ಅಮೃತ ಮಹೋತ್ಸವಕ್ಕೆ ಸಜ್ಜಾಗುವ ಮುನ್ನ… ಶ್ರಮದ ಸೈಜುಗಲ್ಲುಗಳೂ ಶೋಷಣೆಯ ಹಾಸುಗಲ್ಲುಗಳೂ

ನಾ ದಿವಾಕರ

ಅಗಸ್ಟ್ 15 ರಂದು ಕೆಂಪು ಕೋಟೆಯಿಂದ ಮೂಡಿಬಂದ ‘ಆದರ್ಶಭಾರತ’ದ ಕನಸಿನ ಲೋಕದಲ್ಲಿ ಭಾರತದ ಕೃಷಿ ಭೂಮಿ, ಆಹಾರ ಉತ್ಪನ್ನ, ಖನಿಜ ಸಂಪತ್ತು, ನೈಸರ್ಗಿಕ ಸಂಪನ್ಮೂಲಗಳು, ಜಲಸಂಪತ್ತು, ಅರಣ್ಯ ಸಂಪತ್ತು, ಉತ್ಪಾದನೆಯ ಮೂಲಗಳು, ಸಾರಿಗೆ ವ್ಯವಸ್ಥೆ, ಶ್ರಮಶಕ್ತಿಯ ಮೂಲಗಳು, ಶ್ರಮಿಕರ ಮೂಲ ನೆಲೆಗಳು ಮತ್ತು ಉತ್ಪಾದನೆಯ ಸಾಧನಗಳು, ಇವೆಲ್ಲವೂ ಕಾರ್ಪೋರೇಟ್ ಮಾರುಕಟ್ಟೆ ಅಧಿಪತಿಗಳ ಒಡೆತನಕ್ಕೆ ಒಳಪಟ್ಟಿರುತ್ತವೆ. ಇದು ‘ಆತ್ಮನಿರ್ಭರ’ ಭಾರತ ‘ಆದರ್ಶಭಾರತ’ಕ್ಕಾಗಿ ರೂಪಿಸಿರುವ ನೀಲನಕ್ಷೆ. ಭಾರತದ ಪ್ರಭುತ್ವ ಈ ಹಾದಿಗೆ ಅಡ್ಡಿಯಾಗುವ ದನಿಗಳನ್ನು ದಮನಿಸಲು ಕರಾಳ ಶಾಸನಗಳ ಮೊರೆ ಹೋಗುತ್ತದೆ. ಈ ದೇಶದ ಮತೀಯವಾದಿ ಸಾಂಸ್ಕೃತಿಕ ಫ್ಯಾಸಿಸ್ಟ್ ರಾಜಕಾರಣ ಜಾತಿ ಪ್ರಣೀತ ಸಮಾಜವನ್ನು ಆಶ್ರಯಯಿಸುತ್ತದೆ. ಭಾರತದ ಶ್ರಮಿಕವರ್ಗ ಈ ತೂಗುಗತ್ತಿಯ ಅಡಿಯಲ್ಲೇ ತನ್ನ ಅಸ್ತಿತ್ವ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ. ಜಾತಿ, ಧರ್ಮ ಮತ್ತು ಭಾಷಿಕ ಸಂಕೋಲೆಗಳನ್ನು ತೊರೆದು ಒಂದು ಮಾನವೀಯ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಭಾರತದ ಶ್ರಮಜೀವಿಗಳು ರೈತಾಪಿಯೊಂದಿಗೆ ಕೈಜೋಡಿಸಿ ಸಮ ಸಮಾಜದ ನಿರ್ಮಾಣದತ್ತ ಮುನ್ನಡೆಯಬೇಕಿದೆ. ಈ ಶ್ರಮಿಕ ವರ್ಗ ಹೊತ್ತ ಸೈಜುಗಲ್ಲುಗಳನ್ನೇ ಕಾರ್ಪೋರೇಟ್ ಮಾರುಕಟ್ಟೆಯ ಸಂತೆಮಾಳಗಳಲ್ಲಿ ಹಾಸುಗಲ್ಲುಗಳಂತೆ ಬಳಸಿ ನವ ಉದಾರವಾದದ ನೂತನ ಭಾರತವನ್ನು ನಿರ್ಮಿಸಲು ಭಾರತದ ಆಳುವ ವರ್ಗಗಳು ಸಜ್ಜಾಗುತ್ತಿವೆ.

