ಅಂಜನಾದ್ರಿ ಅಭಿವೃದ್ದಿಗೇಕೆ ಇಷ್ಟು ಅವಸರ?

ಎಸ್.ವೈ. ಗುರುಶಾಂತ್

ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಗಂಗಾವತಿಯ ಬಳಿಯ ಅಂಜನಾದ್ರಿ ಬೆಟ್ಟದ ಪ್ರದೇಶದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ದಾರೆ. ಆ ಪ್ರದೇಶದ ಜನರ ಸಲಹೆಗಳು, ತೀವ್ರ ವಿರೋಧವನ್ನು ಲೆಕ್ಕಿಸದೇ, ಭೂಸ್ವಾಧೀನದಂತಹ ಪ್ರಕ್ರಿಯೆಯೆಯನ್ನು ನಡೆಸದೇ `ಕಂಡ’ ಭೂಮಿಯಲ್ಲಿ ಪೂಜೆ ಮಾಡಿ ಎದ್ದು ಹೋಗಿದ್ದರ ವಿರುದ್ಧ ಆಕ್ರೋಶ ಸಿಡಿದಿದೆ. ಜೊತೆಗೆ ಅಭಿವೃದ್ದಿಯನ್ನು ವಿರೋಧಿಸುವುದಿಲ್ಲವಾದರೂ ಅಲ್ಲಿಯ ಪ್ರಾಚೀನ ಪಾರಂಪಾರಿಕ ಸಂಸ್ಕೃತಿ ಪರಿಸರಕ್ಕೇ ಧಕ್ಕೆಯಾಗಬಾರದು ಎನ್ನುವ ತಜ್ಞರು, ಗಣ್ಯರ ಅಭಿಪ್ರಾಯಗಳಿಗೆ ಕವಡೆ ಕಿಮ್ಮತ್ತನ್ನೂ ನೀಡಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ. ತನ್ನದೂ ಸಹ ಉತ್ತರ ಪ್ರದೇಶದ ʻಬುಲ್ಡೋಜರ್ ಆಡಳಿತʼ ಎನ್ನುವುದನ್ನು ಬಸವರಾಜ ಬೊಮ್ಮಾಯಿ ಪ್ರದರ್ಶಿಸಿದ್ದಾರೆ. ಏಕಿಷ್ಟು ತರಾತುರಿ ಅವರಿಗೆ? ಚುನಾವಣೆಗೂ ಮೊದಲು ಕಾಮಗಾರಿ ಯಾಕೆ ಮಾಡಿಲ್ಲವೆಂದು ಹನುಮಂತರಾಯ ಸಿಟ್ಟಾಗುವನೇ?

ಈ ಪ್ರದೇಶದ ಅಭಿವೃದ್ದಿಗೆಂದು ಬಜೆಟ್ ನಲ್ಲಿ ಸರಕಾರ 125 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಮೊದಲ ಹಂತದಲ್ಲಿ ರೂ.21.51 ಕೋಟಿ ಬಿಡುಗಡೆ ಮಾಡಿದೆ ನಿಜ. ಆದರೆ ಇನ್ನೇನು ಚುನಾವಣೆಗಳು ಘೋಷಿತವಾಗುವ ಹೊಸ್ತಿಲಿನಲ್ಲಿ ಕರ್ನಾಟಕ ನಿಂತಿದೆ. ಈ ಅಭಿವೃದ್ದಿ ʻಕಾಮಗಾರಿʼಗೂ ಚುನಾವಣೆಗೂ ಇರುವ ʻಪರ್ಸೆಂಟೇಜ್ʼ ಸಂಬಂಧ ಎಷ್ಟು? ರಾಜಕೀಯ ಮೈಲಿಗಲ್ಲಿನ ನಿರೀಕ್ಷೆ ಇಲ್ಲಿದೆಯೇ?

