ಬೆಂಗಳೂರು ನಗರದಲ್ಲಿರುವ ಅಂಗನವಾಡಿ ಕೇಂದ್ರಗಳ ಬಲವರ್ಧನೆಗಾಗಿ ಒತ್ತಾಯಿಸಿ ಬಿಬಿಎಂಪಿ ಚಲೋ

ಮೂಲ ಸೌಲಭ್ಯ ಇಲ್ಲದೆ ಬೆಂಗಳೂರಿನ ಅಂಗನವಾಡಿಗಳ ಸ್ಥಿತಿ ಚಿಂತಾಜನಕ

ಬೆಂಗಳೂರು  ಜ 07 :  ಬೆಂಗಳೂರು ನಗರದಲ್ಲಿರುವ ಅಂಗನವಾಡಿ ಕೇಂದ್ರಗಳ ಬಲವರ್ಧನೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಇಂದು ಅಂಗನವಾಡಿ ಕಾರ್ಯಕರ್ತರು ಬಿಬಿಎಂಪಿ ಚಲೋ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ  ರಾಜ್ಯ ಅಂಗನವಾಡಿ ನೌಕರರ ಸಂಘಟನೆಯ  ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ ಮಾತನಾಡುತ್ತಾ, ಭಾರತದ ೫ ನೇ ದೊಡ್ಡ ಮಹಾನಗರ ಬೆಂಗಳೂರು ವಿಶ್ವದದ್ಯಾಂತ ಭಾರತದ ಸಿಲಿಕಾನ್ ವ್ಯಾಲಿ ಎಂದು ಪ್ರಸಿದ್ದೀ ಪಡೆದಿದೆ. ಉದ್ಯಾನ ನಗರಿಯಾದ ಬೆಂಗಳೂರು ವಿಶ್ವದ ಮಾಹಿತಿ ತಂತ್ರಜ್ಞಾನದ ಉದ್ಯಮಿಗಳ ನೆಚ್ಚಿನ ತಾಣವಾಗಿದೆ. ಆದರೆ ಇಂತಹ ಬೆಂಗಳೂರು ನಗರದ ಇನ್ನೊಂದು ಮುಖದಲ್ಲಿ ಮಕ್ಕಳ ಹಾಗೂ ಮಹಿಳೆಯರ ಅನಿಮಿಯಾ ಮತ್ತು ಅಪೌಷ್ಠಿಕತೆ ಲಿಂಗ ತಾರತಮ್ಯದಂತಹ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಈ ಸಮಸ್ಯೆಗಳನ್ನು ತಡಗಟ್ಟಬೇಕಾದರೆ  ಐಸಿಡಿಎಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಾದ ಅಗತ್ಯವಿದೆ.
ಬೆಂಗಳೂರು ನಗರದಲ್ಲಿ ೧.೩೦ ಕೋಟಿ ಜನಸಂಖ್ಯೆ ಇದೆ. ಐಸಿಡಿಎಸ್ ಮಾರ್ಗದರ್ಶಿ ಪ್ರಕಾರ ಒಂದು ಸಾವಿರ ಜನಸಂಖ್ಯೆಗೆ ಒಂದು ಅಂಗನವಾಡಿ ಕೇಂದ್ರವಿರಬೇಕು. ಆದರೆ ಬೆಂಗಳೂರು ನಗರದಲ್ಲಿರುವುದು ಕೇವಲ 1851  ಅಂಗನವಾಡಿ ಕೇಂದ್ರಗಳು ಮಾತ್ರ. ಆದರೆ 6 ವರ್ಷದೊಳಗಿನ ಮಕ್ಕಳ ಸಂಖ್ಯೆ 4.16 ಲಕ್ಷ ಇದೆ, ಐಸಿಡಿಎಸ್ ಯೋಜನೆಗೆ ದಾಖಾಲಾಗಿರುವುದು 2.30  ಲಕ್ಷ ಮಕ್ಕಳು ಮಾತ್ರ ಅಂದರೆ 1.82  ಲಕ್ಷ ( 46%) ಮಕ್ಕಳು ದಾಖಲಾಗಿಲ್ಲ. ಆದ್ದರಿಂದ ರಾಜಧಾನಿ ಒಂದರಲ್ಲೇ 20 ಸಾವಿರ ಹೆಚ್ಚುವರಿ ಅಂಗನವಾಡಿ ಕೇಂದ್ರಗಳನ್ನು ರಚಿಸಬೇಕಿದೆ.  2018ರ ಕುಟುಂಬ ಸಮೀಕ್ಷೆ ಪ್ರಕಾರ ಅಪೌಷ್ಠಿಕತೆಯ ಮಟ್ಟ 11.204  ಇದೆ. ಎತ್ತರಕ್ಕೆ ತಕ್ಕ ತೂಕವಿಲ್ಲದ ಮಕ್ಕಳ ಸಂಖ್ಯೆ  16,958  ಇದೆ.  ವಯಸ್ಸಿಗೆ ತಕ್ಕ ತೂಕವಿಲ್ಲದ ಮಕ್ಕಳ ಸಂಖ್ಯೆ 1396 ಇದೆ. ಇರುವ ಅಂಗನವಾಡಿ ಕೇಂದ್ರಗಳ ಪರಿಸ್ಥಿತಿಯೂ ಚಿಂತಾಜನಕವಾಗಿದೆ. ಎಂದರು.

ಸಂಘಟನೆಯ ರಾಜ್ಯ ಪ್ರಧಾನಕಾರ್ಯದರ್ಶಿ ಎಚ್.ಎಸ್. ಸುನಂದ ಮಾತನಾಡಿ, ಬೆಂಗಳೂರುನಗರದಲ್ಲಿ 2420 ಅಂಗನವಾಡಿ ಕೇಂದ್ರಗಳು ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 1420  ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ, 630 ಕೇಂದ್ರಕ್ಕೆ ಅಡುಗೆ ಮನೆ ಇಲ್ಲ ,  2171 ಕೇಂದ್ರಕ್ಕೆ ಕೈತೋಟವಿಲ್ಲ, 394 ಕೇಂದ್ರಕ್ಕೆ ಶೌಚಾಲಯವಿಲ್ಲ, 692 ಕಡೆ ನೀರಿನ ವ್ಯವಸ್ಥೆ ಇಲ್ಲ,  657 ಕಡೆ ವಿದ್ಯುತ್ ಸೌಲಭ್ಯ ಇಲ್ಲ, 1501 ಕೇಂದ್ರಕ್ಕೆ ಕಾಂಪೌಡ್ ಇಲ್ಲ, 1966  ಕೇಂದ್ರಗಳಿಗೆ  ಆಟದ ಮೈದಾನವಿಲ್ಲ.  964 ಕಡೆ ಫ್ಯಾನ್ ಇಲ್ಲ, ಏನು ಇಲ್ಲದೆ ಮಕ್ಕಳನ್ನು ಹೇಗೆ ಆಕರ್ಷಿಸಬೇಕು, ಬರುವ ಮಕ್ಕಳನ್ನು ಹೇಗೆ ಸುಧಾರಿಸಬೇಕು? ಆದ್ದರಿಂದ ಐಸಿಡಿಎಸ್ ಯೋಜನೆಯನ್ನು ವಿಸ್ತರಿಸಬೇಕು. ಮತ್ತು ಇರುವ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಬೆಂಗಳೂರು ಜಿಲ್ಲಾಧ್ಯಕ್ಷೆ ಟಿ. ಲೀಲಾವತಿ ಮಾತನಾಡುತ್ತಾ, ಬೆಂಗಳೂರು ನಗರದ ಅಂಗನವಾಡಿ ಕೇಂದ್ರಗಳಲ್ಲಿರುವ ಕಾರ್ಯಕರ್ತೆಯರು ಅತೀವ ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಿದೆ. ಹಲವಾರು ಕಡೆ ಸ್ಥಳದ ಕೊರತೆಯಿಂದ ಒಂದೇ ಕಡೆ 2 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಮಾತ್ರವಲ್ಲ ಇನ್ನು ಕೆಲವೆಡೆ ಒಂದೇ ಕೇಂದ್ರಕ್ಕೆ ನೂರಾರು ಮಕ್ಕಳು ಮತ್ತು ಫಲಾನುಭವಿಗಳು ಬರುತ್ತಾರೆ. ಇನ್ನೂ ಕೆಲವಡೆ ಒಂದು ಕಿ.