾರ ಧಾನ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುಬೇಕು ಎಂದು ಒಕ್ಕೂಟ ಸರಕಾರ ಹಾಗೂ ಪ್ರಧಾನ ಮಂತ್ರಿಗಳಿಗೆ ಆಗ್ರಹಿಸಲಾಯಿತು.
ರಾಜ್ಯ ಸರಕಾರದ ಈ ಯೋಜನೆಯು ಬಡವರ ಹಸಿವು ನೀಗಿಸಲು ನೆರವಾಗುವ ಯೋಜನೆಯಾಗಿದ್ದು ಇದು ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ತಳ ಮಟ್ಟದಲ್ಲಿರುವ ನಮ್ಮ ದೇಶವನ್ನು ಸ್ವಲ್ಪವಾದರೂ ಮೇಲೆತ್ತುವ ಯೋಜನೆಯೆಂಬುದನ್ನು ಒಕ್ಕೂಟ ಸರಕಾರ ಅರಿಯಬೇಕು. ಒಕ್ಕೂಟ ಸರಕಾರ ರಾಜ್ಯ ಹಿತದ ವಿರುದ್ದ ನಗ್ನವಾಗಿ ನಿಂತಿರುವಾಗ ನಮ್ಮ ರಾಜ್ಯ ಬಹುತೇಕರು ಬಿಜೆಪಿ ಎಂಪಿ ಗಳಿರುವಾಗ ಅವರು ಬಾಯಿ ಹೊಲೆದುಕೊಂಡಿರುವುದು ಅವರ ವಿರೋದಿ ನೀತಿಯನ್ನು ಬಯಲುಗೊಳಿಸುತ್ತದೆ ಎಂದು ಪ್ರತಿಭಟನೆಕಾರರು ಕಟುವಾಗಿ ಠೀಕಿಸಿದರು.
ಜನರಿಗೆ ಆಹಾರಧಾನ್ಯದ ಬದಲು ನಗದು ವರ್ಗಾವಣೆ ಮಾಡುವಂತೆ ಸೂಚಿಸುವ ಬಿಜೆಪಿ ಧೋರಣೆಯು ಬಡವರಪರವಾಗಿರದೇ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಯಾಗಿದೆ. ಒಕ್ಕೂಟ ಸರಕಾರದ ಈ ಜನ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದ್ದಾರೆ.





