ಅಂಗನವಾಡಿಗಳ ಸುತ್ತ ಸಮಸ್ಯೆಗಳ ಹುತ್ತ : ಬಾಡಿಗೆ ಹಣವೂ ಇಲ್ಲ, ಮೊಟ್ಟೆ ಹಣವೂ ಇಲ್ಲ

ಗುರುರಾಜ ದೇಸಾಯಿ

ಒಂದೆಡೆ ಅಮೃತಮಹೋತ್ಸವ, ಇನ್ನೊಂದೆಡೆ ಐಸಿಡಿಎಸ್‌ ಯೋಜನೆಗೆ ಸುವರ್ಣೋತ್ಸವದ ಸಂಭ್ರಮ, ಆದರೆ ಅಂಗನವಾಡಿಗಳು ಮಾತ್ರ ಸಮಸ್ಯೆಗಳನ್ನು ಹೊದ್ದು ಮಲಗಿವೆ.  ಸರ್ಕಾರ ಬರ್ತಾವೆ, ಹೋಗ್ತಾವೆ ಆಳುವ ಸರ್ಕಾರಗಳಿಗೆ ಅಂಗನವಾಡಿಗಳನ್ನು ಬಲಪಡಿಸುವ ಮನಸಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.  ಸಮಸ್ಯೆಗಳ ನರಳಾಟದಲ್ಲಿಯೇ ಶಾಲಾಪೂರ್ವ ಶಿಕ್ಷಣವನ್ನು ಯಶಸ್ವಿಗೊಳಿಸುವಲ್ಲಿ ಅಂಗನವಾಡಿ ಅಕ್ಕಂದಿರ ಕೊಡುಗೆ ದೊಡ್ಡದಿದೆ.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 66,361 ಅಂಗನವಾಡಿ ಕೇಂದ್ರಗಳ ಪೈಕಿ 10,954 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ 7 ತಿಂಗಳಿಂದ ಬಾಡಿಗೆ ನೀಡದಿರುವುದು ಅಂಗನವಾಡಿ ಕೇಂದ್ರಗಳನ್ನು ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆ, ಮತ್ತು ಸಹಾಯಕಿಯರನ್ನು ಚಿಂತೆಗೀಡು ಮಾಡಿದೆ.

ಸೂಕ್ತ ಸೌಲಭ್ಯದ ಕೊರತೆಯಿಂದಾಗಿ ಪಂಚಾಯಿತಿ, ಸಮುದಾಯ ಭವನ, ಯುವಕ ಮಂಡಳ, ದೇವಸ್ಥಾನ, ಶಾಲೆ ಆವರಣ, ಮಹಿಳಾ ಮಂಡಳ ಕೇಂದ್ರಗಳಲ್ಲೇ ಮಕ್ಕಳಿಗೆ ತರಗತಿ ನಡೆಸುವ ಪರಿಸ್ಥಿತಿ ಇದೆ. ಬಾಡಿಗೆ ಕಟ್ಟಡಗಳನ್ನೇ ನೆಚ್ಚಿಕೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗನವಾಡಿ ಕೇಂದ್ರಗಳನ್ನು ನಡೆಸುತ್ತಿರುವುದು ಸಾಮಾನ್ಯವಾಗಿದೆ. ರಾಜ್ಯದಲ್ಲಿ 66361 ಅಂಗನವಾಡಿಗಳಿದ್ದು, 20 ಸಾವಿರಕ್ಕೂ ಹೆಚ್ಚು ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. 10,954 ಕೇಂದ್ರಗಳು ಬಾಡಿಗೆಯಲ್ಲಿ ನಡೆಯುತ್ತಿದ್ದರೆ, ಶಾಲೆ, ಪಂಚಾಯತಿ ಸೇರಿದಂತೆ ಇತರೆಡೆ  14,878  ಕಡೆ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ . 1527 ಅಂಗನವಾಡಿ ಕೇಂದ್ರಗಳು ಪಂಚಾಯತ್ ಕಟ್ಟಡಗಳಲ್ಲಿ, 3537 ಅಂಗನವಾಡಿ ಕೇಂದ್ರಗಳು ಸಮುದಾಯದ ಕಟ್ಟಡಗಳಲ್ಲಿ, 152 ಅಂಗನವಾಡಿ ಕೇಂದ್ರಗಳು ಯುವಕ ಮಂಡಳಿ ಮತ್ತು 94 ಮಹಿಳಾ ಮಂಡಳಿ ಕಟ್ಟಡಗಳಲ್ಲಿ, 4266 ಅಂಗನವಾಡಿ ಕೇಂದ್ರಗಳು ಶಾಲಾ ಕಟ್ಟಡಗಳಲ್ಲಿ, ಹಾಗೂ 2765 ತಾತ್ಕಾಲಿಕ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. 11500ಕ್ಕೂ ಅಧಿಕ ಅಂಗನವಾಡಿಗಳು ಅತಂತ್ರ ಸ್ಥಿತಿ ಎದುರಿಸುತ್ತಿವೆ.

ಕಟ್ಟಡನಿವೇಶನ ಕೊರತೆ ಎಲ್ಲೆಲ್ಲಿ?: 41508 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿದ್ದು, 24,853ಕ್ಕೂ ಅಧಿಕ ಅಂಗನವಾಡಿಗಳು ಸ್ವಂತ ಕಟ್ಟಡದಿಂದ ವಂಚಿತವಾಗಿವೆ. 3499 ಕೇಂದ್ರಗಳು ಸ್ವಂತ ನಿವೇಶನ ಕಂಡಿದ್ದರೂ ಕಟ್ಟಡ ಭಾಗ್ಯ ಕೂಡಿ ಬಂದಿಲ್ಲ. 22,333 ಕೇಂದ್ರಗಳಿಗೆ ಸ್ವಂತ ಕಟ್ಟಡ ಮತ್ತು ನಿವೇಶನ ಎರಡೂ ಇಲ್ಲದಾಗಿದೆ. ಬೆಂಗಳೂರು (5924) ಮತ್ತು ಬೆಳಗಾವಿ ವಿಭಾಗದಲ್ಲಿ (5351) ಹೆಚ್ಚು ಅಂಗನವಾಡಿಗಳು ಕಟ್ಟಡ ಕೊರತೆ ಎದುರಿಸುತ್ತಿವೆ. ನಂತರದ ಸ್ಥಾನದಲ್ಲಿ ಕಲ್ಬುರ್ಗಿ (3335), ಮೈಸೂರು (2674) ವಿಭಾಗವಿದೆ.

ಅಂಗನವಾಡಿಗಳು ರಾಜ್ಯದಲ್ಲಿ ಸ್ಥಾಪನೆಯಾಗಿ 48ವರ್ಷಗಳಾಗಿವೆ. ಹಾಗಿದ್ದರೂ ರಾಜ್ಯದಲ್ಲಿ ಅದೆಷ್ಟೋ ಕಡೆ ಸ್ವಂತ ಕಟ್ಟಡ ನಿರ್ಮಾಣ ಕನಸಾಗೇ ಉಳಿದಿದೆ. ಇನ್ನು ಅಂಗನವಾಡಿ ಕೇಂದ್ರಗಳು ಮೂಲ ಸೌಕರ್ಯದ ಕೊರತೆ ಎದುರಿಸುತ್ತಿವೆ. ಸಮರ್ಪಕ ಕುಡಿವ ನೀರಿನ ಸೌಕರ್ಯ, ಕಾಂಪೌಂಡ್‌, ಶೌಚಾಲಯ, ಗ್ಯಾಸ್‌, ವಿದ್ಯುತ್‌ ದೀಪ ವ್ಯವಸ್ಥೆಯೇ ಇಲ್ಲದ್ದನ್ನು ಕಾಣಬಹುದಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಮಕ್ಕಳಿಗೆ ಆಟೋಟ, ಪಾಠಕ್ಕೆ ಅಡ್ಡಿಯಾಗಿದೆ. ಕೇಂದ್ರಗಳಲ್ಲಿ ಪೀಠೋಪಕರಣ, ಮಕ್ಕಳ ಹಾಜರಿ ಪುಸ್ತಕ, ದಾಖಲೆ, ಪ್ರತಿ ತಿಂಗಳು ಬರುವ ಆಹಾರ ಧಾನ್ಯ ಸಂಗ್ರಹಿಸಿಡುವುದು ಕಷ್ಟವಾಗಿದೆ. ಮಕ್ಕಳು ಮನೆಯಿಂದಲೇ ನೀರು ತೆಗೆದುಕೊಂಡು ಹೋಗುವ ಪರಿಸ್ಥಿತಿ ಹಲವು ಕಡೆಗಳಲ್ಲಿ ಕಂಡು ಬಂದಿದೆ.

ಬಾಡಿಗೆಯಲ್ಲಿ ಅಂಗನವಾಡಿ : 10,954 ಅಂಗನವಾಡಿ ಕೇಂದ್ರಗಳು ಬಾಡಿಗೆಯಲ್ಲಿ ನಡೆಯುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ₹ 1 ಸಾವಿರ ಮತ್ತು ನಗರ ಪ್ರದೇಶದಲ್ಲಿ ₹ 4 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ. ಆದರೆ, ಈ ಹಣದಲ್ಲಿ ನಗರಪ್ರದೇಶದಲ್ಲಿ ಸುಸಜ್ಜಿತ ಕಟ್ಟಡ ಸಿಗುವುದಿಲ್ಲ. ಇದರಿಂದ ಮಕ್ಕಳ ಬಾಲ್ಯದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂಬುದು ತಜ್ಞರ ಅಭಿಪ್ರಾಯವಾಗಿದೆ.  ವಿದ್ಯುತ್‌, ಕುಡಿಯುವ ನೀರಿನ ಸೌಲಭ್ಯ, ಸ್ವಚ್ಛತಾ ಕಾರ್ಯದ ನಿರ್ವಹಣೆಗೆ ಇಲಾಖೆಯು ಪ್ರತ್ಯೇಕ ಹಣ ಕೊಡುವುದಿಲ್ಲ ಎಂಬುದನ್ನು ಗಮನಿಸಬೇಕಾದ ವಿಷಯ. ಬಾಡಿಗೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 60:40 ಅನುಪಾತದಲ್ಲಿ ಪಾವತಿ ಮಾಡಬೇಕಾಗಿದೆ.

ಪಾವತಿಯಾಗದ ಬಾಡಿಗೆ ಹಣ : ಬಾಡಿಗೆ ಹಣದಲ್ಲಿಕೇಂದ್ರ ಸರ್ಕಾರ ತಾನು ನೀಡಬೇಕಿದ್ದ ಹಣದ ಪಾಲನ್ನು ಆರು ತಿಂಗಳಿನಿಂದ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಚುನಾವಣೆ ಇದ್ದ ಕಾರಣ ರಾಜ್ಯ ಸರ್ಕಾರವು ಅನುದಾನ ಬಿಡುಗಡೆಮಾಡಿಲ್ಲ. ಇದರಿಂದ ಬಾಡಿಗೆ ಪಾವತಿ ವಿಳಂಬವಾಗಿದೆ. ಬೀದರ್‌ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ 2022ರ ಏಪ್ರಿಲ್‌ 1ರಿಂದ ಇದುವರೆಗೂ ಬಾಡಿಗೆ ಹಣವನ್ನು ಬಿಡುಗಡೆ ಮಾಡಿಲ್ಲ.

ವರ್ಷಾನುಗಟ್ಟಲೆ ಬಾಡಿಗೆ ನೀಡದೆ ಇದ್ದರೆ ಯಾವ ಮನೆ ಮಾಲೀಕ ಸುಮ್ಮನೆ ಬಿಡುತ್ತಾರೆ ಹೇಳಿ, ಅನೇಕ ಕಡೆಗಳಲ್ಲಿ ಶಿಕ್ಷಕಿಯರು, ಕಾರ್ಯಕರ್ತೆಯರು ಅನೇಕ ದೌರ್ಜನ್ಯಗಳನ್ನು ಮಾಲೀಕರಿಂದ ಎದುರಿಸಿದ್ದಾರೆ. ಖಾಲಿ ಮಾಡಿ ಎಂದು ನಡುರಸ್ತೆಯಲ್ಲಿ ಬೈಸಿಕೊಂಡಿದ್ದಾರೆ, ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದಾರೆ.  ಅಂಗನವಾಡಿ ಕಾರ್ಯಕರ್ತೆಯರು ಮುಂಗಡ ಹಣವನ್ನು ಪಾವತಿಸಿ ಅಂಗನವಾಡಿಗಳ  ಒಂದಿಷ್ಟು ಮಾನ ಉಳಿಸಿದ್ದಾರೆ. ಮೊಟ್ಟೆಯ ಹಣವೂ ಬಾರದೆ ಇದ್ದಿದ್ದರಿಂದ ಅದರ ಹಣವನ್ನೂ ಕೈಯಿಂದಲೇ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಆರ್ಥಿಕ ಹೊರೆ ಹೆಚ್ಚಾಗಿ ಕಚೇರಿಗೆ ನಿತ್ಯ ಅಲೆದಾಡುತ್ತಿದ್ದಾರೆ.

ಎಲ್ಲಾ ಕೆಲಸಕ್ಕೂ ಇವರೇ ಬೇಕಾ? :  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಲಸ ಇವರದ್ದು, ಆದರೆ ಸರಕಾರದ ಯಾವ ಯೋಜನೆ ಬಂದರೂ ಅಂಗನವಾಡಿ ಕಾರ್ಯಕರ್ತರಿಗೆ ಅಸೈನ್‌ಮೆಂಟ್‌ ಹಾಕ್ತಾರೆ. ಚುನಾವಣಾ ಆಯೋಗದ ಬಿಎಲ್‌ಒ ಕೆಲಸ ಮಾಡಬೇಕು. ಆಶಾ ಕಾರ್ಯಕರ್ತೆಯರು ಬರೋ ಮುಂಚೆ ಆರೋಗ್ಯ ಇಲಾಖೆಯ ಮುಂಚೂಣಿ ಕಾರ‍್ಯಕರ್ತೆಯರಾಗಿ ದುಡಿಯುತ್ತಿದ್ದರು.  ಈಗಲೂ ಅನೇಕ  ದುಡಿಯುತ್ತಿದ್ದಾರೆ.  ಕೋವಿಡ್‌ ಸಮಯದಲ್ಲಿ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ.  ಪಲ್ಸ್‌ ಪೋಲಿಯೋ ಅಭಿಯಾನ, ರಾಷ್ಟ್ರೀಯ ಜಂತುಹುಳ ನಿವಾರಣಾ ಅಭಿಯಾನ, ಮಾತೃವಂದನಾ, ಭಾಗ್ಯಲಕ್ಷ್ಮಿ, ನಾನಾ ಬಗೆಯ ಸಮೀಕ್ಷೆಯಲ್ಲೂ ಅಂಗನವಾಡಿ ಕಾರ್ಯಕರ್ತರ ಪಾತ್ರವಿದೆ. 0-6 ವರ್ಷದ ಮಕ್ಕಳ ಗಣತಿ ಮಾಡುವ ಹೊಣೆ ಇವರದ್ದೆ,  ಆದರೆ ಅಂಗನವಾಡಿಗಳನ್ನು ಬಲಪಡಿಸಲು, ಹಾಗೂ ವೇತನ ಸೇರಿದಂತೆ ಅವರ ಬೇಡಿಕೆ ಈಡೇರಿಸಲು ಸರಕಾರ ಮಾತ್ರ ಕಿವುಡಾಗಿದೆ.