ಇದನ್ನು ಓದಿ: ಸಿಎಂ ಭೇಟಿ : ಅಂಜನಾದ್ರಿಯಲ್ಲಿ ವ್ಯಾಪಾರ ಅಂಗಡಿಗಳು ಬಂದ್‌

ಒಂದಂತೂ ಸ್ಪಷ್ಟ. ಸರಕಾರ ಮತ್ತು ಆಡಳಿತ ಪಕ್ಷದ ನಡುವೆ ಇರುವ, ಇರಬೇಕಾಗಿರುವ ಸಾಂವಿಧಾನಿಕ ಹಾಗೂ ಪ್ರಾಯೋಗಿಕ ವ್ಯತ್ಯಾಸಗಳು ಇಲ್ಲವಾಗುತ್ತಿವೆ. ಬಸವರಾಜ ಬೊಮ್ಮಾಯಿಯವರು ಆ ಪ್ರಕ್ರಿಯೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕಳೆದ ವರ್ಷಗಳಿಗೆ ಅಥವಾ ಆ ಅವಧಿಗೆ ಹೋಲಿಸಿದರೆ ಬಿಜೆಪಿ ಅಧಿಕಾರದ ಈ (ಯಡಿಯೂರಪ್ಪ, ಬೊಮ್ಮಾಯಿ ಅವರ) ಅವಧಿಯಲ್ಲಿ ಕರ್ನಾಟಕವನ್ನು ʻಗುಜರಾತʼನ್ನಾಗಿಸುವ ಪ್ರಕ್ರಿಯೆ ತೀವ್ರಗೊಂಡಿದೆ. ಅದರಲ್ಲೂ ಯಡ್ಯೂರಪ್ಪನವರನ್ನು ಪದಚ್ಯುತಿಗೊಳಿಸಿ, ಬಸವರಾಜ ಬೊಮ್ಮಾಯಿಯವರನ್ನು ಕೂಡಿಸಿದ ಮೇಲೆ ಹಂತ ಹಂತವಾಗಿ ಅದು ವಿಸ್ತರಿಸುತ್ತಿದೆ. ಆರಂಭದಲ್ಲಿ ತಂದೆ ಎಸ್.ಆರ್.ಬೊಮ್ಮಾಯಿ ಅವರ ವಿಚಾರ ಧಾರೆಯ ನೆರಳಿನಲ್ಲಿ ಇರುತ್ತಾರೆಂದು ಕೆಲವರು ನಿರೀಕ್ಷಿಸಿದ್ದರು. ಸಂಘದ ಕೈಗೊಂಬೆ ತಾನಲ್ಲ, ಯಡ್ಯೂರಪ್ಪನವರಿಗೂ ನಿಷ್ಠ ಎಂಬಂತೆ ಬಸವರಾಜ ಬೊಮ್ಮಾಯಿ ಆಗೀಗ ತೋರಿಸಿಕೊಳ್ಳುತ್ತಿದ್ದರು. ಆದರೆ ಅಲ್ಪ ಕಾಲದಲ್ಲೇ ಬಿ.ಎಸ್.ವೈ.ಯ ಹಸ್ತಕ್ಷೇಪ ತಡೆಯುವುದರ ಜೊತೆಗೆ ತನ್ನ ಅಣತಿಯಂತೆ ನಡೆಯದಿದ್ದರೆ ಬೊಮ್ಮಾಯಿಯವರನ್ನೂ ಪದಚ್ಯುತಗೊಳಿಸುವ ಬೆದರಿಕೆಯನ್ನೂ ʻಸಂಘʼ ಸೃಷ್ಟಿಸಿತ್ತು. ನಂತರದಲ್ಲಿ ಬಸವರಾಜ ಬೊಮ್ಮಾಯಿಯವರು ಸಂಘದ ನಿಷ್ಠ ಸ್ವಯಂ ಸೇವಕರಾಗಿ ಬದಲಾಗಿದ್ದರು. ಆರಂಭದಲ್ಲಿ ಎರಡು ವ್ಯಕ್ತಿತ್ವಗಳ ಅಭಿವ್ಯಕ್ತರಾಗಿ, ನಂತರದಲ್ಲಿ ಪೂರ್ಣ ಸಂಘದ ಕಟ್ಟಾಳುವಿನಂತೆ ಆಗಿ ಹೋಗಿದ್ದಾರೆ. ಪ್ರಸಕ್ತವಾಗಿ, ಚುನಾವಣಾ ಲಾಭ ನಿರೀಕ್ಷೆಯಲ್ಲಿರುವ ಅವರ ಪರಿವಾರ ಜನರ ಭಕ್ತಿ ಬಳಕೆಯ ನಿರೀಕ್ಷೆಯಲ್ಲಿದೆ. ಅಂಜನಾದ್ರಿ ಕಾಮಗಾರಿಗಳಿಗೆ ತರಾತುರಿಯಲ್ಲಿ ಚಾಲನೆ ನೀಡಿರುವಲ್ಲಿ ವಿವೇಕ ಮತ್ತು ವಿವೇಚನೆಗಳನ್ನು ಕಳೆದುಕೊಂಡಿದೆ.

