ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತನ್ನ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸಾಂವಿಧಾನಿಕ ಹಕ್ಕಿನ ಭಾಗವಾಗಿ ನಡೆಸಿದ ಹೋರಾಟವನ್ನು ಬೆಂಬಲಿಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹೋರಾಟ ನಡೆಸಿದ ಅಂಗನವಾಡಿ ನೌಕರರ ಸಂಘದ ಮುಖಂಡರ ಮೇಲೆ ಹಾಕಿರುವ ಮೊಕದ್ದಮೆ ಹಿಂಪಡೆಯಬೇಕೆಂದು ರಾಜ್ಯ ಘಟಕದ ನಿಯೋಗವು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಅಂಗನವಾಡಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಅತ್ಯಂತ ಶಾಂತರೀತಿಯಿಂದ ಹತ್ತು ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಮಹಿಳೆಯರ ಮತ್ತು ಎಲ್ಲ ಸಾಮಾನ್ಯ ಜನರ ನ್ಯಾಯಯುತ ಬೇಡಿಕೆಗಳನ್ನು ನಾವು ಬೆಂಬಲಿಸುತ್ತೇವೆ. ದೇಶದ ಸಂವಿಧಾನದ ಆಶಯದಂತೆ ಇಲ್ಲಿ ಜೀವಿಸುವ ಎಲ್ಲರಿಗೂ ಘನತೆಯ ಬದುಕು ಸಿಗಬೇಕು ಮತ್ತು ಜನರಿಂದ ಆಯ್ಕೆಯಾಗಿ ಬಂದ ಸರಕಾರಗಳು ಜನಹಿತ ಕಾಯಲು ಬದ್ಧರಾಗಿರಬೇಕೆಂದು ನಮ್ಮ ಒತ್ತಾಯವಾಗಿದೆ ಎಂದರು.
ಇದನ್ನು ಓದಿ: ಅಂಗನವಾಡಿ ಹೋರಾಟ : ನಾಯಕರ ಮೇಲೆ ಪ್ರಕರಣ ದಾಖಲು
ಅಂಗನವಾಡಿ ನೌಕರರು ಗ್ರಾಚ್ಯುಯಿಟಿಗೆ ಅರ್ಹರು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಜಾರಿ ಮಾಡಲು ಮತ್ತು ಅವರನ್ನು ಶಿಕ್ಷಕರೆಂದು ಪರಿಗಣಿಸಬೇಕು, ಯೋಜನಾ ನೌಕರರಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾತ್ರ ಮಾಡಿಸಬೇಕು ಇತ್ಯಾದಿ ನ್ಯಾಯಯುತ ಬೇಡಿಕೆಗಳನ್ನು ಅಂಗನವಾಡಿ ನೌಕರರ ಸಂಘಟನೆ ಪ್ರತಿಭಟನೆಗೆ ಇಳಿಯುವ ಮುನ್ನವೇ ಸರಕಾರದ ಮುಂದಿಟ್ಟಿತ್ತು. ಸರಕಾರ ಅದಕ್ಕೆ ಸ್ಪಂದಿಸದಿದ್ದಾಗಲಷ್ಟೇ ಪ್ರತಿಭಟನೆಗೆ ಮುಂದಾಯಿತು. ಹತ್ತು ದಿನಗಳ ನಂತರ ಕೊಟ್ಟ ಆದೇಶಗಳನ್ನು ಮೊದಲ ದಿನವೇ ಕೊಟ್ಟಿದ್ದರೆ ಹೋರಾಟಕ್ಕೆ ಇಳಿಯುವ ಪ್ರಮೇಯವೇ ಬರುತ್ತಿರಲಿಲ್ಲ. ಆಗಲೂ ತಕ್ಷಣವೇ ಸರಕಾರ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಬದಲು ಹಠದ ಧೋರಣೆಗೆ ಬಿದ್ದಿತು ಎಂಬುದೇ ಸಮಸ್ಯೆಯ ಮೂಲ ಎಂದು ತಿಳಿಸಿದರು.
