ಹೈದರಾಬಾದ್ | ಕರ್ನಾಟಕದ ಯೋಜನೆ : ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಆಂಧ್ರ ಸಿಎಂ ಆಕ್ಷೇಪ

ಹೈದರಾಬಾದ್: ಆಲಮಟ್ಟಿ ಕೃಷ್ಣಾ ಮೇಲ್ದಂಡೆಯ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕರ್ನಾಟಕದ ಕ್ರಮಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕವು ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಿದರೆ, ಆಂಧ್ರಪ್ರದೇಶದಲ್ಲಿ ನೀರಿನ ಲಭ್ಯತೆಯ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು  ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಜೊತೆ ನಡೆದ ಸಭೆಯಲ್ಲಿ, ಚಂದ್ರಬಾಬು ನಾಯ್ಡು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ದಲಿತರ ಮೇಲೆ ದೌರ್ಜನ್ಯವೆಸಗಿದವರ ವಿರುದ್ದ ಕ್ರಮ: ಪ್ರತಿಭಟನೆ

ಅಂತರ ರಾಜ್ಯ ನೀರಿನ ಸಮಸ್ಯೆಗಳ ಕುರಿತು ಗಮನಸೆಳೆದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ-ಒಡಿಶಾ ವಂಶಧಾರ ನದಿ ನೀರಿನ ವಿವಾದವನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಒತ್ತಾಯಿಸಿದರು. ವಂಶಧಾರ ಜಲ ವಿವಾದದ ಕುರಿತು ನ್ಯಾಯಮಂಡಳಿಯ ಅಂತಿಮ ವರದಿಯನ್ನು ವಿಳಂಬ ಮಾಡದೆ ಗೆಜೆಟ್‌ನಲ್ಲಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಉಭಯ ರಾಜ್ಯಗಳ ನಡುವೆ ನದಿ ನೀರಿನ ಸಮಾನ ಹಂಚಿಕೆ ಮಾಡುವ ಕುರಿತು ಜಲ ವಿವಾದ ನ್ಯಾಯಮಂಡಳಿಯು ತಕ್ಷಣ ಸಂಧಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಜೊತೆಗೆ ಗೋದಾವರಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ನಡೆಯುತ್ತಿರುವ ವಿವಾದದ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.

ಕೇಂದ್ರ ನೀರಾವರಿ ಸಚಿವರ ಜೊತೆಗಿನ ಸಭೆಯಲ್ಲಿ ಆಂಧ್ರಪ್ರದೇಶಕ್ಕೆ ಸಂಬಂಧಿಸಿದಂತೆ ಅನೇಕ ನೀರಾವರಿ ಮತ್ತು ಜಲ ಭದ್ರತಾ ಯೋಜನೆಗಳಿಗೆ ಅನುಮೋದನೆ ಹಾಗೂ ಆರ್ಥಿಕ ಸಹಾಯ ನೀಡುವಂತೆ ಒತ್ತಾಯಿಸಿದ್ದಾರೆ.

ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡಲು, ರೈತರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಆಂಧ್ರಪ್ರದೇಶಕ್ಕೆ ಕುಡಿಯುವ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಗಳು ಅತ್ಯಗತ್ಯ ಎಂದು ನಾಯ್ಡು ಒತ್ತಿ ಹೇಳಿದರು.

ಜೊತೆಗೆ, ಪೋಲಾವರಂ ಯೋಜನೆಯ ಮೇಲೆ ವಿಧಿಸಿರುವ ನಿಲುಗಡೆ ಆದೇಶವು ಯೋಜನೆಯ ಸುಗಮ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿದೆ ಹಾಗಾಗಿ ಆದೇಶವನ್ನು ಶಾಶ್ವತವಾಗಿ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸಿದರು.

ಇದನ್ನೂ ನೋಡಿ : “ವಿಕಸಿತ ಭಾರತ ಯಾರಿಗೆ? ಬ್ಯಾಂಕಿಂಗ್–ವಿಮಾ ವಲಯದಲ್ಲಿ ಜನಸಾಮಾನ್ಯರ ಹಿತ ಕಣ್ಮರೆಯೇ?” Janashakthi Media

Donate Janashakthi Media