ಸಿದ್ದಯ್ಯ ಸಿ.
30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು)ವಿನ ಅಖಿಲ ಭಾರತ ಮಟ್ಟದ ಕಾರ್ಯಕ್ರಮವೊಂದು ನಡೆಯಿತು. ಅಂದಿನ ಕಾರ್ಯಕ್ರಮದ ಪ್ರಚಾರಕ್ಕೆ ಬೆಂಗಳೂರಿನ ಹಲವೆಡೆ ಕೆಂಪು ಬಾವುಟಗಳು ರಾರಾಜಿಸುತ್ತಿದ್ದವು. ರಾಷ್ಟ್ರೀಯ ಹೆದ್ದಾರಿಯಾಗಿರುವ ಬೆಂಗಳೂರು-ಹೊಸೂರು ರಸ್ತೆ ಅಂದು ದ್ವಿಮುಖ ಸಂಚಾರ ಇರುವ ಒಂದೇ ರಸ್ತೆಯಾಗಿತ್ತು. ನಾನಾಗ ಆಟೋ ರಿಕ್ಷಾ ಡ್ರೈವರ್ ಯೂನಿಯನ್ (ಸಿಐಟಿಯು) ನಲ್ಲಿ ಸಕ್ರಿಯನಾಗಿದ್ದೆ. ಹೊಸೂರು ರಸ್ತೆಗೆ ಹೊಂದಿಕೊಂಡಿರುವ ಗಾರ್ವೆಬಾವಿ ಪಾಳ್ಯದ ಪುಟ್ಟ ಹಳ್ಳಿಯಾಗಿತ್ತು. ಊರಿನ ಒಂದಷ್ಟು ಕುಟುಂಬಗಳು ಬೇಗೂರು ಕೆರೆ ನೀರು ಬಳಸಿ ನೀರಾವರಿ ಬೆಳೆ ಬೆಳೆಯುತ್ತಿದ್ದರು. ನೀರಾವರಿ ವ್ಯವಸ್ಥೆ ಇಲ್ಲದ ಜಮೀನುಗಳಲ್ಲಿ ರಾಗಿ, ಜೋಳ ಮುಂತಾದ ಮಳೆಯಾದಾರಿತ ಬೆಳೆ ಬೆಳೆಯುತ್ತಿದ್ದರು. ಮತ್ತೆ ಕೆಲವರು ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದರು. ಬೆರಣಿಕೆಯಷ್ಟು ಜನರು ಸಾರ್ವಜನಿಕ ಉದ್ದಿಮೆಗಳಾದ ಎಚ್‌ಎಎಲ್, ಬಿಇಎಲ್, ಎಚ್‌ಎಂಟಿ, ಐಟಿಐ ಕಾರ್ಖಾನೆಗಳ ಕಾರ್ಮಿಕರಾಗಿದ್ದರು. ಬಹುತೇಕ ಮನೆಗಳು ಹಳೆಯ ಗುಡಿಸಲು ಅಥವಾ ಹೆಂಚಿನ ಮನೆಗಳಾಗಿದ್ದವು.
ಸಿಐಟಿಯು ಕಾರ್ಯಕ್ರಮದ ಅಂಗವಾಗಿ ನಮ್ಮ ಪ್ರದೇಶದಲ್ಲಿ ಕೆಂಪು ಬಾವುಟ ಕಟ್ಟಲು ಮುಂದಾದೆ. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ)ನ ಚಿಕ್ಕ ಬೇಗೂರುಗೇಟ್ ಘಟಕದ ಆನಂದ್ ಕುಮಾರ್ ಅವರನ್ನು ಜೊತೆ ಮಾಡಿಕೊಂಡು ರಸ್ತೆ ಬದಿಯಲ್ಲಿ ಇರುವ ವಿದ್ಯುತ್ ಕಂಬಗಳಿಗೆ ಮತ್ತು ರಸ್ತೆ ಪಕ್ಕದಲ್ಲಿ ಇರುವ ಮರಗಳಿಗೆ ಬಾವುಟಗಳನ್ನು ಕಟ್ಟತೊಡಗಿದೆವು. ಆ ಪ್ರದೇಶದಲ್ಲಿ ಅದುವರೆಗೂ ಕೆಂಬಾವುಟ ಹಾರಾಡುವುದನ್ನು ಅಲ್ಲಿನವರು ಕಂಡಿರಲಿಲ್ಲ. ಹೀಗೆ ಬಾವುಟ ಕಟ್ಟಲು ಆನಂದ್ ಕುಮಾರ್ ವಿದ್ಯುತ್ ಕಂಬದ ಮೇಲೆ ಹತ್ತಿದ್ದಾಗ ಅದೇ ಊರಿನ ಗೋಪಾಲ ರೆಡ್ಡಿ ಎಂಬುವವರು ‘ಏಯ್, ಯಾರೋ ಅವ್ನು? ಇಳಿಯೋ ಕೆಳಗೆ. ಬೋ… ಮಕ್ಕಳ, ಎಲ್ಲಿಂದ್ಲೋ ಬಂದು ನಮ್ಮೂರಲ್ಲಿ ಕಮ್ಯುನಿಸ್ಟ್ ಬಾವುಟ ಕಟ್ತೀರೇನ್ರೋ?…’ ಎಂದು ನಿಂದಿಸುತ್ತಾ ಆವರಿಗೆ ಹೊಡೆದರು, ಕೆಂಬಾವುಟ ಕಿತ್ತೆಸೆದರು. ನಾನು ಅದಕ್ಕೂ ಮೊದಲೇ 10 ವರ್ಷಗಳು ಆ ಗ್ರಾಮದಲ್ಲಿ ವಾಸವಿದ್ದೆ. ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದ ಗೋಪಾಲ ರೆಡ್ಡಿಯವರ (ಅವರು ಈಗಿಲ್ಲ) ಬಳಿ ನನ್ನ ಕುರಿತು ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದೆ. ಅವರು ನನ್ನ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ‘ಕಮ್ಯುನಿಸ್ಟ್ ಬಾವುಟ ನಮ್ಮೂರಲ್ಲಿ ಕಾಣಿಸಬಾರದು. ನೀವು ಬೆಂಗಳೂರು ಸಿಟಿಯಲ್ಲಿ ಕಟ್ಕೊಳ್ಳಿ. ಇಲ್ಲಿ ಕಟ್ಟೋಕೆ ನಾನು ಬಿಡೋದಿಲ್ಲ’ ಎನ್ನುತ್ತ ಬಾವುಟ ಕಟ್ಟಲು ಬಿಡಲಿಲ್ಲ.