ನಾವು ಸ್ವತಂತ್ರರಾಗಿದ್ದೇವೆ ಎಂಬ ಘೋಷಣೆಯೊಡನೆ 1947ರ ಆಗಸ್ಟ್ 14ರ ನಡುರಾತ್ರಿ ವಿಧಿಯೊಡನೆ ಸಂಧಾನ ನಡೆಸಿದ ಭಾರತ 75 ವರ್ಷಗಳ ನಂತರ ಮತ್ತೊಮ್ಮೆ ನವ ಉದಾರವಾದದ ದುರ್ವಿಧಿಯೊಡನೆ ಅನುಸಂಧಾನ ನಡೆಸಲು ಸಜ್ಜಾಗಬೇಕಿದೆ. ಶಸ್ತ್ರ ರಕ್ಷಿತ ಕೆಂಪುಕೋಟೆಯಿಂದ ಹೊರಬರುವ ಪ್ರಜಾಸತ್ತೆಯ ಭರವಸೆಗಳ ನುಡಿಗಳಲ್ಲಿ ಕಾಣುವ ಅಕ್ಷರಗಳ ರುದ್ರತಾಂಡವದಲ್ಲಿ ಸಾವಿರಾರು ನೋವಿನ ದನಿಗಳು ಸಮಾಧಿಯಾಗಿರುವುದನ್ನು ಗಮನಿಸುತ್ತಲೇ, ಆತ್ಮರತಿಯ ಕಾವ್ಯರೂಪಕಗಳಲ್ಲಿ ಅಡಗಿರುವ ಕಟು ವಾಸ್ತವಗಳನ್ನು ಕಾಣದೆ ಹೋದರೆ ಬಹುಶಃ ಭಾರತದ ಪ್ರಜೆಗಳಾದ ನಾವು ನವ ವಸಾಹತುಶಾಹಿಯ ಸಂತೆಮಾಳದಲ್ಲಿ ಬಿಕರಿಯಾಗುವ ಸರಕುಗಳಾಗಿಬಿಡುತ್ತೇವೆ. ಸಮಾಧಿಗಳನ್ನು ಮೆಟ್ಟಿ ನಿಂತು ಭೂಗತರಾದವರ ತ್ಯಾಗ ಬಲಿದಾನಗಳನ್ನು ಕೊಂಡಾಡುವ ಅದ್ಭುತ ಕಲೆಯನ್ನು ಕರಗತ ಮಾಡಿಕೊಂಡಿರುವ ಒಂದು ಬಂಡವಾಳಶಾಹಿ ಫ್ಯಾಸಿಸ್ಟ್ ಆಡಳಿತ ವ್ಯವಸ್ಥೆಯಲ್ಲಿಯೇ, ಈ ದೇಶದ ಶ್ರಮಜೀವಿಗಳು ತಮ್ಮ ತೊಗಲ ಮೇಲಿನ ಬೆವರ ಹನಿಗಳಲ್ಲಿ ಭವಿಷ್ಯವನ್ನು ಕಾಣಬೇಕಿದೆ.

74 ವರ್ಷಗಳ ಅಪಾರ ಪರಿಶ್ರಮದಿಂದ ನವ ಭಾರತವನ್ನು ನಿರ್ಮಿಸಿದ/ನಿರ್ಮಿಸುತ್ತಿರುವ ಕೋಟ್ಯಂತರ ಶಿಲ್ಪಿಗಳನ್ನು ನೆನೆಯುವ ಮೂಲಕವೇ ನಾವು 75ನೆಯ ವರ್ಷಕ್ಕೆ ಕಾಲಿರಿಸಬೇಕಿದೆ. ಕೆಂಪುಕೋಟೆಯ ಭಾಷಣಕಾರರಿಗೆ ಈ ಶಿಲ್ಪಿಗಳ ಗತ ಬದುಕು ಸ್ಮರಣಾರ್ಹ ಎನಿಸುತ್ತದೆ, ವರ್ತಮಾನದ ಬದುಕು ನಿಕೃಷ್ಟ ಎನಿಸುತ್ತದೆ, ಭವಿಷ್ಯ ಅನಪೇಕ್ಷಿತವಾಗಿಬಿಡುತ್ತದೆ. ಭರವಸೆಗಳ ಮಾಯಾಲೋಕದಲ್ಲೇ ವಿಹರಿಸುತ್ತಾ ಭಾರತದ ರಾಷ್ಟ್ರ ಶಿಲ್ಪಿಗಳು 74 ವರ್ಷ ಕಳೆದದ್ದಾಗಿದೆ. ಇಂದು ತಾವೇ ನಿಂತ ನೆಲ ಕುಸಿಯುತ್ತಿದ್ದರೂ, ತಮ್ಮದೇ ಸಮಾಧಿಗಾಗಿ ಕಂದಕಗಳನ್ನು ತೋಡಲಾಗುತ್ತಿದ್ದರೂ, ಅಮೃತ ಶಿಲೆಯ ಗೋಡೆಗಳನ್ನು ನೋಡುತ್ತಾ ಆನಂದಿಸುತ್ತಿದ್ದೇವೆ. ದುಡಿಮೆಯ ಕೈಗಳಿಗೆ ಸ್ವಾತಂತ್ರ‍್ಯ ಎಂದರೆ ದುಡಿಮೆಯಿಂದ ವಿರಮಿಸುವುದಲ್ಲ, ತಮ್ಮ ಶ್ರಮ ಶಕ್ತಿಯ ಫಲವನ್ನು ಪೂರ್ಣವಾಗಿ ತಾವೇ ಬಳಸಿಕೊಳ್ಳುವುದು. ಇದು ಸಾಧ್ಯವಾಗದ ಹೊರತು ಯಾವುದೇ ದೇಶದ ದುಡಿಮೆಗಾರರಿಗೆ ಸ್ವಾತಂತ್ರ‍್ಯ ಎನ್ನುವುದು ಒಂದು ಮರೀಚಿಕೆಯಾಗಿಯೇ ಉಳಿದಿರುತ್ತದೆ.

ಇದನ್ನು ಓದಿ: ವಿಭಜನೆಯ ಕ್ರೌರ್ಯವನ್ನು ಸ್ಮರಿಸುವಾಗ,,,

ಏಕೆಂದರೆ ಬದುಕುವ ಸ್ವಾತಂತ್ರ‍್ಯದೊಡನೆ ಶೋಷಣೆಯಿಂದ ವಿಮೋಚನೆಯೂ ಶ್ರಮಿಕರ ಆದ್ಯತೆಯಾಗಿರುತ್ತದೆ. ಭಾರತದ ಶ್ರಮಿಕ ವರ್ಗಗಳು ಈ ವಿಮೋಚನೆಯನ್ನು ಸಾಧಿಸಲು ಸಾಧ್ಯವಾಗಿದೆಯೇ ಎಂದು ಹಿಂದಿರುಗಿ ನೋಡಿದಾಗ, ಬಂಡವಾಳ ವ್ಯವಸ್ಥೆಯ ಸಂಕೋಲೆಗಳಿಂದ ಬಿಡುಗಡೆ ದೊರೆತ ಕೆಲವೇ ಸಂದರ್ಭಗಳು ಮಾತ್ರ ಕಾಣಸಿಗುತ್ತವೆ. ವಿಮೋಚನೆಯ ಹಾದಿ ಇನ್ನೂ ದೂರವೇ ಉಳಿದಿದೆ. ಇಂದಿನ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ 100ನೆಯ ಸ್ವಾತಂತ್ರ‍್ಯೋತ್ಸವದ ವೇಳೆಗೆ ‘ಆದರ್ಶಭಾರತ’ದ ನಿರ್ಮಾಣವಾಗುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಬಹುಶಃ ಅವರ ಈ ಆಶೋತ್ತರದ ನುಡಿಗಳು ಸನಿಹದಲ್ಲೇ ನೆರೆದಿದ್ದ ಲಕ್ಷಾಂತರ ರೈತರ ಕಿವಿಗೆ ಅಪ್ಪಳಿಸಿರಬಹುದು. ಆದರ್ಶ ಎನ್ನುವ ಪರಿಕಲ್ಪನೆಯೇ ಸಾಪೇಕ್ಷವಾದುದರಿಂದ ಮತ್ತೊಂದು ಭ್ರಮಾಲೋಕಕ್ಕೆ ಜಾರುವ ಮುನ್ನ ಭಾರತದ ಶ್ರಮಜೀವಿಗಳು ವಾಸ್ತವ ಪ್ರಪಂಚದತ್ತ ಹೊರಳುವುದು ಉಚಿತ ಎನಿಸುತ್ತದೆ.

ಭಾರತ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಶಕ್ತಿಯೊಂದಿಗೆ ಸ್ಪರ್ಧಾತ್ಮಕವಾಗಿ ಮುನ್ನಡೆಯುವ ಸಾಮರ್ಥ್ಯ ಗಳಿಸಿದ್ದರೆ ಅದು ಈ ದೇಶದ ಶ್ರಮಜೀವಿಗಳ ಪರಿಶ್ರಮದ ಫಲ ಅಲ್ಲವೇ? ಪ್ರಭುತ್ವಬಂಡವಾಳಶಾಹಿ ವ್ಯವಸ್ಥೆಯನ್ನೇ ಪೋಷಿಸಿಕೊಂಡು, ಅರೆ ಸಮಾಜವಾದಿ ಆರ್ಥಿಕ ನೀತಿಗಳನ್ನು ಅನುಸರಿಸುತ್ತಾ ಬಂದ ನೆಹರೂ ಆರ್ಥಿಕತೆ ಈ ದೇಶದ ಶ್ರಮಜೀವಿಗಳ ಪಾಲಿಗೆ ಒಂದು ಸುಭದ್ರ ಬುನಾದಿಯನ್ನು ನಿರ್ಮಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸಾರಿಗೆ, ಸಂಪರ್ಕ, ಕೈಗಾರಿಕಾ ಉತ್ಪಾದನೆ, ಆಹಾರ ಉತ್ಪಾದನೆ ಮತ್ತು ಗಣಿಗಾರಿಕೆಯಲ್ಲಿ ಭಾರತ ಒಂದು ಸ್ವಾವಲಂಬಿ ರಾಷ್ಟ್ರವಾಗಿ ರೂಪುಗೊಂಡಿರುವುದು ಶ್ರಮಜೀವಿಗಳ ಬೆವರಿನ ಫಲವೇ ಹೊರತು, ಹವಾನಿಯಂತ್ರಿತ ಕೋಣೆಗಳಲ್ಲಿ ರೂಪಿಸಿದ ನೀಲನಕ್ಷೆಗಳ ಫಲ ಅಲ್ಲ.

ಕೇವಲ ಐವತ್ತು ವರ್ಷದ ಹಿಂದೆ ಆಹಾರದ ಕೊರತೆಯಿಂದ ಸಾಮ್ರಾಜ್ಯಶಾಹಿಗಳ ಮುಂದೆ ಮಂಡಿಯೂರುವ ಪರಿಸ್ಥಿತಿಯಲ್ಲಿದ್ದ ಭಾರತ ಇಂದು ಆಹಾರ ಉತ್ಪಾದನೆಯಲ್ಲಿ ಮುಂಚೂಣಿ ರಾಷ್ಟ್ರವಾಗಿದೆ. ಹಸಿರು ಕ್ರಾಂತಿಯ ವ್ಯತ್ಯಯಗಳು, ವಿರೋಧಾಭಾಸಗಳು ಏನೇ ಇದ್ದರೂ ಅದು ಈ ದೇಶದ  ಆಹಾರ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಒಂದು ಮಹತ್ತರ ಹೆಜ್ಜೆ ಎನಿಸಿದರೆ, ಅದರ ಹಿಂದೆ ಕೋಟ್ಯಂತರ ರೈತರ, ಕೃಷಿ ಕಾರ್ಮಿಕರ, ಗ್ರಾಮೀಣ ಬಡ ಜನತೆಯ ಪರಿಶ್ರಮವಿದೆ. ಭೂಮಿ ತನ್ನದಲ್ಲದಿದ್ದರೂ ಈ ದೇಶ ನನ್ನದು ಎಂಬ ಉದಾತ್ತ ಭಾವನೆಯಿಂದ ಹಗಲಿರುಳೂ ಉಳುಮೆಯಲ್ಲಿ ತೊಡಗುವ ಮೂಲಕ 133 ಕೋಟಿ ಜನತೆಗೆ ಅನ್ನ ನೀಡುತ್ತಿರುವ ಅನ್ನದಾತರ ಪರಿಶ್ರಮವೇ ಇಂದಿನ ‘ಆತ್ಮನಿರ್ಭರ’ ಭಾರತದ ನಿರ್ಮಾಣಕ್ಕೂ ಕಾರಣವಾಗಿದೆ.

ಆದರೆ ಈ ರೈತ ಸಮುದಾಯದ ನಿತ್ಯ ಜೀವನ ಭಾರತದ ಆಳುವ ವರ್ಗಗಳಿಗೆ ನಿಕೃಷ್ಟವಾಗಿಯೇ ಕಾಣುತ್ತಿರುವುದು ಸ್ವತಂತ್ರ ಭಾರತದ ಬಹುದೊಡ್ಡ ದುರಂತ. ಇಂದಿಗೂ ದೇಶದ ಶೇ.65ಕ್ಕೂ ಹೆಚ್ಚು ಪ್ರಜೆಗಳಿಗೆ ಜೀವನಾಧಾರವಾಗಿರುವ ಕೃಷಿ ಇಂದು ಮಾರುಕಟ್ಟೆಯ ಪಾಲಾಗುತ್ತಿದೆ. ಸ್ವಾತಂತ್ರ‍್ಯ ಬಂದ ದಿನದಿಂದಲೂ ಭಾರತದ ಕೃಷಿಕ ಸಮುದಾಯ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಲೇ ಬಂದಿದೆ. ಹಸಿರು ಕ್ರಾಂತಿಯ ಫಲಾನುಭವಿಗಳನ್ನು ಹೊರತುಪಡಿಸಿದರೆ ದೇಶದ ಬಹುಸಂಖ್ಯೆಯ ರೈತರು ಭೂಮಿಯನ್ನೇ ನಂಬಿ ಬದುಕುತ್ತಿರುವುದು ವಾಸ್ತವ. ಬೃಹತ್ ಅಣೆಕಟ್ಟುಗಳು, ನೀರಾವರಿ ಯೋಜನೆಗಳು ಮತ್ತು ಕೇಂದ್ರೀಕೃತ ಮಾರುಕಟ್ಟೆಯ ಹೊರತಾಗಿಯೂ ರೈತರು ತಾವು ಬೆಳೆದ ಫಸಲಿಗೆ ಸೂಕ್ತ ಬೆಲೆ ದೊರೆಯದೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಳೆದ ಮೂರು ದಶಕಗಳಲ್ಲಿ ಭಾರತ ಕಂಡಂತಹ ದುರಂತ ಸತ್ಯ.

ಇದನ್ನು ಓದಿ: ಪ್ರಧಾನ ಮಂತ್ರಿಗಳ ಸ್ವಾತಂತ್ರ್ಯ ದಿನದ ಭಾಷಣ: ವಂಚನೆಯ ಒಂದು ಕಸರತ್ತು

ಆದರೆ ನವ ಉದಾರವಾದ ಮತ್ತು ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ತಮ್ಮ ಸಾಮಾಜಿಕ ಮತ್ತು ನೈತಿಕ ಹೊಣೆಗಾರಿಕೆಯನ್ನೂ ಮರೆತಿರುವ ಭಾರತದ ಆಳುವ ವರ್ಗಗಳಿಗೆ ಆತ್ಮಹತ್ಯೆಗೆ ಶರಣಾದ ಲಕ್ಷಾಂತರ ರೈತರ ಬದುಕು ಇಂದಿಗೂ ನಿಕೃಷ್ಟವಾಗಿಯೇ ಕಾಣುತ್ತಿದೆ. ಇದರ ನೇರ ಪ್ರಾತ್ಯಕ್ಷಿಕೆಯನ್ನು ರಾಜಧಾನಿಯ ಸುತ್ತಲೂ ನಡೆಯುತ್ತಿರುವ ಲಕ್ಷಾಂತರ ರೈತರ ಮುಷ್ಕರದಲ್ಲಿ ಕಾಣಬಹುದಾಗಿದೆ. ಅನ್ನ ಬೆಳೆಯುವ ಈ ಶ್ರಮಜೀವಿಗಳಲ್ಲಿ ದೇಶದ್ರೋಹಿಗಳನ್ನು ಕಾಣುವ ಮಟ್ಟಿಗೆ ಭಾರತೀಯ ಪ್ರಭುತ್ವದ ದೃಷ್ಟಿ ಭ್ರಷ್ಟವಾಗಿದೆ. ಲಕ್ಷಾಂತರ ರೈತರ ಒಂಬತ್ತು ತಿಂಗಳುಗಳ ಹಕ್ಕೊತ್ತಾಯದ ಮುಷ್ಕರದತ್ತ ಕಣ್ಣೆತ್ತಿಯೂ ನೋಡದಂತಹ ಒಂದು ನಿರ್ದಯಿ ಪ್ರಭುತ್ವ ಏಳು ದಶಕಗಳ ಕೃಷಿ ನೀತಿಯನ್ನೇ ಬುಡಮೇಲು ಮಾಡಿ ಆಹಾರ ಉತ್ಪಾದನೆ, ಸಂಗ್ರಹ, ವಿತರಣೆ ಮತ್ತು ವ್ಯಾಪಾರವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸಲು ಸಜ್ಜಾಗುತ್ತಿದೆ.

ಇನ್ನು 25 ವರ್ಷಗಳಲ್ಲಿ ‘ಆದರ್ಶ ರಾಷ್ಟ್ರ’ವಾಗಲು ಹೊರಟಿರುವ ಇಂದಿನ ‘ಆತ್ಮನಿರ್ಭರ ಭಾರತ’ದ ಕೃಷಿ ಭೂಮಿ ಮಾರುಕಟ್ಟೆಯ ಸರಕಿನಂತೆ ಬಿಕರಿಯಾಗಲಿದೆ. ಐದು ದಶಕಗಳ ಪರಿಶ್ರಮದಿಂದ ಭಾರತ ಸಾಧಿಸಿದ ಆಹಾರ ಸ್ವಾವಲಂಬನೆ ಮಾರುಕಟ್ಟೆ ಜಾಗತಿಕ ಬಂಡವಾಳ ಮಾರುಕಟ್ಟೆಯಲ್ಲಿ ಲೀನವಾಗಲಿದೆ. ಭಾರತದ ರೈತ ಭೂಮಿಯ ಮೇಲಿನ ತನ್ನ ಹಕ್ಕನ್ನು ಕಳೆದುಕೊಳ್ಳುತ್ತಾನೆ. ತಾನು ಬೆಳೆಯುವ ಆಹಾರ ಧಾನ್ಯಗಳ ಮೇಲಿನ ಒಡೆತನವನ್ನು ಕಳೆದುಕೊಳ್ಳಲಿದ್ದಾನೆ. ತನ್ನ ಫಸಲನ್ನು ಸಂಗ್ರಹಿಸಿಟ್ಟು, ತನ್ನ ಕುಟುಂಬದ ಅವಶ್ಯಕತೆಗಳಿಗೆ ತಕ್ಕಂತೆ ಬಳಸಿಕೊಳ್ಳುವ ಹಕ್ಕುಗಳನ್ನೂ ಕಳೆದುಕೊಳ್ಳುತ್ತಾನೆ. ಇದು ನೂತನ ಕೃಷಿ ಕಾಯ್ದೆಯ ಸ್ಥೂಲ ಸ್ವರೂಪ. ಈ ಕರಾಳ ಕಾಯ್ದೆಯ ವಿರುದ್ಧ ದೇಶದ ರೈತರು ಒಂಬತ್ತು ತಿಂಗಳ ದೀರ್ಘಾವಧಿ ಮುಷ್ಕರದಲ್ಲಿ ತೊಡಗಿದ್ದಾರೆ.

ಆದರೆ ‘ಆದರ್ಶಭಾರತ’ದ ಹರಿಕಾರರಿಗೆ ಈ ಅನ್ನದಾತರ ಕೂಗು ಕೇಳುತ್ತಿಲ್ಲ. ಈಗಾಗಲೇ ಭಾರತದ ರೈತ ತನ್ನ ಪಾರಂಪರಿಕ ವೃತ್ತಿಯಿಂದ ಹೊರದೂಡಲ್ಪಟ್ಟು ನಗರಗಳತ್ತ ವಲಸೆ ಹೋಗಲಾಂಭಿಸಿದ್ದಾನೆ. ಕಳೆದ 25 ವರ್ಷಗಳಲ್ಲಿ ಗ್ರಾಮೀಣ ಭಾರತದ ಮಣ್ಣಿನ ಮಕ್ಕಳು ನಗರಗಳ ಸ್ಲಂ ನಿವಾಸಿಗಳಾಗಿ, ವಲಸೆ ಕಾರ್ಮಿಕರಂತೆ ಬದುಕು ಸವೆಸುತ್ತಿರುವ ದುರಂತ ವಾಸ್ತವವನ್ನು ಕೊರೊನಾ ನಮ್ಮ ಮುಂದೆ ತೆರೆದಿಟ್ಟಿದೆ. ನಗರೀಕರಣ ಮತ್ತು ಆಧುನಿಕ ಅಭಿವೃದ್ಧಿ ಪಥದ ವಾರಸುದಾರರು ಇಂದು ಕೃಷಿ ಮುಕ್ತ ಭೂಮಾಲೀಕರಾಗಿ ಶ್ರೀಮಂತರಾಗುತ್ತಿರುವುದನ್ನು ರಿಯಲ್ ಎಸ್ಟೇಟ್ ಮಾಫಿಯಾಗಳ ಮೂಲಕ, ಚುನಾವಣಾ ರಾಜಕಾರಣದ ಮೂಲಕ ನೋಡುತ್ತಲೇ ಇದ್ದೇವೆ. ಇದು ಮುಂದಿನ ದಿನಗಳ ಕರಾಳ ದಿಕ್ಸೂಚಿಯೂ ಆಗಿರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ.

ನವ ಉದಾರವಾದದ ಆರ್ಥಿಕ ಪಥದಲ್ಲಿ ಎಲ್ಲವೂ ಮಾರುಕಟ್ಟೆ ಸರಕುಗಳಾಗುತ್ತವೆ. ಭೂಮಿ, ಅರಣ್ಯ, ನೀರು ಮತ್ತು ಗಾಳಿ ಎಲ್ಲವೂ ಬಿಕರಿಯಾಗುವ ಪದಾರ್ಥಗಳಂತಾಗುತ್ತದೆ. ಈಗಾಗಲೇ ಗಣಿ ಉದ್ಯಮವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ಉದ್ಯಮಿಗಳಿಗೆ ಒಪ್ಪಿಸಿ ಈಶಾನ್ಯ ಮತ್ತು ಪೂರ್ವ ಭಾರತದ ಲಕ್ಷಾಂತರ ಆದಿವಾಸಿಗಳನ್ನು ಮೂಲ ನೆಲೆಯಿಂದ ಒಕ್ಕಲೆಬ್ಬಿಸಲಾಗಿದೆ. ತಮ್ಮ ನೆಲೆಯನ್ನೂ ಕಳೆದುಕೊಂಡು ನಿರ್ಗತಿಕರಾಗಿರುವ ಆದಿವಾಸಿಗಳು ಈ ಒಕ್ಕಲೆಬ್ಬಿಸುವಿಕೆಯ ವಿರುದ್ಧ ದನಿ ಎತ್ತಿದರೆ ಪ್ರಭುತ್ವದ ದೃಷ್ಟಿಯಲ್ಲಿ ನಕ್ಸಲರಾಗುತ್ತಾರೆ, ಇವರ ಹಕ್ಕೊತ್ತಾಯಗಳಿಗೆ ಬೆಂಗಾವಲಾಗಿ ನಿಂತ ಕಾರ್ಯಕರ್ತರು ಅರ್ಬನ್ ನಕ್ಸಲರಾಗುತ್ತಾರೆ. ಗಣಿ ಮಾಫಿಯಾ, ಭೂ ಮಾಫಿಯಾ ಮತ್ತು ಚುನಾವಣಾ ರಾಜಕಾರಣದ ವಾರಸುದಾರರು ಇಂದು ಕೃಷಿ ಭೂಮಿಯನ್ನು ಕಬಳಿಸುವ ಬಕಾಸುರರಂತೆ ಕಾಣುತ್ತಿದ್ದಾರೆ. ದೆಹಲಿಯ ರೈತ ಮುಷ್ಕರ ಈ ಅಪಾಯದ ವಿರುದ್ಧ ಮೂಡಿರುವ ಜನದನಿಯಾಗಿರುವುದನ್ನು ಗಮನಿಸಬೇಕಿದೆ.

ಈ ಒಕ್ಕಲೆಬ್ಬಿಸುವಿಕೆಯಿಂದ ನಗರ ಮತ್ತು ಪಟ್ಟಣಗಳಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದ್ದು ಸುಭದ್ರ ಜೀವನದ ಚಿಂತೆಯೇ ಇಲ್ಲದೆ ನಿತ್ಯ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಲಕ್ಷಾಂತರ ಶ್ರಮಜೀವಿಗಳು ನಗರದ ಸ್ಲಂಗಳಲ್ಲಿ, ಹೊರವಲಯಗಳಲ್ಲಿ ತಮ್ಮ ನಾಳೆಗಳನ್ನು ಎಣಿಸುತ್ತಿದ್ದಾರೆ. ಈ ಬೃಹತ್ ಸೇನೆಗೆ ಇನ್ನು ಕೆಲವೇ ವರ್ಷಗಳಲ್ಲಿ ಕೈಗಾರಿಕೆ ಮತ್ತು ಔದ್ಯೋಗಿಕ ಕ್ಷೇತ್ರದಿಂದ ಹೊರದೂಡಲ್ಪಡುವ ಬೃಹತ್ ಶ್ರಮಜೀವಿ ವರ್ಗವೂ ಸೇರ್ಪಡೆಯಾಗಲಿದೆ. ಏಳು ದಶಕಗಳ ಕಾಲ ಭಾರತದ ಶ್ರಮಿಕ ವರ್ಗ ಕಟ್ಟಿ ಬೆಳೆಸಿದ ಭವ್ಯ ಸೌಧಗಳನ್ನು ಒಂದೊಂದಾಗಿ ಕೆಡವಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ಲಕ್ಷಾಂತರ ಶ್ರಮಿಕರಿಗೆ ಬದುಕು ರೂಪಿಸುವ ಬೃಹತ್ ಔದ್ಯೋಗಿಕ ವಲಯ ರೈಲ್ವೆ, ರಸ್ತೆ ಸಾರಿಗೆ ಮತ್ತು ಜಲಸಾರಿಗೆ ಕಾರ್ಪೋರೇಟ್ ಸಾಮ್ರಾಜ್ಯದ ಪಾಲಾಗಲು ಸಿದ್ಧತೆಗಳು ನಡೆದಿವೆ. ಹಣಕಾಸು ಬಂಡವಾಳದ ಆಧಿಪತ್ಯಕ್ಕೆ ಸಾರಿಗೆ ಮತ್ತು ಸಂಪರ್ಕ ವಲಯಗಳು ಪ್ರಮುಖ ಸಾಧನಗಳಾಗಿದ್ದು, ಈ ಎರಡೂ ಕ್ಷೇತ್ರಗಳ ಖಾಸಗೀಕರಣದ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ.

