ದಾವಣಗೆರೆ ಸೀಮೆಗೆ ಕಾಲಿಟ್ಟ ಹೊಸತರಲ್ಲಿ..

 ಮಲ್ಲಿಕಾರ್ಜುನ ಕಡಕೋಳ

ದಾವಣಗೆರೆ ಬಸ್ ಸ್ಟ್ಯಾಂಡ್ ತುಂಬೆಲ್ಲ ಸಣ್ಣಪುಟ್ಟ ವ್ಯಾಪಾರದ ಕೈಗಾಡಿಗಳು. ತೂರಿ ಬರುವ ಆಟೋಗಳು. ಗಿಜಗುಡುವ ಜನಸಂದಣಿ. ಸದೃಢ ನರಕ ಸದೃಶದ ಶೌಚಾಲಯ. ಅದಕ್ಕಾಗಿ ತಾಮುಂದು, ನಾ ಮುಂದೆಂಬ ಸರತಿ ಸಾಲು. ಮಹಿಳೆಯರಂತೂ ಮೂಗು ಮುಚ್ಚಿಕೊಂಡೇ ಕೈಯಲ್ಲಿ ಜೀವ ಹಿಡಕೊಂಡವರಂತೆ ನಿಂತಿದ್ದರು. ಮೂತ್ರಾಲಯಕ್ಕೆ ಹೊಂದಿಕೊಂಡಂತೆ ಹೆಸರು ಮರೆತು ಹೋದ ಗವ್ವೆನ್ನುವ ಹೊಟೆಲ್. ಅದರ ಬಾಜೂಕೆ ಬಳೆ ಅಂಗಡಿ ಮತ್ತು ಬಾಗಿಲುರಹಿತ ಇತರೆ ಸಣ್ಣ ಸಣ್ಣ ಗೂಡಂಗಡಿಗಳು. ಇಂತಹದ್ದೊಂದು ಬಸ್ ನಿಲ್ದಾಣದಲ್ಲಿ ಸಣ್ಣದೊಂದು ಸೆಡ್ಡಿನಲ್ಲಿ ಬಸ್ ನಿಲ್ದಾಣಾಧಿಕಾರಿ ಕಚೇರಿ. ಅದರ ಬಾಜೂ ಲೋಕಲ್ ಪತ್ರಿಕೆಯ ಕಚೇರಿ. ಅದರ ಪಕ್ಕ ಹೂವಿನ ಅಂಗಡಿ. ಇದು ನಾ ಕಂಡ ಅಂದಿನ ದಾವಣಗೆರೆಯ ಏಕೈಕ ಬಸ್ ನಿಲ್ದಾಣದ ಚಿತ್ರಣ

