ಅಂಜನಾದ್ರಿ ಬೆಟ್ಟದಲ್ಲಿ ಅನ್ಯಧರ್ಮದವರ ವ್ಯಾಪಾರಕ್ಕೆ ತೊಡಕಾಗಿರುವ ಹಿಂದುತ್ವ ಸಂಘಟನೆ ವರ್ತನೆಗೆ ಸಿಪಿಐ(ಎಂ) ವಿರೋಧ

ಗಂಗಾವತಿ: ಹಿಂದೂ ಜಾಗರಣ ವೇದಿಕೆಯಂಥಹ ಹಿಂದುತ್ವ ಕೋಮುವಾದಿ ಸಂಘಟನೆಗಳ ಅತಿರೇಖದ ವರ್ತನೆ ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿದೆ. ಅಂಜನಾದ್ರಿ ಬೆಟ್ಟದಲ್ಲಿ ಅನ್ಯಧರ್ಮೀಯರ ವ್ಯಾಪಾರಿಗಳಿಗೆ ಅವಕಾಶ ಕೊಡಕೂಡದೆಂದು ಅತಿರೇಖದ ವರ್ತನೆ ಖಂಡನೀಯ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಆಕ್ರೋಶ ವ್ಯಕ್ತಪಡಿಸಿದೆ.

ಹಿಂದುತ್ವ ಸಂಘಟನೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ಸಿಪಿಐ(ಎಂ) ಪಕ್ಷವು ಜಿಲ್ಲಾಧಿಕಾರಿಗಳಿಗೆ ಅಧಿಕಾರಿಗಳ ಮೂಲಕ ಮನವಿ ಅರ್ಪಿಸಿದೆ. ಈ ಕುರಿತು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ, ನಿರುಪಾದಿ ಬೆಣಕಲ್‌ ಮಾತನಾಡಿ, ನವೆಂಬರ್‌ 26 ಸಂವಿಧಾನ ಸಮರ್ಪಣ ದಿನವನ್ನು ದೇಶಾದ್ಯಾಂತ ಆಚರಿಸುತ್ತೇವೆ ಆದರೆ, ದೇಶದ ಬಹುತ್ವ ಸಂಸ್ಕೃತಿಗೆ ಕೂಡಿಬಾಳುವ ಪರಂಪರೆಗೆ ಧಕ್ಕೆ ತರುವ ರೀತಿಯಲ್ಲಿ ಹಿಂದುತ್ವವಾದಿಗಳ ಅತಿರೇಕ ವರ್ತನೆಗಳನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಹೀಗೆ ಅತಿರೇಕದ ವರ್ತನೆಗಳನ್ನು ಹಿಂದುತ್ವವಾದಿ ಸಂಘಟನೆಗಳು ಮಾಡಿರುವುದು ಸರ್ಕಾರದ ಗಮನಕ್ಕೂ ಬಂದಿದೆ. ಅದೇ ರೀತಿ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಶಾಂತಿ ಸಹಬಾಳ್ವೆಗೆ ಹೆಸರಾಗಿದ್ದು ಅದಕ್ಕೆ ಮಸಿ ಬಳೆಯುವ ಕೆಲಸವನ್ನು ಯಾರೇ ಮಾಡಿದರೂ ಅದನ್ನು ದುಷ್ಕೃತ್ಯವೆಂದು ಪರಿಗಣಿಸಿ ನೆಲದ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸಿಪಿಐ(ಎಂ) ಪಕ್ಷವು ಒತ್ತಾಯಿಸಿದೆ.

ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆಯು ಡಿಸೆಂಬರ್‌ 05ರಂದು ನಡೆಯುತ್ತಿದ್ದು ಹಿಂದುತ್ವ ಸಂಘಟನೆಗಳು ಕೋಮು ಗಲಭೆಯನ್ನು ಸೃಷ್ಟಿಸಲು ಹುನ್ನಾರ ನಡೆಸುತ್ತಿದೆ.‌ ಹಾಗಾಗಿ ಸರ್ಕಾರ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು, ಅಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಲ್ಲಾ ಕೋಮಿನ ಎಲ್ಲಾ ಜನಾಂಗದವರಿಗೆ ಸಮಾನ ಅವಕಾಶ, ಸಮಾನ ಆದ್ಯತೆ ಸಿಗುವಂತೆ ಮಾಡಬೇಕೆಂದು ಮನವಿ ಸಲ್ಲಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *