–ನಾ ದಿವಾಕರ
ರಂಗಭೂಮಿಯ ಅಂತಃಸತ್ವ ಇರುವುದು ಸೃಜನಶೀಲತೆಯಲ್ಲಿ. ನಿರಂತರ ಚಲನಶೀಲತೆಯೊಂದಿಗೆ ತೆರೆದುಕೊಳ್ಳುತ್ತಲೇ ಹೋಗುವ ಸಮಾಜವೊಂದರಲ್ಲಿ ಹೊಸತನವನ್ನು ಹುಡುಕುತ್ತಾ, ಹಳತನ್ನು ನೆನಪು ಮಾಡಿಕೊಳ್ಳುತ್ತಾ ವರ್ತಮಾನ-ಭವಿಷ್ಯವನ್ನು ಸಮಾನ ನೆಲೆಯಲ್ಲಿಟ್ಟು ನೋಡುವ ಕಲಾಭಿವ್ಯಕ್ತಿಗೆ ರಂಗಭೂಮಿ ಸದಾ ಮುಕ್ತವಾಗಿರುತ್ತದೆ. ಹಾಗಾಗಿಯೇ ರಂಗಕಲೆ ಎನ್ನುವುದು ಕಲಿಕೆ-ಅರಿವು-ಅಧ್ಯಯನಗಳ ವಿಶಾಲ ಹಂದರದಲ್ಲಿ ಹರಡಿಕೊಳ್ಳುತ್ತಾ ಪ್ರತಿ ಹೆಜ್ಜೆಯಲ್ಲೂ ಹೊಸತನವನ್ನು ಬಯಸುತ್ತದೆ. ಇಲ್ಲಿ ಮೂಡುವ ಸೃಜನಶೀಲತೆಗೆ ಸಾಮಾಜಿಕ ಅರಿವು ಇರುವಷ್ಟೇ ಸಾಂಸ್ಕೃತಿಕ ಗ್ರಹಿಕೆಯೂ ಇರಬೇಕಾಗುತ್ತದೆ. ಹಾಗಾಗಿಯೇ ರಂಗಭೂಮಿ ಒಂದು ನಿರಂತರ ಕಲಿಕೆಯ ದೃಶ್ಯಮಾಧ್ಯಮವಾಗಿ ವಿಶಾಲ ಸಮಾಜದ ಸಾಂಸ್ಕೃತಿಕ ಒಳಹೊರಗುಗಳನ್ನು ಭೇದಿಸುತ್ತಿರುತ್ತದೆ. ರಂಗಪ್ರಯೋಗ ಎನ್ನುವುದು ಈ ನೆಲೆಯಲ್ಲಿ ಮೂಡುವ ಒಂದು ಕಲಾಭಿವ್ಯಕ್ತಿ. ರಂಗಪ್ರಯೋಗ
ಸಮಕಾಲೀನ ಸನ್ನಿವೇಶದಲ್ಲಿ ರಂಗಭೂಮಿಯ ಹರವು ಮತ್ತು ವಿಸ್ತಾರ ಹೆಚ್ಚಾಗಬೇಕಾದ ಅನಿವಾರ್ಯತೆ ಇರುವುದರೊಂದಿಗೇ, ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಯುವ ತಲೆಮಾರು ಇಲ್ಲಿನ ಕಲಾ ಸೌಂದರ್ಯವನ್ನು ಗ್ರಹಿಸುವುದೇ ಅಲ್ಲದೆ, ಅದರೊಳಗಿನ ಸಾಮಾಜಿಕ-ಸಾಂಸ್ಕೃತಿಕ ಅಗತ್ಯತೆಗಳನ್ನೂ ಅರಿತು ತಮ್ಮ ರಂಗಕಲೆಯನ್ನು ವೃದ್ಧಿಸಿಕೊಳ್ಳಬೇಕಿದೆ. ಹಾಗೆಯೇ ಕನ್ನಡ ರಂಗಭೂಮಿಯ ಭವ್ಯ ಇತಿಹಾಸದತ್ತ ಹಿಂತಿರುಗಿ ನೋಡುತ್ತಲೇ ರಂಗಭೂಮಿಗೆ ಅಗತ್ಯವಾದ ನವರಸ ಕಲೆಗಳನ್ನು ಆವಾಹನೆ ಮಾಡಿಕೊಳ್ಳಬೇಕಿದೆ. ಈ ರಂಗ ಪಯಣದಲ್ಲಿ ಅಭಿನಯ ಕಲೆಯನ್ನು ಮತ್ತಷ್ಟು ಮೊನಚುಗೊಳಿಸಲು ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಬೇಕಾಗುತ್ತದೆ. ತನ್ಮೂಲಕ ಕನ್ನಡ ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿ ಭವಿಷ್ಯದ ತಲೆಮಾರಿಗೆ ಮುಟ್ಟಿಸಲು ಸಾಧ್ಯವಾಗುತ್ತದೆ.
ಅಪೂರ್ವ ರಂಗ ಪ್ರಯೋಗದತ್ತ
ಆಗ ತಾನೇ ತಮ್ಮ ರಂಗಭೂಮಿ ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿ ತಂಡವೊಂಧು ಈ ರಂಗನಿಷ್ಠೆ ಮತ್ತು ಕಲಾಶ್ರದ್ಧೆಯೊಂದಿಗೆ ಸಮಕಾಲೀನ ರಂಗಭೂಮಿಯೊಡನೆ ಮುಖಾಮುಖಿಯಾದಾಗ ಅಲ್ಲಿ ತೊಡಗಬೇಕಾದ ಪ್ರಯತ್ನಗಳಿಗೆ ತಮ್ಮನ್ನೇ ಅರ್ಪಿಸಿಕೊಂಡು, ರಂಗಪ್ರಯೋಗವನ್ನು ಸಾರ್ಥಕಗೊಳಿಸುವುದು ಯಾವುದೇ ರಂಗಶಾಲೆಯ ಮತ್ತು ಕಲಾವಿದರ ಹಿರಿಮೆ. ಮಂಡ್ಯ ರಮೇಶ್ ಸಾರಥ್ಯದ ಮೈಸೂರಿನ ನಟನ ರಂಗಶಾಲೆ ಮತ್ತು ಅಲ್ಲಿಂದ ಹೊರಬಂದ ಡಿಪ್ಲೊಮಾ ವಿದ್ಯಾರ್ಥಿಗಳು ತಮ್ಮ ಪದಾರ್ಪಣೆಯ ಪ್ರಯೋಗದಲ್ಲೇ ಅದ್ವಿತೀಯ ಎನ್ನಬಹುದಾದ ಕಲಾಪ್ರತಿಭೆ ತೋರಿರುವುದು ಈ ಸಾರ್ಥಕತೆಯನ್ನು ಬಿಂಬಿಸುತ್ತದೆ. ಇಂತಹ ಒಂದು ನಾಟಕ ಯುವ ಕಲಾವಿದ ಮೇಘ ಸಮೀರ ನಿರ್ದೇಶನದ “ ಶ್ರೀಮನ್ಮಹೀಶೂರ ರತ್ನ ಸಿಂಹಾಸನ ”, ಕಳೆದ ಭಾನುವಾರ (ಡಿಸೆಂಬರ್ 1 2024) ನಟನ ರಂಗಶಾಲೆಯಲ್ಲಿ ಪ್ರದರ್ಶನಗೊಂಡಿತು. ರಂಗಪ್ರಯೋಗ
ಇದನ್ನೂ ಓದಿ: ಉಡುಪಿ| ಸಮುದ್ರದಲ್ಲಿ ಈಜಾಡಲು ಹೋಗಿ ಮೂವರು ಯುವಕರು ಸಮುದ್ರ ಪಾಲು
ಸಂಸ (ಸಾಮಿ ವೆಂಕಟಾದ್ರಿ ಐಯ್ಯರ್) ಅವರ ನಾಟಕಗಳನ್ನು ಸಮಕಾಲೀನ ಸಂದರ್ಭದಲ್ಲಿ ರಂಗರೂಪಕ್ಕೆ ಇಳಿಸುವುದೇ ಒಂದು ಸವಾಲು ಎನ್ನುವ ಪ್ರತೀತಿ ಇದೆ. ಕಾರಣ ಅವರ ಕಥಾವಸ್ತುಗಳಲ್ಲಿರುವ ಸಂಕೀರ್ಣತೆ, ಪ್ರಚಲಿತ ಸಮಾಜದ ಜಟಿಲತೆಗಳ ವಿಮರ್ಶಾತ್ಮಕ ನಿರೂಪಣೆ ಮತ್ತು ಕಾಲನಿಯಮಗಳನ್ನು ಧಿಕ್ಕರಿಸುವಂತಹ ಅಂತರ್‌ಭಾವ. ಆದರೂ ಯುವ ರಂಗಕರ್ಮಿ ಮೇಘ ಸಮೀರ ಸಂಸರ ಎರಡು ನಾಟಕಗಳನ್ನು, ʼ ವಿಗಡ ವಿಕ್ರಮರಾಯ ʼ ಮತ್ತು ʼ ಮಂತ್ರಶಕ್ತಿ ʼ ನಾಟಕಗಳನ್ನು ಸಂಕಲಿಸಿ, ಮೂರು ಗಂಟೆಗಳ ನಾಟಕವೊಂದನ್ನು ಹೊಸೆದಿರುವುದು ದಿಟ್ಟ ಪ್ರಯತ್ನವೆಂದೇ ಹೇಳಬಹುದು. ಸೃಜನಶೀಲತೆ ಇದ್ದೆಡೆ ಎಂತಹ ಕ್ಲಿಷ್ಟ ವಸ್ತುವನ್ನೂ ಸರಳೀಕರಿಸಿ ಪ್ರೇಕ್ಷಕರ ಮುಂದಿಡಬಹುದು ಎಂಬ ರಂಗಭೂಮಿಯ ಸಾಮಾನ್ಯ ತಿಳುವಳಿಕೆಯನ್ನು ಮೇಘ ಸಮೀರ ನಿರ್ದೇಶನದ “ ಶ್ರೀಮನ್ಮಹೀಶೂರ ರತ್ನ ಸಿಂಹಾಸನ ” ಸಾಬೀತುಪಡಿಸುತ್ತದೆ. ರಂಗಪ್ರಯೋಗ
ರಾಜಪ್ರಭುತ್ವದ ಕಥಾ ಹಂದರ
ಇಮ್ಮಡಿ ರಾಜ ಒಡೆಯರ ಆಳ್ವಿಕೆಯಲ್ಲಿ ದಳವಾಯಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಕ್ರಮರಾಯ ರಾಜ್ಯಾಡಳಿತವನ್ನಷ್ಟೇ ಅಲ್ಲದೆ ರಾಜ್ಯದ ಬೊಕ್ಕಸ ಮತ್ತು ನಿಯಂತ್ರಣವನ್ನೂ ತನ್ನದೇ ಆದ ತಂತ್ರಗಾರಿಕೆಗಳ ಮೂಲಕ ಕೈವಶ ಮಾಡಿಕೊಂಡಿರುತ್ತಾನೆ. ಆದರೆ ವಿಕ್ರಮರಾಯನ ಅಕ್ರಮಗಳು ಅರಸರ ಅಂಗಳದಲ್ಲಿ ಬಯಲಾದಾಗ ತನ್ನನ್ನು ಉಳಿಸಿಕೊಳ್ಳುವ ಸಲುವಾಗಿ , ವಿಲಾಸಿ ಬದುಕಿನಲ್ಲಿ ತನ್ನ ಜವಾಬ್ದಾರಿಯನ್ನೂ ಮರೆತಂತಿದ್ದ ರಾಜ ಒಡೆಯನನ್ನು ಕೊಲ್ಲಿಸಿ, ತೆರಕಣಾಂಬಿಯಲ್ಲಿದ್ದ ರಣಧೀರ ಕಂಠೀರವನನ್ನು ಕರೆಸಿಕೊಳ್ಳುತ್ತಾನೆ. ಆದರೆ ಪಟ್ಟಾಭಿಷಕ್ತನಾಗಬೇಕಿದ್ದ ರಣಧೀರ ಕಂಠೀರವನನ್ನು ಸಾಧಾರಣ ಬಂಧಿಯಂತೆ ನಡೆಸಿಕೊಂಡಾಗ ಎಚ್ಚೆತ್ತುಕೊಳ್ಳುವ ಪ್ರಜೆಗಳು, ರಣಧೀರನ ಗೆಳೆಯ ನಿರೀಶನ ತಂತ್ರಗಾರಿಕೆಯ ಮೂಲಕ, ವಿಕ್ರಮರಾಯನ ಉಪಾಯಗಳನ್ನು ವಿಫಲಗೊಳಿಸುತ್ತಾರೆ. ಅರಮನೆಯ ಊಳಿಗದವರು ವಿಕ್ರಮರಾಯನನ್ನು ಕೊಂದು ರಣಧೀರನಿಗೆ ತಂದೊಪ್ಪಿಸಿದಾಗ, ರಾಜ್ಯದಲ್ಲುಂಟಾಗುವ ಕ್ಷೋಭೆಯನ್ನು ತಹಬದಿಗೆ ತಂದು ರಣಧೀರ ತನ್ನ ರಾಜ್ಯಾಧಿಕಾರವನ್ನು ಮರಳಿ ಪಡೆಯುತ್ತಾನೆ. ಪಟ್ಟಾಭಿಷೇಕವನ್ನು ಸೂಚಕವಾಗಿ ಬಿಂಬಿಸುವ ಮೂಲಕ ಮೊದಲ ಭಾಗ ಕೊನೆಯಾಗುತ್ತದೆ.
ಎರಡನೆಯ ಮುಂದುವರೆದ ಭಾಗದಲ್ಲಿ ರಣಧೀರ ಕಂಠೀರವನ ಹಲವು ವರ್ಷಗಳ ಆಳ್ವಿಕೆಯ ನಂತರ ಎದುರಾಗುವ ಮತ್ತೊಂದು ರಾಜತಾಂತ್ರಿಕ ಸಂದರ್ಭವನ್ನು ʼ ಮಂತ್ರಶಕ್ತಿ ʼ ಬಿಂಬಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಅಧಿರಾಜ ಶ್ರೀರಂಗರಾಯ ಮಹಿಶೂರನ್ನು ಮರಳಿ ತನ್ನ ಸಾಮಂತ ಸಂಸ್ಥಾನವನ್ನಾಗಿಸುವ ಉದ್ದೇಶದೊಂದಿಗೆ ಬರುತ್ತಿರುವುದು ರಾಜ್ಯದಲ್ಲಿ ಮತ್ತೊಮ್ಮೆ ಕ್ಷೋಭೆ ಉಂಟುಮಾಡುತ್ತದೆ. ಮೈಸೂರು ಪ್ರಾಂತ್ಯವನ್ನು ಮತ್ತು ರತ್ನಸಿಂಹಾಸನವನ್ನು ವಿಜಯನಗರದ ಅರಸರಿಗೆ ಒಪ್ಪಿಸಲು ಪೂರಕವಾದ ಹಿಂದಿನ ಶಾಸನ, ಕಡತ, ದಾಖಲೆಗಳನ್ನು ಹುಡುಕಾಡುವಲ್ಲಿ ಹಳೆಪಯಿಕದವರು ನಿರತರಾಗಿರುತ್ತಾರೆ. ಮತ್ತೊಂದೆಡೆ ತಮ್ಮ ರಾಜ ರಣಧೀರನು ಧರ್ಮನಿಷ್ಠೆಗೆ ಕಟ್ಟುಬಿದ್ದು ಸಂಸ್ಥಾನವನ್ನು ಶ್ರೀರಂಗ ರಾಯನಿಗೆ ಒಪ್ಪಿಸಿಬಿಟ್ಟಾನು ಎಂಬ ಆತಂಕದೊಂದಿಗೆ ಅರಮನೆಯಲ್ಲಿದ್ದ ಹಿಂದಿನ ಪೀಳಿಗೆಯವರ ಸದಸ್ಯರಲ್ಲೊಬ್ಬನಾದ ಗುಂಡಾ ಜೋಯಿಸ , ಇದನ್ನು ತಪ್ಪಿಸುವ ಸಲುವಾಗಿಯೇ ಅರಮನೆಯೊಳಗೇ ಇದ್ದ ರಣಧೀರನ ವಿರೋಧಿಗಳನ್ನು ಒಟ್ಟುಗೂಡಿಸುವ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ. ರಂಗಪ್ರಯೋಗ
ಇದೇ ವೇಳೆ ಮಧುರೆ ಸಂಸ್ಥಾನದ ಪ್ರತಿನಿಧಿ ಕರಿವೀಯನ್, ಶ್ರೀರಂಗರಾಯ ಮತ್ತು ರಣಧೀರ ಕಂಠೀರವ ಇಬ್ಬರೂ ಒಂದಾಗಿ ತಮ್ಮ ಸಂಸ್ಥಾನಕ್ಕೆ ಕುತ್ತು ತರಬಹುದು ಎಂದು ಯೋಚಿಸಿ, ರಣಧೀರನನ್ನು ಹೊಂಚುಹಾಕಿ ಕೊಲ್ಲುವ ಉಪಾಯಗಳನ್ನು ಮಾಡತೊಡಗುತ್ತಾನೆ. ಈ ವಿರೋಧಿ ಪಡೆಗೆ ಮೊದಲು ರಣಧೀರನಿಗೆ ನೆರವಾದ ಚೆನ್ನ ರಂಗ ಎಂಬ ಊಳಿಗದವರೂ , ದಳವಾಯಿ ನಂಜರಾಜಯ್ಯನೂ ಸೇರಿಕೊಳ್ಳುವುದರ ಮೂಲಕ ರಣಧೀರ ಮತ್ತು ಶ್ರೀರಂಗ ರಾಯ ಇಬ್ಬರನ್ನೂ ಕೊಲ್ಲುವ ಸಂಚು ಒಳಗೊಳಗೇ ನಡೆಯುತ್ತಿರುತ್ತದೆ. ಈ ಅಪಾಯಕಾರಿ ಸನ್ನಿವೇಶವನ್ನು ಅರಿತ ಸೂಕ್ಷ್ಮಗ್ರಾಹಿ ಅರಸು ರಣಧೀರ ಕಂಠೀರವ ಯಾವುದೇ ರೀತಿಯ ಬಲಪ್ರಯೋಗ ಮಾಡದೆ, ಹಿಂಸಾತ್ಮಕ ಮಾರ್ಗ ಅನುಸರಿಸದೆ ತನ್ನ ರಾಜ ತಂತ್ರಗಳ ಮೂಲಕವೇ ಎಲ್ಲರನ್ನೂ ಮಣಿಸಿ, ಸಂಸ್ಥಾನವನ್ನು ಶ್ರೀರಂಗ ರಾಯನಿಗೂ ಬಿಟ್ಟುಕೊಡದೆ, ಮಹಿಷೂರು ಮತ್ತು ರತ್ನಸಿಂಹಾಸನವನ್ನು ಉಳಿಸಿಕೊಳ್ಳುತ್ತಾನೆ. ಸಂಸರು ಈ ರಾಜತಂತ್ರದ ನೈಪುಣ್ಯವನ್ನೇ ಮಂತ್ರಶಕ್ತಿ ಎಂದು ಬಿಂಬಿಸುತ್ತಾರೆ.
ಎರಡೂ ಪ್ರಸಂಗಗಳಲ್ಲಿ ಪ್ರಧಾನವಾಗಿ ಕಾಣುವುದು ರಾಜಪ್ರಭುತ್ವದಲ್ಲಿ ಸಹಜವಾಗಿದ್ದ ಒಳಸಂಚುಗಳು, ಪಿತೂರಿಗಳು, ವಿಶ್ವಾಸಘಾತುಕತನ, ಆತ್ಮದ್ರೋಹ, ಅಧಿಕಾರಿಗಳ ಲೋಭ. ಸಮಕಾಲೀನ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಆಳ್ವಿಕೆಯನ್ನು ಪದಚ್ಯುತಗೊಳಿಸಲು ಇಂತಹುದೇ ತಂತ್ರಗಾರಿಕೆಗಳು ಬಳಕೆಯಾಗುವುದನ್ನು ಗುರುತಿಸಬಹುದು. ಸಂಸರ ನಾಟಕದ ಕಥಾವಸ್ತು ರಾಜಪ್ರಭುತ್ವವನ್ನು ದೈವೀಕರಿಸುವ ಅಥವಾ ವೈಭವೀಕರಿಸುವ ಮನಸ್ಸುಗಳಿಗೆ ಧಕ್ಕೆ ಉಂಟುಮಾಡುವಂತಿದ್ದರೂ, ಈ ಎರಡು ನಾಟಕಗಳನ್ನು ಸಮಕಾಲೀನಗೊಳಿಸಿ ನೋಡಿದಾಗ, ಅವರಲ್ಲಿದ್ದ ಸಾರ್ವಕಾಲಿಕ ಚಿಂತನೆ ಮತ್ತು ವಸ್ತುನಿಷ್ಠ ಬೌದ್ಧಿಕ ಆಲೋಚನೆ ಸ್ಪಷ್ಟವಾಗುತ್ತದೆ. ಹಾಗಾಗಿಯೇ ಮೇಘ ಸಮೀರ ನಿರ್ದೇಶನದ “ ಶ್ರೀಮನ್ಮಹೀಶೂರ ರತ್ನ ಸಿಂಹಾಸನ ” ತನ್ನ ಸಮಕಾಲೀನತೆಯನ್ನು ಉಳಿಸಿಕೊಳ್ಳುತ್ತದೆ. ಸಂಸರು ಗತಿಸಿಯೇ ಎಂಟು ದಶಕಗಳು ಸಂದಿವೆಯಾದರೂ, ಅವರ ನಾಟಕಗಳು ಪ್ರಸ್ತುತ ಎನಿಸುವುದು ಈ ಕಾರಣಕ್ಕಾಗಿ.
ಅಪೂರ್ವ ಕಲಾಭಿವ್ಯಕ್ತಿಯ ಪದಾರ್ಪಣೆ
ಮೂಲದಲ್ಲಿ ಈ ಎರಡೂ ನಾಟಕಗಳು ದೀರ್ಘಾವಧಿಯ ಪ್ರಯೋಗಗಳು. ಚರಿತ್ರೆಯ ಎರಡೂ ಪ್ರಸಂಗಗಳು ಪರಸ್ಪರ ಬೆಸೆಯಬಹುದಾದರೂ, ಒಂದೇ ನಾಟಕದಲ್ಲಿ ಎರಡನ್ನೂ ಜೋಡಿಸಿ, ಮೂರು ಗಂಟೆಗಳ ಸುದೀರ್ಘ ರಂಗ್ರಪಯೋಗ ಮಾಡಿರುವುದು ಯುವ ಕಲಾವಿದ ಮೇಘ ಸಮೀರ ಅವರ ಸಾಹಸವೇ ಸರಿ. ಸಾಹಸ ಎನ್ನುವುದಕ್ಕಿಂತಲೂ ಸಮೀರ ಅವರ ಸೃಜನಶೀಲ ಕಲ್ಪನೆ ಮತ್ತು ರಂಗಪ್ರಜ್ಞೆಯ ಆಳ-ವಿಸ್ತಾರವನ್ನು “ ಶ್ರೀಮನ್ಮಹೀಶೂರ ರತ್ನ ಸಿಂಹಾಸನ ” ಪ್ರಯೋಗದಲ್ಲಿ ಕಾಣಬಹುದು. ಇದನ್ನೂ ದಾಟಿ ನೋಡುವುದಾದರೆ, ಈ ಅಪೂರ್ವ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡಿರುವ 20ಕ್ಕೂ ಹೆಚ್ಚು ಕಲಾವಿದರ ಸಾಧನೆಯನ್ನು ಮೆಚ್ಚಲೇಬೇಕು. ಬಹಿರಂಗವಾಗಿ ಹೇಳದಿದ್ದರೆ, ಇದು ಈ ತಂಡದ ಪ್ರಥಮ ಪ್ರಯೋಗ ಎಂದು ಹೇಳಲು ಸಾಧ್ಯವೇ ಇಲ್ಲದ ಹಾಗೆ ಪ್ರತಿಯೊಬ್ಬರೂ ಅತ್ಯಂತ ತನ್ಮಯತೆ, ತಲ್ಲೀನತೆ ಮತ್ತು ಶ್ರದ್ಧೆಯಿಂದ ತಮ್ಮ ಕಲಾಕೌಶಲವನ್ನು ಪ್ರದರ್ಶಿಸಿರುವುದು ಇಡೀ ನಾಟಕದ ಹೈ ಲೈಟ್ ಎನ್ನಬಹುದು. ರಂಗಪ್ರಯೋಗ