ಆರೋಗ್ಯ ಇಲಾಖೆಯ ಸರ್ಕಾರಿ ನೌಕರಿಗೆಂದು ಮೊಟ್ಟಮೊದಲ ಬಾರಿಗೆ ನಾನು ದಾವಣಗೆರೆಗೆ ಬಂದಾಗ ಓಂದೇಒಂದು ಬಸ್ ನಿಲ್ದಾಣ ಇತ್ತು. ಅದು ಸರಕಾರಿ ಮತ್ತು ಸಾಹುಕಾರಿ ಎರಡೂ ಬಸ್ಸುಗಳು ನಿಲ್ಲುವ ನಿಲ್ದಾಣ ಆಗಿತ್ತು. ಜೇವರ್ಗಿಯಿಂದ ಕೆ. ಎಸ್. ಆರ್. ಟಿ. ಸಿ. ಬಸ್ಸಲ್ಲಿ ದಾವಣಗೆರೆಗೆ ಅವತ್ತು ಬಂದಿಳಿದಾಗ ಮುಂಜಾನೆ ಹತ್ತುಗಂಟೆ. ನಾನು ಕುಂತ ಕೆಂಪು ಬಸ್ಸು ಹಿಂದಿನ ರಾತ್ರಿ ಎರಡು ಗಂಟೆ ಸುಮಾರಿಗೆ ಗಂಗಾವತಿ ಹತ್ತಿರ ಚಹ ಕುಡಿಯಲು ನಿಲ್ಲಿಸಿದಾಗ ಕಂಡಕ್ಟರ್ ಗೆ ” ದಾವಣಗೆರೆ ಇನ್ನೆಷ್ಟು ದೂರ” ಅಂತ ಕೇಳಿದೆ. “ಜೇವರ್ಗಿಯಿಂದ ಇಲ್ಲಿಗೆ ಬಂದಷ್ಟು ದೂರ” ಅಂದ. ಹಾಗೆ ಅನ್ನುತ್ತಿದ್ದಂತೆ ಗಾಬರಿಪಟ್ಟು “ಅರ್ಧ ರೊಕ್ಕ ಮುರ್ಕೊಂಡು ಹದಿನಾಲ್ಕು ರುಪಾಯಿ ಕೊಟ್ಟಬಿಡ್ರಿ ನಾನು ಹೊಳ್ಳಿ ನಮ್ಮೂರಿಗೆ ಹೋಗ್ತೀನಿ, ದೂರದ ದೇಶ ದಾವಣಗೆರೆಗೆ ನಾನು ಬರಲ್ಲ” ಅಂದಿದ್ದೆ.

ಹೃದಯವಂತ ಕಂಡಕ್ಟರ್ ಸಂಬಾಳಿಸಿ ಎಲ್ಲ ವಿಚಾರಿಸಿದ. ನಾನು ಸರ್ಕಾರದ ನೌಕರಿ ಮಾಡಲು ಹೊರಟ ವಿಷಯ ಕೇಳಿ ಅದರಲ್ಲೂ ನನಗೆ ಆರಂಭಕ್ಕೇ ಮುನ್ನೂರಾ ನಲವತ್ತು ರೂಪಾಯಿ ಪಗಾರವೆಂದರೆ ಬಹಳ ದೊಡ್ಡ ನೌಕರಿಯೇ ಇರಬಹುದೆಂದು ಕಂಡಕ್ಟರ್ ಅಂದುಕೊಂಡಿದ್ದ. ಅಂವ ನನಗೆ ಮತ್ತೊಂದು ಹಾಫ್ ಕೇಟಿ ಕುಡಿಸಿ ದಾವಣಗೆರೆ ಬಸ್ ನಿಲ್ದಾಣದ ಮಟ ಜತನದಿಂದ ಕರ್ಕೊಂಡು ಬಂದಿದ್ದ. ಅವನ ಹೆಸರು ಅಮರೇಶ ಕಟ್ಟೀಮನಿ ಅಂತ ನನಗೀಗಲೂ ಬರೋಬ್ಬರಿ ನೆನಪಿದೆ. ಅವತ್ತು ನಾನೇನಾದರೂ ಗಂಗಾವತಿಯಿಂದ ಹೊಳ್ಳಿ ನಮ್ಮೂರಿಗೆ ಹೋಗಿದ್ರೆ ನನಗೆ ಇವತ್ತು ದಾವಣಗೆರೆ ಕುರಿತು ಕಳ್ಳುಬಳ್ಳಿಯಂತಹ ಸುಮಧುರ ಸಂಬಂಧವೇ ಇರ್ತಿರಲಿಲ್ಲ.

ಇದನ್ನೂ ಓದಿ:“ಜಾಗತೀಕರಣ’ವು ಕಳಚಿ ಹೋಗುತ್ತಿದೆಯೇ?

ಬಿಳಿ ಪಾಯಜಾಮ, ಬಗಲು ಕಿಸೆಯ ಮೂರುಗುಂಡಿಯ ಬಿಳಿಅಂಗಿ, ತಲೆಮೇಲೆ ನಾಶಿಬಣ್ಣದ ರಟ್ಟಿನ ಟೊಪ್ಪಿಗೆ. ಹವಾಯಿ ಕಾಲ್ಮರಿ. ಇದು ನನ್ನ ಅಂದಿನ ಉಡುಗೆ ತೊಡುಗೆ. ಹಿಂದಿನ ದಿನ ನಾನು ಹಚ್ಚಿಕೊಂಡಿದ್ದ ವಿಭೂತಿ ತುಸು ಮಸುಕಾಗಿತ್ತು. ಕೈ ಕಸೂತಿಯಲ್ಲಿ ಸಂಜೆಮ್ಮಕ್ಕ ಹಾಕಿದ ಕೈಹೆಣಿಕೆ ಕೈಚೀಲ. ನಾನು ಮೈ ಮೇಲೆ ಉಟ್ಟಂತಹದೇ ಇನ್ನೊಂದು ಜೊತೆ ಬಟ್ಟೆ, ರೊಟ್ಟಿಬುತ್ತಿ ಬಿಟ್ಟರೆ ಕೈಚೀಲದಲ್ಲಿ ನೌಕರಿ ಆರ್ಡರ್ ಇತ್ತು. ಅದೇಕೋ ಬಹಳಷ್ಟು ಮಂದಿ ಬಂದೂ ಬಂದು ಕಲ್ಲು ಬೆಂಚ್ ಮೇಲೆ ಕುಂತ ನನ್ನನ್ನು ಮಾತಾಡಿಸುತ್ತಿದ್ದರು. ಅದೇನೋ ಅವರಿಗೆ ನನ್ನ ವೇಷಭೂಷಣ ಕೊಂಚ ಆಕರ್ಷಕ‌ ಅನಿಸಿ ಮಾತಾಡಿಸುತ್ತಿದ್ದರೆಂದು ಒಳಗೊಳಗೆ ಮುಜುಗರ. ಒಂದು ಬಗೆಯ ಅಪ್ರಸ್ತುತ ಭಯ. ಮೇಲಾಗಿ ಕಂಡಕ್ಟರ್ ಕಟ್ಟೀಮನಿ ಈ ಕಡೆ ಖಾಸಗಿ ಬಸ್ ಇರ್ತವೆ; ಹೊಸ ಊರುಗಳು ಹುಷಾರಾಗಿ ಜಿಲ್ಲಾಕೇಂದ್ರ ಚಿತ್ರದುರ್ಗಕ್ಕೆ ಹೋಗಿ ಡ್ಯುಟಿ ರಿಪೋರ್ಟ್ ಮಾಡಿಕೊಳ್ಳಲು ಗೈಡ್ ಮಾಡಿದ್ದನ್ನು ನಾನು ಮರೆತಿರಲಿಲ್ಲ.

