ಕೋಲಾರ: ಅಂಗನವಾಡಿ ಕೇಂದ್ರಗಳಿಗೆ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಯ ಅಪಾಯಗಳು ಸೇರಿದಂತೆ ನೌಕರರ ವಿವಿಧ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ಜ. 10 ರಿಂದ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಅನಿರ್ಧಿಷ್ಟಾವದಿ ಧರಣಿಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಎನ್ಇಪಿ ಜಾರಿಯಾದರೆ ಅಂಗನವಾಡಿ ಕೇಂದ್ರಗಳು ಮುಚ್ಚಬೇಕಾಗುತ್ತದೆ ಸರಕಾರ ಈಗಾಗಲೇ ಅಂಗನವಾಡಿ ನೌಕರರಿಗೆ ಸೌಲಭ್ಯಗಳನ್ನು ಒದಗಿಸಲಿಲ್ಲ ಬಜೆಟ್ ನಲ್ಲಿ ನೀಡಬೇಕಾದ ಅನುದಾನ ನೀಡಲಿಲ್ಲ ಸರಕಾರದ ಇಲಾಖೆಯ ಎಲ್ಲಾ ಕೆಲಸಗಳಿಗೆ ನಾವು ಬೇಕಾಗಿದೆ ಎಂದು ಸರಕಾರದ ನಡೆಯನ್ನು ಖಂಡಿಸಿದರು.
ಕೊರೊನಾ ಲಾಕ್‌ಡೌನ್ ಇದ್ದಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ ಜಾರಿಗೆ ತಂದಿದೆ. ರಾಜ್ಯದಲ್ಲಿ ಸಂಘಟನೆಗಳ ಬಳಿ ಚರ್ಚಿಸಲಿಲ್ಲ ಟಾಸ್ಕ್ ಪರ್ಸ್ ಕಮಿಟಿಯನ್ನು ಎನ್‌ಇಪಿಯ ಜಾರಿಗಾಗಿ ನೇಮಕ ಮಾಡಿದೆ. ಎನ್‌ಇಪಿಯ ದಸ್ತಾವೇಜುನಲ್ಲಿ ಆಶಯಗಳು ಬೆಟ್ಟದಷ್ಟಿವೆ. ಆದರೆ ಜಾರಿಯ ಸಂದರ್ಭದಲ್ಲಿ ಸಂಪೂರ್ಣವಾಗಿ ಖಾಸಗೀಕರಣ ಮತ್ತು ವಾಣಿಜ್ಯೀಕರಣವಾಗುವ ಅಂಶಗಳೇ ಹೆಚ್ಚಾಗಿವೆ. ಐಸಿಡಿಎಸ್ ಯೋಜನೆಗೆ ಸಂಬಂಧಿಸಿ ಕೇವಲ 36 ತಿಂಗಳ ಮಗುವಿನಿಂದ 5 ವರ್ಷ 10 ತಿಂಗಳ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ದಾಖಲಾಗುತ್ತಿದ್ದರು. ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಅನಿಯಮಿತವಾಗಿ ಎಲ್.ಕೆ.ಜಿ – ಯು.ಕೆ.ಜಿ.ಗಳನ್ನು ತೆರೆದಿದ್ದರಿಂದ ಅಂಗನವಾಡಿ ಮಕ್ಕಳನ್ನು ಅಲ್ಲಿ ದಾಖಲು ಮಾಡಿ ಅಂಗನವಾಡಿ ಕೇಂದ್ರಕ್ಕೆ ಈಗಾಗಲೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. 5 ವರ್ಷ ತುಂಬುವುದಕ್ಕೆ ಮೊದಲು ಎನ್‌ಇಪಿಯ ಪ್ರಕಾರ 5 ವರ್ಷದ ಮಕ್ಕಳಿಗೆ ಬಾಲವಾಟಿಕಾ ಎನ್ನುವ ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಅಂಗನವಾಡಿಗಳಲ್ಲಿ ಕೇವಲ 3 ವರ್ಷದ ಮಕ್ಕಳು ಮಾತ್ರ ಇರುತ್ತಾರೆ ಅಂಗನವಾಡಿ ಕೇಂದ್ರಗಳಲ್ಲಿ ನಿಧಾನಗತಿಯಲ್ಲಿ ಮಕ್ಕಳೇ ಇಲ್ಲದ ಪರಿಸ್ಥಿತಿ ಸಂಭವಿಸುತ್ತದೆ ಎಂದರು.
