ತುಳುನಾಡಿನ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ(88) ಇನ್ನಿಲ್ಲ

ದಕ್ಷಿಣ ಕನ್ನಡ: ಹಿರಿಯ ಸಾಹಿತಿ ಪ್ರೊ. ಅಮೃತ ಸೋಮೇಶ್ವರ ಜಿಲ್ಲೆಯ ಉಳ್ಳಾಲ ಬಳಿಯ ಸೋಮೇಶ್ವರದ ತಮ್ಮ ನಿವಾಸ “ಒಲುಮೆ”ಯಲ್ಲಿ ಶನಿವಾರ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ತುಳುನಾಡಿನ ಹಿರಿಯ ಜಾನಪದ ವಿದ್ವಾಂಸರಾಗಿರುವ ಅವರು ಕಾವ್ಯ, ಸಣ್ಣಕತೆ, ನಾಟಕ, ಯಕ್ಷಗಾನ, ವಿಮರ್ಶೆ ಮತ್ತು ಜಾನಪದ ಕ್ಷೇತ್ರದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ.

ಮಂಗಳೂರು ಸಮೀಪದ ಕೋಟೆಕಾರು ಗ್ರಾಮದ ಅಡ್ಕ ನಿವಾಸಿಯಾಗಿದ್ದ ಅಮೃತ ಸೋಮೇಶ್ವರ ಅವರು 1935 ಸೆಪ್ಟೆಂಬರ್ 27‌ ರಂದು ಜನಿಸಿದರು. ತಮ್ಮ ಬಾಲ್ಯವನ್ನು ಮುಂಬೈಯಲ್ಲಿ ಕಳೆದ ಅವರು, ಪ್ರಾಥಮಿಕ ಶಿಕ್ಷಣವನ್ನು ಕೋಟೆಕಾರುನಲ್ಲಿರುವ ಸ್ಟೆಲ್ಲಾ ಮೇರಿಸ್ ಮತ್ತು ನಂತರ ಪ್ರೌಢಶಾಲೆಯನ್ನು ಇಲ್ಲಿನ ಆನಂದಾಶ್ರಮದಲ್ಲಿ ಮುಗಿಸಿದರು. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಅಭ್ಯಾಸ ಮಾಡಿದ ಅವರು, ಖಾಸಗಿಯಾಗಿ ಓದಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ ಪಡೆದರು.

ಇದನ್ನೂ ಓದಿ: ಕಲ್ಕಡ್ಕ ಪ್ರಭಾಕರ್ ಭಟ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ !

ಆರಂಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು, ನಂತರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರ್ಷ ಕೆಲಸ ಮಾಡಿದ್ದಾರೆ. 1968ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯವನ್ನು ನಿರ್ವಹಿಸಿದ ಅವರು 1993 ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಅವರು ಕೆಲವು ಕಾಲ ಕಾರ್ಯನಿರ್ವಹಿಸಿದ್ದಾರೆ.

ಕನ್ನಡ ಸಂಘ, ಯಕ್ಷಗಾನ ಸಂಘದಂತ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗೆಗಾಗಿ ಅವರು ಶ್ರಮಿಸಿದ್ದು, ತುಳುನಾಡಿನ ಸಂಸ್ಕ್ರತಿ ಮತ್ತು ಕಲೆಯ ಬಗೆಗೆ ವಿಶೇಷ ಒಲವುಳ್ಳವಗಾಗಿದ್ದರು. ಸಣ್ಣಕತೆಗಳ ಸಂಕಲನಗಳಾದ ಎಲೆಗಿಳಿ, ರುದ್ರಶಿಲೆ ಸಾಕ್ಷಿ , ಕೆಂಪು ನೆನಪು, ಕವನ ಸಂಕಲನಳಾದ ವನಮಾಲೆ, ಭ್ರಮಣ ಉಪ್ಪು ಗಾಳಿ, ತೀರದ ತೆರೆ (ಕಾದಂಬರಿ), ಯಕ್ಷಗಾನ ಕೃತಿ ಸಂಪುಟ, ತುಳು ಪಾಡ್ದನದ ಕಥೆಗಳು, ಅವಿಲು, ತುಳು ಬದುಕು, ಯಕ್ಷಗಾನ ಹೆಜ್ಜೆಗುರುತು, ಭಗವತಿ ಆರಾಧನೆ, ಮೋಯ-ಮಲೆಯಾಳ ನಿಘಂಟು ಮೊದಲಾದ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ‘ತಂಬಿಲ’, ‘ರಂಗಿತ’ ಕವನ ಸಂಗ್ರಹ, ‘ಗೋಂದೋಲ್’, ‘ರಾಯ ರಾವುತೆ’ ಮೊದಲಾದ ನಾಟಕಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ.

ಹಲವಾರು ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ, ಸಂಶೋಧನಾಸಕ್ತರಿಗೆ ಸದಾ ಕಾಲ ಪ್ರೇರಕ, ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದ ಅವರಿಗೆ ಮಂಗಳೂರು‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಇದನ್ನೂ ಓದಿ: ಪ್ರತಿಭಟನೆ ಹತ್ತಿಕ್ಕುತ್ತಿರುವ ರಾಜ್ಯ ಸರ್ಕಾರ – ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯಲು ಆಗ್ರಹ

ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ‌ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ನೇ ಸಾಲಿನ “ಗೌರವಶ್ರೀ” ಪ್ರಶಸ್ತಿ, ಮಣಿಪಾಲ ಅಕಾಡೆಮಿಯ ಮಾಹೆ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಯಿಂದ ಸಂಘ ಸಂಸ್ಥೆಗಳ ಸನ್ಮಾನದಿಂದ ಪುರಸ್ಕೃತರಾಗಿದ್ದರು.

ಮೃತ ಅಮೃತ ಸೋಮೇಶ್ವರ ಅವರು ಪತ್ನಿ ನರ್ಮದಾ, ಮಕ್ಕಳಾದ ಚೇತನ್, ಜೀವನ್ ಸಹಿತ ಅಪಾರ ಬಂಧುಗಳನ್ನು ಅಗಲಿದ್ದು, ಸೋಮೇಶ್ವರ ಪುರಸಭೆ ಕಚೇರಿ ಬಳಿಯ ಅವರ ನಿವಾಸದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಜನವರಿಗೆ 7ರ ರವಿವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಹಿರಿಯ ವಿಧ್ವಾಂಸರ ನಿಧನಕ್ಕೆ ನಾಡಿನ ಹಲವಾರು ಗಣ್ಯರು, ಜನಪರ ಸಂಘಟನೆಗಳು ಸಂತಾಪ ಸೂಚಿಸಿದ್ದಾರೆ. ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಗುರುವಿನ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದು, “ಅಮೃತ ಸೋಮೇಶ್ವರ ಅವರು ತನ್ನ ಸುತ್ತ ನಡೆಯುತ್ತಿದ್ದ ಯಾವುದೇ ಘಟನೆಗಳಿಗೆ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಲೇ ಇದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕುಸ್ತಿಪಟುಗಳ ವಿರುದ್ಧದ ಲೈಂಗಿಕ ಪ್ರಕರಣ | ಬ್ರಿಜ್ ಭೂಷಣ್ ವಿರುದ್ಧ ವಾದ ಪುನರಾರಂಭಿಸಿದ ದೆಹಲಿ ಪೊಲೀಸರು

“ಹಳಗನ್ನಡ, ನಡುಗನ್ನಡ, ಹೊಸಗನ್ನಡ, ತುಳು ಭಾಷೆ, ಯಕ್ಷಗಾನ, ಹರಿಕತೆ, ನಾಟಕ, ಸಂಘಟನೆ, ಪ್ರೀತಿ, ವಾತ್ಸಲ್ಯ, ಪ್ರೇಮ, ಕಡಲು, ಮೀನು, ಭಗವತಿಗಳು, ಭಾಷಣ, ಪಯಣ, ಕ್ಷೇತ್ರ ಕಾರ್ಯ, ಶೋಷಣೆ, ತಮಾಷೆ.. ಹೀಗೆ ಅವರಿಂದ ಕಲಿತದ್ದು ಅಪಾರ. ತರಗತಿಯ ಒಳಗೆ ಸಾಹಿತ್ಯದ ಪಠ್ಯಗಳನ್ನು ಬಗೆದು ತೋರಿಸುವ ಅವರು ಹೊರಗಡೆಗೆ ಜಾನಪದದ ಬಗೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಇದರಿಂದಾಗಿ ನಮಗೆ ಸಂಸ್ಕೃತಿಯ ಭಿನ್ನ ಮುಖಗಳ ದರ್ಶನವಾಗುತ್ತಿತ್ತು. ನಾವೆಲ್ಲಾ ತುಳುನಾಡಿನ ನಿವಾಸಿಗಳೇ ಹೌದಾದರೂ ನಮ್ಮ ಕಣ್ಣಿಗೆ ಬೀಳದ ಅನೇಕ ಸಂಗತಿಗಳನ್ನು ಅವರು ಆಗಾಗ ತೆರೆದು ತೋರಿಸುತ್ತಲೇ ಬರುತ್ತಿದ್ದರು” ಎಂದು ಬಿಳಿಮಲೆ ಅವರು ಹೇಳಿದ್ದಾರೆ.

ಸಂಸ್ಕೃತಿ ಚಿಂತಕ ರಹಮತ್ ತರಿಕೆರೆ ಅವರು, ಅಮೃತ ಸೋಮೇಶ್ವರ ಅವರ ನಿಧನಕ್ಕೆ, ವಿದ್ವತ್ಕುಲಾರ್ಕನುಂ ಅರ್ಕನುಂ ಅಸ್ತಂಗೈದಿಹರ್ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಬರೆದಿರುವ ಅವರು, “ಅವರ ‘ಭಗವತಿ ಆರಾಧನೆ’ ನನ್ನ ಪ್ರಿಯವಾದ ಪುಸ್ತಕ. ಸಂಜೆ ಮನೆಯ ಹಿತ್ತಲಲ್ಲಿರುವ ಕಡಲಿಗೆ ಹೋಗಿ ಕಲ್ಲರೆಯ ಮೇಲೆ‌ ಕೂರುವುದು ಅಮೃತರ ಅಭ್ಯಾಸ.‌ ಆದಿನ ಮೊರೆವ ಕಡಲು ಶಾಂತವಾಗುತ್ತಿತ್ತು. ಸೂರ್ಯ ಪಡುವಣದಲ್ಲಿ ಅಸ್ತಂಗತನಾಗುತ್ತಿದ್ದ. ಅವನ ಹೊಂಬೆಳಕು ಮೊಗದ ಮೇಲೆ ಬಿದ್ದು ಅಮೃತರೂ ಕೆಂಪಾಗಿದ್ದರು. ಏನನ್ನೊ ಧೇನಿಸುತ್ತಿದ್ದರು. ಘನತೆವೆತ್ತ ಮಾನುಷ ಮತ್ತು ವಿದ್ವಾಂಸ. ಈಗ ಎಲ್ಲವೂ ನೆನಪು.” ಎಂದು ಅವರೊಂದಿಗಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಸೇವೆ ಖಾಯಂಗೊಳಿಸಿ’ | ಬೆಂಗಳೂರಿನಲ್ಲಿ ಅತಿಥಿ ಉಪನ್ಯಾಸಕರ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ

ಡಿವೈಎಫ್‌ಐ ಕರ್ನಾಟಕ ಅಗಲಿತ ಚೇತನಕ್ಕೆ ಸಂತಾಪ ಸೂಚಿಸಿದ್ದು, ತುಳುನಾಡಿನ ಸಾಕ್ಷಿ ಪ್ರಜ್ಞೆ, ಬಹುದೊಡ್ಡ ವಿದ್ವಾಂಸ, ಜನಪದ ಅಧ್ಯಯನದ ಮೇರುಶಿಖರ ಪ್ರೊ. ಅಮೃತ ಸೋಮೋಶ್ವರರ ಅಗಲಿಕೆ ತುಳುನಾಡಿನ ಬೌದ್ದಿಕ ವಲಯದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂದು ಹೇಳಿದೆ.

“ಅಮೃತ ಸೋಮೇಶ್ವರ ಅವರು ಡಿವೈಎಫ್ಐ, ಎಸ್ಎಫ್ಐ ನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬೆನ್ನು ತಟ್ಟಿದ್ದರು, ಎಡ, ಜನಪರ ಸಂಘಟನೆಗಳ ಹಿತೈಷಿಯಾಗಿದ್ದರು. ಸೌಮ್ಯ ವ್ಯಕ್ತಿತ್ವ ಶ್ರೀಯುತರು ಪ್ರಶಸ್ತಿ, ಸ್ಥಾನಮಾನ, ಅಧಿಕಾರದ ಹಿಂದೆ ಯಾವತ್ತೂ ಹೋಗಿರಲಿಲ್ಲ, ಅದಕ್ಕಾಗಿ ಆಸೆಪಟ್ಟಿರಲಿಲ್ಲ. ತಮ್ಮ ಸುತ್ತಲೂ ಇದ್ದ ವಿದ್ವಾಂಸ ವಲಯ ರಾಜಿಕೋರತನ, ವ್ಯವಸ್ಥೆಯ ಬೆದರಿಕೆಯಿಂದ ಮೌನಕ್ಕೆ ಜಾರಿದಾಗಲೂ ಅಮೃತರು ತನ್ನ ಸೈದ್ದಾಂತಿಕ ನಿಲುವುಗಳ ವಿಷಯದಲ್ಲಿ ವಜ್ರದಷ್ಟು ಕಠಿಣವಾಗಿದ್ದರು. ಅಮೃತರು ತಮ್ಮ ಅಧ್ಯಯನ, ಸಾಧನೆಗಳ ಮೂಲಕ ಅಮರರಾಗಿರುತ್ತಾರೆ” ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದೆ.

ವಿಡಿಯೊ ನೋಡಿ: ಹಿಟ್ & ರನ್ ಪ್ರಕರಣಗಳ ಹೊಸ ಕಾನೂನಿಗೇಕೆ ಇಷ್ಟು ವಿರೋಧ? ಚಾಲಕರಿಗೆ ಇದು ತೂಗುಕತ್ತಿಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *