ಸುನಂದ ಹೆಚ್.ಎಸ್.
ಅಂಗನವಾಡಿ ನೌಕರರು ಮತ್ತೊಮ್ಮೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಜನವರಿ 23ರಿಂದ ರಾಜ್ಯಾದ್ಯಂತ ಅನಿರ್ಧಿಷ್ಠ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಯಾಕಾಗಿ ಈ ಮುಷ್ಕರ? ಅಂಗನವಾಡಿ ನೌಕರರ ಬೇಡಿಕೆಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ವಿವರವಾಗಿ ಉತ್ತರಗಳಿವೆ.
ಅಂಗನವಾಡಿ ಎಂದರೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಒಂದು ಕೇಂದ್ರ. ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ದೂರ ದೃಷ್ಟಿಯ ಹಿನ್ನೆಲೆಯಲ್ಲಿ ಇದರ ಅನುಷ್ಠಾನ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರದು 6 ತಿಂಗಳಿಂದ 6 ವರ್ಷದೊಳಗಿನ ಮಕ್ಕಳ ಪಾಲನಾ ಕೇಂದ್ರದ ಕಾರ್ಯಕರ್ತೆ ಕೆಲಸ ಮಾತ್ರವೇ ಅಲ್ಲ. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಆಹಾರ ಭದ್ರತೆ ಒದಗಿಸುವ ಕೆಲಸ ಸೇರಿದಂತೆ ಯೋಜನೆಗೆ ಸಂಬಂಧಿಸಿದ 6 ಕೆಲಸಗಳನ್ನು ಮಾಡಬೇಕು. ಇದಕ್ಕಾಗಿ ಇವರಿಗೆ ಅತ್ಯಲ್ಪ ಗೌರವಧನ ಸಿಗುತ್ತದೆ.
ದೇಶದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಪ್ರಾರಂಭವಾಗಿ 48 ವರ್ಷಗಳಾದವು. ಯೋಜನೆಯ ಮೂಲ ಉದ್ದೇಶಕ್ಕಾಗಿ ಅಂಗನವಾಡಿ ನೌಕರರು ಯೋಜನೆಗೆ ಸಂಬಂಧಿಸಿದ 6 ಸೇವೆಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೆ ತರುವ ಮೂಲಕ ಸರ್ಕಾರ ಇಂದು ಐಸಿಡಿಎಸ್ ಯೋಜನೆಯನ್ನು ದುರ್ಬಲಗೊಳಿಸಲು ಮುಂದಾಗಿದೆ. ಆ ಮೂಲಕ ಬಾಲ್ಯಾವಸ್ಥೆಯ ಮಕ್ಕಳ ಶಿಕ್ಷಣದ ಹಕ್ಕುಗಳನ್ನು ಕಸಿಯಲು ಸರ್ಕಾರ ಮುಂದಾಗಿದೆ.
ಅಂಗನವಾಡಿ ಕೇಂದ್ರಗಳನ್ನು ದುರ್ಬಲಗೊಳಿಸುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ:
ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) 2020 ನ್ನು ಜಾರಿಗೆ ತಂದಿದೆ, ಈ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವ ವಿಷಯದಲ್ಲಿ ರಾಜ್ಯ ಸರ್ಕಾರ ಸಂಬಂಧಿಸಿದ ಸಂಘಟನೆಗಳೊಂದಿಗೆ ಚರ್ಚಿಸಲಿಲ್ಲ. ಅದು ಟಾಸ್ಕ್ ಫೋರ್ಸ್ ಕಮಿಟಿಯನ್ನು ನೇಮಕ ಮಾಡಿತು. ಕಮಿಟಿಯ ವರದಿಯೂ ಬಂದಿದೆ. ನೂತನ ಶಿಕ್ಷಣ ನೀತಿಯ ಶಿಫಾರಸ್ಸಿನಂತೆ 4 ವರ್ಷ ಮೇಲ್ಪಟ್ಟ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಮುಂದಾಗುತ್ತಿದೆ. ನಮ್ಮ ರಾಜ್ಯದ ಶಿಕ್ಷಣ ಸಚಿವರು ರಾಜ್ಯದಲ್ಲಿಯೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಶಿಫಾರಸ್ಸಿಗೆ ಮುಂದಾಗಿದ್ದಾರೆ. ಈ ಶಿಕ್ಷಣ ನೀತಿ ಅಧಿಕೃತವಾಗಿ ಜಾರಿಯಾದರೆ, 62,580 ಅಂಗನವಾಡಿ ಕೇಂದ್ರಗಳು ಮತ್ತು 3,331 ಮಿನಿ ಅಂಗನವಾಡಿ ಕೇಂದ್ರಗಳು ಸಂಪೂರ್ಣ ದುರ್ಬಲಗೊಳ್ಳುವ ಪರಿಸ್ಥಿತಿಗೆ ಬರಲಿದೆ. ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕೆಂದು ನಮ್ಮ ಸಂಘಟನೆ ಕೇಳುತ್ತಲೇ ಬಂದಿದೆ. ಸರ್ಕಾರ ಅನ್ನದೊಟ್ಟಿಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಬಲಿಷ್ಠ ಪಡಿಸಬೇಕು. ಐಸಿಡಿಎಸ್ ನ ಮಾರ್ಗದರ್ಶಿ ಸೂಚಿಗಳ ಪ್ರಕಾರ, ಇರುವ 6 ಸೇವೆಗಳಿಗೆ ಮಾತ್ರ ಅಂಗನವಾಡಿ ನೌಕರರನ್ನು ಬಳಸಬೇಕು. ಆದರೆ ಸರ್ಕಾರ ಕಾರ್ಯಕರ್ತೆಯರಿಗೆ ಹಲವು ರೀತಿಯ ಕೆಲಸದ ಒತ್ತಡ ಹೇರುತ್ತಿದೆ. ಇದರಿಂದ ಯೋಜನೆಯ ಮೂಲ ಕೆಲಸಕ್ಕೆ ದಕ್ಕೆ ಆಗುತ್ತಿದೆ.
ಅಂಗನವಾಡಿ ಕಾರ್ಯಕರ್ತೆ ʻʻಒಂದು ಮಗುವನ್ನು ಸತ್ಪ್ರಜೆಯಾಗಿ ಮಾಡುವ ಬೆಳಕಿನ ಶಕ್ತಿʼʼ. ಆ ಶಕ್ತಿಯನ್ನು ಅನುಚಿತವಾಗಿ ಬಳಸದೇ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಹೊಸ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಜಾರಿ ಮಾಡಲು ಬಳಸಬೇಕು. ಮಕ್ಕಳಿಗೆ ಶಿಕ್ಷಣ ಸಿಗಬೇಕಾದರೆ ಹೆಚ್ಚುವರಿ ಕೆಲಸ ನಿರ್ಬಂಧಿಸಿ 9.30 ರಿಂದ 2 ಗಂಟೆಯವರೆಗೆ ಮಕ್ಕಳ ಶಿಕ್ಷಣಕ್ಕೆ ಸಮಯ ಮಿಸಲಿಟ್ಟು ಅಂಗನವಾಡಿ ಕೇಂದ್ರಗಳನ್ನು ಶಿಕ್ಷಣ ಕೇಂದ್ರಗಳಾಗಿಸಬೇಕು, ಅಂಗನವಾಡಿ ಕಾರ್ಯಕರ್ತೆಗೆ ಶಿಕ್ಷಕಿಯರ ಸ್ಥಾನಮಾನ ನೀಡಬೇಕು.
ಗ್ರಾಚ್ಯುಟಿ ಪಾವತಿಸಲು ಕೂಡಲೇ ಸರ್ಕಾರ ಮುಂದಾಗಬೇಕು:
ಮಾನವ ಸಂಪನ್ಮೂಲ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯುಟಿ ಪಡೆಯಲು ಅರ್ಹರು. ʻʻ1972 ರ ಗ್ರಾಚ್ಯುಟಿ ಕಾಯ್ದೆಯ ಪ್ರಕಾರ ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂಬ ಐತಿಹಾಸಿಕ ತೀರ್ಪುನ್ನು 25 ಏಪ್ರಿಲ್ 2022 ರಂದು ಮಾನ್ಯ ಸುಪ್ರಿಂ ಕೊರ್ಟ್ ನೀಡಿದೆʼʼ. ಇದರ ಪ್ರಕಾರ ಗ್ರಾಚ್ಯುಟಿ ಪಡೆಯಲು ರಾಜ್ಯಾದ್ಯಂತ ಸಾವಿರಾರು ನಿವೃತ್ತಿ ನೌಕರರು ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಓ) ಮತ್ತು ಉಪ ನಿರ್ದೇಶಕರಿಗೆ, ಕಾರ್ಮಿಕ ಇಲಾಖೆಗೆ ಅರ್ಜಿಗಳನ್ನು ನೇರವಾಗಿ ಹಾಗೂ ಅಂಚೆ ಮೂಲಕ ಸಲ್ಲಿಸುತ್ತಿದ್ದಾರೆ. 48 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಈ ಒಂದು ಸವಲತ್ತು ಬಂದಿದೆ. ಗ್ರಾಚ್ಯುಟಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಪರಿಹಾರ ನೀಡಲು ʻರಾಜ್ಯ ಸಚಿವ ಸಂಪುಟ ತೀರ್ಮಾನಿಸಿʼ ಜಾರಿ ಮಾಡಿ ಆದೇಶವಾಗಿ ತರಬೇಕು. ಮಾತ್ರವಲ್ಲ ಹಲವಾರು ನೌಕರರಿಗೆ ಅರ್ಜಿ ಸಲ್ಲಿಸಲು ಬೇಕಾದ ನೇಮಕಾತಿ, ನಿವೃತ್ತಿ ಆದೇಶಗಳನ್ನು ಒದಗಿಸಿಕೊಡಬೇಕು.
ಕೇಂದ್ರ ಸರ್ಕಾರ ಅನುದಾನ ಹೆಚ್ಚಿಸಬೇಕು:
ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಯನ್ನು ಬಲಿಷ್ಠಗೊಳಿಸಲು ಅಗತ್ಯವಿರುವ ಅನುದಾನ ಹೆಚ್ಚಿಸಬೇಕಾಗಿತ್ತು. ಜೊತೆಗೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಧಾರದಲ್ಲಿ ಬಜೆಟ್‌ನಲ್ಲಿ ಅನುದಾನ ಹೆಚ್ಚಿಸುವ ಅಗತ್ಯವೂ ಇತ್ತು. ಆದರೆ, ಅದು ಈ ಯೋಜನೆಗೆ ನೀಡುತ್ತಿದ್ದ ತನ್ನ ಪಾಲಿನ ಶೇ. 60ರ ಅನುದಾನವನ್ನು ಶೇ. 40 ಕ್ಕೆ ಇಳಿಸಿದೆ. ಈ ನಿರ್ಧಾರ ಮೂಲಕ ರಾಜ್ಯ ಸರ್ಕಾರಗಳ ಮೇಲೆ ಹೊರೆ ಹೊರಿಸಲಾಗಿದೆ. 2022-23 ರಲ್ಲಿ ಬೆಲೆ ಏರಿಕೆ ಆಧಾರದಲ್ಲಿ ಅನುದಾನ ಹೆಚ್ಚಳ ನೀಡದೇ ರೂ. 20,26,307 ಕೋಟಿಯನ್ನು ಮಾತ್ರ ಬಜೆಟ್‌ನಲ್ಲಿ ಕೊಡಲಾಗಿದೆ. ರಾಜ್ಯಕ್ಕೆ ನೀಡಬೇಕಾದ ನಿಗದಿತ ಪಾಲನ್ನು ಸಮಯಕ್ಕೆ ಸರಿಯಾಗಿ ನೀಡುವ ಮೂಲಕ ಐಸಿಡಿಎಸ್ ನ್ನು ಬಲಿಷ್ಠಗೊಳಿಸಬೇಕಿದೆ.
ಹೆಚ್ಚುತ್ತಿರುವ ಶಿಸ್ತು ಕ್ರಮಗಳು:
48 ವರ್ಷಗಳಿಂದ ಅಂಗನವಾಡಿ ಮಹಿಳೆಯರಿಗೆ ಗೌರವಧನ ಮಾತ್ರ ಕೊಟ್ಟು ಸರ್ಕಾರಗಳು ದುಡಿಸಿಕೊಳ್ಳುತ್ತಿದೆ. ಸಮಯಕ್ಕೆ ಸರಿಯಾಗಿ ಗೌರವಧನ ಕೊಡುತ್ತಿಲ್ಲ. ಅಂಗನವಾಡಿ ಕೇಂದ್ರದ ಬಾಡಿಗೆ ಹಣ, ಮಕ್ಕಳಿಗೆ ಕೊಡುವ ಮತ್ತು ಆಹಾರ ತಯಾರಿಕೆಗೆ ಖರೀದಿಸುವ ಮೊಟ್ಟೆ, ತರಕಾರಿ, ಗ್ಯಾಸ್ ಹಣವನ್ನು ಸರಿಯಾದ ಸಮಯಕ್ಕೆ ಕೊಡುತ್ತಿಲ್ಲ. ಆದರೆ ಕೆಲಸ ಮಾತ್ರ ಮಾಡಬೇಕು ಎಂಬ ಧೋರಣೆ ಅವಾಸ್ತವಿಕ. ಇತ್ತೀಚೆಗೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಸಣ್ಣ ತಪ್ಪು ಮಾಡಿದ ಕೂಡಲೇ ನೈಸರ್ಗಿಕ ನ್ಯಾಯವನ್ನು ಒದಗಿಸದೇ ಏಕಾಏಕಿ ಕೆಲಸದಿಂದ ವಜಾ ಮಾಡಲಾಗುತ್ತಿದೆ.
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಆಯ್ಕೆ ಕುರಿತು 15-06-2012ರ ಪರಿಷ್ಕೃತ ಆದೇಶದಲ್ಲಿರುವ ಜಿಲ್ಲಾದಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾದಿಕಾರಗಳು, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಿತಿ ಅಂಗನವಾಡಿ ಕೇಂದ್ರಗಳಿಗೆ ಬರುವ ಸವಲತ್ತುಗಳನ್ನು ಜಾರಿ ಮಾಡಲು ಮತ್ತು ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಬೇಕು. ಇಲ್ಲದಿದ್ದಲ್ಲಿ ಈ ಸಮಿತಿಯನ್ನು ವಿಸರ್ಜಿಸಬೇಕು ಮತ್ತು ಅಂಗನವಾಡಿ ನೌಕರರಿಗೆ ಸೇವಾ ನಿಯಮಾವಳಿ ಜಾರಿ ಮಾಡಬೇಕು.
ಸಮಯಕ್ಕೆ ಸರಿಯಾಗಿ ಪಾವತಿಯಾಗದ ವೇತನ
ಅಂಗನವಾಡಿ ನೌಕರರಿಗೆ ತಿಂಗಳ ಸಂಬಳ, ಮೊಟ್ಟೆ ಹಣ, ಬಾಡಿಗೆ ಹಣ, ಅಡುಗೆ ಅನಿಲದ ಹಣ, ಪ್ಲಕ್ಸಿಫಂಡ್, ಇಂಡೆಂಟ್, ಇಕ್ರಿಮೆಂಟ್ ನೀಡುವುದರಲ್ಲಿ ವಿಳಂಬ ಮಾಡಲಾಗುತ್ತದೆ. ಮೊಟ್ಟೆ ಹಣ, ಬಾಡಿಗೆ, ಗ್ಯಾಸ್, ಆರು ತಿಂಗಳಾದರೂ ಬಿಡುಗಡೆ ಮಾಡುವುದಿಲ್ಲ. ಕಾರ್ಯಕರ್ತೆಯರು ಅಮ್ಮ ಹಣದಿಂದ ಭರಿಸುವ ಸ್ಥಿತಿ ಇದೆ. ಅಲ್ಲದೇ ಗೌರವಧನ ಎಂದೂ ತಿಂಗಳ 10 ನೇ ತಾರೀಖು ಒಳಗೆ ಸಿಗುವುದೇ ಇಲ್ಲ. 3 ತಿಂಗಳಾದರೂ ಬಿಡುಗಡೆ ಮಾಡುವುದಿಲ್ಲ. ಎಎಪಿ ಸಭೆಯಲ್ಲಿ ಅನುಮೋದನೆ ಸಿಕ್ಕಿಲ್ಲ ಎಂಬ ನೆಪಗಳೇ ಇರುತ್ತದೆ. ಯಾವುದೇ ಕಾರಣ ಇಲ್ಲದೇ ತಿಂಗಳಿಗೆ ಸರಿಯಾಗಿ ಮುಂಗಡ ಆಗಬೇಕು, ಸಂಬಳ ನೀಡಬೇಕು. ನಿವೃತ್ತಿ ಆದವರಿಗೆ ತಕ್ಷಣ ಇಡುಗಂಟು ಹಣ ಬಿಡುಗಡೆ ಮಾಡಬೇಕು. ವರ್ಷಾನುಗಟ್ಟಲೇ ಬಾಕಿ ಉಳಿಸಿಕೊಳ್ಳಬಾರದು.
ಕೆಲಸದ ಒತ್ತಡ:
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ಸಮಗ್ರ ಶಿಶು ಅಭಿವೃದ್ಧಿ (ಐಸಿಡಿಎಸ್) ಯೋಜನೆಗೆ ಸಂಬಂಧಪಡದ ಇತರೆ ಇಲಾಖೆಗಳ ಕೆಲಸಗಳನ್ನೂ ಮಾಡಿಸಲಾಗುತ್ತದೆ. ಸರ್ಕಾರ ಇವರ ಮೇಲೆ ಹಲವು ರೀತಿಯ ಕೆಲಸದ ಒತ್ತಡ ಹೇರುತ್ತಿದೆ. ಇದರಿಂದ ಯೋಜನೆಯ ಮೂಲ ಕೆಲಸಕ್ಕೆ ದಕ್ಕೆ ಆಗುತ್ತಿದೆ. ಮೂಲ ಕೆಲಸ ಬಿಟ್ಟು ಯೋಜನೇತರ ಕೆಲಸಗಳಾದ ವಿವಿಧ ಬಗೆಯ ಸರ್ವೆ ಮಾಡಲು, ಸ್ತ್ರೀಶಕ್ತಿ, ಮಾತೃವಂದನಾ, ಭಾಗ್ಯಲಕ್ಷ್ಮಿ ಇಂತಹ ಯೋಜನೆಗಳ ಜಾರಿಗಾಗಿ, ಚುನಾವಣೆ ಸಂದರ್ಭದಲ್ಲಿ ಬೂತ್ ಮಟ್ಟದ ಕೆಲಸ ಮತ್ತು ಸಾರ್ವಜನಿಕ ಹಬ್ಬಗಳು, ಕಾರ್ಯಕ್ರಮಗಳಲ್ಲಿ ತೊಡಗಿಸುವುದು, ಕಾರ್ಯಕ್ರಮಗಳಿಗೆ ಕುಂಭ, ಕಲಶಗಳನ್ನ ಹೊರಿಸುವ ಕಾರ್ಯಕ್ರಮಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವುದು ನಡೆಯುತ್ತಿದೆ. ಮಹಿಳೆಯರು ಎಂದು ಪರಿಗಣಿಸದೇ ಇಂತಹ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ, ಇದು ನಿಲ್ಲಬೇಕು. ಐಸಿಡಿಎಸ್ ಗೆ ಸಂಬಂಧಿಸಿದ ಕೆಲಸಗಳಿಗೆ ಮಾತ್ರ ಕಾರ್ಯಕರ್ತೆಯರ ಬಳಕೆಯಾಗಬೇಕು.
ಮಕ್ಕಳ ಹಾಜರಾತಿಯನ್ನು ದಾಖಲು ಮಾಡಲು ದಿನವೂ ಬರೆದಿಡಬೇಕು ಎಂಬುದೇನೋ ಸರಿ. ಇದನ್ನು ಮೊಬೈಲ್ ನಲ್ಲಿ ಮೂರು ಬಾರಿ ಮತ್ತು ಪುಸ್ತಕದಲ್ಲಿ ಎರಡು ಬಾರಿ ಬರೆಯುವ ಅವಶ್ಯಕತೆ ಏನಿದೆ? ಇದರಿಂದ ಬರೆಯುವ ಕೆಲಸಕ್ಕೆ ಸಮಯ ವ್ಯರ್ಥವಾಗುತ್ತದಷ್ಟೆ. ಮೊಬೈಲ್ ಅಥವಾ ಪುಸ್ತಕ ಯಾವುದಾದರೂ ಒಂದರಲ್ಲಿ ಹಾಜರಾತಿ ಬರೆಯುವಂತಾಗಬೇಕು. ಮೊಬೈಲ್ ನಲ್ಲಿ ಬರೆಯುವುದಾದರೆ ಉತ್ತಮ ಗುಣಮಟ್ಟದ ಮೊಬೈಲ್ ಅವಶ್ಯಕತೆ ಇದೆಯಲ್ಲವೇ? ಕಡಿಮೆ ವೇತನ ಪಡೆಯುತ್ತಿರುವ ಅಂಗನವಾಡಿ ನೌಕರರಿಗೆ ಗುಣಮಟ್ಟದ ಮೊಬೈಲ್ ಖರೀದಿಸಲು ಸಾಧ್ಯವಿಲ್ಲ. ಇದನ್ನು ಸರ್ಕಾರವೇ ಖರೀದಿಮಾಡಿ ನೌಕರರಿಗೆ ಕೊಡಬೇಕು. ಜೊತೆಗೆ ಪುಸ್ತಕದಲ್ಲಿ 42 ದಾಖಲೆ ಬರೆಯಬೇಕಾಗಿದೆ. ಇದನ್ನೂ ಕಡಿಮೆ ಮಾಡಬೇಕು. ಮುಖ್ಯ ದಾಖಲೆ ಪುಸ್ತಕಗಳನ್ನು ಸರ್ಕಾರವೇ ಒದಗಿಸಬೇಕು.
ಅಂಗನವಾಡಿ ಕೇಂದ್ರದ ವೇಳಾಪಟ್ಟಿ ಬದಲಾಗಬೇಕು:
ಬೆಳಗ್ಗೆ 9.30 ಗಂಟೆಯಿಂದ 1.30 ಗಂಟೆಯ ತನಕ ಪೂರ್ವ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷಣ ನೀಡಲು ಸಮಯ ನಿಗಧಿ ಮಾಡಬೇಕು. ಆ ಸಮಯದಲ್ಲಿ ಸಾರ್ವಜನಿಕರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಲು ಅವಕಾಶವಿಲ್ಲ ಎಂಬುದನ್ನು ಖಚಿತ ಪಡಿಸಬೇಕು. ಇಲ್ಲದಿದ್ದರೆ ಬೆಳಗ್ಗೆಯೇ ಇತರೆ ಕೆಲಸಗಳಿಗೆ ಸಾರ್ವಜನಿಕರು ಕೇಂದ್ರಕ್ಕೆ ಬಂದರೆ ಕಾರ್ಯಕರ್ತೆ ಪಾಠ ಮಾಡುವ ಏಕಾಗ್ರತೆಗೆ ತೊಂದರೆ ಆಗುತ್ತದೆ.
ಹೊಸದಾಗಿ ತೆರೆಯುತ್ತಿರುವ 4,204 ಅಂಗನವಾಡಿ ಕೇಂದ್ರಗಳು:
ಕಳೆದ ಬಜೆಟ್‌ನಲ್ಲಿ ಘೋಷಣೆ ಆದಂತೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ತೆರೆಯಲಿರುವ 4,204 ಅಂಗನವಾಡಿ ಕೇಂದ್ರಗಳನ್ನು ಈಗಾಗಲೇ ಇರುವ 3,331 ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಕೇಂದ್ರಗಳಾಗಿ ಪರಿವರ್ತಿಸಬೇಕು. ಒಬ್ಬರ ಮೇಲೆಯೇ ಕಾರ್ಯಕರ್ತೆ, ಸಹಾಯಕಿ ಎರಡು ಕೆಲಸದ ಹೊರೆ ನಿಲ್ಲಬೇಕು.
ಮಿನಿ ಹಾಗೂ ಸಹಾಯಕಿ ಮುಂಬಡ್ತಿ ನೀಡುವ ಆದೇಶ ಮುಂದುವರೆಸುವುದು:
ಎಸ್.ಎಸ್.ಎಲ್.ಸಿ. ಪಾಸಾದ ಮಿನಿ ಕಾರ್ಯಕರ್ತೆ ಹಾಗೂ ಸಹಾಯಕಿಯರು 3 ವರ್ಷ ಸೇವೆ ಸಲ್ಲಿಸಿದವರಿಗೆ, 3 ಕಿ.ಮೀ. ಅಂತರದಲ್ಲಿ ಇರುವ ಹೊಸ ಕೇಂದ್ರಗಳಿಗೆ ಹಾಗೂ ಖಾಲಿ ಇರುವ ಕೇಂದ್ರಗಳಿಗೆ ಪೂರ್ಣ ಕಾರ್ಯಕರ್ತೆಯಾಗಿ ಮುಂಬಡ್ತಿ ನೀಡಲಾಗುತ್ತಿದೆ. ಇದು ನಮ್ಮ ಹೋರಾಟದ ನಿರಂತರ ಪ್ರಯತ್ನದಿಂದ ಆಗಿದೆ. ಈಗಾಗಲೇ ರಾಜ್ಯದ ಬಹಳಷ್ಟು ಮಿನಿ ಕಾರ್ಯಕರ್ತೆ, ಸಹಾಯಕಿ ಇಬ್ಬರೂ ಪೂರ್ಣ ಕಾರ್ಯಕರ್ತೆಯಾಗಿದ್ದಾರೆ. ಆದರೆ, ಇತ್ತೀಚೆಗೆ ಸರ್ಕಾರದ ಆದೇಶ ಸಂಖ್ಯೆ ಮ.ಮ.ಇ 154 ಐಸಿಡಿ 2020, ಬೆಂಗಳೂರು 3-12-2022ರ ಆದೇಶದಲ್ಲಿ, ಕಾರ್ಯಕರ್ತೆ, ಸಹಾಯಕಿ, ಹೊಸ ಆಯ್ಕೆಗೆ ಮಾರ್ಗಸೂಚಿ ಪಿಯುಸಿ ಮಾನದಂಡ ಹೇರಿರುವುದರಿಂದ ಈಗಾಗಲೇ ಮುಂಬಡ್ತಿ ನೀಡುತ್ತಿಲ್ಲ. ಈ ಆದೇಶವನ್ನು ಹೊಸ ನೇಮಕಾತಿಗೆ ಮಾತ್ರ ಅನ್ವಯ ಮಾಡಿ, ಈಗಾಗಲೇ ಸರ್ಕಾರದ ಆದೇಶ 19-01-2019 ಮತ್ತು 15-6-2020 ರ ಆಯ್ಕೆ ಮಾರ್ಗಸೂಚಿ ಮತ್ತು ಅರ್ಹತೆಯ ಮಾನದಂಡಗಳ ತಿದ್ದುಪಡಿ ಆದೇಶವನ್ನು ಮುಂಬಡ್ತಿಗಾಗಿ ಹೊಸ ಆಯ್ಕೆ ಆದೇಶದ ಸುತ್ತೋಲೆಯಲ್ಲಿ ತಿದ್ದುಪಡಿ ಮಾಡಿ, ಅಲ್ಲದೆ ಆರೋಗ್ಯ ಸಮಸ್ಯೆ, ಬಹಳ ಆಂತರದ ಹಾಗೂ ವೈಯಕ್ತಿಕ ಸಮಸ್ಯೆ ಇರುವ ಕಾರ್ಯಕರ್ತೆಗೂ ವರ್ಗಾವಣೆಯೂ ಸೇರಿದಂತೆ ಪುನರ್ ಆದೇಶ ಜಾರಿಮಾಡಲು ಈ ಹೋರಾಟದಲ್ಲಿ ಒತ್ತಾಯಿಸಲಾಗುತ್ತದೆ.
ಈ ಎಲ್ಲಾ ಬೇಡಿಕೆಗಳು ಹಾಗೂ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ 2022ರ ಡಿಸೆಂಬರ್ 1ರಂದು ಜಿಲ್ಲಾ ಮಟ್ಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಆದರೆ ಸರ್ಕಾರ ಈವರೆಗೆ ಗಮನ ನೀಡಿಲ್ಲ. ಹಾಗಾಗಿ ಜನವರಿ 23 ರಿಂದ ಅನಿರ್ದಿಷ್ಷಾವಧಿ ಹೋರಾಟವನ್ನು ರಾಜ್ಯದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ. ಈ ಹೊರಾಟಕ್ಕೆ ಕೆಲಸ ಸ್ಥಗಿತ ಮಾಡಿ ಪ್ರತಿಯೊಬ್ಬ ಕಾರ್ಯಕರ್ತೆ, ಸಹಾಯಕಿ, ಅವರ ಕುಟುಂಬದವರ ಸಮೇತ ಸಹಸ್ರಾರು ಸಂಖ್ಯೆಯಲ್ಲಿ ಹೋರಾಟಕ್ಕೆ ಅಣಿನೆರೆಯಲಿದ್ದಾರೆ.
ಲೇಖಕರು, ಅಂಗನವಾಡಿ ನೌಕರರ ರಾಜ್ಯ ಪ್ರಧಾನ ಕಾರ್ಯದರ್ಶಿ