ಅಮ್ಮನ ಪ್ರತಿಜ್ಞೆ : ನ್ಯಾ. ಕೆ. ಚಂದ್ರು ಅವರ “ನನ್ನ ದೂರು ಕೇಳಿ” – ಆಯ್ದ ಭಾಗ

“ನನ್ನ ದೂರು ಕೇಳಿ-ಮಹಿಳೆಯರು ನ್ಯಾಯಾಲಯದ ಕದ ತಟ್ಟಿದಾಗ” – ಆಯ್ದ ಭಾಗ

ತಮಿಳುನಾಡಿನಲ್ಲಿ ವಕೀಲರು, ಹೈಕೋರ್ಟು ನ್ಯಾಯಾಧೀಶರು ಆಗಿದ್ದ ನ್ಯಾಯಮೂರ್ತಿ ಕೆ. ಚಂದ್ರು ಅವರ ವಕೀಲ ವೃತ್ತಿಜೀವನದ ಒಂದು ಪ್ರಕರಣದ ಮೇಲೆ ಆಧಾರಿತ ತಮಿಳು ಫಿಲಂ ‘ಜೈ ಭೀಮ್’ನ ಪ್ರಚಾರ ಶುರುವಾದ ಕೂಡಲೇ ಅವರು ದೇಶದ ತುಂಬಾ ‘ಜೈ ಭೀಮ್ ಚಂದ್ರು’ ಎಂದೇ ಅತ್ಯಂತ ಪ್ರಸಿದ್ಧರಾಗಿ ಬಿಟ್ಟರು. ಆದರೆ ಅದಕ್ಕೆ ಎಷ್ಟೋ ಮೊದಲು ಅವರು ತಮ್ಮ ಕಾಲದಲ್ಲಿ 96 ಸಾವಿರಕ್ಕೂ ಹೆಚ್ಚು ಪ್ರಕರಣಗಳಿಗೆ ತೀರ್ಪು ನೀಡಿರುವ ದಾಖಲೆ ಸ್ಥಾಪಿಸಿ ನ್ಯಾಯಾಂಗದ ಹೊಣೆಗಾರಿಕೆ ನಿಭಾಯಿಸುವುದು ಹೇಗೆ ಎಂದು ತೋರಿಸಿಕೊಟ್ಟವರು. ‘ಪ್ರಾಮಾಣಿಕ ನ್ಯಾಯಾಧೀಶ’ರಾಗಿ ಇರುವುದೆಂದರೆ ಏನು ಎಂಬುದನ್ನೂ ಸಹ ತೋರಿಸಿದವರು. ‘ಪ್ರತಿಯೊಬ್ಬರಿಗೂ ನ್ಯಾಯ’ ಎಂಬ ಧ್ಯೇಯಕ್ಕೆ ಬದ್ಧರಾಗಿ ಬದುಕಿದ ಅವರ ಹಲವು ಪ್ರಮುಖ ತೀರ್ಪುಗಳು ಹಲವು ಜನರ ಜೀವನದಲ್ಲಿ ಮಹತ್ತರ ಬದಲಾವಣೆ ತಂದಿವೆ. ವಿದ್ಯಾರ್ಥಿ ಚಳುವಳಿಯ ಮತ್ತು ಸಿಪಿಐ(ಎಂ) ಪಕ್ಷದ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನ ಆರಂಭಿಸಿದ ಚಂದ್ರು ಅವರು ಮುಂದೆ ಜನಪರ ವಕೀಲರಾಗಿ, ನ್ಯಾಯಾಧೀಶರಾಗಿ ಬೆಳೆದರು.

1970ರ ನಂತರ ಮಹಿಳೆಯರು ನಿಧಾನವಾಗಿ ಕೋರ್ಟ್ ಕದ ತಟ್ಟಲಾರಂಭಿಸಿದರು ಎನ್ನಲಾಗುತ್ತದೆ. ಪ್ರಮುಖವಾಗಿ ನ್ಯಾಯಾಧೀಶರಾಗಿ ಅವರ ವೃತ್ತಿ ಜೀವನದಲ್ಲಿ ಎದುರಾದ, ನ್ಯಾಯಕ್ಕಾಗಿ ನಡೆಸಿದ ಮಹಿಳೆಯರ ಹೋರಾಟದ 20 ಗಮನಾರ್ಹ ಪ್ರಕರಣಗಳ ಕುರಿತು ನ್ಯಾ|| ಕೆ. ಚಂದ್ರು ಅವರು ಬರೆದ ಪುಸ್ತಕ ‘ಲಿಸನ್ ಟು ಮೈ ಕೇಸ್’ ದೇಶದ ಗಮನ ಸೆಳೆಯಿತು. ಇವು ಮಹಿಳೆಯರ ಕಾನೂನು ಹೋರಾಟ ಮಾತ್ರವಾಗಿರಲಿಲ್ಲ. ಈ ಪ್ರಕರಣಗಳು ಲಿಂಗ ಮಾತ್ರವಲ್ಲ ಎಲ್ಲ ರೀತಿಯ ಅಸಮಾನತೆ ಕಾರಣಕ್ಕೆ ಘಟಿಸುವ ಹಿಂಸೆಯ, ಕ್ರೌರ್ಯದ ಸನ್ನಿವೇಶಗಳನ್ನು ನಿರೂಪಿಸುತ್ತವೆ. ಆದರೆ ಸಂತ್ರಸ್ತ ವ್ಯಕ್ತಿಗಳ, ಅವರ ಸಮುದಾಯದ ಮತ್ತು ಬದ್ಧ ವಕೀಲರ ದೃಢನಿರ್ಧಾರವಿದ್ದರೆ, ನ್ಯಾಯಾಲಯಗಳು ಎಲ್ಲರನ್ನೂ ಒಳಗೊಳ್ಳುವ, ಸೂಕ್ಷ್ಮ ಸಂವೇದನೆ ಇರುವ ಮತ್ತು ಪ್ರಗತಿಪರ ತೀರ್ಪುಗಳನ್ನು ಕೊಡಲು ಸಾಧ್ಯ ಎಂಬ ಭರವಸೆ ಹುಟ್ಟಿಸುವ ಕಥನಗಳನ್ನು ನ್ಯಾ|| ಕೆ. ಚಂದ್ರು ಬರೆದಿದ್ದಾರೆ. ಆ ಮೂಲಕ ಜನಜಾಗೃತಿ ಮೂಡಿಸುವ ಜನಶಿಕ್ಷಣದ ಕಾಯಕ ಕೈಗೆತ್ತಿಕೊಂಡಿದ್ದಾರೆ. ಇದನ್ನು ಕನ್ನಡದಲ್ಲಿಯೇ ಬರೆಯಲಾಗಿದೆ ಎನಿಸುವಂತೆ ಡಾ.ಭಾರತಿದೇವಿ ಪಿ. ಮತ್ತು ಸತೀಶ್ ಜಿ.ಟಿ ಕನ್ನಡಕ್ಕೆ “ನನ್ನ ದೂರು ಕೇಳಿ’ ಆಗಿ ಅನುವಾದಿಸಿದ್ದಾರೆ.

ಈ ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದ್ದು ಜುಲೈ 23ರಂದು ಬೆಂಗಳೂರಿನಲ್ಲಿ ಪುಸ್ತಕವನ್ನು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಬಿಡುಗಡೆ ಮಾಡಲಿದ್ದಾರೆ. ಇದೇ ಸಮಾರಂಭದಲ್ಲಿ “ಮಹಿಳೆಯರಿಗೆ ನ್ಯಾಯ ಮತ್ತು ನಮ್ಮ ನ್ಯಾಯ ವ್ಯವಸ್ಥೆ ಕುರಿತು ನ್ಯಾ.ಚಂದ್ರು, ನ್ಯಾ.ದಾಸ್ ಮತ್ತು ಹೇಮಲತಾ ಮಹಿಷಿ ಅವರು ಉಪನ್ಯಾಸ ನೀಡಲಿದ್ದು ಆ ವಿಷಯದ ಕುರಿತು ಅವರ ಜತೆಗೆ ಮಹಿಳಾ ಚಳುವಳಿಯಲ್ಲಿ ತೊಡಗಿರುವ ಚಿಂತಕರು, ಕಾರ್ಯಕರ್ತರು, ವಕೀಲರು ಸಂವಾದ ನಡೆಸಲಿದ್ದಾರೆ. ಇಲ್ಲಿರುವ ‘ಅಮ್ಮನ ಪ್ರತಿಜ್ಞೆ’ ಈ ಸಂದರ್ಭದಲ್ಲಿ ಈ ಪುಸ್ತಕದಲ್ಲಿ ಬರುವ ಒಂದು ಪ್ರಕರಣ ನಿರೂಪಿಸುವ ಆಯ್ದ ಭಾಗ.

****************************

ಎ.ಮಂಗೈ ನೇತೃತ್ವದ ಮರಪ್ಪಾಚಿ ಎಂಬ ರಂಗ ಕಲಾವಿದರ ಗುಂಪು 2013 ರ ಏಪ್ರಿಲ್‌ನಲ್ಲಿ ಎರಡು ನಾಟಕಗಳ ಪ್ರದರ್ಶನ ನೀಡಿತು. ವಕ್ಕುಮೂಲಮ್ (ತಪ್ಪೊಪ್ಪಿಗೆಗಳು) ಹಾಗೂ ಸುಡಲೈಯಮ್ಮಾಳ್ ಈ ಎರಡೂ ನಾಟಕಗಳನ್ನು ಬರೆದವರು ವಿ. ಗೀತಾ. ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಾಗ (1975 ರಿಂದ 77) ತಮಿಳುನಾಡಿನಲ್ಲಿ ನಡೆದ ದೌರ್ಜನ್ಯವೇ ಆ ನಾಟಕಗಳ ವಸ್ತು.

ಆಗ ಉತ್ತರ ಆರ‍್ಕಾಟ್ ಪ್ರದೇಶದ (ಈಗಿನ ತಿರುವಣ್ಣಾಮಲೈ ಮತ್ತು ವೆಲ್ಲೂರ್ ಜಿಲ್ಲೆಗಳು) ಹಳ್ಳಿಯಲ್ಲಿ ಸುಡಲೈಯಮ್ಮಾಳ್ ಎಂಬ ಒಬ್ಬ ಗಾರ್ಡ್ ಇದ್ದರು. ಅವರು ಸತ್ತವರ ಅಂತ್ಯ ಸಂಸ್ಕಾರವನ್ನು ಅವರಿಗೆ ತಕ್ಕುದಾದ ಕ್ರಮದಂತೆ ಮಾಡುತ್ತಿದ್ದರು. ಅದೊಂದು ದಿನ ಪೊಲೀಸರು ಯುವಕನೊಬ್ಬನ ಶವ ತಂದರು. ದೇಹದ ತುಂಬಾ ಗಾಯಗಳು. ತುರ್ತಾಗಿ ಆ ದೇಹವನ್ನು ಸುಡಬೇಕು ಅನ್ನುವುದು ಪೊಲೀಸರ ಒತ್ತಾಯ. ಆದರೆ ಆಕೆಯ ತಾಯಿ ಹೃದಯ ಮೃತ ಯುವಕನನ್ನು ಗುರುತಿಸುತ್ತದೆ. ಪೊಲೀಸರ ಒತ್ತಡಗಳಿಗೆ ಮಣಿಯದೆ ಆಕೆ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಮಾಡುತ್ತಾರೆ. ಆ ಸಾವಿನ ಬಗ್ಗೆ ಯಾರಿಗೂ ಹೇಳಬೇಡ ಎಂಬ ಪೊಲೀಸರ ತಾಕೀತಿನ ಹೊರತಾಗಿಯೂ ಆಕೆ ಆ ನಂತರ ಇಡೀ ಘಟನೆಯನ್ನು ವರದಿಗಾರರಿಗೆ ಹೇಳುತ್ತಾರೆ. ಅಲ್ಲಿಗೆ ಆ ನಾಟಕ ಮುಗಿಯುತ್ತದೆ. ರೇವತಿ ಎಂಬ ನಟಿಯ ಮನೋಜ್ಞ ಅಭಿನಯದ ಕಾರಣದಿಂದ ಸುಡಲೈಯಮ್ಮಾಳ್‌ಳ ಕತೆ ಮನ ಮುಟ್ಟುವಂತೆ ಜನರಿಗೆ ತಲುಪಿತ್ತು. ಸುಡಲೈಯಮ್ಮಾಳ್ ಅನ್ನೋದು ಒಂದು ನಾಟಕಕಾರ ಸೃಷ್ಟಿಸಿದ ಪಾತ್ರ. ಆದರೆ ಆಕೆ ನಿರೂಪಿಸಿದ್ದು ಸೀರಾಳನ್ ಎಂಬ ನಿಜ ವ್ಯಕ್ತಿಯ ಕತೆಯನ್ನು. ತುರ್ತುಪರಿಸ್ಥಿತಿ ವೇಳೆಯಲ್ಲಿ ಪೊಲೀಸರ ದೌರ್ಜನ್ಯದ ಕಾರಣ ಪ್ರಾಣ ಕಳೆದುಕೊಂಡವನ ಕತೆ. ಹಾಗೆ ನೋಡಿದರೆ ಸುಡಲೈಯಮ್ಮಾಳ್ ಎಂಬ ಪಾತ್ರ ನಿಜ ಜೀವನದ ಮೂರು ಪಾತ್ರಗಳ ಪ್ರೇರಣೆಯಿಂದ ರೂಪುಗೊಂಡದ್ದು. ಅವರಲ್ಲಿ ಒಬ್ಬರು ಸೀರಾಳನ್ ತಾಯಿ ಬಾಗ್ಗಿಯಂ ದುರೈಸ್ವಾಮಿ. ಆಕೆ ಗೃಹಿಣಿ, ಗಂಡ ದುರೈಸ್ವಾಮಿ ವಿದ್ಯುತ್ ನಿಗಮದಲ್ಲಿ ಉದ್ಯೋಗಿ. ಮಗನ ಸಾವಿನ ನಂತರ ಮೂವತ್ತು ವರ್ಷಗಳ ಕಾಲ ಅವರು ನ್ಯಾಯಕ್ಕಾಗಿ ಹೋರಾಡಿದರು. ಅವರ ಕಾನೂನು ಹೋರಾಟ ಆರಂಭವಾಗಿದ್ದು 1976ರಲ್ಲಿ. ಆಗಸ್ಟ್ 2006ರ ತನಕ ನಡೆಯಿತು.

ಸುಡಲೈಯಮ್ಮಾಳ್ ಪಾತ್ರಕ್ಕೆ ಪ್ರೇರಣೆ ನೀಡಿದ ಇನ್ನೊಂದು ಪಾತ್ರ ಜಯ ವೇಲು. ಸೀರಾಳನ್ ಮೇಲೆ ನಡೆದ ದೌರ್ಜನ್ಯಕ್ಕೆ ಆಕೆ ಪ್ರತ್ಯಕ್ಷ ಸಾಕ್ಷಿ. ಆಕೆ ತಮ್ಮ ಗುಟ್ಟು ರಟ್ಟು ಮಾಡಬಹುದೆಂದು ಹೆದರಿ ಪೊಲೀಸರು ಜಯ ಮತ್ತು ಅವರ ಗಂಡ ವೇಲು ಇಬ್ಬರ ಮೇಲೂ ಸುಳ್ಳು ದೂರು ದಾಖಲಿಸಿ ಜೈಲಿಗೆ ಕಳುಹಿಸಿದರು. ಇದುವರೆಗೂ ಅವರಿಬ್ಬರು ಎಲ್ಲಿದ್ದಾರೆ ಎಂದು ತಿಳಿದಿಲ್ಲ. ಹಾಗೇ ಆ ಪಾತ್ರದ ಹಿಂದಿನ ಮೂರನೇ ಮಹಿಳೆ ಮೈಥಿಲಿ ಶಿವರಾಮನ್. ಆಕೆ ಹಳ್ಳಿ ಹಳ್ಳಿ ಅಲೆದಾಡಿ ಸೀರಾಳನ್ ಸಾವಿನ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಜೊತೆಗೆ ಈ ಘಟನೆಯಲ್ಲಿ ನೊಂದವರಿಗೆ ನ್ಯಾಯ ದೊರಕಬೇಕೆಂದು ಪ್ರತಿಭಟಿಸಿದರು. ಅಂದಿನ ರಾಜ್ಯಪಾಲರ ತನಕ ಹೋಗಿ ಮನವಿ ಸಲ್ಲಿಸಿ ಪ್ರಕರಣದ ಬಗ್ಗೆ ತನಿಖೆ ರೆವೆನ್ಯೂ ಬೋರ್ಡ್‌ನ ಸದಸ್ಯರಿಂದ ಆಗಬೇಕೆಂದು ಒತ್ತಾಯಿಸಿದರು.

ಆಕೆಯ ಇಳಿ ವಯಸ್ಸಿನ ಕಾರಣ ಈಗ ಅದೆಲ್ಲವೂ ನೆನಪಿನಲ್ಲಿ ಇಲ್ಲದಿರಬಹುದು. ಆದರೆ ಆಗ ತುರ್ತುಪರಿಸ್ಥಿತಿ ಕಾಲದಲ್ಲಿ ಏನೆಲ್ಲಾ ನಿರ್ಬಂಧಗಳಿದ್ದರೂ, ಮಾಧ್ಯಮದ ಸೆನ್ಸಾರ್ ಜಾರಿಯಲ್ಲಿದ್ದರೂ ಮುಂಬೈನಿಂದ ಪ್ರಕಟವಾಗುತ್ತಿದ್ದ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ(24 ಸೆಪ್ಟೆಂಬರ್ 1977)ಯಲ್ಲಿ ‘ದಿ ಮರ್ಡರ್ ಆಫ್ ಸೀರಾಳನ್’ ಎಂಬ ಪರಿಣಾಮಕಾರಿ ಲೇಖನ ಬರೆದು ಗಮನ ಸೆಳೆದಿದ್ದರು. ಆ ಲೇಖನವೂ ಸೇರಿದಂತೆ ಅವರ 1970ರ ದಶಕದಲ್ಲಿ ಅವರು ಬರೆದ ಬರಹಗಳ ಸಂಗ್ರಹವನ್ನು ‘ಹಾಂಟೆಡ್ ಬೈ ಫೈರ್’ ಎಂಬ ಹೆಸರಿನಲ್ಲಿ ಲೆಫ್ಟ್‌ವರ್ಡ್ ಪ್ರಕಟಮಾಡಿದೆ. ಆ ನಾಟಕ ಪ್ರದರ್ಶನದ ದಿನ ಆ ಪುಸ್ತಕ ಸಂಪಾದಿಸಿದ್ದ ವಿ.ಗೀತಾ ಮಾತನಾಡಿ ಮೈಥಿಲಿ ಶಿವರಾಮನ್ ಬರೆದ ಲೇಖನವೇ ನಾಟಕದ ಮುಖ್ಯ ವಸ್ತು ಎಂದು ಹೇಳಿದ್ದರು.

ಈಗ ಸೀರಾಳನ್ ತಾಯಿ ಬಾಗ್ಗಿಯಂ ದುರೈಸ್ವಾಮಿ 30 ವರ್ಷಗಳ ಕಾಲ ನಡೆಸಿದ ಕಾನೂನು ಹೋರಾಟದ ಕಡೆ ಗಮನ ಹರಿಸೋಣ. ಪೊನ್ನೇರಿ ಅನ್ನೋದು ಉತ್ತರ ಆರ್ಕಾಟ್‌ನ ಒಂದು ಹಳ್ಳಿ. ಕೃಷಿ ಕಾರ್ಮಿಕರು 1976ರಲ್ಲಿ ತಮಿಳು ನಾಡು ಸರಕಾರ ಘೋಷಿಸಿದ್ದ ಕನಿಷ್ಠ ಕೂಲಿಗಾಗಿ ಪ್ರತಿಭಟನೆ ಮಾಡಿದರು. ಅವರ ನೇತೃತ್ವ ವಹಿಸಿದ್ದು ಸೀರಾಳನ್. ಆಗ ಅವನಿಗೆ ಇಪ್ಪತ್ತು ವರ್ಷ ಕೂಡಾ ಆಗಿರಲಿಲ್ಲ. ಭೂಮಾಲೀಕರ ಮಾತು ಕೇಳಿ ಪೊಲೀಸರು ಅವನನ್ನು ಬಂಧಿಸಿ ಚಿತ್ರಹಿಂಸೆ ನೀಡಿದರು. ಎತ್ತುಗಳ ಕತ್ತಿಗೆ ಹಾಕುವ ನೊಗವನ್ನು ಅವನ ಕತ್ತಿನ ಮೇಲಿಟ್ಟು ಪೊಲೀಸರು ದಡಮ್ಮ-ದುಡಿಕೆ (ಸೀ-ಸಾ) ಆಡಿದ್ದರು. ಹಿಂಸೆಯಿಂದ ತೀವ್ರವಾಗಿ ಬಳಲಿದ್ದರೂ ಪೊಲೀಸರು ಅವನಿಗೆ ವೈದ್ಯಕೀಯ ನೆರವು ನೀಡಲಿಲ್ಲ. ಕೊನೆಗೆ 1977ರ ಜನವರಿ 11ರಂದು ಸೀರಾಳನ್ ಪ್ರಾಣ ಬಿಟ್ಟ.

ಪೊಲೀಸರು ಹೊಸ ಕತೆ ಕಟ್ಟಿದರು. ಅವನೊಬ್ಬ ನಕ್ಸಲ್. ಪೊಲೀಸರು ಅವನನ್ನು ಬಂಧಿಸಲು ಹೋದಾಗ ಅವರ ಮೇಲೇ ಅವನು ದಾಳಿ ಮಾಡಿದ. ಹಾಗಾಗಿ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಅವನನ್ನು ಕೊಲ್ಲಬೇಕಾಯಿತು. ಪ್ರಕರಣದ ತನಿಖೆ ನಡೆಸಿದ್ದ ತಿರುಪತ್ತೂರು ಉಪವಿಭಾಗಾಧಿಕಾರಿ ಪೊಲೀಸರ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದರು. ಕಾಶಿನಾಥನ್, ರಾಮಸ್ವಾಮಿ ಹಾಗೂ ಶಿವಲಿಂಗಂ ಎಂಬ ಮೂರು ಜನ ಪೊಲೀಸ್ ಪೇದೆಗಳು ಅವನಿಗೆ ಚಿತ್ರಹಿಂಸೆ ನೀಡಿ ಕೊಂದರು. ಆಮೇಲೆ ಪ್ರಕರಣವನ್ನು ಮುಚ್ಚಿಡಲು ಪ್ರಯತ್ನಪಟ್ಟರು. ಹಾಗಾಗಿ ಆ ಮೂವರು ಹಾಗೂ ಇಂತಹ ಘಟನೆ ನಡೆಯಲು ಅವಕಾಶ ಮಾಡಿಕೊಟ್ಟ ಇನ್ಸ್‌ಪೆಕ್ಟರ್ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳ ವಿರುದ್ಧ ತಕ್ಕ ಕ್ರಮ ಆಗಬೇಕು ಎಂದು ವರದಿ ಕೊಟ್ಟರು. 1977ರ ಫೆಬ್ರವರಿ 6ರಂದು ಸಲ್ಲಿಸಿದ್ದ ಈ ವರದಿ ಆಧಾರದಲ್ಲಿ ಯಾರ ಮೇಲೂ ಯಾವ ಕ್ರಮವೂ ಆಗಲಿಲ್ಲ. ಆ ನಂತರ ಕಂದಾಯ ಮಂಡಳಿ ಸದಸ್ಯರಾಗಿದ್ದ ಎಸ್.ಪಿ.ಶ್ರೀನಿವಾಸನ್ ಎಂಬ ಐಎಎಸ್ ಅಧಿಕಾರಿಗೆ ಈ ಪ್ರಕರಣದ ತನಿಖೆ ಜವಾಬ್ದಾರಿ ವಹಿಸಲಾಯ್ತು. ಅವರು ಕೂಡಾ ತಮ್ಮ ವರದಿಯಲ್ಲಿ (1977ರ ಮೇ) ಉಪವಿಭಾಗಾಧಿಕಾರಿ ಹೇಳಿದ್ದ ಅಂಶಗಳನ್ನೇ ಎತ್ತಿ ಹಿಡಿದರು. ಪೊಲೀಸರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಶಿಫಾರಸು ಮಾಡಿದರು. ವೆಲ್ಲೂರು ಸೆಷನ್ ಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಆದರೆ ಪೊಲೀಸರು ಆರೋಪಗಳಿಂದ ಖುಲಾಸೆ ಆದರು. ಅವರು ಆತ್ಮ ರಕ್ಷಣೆಗಾಗಿ ಹಾಗೆ ಮಾಡಿದ್ದರು ಎಂಬ ವಾದವನ್ನು ಜಡ್ಜ್ ಒಪ್ಪಿದ್ದರು. ಸೀರಾಳನ್ ಅವರ ಅಮ್ಮ ಬಾಗ್ಗಿಯಮ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರು. ಆದರೆ ಅದೂ ವಜಾ ಆಯಿತು.

ಅಷ್ಟಕ್ಕೆ ಬಾಗ್ಗಿಯಮ್ ಸುಮ್ಮನಾಗಲಿಲ್ಲ. 1984ರಲ್ಲಿ ಎರಡನೇ ಪ್ರಕರಣ ದಾಖಲಿಸಿ ಪೊಲೀಸ್ ಸುಪರ್ದಿಯಲ್ಲಿ ಸಾವು ಆಗಿರುವ ಕಾರಣ ಪರಿಹಾರ ಬೇಕು ಎಂದು ಕೇಳಿದರು. ಆ ಅರ್ಜಿ ಮತ್ತು ಹತ್ತು ವರ್ಷಗಳ ನಂತರ ಅಂದರೆ 1994ರಲ್ಲಿ ವಿಚಾರಣೆಗೆ ಬಂತು. ನ್ಯಾಯಮೂರ್ತಿ ಪಿ.ಎಸ್.ಮಿಶ್ರಾ ವಾದವನ್ನೆಲ್ಲಾ ಕೇಳಿ ಕ್ರಿಮಿನಲ್ ದಾವೆ ವಜಾ ಆಗಿದ್ದರೂ ತಾಯಿಗೆ ಸಲ್ಲಬೇಕಾದ ಪರಿಹಾರ ನಿರಾಕರಿಸುವಂತಿಲ್ಲ ಎಂದರು.

ನ್ಯಾಯಾಲಯದ ಆದೇಶ :

ಕ್ರಿಮಿನಲ್ ದಾವೆಯ ವಿಚಾರಣೆಯಲ್ಲಿ ಆರೋಪಿಗಳು ಖುಲಾಸೆ ಆಗಿದ್ದು
ಪ್ರಾಸಿಕ್ಯೂಷನ್‌ನವರು ಆರೋಪವನ್ನು ಸಂದೇಹಕ್ಕೆ ಆಸ್ಪದ ಇಲ್ಲದಂತೆ ಸಾಬೀತು
ಪಡಿಸಲು ವಿಫಲವಾಯಿತು ಎಂಬ ಕಾರಣಕ್ಕೇ ಹೊರತು, ನ್ಯಾಯಾಲಯಕ್ಕೆ
ಆರೋಪದ ಸತ್ಯಾಸತ್ಯತೆ ಬಗ್ಗೆ ಸಂಶಯಗಳಿದ್ದವು ಎಂಬ ಕಾರಣಕ್ಕಲ್ಲ.
ಹಾಗಾಗಿ ಸಿವಿಲ್ ನ್ಯಾಯಾಲಯದ ವಿಚಾರಣೆ ಕ್ರಿಮಿನಲ್ ನ್ಯಾಯಾಲಯದ
ತೀರ್ಪುಗಳಿಂದ ಮುಕ್ತವಾಗಿರುತ್ತದೆ. ಪರಿಹಾರದಂತಹ ವ್ಯಾಜ್ಯ ಆಲಿಸುವಾಗ
ಕ್ರಿಮಿನಲ್ ನ್ಯಾಯಾಲಯದ ತೀರ್ಪನ್ನು ಪರಿಗಣಿಸಿ ಅದರ ಆಧಾರದಂತೆ
ತೀರ್ಮಾನ ಮಾಡಬೇಕಿಲ್ಲ.

ಮುಂದುವರೆದು ಜಡ್ಜ್ ಹೇಳಿದ್ದು:

ಪರಿಹಾರದ ಪ್ರಶ್ನೆ ಆರೋಪಿಯ ಮೇಲಿದ್ದ ಆರೋಪ ಸಾಬೀತಾಯ್ತು ಎಂಬ
ಕಾರಣಕ್ಕೆ ಹುಟ್ಟಿಕೊಂಡಿದ್ದಲ್ಲ. ಬದಲಿಗೆ, ಪೊಲೀಸರಿಂದ ಆ ಸಾವು ಆಯ್ತು
ಎಂಬ ಕಾರಣಕ್ಕಾಗಿ ಪರಿಹಾರದ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಹಾಗಾಗಿ ರಾಜ್ಯ
ಅರ್ಜಿದಾರರಿಗೆ ಪರಿಹಾರ ಕೊಡಬೇಕಿದೆ.

ಐಎಎಸ್ ಅಧಿಕಾರಿ ಶ್ರೀನಿವಾಸನ್ ತಮ್ಮ ವರದಿಯಲ್ಲಿ ಪೊಲೀಸರು ಸೀರಾಳನ್ ಮೇಲೆ ನಡೆಸಿದ್ದ ಹಿಂಸೆಯನ್ನು ವಿವರವಾಗಿ ಉಲ್ಲೇಖಿಸಿದ್ದಾರೆ. ಅದರ ಆಧಾರದ ಮೇಲೆಯೇ ಅವರು ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚಾರಣೆ ನಡೆಯಬೇಕೆಂದು ಶಿಫಾರಸ್ಸು ಮಾಡಿದ್ದರು. ಕಾನೂನಿನಂತೆ ಹಾಗೂ ನೈತಿಕವಾಗಿ ಸರಕಾರ ಪರಿಹಾರ ಕೊಡಬೇಕು ಎಂದು ನ್ಯಾ.ಮಿಶ್ರ ಹೇಳಿದ್ದರು. ಅವರು ತಮ್ಮ ಆದೇಶದಲ್ಲಿ ಒಂದು ಲಕ್ಷ ಪರಿಹಾರ ಕೊಡಬೇಕು ಎಂದರು. ಆ ಮೊತ್ತವನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್ ಇಟ್ಟು ಬಾಗ್ಗಿಯಮ್‌ಗೆ ಪ್ರತಿ ತಿಂಗಳು ಕನಿಷ್ಠ ಒಂದು ಸಾವಿರ ರೂಪಾಯಿಯ ಮೊತ್ತ ದೊರಕುವಂತೆ ನೋಡಿಕೊಳ್ಳಬೇಕೆಂದು ಆದೇಶಿಸಿದರು. ಆ ತೀರ್ಪು ಬಂದಿದ್ದು 1994ರಲ್ಲಿ. ಆಗ ಆಕೆಗೆ 60 ವಯಸ್ಸು. ಆ ನಂತರ ಆ ಪರಿಹಾರ ಮೊತ್ತ ಕಡಿಮೆ ಆಯ್ತು ಎಂದು ಅವರು ಮತ್ತೊಂದು ಅರ್ಜಿ ಸಲ್ಲಿಸಿದರು. ಆ ಅರ್ಜಿ ನ್ಯಾ.ಎ.ಪಿ.ಶಾ ಎದುರು ವಿಚಾರಣೆಗೆ ಬಂದಿತು. ಈ ಬೆಂಚು ಆಗಸ್ಟ್ 11, 2006ರಂದು ತೀರ್ಪು ನೀಡಿತು.

ಬಾಗ್ಗಿಯಮ್ ಮೂಲತಃ ಒಂದು ಲಕ್ಷವಷ್ಟೇ ಕೇಳಿದ್ದರಿಂದ ಅದನ್ನು ಹೆಚ್ಚಿಸಲು ನ್ಯಾಯಾಧೀಶರಿಗೆ ಅವಕಾಶ ಇರಲಿಲ್ಲ. ಆದರೆ 1994ರ ನ್ಯಾ.ಮಿಶ್ರಾ ಅವರ ಆದೇಶವನ್ನು ಸರಕಾರ ಅದುವರೆಗೂ ಜಾರಿ ಮಾಡಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡು, ಮೂಲ ಮೊತ್ತವನ್ನು 12 ವರ್ಷಗಳ ಬಡ್ಡಿ ಸಮೇತ ನೀಡಬೇಕೆಂದು ತೀರ್ಪು ನೀಡಿದರು. ಹಾಗಾಗಿ ಅವರಿಗೆ ಒಟ್ಟು 2.2 ಲಕ್ಷ ರೂಪಾಯಿಗಳು ಸಿಗುವಂತಾಯ್ತು. ಮೂವತ್ತು ವರ್ಷಗಳ ಹೋರಾಟ ಕೊನೆಗೂ ಆ ತಾಯಿಗೆ ಜಯ ತಂದು ಕೊಟ್ಟಿತು.

ಮಾಹಿತಿಗಾಗಿ:

  • ಬಾಗ್ಗಿಯಮ್ ದುರೈಸ್ವಾಮಿ ವರ್ಸಸ್ ತಮಿಳುನಾಡು ಸರಕಾರ, 1994 (2), ಎಲ್‌ಡಬ್ಲ್ಯೂ(ಸಿಆರ್‌ಎಲ್) 687
  • ಬಾಗ್ಗಿಯಮ್ ದುರೈಸ್ವಾಮಿ ವರ್ಸಸ್ ತಮಿಳುನಾಡು ಸರಕಾರ, ಡಬ್ಲ್ಯೂ.ಎ ನಂ. 2005ರ 1929 ದಿನಾಂಕ 11.08.2006
Donate Janashakthi Media

Leave a Reply

Your email address will not be published. Required fields are marked *