ದಾವಣಗೆರೆ ಬಸ್ ಸ್ಟ್ಯಾಂಡ್ ತುಂಬೆಲ್ಲ ಸಣ್ಣಪುಟ್ಟ ವ್ಯಾಪಾರದ ಕೈಗಾಡಿಗಳು. ತೂರಿ ಬರುವ ಆಟೋಗಳು. ಗಿಜಗುಡುವ ಜನಸಂದಣಿ. ಸದೃಢ ನರಕ ಸದೃಶದ ಶೌಚಾಲಯ. ಅದಕ್ಕಾಗಿ ತಾಮುಂದು, ನಾ ಮುಂದೆಂಬ ಸರತಿ ಸಾಲು. ಮಹಿಳೆಯರಂತೂ ಮೂಗು ಮುಚ್ಚಿಕೊಂಡೇ ಕೈಯಲ್ಲಿ ಜೀವ ಹಿಡಕೊಂಡವರಂತೆ ನಿಂತಿದ್ದರು. ಮೂತ್ರಾಲಯಕ್ಕೆ ಹೊಂದಿಕೊಂಡಂತೆ ಹೆಸರು ಮರೆತು ಹೋದ ಗವ್ವೆನ್ನುವ ಹೊಟೆಲ್. ಅದರ ಬಾಜೂಕೆ ಬಳೆ ಅಂಗಡಿ ಮತ್ತು ಬಾಗಿಲುರಹಿತ ಇತರೆ ಸಣ್ಣ ಸಣ್ಣ ಗೂಡಂಗಡಿಗಳು. ಇಂತಹದ್ದೊಂದು ಬಸ್ ನಿಲ್ದಾಣದಲ್ಲಿ ಸಣ್ಣದೊಂದು ಸೆಡ್ಡಿನಲ್ಲಿ ಬಸ್ ನಿಲ್ದಾಣಾಧಿಕಾರಿ ಕಚೇರಿ. ಅದರ ಬಾಜೂ ಲೋಕಲ್ ಪತ್ರಿಕೆಯ ಕಚೇರಿ. ಅದರ ಪಕ್ಕ ಹೂವಿನ ಅಂಗಡಿ. ಇದು ನಾ ಕಂಡ ಅಂದಿನ ದಾವಣಗೆರೆಯ ಏಕೈಕ ಬಸ್ ನಿಲ್ದಾಣದ ಚಿತ್ರಣ ಅಷ್ಟಕ್ಕೆ ಮುಗಿಯದು.

ತಿಪ್ಪೇಸ್ವಾಮಿ, ತೀರ್ಥರಾಮೇಶ್ವರ, ಗಜಾನನ, ಜಯಪದ್ಮ ಮುಂತಾದ ಹೆಸರುಗಳುಳ್ಳ ಖಾಸಗಿ ಬಸ್ಸುಗಳ ದರ್ಬಾರ. ಸೂಳೆಕೆರೆ, ಸಂತೆಬೆನ್ನೂರು, ಚನ್ಗಿರಿ, ಶಿಮೊಗ್ಗ, ದುರ್ಗ ದುರ್ಗ ಅಂತ ಏಜೆಂಟರು ಹೆಸರಿನ ಖಾಸಗಿ ಕಂಡಕ್ಟರುಗಳು ಪ್ರಯಾಣಿಕರನ್ನು ಕೂಗಿ ಕರೆಯೋದು ನನಗೆ ವಿಚಿತ್ರ ಅನಿಸುತ್ತಿತ್ತು. ಇದೆಲ್ಲವು ಅದೇ ಮೊದಲ ಬಾರಿಗೆ ನನ್ನ ಅನುಭವಕ್ಕೆ ಬಂದುದು. ನಮ್ಮ ಕಡೆಗೆ ಖಾಸಗಿ ಬಸ್ಸುಗಳು ಇರಲೇ ಇಲ್ಲ. ನಾನು ಎಳನೀರು ಕಂಡದ್ದು ಅದೇ ಮೊದಲು. ಕೊಚ್ಚಿ ಹಾಕಿದ ಎಳನೀರು ಬುರುಡೆ ರಾಶಿ ಕಂಡು ಅವಾಕ್ಕಾಗಿ ಹೋಗಿದ್ದೆ. ಹೌದು ನಮಗೆ ಟೆಂಗಿನಕಾಯಿ ಪರಿಚಯ. ಎಳನೀರು ಪರಿಚಯ ಇರಲಿಲ್ಲ. ನಮ್ಮದು ಬಯಲಿಗೆ ಬಯಲು ಮಹಾಬಯಲು ಸೀಮೆ. ತೆಂಗು, ಅಡಿಕೆ ತೋಟಗಳು ನನಗೆ ಗೊತ್ತಿರಲಿಲ್ಲ. ಅದೇನಿದ್ದರೂ ಪಾಠಗಳಲ್ಲಿ ಓದಿ ತಿಳಿದದ್ದು. ಅಡಿಕೆ ಎಂಬುದು ಸೇಂಗಾದಂತೆ ನೆಲದೊಳಗೆ ಬೆಳೆಯುವ ಗೊಂಚಲಿನಂತಹ ಬೆಳೆ ಎಂದು ನಾನು ಭಾವಿಸಿದ್ದೆ.

ಬಸ್ ನಿಲ್ದಾಣದ ಎದುರಿಗೆ ದ್ವಾರಕಾ ಹೊಟೆಲ್. ಅದರ ಎಡಪಕ್ಕ ಅಂಬರಕರ್ ಪಂಪಂಣ ಹೆಸರಿನ ಬಟ್ಟೆಅಂಗಡಿ. ಪಂಪಣ್ಣ ಎಂಬ ಹೆಸರನ್ನು ‘ಪಂಪಂಣ’ ಅಂತ ಹೀಗೂ ಬರೆಯಬಹುದೆಂಬುದನ್ನು ನಾನು ಅದೇ ಮೊದಲ ಬಾರಿಗೆ ಕಂಡುಕೊಂಡದ್ದು. ದ್ವಾರಕಾದಲ್ಲಿ ನಾಷ್ಟಾ ಮಾಡಿ ಪಕ್ಕದಲ್ಲಿದ್ದ ಶ್ರೀನಿವಾಸ ಡ್ರಾಮಾ‌ ಥಿಯೇಟರ್ ಕಡೆ ಹಣಕಿ ಹಾಕಿದೆ. ಮೇನ್‌ಬೋರ್ಡ್ ಪಕ್ಕದಲ್ಲೇ ‘ಬದುಕು ಬಂಗಾರವಾಯ್ತು’. ಕೆ. ಎನ್. ಸಾಳುಂಕೆ ವಿರಚಿತ ನಾಟಕದ ಬೋರ್ಡ್ ನನ್ನ ಗಮನ ಸೆಳೆದದ್ದು. ಚಿತ್ರದುರ್ಗಕ್ಕೆ ಹೋಗಿ ಹೊಳ್ಳಿ ಬರುವಾಗ ‘ಬದುಕು ಬಂಗಾರವಾಯ್ತು’ ನೋಡಲೇ ಬೇಕೆಂದು ಮನದೊಳಗೇ ಲೆಕ್ಕ ಹಾಕಿದೆ.

