ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಸೇವಾಜೇಷ್ಠತೆ ಪರಿಗಣಿಸಬೇಕಿದೆ. ವರ್ಷಾನುಗಟ್ಟಲೇ ದುಡಿಮೆ ಮಾಡಿದರೂ ವೇತನ ತಾರತಮ್ಯ ಇದೆ. ಕೂಡಲೇ ಇದನ್ನು ಬಗೆಹರಿಸಬೇಕು. ಅಲ್ಲದೆ ಕೊರೊನಾ ದಿಂದಾಗಿ 59 ಜನ ಅಂಗನವಾಡಿ ಹೆಣ್ಮಕ್ಕಳು ನಿಧನರಾಗಿದ್ದಾರೆ. ಅವರಲ್ಲಿ 19 ಜನರಿಗೆ ಮಾತ್ರ ಪರಿಹಾರವನ್ನು ನೀಡಿದ್ದಾರೆ. ಉಳಿದವರಿಗೆ ಪರಿಹಾರವನ್ನು ನೀಡಲಿಲ್ಲ. ಕೂಡಲೇ ಅವರ ಕುಟುಂಬದವರಿಗೆ ಪರಿಹಾರವನ್ನು ಬಿಡುಗಡೆ ಮಾಡಬೇಕುʼʼ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ದ ರಾಜ್ಯ ಅಧ್ಯಕ್ಷರಾದ ಎಸ್.ವರಲಕ್ಷ್ಮಿ ಅವರು ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಸ್.ವರಲಕ್ಷ್ಮಿ ಅವರು ʻʻಕೊರೊನಾ ಸಂದರ್ಭದಲ್ಲಿ ಬಹಳಷ್ಟು ನೌಕರರಿಗೆ ಕೋವಿಡ್ ದೃಢಪಟ್ಟಿದೆ. ಅವರಿಗೆ ಕೊರೊನಾ ಬಂದರೂ ಅವರ ಕುಟುಂಬದವರಿಗೆ ಬರುತ್ತದೆ. ಇಂತಹ ಸಂದರ್ಭದಲ್ಲಿ ಅವರ ಕುಟುಂಬದ ಪರಿಸ್ಥಿತಿ ಏನಾಗಬೇಕುʼʼ ಎಂದು ತಿಳಿಸಿದರು.
ಇಲಾಖೆಯು ಸೂಚಿಸಿದರೂ ಸಹ ನೌಕರರಿಗೆ ಇಡಿಗಂಟು ನೀಡಿದೆ ಸತಾಯಿಸುತ್ತಿರುವ ಸರಕಾರ, ಯಾವ ನೈತಿಕ ಹೊಣೆಹೊತ್ತು ಅಂಗನವಾಡಿ ನೌಕರರ ಹತ್ತಿರ ಕೆಲಸ ಮಾಡಿಸಿಕೊಳ್ಳುತ್ತೀರಿ. ಅಂಗನವಾಡಿ ಕೆಲಸಗಳಲ್ಲದೆ, ಚುನಾವಣೆ, ಗಣತಿ, ಇತ್ಯಾದಿ ಎಲ್ಲ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಆದರೆ ಅವರ ಉತ್ತಮ ಬದುಕಿನ ನಿರ್ವಹಣೆಗೆ ಸರಿಯಾದ ವೇತನವನ್ನು ನೀಡುತ್ತಿಲ್ಲʼʼ ಎಂದು ಆರೋಪಿಸಿದರು.
ಇದನ್ನು ಓದಿ: ಪೌಷ್ಠಿಕ ಆಹಾರದ ಬದಲಿಗೆ ನಗದು ವರ್ಗಾವಣೆ: ಅಂಗನವಾಡಿ ನೌಕರರ ರಾಜ್ಯವ್ಯಾಪಿ ಧರಣಿ
ʻʻಕೊರೊನಾ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿರುವ ಅಂಗನವಾಡಿ, ಆಶಾ ಕಾರ್ಯಕರ್ತರನ್ನು ಕರೆದು ಆಹಾರ ಕಿಟ್ ನೀಡುವುದು, ಸನ್ಮಾನ ಮಾಡುವುದು, ಅರಿಶಿನ ಕುಂಕುಮಾ ಕೊಡುವುದು ಮಾಡಲಾಗಿದೆ. ಆದರೆ ನಮ್ಮ ಪ್ರಶ್ನೆ ಇರುವುದು ಕೇವಲ ಆಹಾರ ಕಿಟ್ ಅರಿಶಿನ ಕುಂಕುಮಾ ಕೊಡುವುದರಿಂದ ನಮ್ಮ ಹೊಟ್ಟೆ ತುಂಬುವುದಿಲ್ಲ, ನಾವು ಭಿಕ್ಷುಕರಲ್ಲ. ಗೌರವದಿಂದ, ಸರಕಾರದಿಂದ ಸನ್ಮಾನ ಮಾಡಿದರೆ ಒಂದು ಉತ್ತಮ ಕೆಲಸ ಅದು ಬಿಟ್ಟು ರಾಜಕೀಯ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲʼʼ ಎಂದು ಹೇಳಿದರು.
ಸಮಾಜದ ಕಾರ್ಯದಲ್ಲಿ ನಾವು ತೊಡಗಿಸಿಕೊಂಡು ಪ್ರಾಣದ ಹಂಗು ತೊರೆದು ನಾವು ಕೆಲಸ ಮಾಡಿದರೂ ನಮಗೆ ರಕ್ಷಣೆ ಇಲ್ಲದಂತಾಗಿದೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಹೈಕೋರ್ಟ್ ಆದೇಶದಂತೆ ರಾಜ್ಯದಲ್ಲಿನ ಎಲ್ಲರಿಗೂ ಪೌಷ್ಠಿಕಾಂಶ ಆಹಾರ ಪದಾರ್ಥ ವಿತರಣೆ ಮಾಡಲು ಸರ್ಕಾರ ಕ್ರಮವಹಿಸಿತು. ರಾಜ್ಯದಲ್ಲಿನ ಎಲ್ಲಾ ಅಂಗನವಾಡಿ ಹೆಣ್ಣು ಮಕ್ಕಳು ಆಗ 46 ಲಕ್ಷ ಫನಾನುಭವಿಗಳಿಗೆ ಆಹಾರ ಪದಾರ್ಥಗಳನ್ನು ಒದಗಿಸಿದ್ದಾರೆ. ಅದು ಕೂಡ ಲಾಕ್‌ಡೌನ್ ಸಂದರ್ಭದಲ್ಲಿ, ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಪ್ರಯಾಣಿಸಿ ವಿತರಣೆ ಮಾಡಿದ್ದಾರೆ. ಆದರೆ, ಅವರಿಗೆ ಕೊರೊನಾ ಮುನ್ನಚ್ಚರಿಕೆ ಸುರಕ್ಷಾ ಸಾಧನಗಳನ್ನು ಸರಕಾರದಿಂದ ನೀಡಲಿಲ್ಲ. ಅಲ್ಲದೆ ಆಗ ಸಂಬಳವನ್ನು ನೀಡಲಿಲ್ಲ. ಇಂತಹ ಸಂದರ್ಭದಲ್ಲಿ ಅಂಗನವಾಡಿ ನೌಕರರ ಕುಟುಂಬದ ಪರಿಸ್ಥಿತಿಯ ಗತಿ ಏನುʼʼ ಎಂದು ಎಸ್.ವರಲಕ್ಷ್ಮಿ ಅವರು ಪ್ರಶ್ನೆ ಮಾಡಿದರು.
ಅಂಗನವಾಡಿ ನೌಕರರು ಹೆಚ್ಚಿನ ಕೆಲಸ ಮಾಡುತ್ತಿದ್ದರೂ, ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಲಿಲ್ಲ. ಈಗಾಗಲೇ ಐಸಿಡಿಎಸ್ ಯೋಜನೆಯ 6 ಪ್ರಮುಖ ಉದ್ದೇಶಿತ ಕೆಲಸಗಳಾದ ಭಾಗ್ಯಲಕ್ಷ್ಮಿ, ಸ್ತ್ರೀಶಕ್ತಿ, ಚುನಾವಣ ಕೆಲಸಗಳು, ಆರೋಗ್ಯ ಇಲಾಖೆ, ಅಂಗವಿಕಲರ ಹಿರಿಯ ಸಬಲೀಕರಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆಲಸಗಳನ್ನು ಮಾಡಲಾಗುತ್ತಿದೆ. ಈಗ ನೀತಿ ಆಯೋಗದ ಶಿಫಾರಸ್ಸಿನಂತೆ ಐಸಿಡಿಎಸ್ ಯೋಜನೆಯನ್ನು ನೇರ ನಗದು ಯೋಜನೆಗೆ ಒಳಪಡಿಸಲು ಮುಂದಾಗಲಾಗುತ್ತಿದೆ. ನೀತಿ ಆಯೋಗದ ಪ್ರಕಾರ ಸರಕಾರಗಳು ನೀಡಲಾಗುವ ಎಲ್ಲಾ ವಸ್ತುಗಳ ಆಧಾರಿತ ಯೋಜನೆಗಳೆಲ್ಲವನ್ನೂ ನಗದು ಹಣ ನೀಡುವ ಮೂಲಕ ಜಾರಿ ಮಾಡಲು ಆದೇಶಿಸಲಾಗಿದೆ. ಇದರಿಂದ ಅಂಗನವಾಡಿಗಳ ಭವಿಷ್ಯ ಅತಂತ್ರಗೊಳ್ಳಲಿದೆ. ಜಿಎಸ್‌ಟಿ ಪಾಲಿನ ಹಣ ರಾಜ್ಯಗಳಿಗೆ ನೀಡಲಾಗುತ್ತಿರುವುದರಿಂದ ಸ್ಕೀಮ್‌ಗಳಿಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಕೇಂದ್ರ ಸರಕಾರದ ಬಜೆಟ್‌ನಲ್ಲಿ ನಮಗೆ ಬರಬೇಕಾದ ಯೋಜನೆಗೆ ನಿಗದಿತ ಅನುದಾನದಲ್ಲಿ ಶೇ.40ರಷ್ಟು ಪಾಲನ್ನು ಕಡಿತ ಮಾಡಲಾಗಿದೆ ಎಂದರು.
ಇದನ್ನು ಓದಿ: ಅಂಗನವಾಡಿ ಮಕ್ಕಳ ಮೊಟ್ಟೆಗೆ ಕನ್ನ ಹಾಕಿದ ಸಚಿವೆ, ಸಚಿವೆಗೆ ಸಾಥ್ ನೀಡಿದ ಶಾಸಕ ಪರಣ್ಣ
ʻʻಈಗ ಮತ್ತೆ ಅಂಗನವಾಡಿ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲು ಮುಂದಾಗುತ್ತಿದ್ದಾರೆ. ಅಂಗನವಾಡಿ ನೌಕರರ ಕೆಲಸಗಳು ಹಾಗೂ ಶಿಶುಪಾಲನಾ ಕೆಲಸಗಳು ಸಾಕಷ್ಟು ಭಿನ್ನವಾದದ್ದು. ಶಿಶುಪಾಲನೆಯಲ್ಲಿ ಮೂರು ವರ್ಷದ ಒಳಗಿನ ಮಕ್ಕಳನ್ನು ಪಾಲನೆ ಮಾಡುವ ಕೆಲಸ ಅದು. ಅದನ್ನು ಅಂಗನವಾಡಿ ಕೇಂದ್ರದಲ್ಲಿ ಆರಂಭಿಸುವ ಬದಲು ಆ ಕೇಂದ್ರಗಳ ಪಕ್ಕದಲ್ಲಿ ಆರಂಭಿಸಿ ಅದಕ್ಕೆ ಏನು ಅಭ್ಯಂತರವಿಲ್ಲʼʼ ಎಂದು ಹೇಳಿದರು.
ಅಂಗನವಾಡಿಗಳಿಗೆ ನೀಡಲಾಗುವ ಕೋಳಿಮೊಟ್ಟೆ ವಿತರಣೆಯಲ್ಲೂ ಸಚಿವರ ಮಟ್ಟದಲ್ಲಿ ಹಗರಣ ನಡೆದಿದೆ. ಆದರೆ ಆ ಬಗ್ಗೆ ಸರಕಾರ ತನಿಖೆಯನ್ನು ಕೈಗೊಂಡಿಲ್ಲ. ಆಗ ನಾವು ರಾಜ್ಯದ ಎಲ್ಲೆಡೆ ತನಿಖೆಗೆ ಒತ್ತಾಯಿಸಿ ಹೋರಾಟವನ್ನು ಮಾಡಲಾಗಿದೆ. ಆದರೆ ಕೆಲವು ಕಡೆಗಳಲ್ಲಿ ಸಚಿವರ ವಿರುದ್ಧವೇ ಆರೋಪ ಮಾಡುತ್ತೀರಿ ಎಂದು ನಮ್ಮ ಮನವಿಯನ್ನು ಇಲಾಖೆಯ ಅಧಿಕಾರಿಗಳು ಸ್ವೀಕರಿಸಲಿಲ್ಲ. ಮೊಟ್ಟೆ ಹಗರಣವನ್ನು ತನಿಖೆ ಮಾಡಬೇಕು ಮತ್ತು ಶಾಸಕರು ಒತ್ತಾಯ ಮಾಡಬೇಕುʼʼ ಎಂದು ಹೇಳಿದರು.
ಹಿಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಅವರು ಹಗರಣದಲ್ಲಿ ಭಾಗಿಯಾಗಿದ್ದರು. ಬದಲಾದ ಸಚಿವ ಸಂಪುಟ ಖಾತೆ ಹಂಚಿಕೆಯಲ್ಲಿ ಸದ್ಯಕ್ಕೆ ನಮಗೆ ತಕ್ಷಣ ಸಿಕ್ಕ ನ್ಯಾಯ ಎಂದರೆ ಅವರನ್ನು ಖಾತೆ ಬದಲಾವಣೆ ಮಾಡಿದ್ದು, ಮತ್ತೆ ಸಚಿವರಾರನ್ನಾಗಿ ನೇಮಿಸಿಕೊಳ್ಳಲಾಗಿದೆ.
ಇಲಾಖೆಯಲ್ಲಿ ಸೂಪರ್‌ವೈಸರ್ ಮತ್ತು ಡಿಡಿ ಮತ್ತಿತರ ಅಧಿಕಾರಿಗಳ ವರ್ಗಾವಣೆಗೆ ಲಕ್ಷಗಟ್ಟಲೇ ಭ್ರಷ್ಟಾಚಾರ ವ್ಯಾಪಕವಾಗಿದೆ ಆ ಮಟ್ಟದಲ್ಲಿ ಇಲಾಖೆಯಲ್ಲಿ ವರ್ಗಾವಣೆಯ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು. ಇಲಾಖೆಯ ಪ್ರಿನ್ಸಿಪಾಲ್ ಸೆಕ್ರೇಟರಿಗಳು ಪದೇ ಪದೇ ಬದಲಾಗುತ್ತಿರುವುದರಿಂದ ಇಲಾಖೆ ಸಮರ್ಪಕ ಕೆಲಸಗಳು ಹೇಗೆ ಮಾಡಲು ಸಾಧ್ಯವಿದೆ. ತಿಂಗಳ ಮಟ್ಟದಲ್ಲಿ ಅಥವಾ 15 ದಿನಕ್ಕೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಹೀಗಾದರೆ ಇಲಾಖೆಯ ಕೆಲಸಗಳು ಹೇಗೆ ಆಗಲು ಸಾಧ್ಯ. ಖಾಯಂ ಆದಂತಹ ಅಧಿಕಾರಿಯನ್ನು ನೇಮಕ ಮಾಡಬೇಕು. ಅವರಿಗೆ ಬೇರೆ ಬೇರೆ ಜವಾಬ್ದಾರಿಗಳನ್ನು ಸಹ ನೀಡಲಾಗುತ್ತಿದೆ.
ಈಗಿರುವ ಇಲಾಖೆಯ ಸಚಿವರಾದ ಹಾಲಪ್ಪ ಆಚಾರ್ ಅವರನ್ನು ಅಂಗನವಾಡಿ ನೌಕರರ ಪರಿಸ್ಥಿತಿಗಳ ಬಗ್ಗೆ ಸಮಗ್ರವಾಗಿ ತಿಳಿಸಲಾಗಿದೆ. ನೂತನ ಸಚಿವರಾಗಿರುವುದರಿಂದ ಒಂದಷ್ಟು ಕಾಲಾವಕಾಶವನ್ನು ಕೇಳಿದ್ದಾರೆ. ಅವರ ಮನವಿಗೆ ನಾವು ಸ್ಪಂದಿಸುತ್ತೇವೆ. ಹಾಗೆಯೇ ನೌಕರರ ಬೇಡಿಕೆಗಳು ಈಡೇರಬೇಕು.
ನಮ್ಮದು ಐಸಿಡಿಎಸ್ ಯೋಜನೆ ಉಳಿಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ನಮ್ಮ ಇಲಾಖೆ ಸೂಚಿಸಿರುವ ಅನುದಾನವನ್ನು ಸರಕಾರವು ಕೂಡಲೇ ಬಿಡುಗಡೆ ಮಾಡಬೇಕೆಂದು ನಮ್ಮ ಒತ್ತಾಯವಾಗಿದೆ ಎಂದರು.
ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಮೂರು ದಿನಗಳ ಕಾಲ ಹೋರಾಟ ಮಾಡಿದ್ದೇವೆ. ಸೆಪ್ಟಂಬರ್ 13ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದ ಎಲ್ಲ ಚುನಾಯಿತ ಜನಪ್ರತಿನಿಧಿಗಳು ಅಧಿವೇಶನಲ್ಲಿ ನಮ್ಮ ವಿಚಾರವನ್ನು ಪ್ರಸ್ತಾಪಿಸಬೇಕೆಂದು ಕೇಳುತ್ತಿದ್ದೇವೆ.
ಈ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಮುಂಚಿತವಾಗಿ ರಾಜ್ಯದ ಎಲ್ಲ ಚುನಾಯಿತ ಪ್ರತಿನಿಧಿಗಳಾದ ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರ ಅಂಗನವಾಡಿ ನೌಕರರು ಬೇಡಿಕೆಗಳನ್ನು ಈಡೇರಿಸಬೇಕೆಂದು ಸೆಪ್ಟೆಂಬರ್ 2 ರಿಂದ 5ನೇ ತಾರೀಖಿನಂದು ಪ್ರತಿನಿಧಿಗಳ ಮನೆಗಳಿಗೆ ಅಂಗನವಾಡಿ ನೌಕರರು ತೆರಳಿ ಮನವಿ ಮಾಡಲಾಗುವುದು ಎಂದರು.
ಅಂಗನವಾಡಿ ಹೆಣ್ಮಕ್ಕಳ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಪರಿಸ್ಥಿತಿಯನ್ನು ನೋಡಿಕೊಂಡು ನಾವು ಹೋರಾಟಕ್ಕೆ ಮುಂದಾಗುತ್ತೇವೆ. ನಮ್ಮ ಬೇಡಿಕೆ ಈಡೇರುವರೆಗೂ ನಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಎಸ್.ವರಲಕ್ಷ್ಮಿ ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಸುನಂದಾ, ಖಜಾಂಚಿ ಜಿ.ಕಮಲ, ಉಪಾಧ್ಯಕ್ಷರಾದ ಟಿ.ಲೀಲಾವತಿ ಉಪಸ್ಥಿತರಿದ್ದರು.