ಅಂಗನವಾಡಿ ನೌಕರರನ್ನು ಐಸಿಡಿಎಸ್‌ನ 6 ಸೇವೆಗಳಿಗೆ ಮಾತ್ರ ಸೀಮಿತ ಮಾಡಬೇಕು. ಐಸಿಡಿಎಸ್ ಯೇತರ ಕೆಲಸಗಳನ್ನು ನಿರ್ಬಂಧಿಸಬೇಕು ಹಾಗೂ ಕಾರ್ಯಕರ್ತೆಯರನ್ನು ಶಿಕ್ಷಕಿ ಎಂದು ಗುರುತಿಸಬೇಕು. ಅಂಗನವಾಡಿ ನೌಕರರಿಗೆ ತರಬೇತಿ ನೀಡಿ ಇಸಿಸಿಇ ಮಾರ್ಗದರ್ಶನ ಪ್ರಕಾರ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಅಂಗನವಾಡಿ ಕೇಂದ್ರಕ್ಕೆ ಹೆಚ್ಚುವರಿ ಸಹಾಯಕಿಯನ್ನು ನೇಮಕ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸಮವಸ್ತ್ರ, ಷೂಗಳು ಅಗತ್ಯವಿರುವ ವಿದ್ಯಾಭ್ಯಾಸದ ಪರಿಕರಗಳನ್ನು ಕೊಡಬೇಕು. ಅಂಗನವಾಡಿ ನೌಕರರ ವೇತನವನ್ನು ಹೆಚ್ಚಿಸಬೇಕು. ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿ ಸೋಂಕಿತರಾಗಿ ನಿಧನರಾದ ಅಂಗನವಾಡಿ ನೌಕರರಿಗೆ ಕೂಡಲೇ 30 ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು. ಕೊರೋನಾ ಸಂದರ್ಭದ ಕೆಲಸದ ಒತ್ತಡದಿಂದ ಮೃತರಾದವರಿಗೆ ಮರಣ ಪರಿಹಾರ 1 ಲಕ್ಷ ರೂ. ಕೊಡಬೇಕು ಎಂಬ ಬೇಡಿಕೆ ಸೇರಿದಂತೆ 25 ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟಾವದಿ ಹೋರಾಟಕ್ಕೆ ಅಂಗನವಾಡಿ ನೌಕರರು ಸಿದ್ದರಾಗಿದ್ದಾರೆ.
ರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ ಅಂಗನವಾಡಿ ನೌಕರರು ಸದಾ ದುಡಿಯುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಹೈಕೋರ್ಟ್‌ನ ಆದೇಶದಂತೆ ರಾಜ್ಯದ 47.37 ಲಕ್ಷ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸವಲತ್ತುಗಳನ್ನು ಖಾತ್ರಿಪಡಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಕೊರೊನಾ ವಾರಿಯರ್ಸ್ ಆಗಿ ದುಡಿದು 59 ಜನರು ಬಲಿದಾನವಾಗಿದ್ದಾರೆ. ಮಾತ್ರವಲ್ಲದೆ, 293 ಜನರು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಕೆಲವರು ಕುಟುಂಬದವರನ್ನು ಕಳೆದುಕೊಂಡು ಒಂಟಿಯಾಗಿದ್ದಾರೆ. ಕೊರೊನಾ ಸಂದರ್ಭದ ನಂತರದಲ್ಲಿ ಇ-ಸರ್ವೆ, ಚುನಾವಣೆಗಳು, ವ್ಯಾಕ್ಸಿನ್ ಹಾಕುವುದು ಮತ್ತು ಅದರ ಸರ್ವೆಗಳು, ಪೋಷಣ್ ಅಭಿಯಾನ, ಪೋಷಣ್ ಪಕ್ವಾಡ ಅಂತ ಆಚರಣೆಗಳು ನಿರಂತರವಾಗಿ ನಡೆಯುತ್ತಿವೆ. ಸರ್ಕಾರದ ನೀತಿಗಳಿಂದ ಅನಿಯಂತ್ರಿತವಾಗಿ ಪೆಟ್ರೋಲ್, ಡೀಸೆಲ್ ಬೆಲೆಗಳು ಹೆಚ್ಚಾಗಿ ಆಹಾರ ದಾನ್ಯಗಳು ಸೇರಿದಂತೆ ಪ್ರತಿಯೊಂದು ವಸ್ತು ಮತ್ತು ಸೇವೆಯ ಬೆಲೆಗಳು ಹೆಚ್ಚಾಗಿದೆ. ಆದರೆ ಆದಾಯ ಮಾತ್ರ ಹೆಚ್ಚಳವಾಗಲಿಲ್ಲ. ಆದರೆ ನೌಕರರ ಬದುಕು ಮಾತ್ರ ದುಸ್ತರವಾಗಿ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ, ಅಂಗನವಾಡಿ ನೌಕರರ ಸಂಘದ ಕಲ್ಪನಾ, ಲಕ್ಷ್ಮೀದೇವಮ್ಮ, ಸುಜಾತ ಇದ್ದರು.