ಸರಿಯಾಗಿ ಬಿಡುಗಡೆಯಾಗದ ಹಣ, ಹೆಚ್ಚುವರಿ ಕೆಲಸದಿಂದಾಗಿ ಕಾರ್ಯಕರ್ತೆಯರು ಹೈರಾಣಾಗುತ್ತಿದ್ದಾರೆ. ಏನೇ ಯೋಜನೆ ಬಂದರೂ ಅಂಗವಾಡಿಯವರು ಇದ್ದಾರಲ್ವಾ ಎಂದು ನಮ್ಮತ್ತ ಬೊಟ್ಟು ತೋರಿಸುತ್ತಾರೆ. ಶಾಳಾ ಪೂರ್ವ ಶಿಕ್ಷಣ ಯಶಸ್ವಿಯಾಗಬೇಕಾದರೆ ಇರುವ ಹೊರೆ ಕಮ್ಮಿಯಾಗಿ ಮಕ್ಕಳಿಗೆ ಅಕ್ಷರ ನೀಡುವ ಕೆಲಸ ಹೆಚ್ಚು ಆಗಬೇಕು, ಆ ನಿಟ್ಟಿನಲ್ಲಿ ನಾವೆಲ್ಲ ದುಡಿಯಲು ಸಿದ್ದರಿದ್ದೇವೆ ಎಂದೆನ್ನುತ್ತಾರೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆ (ಸಿಐಟಿಯು) ರಾಜ್ಯ ಪ್ರಧಾನಕಾರ್ಯದರ್ಶಿ ಎಚ್‌.ಎಸ್‌. ಸುನಂದ.

ಸುವರ್ಣ ಮಹೋತ್ಸದತ್ತ ಐಸಿಡಿಎಸ್‌ : ಚಿಣ್ಣರ ಪೋಷಣೆಗಾಗಿ ಅನುಷ್ಠಾನಕ್ಕೆ ಬಂದ ಮಹತ್ವದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌) ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಸನಿಹದಲ್ಲಿದೆ.  1975ರಲ್ಲಿ ಜಾರಿಯಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಈಗ ಪ್ರತಿ ಜಿಲ್ಲೆಗೂ ಪಸರಿಸಿದೆ. ಜತೆಗೆ ನಬಾರ್ಡ್‌ ಸಹಯೋಗ, ಕೇಂದ್ರದ ಉದ್ಯೋಗ ಖಾತ್ರಿ ನೆರವಿದ್ದರೂ ಅಂಗನವಾಡಿ ಕಟ್ಟಡಗಳ ನಿರ್ಮಾಣ ಮಾತ್ರ ಆಮೆ ನಡಿಗೆ ಪಡೆದಿದೆ.

ಯೋಜನೆ ಆರಂಭಗೊಂಡಾಗ, ಸರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟಿದ್ದು ಮಾಸಿಕ 125 ರೂ. ಮಾತ್ರ..! ದುರಂತವೆಂದರೆ ಅರ್ಧ ಶತಮಾನ ಮುಟ್ಟುತ್ತಿದ್ದರೂ ಈಗಲೂ 11,500 ರೂ. ಗಳಿಗೆ ದುಡಿಸಲಾಗುತ್ತಿದೆ. ರಾಜ್ಯ ಸರಕಾರದ ನಿಯಮಾವಳಿ ಪ್ರಕಾರ 18 ಸಾವಿರ ರೂ. ಕನಿಷ್ಠ ವೇತನ ಕೊಡಬೇಕು.  ಕನಿಷ್ಟ ವೇತನ ನೀಡಲು ಸರ್ಕಾರಕ್ಕೆ ಯಾವ ಸಮಸ್ಯೆಯೂ ಇಲ್ಲ. ಆದರೆ ತಾಯಿ ಹೃದಯ ಇಲ್ಲ ಎಂಬುದು ನಿಶ್ಚಿತವಾಗುತ್ತಿದೆ. ಸರ್ಕಾರ ಇನ್ನಾದರೂ ಅಂಗನವಾಡಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದಾಗಲಿ

 

 

Donate Janashakthi Media

Leave a Reply

Your email address will not be published. Required fields are marked *