ಅನೌಪಚಾರಿಕ ವಲಯ ಕಿರಿದಾಗುತ್ತಿದೆ ಎಂಬುದು ಕ್ರೂರ ಕುಚೋದ್ಯ

ಸಂಜಯ್ ರಾಯ್

ಅನೌಪಚಾರಿಕ ಅಥವ ಔಪಚಾರಿಕ ಅರ್ಥವ್ಯವಸ್ಥೆ ಎಂದರೇನು? ಕೆಳಮಟ್ಟದ ಉತ್ಪಾದಕತೆ ಮತ್ತು ಕೆಳಮಟ್ಟದ ಕೂಲಿ ಇರುವ ಕೃಷಿಯೇತರ ಉತ್ಪಾದನಾ ವಿಭಾಗದಲ್ಲಿ ಸಂಬಳ ಪಡೆಯುವ ಅಥವ ಪಡೆಯದ ಅಥವ ಸ್ವಉದ್ಯೋಗದ ಹೇಗೋ ಬದುಕುಳಿಯುವ ಮಟ್ಟದ ಉದ್ಯೋಗ ಪರಿಸ್ಥಿತಿ ಮುಂದುವರಿಯುತ್ತಿರುವುದು ಇತ್ತೀಚಿನ ಬಂಡವಾಳಶಾಹಿಯ ಸಾಮಾನ್ಯ ಲಕ್ಷಣವಾಗಿದೆ. ಏಕೆಂದರೆ ಅದೀಗ ವಿಪರೀತ ತಾರತಮ್ಯ ಇರುವ ಆದಾಯ ಹಂಚಿಕೆಯನ್ನೇ ಹೆಚ್ಚಾಗಿ ಅವಲಂಬಿಸಿದೆ. ಇದನ್ನು ಗುರುತಿಸಿರುವ ಐಎಲ್‌ಒ, ಅಂತರ‍್ರಾಷ್ಟ್ರೀಯವಾಗಿ, ಇದರಲ್ಲಿ ಕೆಡುಕೇನೂ ಇಲ್ಲ ಎಂದು ಕಾಣುವಂತೆ ಮಾಡಲು ಈ “ಔಪಚಾರಿಕ” ಮತ್ತು “ಅನೌಪಚಾರಿಕ” ದ್ವಂದ್ವವನ್ನು ಪ್ರೋತ್ಸಾಹಿಸಿದೆ, ಆದರೆ ಈ ಔಪಚಾರಿಕ ಎಂಬ ಕಲ್ಪನೆಯು ಉದ್ಯೋಗದ ಸಂಖ್ಯೆಗಷ್ಟೇ ಸೀಮಿತವಾಗಿಲ್ಲ; ಅದನ್ನೂ ಮೀರಿ ಅದು ವಿಸ್ತರಿಸಿದೆ. ವಾಸ್ತವವಾಗಿ ಪ್ರಸಕ್ತ ಬಂಡವಾಳಶಾಹೀ ಅಭಿವೃದ್ಧಿಯ ಘಟ್ಟವು ಸಾರಭೂತವಾಗಿ ಅನೌಪಚಾರಿಕತೆಯ ಮೇಲೆಯೇ ಅವಲಂಬಿತವಾಗಿರುತ್ತದೆ; ಆದರೆ ಔಪಚಾರಿಕ ಉದ್ಯೋಗದ ಕಲ್ಪನೆಯನ್ನು ಮತ್ತು ಸಂಬಂಧಿತ ಹಕ್ಕುಗಳನ್ನು ದುರ್ಬಲಗೊಳಿಸುವ ಮೂಲಕ ಅದನ್ನು ಮರೆಮಾಚುತ್ತದೆ.

ಭಾರತದಲ್ಲಿ ಅನೌಪಚಾರಿಕ ವಲಯ ಎಂಬುದರ ಪ್ರಮಾಣ ಇಳಿದಿದೆ ಎಂಬ ವಿಲಕ್ಷಣ ವಾದವನ್ನು ಇತ್ತೀಚೆಗೆ ನೀತಿನಿರೂಪಕರ ವಲಯದ ಕೆಲವು ಗುಂಪುಗಳು ಮಾಡುತ್ತಿವೆ; ಉತ್ಪಾದನೆ ಹಾಗೂ ಉದ್ಯೋಗದಲ್ಲಿ ಅನೌಪಚಾರಿಕ ವಲಯದ ಪಾಲು ಕಡಿಮೆಯಾಗುತ್ತಿರುವುದು ಸಂಭ್ರಮಿಸಬೇಕಾದ ಸಾಧನೆ ಎಂಬುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳುತ್ತಿವೆ. ಕೋವಿಡ್-19ರ ಅವಧಿಯಲ್ಲಿ ಆರ್ಥಿಕತೆಯು ಸೊರಗಿತು, ಆ ಅವಧಿಯಲ್ಲಿ ಅಪಾರ ಪ್ರಮಾಣದ ಅನೌಪಚಾರಿಕ ವಲಯದ ಕೆಲಸಗಳು ಹೊರಟುಹೋದವು, ತದನಂತರ ಔಪಚಾರಿಕ ವಲಯ ತ್ವರಿತ ಗತಿಯಲ್ಲಿ ಪುನಶ್ಚೇತನಗೊಂಡಿದೆಯಾದರೂ, ಅನೌಪಚಾರಿಕ ವಲಯದ ಚೇತರಿಕೆಯ ಪ್ರಕ್ರಿಯೆ ಬಹಳ ನಿಧಾನವಾದ್ದರಿಂದ ಅದರ ಉತ್ಪಾದನೆಯ ಪಾಲಿನಲ್ಲಿ ಕುಸಿತವಾಗಿದೆ ಎಂಬ ಅಂದಾಜಿನ ಮೇಲೆ ಹೀಗೆ ವಾದ ಮಾಡಲಾಗುತ್ತಿದೆ.

ಇ-ಶ್ರಮ್ ವ್ಯವಸ್ಥೆ ಮತ್ತು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ)ಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಹೆಚ್ಚಾಗುತ್ತಿರುವುದರಿಂದ ಕೂಡ ಹೆಚ್ಚು ಕಾರ್ಮಿಕರು ಔಪಚಾರಿಕ ವಲಯದೊಳಕ್ಕೆ ಬರುತ್ತಿದ್ದಾರೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡನ್ನು ಪಡೆದುಕೊಳ್ಳುತ್ತಿರುವುದರಿಂದಾಗಿ ಸರ್ಕಾರಿ ದಾಖಲೆಗಳಲ್ಲಿ ರೈತರ ಹೆಸರು ನೋಂದಾವಣೆಯಾಗುತ್ತಿದೆ ಎಂಬುದನ್ನೂ ಇದನ್ನು ಸಾಬೀತು ಮಾಡಲು ತೋರಿಸಲಾಗುತ್ತಿದೆ.

ಇದನ್ನು ಓದಿ: ನವ-ಉದಾರವಾದಕ್ಕೇ ಮುಳುವಾಗುತ್ತಿರುವ ಅದರ ಆಳ್ವಿಕೆಯೊಳಗಿನ ಆರ್ಥಿಕ ನಿರ್ಬಂಧಗಳು

ನಿವೃತ್ತಿ ವೇತನ ಅಥವಾ ಸಾಲದ ಸೌಲಭ್ಯಗಳಂತಹ ಸಾಮಾಜಿಕ ಭದ್ರತೆಯ ಯಾವುದಾದರೂ ಸವಲತ್ತುಗಳು ದೊರೆಯುವುದು, ಅದು ಎಷ್ಟೇ ಅಲ್ಪವಾಗಿದ್ದರೂ ಕೂಡ, ಮತ್ತು 60 ವರ್ಷಗಳ ನಂತರವೇ ಸಿಗುವಂತದ್ದಾದರೂ ಕೂಡ ನಿಸ್ಸಂದೇಹವಾಗಿಯೂ ಸ್ವಾಗತಾರ್ಹವೇ.; ಏಕೆಂದರೆ ಯಾವುದೋ ಒಂದು ರೀತಿಯಲ್ಲಿ ಹಣ ಪಾವತಿಯಾಗುತ್ತದೆ ಎಂಬ ಭರವಸೆಯೂ ಕೂಡ, ಇನ್ನೂ ಹೆಚ್ಚಿನ ದೃಢವಾದ ಗಳಿಕೆಗಾಗಿ ಹೋರಾಟ ಮಾಡಲು ಒಂದು ಅವಕಾಶವನ್ನು ಕಲ್ಪಿಸುತ್ತದೆ.

ಆದರೆ, ಇಪಿಎಫ್‌ಒ ನೋಂದಾವಣೆ ಸಂಖ್ಯೆಯು ಹಾಗಲ್ಲ. ಅದು ಪ್ರವೇಶವನ್ನು ಮಾತ್ರ ದಾಖಲಿಸುತ್ತದೆ ಮತ್ತು ಹೊರಹೋಗುವುದನ್ನು (ನಿರ್ಗಮನವನ್ನು) ದಾಖಲಿಸುವುದಿಲ್ಲ; ಬಹಳ ಸಂದರ್ಭದಲ್ಲಿ ನಿಜವಾಗಿಯೂ ಕೆಲಸ ಬಿಟ್ಟ ಬಹಳ ದಿನಗಳ ನಂತರ ದಾವೆಗಳ ಇತ್ಯರ್ಥವಾಗುತ್ತದೆ, ಆದಕಾರಣ ಕೇವಲ ಹೊಸ ಪ್ರವೇಶಗಳ ಅಂಕಿ-ಅಂಶಗಳಿಂದ ಮಾತ್ರವೇ ಉದ್ಯೋಗಾವಕಾಶಗಳ ನಿರ್ಮಾಣವನ್ನು ಅಂದಾಜು ಮಾಡಲು ಸಾಧ್ಯವಿಲ್ಲ.

ಕಳೆದ ನಾಲ್ಕು ದಶಕಗಳಲ್ಲಿ ಕೃಷಿಯಿಂದ ಕೃಷಿಯೇತರ ಉದ್ಯೋಗಗಳಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಪಲ್ಲಟವಾಗಿರುವುದು ನಿಜ ಮತ್ತು ಕೃಷಿ ಕ್ಷೇತ್ರವು ಅನೌಪಚಾರಿಕ ಉದ್ಯೋಗಗಳ ಅತಿ ದೊಡ್ಡ ಭಂಡಾರವಾಗಿರುವ ಕಾರಣ, ಅನೌಪಚಾರಿಕ ವರ್ತುಲದೊಳಗಡೆಯ ಅನೌಪಚಾರಿಕ ಶ್ರಮಿಕರ ಪಾಲಿನಲ್ಲಿ ತುಸು ಇಳಿಕೆಯಾಗಿದೆ. ಆದರೆ ಮತ್ತೊಂದೆಡೆ, ಔಪಚಾರಿಕ ವಲಯದೊಳಗಡೆ ಅನೌಪಚಾರಿಕ ಶ್ರಮಿಕರ ಪಾಲು ಏರಿದೆ. ಆದ್ದರಿಂದ ಈಗಲೂ ಎರಡನ್ನೂ ಸೇರಿಸಿದರೆ, ಒಟ್ಟು ಅರ್ಥವ್ಯವಸ್ಥೆಯಲ್ಲಿ ಅನೌಪಚಾರಿಕ ಶ್ರಮದ ಪ್ರಮಾಣ 90%ಕ್ಕಿಂತಲೂ ಹೆಚ್ಚಿದೆ.

ಅನೌಪಚಾರಿಕ ವಲಯ ಅಂದರೇನು?

ಅನೌಪಚಾರಿಕ ವಲಯ ಕುರಿತು ಒಂದು ಸ್ಪಷ್ಟ ನಿರೂಪಣೆ ಇಲ್ಲ ಮತ್ತು ಬಹುಮಟ್ಟಿಗೆ ಅದನ್ನು ಉಳಿದುಹೋಗಿರುವ ವಲಯ ಎಂದು ಪರಿಗಣಿಸಲಾಗುತ್ತದೆ. ‘ಔಪಚಾರಿಕ” ಎಂದರೇನು ಎಂಬ ಕಲ್ಪನೆಯ ಆಧಾರದಲ್ಲಷ್ಟೇ ಅದನ್ನು ನಿರೂಪಿಸಲಾಗುತ್ತದೆ. ಇದನ್ನು ಬಹುಮಟ್ಟಿಗೆ ಅಭಿವೃದ್ಧಿಶೀಲ ದೇಶಗಳ ಸಂದರ್ಭದಲ್ಲಿ ಚರ್ಚಿಸಲಾಗುತ್ತದೆ; ಅಭಿವೃದ್ಧಿಶೀಲ ದೇಶಗಳಲ್ಲಿ ಹೇಗೋ ಬದುಕುಳಿಯಲು ಮಾಡಬೇಕಾದ ಕೃಷಿ ಮತ್ತು ಕೃಷಿಯೇತರ ವಲಯಗಳಲ್ಲಿ ಅಲ್ಪ ಉತ್ಪಾದನೆಯಲ್ಲಿ ಸಿಲುಕಿಕೊಂಡಿರುವವರ ಪ್ರಮಾಣ ಅಪಾರವಾಗಿರುತ್ತದೆ. ಕೆಳಮಟ್ಟದ ಉತ್ಪಾದಕತೆ, ಕೆಳಮಟ್ಟದ ತಂತ್ರಜ್ಞಾನ, ಬಹುಪಾಲು ಸ್ವಂತ ಶ್ರಮವನ್ನೇ ಅವಲಂಬಿಸಿರುವುದು ಮತ್ತು ಔಪಚಾರಿಕ ಸಾಲ ಸೌಲಭ್ಯಗಳ ಅವಕಾಶವಿಲ್ಲದಿರುವುದು-ಇವು ಅನೌಪಚಾರಿಕ ವಲಯದ ಲಕ್ಷಣಗಳು. ಅನೌಪಚಾರಿಕತೆಯ ಕಲ್ಪನೆಯು ವಿಕಾಸವಾದ ರೀತಿಯಲ್ಲಿ ಅದನ್ನು ಶ್ರಮದ ಮತ್ತು ಬಂಡವಾಳದ ಕೆಲವು ಗುಣಲಕ್ಷಣಗಳನ್ನು ಹೊಂದಿರುವ ಉತ್ಪಾದನಾ ವ್ಯವಸ್ಥೆ ಎನ್ನಬಹುದು. ಆದರೆ ಅಧಿಕೃತವಾಗಿ ಅನೌಪಚಾರಿಕ ವಲಯ ಎನ್ನುವಾಗ ಅನೌಪಚಾರಿಕ ಉದ್ದಿಮೆ ಬೇರೆ ಮತ್ತು ಅನೌಪಚಾರಿಕ ಶ್ರಮ ಬೇರೆ ಎಂದು ಬಗೆಯಲಾಗುತ್ತಿದೆ..

ವಿದ್ಯುತ್ತನ್ನು ಬಳಸುವ ಮತ್ತು ಹತ್ತಕ್ಕಿಂತಲೂ ಕಡಿಮೆ ದುಡಿಮೆಗಾರರನ್ನು ದುಡಿಸಿಕೊಳ್ಳುವ ಅಥವಾ ವಿದ್ಯುತ್ತನ್ನು ಬಳಸದೆ ಇಪ್ಪತ್ತಕ್ಕಿಂತಲೂ ಕಡಿಮೆ ದುಡಿಮೆಗಾರರನ್ನು ದುಡಿಸಿಕೊಳ್ಳುವ ಒಂದು ಉದ್ದಿಮೆಯನ್ನು ಅನೌಪಚಾರಿಕ ಉದ್ದಿಮೆ ಎಂದು ಪರಿಗಣಿಸಲಾಗುತ್ತದೆ. ಇನ್ನೊಂದೆಡೆಯಲ್ಲಿ, ಐಎಲ್‌ಒ(ಅಂತರ‍್ರಾಷ್ಟ್ರೀಯ ಶ್ರಮ ಸಂಘಟನೆ)ದ ನಿರೂಪಣೆಯ ಪ್ರಕಾರ, ಯಾವುದಾದರೂ ಒಂದು ಸಾಮಾಜಿಕ ಭದ್ರತೆಯ ಸೌಲಭ್ಯವನ್ನು ಹೊಂದಿರುವ ದುಡಿಮೆಗಾರನನ್ನು ಔಪಚಾರಿಕ ಕಾರ್ಮಿಕ ಎಂದು ಪರಿಗಣಿಸಬೇಕು. ಆದ್ದರಿಂದ ಈ ನಿರೂಪಣೆಗಳಿಂದ ಅಂತಿಮವಾಗಿ ಸಿಗುವುದು ಔಪಚಾರಿಕ ಹಾಗೂ ಅನೌಪಚಾರಿಕ ಉದ್ದಿಮೆಗಳು ಮತ್ತು ಔಪಚಾರಿಕ ಹಾಗೂ ಅನೌಪಚಾರಿಕ ದುಡಿಮೆಗಾರರು ಎಂಬುದು ಪರಸ್ಪರ ಆವರಿಸಿಕೊಂಡ ಒಂದು ಕೋಶವಷ್ಟೇ. ಅಂದರೆ ಅನೌಪಚಾರಿಕ ಉದ್ದಿಮೆಯಲ್ಲಿ ಔಪಚಾರಿಕ ದುಡಿಮೆಗಾರರು ಇರಬಹುದು, ಔಪಚಾರಿಕ ಉದ್ದಿಮೆಯಲ್ಲಿ ಅನೌಪಚಾರಿಕ ದುಡಿಮೆಗಾರರೂ ಇರಬಹುದು.

ಇದನ್ನು ಓದಿ: ಅಬಕಾರಿ ಸುಂಕಗಳನ್ನು ಕಡಿತ ಮಾಡಿ-ಹಣದುಬ್ಬರದಿಂದ ಪಾರು ಮಾಡಿ

ಸರ್ಕಾರದ ಇತ್ತೀಚಿನ ‘ನಿಯತಕಾಲಿಕ ಶ್ರಮಶಕ್ತಿಯ ಸಮೀಕ್ಷೆ’ (ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ-ಪಿಎಲ್‌ಎಫ್‌ಎಸ್) ಯ ಪ್ರಕಾರ, ಕನಿಷ್ಟ ಒಂದು ಸಾಮಾಜಿಕ ಭದ್ರತಾ ಸೌಲಭ್ಯ ಪಡೆಯುವ ದುಡಿಮೆಗಾರರು ಒಟ್ಟು ಶ್ರಮಶಕ್ತಿಯ ಶೇಕಡಾ 9.6 ರಷ್ಟು ಇದ್ದಾರೆ ಮತ್ತು ಒಂದಕ್ಕಿಂತ ಹೆಚ್ಚು ಸಾಮಾಜಿಕ ಭದ್ರತಾ ಸೌಲಭ್ಯ ಪಡೆಯುವ ದುಡಿಮೆಗಾರರು ಒಟ್ಟು ಶ್ರಮಶಕ್ತಿಯ ಕೇವಲ ಶೇಕಡಾ 4.6 ರಷ್ಟು ಮಾತ್ರವೇ ಇದ್ದಾರೆ. ಈ ನಿರೂಪಣೆಗಳ ಇಂತಹ ಸಂಕೀರ್ಣತೆಯಿಂದಾಗಿ, ಅವು ಅಂತಿಮವಾಗಿ, ಅಭಿವೃದ್ಧಿಶೀಲ ದೇಶಗಳ ಅರ್ಥವ್ಯವಸ್ಥೆಯ ಸಂರಚನೆಯಲ್ಲಿ ಇನ್ನೂ ಮುಂದುವರೆಯುತ್ತಿರುವ ದ್ವಂದ್ವತೆಯನ್ನು ಗ್ರಹಿಸಲಾರದ ಹಾಸ್ಯಾಸ್ಪದ ಆಡಳಿತಾತ್ಮಕ ಮಾನದಂಡಗಳಿಗೆ ಎಡೆಮಾಡಿಕೊಡುತ್ತವೆ. ಮಾನದಂಡಗಳು ಕನಿಷ್ಟಗೊಂಡಷ್ಟೂ ಹೆಚ್ಚೆಚ್ಚು ದುಡಿಮೆಗಾರರು, ಅವರ ಬದುಕು ಹಾಗೂ ಕೆಲಸದಲ್ಲಿ ಯಾವುದೇ ರೀತಿಯ ಅರ್ಥಪೂರ್ಣ ಬದಲಾವಣೆ ಉಂಟಾಗಿರದಿದ್ದರೂ, ಔಪಚಾರಿಕ ವಲಯದ ವ್ಯಾಪ್ತಿಗೆ ಬರುವಂತಾಗುತ್ತದೆ.

ನಿಜ ಹೇಳಬೇಕೆಂದರೆ, ಈ ಔಪಚಾರಿಕ-ಅನೌಪಚಾರಿಕ ದ್ವಂದ್ವವು ಬಂಡವಾಳದ ಕ್ರೋಢೀಕರಣ ಹಾಗೂ ಕೇಂದ್ರೀಕರಣದ ಸಂಕೀರ್ಣ ಪ್ರಕ್ರಿಯೆಗಳನ್ನು ಬಿಂಬಿಸಲಾರದು. ಈ ಪ್ರಕ್ರಿಯೆಗಳಲ್ಲಿ ಅದೇ ಸಮಯದಲ್ಲಿ ಕೆಳತುದಿಯಲ್ಲಿ ಬಂಡವಾಳ ಹರಿದು ಹಂಚಿಹೋಗುವ ಪ್ರಕ್ರಿಯೆಯೂ ನಡೆಯುತ್ತಿರುತ್ತದೆ. ಆದರೆ, ಇದು ಒಂದೇ ಗೆರೆಯಲ್ಲಿ ಸಾಗುವ ಪ್ರಕ್ರಿಯೆಯಲ್ಲ. ಪೈಪೋಟಿಯು ಕಟ್ಟಕಡೆಯಲ್ಲಿ ಎಲ್ಲಾ ಸಣ್ಣ ಹಾಗೂ ಚಿಲ್ಲರೆ ಉತ್ಪಾದಕರನ್ನು ನಾಶಮಾಡುತ್ತದೆ, ದೊಡ್ಡ ಪ್ರಮಾಣದ ಉತ್ಪಾದಕರಷ್ಟೇ ಉಳಿಯುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಅಭಿವೃದ್ಧಿಶೀಲ ದೇಶಗಳಲ್ಲಿ, ಗಣನೀಯ ಪ್ರಮಾಣದಲ್ಲಿ ಬಂಡವಾಳಶಾಹೀ ಅಭಿವೃದ್ಧಿಯಾದಾಗಲೂ ಕೂಡ ಅನೌಪಚಾರಿಕ ಎಂದು ಕರೆಯಲ್ಪಡುವ ವಲಯದಲ್ಲಿ ದುಡಿಯುತ್ತಿರುವವರ ಸಂಖ್ಯೆಯೇ ಎಲ್ಲಕ್ಕಿಂತ ಹೆಚ್ಚಿದೆ. ಅದಕ್ಕೆ ಬಂಡವಾಳಶಾಹೀ ಅಭಿವೃದ್ಧಿಯ ಸ್ವಭಾವವೇ ಕಾರಣವಾಗಿದೆ; ಈ ಅಭಿವೃದ್ಧಿಯಲ್ಲಿ ಒಂದು ಪ್ರಮಾಣಿತ ಮಟ್ಟದ ಬೇಡಿಕೆಯಿರುವ ದೊಡ್ಡ ಮಾರುಕಟ್ಟೆ ಬೆಳೆದು ಬರಲಿಲ್ಲ, ಬದಲಾಗಿ ಹರಿದು ಹಂಚಿ ಹೋದ ಮಾರುಕಟ್ಟೆಯಷ್ಟೇ ಬೆಳೆದುಬಂತು, ಅದರಿಂದಾಗಿ ದೊಡ್ಡ ಪ್ರಮಾಣದ ಉದ್ದಿಮೆಗಳ ಬೆಳವಣಿಗೆಗೆ ಇರುವ ಅವಕಾಶ ಬಹಳಷ್ಟು ಸೀಮಿತಗೊಂಡಿತು. ಕೆಳಮಟ್ಟದ ಉತ್ಪಾದಕತೆ, ಕೆಳಮಟ್ಟದ ಕೂಲಿ ಇರುವ ಕೃಷಿಯೇತರ ಉತ್ಪಾದನಾ ವಿಭಾಗದಲ್ಲಿ ಸಂಬಳ ಪಡೆಯುವ ಅಥವ ಇಲ್ಲದ ಅಥವ ಸ್ವ-ಉದ್ಯೋಗದ ಹೇಗೋ ಬದುಕುಳಿಯುವ ಮಟ್ಟದ ಉದ್ಯೋಗ ಪರಿಸ್ಥಿತಿ ಮುಂದುವರಿಯುತ್ತಿರುವುದು ಇತ್ತೀಚಿನ ಬಂಡವಾಳಶಾಹಿಯ ಸಾಮಾನ್ಯ ಲಕ್ಷಣವಾಗಿದೆ. ಏಕೆಂದರೆ ಇದೀಗ ವಿಪರೀತ ಓರೆ-ಕೋರೆಗಳಿರುವ ಆದಾಯ ಹಂಚಿಕೆಯನ್ನೇ ಹೆಚ್ಚಾಗಿ ಅವಲಂಬಿಸಿದೆ. ಆದರೆ ಅಂರ‍್ರಾಷ್ಟ್ರೀಯವಾಗಿ, ಇದರಲ್ಲಿ ಕೆಡುಕೇನೂ ಇಲ್ಲ ಎಂದು ಕಾಣುವಂತೆ ಮಾಡಲು ಇಂತಹ ಚಟುವಟಿಕೆಗಳು ನಡೆಯುತ್ತಿವೆ, ಮತ್ತು ಇನ್ನೂ ಮುಂದುವರೆಯುತ್ತವೆ ಎಂಬುದನ್ನು ಗುರುತಿಸಿರುವ ಐಎಲ್‌ಒ ಈ ಔಪಚಾರಿಕ ಮತ್ತು ಅನೌಪಚಾರಿಕ ದ್ವಂದ್ವಕ್ಕೆ, ‘ಔಪಚಾರಿಕ’ ವಲಯವು ಬಹುಸಂಖ್ಯಾತ ಶ್ರಮಶಕ್ತಿಯ ಹೆಚ್ಚಿನ ಪಾಲನ್ನು ಬಳಸಿಕೊಳ್ಳುವಲ್ಲಿ ಅಸಮರ್ಥವಾಗಿರುವಾಗ ಉದ್ಯೋಗದ ಅವಕಾಶಗಳನ್ನು ಒದಗಿಸುತ್ತದೆ ಎಂದು ಉತ್ತೇಜನೆ ನೀಡಿದೆ.

ವಾಸ್ತವ ಸಂಗತಿಯೆಂದರೆ, ತಯಾರಿಕಾ ವಲಯದ ಕಾರ್ಖಾನೆಗಳನ್ನು ಮತ್ತು ಅದೇ ರೀತಿಯಲ್ಲಿ ಸೇವೆಗಳಲ್ಲಿ ಇಂತಹ ಉತ್ಪಾದನಾ ವ್ಯವಸ್ಥೆಗಳನ್ನು ಉಲ್ಲೇಖಿಸುವ ಈ ಔಪಚಾರಿಕ ಎಂಬ ಕಲ್ಪನೆಯು ಉದ್ಯೋಗದ ಸಂಖ್ಯೆಗಷ್ಟೇ ಸೀಮಿತವಾಗಿಲ್ಲ; ಅದನ್ನೂ ಮೀರಿ ಅದು ವಿಸ್ತರಿಸಿದೆ. ಅದು ಕಾರ್ಮಿಕರ ಹಕ್ಕುಗಳು, ಕನಿಷ್ಠ ಕೂಲಿಗಳು, ನಿಗದಿತ ಕೆಲಸದ ನಿಯಮಗಳು, ವಜಾ ಮಾಡುವಾಗಿನ ಪಾವತಿಗಳು, ಮತ್ತು ಸಾಮೂಹಿಕ ಚೌಕಾಶಿ ಹಕ್ಕುಗಳು ಮುಂತಾದವುಗಳನ್ನು ಒಳಗೊಳ್ಳುತ್ತದೆ. ‘ಅನೌಪಚಾರಿಕ’ದ ಕಾರ್ಯಕಾರೀ ನಿರೂಪಣೆಯನ್ನು, ಉದ್ಯೋಗದ ಹಾಗೂ ಉತ್ಪಾದನಾ ಸಂಘಟನೆಯ ಸ್ವರೂಪವನ್ನು ಹೊರತುಪಡಿಸಿ, ಕೇವಲ ಉದ್ಯೋಗದ ಸಂಖ್ಯೆಗೆ ಅಥವಾ ಕೆಲವು ಸಾಮಾಜಿಕ ಸೌಲಭ್ಯಗಳ ಲಭ್ಯತೆಗಳಿಗೆ ಸೀಮಿತಗೊಳಿಸುವುದು, ನಿಜವಾಗಿಯೂ ಬಂಡವಾಳ-ಶ್ರಮದ ಸಂಬಂಧವನ್ನು ಮತ್ತು ಅದರ ಒಡಗೂಡಿ ಬಂದಿರುವ ಚಾರಿತ್ರಿಕವಾಗಿ, ದೀರ್ಘಕಾಲದ ಕಾರ್ಮಿಕ ವರ್ಗದ ಹೋರಾಟಗಳ ಮೂಲಕ ವಿಕಸಿತವಾದ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ.

ಜಾಗತೀಕರಣ ಮತ್ತು ಅನೌಪಚಾರಿಕತೆ

ಬಂಡವಾಳಶಾಹೀ ಶೇಖರಣೆಯ ನವ-ಉದಾರವಾದಿ ಸ್ವರೂಪವು ಅಭಿವೃದ್ಧಿಶೀಲ ದೇಶಗಳಲ್ಲಿ ಸಿಗುವ ಅಗ್ಗದ ಶ್ರಮ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಜಾಗತಿಕ ಬಂಡವಾಳಕ್ಕೆ ಲಭ್ಯಗೊಳಿಸುವ ಒಂದು ಉತ್ಪಾದನಾ ಸಂರಚನೆಯನ್ನು ಒಳಗೊಂಡಿದೆ. ಜಾಗತಿಕ ಶೇಖರಣೆ ಮತ್ತು ದೇಶೀಯ ಬಂಡವಾಳವು ಜಾಗತಿಕ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಕೈಜೋಡಿಸುವ ರಾಜಕೀಯವನ್ನು ಪೈಪೋಟಿಯ ತರ್ಕದ ಮೂಲಕ ಸಹಜ ಎನ್ನುವಂತೆ ಕಾಣಲಾಗುತ್ತದೆ. ನಿಜ ಹೇಳಬೇಕೆಂದರೆ, ದೇಶಗಳು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದರಲ್ಲಿ ಪರಸ್ಪರ ಪೈಪೋಟಿಗಿಳಿದು, ಅಂತಿಮವಾಗಿ ದೊಡ್ಡ ಬಹುರಾಷ್ಟ್ರೀಯ ಗಿರಾಕಿಗಳಿಗೆ ಲಾಭಗಳನ್ನು ಹೆಚಿಸುತ್ತವೆ. ದೇಶೀ ಬಂಡವಾಳವು ಜನರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಬದಲು ಮತ್ತು ಸ್ವಾಯತ್ತವಾಗಿ ಆದ್ಯತೆಗಳನ್ನು ನಿರ್ಧರಿಸಿ ಅzರ ಮೂಲಕ ಔದ್ಯಮಿಕ ಸಾಮರ್ಥ್ಯವನ್ನು ಕಟ್ಟಿ ಬೆಳೆಸುವ ಬದಲು, ದೊಡ್ಡ ಬಂಡವಾಳದೊಂದಿಗೆ ಕಿರಿಯ ಪಾಲುದಾರನಾಗಿ ಶಾಮೀಲಾಗಿ, ಶೇಖರಣೆಯ ಈ ಜಾಗತಿಕ ಸಂಚಿನಿಂದ ಹೊಮ್ಮುವ ಲಾಭದ ಒಂದು ಪಾಲನ್ನು ಪಡೆಯುವುದೇ ಒಳ್ಳೆಯದು ಎಂದು ಭಾವಿಸುತ್ತದೆ.

ಇಂತಹ ಸನ್ನಿವೇಶದಲ್ಲಿ, ಪ್ರಮಾಣಿತ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪಾಲನ್ನು ಪಡೆಯಲು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದೊಂದೇ ದಾರಿಯಾಗಿರುವಾಗ ಮತ್ತು ಉದಾರೀಕರಣಗೊಳಿಸುವ ಆಳ್ವಿಕೆಯಲ್ಲಿ ಉತ್ಪಾದನೆಗೆ ಅಗತ್ಯವಾದ ಲಾಗುವಾಡುಗಳ ಬೆಲೆಗಳ ಮೇಲೆ ಸ್ಥಳೀಯ ಗುತ್ತೇದಾರಿಗಳಿಗೆ ನಿಯಂತ್ರಣವಿಲ್ಲದಿರುವಾಗ, ಜಾಗತಿಕ ಮಾರುಕಟ್ಟೆಯಲ್ಲಿ ‘ಸ್ಪರ್ಧಾತ್ಮಕ’ವಾಗಿ ಉಳಿದುಕೊಳ್ಳಲು ಶ್ರಮಿಕರ ಕೂಲಿ ಮತ್ತು ಹಕ್ಕುಗಳು ದಾಳಿಗೆ ಈಡಾಗಲೇ ಬೇಕಾಗುತ್ತವೆ. ಇಂತಹ ಸಂದರ್ಭದಲ್ಲಿ “ಅನೌಪಚಾರಿಕತೆ”ಯು ಹೆಚ್ಚಿನ ಶೋಷಣೆಗೆ ಪೂರ್ವಷರತ್ತಾಗಿ ಗೋಚರಿಸುತ್ತದೆ; ಕಾರ್ಮಿಕರ ಎಲ್ಲಾ ಹಕ್ಕುಗಳು ಕಾನೂನುಬದ್ದತೆಯನ್ನು ಕಳಕೊಳ್ಳುತ್ತವೆ. ಇದರಿಂದಾಗಿಯೇ ಅನೌಪಚಾರಿಕತೆಯು ಅಥವಾ ಶ್ರಮಿಕನ ಅಪಮೌಲೀಕರಣ ಇವತ್ತಿನ ಬಂಡವಾಳ ಶೇಖರಣೆಗೆ ಆಧಾರಸ್ತಂಭವಾಗುತ್ತದೆ.

ಇದನ್ನು ಓದಿ: ಒಂದು ತಲೆಮಾರನ್ನು ಉಳಿಸಲು ಹೋರಾಟ

ಭಾರತಕ್ಕೆ ಸಂಬಂಧಪಟ್ಟಂತೆ, ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯ ಪ್ರಕಾರ ಕಾರ್ಖಾನೆಗಳ ಸರಾಸರಿ ಉದ್ಯೋಗ ಗಾತ್ರವು ಇಳಿಯುತ್ತ ಬಂದಿದೆ, ಉತ್ಪಾದನೆಯು ಉಪಗುತ್ತಿಗೆ (ಸಬ್‌ ಕಾಂಟ್ರಾಕ್ಟ್) ಮತ್ತು ಹೊರಗುತ್ತಿಗೆ ಮೇಲೆಯೇ ಹೆಚ್ಚೆಚ್ಚು ಅವಲಂಬಿತವಾಗುತ್ತಿದೆ ಮತ್ತು ಭಾರತದಲ್ಲಿನ ಕಾರ್ಖಾನೆಗಳಲ್ಲಿ ದುಡಿಯುತ್ತಿರುವವರಲ್ಲಿ ಮೂರನೇ ಒಂದಕ್ಕಿಂತಲೂ ಹೆಚ್ಚು ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಆದ್ದರಿಂದ, ಬಂಡವಾಳಕ್ಕೆ ಕಾರ್ಮಿಕ ಕಾನೂನುಗಳನ್ನು ತಮಗೆ ಬೇಕಾಗುವಂತೆ ಸಡಿಲಗೊಳಿಸುವಂತಿರುವ, ತಮ್ಮ ಮನಸ್ಸಿಗೆ ಬಂದಂತೆ ಕಾರ್ಮಿಕರನ್ನು ಶೋಷಣೆ ಮಾಡುವ ಸ್ವಾತಂತ್ರö್ಯವನ್ನು ಅನುಭವಿಸಬಹುದಾದ, ಆದರೆ ಅದೇ ಸಮಯದಲ್ಲಿ ಶೋಷಣೆ ಹೆಚ್ಚಾದಂತೆಲ್ಲಾ ಸಂಭವನೀಯ ಅತೃಪ್ತಿಯನ್ನು ಶಮನಗೊಳಿಸಲು ಸರ್ಕಾರಿ ಬೊಕ್ಕಸದಿಂದ ಅಲ್ಪ-ಸ್ವಲ್ಪ ಹಣವನ್ನು ಸಾಮಾಜಿಕ ಭದ್ರತಾ ಸೌಲಭ್ಯದ ಹೆಸರಿನಲ್ಲಿ ವರ್ಗಾಯಿಸಬಹುದಾದ ಒಂದು ವ್ಯವಸ್ಥೆ ಬೇಕಾಗುತ್ತದೆ. ಒಂದರ್ಥದಲ್ಲಿ, ಸರ್ಕಾರವು ಶ್ರಮಿಕರನ್ನು ಶೋಷಿಸಲು ಬಂಡವಾಳಗಾರನಿಗೆ ವ್ಯಕ್ತಿಗತವಾಗಿ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ; ಪೈಪೋಟಿಯ ಹೆಸರಿನಲ್ಲಿ ಕಾರ್ಮಿಕರ ಸೇವಾ ನಿಯಮಗಳಿಗೆ ಸಂಬಂಧಪಟ್ಟ ಎಲ್ಲಾ ಕಾನೂನಾತ್ಮಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತದೆ, ಆದರೆ ಅದೇ ಸಮಯದಲ್ಲಿ ವ್ಯವಸ್ಥೆ ಸ್ಪೋಟಗೊಳ್ಳಬಾರದು ಎಂಬ ಇಡೀ ಬಂಡವಾಳಶಾಹಿ ವರ್ಗದ ಸಾಮೂಹಿಕ ಕಾಳಜಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದರಿಂದಾಗಿ, ಪ್ರಸಕ್ತ ಬಂಡವಾಳಶಾಹೀ ಅಭಿವೃದ್ಧಿಯ ಘಟ್ಟವು ಸಾರಭೂತವಾಗಿ ಅನೌಪಚಾರಿಕತೆಯ ಮೇಲೆಯೇ ಅವಲಂಬಿತವಾಗಿರುತ್ತದೆ; ಆದರೆ ಔಪಚಾರಿಕ ಉದ್ಯೋಗದ ಕಲ್ಪನೆಯನ್ನು ಮತ್ತು ಅಂತಹ ಕೆಲಸದ ಗುತ್ತಿಗೆಯೊಂದಿಗೆ ಬರುವ ಸಂಬಂಧಿತ ಹಕ್ಕುಗಳನ್ನು ದುರ್ಬಲಗೊಳಿಸುವ ಮೂಲಕ ಅದನ್ನು ಮರೆಮಾಚುತ್ತದೆ.

ಆದ್ದರಿಂದ, ಬಂಡವಾಳ-ಶ್ರಮದ ಸಂಬಂಧಗಳ ಸ್ವರೂಪದ ಬಗ್ಗೆ ಮಾತಾಡದೆ, ಹಾಗೂ ನಿರೂಪಣೆಗಳ ಮಾಯಾಜಾಲದ ಮೂಲಕ ಶ್ರಮಿಕರ ಹಕ್ಕುಗಳನ್ನು ಕ್ಷುಲ್ಲಕಗೊಳಿಸುವ ಬದಲು, ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು, ನಿರ್ದಿಷ್ಟವಾಗಿ, ಹೊಸ ಉದ್ಯೋಗ ವಲಯಗಳಲ್ಲಿ ಹಕ್ಕುಗಳನ್ನು ಸ್ಥಾಪಿಸುವುದು ಬಹಳ ಮುಖ್ಯವಾಗಬೇಕು ಮತ್ತು ಅದರೊಂದಿಗೇ, ಸಾಮಾಜಿಕ ಭದ್ರತೆಯ ಸಾರಭೂತ ಅಂಶಗಳಿಗಾಗಿ ಮತ್ತು ಆದಾಯ ರಕ್ಷಣೆಗಾಗಿ ಹೋರಾಟವನ್ನೂ ಮಾಡಬೇಕಾಗುತ್ತದೆ; ಅದಕ್ಕೆ ಹಣಕಾಸನ್ನು ಒದಗಿಸಲು ಈಗಿನ ಸಡಿಲವಾದ ಕಾರ್ಮಿಕ ಕಾನೂನುಗಳ ಮೂಲಕ ಕಾರ್ಮಿಕರನ್ನು ಹಿಂಡಿ ಹಿಪ್ಪೆ ಮಾಡಲು ಮುಕ್ತ ಅವಕಾಶ ಪಡೆದಿರುವ ಶ್ರೀಮಂತರಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡಬೇಕು.

ಅನುವಾದ: ಟಿ.ಸುರೇಂದ್ರ ರಾವ್

Donate Janashakthi Media

Leave a Reply

Your email address will not be published. Required fields are marked *