ಅತ್ಯಂತ ಶಾಂತ ರೀತಿಯಿಂದ ಹತ್ತು ದಿನಗಳ ಕಾಲ ಕೊರೆವ ಛಳಿ, ಸುಡುವ ಬಿಸಿಲಿನಲ್ಲಿ ರಾತ್ರಿ-ಹಗಲು ಮಹಿಳೆಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿರುತ್ತಾರೆ. ಸರಿಯಾದ ಶೌಚಾಲಯವಿಲ್ಲ, ಮಲಗಲು ಸ್ಥಳವಿಲ್ಲ, ಯಾವುದೇ ರೀತಿಯ ನಾಗರಿಕ ಸೌಲಭ್ಯಗಳ ಲಭ್ಯತೆಯೇ ಇಲ್ಲದಿದ್ದರೂ ಎದೆಗುಂದದೆ ಪುಟ್ಟ ಮಕ್ಕಳನ್ನೂ ಜೊತೆಗಿರಿಸಿಕೊಂಡ ಜಗದ ತಾಯಂದಿರು ದಿನ ಕಳೆದಿದ್ದಾರೆ. ದೇಶದ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಜಾರಿ ಮಾಡದೇ ಕರ್ತವ್ಯಲೋಪ ಎಸಗಿದ ಸರಕಾರ ಇವರ ಪ್ರತಿಭಟನೆಯ ನಂತರವಷ್ಟೇ ಅದನ್ನು ಮಾನ್ಯ ಮಾಡಲು ಮುಂದಾಗಿದೆ. ರಾಜ್ಯ ಸರಕಾರ ಅವರ ಪ್ರತಿಭಟನೆಗೆ ಮಣಿದು, ಅವರ ಬೇಡಿಕೆಗಳನ್ನು ಈಡೇರಿಸುವ ಆದೇಶ ನೀಡಿದೆ ಎಂದು ವಿವರಿಸಿದರು.
ಇದನ್ನು ಓದಿ: ‘ಗ್ರಾಚ್ಯುಟಿ’ ಗೆದ್ದ ಅಂಗನವಾಡಿ ನೌಕರರು : ಮಂಡಿಯೂರಿದ ಸರಕಾರ
ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿ, ಸರ್ಕಾರಿ ಆದೇಶ ಬಂದು ಪ್ರತಿಭಟನಾಕಾರರು ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ಧವಾಗುತ್ತಿದ್ದಂತೆ ನಗರದ ಪೋಲೀಸರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಮುಖ್ಯ ಪದಾಧಿಕಾರಿಗಳ ಮೇಲೆ ಎಫ್.ಐ.ಆರ್ ಹಾಕಿ ಮೊಕದ್ದಮೆ ಹೂಡಿದೆ. ದಶಕಗಳ ಕಾಲ ಗೌರವ ಧನದ ಹೆಸರಲ್ಲಿ ದುಡಿಸಿಕೊಂಡು ಕನಿಷ್ಟ ಜೀವನ ಭದ್ರತೆ ಕೊಡದ ಸರಕಾರಗಳು, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನೂ ಕಡೆಗಣಿಸಿ ಸಾವಿರಾರು ಜನ ಅಂಗನವಾಡಿ ನೌಕರರನ್ನು ಬೀದಿಪಾಲು ಮಾಡಲ ಹೊರಟಿತ್ತು. ಆ ಸಾವಿರಾರು ನೌಕರರ ಬದುಕಿನ ಪ್ರಶ್ನೆಯ ಹೋರಾಟವದು. ತಪ್ಪೆಸಗಿದ್ದು ಸರಕಾರ, ಮೊಕದ್ದಮೆ ಸಂಘದ ಪದಾಧಿಕಾರಿಗಳ ಮೇಲೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮಾದರಿಯಾ ಎಂದು ಪ್ರಶ್ನಿಸಿದರು.
ರಾಜ್ಯ ಉಪಾಧ್ಯಕ್ಷೆ ಗೌರಮ್ಮ ಮಾತನಾಡಿ, ದೇಶದ ಮುಂಚೂಣಿ ಮಹಿಳಾ ಸಂಘಟನೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕವು ನಗರ ಪೊಲೀಸ್ ಆಯುಕ್ತರ ಗಮನಕ್ಕೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ವಾಸ್ತವವೆಂದರೆ, ಅಂಗನವಾಡಿ ನೌಕರರನ್ನು ಬೀದಿಗೆ ಇಳಿಸಿದ್ದು ರಾಜ್ಯ ಸರಕಾರ. ಅವರ ಎಲ್ಲ ಬೇಡಿಕೆಗಳೂ ನ್ಯಾಯಯುತವಾದ ಬೇಡಿಕೆಗಳು, ಹಾಗೆಂದೇ ತಾನೇ ಸರಕಾರ ಈಗ ಆದೇಶಗಳನ್ನು ನೀಡಿರುವುದು. ಸ್ವತಂತ್ರ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕೆನ್ನುವ ಉಚ್ಛ ನ್ಯಾಯಾಲಯದ ಆದೇಶವಿದೆ ಎಂಬುದು ವಾಸ್ತವ ಸಂಗತಿ. ಆದರೆ ಜನರ ಸಮಸ್ಯೆಗಳು ಮಿತಿ ಮೀರುತ್ತಿದ್ದು, ಪ್ರತಿ ನಿತ್ಯ ಹತ್ತು ಹಲವು ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಆದರೆ ಸ್ವತಂತ್ರ ಉದ್ಯಾನದಲ್ಲಿ ಸ್ಥಳಾವಕಾಶದ ಕೊರತೆ ಇದೆ, ನಡೆಯುತ್ತಿರುವ ಪ್ರತಿಭಟನೆಗಳಿಗೆ ಅಗತ್ಯವಾದ ಸ್ಥಳಾವಕಾಶ ಅಲ್ಲಿ ಲಭ್ಯ ಇರುವುದಿಲ್ಲ. ಜೊತೆಗೇ ನಾಗರಿಕ ಸೌಲಭ್ಯಗಳು ಲಭ್ಯವಿಲ್ಲದ ಸ್ಥಿತಿ ಇದೆ ಎಂಬುದನ್ನು ಉಚ್ಛ ನ್ಯಾಯಾಲಯಕ್ಕೆ ಮನಗಾಣಿಸಬೇಕಾದ ಅಗತ್ಯವೂ ಇದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಸರಕಾರದ ಜವಾಬ್ದಾರಿ ಎಂಬುದನ್ನು ಸರಕಾರಕ್ಕೆ ಘನ ನ್ಯಾಯಾಲಯದ ಮೂಲಕ ತಿಳಿ ಹೇಳಿದರೆ ಒಳ್ಳೆಯದು ಎಂದು ವಿನಂತಿಸಿಕೊಂಡಿದ್ದಾರೆ.
ಇದನ್ನು ಓದಿ: ಸಿಎಂಗೆ ಕೊನೆಯ ಗಡುವು ನೀಡಿದ ಅಂಗನವಾಡಿ ನೌಕರರು – ಎರಡು ಬೇಡಿಕೆ ಈಡೇರಿಸಲು ಮುಂದಾದ ಸರಕಾರ
ಇಷ್ಟೆಲ್ಲದರ ನಂತರವೂ ಸಾವಿರಾರು ಜನ ಸೇರಿ 10 ದಿನಗಳ ಕಾಲ ಅಹೋರಾತ್ರಿ ಒಂದಿನಿತೂ ಅಹಿತಕರ ಘಟನೆಗಳು ನಡೆಯದೇ ಅತ್ಯಂತ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮತ್ತು ನಗರದ ಪೋಲೀಸ್ ಸಿಬ್ಬಂದಿ ಕೂಡಾ ಸ್ಥಳದಲ್ಲಿಯೇ ಇದ್ದು ಬಂದೋಬಸ್ತ್ ಗೆ ಗಮನ ನೀಡಿದ್ದವು. ಹಾಗಿದ್ದ ಮೇಲೆ ಎಫ್.ಐ.ಆರ್ ಹಾಕಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರನ್ನು ಅಪರಾಧಿಗಳಂತೇ ಬಿಂಬಿಸುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: 2023 ಜನವರಿ 23 ರಿಂದ ಅಂಗನವಾಡಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ: ಈ ಮುಷ್ಕರ ಯಾಕೆ?
ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ಲಕ್ಷ್ಮಿ ಮಾತನಾಡಿ, ಜನರ ಹಿತ ಕಾಯಲು ಆಳುವ ಸರಕಾರಗಳು ಹಿಂದೆ ಮುಂದೆ ನೋಡುವಾಗ ಸಂವಿಧಾನ ನೀಡಿದ ಹಕ್ಕಿನ ಭಾಗವಾಗಿ ಜನರು ಪ್ರತಿಭಟನೆ, ಹೋರಾಟಗಳನ್ನು ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಕೈ ಮೀರದಂತೆ ನೋಡಿಕೊಳ್ಳುವುದು ಇಲಾಖೆಯ ಜವಾಬ್ದಾರಿಯಾಗಿರುತ್ತದೆ. ಆದರೆ ಎಲ್ಲವೂ ಶಾಂತರೀತಿಯಿಂದ ನಡೆದ ಮೇಲೆ ಮುಖಂಡರುಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ಧಾಳಿಯಾಗುತ್ತದೆ. ಇದು ಜನರ ಹಕ್ಕುಗಳ ಪರವಾಗಿ ಮಾತಾಡುವವರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಹೋರಾಟಗಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಹೋರಾಟಗಳನ್ನು ಹತ್ತಿಕ್ಕಲಾಗುವುದಿಲ್ಲ. ಸಂವಿಧಾನದತ್ತ ಅಧಿಕಾರವನ್ನು ಕಿತ್ತುಕೊಳ್ಳಬಾರದೆಂದು ಮನವಿ ಸಲ್ಲಿಸಲಾಗಿದೆ ಎಂದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