ಪೌರಾಣಿಕ ಅಥವಾ ಐತಿಹಾಸಿಕ ಕಥಾವಸ್ತುಗಳನ್ನು ಅಳವಡಿಸಿಕೊಳ್ಳುವಾಗ ಸಹಜವಾಗಿಯೇ ಆ ಕಾಲಘಟ್ಟದ ಭಾಷೆ-ಪರಿಭಾಷೆ, ಮಾತನಾಡುವ ವೈಖರಿ, ಸಂಭಾಷಣೆಯ ಶೈಲಿ, ಪದಗಳ ಉಚ್ಛಾರಣೆ ಸವಾಲಿನ ಪ್ರಶ್ನೆಗಳಾಗುತ್ತವೆ. ಇವುಗಳನ್ನು ತಪ್ಪಿಲ್ಲದೆ ನಿರ್ವಹಿಸುತ್ತಲೇ, ರಾಜಪ್ರಭುತ್ವದ ಕಾಲಘಟ್ಟದಲ್ಲಿ ಸಾಮಾನ್ಯವಾಗಿ ವರ್ಣಿಸಲಾಗುವ ರಾಜ ನಡಿಗೆಯ ಠೀವಿ, ಹಾವ ಭಾವಗಳು, ಮುಖಭಾವ ಮತ್ತು ಸಂವಹನ-ವರ್ತನೆಯಲ್ಲಿರಬಹುದಾದ ವಿಶಿಷ್ಟತೆ ಇವೆಲ್ಲವನ್ನೂ ನಿಭಾಯಿಸುವುದು ನುರಿತ ಕಲಾವಿದರಿಗೆ ಸವಾಲೆಸೆಯುವ ಒಂದು ಪ್ರಕ್ರಿಯೆ. ಕನ್ನಡದಲ್ಲಿ ಅನೇಕ ಪ್ರಸಿದ್ಧ ಸಿನಿಮಾ ನಟರೇ ಇಲ್ಲಿ ವಿಫಲರಾಗಿರುವುದನ್ನು ಇತ್ತೀಚಿನ ಪೌರಾಣಿಕ ಚಿತ್ರಗಳಲ್ಲೇ ಗುರುತಿಸಬಹುದು. ಆದರೆ ನಟನ ರಂಗಶಾಲೆಯ ವಿದ್ಯಾರ್ಥಿಗಳು ಈ ಮಿತಿಗಳನ್ನು ದಾಟಿ ತಮ್ಮ ಅಭಿನಯ ಸಾಮರ್ಥ್ಯವನ್ನು ಪ್ರದರ್ಶಿಸಿರುವುದು ಪ್ರಶಂಸಾರ್ಹ. ರಂಗಪ್ರಯೋಗ
ಮೇಘ ಸಮೀರ ಅವರ ಬಿಗಿಯಾದ ನಿರೂಪಣೆ, ವಿನ್ಯಾಸ ಮತ್ತು ನಿರ್ದೇಶನವನ್ನು ಸಾರ್ಥಕಗೊಳಿಸುವ ರೀತಿಯಲ್ಲಿ ಎಲ್ಲ ಕಲಾವಿದರೂ ತನ್ಮಯತೆಯಿಂದ ನಟಿಸಿರುವುದು ನಾಟಕದ ಹೆಗ್ಗಳಿಕೆ. ಬಹಳ ಮುಖ್ಯವಾಗಿ ಇಂತಹ ನಾಟಕಗಳಲ್ಲಿ ಸಂಭಾಷಣೆ ಮತ್ತು ಆಂಗಿಕ ಅಭಿನಯ ಹಾಗೂ ಹಾವಭಾವಗಳು ಪ್ರಧಾನವಾಗಿ ಗಮನಿಸಲ್ಪಡುತ್ತವೆ. ಹೀಗೇ ಇರಬೇಕೆಂಬ ನಿಯಮ ಇರಬೇಕಿಲ್ಲವಾದರೂ, ನಮ್ಮ ಸಮಾಜವು ಒಪ್ಪಿಕೊಂಡಿರುವ ಕೆಲವು ಸಂಭಾಷಣಾ ವೈಖರಿಯನ್ನು ಅನುಸರಿಸಿದರೆ ಮಾತ್ರ ಪ್ರೇಕ್ಷಕರ ಮನಮುಟ್ಟುವಂತೆ ತಲುಪಲು ಸಾಧ್ಯ. ಡಾ. ರಾಜ್ ಕುಮಾರ್ ಇದನ್ನು ಅರಿತಿದ್ದರಿಂದಲೇ ಅವರ ಕಲಾನೈಪುಣ್ಯತೆ ಪರಾಕಾಷ್ಠೆ ತಲುಪುತ್ತಿತ್ತು. ಅವರ ನಂತರ ಕನ್ನಡ ಸಿನಿಮಾ ರಂಗದಲ್ಲಿ ಆ ಔನ್ನತ್ಯವನ್ನು ಸಾಧಿಸುವ ನಟರೇ ಇಲ್ಲವಾಗಿರುವುದು ವಾಸ್ತವ. ರಂಗಪ್ರಯೋಗ
ಸಣ್ಣ ಕೊರತೆಗಳ ನಡುವಿನ ಹಿರಿಮೆ
ಆದರೆ ಕನ್ನಡ ರಂಗಭೂಮಿ ಈ ಕೊರತೆಯನ್ನು ನೀಗಿಸಿದೆ. ಇತ್ತೀಚಿನ ಹಲವು ನಾಟಕಗಳಲ್ಲಿ ಇದನ್ನು ಗುರುತಿಸಬಹುದು. ನಟನ ರಂಗಶಾಲೆಯ ವಿದ್ಯಾರ್ಥಿಗಳು ಈ ಸವಾಲನ್ನು ಸಮರ್ಥವಾಗಿಯೇ ಸ್ವೀಕರಿಸಿ ಎಲ್ಲ ಆಯಾಮಗಳಿಂದಲೂ “ ಶ್ರೀಮನ್ಮಹೀಶೂರ ರತ್ನ ಸಿಂಹಾಸನ ” ನಾಟಕವನ್ನು ಸಾರ್ಥಕಗೊಳಿಸಿದ್ದಾರೆ. ಆದರೆ ಯಾವುದೇ ರಂಗತಂಡದ ಪ್ರಥಮ ಪ್ರಯೋಗದಲ್ಲಿ ಸಹಜವಾಗಿ ನುಸುಳಬಹುದಾದ ಕೊರತೆಗಳು ಇಲ್ಲೂ ಸಹ ಇರುವುದನ್ನು ಅಲ್ಲಗಳೆಯಲಾಗದು. ತಲ್ಲೀನತೆ, ತನ್ಮಯತೆಯಿಂದ ಅಭಿನಯಿಸಿರುವ ಕಲಾವಿದರು ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾರಾದರೂ, ಒಂದೆರಡು ದೃಶ್ಯಗಳಲ್ಲಿ ಅಂಗಿಕ ಅಭಿನಯ ಪೇಲವ ಅಥವಾ ಅತಿರೇಕ ಎನಿಸಿಬಿಡುತ್ತದೆ. ವಿಶೇಷವಾಗಿ ಅರಸನ ಪಾತ್ರ ನಿರ್ವಹಿಸುವಾಗ ರಾಜಗಾಂಭೀರ್ಯವನ್ನು ತೋರುವುದು ಅತ್ಯವಶ್ಯವೇ ಆದರೂ, ಮುಖಭಾವದಲ್ಲಿ ಅದನ್ನು ವಿನೂತನ ಶೈಲಿಯಲ್ಲಿ ಬಿಂಬಿಸಬಹುದು. ರಂಗಪ್ರಯೋಗ
ಮುಖಭಾವದಲ್ಲಿ ಸಹಜತೆಯನ್ನು ಕಳೆದುಕೊಂಡು ಶಿಲಾ ಪ್ರತಿಮೆಯಂತೆ ಕಾಣುವ ಒಂದೆರಡು ದೃಶ್ಯಗಳಲ್ಲಿ ಈ ಕೊರತೆ ಕಾಣುತ್ತದೆ.. ಬಹುಶಃ ಮುಂದಿನ ಪ್ರಯತ್ನಗಳಲ್ಲಿ ಕಲಾವಿದರು ಇದನ್ನು ಸರಿಪಡಿಸಿಕೊಳ್ಳಬಹುದು. ಈ ಸಣ್ಣ-ಸಹಜ ಕೊರತೆಗಳ ಹೊರತಾಗಿ ನಾಟಕದಲ್ಲಿ ಕಾಣುವುದು ಎಲ್ಲ ಕಲಾವಿದರ ಸಹಜ ಅಭಿನಯ ಮತ್ತು ಪಾತ್ರ ತನ್ಮಯತೆ. ತಾವು ನಿರ್ವಹಿಸುವ ಪಾತ್ರವನ್ನು ತಾವೇ ಆಗಿಸಿಕೊಂಡು ಪರಕಾಯ ಪ್ರವೇಶ ಮಾಡುವ ಕಲಾಸಿದ್ಧಿ ಸುಲಭಕ್ಕೆ ಬರುವುದಲ್ಲ. ಸತತ ಪರಿಶ್ರಮ , ನಿರಂತರ ತಾಲೀಮು ಮತ್ತು ಶ್ರದ್ಧಾಪೂರ್ವಕ ಪ್ರಯತ್ನಗಳ ಮೂಲಕ ಇದನ್ನು ಸಿದ್ಧಿಸಿಕೊಳ್ಳಲು ಸಾಧ್ಯ. ಕನ್ನಡ ರಂಗಭೂಮಿ ಇಂತಹ ಮೇರು ಕಲಾವಿದರನ್ನು ಇತಿಹಾಸದುದ್ದಕ್ಕೂ ಕಾಣುತ್ತಲೇ ಬಂದಿದೆ. ಈ ತಂಡದ ಯುವ ಕಲಾವಿದರು ಇದೇ ಹಾದಿಯಲ್ಲಿ ಸಾಗುತ್ತಾ ಉನ್ನತಿಯನ್ನು ಪಡೆಯುವ ಭರವಸೆಯನ್ನಂತೂ ಮೂಡಿಸುತ್ತಾರೆ. ರಂಗಪ್ರಯೋಗ
ಇದಕ್ಕೆ ಬೇಕಿರುವುದು ಕಲಾವಿದರಲ್ಲಿ, ವಿಶೇಷವಾಗಿ ರಂಗಭೂಮಿಯಲ್ಲಿ ತೊಡಗಿರುವ ಕಲಾವಿದರಲ್ಲಿ ಕಲಿಕೆಯ ಹಪಹಪಿ ಮತ್ತು ಗ್ರಹಿಕೆಯ ಆಳ. ನಟನ ರಂಗಶಾಲೆ ಈ ಹಾದಿಯಲ್ಲಿ ಸಾಗುವ ಭರವಸೆಯನ್ನು ಮೂಡಿಸಿರುವ ಡಿಪ್ಲೊಮಾ ವಿದ್ಯಾರ್ಥಿಗಳನ್ನು ತಯಾರಿಸಿ, ಕನ್ನಡ ರಂಗಭೂಮಿಗೆ ಧಾರೆ ಎರೆದಿದೆ. ಯುವ ನಿರ್ದೆಶಕ ಮೇಘ ಸಮೀರ ಈ ಪ್ರಯತ್ನಕ್ಕೆ ಪೂರಕವಾದ ಒಂದು ರಂಗಪ್ರಯೋಗವನ್ನು ಕನ್ನಡಿಗರಿಗೆ ಉಣಬಡಿಸುವ ಮೂಲಕ, ಈ ತಂಡದ ಕಲಾವಿದರಿಗೆ ಭವಿಷ್ಯದಲ್ಲಿ ಸವಾಲುಗಳಿಗೆ ಒಡ್ಡಿಕೊಳ್ಳುವ ಆತ್ಮಸ್ಥೈರ್ಯವನ್ನೂ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ. ನಾಟಕದ ಒಂದೆರಡು ದೃಶ್ಯಗಳನ್ನು, ರಣಧೀರನು ಮಹಿಶೂರಿಗೆ ವಾಪಸ್ ಬರುವ ಮುನ್ನ ಬರುವ ಪ್ರಸಂಗಗಳು, ವೇಶ್ಯಾಗೃಹದ ಪ್ರಸಂಗಗಳು ಮತ್ತು ಸಾರ್ವಜನಿಕರ ಮಾತುಗಳನ್ನು ದಾಖಲಿಸುವ ಸುದೀರ್ಘ ಸಂಭಾಷಣೆ-ಚರ್ಚೆಯ ದೃಶ್ಯಗಳನ್ನು ಕೊಂಚ ಮೊಟಕುಗೊಳಿಸಿದರೂ ನಾಟಕದ ಅಂದಕ್ಕೇನೂ ಧಕ್ಕೆಯಾಗುವುದಿಲ್ಲ. ಆಗ ನಾಟಕದ ಅವಧಿಯನ್ನು ಕಡಿಮೆ ಮಾಡಿ ಹೆಚ್ಚು ಸಹನೀಯಗೊಳಿಸಬಹುದು.
ಚೇತನ್ ಸಿಂಗಾನಲ್ಲೂರು ಅವರ ಸಂಗೀತದ ಹಿಮ್ಮೇಳ ಕಥಾವಸ್ತುವಿಗೆ ಪೂರಕವಾದಂತಿದ್ದು ಎಲ್ಲಿಯೂ ತಪ್ಪಿದಂತೆ ಕಾಣುವುದಿಲ್ಲ. ದಿಶಾ ರಮೇಶ್ ಅವರ ಬೆಳಕಿನ ವಿನ್ಯಾಸ ಹಲವು ಸನ್ನಿವೇಶಗಳಲ್ಲಿ ಶಹಬ್ಬಾಶ್‌ಗಿರಿ ಪಡೆಯುವಂತಿದೆ. ಇಡೀ ನಾಟಕದ ಹೊಣೆ ಹೊತ್ತು ವಿನ್ಯಾಸ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಯುವ ಕಲಾವಿದ ಮೇಘ ಸಮೀರ ತನ್ನೊಳಗಿನ ಭವಿಷ್ಯದ ರಂಗಕರ್ಮಿಯನ್ನು ಕನ್ನಡದ ರಂಗಾಸಕ್ತರ ಮುಂದೆ ತೆರೆದಿಟ್ಟಿದ್ದಾರೆ. “ಶ್ರೀಮನ್ಮಹಹೀಶೂರ ರತ್ನ ಸಿಂಹಾಸನ ” ಈ ಹೆಜ್ಜೆಗಳನ್ನು ದೃಢೀಕರಿಸುವಂತೆ ಮೂಡಿಬಂದಿದೆ. ಇದು ನಿರ್ದೇಶಕರ ಹೆಗ್ಗಳಿಕೆ ಮಾತ್ರವೇ ಅಲ್ಲ ಒಂದು ಸಂಕೀರ್ಣ ಕಥಾವಸ್ತುವನ್ನು ರಂಗದ ಮೇಲೆ ಮೆಚ್ಚುವಂತಹ ರೀತಿಯಲ್ಲಿ ಪ್ರಸ್ತುತಪಡಿಸಿರುವ ಇಡೀ ತಂಡದ ಹಿರಿಮೆ. ನಟನ ರಂಗಶಾಲೆ ಇಂತಹುದೇ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿರಲಿ, ಕನ್ನಡ ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಿಕೆಯತ್ತ ಕೊಂಡೊಯ್ಯಲಿ ಎಂದು ಆಶಿಸುತ್ತೇನೆ.
ಇದನ್ನೂ ನೋಡಿ: ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಸುದ್ದಿಗೋಷ್ಠಿ | B. K. Hariprasad