ಬೆಂಗಳೂರು : ಶಿಕ್ಷಕಿಯರ ಸ್ಥಾನಮಾನಕ್ಕೆ ಆಗ್ರಹಿಸಿ, ಹಾಗೂ ಗ್ಯಾಚ್ಯೂಟಿ ನೀಡುವಂತೆ ಒತ್ತಾಯಿಸಿ ಅಂಗನವಾಡಿ ನೌಕರರು ನಡೆಸುತ್ತಿರುವ ಹೋರಾಟ ಏಳನೇ ದಿನಕ್ಕೆ ಕಾಲಿಟ್ಟಿದೆ.
ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ 35 ಸಾವಿರಕ್ಕೂ ಹೆಚ್ಚು ಅಂಗನವಾಡಿ ನೌಕರರು ಭಾಗವಹಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ಈ ಜಾಗದಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಮೈ ಕೊರೆಯುವ ಚಳಿಯಲ್ಲಿ ರಸ್ತೆಯಲ್ಲೇ ಹಗಲು ರಾತ್ರಿಯೆನ್ನದೆ ಹೋರಾಟ ಮಾಡುತ್ತಿದ್ದು, ವಾರ ಕಳೆದರೂ ಮುಖ್ಯಮಂತ್ರಿ ಹಾಗೂ ಸಚಿವರು ಇತ್ತ ಸುಳಿದಿಲ್ಲ. ಸರ್ಕಾರದ ನಡೆಗೆ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
10ದಿನದೊಳಗೆ ಬೇಡಿಕೆ ಈಡೇರಿಸಿ ಇಲ್ಲವಾದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ಕಾಳಿದಾಸ ರಸ್ತೆ ಹಾಗೂ ಶೇಷಾದ್ರಿ ರಸ್ತೆಯ ಒಂದು ಭಾಗವನ್ನು ಬಂದ್ ಮಾಡಿ ವಿರೋಧಿಸಲಾಗಿದೆ. ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಅಥವಾ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರ್ಕಾರ ಲಿಖಿತ ರೂಪದ ಆದೇಶ ನೀಡುವವರೆಗೆ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಸಂಘಟಿಕರು ತಿಳಿಸಿದ್ದಾರೆ.
ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಸುನಂದಾ, ಯಮುನಾ ಗಾಂವ್ಕರ್, ಶಾಂತಾ ಘಂಟೆ ಸೇರಿದಂತೆ ಅನೇಕರು ಇದ್ದರು.