ವರ್ಷಗಳು ಉರುಳಿದಂತೆ ಆ ಪ್ರದೇಶದಲ್ಲಿ ಹಲವು ಕಾರ್ಖಾನೆಗಳ ಸಾವಿರಾರು ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಸಂಘ ಕಟ್ಟಿಕೊಂಡು, ಕೆಂಬಾವುಟ ಹಿಡಿದು ಹೋರಾಟಗಳನ್ನು ನಡೆಸಿದರು. ಹತ್ತಾರು ಗಾರ್ಮೆಂಟ್ ಕಂಪನಿಗಳ ಸಹಸ್ರಾರು ಮಹಿಳಾ ಕಾರ್ಮಿಕರ ಕೈಗಳಲ್ಲಿ ಕೆಂಬಾವುಟ ರಾರಾಜಿಸುತ್ತಿದ್ದವು. ಅಶೋಕ ಸಾಮ್ರಾಟ್, ಜಿಯಾದರ್ ಎಕ್ಸ್ ಪೋರ್ಟ್, ಪೆರ್ಲಾ ಇನ್ನೂ ಕೆಲವು ಗಾರ್ಮೆಂಟ್ ಕಂಪನಿಗಳ ಕಾರ್ಮಿಕರು ಹೋರಾಟ ನಡೆಸಿದರು. ಪತ್ತಿ ಸಿಲ್ಕ್, ಬಂಡಾರಿ ಮೆಟಲ್ ಅಂಡ್ ಅಲಾಯ್ಸ್, ಸಿಟಿ ವರ್ಕ್‌ಶಾಪ್, (ಇನ್ನೂ ಹಲವು ಕಾರ್ಖಾನೆಗಳಿದ್ದವು) ಹೋರಾಟಗಳು ನಡೆದವು. ಆಟೋ ಚಾಲಕರೂ ಸ್ಥಳೀಯ ಘಟಕ ರಚಿಸಿಕೊಂಡರು. ಆಟೋ ಚಾಲಕರಲ್ಲೂ ಕೆಂಬಾವುಟ ಹಿಡಿದು ಮಡಿವಾಳ ಪೋಲೀಸ್ ಠಾಣೆ ಮಡಿವಾಳ ಎದುರು ಜೋರು ಪ್ರತಿಭಟನೆಗೆ ಧೈರ್ಯ ತಂದಿದ್ದು, ಕೆಂಬಾವುಟದ ಶಕ್ತಿ. ಸ್ಥಳೀಯ ರಾಜಕೀಯ ನಾಯಕರು ಮತ್ತು ಕಾರ್ಖಾನೆಗಳ ಮಾಲೀಕರ ಗೂಂಡಾಗಳ ದಾಳಿಗಳನ್ನು ಎದುರಿಸಿ ನಿಲ್ಲುವಷ್ಟರ ಮಟ್ಟಿಗೆ ಕಾರ್ಮಿಕ ಚಳುವಳಿ ಬೆಳೆದು ನಿಂತಿತು. ಕ್ರಮೇಣ ಸಿಐಟಿಯು ಈ ಪ್ರದೇಶದಲ್ಲಿನ ಮೂಲಭೂತ ಸೌಲಭ್ಯಗಳಿಗಾಗಿ ಹಲವು ಹೋರಾಟಗಳನ್ನು ನಡೆಸಿತು.
ಇಂದು ಅದೇ ಹೊಸೂರು ರಸ್ತೆಯಲ್ಲಿ ಸಿಐಟಿಯು ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಕೆಂಬಾವುಟಗಳು ಹಾರಾಡುತ್ತಿರುವುದನ್ನೂ ಕಂಡು ಇವೆಲ್ಲವೂ ನೆನಪಿಗೆ ಬಂತು….