ಆಗೆಲ್ಲ ದಾವಣಗೆರೆಯ ತುಂಬಾ  ಕೆಂಪಂಗಿಗಳ ಪಾರಮ್ಯ. ಸೈಕಲ್ ಸವಾರರು, ಜಾವಾ, ಎಜ್ಡಿ ಗಾಡಿಗಳ ಸವಾರರು, ಆಟೋರಿಕ್ಷಾದವರು ಹೀಗೆ ಬಹುಪಾಲು ಕೆಂಪಗಿನ ಟೀ ಶರ್ಟುಗಳ ಸರದಾರರು. ಏಳೆಂಟು ಮಿಲ್ಲುಗಳ ಸಹಸ್ರಾರು ಕಾರ್ಮಿಕರ ದುಡಿಯುವ ಶ್ರಮಸಂಸ್ಕೃತಿಯ ಊರು. ಇಲ್ಲಿನ ಕಾರ್ಮಿಕ ಚಳವಳಿ, ಹೋರಾಟದ ಕಿಚ್ಚು ಕುರಿತು ಕೇಳಿದ್ದೆ ಮತ್ತು ಓದಿ ತಿಳಕೊಂಡಿದ್ದೆ. ಅದಕ್ಕೆ ಹಿಂದಿನ ವರುಷವೇ ಈ ಊರಿನ ಸುನಂದ ರಂಗಮಂಟಪದಲ್ಲಿ ಜರುಗಿದ ಪ್ರಗತಿಪಂಥದ ಪ್ರಥಮ ಸಮ್ಮೇಳನಕ್ಕೆ ಅಕ್ಷರಶಃ ಬಸ್ ಚಾರ್ಜ್ ಇಲ್ಲದ್ದಕ್ಕೆ ಬಿಟ್ಟಿದ್ದೆ. ಅಷ್ಟಕ್ಕೂ ಆಗ ಕಲಬುರಗಿಯಿಂದ ದಾವಣಗೆರೆಗೆ ಮುವತ್ಮೂರು ರೂಪಾಯಿ ಬಸ್ ಚಾರ್ಜ್ ಇತ್ತು. ಕೇವಲ ಎಪ್ಪತ್ತೈದು ರೂಪಾಯಿ ಆಗ ನನ್ನ ಬಳಿ ಇದ್ದಿದ್ರೆ ಸಮ್ಮೇಳನಕ್ಕೆ ಬಂದು ಹೋಗ ಬಹುದಾಗಿತ್ತು. ಅಷ್ಟುಹಣ ನನಗಾಗ ಎಟುಕದ ದೊಡ್ಡಮೊತ್ತವೇ ಆಗಿತ್ತು. ಹಣದ ಅಡಚಣೆ ಕಾರಣಕ್ಕೆ ಅದೇ ಕಾಲದ ಹುಬ್ಬಳ್ಳಿಯಲ್ಲಿ ಜರುಗಿದ ಫ್ಯಾಸಿಸ್ಟ್ ವಿರೋಧಿ ಸಮ್ಮೇಳನಕ್ಕು ನಾನು ಹೋಗಲಿಲ್ಲ. ದಾವಣಗೆರೆಯ ಪ್ರಗತಿಪಂಥ ಸಮ್ಮೇಳನದ ನೆನಪಿಗಾಗಿ ಜನತಾವಾಣಿ ಸಂಪಾದಕ ಎಚ್. ಎನ್. ಷಡಾಕ್ಷರಪ್ಪ ಸ್ಮರಣ ಸಂಚಿಕೆ ಹೊರಡಿಸಿದ್ದರು. ಬೆಟ್ಟವಾಗಿ ಬಂದ ಭಾರ ಹೂವಾಗಿ ಇಳಿಯಿತೆಂದು ಜವಾಬುದಾರಿ ಕುರಿತು ಅವರು ನನಗೆ ಪೋಷ್ಟ್ ಕಾರ್ಡಲ್ಲಿ ಬರೆದ ಮಾತುಗಳು ನೆನಪಿವೆ. ನಾನು ಮತ್ತು ಎಸ್ಕೆ ಮಾವನೂರ ಕಲಬುರ್ಗಿ ಜಿಲ್ಲೆಯ ಪ್ರಗತಿಪಂಥ ಸಂಚಾಲಕರು. ನಿರಂಜನ ಮತ್ತು ಬಸವರಾಜ ಕಟ್ಟೀಮನಿ ಕರ್ನಾಟಕ ರಾಜ್ಯದ ಸಂಚಾಲಕರು. ಮಂಗ್ಳೂರ ವಿಜಯ ಚಿತ್ರದುರ್ಗ ಜಿಲ್ಲಾ ಸಂಚಾಲಕ.

ನಾನು ಸರ್ಕಾರಿ ನೌಕರಿಯ ಡ್ಯುಟಿ ರಿಪೋರ್ಟ್ ಮಾಡಿಕೊಳ್ಳಲು ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಳಿ ಹೋಗಬೇಕಿತ್ತು. ಅದಕ್ಕೆ ಬದಲು ನಾನು ಮೊದಲು ಹೋಗಿದ್ದು ಎಡಚಿಂತನೆಯ ಪ್ರಗತಿಪಂಥದ ಚಿತ್ರದುರ್ಗ ಜಿಲ್ಲಾ ಸಂಚಾಲಕ ಮಂಗ್ಳೂರು ವಿಜಯ ಬಳಿ. “ಕಡಕೋಳ ಅವರೆ, ನಿಮ್ಮ ಪ್ರಗತಿಪರ ಮನಸು ಗುಲಾಮಗಿರಿಯಂತಹ ಸರಕಾರದ ನೌಕರಿಗೆ ಹೋಗಲು ಹೇಗೆ ಒಪ್ಪಿತೆಂದು ನಾಳೆಯವರೆಗೂ ಯೋಚನೆ ಮಾಡಿ ನನಗೆ ಹೇಳಿ” ಅಂದು ಬಿಡೋದೇ.?

ಅವನ ಮಾತು ಕೇಳಿ ಒಂದಲ್ಲ ಎರಡು ದಿನ ಲಾಜಿಂಗ್ ರೂಮ್ ಮಾಡಿಕೊಂಡು ನಾನು ಯೋಚನೆ ಮಾಡಿದ್ದೇ ಮಾಡಿದ್ದು. ಹಾಗೆ ಆಲೋಚನೆ ಮಾಡಿ, ಮಾಡಿ ಎರಡುದಿನ ನೌಕರಿಗೆ ತಡಮಾಡಿ ಸೇರಿದ್ದಕ್ಕೆ ನನ್ನ ನೌಕರಿಯ ರಾಜ್ಯಮಟ್ಟದ ಸೀನಿಯಾರಿಟಿ ಒಂದು ಸಾವಿರದಷ್ಟು ಹಿಂದಕ್ಕೆ ಹೋಗಿತ್ತು. ಆಗೆಲ್ಲ ಡ್ಯೂಟಿ ರಿಪೋರ್ಟ್ ಪರಿಗಣನೆ. ಪ್ರಮೊಷನ್ ಕಾಲಕ್ಕೆ ಅದರ ಪರಿಣಾಮ ಗೊತ್ತಾಯ್ತು. ನಿರಂತರ ನಾಲ್ಕು ವರ್ಷಗಳ ಕಾಲ ದುಷ್ಕಾಳದ ದವಡೆಯಲ್ಲಿ ಸಿಕ್ಕಿ ನಲುಗಿದ ನನಗೆ ಸರ್ಕಾರಿ ನೌಕರಿಗೆ ಸೇರುವುದು ಆಗ ಅನಿವಾರ್ಯವಾಗಿತ್ತು. ಅದೇ ಮಂಗ್ಳೂರ ವಿಜಯ ಆಮೇಲೆ ಒಂದೆರಡು ವರ್ಷಕ್ಕೆ ನನ್ನಹಾಗೆ ಸರ್ಕಾರಿ ನೌಕರನಾದ ಕತೆ ಇನ್ನೊಮ್ಮೆ ಹೇಳುವೆ.

ನಮ್ಮ ಹೈದ್ರಾಬಾದ್ ಕರ್ನಾಟಕದ ಕಡೆಗೆ ಎಡಬಿಡದೆ ನಾಲ್ಕು ವರ್ಷಗಳಕಾಲ ಬಿದ್ದ ಭೀಕರ ಬರಗಾಲಕ್ಕೆ ತುತ್ತಾದ ನೆಲದಿಂದ ನನ್ನ ಹಾಗೆ ನಾಕೈದು ಹುಡುಗರಿಗೆ ಸರಕಾರದ ನೌಕರಿ ಸಿಕ್ಕಿತ್ತು. ಕಲ್ಲಪ್ಪ ಬೇಲೂರೆ, ರಾಚಣ್ಣ ಕುಂಬಾರ, ಕಾಶೀಮ ಬಡಿಗೇರ, ಗುರುಶಾಂತ ಧೋತ್ರೆ ಹೀಗೆ ಕೆಲವರಿದ್ದೆವು. ಅವತ್ತು ಡಾ. ಎ. ಕೆಂಚಪ್ಪ ಎಂಬ ಸಜ್ಜನ, ಸಾತ್ವಿಕತೆಯ ಮೂರ್ತಿಯಂತಿದ್ದ ಚಿತ್ರದುರ್ಗದ ಡಿ. ಎಚ್. ಒ. ನಮಗೆಲ್ಲ ಬದಾಮಿ ಹಾಲು ತರಿಸಿ ಕೊಟ್ಟರು. ನೀವೆಲ್ಲ ತರುಣರಿದ್ದೀರಿ, ಎಚ್ಚರಿಕೆಯಿಂದ ಬದುಕನ್ನು ರೂಪಿಸಿ ಕೊಳ್ಳಿರೆಂದು ಮಾರ್ಗದರ್ಶನದ ಮಾತುಗಳನ್ನು ಹೇಳಿದ್ದರು. ಕುಷ್ಠರೋಗ ನಿಯಂತ್ರಣದಂತಹ ಸಾಮಾಜಿಕ ಸೇವೆ ಮಾಡುವ ಅವಕಾಶ ನಿಮಗೆ ದೊರಕಿದೆ. ನಿಮಗೆಲ್ಲ ಒಳಿತಾಗಲೆಂದು ಮನದುಂಬಿ‌ ಹಾರೈಸಿದ್ದರು.

ಪಾತಲಿಂಗಯ್ಯ ಎಂಬ ಕ್ಲರ್ಕ್ ನನಗೆ ಮೊಳಕಾಲ್ಮೂರು ಕಡೆಯ ಕಡೆಯಹಳ್ಳಿ ನಾಗಸಮುದ್ರಕ್ಕೆ ಪೋಷ್ಟಿಂಗ್ ತೋರಿಸಿದ್ದರು. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಡಿ. ಎಚ್. ಒ. ಕೆಂಚಪ್ಪನವರು ಈ ಹುಡುಗನಿಗೆ ಅದೆಲ್ಲೋ ದೂರದ ಊರಿಗೆ ಹಾಕಿದಿಯಲ್ಲಯ್ಯ. ಇವನಿಗಿನ್ನೂ ಮೀಸೆ ಕೂಡಾ ಕಪ್ಪೊತ್ತಿಲ್ಲ. ಕಲಬುರ್ಗಿ ಕಡೆ ಓಡಾಡಲು ಬಸ್ಸಿನ ಸೌಕರ್ಯ ಇರುವ ಹಿರಿಯೂರು ತಾಲೂಕಿಗೆ ಹಾಕು ಎಂದು ಆದೇಶ ಮಾಡಿದರು. ಹಿರಿಯೂರು ತಾಲೂಕಿನ ಯರಬಳ್ಳಿ  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ‌ ಪೋಷ್ಟಿಂಗ್ ಚೇಂಜ್ ಮಾಡಿಕೊಟ್ಟರು. ಅರಬ್ಬಿ ಸಮುದ್ರದ ನೆನಪು ತರಿಸಿದ ನಾಗಸಮುದ್ರ ತಪ್ಪಿಸಿಕೊಂಡ ಖುಷಿ ನನ್ನದಾಗಿತ್ತು. ನಾನು ಯರಬಳ್ಳಿಯಲ್ಲಿ ಇರುವಾಗಲೇ ಅನಸೂಯಾ ನನಗೆ ಸುತ್ತಿಕೊಂಡ ಬಳ್ಳಿ. ಯರಬಳ್ಳಿಯಿಂದಲೇ ಕುಷ್ಠರೋಗ ತರಬೇತಿಗೆ ಆಯ್ಕೆಯಾಗಿ ಬೆಂಗಳೂರು ಸೇರಿದೆ. ತದನಂತರ ಡಾವಣಗೇರಿ ಸೀಮೆಯ ಹರಿಹರದ ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣ ಕೇಂದ್ರಕ್ಕೆ ಬಂದೆ.

 

Donate Janashakthi Media

Leave a Reply

Your email address will not be published. Required fields are marked *