ಉತ್ಪಾದನಾ ವಲಯದಲ್ಲಿ ಗುಂಡುಸೂಜಿಯಿಂದ ಬೃಹತ್ ಯುದ್ಧೋಪಕರಣಗಳವರೆಗೆ ಯಂತ್ರೋಪಕರಣಗಳನ್ನು, ಸಲಕರಣೆಗಳನ್ನು, ಉಪಕರಣಗಳನ್ನು ಉತ್ಪಾದಿಸುತ್ತಾ ಈ ದೇಶದ ಅರ್ಥವ್ಯವಸ್ಥೆಗೆ ಸುಭದ್ರ ಬುನಾದಿಯನ್ನು ನಿರ್ಮಿಸಿದ ಶ್ರಮಿಕ ವರ್ಗ ತಾವು ನಿರ್ಮಿಸಿದ ಈ ಸ್ಥಾವರಗಳು ಕುಸಿಯುತ್ತಿರುವುದನ್ನು ಆತಂಕದಿಂದ ಗಮನಿಸುತ್ತಿದೆ. ಈ ಹಾದಿ ಸುಗಮವಾಗಲೆಂದೇ ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ನಾಲ್ಕು ಸಂಹಿತೆಗಳನ್ನು ರೂಪಿಸಲಾಗಿದೆ. ತನ್ನ ದುಡಿಮೆಯ ಸ್ವಾತಂತ್ರ‍್ಯವನ್ನೂ ಕಳೆದುಕೊಳ್ಳಲಿರುವ ಶ್ರಮಿಕ ಮತ್ತೊಮ್ಮೆ ಬಂಡವಾಳದ ಸಂಕೋಲೆಗಳಲ್ಲಿ ಸಿಲುಕುವ ದಿನಗಳು ಸನಿಹವಾಗುತ್ತಿದೆ. ಸಂಭಾವ್ಯ ‘ಆದರ್ಶಭಾರತ’ದಲ್ಲಿ ಕಾರ್ಪೋರೇಟ್ ಬಂಡವಾಳ ಭಾರತದಲ್ಲಿ ಸಾಂಪ್ರದಾಯಿಕ ಸಂಕೋಲೆಗಳಿಲ್ಲದ ಜೀತಪದ್ಧತಿಯನ್ನು ಮರುಸ್ಥಾಪಿಸುತ್ತದೆ.

ತಮ್ಮ ಸುಭದ್ರ ನೆಲೆ ಕಳೆದುಕೊಳ್ಳುತ್ತಿರುವ ಕೆಳಸ್ತರದ ಶ್ರಮಿಕ ವರ್ಗದ ಅಸ್ತಿತ್ವವನ್ನು ಮತ್ತು ಶ್ರಮಶಕ್ತಿಯ ಮೌಲ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಹಿತವಲಯದ ಕಾರ್ಮಿಕ ವರ್ಗ ಮುಂಚೂಣಿ ನಾಯಕತ್ವ ವಹಿಸುವುದು ಇಂದಿನ ತುರ್ತು. ಹಣಕಾಸು ಮತ್ತು ವಿಮಾ ವಲಯದ ಈ ಕಾರ್ಮಿಕ ವರ್ಗವೂ ಸಹ ತಮ್ಮ ಸಾಂಸ್ಥಿಕ ನೆಲೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಆದರೆ ಈ ಅಪಾಯದ ಅರಿವೇ ಇಲ್ಲದಂತೆ ಉತ್ಪಾದನಾ ವಲಯದ ಶ್ರಮಿಕರ ಕರಾಳ ಭವಿಷ್ಯವನ್ನು ಗ್ರಹಿಸುವುದರಲ್ಲಿ ವಿಫಲವಾಗುತ್ತಿದೆ. ಇದು ಭಾರತದ ಸಂಘಟಿತ ಕಾರ್ಮಿಕ ಚಳುವಳಿಯ ಮುಂದಿರುವ ಬೃಹತ್ ಸವಾಲು. ಶ್ರಮಜೀವಿಗಳ ಕ್ರಾಂತಿಯ ಮುಂದಾಳತ್ವ ವಹಿಸಬೇಕಾದ ಕಾರ್ಮಿಕ ವರ್ಗ ಇಂದು ತನ್ನದೇ ಭವಿಷ್ಯದ ಹಾದಿಗಳ ಅಸ್ಪಷ್ಟತೆಯನ್ನು ಗ್ರಹಿಸದಂತಾಗಿರುವುದು ದುರಂತ.

ಅಗಸ್ಟ್ 15 ರಂದು ಕೆಂಪುಕೋಟೆಯಿಂದ ಮೂಡಿಬಂದ ‘ಆದರ್ಶಭಾರತʼದ ಕನಸಿನ ಲೋಕದಲ್ಲಿ ಭಾರತದ ಕೃಷಿ ಭೂಮಿ, ಆಹಾರ ಉತ್ಪನ್ನ, ಖನಿಜ ಸಂಪತ್ತು, ನೈಸರ್ಗಿಕ ಸಂಪನ್ಮೂಲಗಳು, ಜಲಸಂಪತ್ತು, ಅರಣ್ಯ ಸಂಪತ್ತು, ಉತ್ಪಾದನೆಯ ಮೂಲಗಳು, ಸಾರಿಗೆ ವ್ಯವಸ್ಥೆ, ಶ್ರಮಶಕ್ತಿಯ ಮೂಲಗಳು, ಶ್ರಮಿಕರ ಮೂಲ ನೆಲೆಗಳು ಮತ್ತು ಉತ್ಪಾದನೆಯ ಸಾಧನಗಳು, ಇವೆಲ್ಲವೂ ಕಾರ್ಪೋರೇಟ್ ಮಾರುಕಟ್ಟೆ ಅಧಿಪತಿಗಳ ಒಡೆತನಕ್ಕೆ ಒಳಪಟ್ಟಿರುತ್ತವೆ. ಇದು ‘ಆತ್ಮನಿರ್ಭರ’ ಭಾರತ ‘ಆದರ್ಶಭಾರತ’ಕ್ಕಾಗಿ ರೂಪಿಸಿರುವ ನೀಲನಕ್ಷೆ. ನವ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿಯ ದಾಳಿಯಲ್ಲಿ ಭಾರತ ಮತ್ತೊಮ್ಮೆ ಮಾರುಕಟ್ಟೆ ಬಂಡವಾಳದ ಸಂಕೋಲೆಗಳಲ್ಲಿ ಸಿಲುಕಲು ಸಿದ್ಧವಾಗುತ್ತಿದೆ.

ಭಾರತದ ಪ್ರಭುತ್ವ ಈ ಹಾದಿಗೆ ಅಡ್ಡಿಯಾಗುವ ದನಿಗಳನ್ನು ದಮನಿಸಲು ಕರಾಳ ಶಾಸನಗಳ ಮೊರೆ ಹೋಗುತ್ತದೆ. ಈ ದೇಶದ ಮತೀಯವಾದಿ ಸಾಂಸ್ಕೃತಿಕ ಫ್ಯಾಸಿಸ್ಟ್ ರಾಜಕಾರಣ ಜಾತಿ ಪ್ರಣೀತ ಸಮಾಜವನ್ನು ಆಶ್ರಯಯಿಸುತ್ತದೆ. ಭಾರತದ ಶ್ರಮಿಕವರ್ಗ ಈ ತೂಗುಗತ್ತಿಯ ಅಡಿಯಲ್ಲೇ ತನ್ನ ಅಸ್ತಿತ್ವ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ. ಜಾತಿ, ಧರ್ಮ ಮತ್ತು ಭಾಷಿಕ ಸಂಕೋಲೆಗಳನ್ನು ತೊರೆದು ಒಂದು ಮಾನವೀಯ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಭಾರತದ ಶ್ರಮಜೀವಿಗಳು ರೈತಾಪಿಯೊಂದಿಗೆ ಕೈಜೋಡಿಸಿ ಸಮ ಸಮಾಜದ ನಿರ್ಮಾಣದತ್ತ ಮುನ್ನಡೆಯಬೇಕಿದೆ. ಈ ಶ್ರಮಿಕ ವರ್ಗ ಹೊತ್ತ ಸೈಜುಗಲ್ಲುಗಳನ್ನೇ ಕಾರ್ಪೋರೇಟ್ ಮಾರುಕಟ್ಟೆಯ ಸಂತೆಮಾಳಗಳಲ್ಲಿ ಹಾಸುಗಲ್ಲುಗಳಂತೆ ಬಳಸಿ ನವ ಉದಾರವಾದದ ನೂತನ ಭಾರತವನ್ನು ನಿರ್ಮಿಸಲು ಭಾರತದ ಆಳುವ ವರ್ಗಗಳು ಸಜ್ಜಾಗುತ್ತಿವೆ.

ನಾವು ಸ್ವತಂತ್ರರಾಗಿದ್ದೇವೆ ಆದರೆ ಶೋಷಣೆಯಿಂದ ವಿಮೋಚನೆ ಪಡೆದಿದ್ದೇವೆಯೇ? ಯೋಚಿಸೋಣ.

Donate Janashakthi Media

Leave a Reply

Your email address will not be published. Required fields are marked *