ಇದನ್ನು ಓದಿ: ಅಂಜನಾದ್ರಿ ಬೆಟ್ಟದಲ್ಲಿ ಅನ್ಯಧರ್ಮದವರ ವ್ಯಾಪಾರಕ್ಕೆ ತೊಡಕಾಗಿರುವ ಹಿಂದುತ್ವ ಸಂಘಟನೆ ವರ್ತನೆಗೆ ಸಿಪಿಐ(ಎಂ) ವಿರೋಧ

ಒಟ್ಟು ಸರಕಾರ ಗುರುತಿಸಿದ ಯೋಜನೆಯಲ್ಲಿ ಅಂಜನಾದ್ರಿ ಪ್ರದೇಶದಲ್ಲಿನ ಸುಮಾರು 20 ಹಳ್ಳಿಗಳಿವೆ. ಇವೆಲ್ಲಾ ಅತ್ಯಂತ ಫಲವತ್ತಾದ ನೀರಾವರಿ ಭೂಮಿಗಳು. ಆನೆಗುಂದಿ ರಾಜರು ಆಳಿದ ಪ್ರದೇಶಕ್ಕೆ ಸೇರಿದ ಊರುಗಳು. ನೂರಾರು ವರ್ಷಗಳಿಂದ ಆನೆಗುಂದಿ ಸಂಸ್ಥಾನಕ್ಕೂ, ವಿಜಯನಗರ ಸಾಮ್ರಾಜ್ಯಕ್ಕೂ ಅವುಗಳ ಖಜಾನೆ ತುಂಬಿಸಲು, ಇತರೆ ಬಹುಮುಖಿ ಕೊಡುಗೆ ನೀಡಿದ ಹಳ್ಳಿಗಳಿವು. ಇದರೊಟ್ಟಿಗೆ ಹಂಪಮ್ಮ, ಪಂಪಾಪತಿ ಸರೋವರ ಅನೇಕ ಪ್ರಮುಖ್ಯತೆವುಳ್ಳ ಸಾಂಸ್ಕೃತಿಕ ಕುರುಹುಗಳು ಇರುವ ಪ್ರದೇಶ. ಈ ಎಲ್ಲಾ ಕಾರಣಗಳಿಂದಲೇ ಅಂಜನಾದ್ರಿ ಬೆಟ್ಟ ಮತ್ತು ಸುತ್ತಲಿನ ಪರಿಸರವನ್ನು ಈಗಿರುವಂತೆ, ಸಹಜ ನೈಸರ್ಗಿಕತೆಯನ್ನು ಹಾಗೇ ಉಳಿಸಿಕೊಳ್ಳುವಂತೆ ಪ್ರಮುಖರು ಮನವಿ ಮಾಡಿದ್ದರು. ಮಾನವ ಕುಲ ನಡೆದ ಹೆಜ್ಜೆ ಗುರುತಿಸಲು, ಗತಕಾಲದ ಬಗ್ಗೆ ತಿಳಿವು ಪಡೆಯಲು ಇವುಗಳ ಸಂರಕ್ಷಣೆಯ ಮಹತ್ವವನ್ನು ಅರುಹಿದ್ದರು. ರಸ್ತೆ, ವಾಣಿಜ್ಯ ಸಂಕೀರ್ಣ, ಲಾಡ್ಜಿಂಗ್, ಇತ್ಯಾದಿಗಳ ನಿರ್ಮಾಣಕ್ಕೆ ಬೆಟ್ಟದ ಹಿಂಬದಿಯ ಸರಕಾರಿ ಬಂಜರು ಭೂಮಿಯನ್ನು ಬಳಸಿಕೊಳ್ಳಲು ಸೂಚಿಸಲಾಗಿತ್ತು. ಆದರೆ ಸರಕಾರ ಅಲ್ಲಿಯ ಸ್ಥಳೀಯರನ್ನು ಒಕ್ಕಲೆಬ್ಬಿಸದೇ ಅಭಿವೃದ್ದಿ ಸಾಧಿಸಲಾಗದು ಎಂದು ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದೆ!

ಅಡಿಗಲ್ಲು ಹಾಕಿರುವುದು ಸರಕಾರಕ್ಕೆ ಸೇರಿದ ಜಮೀನಲ್ಲಿ ಎಂದು ಹೇಳಲಾಗುತ್ತಿದೆ. ಆದರೆ ಅಂಜನಾದ್ರಿಯ ಅಭಿವೃದ್ದಿ ಎನ್ನುವುದು ಒಂದು ತುಂಡು ಗುತ್ತಿಗೆಯ ಕಾಮಗಾರಿಯಲ್ಲ. ಸರಕಾರವೇ ಪ್ರಕಟಿಸಿದಂತೆ ಅದೊಂದು ಸಮಗ್ರವಾದ ವಿಸ್ತೃತ ಯೋಜನೆ. ಅಯೋಧ್ಯೆಗೂ ಅಂಜನಾದ್ರಿಗೂ ನಂಟು ಬೆಸೆವ ಪೌರಾಣಿಕ ಕೆಲಸವೂ ಆರಂಭಗೊಂಡಿದೆ. ಈಗಿನ ಒಂದೆರಡು ಕಟ್ಟಡಗಳ ಕಾಮಗಾರಿ ಸರ್ಕಾರಿ ಜಮೀನಿನಲ್ಲಿ ಮಾಡಿದರೂ ಅದು ಮುಂದಿನ ಯೋಜನೆಗೆ ಅಂಟಿಕೊಂಡದ್ದು ಮಾತ್ರವಲ್ಲ ಸ್ಥಳೀಯ ಗಣ್ಯ ನಾಗರೀಕರು, ಗ್ರಾಮಸ್ಥರು ಸೂಚಿಸುವಂತೆ ಸಾಂಸ್ಕೃತಿಕ, ಧಾರ್ಮಿಕ ಪರಿಸರ ಕಾಯುವ, ಬದುಕಿನ ನೆಲೆ ಉಳಿಸಿಕೊಳ್ಳುವುದಕ್ಕೆ ವ್ಯತಿರಿಕ್ತವಾದುದು. ಸರಕಾರವೊಂದಕ್ಕೆ ಒಂದಿಷ್ಟು ಅಧಿಕಾರ ಇದೆಯೆಂದ ಮಾತ್ರಕ್ಕೆ ಮನಸ್ಸಿಗೆ ಬಂದಂತೆ ವರ್ತಿಸಬಹುದು ಎನ್ನುವುದು ಸರ್ವಾಧಿಕಾರೀ ದುಂಡಾವರ್ತನೆ. ತೋರುಂಭ ಲಾಭದ ಧಾವಂತದಲ್ಲಿರುವ 40 ಪರ್ಸೆಂಟ್ ಸರಕಾರಕ್ಕೆ ಈ ಸಂವೇದನೆ, ಸೂಕ್ಷ್ಮಗಳು ಅರ್ಥವಾಗುವುದು ಹೇಗೆ?

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *