ರಂಗ ವೈವಿಧ್ಯತೆಗೆ ಸಾಕ್ಷಿಯಾದ ಒಂದು ಪ್ರಯೋಗ

ಚಲನಶೀಲತೆ-ಪ್ರಯೋಗಶೀಲತೆಯನ್ನು ಸಾರ್ಥಕಗೊಳಿಸುವ ಪ್ರಯತ್ನಗಳು ಸದಾ ಅಪೇಕ್ಷಣೀಯ

-ನಾ ದಿವಾಕರ

ರಂಗಭೂಮಿಯ ಸೌಂದರ್ಯ ಇರುವುದು ಅದರೊಳಗಿನ ಭಾವಾಭಿವ್ಯಕ್ತಿ ಹಾಗೂ ಆಂಗಿಕ ಅಭಿನಯ ಚತುರತೆಯ ವೈವಿಧ್ಯತೆಗಳಲ್ಲಿ. ಈ ಕಲಾಪ್ರಕಾರದ ಅಂತಃಸತ್ವ ಅಡಗಿರುವುದು ಪ್ರಯೋಗಶೀಲತೆಯಲ್ಲಿ. ಈ ಮೂರೂ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳುತ್ತಲೇ ಬೆಳೆಯುವ ರಂಗಭೂಮಿಗೆ ಚಲನಶೀಲತೆಯನ್ನು ಕಾಪಾಡಿಕೊಂಡು ಬರಲು ನೆರವಾಗುವುದು ರಂಗ ಕಲಾವಿದರ ಸೃಜನಶೀಲ ಪ್ರಯತ್ನಗಳು ಮತ್ತು ಹೊಸ ಹೊಸ ಪ್ರಯತ್ನಗಳು. ಕನ್ನಡ ರಂಗಭೂಮಿ ತನ್ನ ಈ ವೈವಿಧ್ಯತೆಗಳಿಂದಲೇ ಇಂದಿಗೂ ಸಹ ಸಾಂಸ್ಕೃತಿಕ ಜಗತ್ತಿನಲ್ಲಿ ಪ್ರಶಸ್ತ ಸ್ಥಾನವನ್ನು ಉಳಿಸಿಕೊಂಡಿದೆ, ಬೆಳೆಸುತ್ತಲೂ ಇದೆ. ಹವ್ಯಾಸಿ ರಂಗಭೂಮಿ ಉದಯಿಸಿದ ನಂತರದಲ್ಲಿ ರಂಗಕಲೆ ಎನ್ನುವುದು ತನ್ನ ಸಾಂಸ್ಥಿಕ ನೆಲೆಯಿಂದ ಸಾಂಘಿಕ ನೆಲೆಗೆ ರೂಪಾಂತರಗೊಂಡಿರುವುದು ಕಳೆದ ಐದಾರು ದಶಕಗಳಲ್ಲಿ ಅಸಂಖ್ಯಾತ ಕಲಾವಿದರನ್ನು ಹುಟ್ಟುಹಾಕಿದೆ. ವೈವಿಧ್ಯತೆ

ಕನ್ನಡದ  ಹವ್ಯಾಸಿ ರಂಗಭೂಮಿ ತನ್ನೊಳಗೆ ಸೃಜಿಸಿದ ಕಲಾರಾಧಕರ-ಕಲಾವಿದರ ಒಂದು ತಲೆಮಾರು ಇಂದು ರಂಗಭೂಮಿಯನ್ನು ವಿಭಿನ್ನ ಆಯಾಮಗಳಲ್ಲಿ, ವಿವಿಧ ಮಜಲುಗಳಲ್ಲಿ ಶ್ರೀಸಾಮಾನ್ಯನ ಬಳಿಗೆ ಕೊಂಡೊಯ್ದಿದೆ. ಹೊರ ಸಮಾಜದ ಒಂದು ಪ್ರತಿಬಿಂಬವನ್ನು ರಂಗದ ಮೇಲೆ ಕಾಣುವ ಪ್ರಯತ್ನದಲ್ಲಿ ಹಲವು ರಂಗತಂಡಗಳು ತಮ್ಮದೇ ಆದ ವೈವಿಧ್ಯತೆಗಳೊಂದಿಗೆ ಚಲನಶೀಲವಾಗಿವೆ. ತಾನು ಪ್ರತಿನಿಧಿಸುವ ಸಮಾಜಕ್ಕೆ ಅಗತ್ಯವಾದ ಮನುಜ ಸಂಬಂಧಗಳ ಸೂಕ್ಷ್ಮತೆಗಳನ್ನು ಬಿಂಬಿಸುವುದೇ ಅಲ್ಲದೆ, ಅಲ್ಲಿರಬಹುದಾದ ಕೊರತೆ-ಲೋಪದೋಷಗಳನ್ನು ನಿಕಷಕ್ಕೊಡ್ಡಿ, ಹೊಸ ಚಿಂತನೆಗಳ ಅನ್ವೇಷಣೆಗೆ ಎಡೆಮಾಡಿಕೊಡುವ ಒಂದು ಸಾಂಸ್ಕೃತಿಕ ಜವಾಬ್ದಾರಿಯನ್ನು ಹವ್ಯಾಸಿ ರಂಗಭೂಮಿ ನಿಭಾಯಿಸುತ್ತಾ ಬಂದಿದೆ. ರಂಗಭೂಮಿಯ ಈ ಚಿಕಿತ್ಸಕ ಗುಣವೇ ಡಿಜಿಟಲ್‌ ಯುಗದಲ್ಲೂ ಅದರ ಅಂತಃಸತ್ವವನ್ನು ಕಾಪಾಡಿಕೊಂಡು ಬರಲು ನೆರವಾಗಿರುವುದು ಸತ್ಯ. ವೈವಿಧ್ಯತೆ

ರಂಗಕಲೆಯ ಚಲನಶೀಲತೆ

ರಂಗ ಕಲೆ ನಿಂತ ನೀರಾಗಕೂಡದು, ಆಗುವುದೂ ಇಲ್ಲ. ಹಾಗಾಗಿಯೇ ಆಧುನಿಕ ಕಾಲಘಟ್ಟದಲ್ಲೂ ತನ್ನ ಪಾರಂಪರಿಕ ಲಕ್ಷಣಗಳನ್ನು ಉಳಿಸಿಕೊಂಡು ನವ ನಾಗರಿಕತೆಗೆ ಸ್ಪಂದಿಸುವ ಗುಣವನ್ನು ಉಳಿಸಿಕೊಂಡು ಬರುತ್ತದೆ. ಈ ಹಾದಿಯಲ್ಲೇ ಕಲಾಭಿವ್ಯಕ್ತಿಯ ವಿಭಿನ್ನ ಮಾದರಿಗಳು ಸಹ ಆವಿರ್ಭವಿಸುತ್ತವೆ. ಮೂಲತಃ ರಂಗ ವೇದಿಕೆಯನ್ನು ಅಲಂಕರಿಸುವ ಕಲಾವಿದರಲ್ಲಿ ಕಾಣಬಹುದಾದ ಆಂಗಿಕ, ಭಾವುಕ ಹಾಗೂ ಮೌಖಿಕ ಅಭಿವ್ಯಕ್ತಿಯೇ ರಂಗಭೂಮಿ ಪ್ರಯೋಗಗಳ ಜೀವಾಳವಾಗಿದ್ದರೂ, ಈ ಅಭಿನಯ ಕಲೆಯ ಸುತ್ತಲೂ ಹರಡಿರುವ ಬೆಳಕಿನ ವಿನ್ಯಾಸ, ರಂಗ ಸಜ್ಜಿಕೆ ಮತ್ತು ವಿನ್ಯಾಸ, ಸಂಗೀತ ಮತ್ತಿತರ ಕಲಾಕೌಶಲಗಳು , ಯಾವುದೇ ನಾಟಕದ ಸೌಂದರ್ಯವನ್ನು ಇಮ್ಮಡಿಗೊಳಿಸುವುದಲ್ಲದೆ ಪ್ರೇಕ್ಷಕರ ಹೃದಯ ತಟ್ಟುತ್ತದೆ. ಇಂತಹ ಒಂದು ಅಭಿವ್ಯಕ್ತಿ ಮಾದರಿಗಳ ಪೈಕಿ ಏಕವ್ಯಕ್ತಿ ಪ್ರದರ್ಶನವೂ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಕನ್ನಡ ರಂಗಭೂಮಿಯನ್ನು ತನ್ನದಾಗಿಸಿಕೊಂಡಿದೆ. ವೈವಿಧ್ಯತೆ

ಇದನ್ನೂ ಓದಿ: ಕೊಳವೆ ಬಾವಿಗೆ ಬಿದ್ದ ಮೂರು ವರ್ಷದ ಬಾಲಕಿ: ಮಗಳನ್ನು ರಕ್ಷಿಸುವಂತೆ ತಾಯಿ ಜಿಲ್ಲಾಡಳಿತಕ್ಕೆ ಮೊರೆ

ಹವ್ಯಾಸಿ ರಂಗಭೂಮಿಯ ಸಾಮಾನ್ಯ ಪ್ರಯೋಗಗಳಲ್ಲಿ ವ್ಯಕ್ತವಾಗಬಹುದಾದ ಸಾಮಾಜಿಕ ಸೂಕ್ಷ್ಮ ಸಂವೇದನೆಗಳು ಮತ್ತು ಸಾಂಘಿಕ ಬದುಕಿನ ವಿಭಿನ್ನ ಆಯಾಮಯಗಳನ್ನು ಇಂತಹ ಏಕವ್ಯಕ್ತಿ ಪ್ರದರ್ಶನಗಳಲ್ಲಿ ಗುರುತಿಸಲಾಗುವುದಿಲ್ಲ. ಆದರೆ ಈ ಕಾರಣಕ್ಕಾಗಿಯೇ ಈ ಕಲಾಪ್ರಕಾರವನ್ನು ನಗಣ್ಯಗೊಳಿಸುವುದು ತಪ್ಪಾಗುತ್ತದೆ. ಮರಾಠಿ ರಂಗಭೂಮಿಯಲ್ಲಿ ಏಕವ್ಯಕ್ತಿ ಪ್ರದರ್ಶನವನ್ನು ಬಹಳ ಪರಿಣಾಮಕಾರಿಯಾಗಿ ಬಳಸಿರುವುದೇ ಅಲ್ಲದೆ, ಮಹಾತ್ಮ ಫುಲೆ, ಸಾವಿತ್ರಿ ಬಾಯಿ ಫುಲೆ ಮೊದಲಾದ ದಾರ್ಶನಿಕರ ಬದುಕು ಮತ್ತು ಪಯಣವನ್ನು ಬಿಂಬಿಸುವ ರಂಗಪ್ರಯೋಗಗಳನ್ನು ಮಾಡಲಾಗಿದೆ. ಕನ್ನಡ ರಂಗಭೂಮಿಯಲ್ಲೂ ಸಹ ಸಿ.ಆರ್.‌ ಸಿಂಹ ಅವರ ರಸಋಷಿ ಕುವೆಂಪು, ಟಿಪಿಕಲ್‌ ಕೈಲಾಸಂ ಮೊದಲಾದ ಪ್ರಯತ್ನಗಳು ಇದನ್ನು ಯಶಸ್ವಿಯಾಗಿ ಮಾಡಿವೆ. ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದೆ ಲಕ್ಷ್ಮೀಚಂದ್ರಶೇಖರ್‌ ಇದನ್ನು ಜನಪ್ರಿಯಗೊಳಿಸಿದ್ದಾರೆ. ವೈವಿಧ್ಯತೆ

ಮೈಸೂರಿನ ರಂಗಭೂಮಿ ಕಲಾವಿದರೂ ಈ ನಿಟ್ಟಿನಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಯತ್ನಿಸಿದ್ದಾರೆ. ಇತ್ತೀಚೆಗೆಷ್ಟೇ ಹಿಂದಿಯಲ್ಲಿ ನಾದಿರಾ ಬಬ್ಬರ್‌ ರಚಯಿತ ʼ ಸಕುಬಾಯಿ ಕಾಮವಾಲಿʼ ನಾಟಕವನ್ನು ಡಿ.ಎಸ್.‌ ಚೌಗಲೇ ಕನ್ನಡದಲ್ಲಿ ʼಸಕುಬಾಯಿʼ ಆಗಿ ನುಡಿ ಸುದರ್ಶನ್‌ ತಮ್ಮ ಅದ್ಭುತ ಅಭಿನಯದ ಮೂಲಕ ಇದನ್ನು ಯಶಸ್ವಿಗೊಳಿಸಿದ್ದರು. ಇತ್ತೀಚೆಗಷ್ಟೇ ಇಂದಿರಾ ನಾಯರ್‌ ಅಭಿನಯದ ʼನೀರ್ಮಾದಳ ಹೂವಿನೊಂದಿಗೆʼ ಪ್ರೇಕ್ಷಕರ ಮನಸೂರೆಗೊಂಡಿತ್ತು. ಈ ಪರಂಪರೆಯ ಮುಂದುವರಿಕೆಯಾಗಿ ಮೈಸೂರಿನ ರಂಗ ತಂಡಗಳು ಹಲವು ಪ್ರಯೋಗಗಳಿಗೆ ತೆರೆದುಕೊಂಡಿವೆ. ಯುವ ರಂಗಕರ್ಮಿ ಮಧು ಮಳವಳ್ಳಿ ಇಂತಹುದೇ ಒಂದು ಪ್ರಯೋಗವನ್ನು ವನಿತಾ ರಾಜೇಶ್‌ ಅವರ ಅಭಿನಯದಲ್ಲಿ ʼಮಧುರ ಮಂಡೋದರಿʼ ಎಂಬ ನಾಟಕದಲ್ಲಿ ಸಾಕಾರಗೊಳಿಸಿರುವುದು ಪ್ರಶಂಸನೀಯ. ಏಕವ್ಯಕ್ತಿ ಪ್ರದರ್ಶನದಲ್ಲಿ ಒಬ್ಬ ಕಲಾವಿದರೇ ಇಡೀ ನಾಟಕವನ್ನು ಆವರಿಸಿಕೊಳ್ಳುವುದರಿಂದ, ಕಥಾವಸ್ತುವನ್ನು ಪ್ರೇಕ್ಷಕರಿಗೆ ಹೃದಯಸ್ಪರ್ಶಿಯಾಗಿ ಮುಟ್ಟಿಸುವ ಸಂಪೂರ್ಣ ಜವಾಬ್ದಾರಿ ಆ ಕಲಾವಿದರ ಮೇಲಿರುತ್ತದೆ. ವೈವಿಧ್ಯತೆವೈವಿಧ್ಯತೆ

ಸಮರ್ಪಕವಾದ ಸಂಭಾಷಣೆಯ ವೈಖರಿ, ಧ್ವನಿಯ ಏರಿಳಿತ, ಆಂಗಿಕ ಅಭಿನಯದಲ್ಲಿರಬೇಕಾದ ಭಿನ್ನ ಅಭಿವ್ಯಕ್ತಿಗಳು ಮತ್ತು ಕಥಾವಸ್ತುವಿನ ವಿನ್ಯಾಸದಲ್ಲಿ ಇರಬೇಕಾದ ಸಮನ್ವಯತೆ ಅದಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಇವೆಲ್ಲವೂ ಏಕವ್ಯಕ್ತಿ ಪ್ರದರ್ಶನದ ಸವಾಲುಗಳಾಗಿರುತ್ತವೆ. ಇಲ್ಲಿ ಪ್ರದರ್ಶನ ನೀಡುವ ಕಲಾವಿದ/ಕಲಾವಿದೆಯ ಪಾತ್ರ ತಲ್ಲೀನತೆ ಮತ್ತು ಪರಕಾಯ ಪ್ರವೇಶದೊಂದಿಗೇ, ಇಡೀ ಕಥಾ ಹಂದರವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ಮುಟ್ಟಿಸುವ ಕ್ಷಮತೆ ಮತ್ತು ಕೌಶಲ ಪ್ರಧಾನವಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ವನಿತಾ ರಾಜೇಶ್‌ ಅಭಿನಯಿಸಿದ ʼಮಧುರ ಮಂಡೋದರಿʼ ರಂಗಾಸಕ್ತರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ನಿರ್ದೇಶಕ ಮಧು ಮಳವಳ್ಳಿ ಅವರ ದಕ್ಷ ನಿರ್ದೇಶನ ಮತ್ತು ಉತ್ತಮ ಬೆಳಕಿನ ವಿನ್ಯಾಸ-ಸಂಗೀತದೊಂದಿಗೆ ನಾಟಕವು ಗಮನ ಸೆಳೆಯುತ್ತದೆ.

ಸಂಕೀರ್ಣ ಕಥಾ ವಸ್ತುವಿನ ಅನಾವರಣ

ಪ್ರಸನ್ನಕುಮಾರ್ ಕೆರಗೋಡ್ಲು ಅವರು ರಚಿಸಿರುವ ʼ ಮಧುರ ಮಂಡೋದರಿ ʼ ಹೆಣ್ಣೊಬ್ಬಳ ಅಂತರಂಗದಲ್ಲಿ ಸುಪ್ತವಾಗಿರಬಹುದಾದ ತಲ್ಲಣ, ತಳಮಳ ಮತ್ತು ಹತಾಶೆಗಳನ್ನು ಸೂಕ್ಷ್ಮವಾಗಿ ಬಿಂಬಿಸುವ ಕಥಾವಸ್ತುವನ್ನು ಹೊಂದಿದೆ. ಸಮಕಾಲೀನ ಸಂದರ್ಭದಲ್ಲಿ ನಿಂತು ನೋಡಿದಾಗ, ಹೆಣ್ಣು ಇಂದಿಗೂ ಎದುರಿಸುತ್ತಿರುವ ಪುರುಷ ಸಮಾಜದ ದಬ್ಬಾಳಿಕೆ-ದಾಳಿ ಮತ್ತು ಅದರಿಂದ ಸಾಮಾನ್ಯ ಹೆಣ್ಣಿನ ಬದುಕಿನುದ್ದಕ್ಕೂ ಎದುರಿಸಬೇಕಾಗಿ ಬರುವ ಆತಂಕದ ಸನ್ನಿವೇಶಗಳು ಯಾವುದೇ ಸಂವೇದನಾಶೀಲ ಸಮಾಜದ ನಿದ್ದೆಗೆಡಿಸುತ್ತದೆ. ʼ ಮಧುರ ಮಂಡೋದರಿ ʼ ಇಂತಹ ಒಂದು ತಲ್ಲಣ-ತವಕಗಳನ್ನು ಎದುರಿಸಿ, ಹೋರಾಡಿ, ಮೆಟ್ಟಿ ನಿಲ್ಲುವ ಒಂದು ಹೆಣ್ಣಿನ ಕಥೆಯನ್ನು ತೆರೆದಿಡುತ್ತದೆ. ತಮ್ಮ ನಿಕಟವರ್ತಿಗಳಿಂದಲೇ, ಸಂಬಂಧಿಕರಿಂದಲೇ  ಬಲಾತ್ಕಾರ-ಅತ್ಯಾಚಾರಕ್ಕೊಳಗಾಗುವ ಹೆಣ್ಣು ಮಕ್ಕಳು ಇಂದಿಗೂ ನಮ್ಮ ನಡುವೆ ಕಾಣುತ್ತಲೇ ಇದ್ದಾರೆ. ಈ ನಾಟಕದಲ್ಲಿ ಬರುವ ಮಧುರ ಅಂತಹುದೇ ಸನ್ನಿವೇಶಗಳನ್ನು ದಾಟಿ ಬಂದಿರುತ್ತಾಳೆ. ವೈವಿಧ್ಯತೆ

ತನ್ನ ಮೇಲೆ ಗೆಳತಿಯೊಬ್ಬಳ ಅಣ್ಣನಿಂದಲೇ ನಡೆಯುವ ಬಲಾತ್ಕಾರವನ್ನು ಯಾರಿಗೂ ಹೇಳದೆ ಮನದಲ್ಲೇ ಅದುಮಿಟ್ಟುಕೊಳ್ಳುವ ಅಸಹಾಯಕ ಸ್ಥಿತಿ ಹೆಣ್ಣನ್ನು ಮತ್ತಷ್ಟು ಜರ್ಜರಿತಗೊಳಿಸಿಬಿಡುತ್ತದೆ. ಇಂತಹ ಸಂದಿಗ್ಧತೆಯ ನಡುವೆಯೇ ಮಧುರ ಅನುಭವಿಸುವ ಆಂತರಿಕ ತಲ್ಲಣಗಳಿಗೆ ಆಕೆಯ ಸ್ತ್ರೀಲೋಲುಪ ಗಂಡ ಒಂದು ಕಾರಣವಾದರೆ, ತಾಯಿ ಎಂಬ ಜೀವ ಇದ್ದರೂ ಎಲ್ಲೋ ದೂರದಲ್ಲಿರುವ ತಬ್ಬಲಿತನನ ಮತ್ತೊಂದು ಕಾರಣವಾಗುತ್ತದೆ. ನೆಪಮಾತ್ರಕ್ಕೆ ಗಂಡ ಎಂದು ಕರೆಸಿಕೊಳ್ಳುವ ಒಂದು ಜೀವ ಮಡಿದಾಗ, ಅನಿವಾರ್ಯವಾಗಿ ಮತ್ತೊಂದು ವಿವಾಹಕ್ಕೆ ತೆರೆದುಕೊಳ್ಳುವ ಮಧುರ ಅಲ್ಲೂ ಸಹ ಸುಖ ನೆಮ್ಮದಿ ಕಾಣಲಾಗುವುದಿಲ್ಲ. ಈ ಸಂಕಷ್ಟಗಳ ನಡುವೆ ಮಧುರಳನ್ನು ಕಾಪಾಡುವುದು ಆಕೆಯೊಳಗಿನ ನೃತ್ಯ ಕಲೆ. ಆದರೆ ಅದನ್ನೂ ಬದಿಗೊತ್ತಿ ಏಕಾಂತ ಬದುಕನ್ನು ಸವೆಸುವ ಮಧುರ ಅಂತರಂಗದ ತಳಮಳಗಳೆಲ್ಲವನ್ನೂ ಪ್ರೇಕ್ಷಕರ ಮುಂದೆ ಬಿಚ್ಚಿಡುತ್ತಾ ಹೋಗುತ್ತಾಳೆ. ವೈವಿಧ್ಯತೆ

ಈ ನಾಟಕದ ಮತ್ತೊಂದು ವೈಶಿಷ್ಟ್ಯ ಎಂದರೆ ದ್ವಿತೀಯ ಭಾಗದಲ್ಲಿ ರಾಮಾಯಣದ ಮಂಡೋದರಿ ಪ್ರವೇಶವಾಗುವುದು. ಮಂಡೋದರಿಯೂ ಸಹ ವಿವಾಹಕ್ಕೆ ಮುನ್ನ ಬಲಾತ್ಕಾರಕ್ಕೊಳಗಾಗಿರುವ ಪ್ರಸಂಗವನ್ನು ಆಕೆಯ ಅಂತರಂಗದ ತಳಮಳಗಳ ಮೂಲಕ ವ್ಯಕ್ತಪಡಿಸುತ್ತಲೇ, ಅಪ್ರತಿಮ ವೀರ ರಾವಣನು ಸೀತೆಯ ಚೆಲುವಿಗೆ ಸೋತು ಆಕೆಯನ್ನು ಅಪಹರಿಸಿ ತಂದು ರಾಮನಿಂದ ಹತನಾಗುತ್ತಾನೆ. ಅಲ್ಲಿಯೂ ಸಹ ಒಂದು ಮಂಡೋದರಿ ತನ್ನ ಅಸಹಾಯಕತೆಗೆ ಸೋತು ವಿಭೀಷಣನನ್ನು ಮತ್ತೆ ವರಿಸುವ ಪ್ರಸಂಗವು ಹೆಣ್ಣು ಎದುರಿಸಬೇಕಾದ ಅಸಹಾಯಕ ಪರಿಸ್ಥಿತಿಗಳನ್ನು ಮನಮುಟ್ಟುವಂತೆ ತೆರೆದಿಡುತ್ತದೆ. ವರ್ತಮಾನದಲ್ಲಿ ಹೆಣ್ಣು ಅನುಭವಿಸುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಗಳಿಗೆ ಪೌರಾಣಿಕ-ಚಾರಿತ್ರಿಕ ಘಟನೆಗಳನ್ನು ಸಮಾನಾಂತರವಾಗಿ ಗುರುತಿಸುವುದರ ಮೂಲಕ ಪ್ರಸನ್ನಕುಮಾರ್‌ ಈ ನಾಟಕದಲ್ಲಿ ಹೆಣ್ಣೊಳನೋಟದ ಒಂದು ಆಯಾಮವನ್ನು ಪ್ರೇಕ್ಷಕರ ಮುಂದಿರಿಸುತ್ತಾರೆ.

ಆದರೆ ಈ ಎರಡು ಹೆಣ್ಣು ಜೀವಗಳ ತೊಳಲಾಟಗಳು ಸಿನಿಕತನದಲ್ಲಿ ಕೊನೆಯಾಗದಂತೆ ಎಚ್ಚರವಹಿಸಿರುವ ನಾಟಕಕಾರರು, ಕೊನೆಯಲ್ಲಿ ಮಧುರ ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳ ಪರವಾಗಿ ಹೋರಾಡಲು ನಿಲ್ಲುವುದನ್ನು ಬಿಂಬಿಸುತ್ತಾರೆ. ನಾಟಕದಲ್ಲಿ ಬರುವ ಆರ್ಯ-ದ್ರಾವಿಡ ಸಂಸ್ಕೃತಿಗಳ ತುಲನೆ, ಮಧ್ಯಕಾಲೀನ ಭಾರತದಲ್ಲೂ ಪ್ರಚಲಿತವಾಗಿದ್ದ ಸತಿ ಎಂಬ ಹೀನ ಪದ್ಧತಿ ಇವೆಲ್ಲವನ್ನೂ ಸೂಕ್ಷ್ಮವಾಗಿ ಪ್ರಸ್ತುತಪಡಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗುತ್ತಾರೆ. ತನ್ನ ಅಂತಃಶಕ್ತಿಯೇ ಆಗಿದ್ದ ನೃತ್ಯ ಕಲೆಯನ್ನು ಮುಂದುವರೆಸಲಾಗದೆ ಮಧುರ ಸಮಾಜದಲ್ಲಿ ಅತ್ಯಾಚಾರಕ್ಕೊಳಗಾಗಿ ನ್ಯಾಯ ಸಿಗದೆ ಪರದಾಡುವ ಹೆಣ್ಣುಮಕ್ಕಳ ಪರವಾಗಿ ಕೆಲಸ ಮಾಡುವ ಒಂದು ಉದಾತ್ತ ಕ್ರಿಯೆಯಲ್ಲಿ ತೊಡಗುವುದರೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ಸಾಂಕೇತಿಕವಾಗಿ ಒಂದು ಚಿತ್ರಕಲೆಯ ಮುಖಾಂತರ ತನ್ನ ಭವಿಷ್ಯದ ಹಾದಿಯನ್ನು ತೆರೆದಿಡುವ ಮಧುರ, ಎಂತಹ ಸವಾಲು ಎದುರಾದರೂ ಎದೆಗುಂದದೆ ಮುನ್ನುಗ್ಗುವ ಛಲಗಾತಿಯಾಗಿ ಪ್ರೇಕ್ಷಕರ ಎದುರು ನಿಲ್ಲುತ್ತಾಳೆ.

ಉತ್ತಮ ಭಾವಾಭಿನಯದ ಹೂರಣ

ಇಡೀ ನಾಟಕವನ್ನು ಹಿಡಿದಿಡುವುದು ಮಧು ಮಳವಳ್ಳಿ ಅವರ ದಕ್ಷ ನಿರ್ದೇಶನ ಮತ್ತು ವನಿತಾ ರಾಜೇಶ್‌ ಅವರ ಅದ್ಭುತ ಅಭಿನಯ. ಮಧುರ ಮತ್ತು ಮಂಡೋದರಿ ಎರಡೂ ಪಾತ್ರಗಳಲ್ಲಿ ತಲ್ಲೀನತೆಯಿಂದ ನಟಿಸಿರುವ ವನಿತಾ ರಾಜೇಶ್‌ ಧ್ವನಿ ಉಚ್ಛಾರಣೆಯಲ್ಲಿ, ಸಂಭಾಷಣೆಯ ಸ್ಪಷ್ಟತೆಯಲ್ಲಿ ಹಾಗೂ ಭಾವಾಭಿನಯದಲ್ಲಿ ಭೇಷ್‌ ಎನಿಸಿಕೊಳ್ಳುತ್ತಾರೆ. ಏಕವ್ಯಕ್ತಿ ಪ್ರದರ್ಶನದಲ್ಲಿ ಅಭಿನಯಿಸುವಾಗ ಅಗತ್ಯವಿರುವ ಎಲ್ಲ ರೀತಿಯ ಎಚ್ಚರಿಕೆಗಳನ್ನೂ ವನಿತಾ ರಾಜೇಶ್‌ ಅದ್ಭುತವಾಗಿ ನಿಭಾಯಿಸಿದ್ದಾರೆ. ಸುಮಾರು 70 ನಿಮಿಷಗಳ ನಾಟಕ ಹಠಾತ್ತನೆ ಕೊನೆಗೊಂಡಿತಲ್ಲಾ ಎಂದು ಭಾಸವಾಗುವ ರೀತಿಯಲ್ಲಿ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವನಿತಾ ರಾಜೇಶ್‌ ಸಫಲರಾಗಿದ್ದಾರೆ. ಬಹಳ ಮುಖ್ಯವಾಗಿ ಮಧುರ ಮತ್ತು ಮಂಡೋದರಿ ಎರಡೂ ಪಾತ್ರಗಳಲ್ಲಿ ಇರಬೇಕಾದ ಭಾವಾಭಿವ್ಯಕ್ತಿಯ ಭಿನ್ನತೆಯನ್ನು ಈ ಕಲಾವಿದೆ ಉತ್ತಮವಾಗಿ ಕಾಪಾಡಿಕೊಂಡಿದ್ದಾರೆ.

ಇದು ಏಕವ್ಯಕ್ತಿ ಪ್ರದರ್ಶನದಲ್ಲಿ ಅತ್ಯವಶ್ಯವಾಗಿ ಇರಬೇಕಾದ ಒಂದು ರಂಗಕೌಶಲ. ಸಾಮಾನ್ಯವಾಗಿ ವ್ಯಕ್ತಿ ಕೇಂದ್ರಿತವೇ ಆಗಿರುವ ಇಂತಹ ನಾಟಕಗಳು, ವ್ಯಕ್ತಿಗತ ನೆಲೆಯಲ್ಲೇ ಸಮಾಜದ ಒಳಸುಳಿಗಳನ್ನೂ ಬಿಂಬಿಸುವ ಪ್ರಯತ್ನಗಳನ್ನೂ ಮಾಡಬೇಕಾಗುತ್ತದೆ. ಇದಕ್ಕೆ ನಾಟಕ ರಚಯಿತರಷ್ಟೇ ಅಭಿನಯಿಸುವ ಕಲಾವಿದರೂ, ನಿರ್ದೇಶಕರೂ ಜವಾಬ್ದಾರರಾಗಿರುತ್ತಾರೆ. ʼ ಮಧುರ ಮಂಡೋದರಿ ʼಯಲ್ಲಿ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಹೆಚ್.‌ ಕೆ. ವಿಶ್ವನಾಥ್‌ ಅವರ ರಂಗ ವಿನ್ಯಾಸ, ಸುಬ್ರಮಣ್ಯ ಅವರ ನೆನಪಿನಲ್ಲುಳಿಯುವ ಸಂಗೀತ ನಾಟಕಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ನಾಟಕ ನೋಡಿ ಹೊರಬಂದ ನಂತರವೂ ʼ ಮಧುರ ಮತ್ತು ಮಂಡೋದರಿ ʼಯವರ ಬಿಂಬ ಮನಸ್ಸಿನಲ್ಲುಳಿಯುತ್ತದೆ. ಇದು ಕಲಾವಿದೆ ವನಿತಾ ರಾಜೇಶ್ ಅವರ ಅತ್ಯುತ್ತಮ ಅಭಿನಯಕ್ಕೆ ಸಲ್ಲಬೇಕಾದ ಶ್ರೇಯ.

ರಂಗಭೂಮಿ ಸಮಾಜವನ್ನು ಪ್ರತಿಬಿಂಬಿಸುವ ಒಂದು ಸಾಂಸ್ಕೃತಿಕ ಕಲಾಭೂಮಿಕೆ. ಹಾಗೆಯೇ ಸಮಾಜದ ಒಳಸುಳಿಗಳನ್ನೂ, ಸಿಕ್ಕುಗಳನ್ನೂ ತೆರೆದಿಡುವ ಚಿಕಿತ್ಸಕ ಗುಣದ ಒಂದು ಅಭಿವ್ಯಕ್ತಿ ವೇದಿಕೆ. ಏಕವ್ಯಕ್ತಿ ಪ್ರದರ್ಶನ ಈ ನಿಟ್ಟಿನಲ್ಲಿ ಕೊಂಚ ಭಿನ್ನವಾಗಿ ಕಾಣುತ್ತದೆ. ಏಕೆಂದರೆ ಇಲ್ಲಿ ʼ ವ್ಯಕ್ತಿಯನ್ನು ʼ ಪ್ರಧಾನವಾಗಿ ಬಿಂಬಿಸಲಾಗುತ್ತದೆ. ತನ್ಮೂಲಕ ಸಮಾಜದ ಒಳಸೂಕ್ಷ್ಮಗಳನ್ನು ಹಿಡಿದಿಡಲಾಗುತ್ತದೆ. ಹಾಗಾಗಿ ಸಾಮಾನ್ಯ ಹವ್ಯಾಸಿ ರಂಗಪ್ರಯೋಗಗಳಲ್ಲಿರುವಂತಹ ಸಾಂಘಿಕ ದೃಷ್ಟಿಕೋನ ಇಲ್ಲಿ ಮೇಲ್ನೋಟಕ್ಕೆ ಕಾಣುವುದಿಲ್ಲ. ಇದೇನೂ ಕೊರತೆ ಎಂದೆಣಿಸಬೇಕಿಲ್ಲ. ಏಕವ್ಯಕ್ತಿ ಪ್ರದರ್ಶನದಲ್ಲಿ ಬಹಳ ಮುಖ್ಯವಾಗಿ ನೋಡಬೇಕಿರುವುದು ಕಲಾವಿದರ ಭಾವಾಭಿನಯ ಮತ್ತು ಕಲಾಕೌಶಲ. ʼ ಮಧುರ ಮಂಡೋದರಿ ʼ ಈ ದೃಷ್ಟಿಯಿಂದ ಒಂದು ಉತ್ತಮ ಪ್ರಯೋಗ ಎನ್ನಬಹುದು.

ಎರಡೂ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ವನಿತಾ ರಾಜೇಶ್‌, ದಕ್ಷ ನಿರ್ದೇಶನ ನೀಡಿರುವ ಯುವ ರಂಗಕರ್ಮಿ ಮಧು ಮಳವಳ್ಳಿ ಮತ್ತು ಇಡೀ ರಂಗಬಂಡಿ ನಾಟಕ ತಂಡದ ಸದಸ್ಯರು ಅಭಿನಂದನಾರ್ಹರು. ರಂಗಕಲೆ ಎನ್ನುವುದು ಏಕಮುಖಿಯಲ್ಲ ಎನ್ನುವುದನ್ನು ನಿರೂಪಿಸುವ ಇಂತಹ ಪ್ರಯೋಗಗಳು ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತವೆ ಎನ್ನುವುದು ವಾಸ್ತವ.  ಯುವ ನಿರ್ದೇಶಕ ಮಧು ಮಳವಳ್ಳಿ ಈ ಭರವಸೆಯನ್ನು ಖಾತರಿಗೊಳಿಸುವ ರೀತಿಯಲ್ಲಿ ʼ ಮಧುರ ಮಂಡೋದರಿ ʼ ಪ್ರಯೋಗವನ್ನು ರಂಗಾಸಕ್ತರ ಮುಂದಿಟ್ಟಿದ್ದಾರೆ.

 (ಇದೇ ಡಿಸೆಂಬರ್‌ 15ರ ಭಾನುವಾರ ಮಂಡ್ಯ ರಮೇಶ್‌ ಅವರ ನಟನ ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನಗೊಂಡಿತ್ತು.)

ಇದನ್ನೂ ನೋಡಿ: ಕುವೆಂಪು 120| ಕುವೆಂಪು ಓದು – ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ Janashakthi Media

Donate Janashakthi Media

Leave a Reply

Your email address will not be published. Required fields are marked *