ಮೀಟರ್‌ಗೆ ಒಂದು ಅಂಗನವಾಡಿ ಕೇಂದ್ರವಿರುವುದು ಇದೆ. ಮಾತ್ರವಲ್ಲ ಒಂದೇ ಸ್ಥಳದಲ್ಲಿ 3 ಪ್ರಾಜೆಕ್ಟ್ ಗಳಿಗೆ ಸೇರಿದ ಅಂಗನವಾಡಿ ಕೇಂದ್ರಗಳಿವೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು , ಸಹಾಯಕಿಯರು ಮತ್ತು ಫಲಾನುಭವಿಗಳೂ ಕೂಡಾ ಕಛೇರಿಗೆ ಮತ್ತು ಸರ್ಕ್ಲ್ ಸಭೆಗಳಿಗೆ ಹೋಗಿ ಬರುವುದೇ ಒಂದು ದುಸ್ಸಾಹಸವಾಗಿದೆ. ಆದ್ದರಿಂದ ಅಂಗನವಾಡಿ ಪ್ರಾಜೆಕ್ಟ್ ಗಳನ್ನು ಭೌಗೋಳಿಕ ಆಧಾರದಲ್ಲಿ ಮರುವಿಂಗಡನೆ ಮಾಡಬೇಕು. ಇಷ್ಟೆಲ್ಲಾ ಒತ್ತಡದಲ್ಲಿ ಕಾರ್ಯಕರ್ತರು ಕೆಲಸ ನಿರ್ವಹಿಸಬೇಕಾಗಿದೆ. ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆಯಲ್ಲಿ ಕೇಂದ್ರ ನಡೆಸಬೇಕಿದೆ. ಆರೇಳು ತಿಂಗಳಾದರೂ ಬಾಡಿಗೆ ಹಣ, ಗ್ಯಾಸ್ ಹಣ ಬಿಡುಗಡೆಯಾಗುವುದಿಲ್ಲ. ಬಾಡಿಗೆ ಹಣ ಬಿಡುಗಡೆಗೆ ಮಾನದಂಡಗಳನ್ನು ಹೇರಲಾಗುತ್ತಿದೆ. ತಿಂಗಳಿಗೆ ಸರಿಯಾಗಿ ಗೌರವಧನವು ಬಿಡುಗಡೆ ಆಗುವುದಿಲ್ಲ. ಇಂತಹ ಸಮಯದಲ್ಲಿ ಬಾಡಿಗೆ ಆಯಾಯ ತಿಂಗಳು ಬರಿಸುವುದು ಕಷ್ಟವಾಗಿದೆ. ಈ ವಿಚಾರವಾಗಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ನೀಡಿ ಗಮನಕ್ಕೆ ತರಲಾಗಿದೆ. ಆದರೂ ಸುಧಾರಣೆ ಕಂಡು ಬಂದಿರುವುದಿಲ್ಲ. ಕೂಡಲೆ ಬಿಬಿಎಂಪಿ ವ್ಯಾಪ್ತಿಯ ಅಂಗನವಾಡಿಗಳನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಳಿನಾಕ್ಷಿ, ಮುಖಂಡರಾದ ರಮಾದೇವಿ ಆರ್, ಟಿ.ರಾಜೇಶ್ವರಿ,  ಸುಮಿತ್ರಾ, ನಾಗರತ್ನ ಸೇರಿದಂತೆ ನೂರಕ್ಕು ಹೆಚ್ಚು ಅಂಗನವಾಡಿ ನೌಕರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *