ಅಮಿತ್ ಶಾ ಭೇಟಿ ವೇಗ ಪಡೆದ ರಾಜಕೀಯ ತಂತ್ರಗಾರಿಕೆ

ಎಸ್.ವೈ. ಗುರುಶಾಂತ್

ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಮತ್ತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಇಬ್ಬರೂ ಒಂದೇ ದಿನ ಭೇಟಿ ನೀಡಿದ್ದಾರೆ. ಇಬ್ಬರು ನಾಯಕರು ಪ್ರತ್ಯೇಕವಾಗಿ  ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ದಿವಂಗತ ಶ್ರೀಗಳ ಗುಣಗಾನ ಮಾಡಿದ್ದಾರೆ. ಬೆಂಗಳೂರಿನಲ್ಲಿ ಅವರ ಪಕ್ಷಗಳ ಪ್ರಮುಖ ನಾಯಕರುಗಳ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. 2023ರಲ್ಲಿ ನಡೆಯಬೇಕಿರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದಕ್ಕಾಗಿ ಎಲ್ಲಾ ರೀತಿಯ ತಯಾರಿಗಳನ್ನು ಮಾಡಬೇಕೆಂದು ಸೂಚಿಸಿದ್ದಾರೆ.

ಈ ಇಬ್ಬರ ಭೇಟಿ ಮತ್ತು ಅವರ ಪಕ್ಷಗಳ ನಾಯಕರಿಗೆ ಕೊಟ್ಟಿರುವ ನಿರ್ದೇಶನಗಳನ್ನು ಗಮನಿಸಿದರೆ ಇದು ಬಹಳ ಮಹತ್ವದ ಭೇಟಿ. ಹೆಚ್ಚಿದ ಸಂಘಪರಿವಾರದ ಉದ್ರಿಕ್ತತೆಯ ಚಟುವಟಿಕೆಗಳು ಮತ್ತು ಬಿಜೆಪಿ ನಾಯಕರ ವಾಗ್ಧಾಳಿ ವರಸೆಗಳು ಚುನಾವಣೆಯ ಸಿದ್ಧತೆಯನ್ನು ಸೂಚಿಸುತ್ತಿದ್ದವು. ಆದರೆ ಅಮಿತ್ ಶಾ ರವರ ಭೇಟಿಯಿಂದಾಗಿ ಈಗಾಗಲೇ ಒಂದು ರೀತಿಯಲ್ಲಿ ಆರಂಭಗೊಂಡಿದ್ದ ಚುನಾವಣಾ ಸಿದ್ಧತೆಗೆ ಅಧಿಕೃತತೆ ಮತ್ತು ವೇಗವರ್ಧಕತೆ ಸಿಕ್ಕಂತಾಗಿದೆ.

ಹಾಗೆ ನೋಡಿದರೆ ಈ ವಾರ ಕರ್ನಾಟಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಬೇಕಿತ್ತು. ಆದರೆ ಹೆಚ್ಚಿನ ವಿವರಣೆಗಳಿಲ್ಲದೆ ಅದು ರದ್ದಾಗಿತ್ತು. ಆದರೆ ಅಮಿತ್ ಶಾ ಭೇಟಿ ದಿಢೀರನೆ ನಿಗದಿಯಾಗಿತ್ತು.

ರಾಹುಲ್ ಗಾಂಧಿಯವರು ತಮ್ಮ ಪಕ್ಷದ ನಾಯಕರುಗಳಿಗೆ ಚುನಾವಣೆಯ ಸಿದ್ಧತೆಗೆ ಗುರಿಯನ್ನು ನಿಗದಿಪಡಿಸಿದ್ದು ಒಂದು  ಸಹಜ ಪ್ರಕ್ರಿಯೆ ಎನ್ನುವಂತೆ ಕಾಣುತ್ತದೆ. ಆದರೆ ಅಮಿತ್ ಶಾ ರವರು ತಮ್ಮ ಪಕ್ಷದ ನಾಯಕರಿಗೆ 150 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿಯನ್ನು ನೀಡುವುದರ ಜೊತೆಗೆ ಖಡಕ್ಕಾದ ರಾಜಕೀಯ ನಿರ್ದೇಶನ ಮತ್ತು ಕ್ಷಿಪ್ರ ಬೆಳವಣಿಗೆಗಳ ಸುಳಿವುಗಳನ್ನು ನೀಡಿ ಹೋಗಿದ್ದಾರೆ.

ನಿಗದಿತ ಅವಧಿಯಂತೆ ಅಂದರೆ 2023 ರ ಮೇ ತಿಂಗಳಲ್ಲಿ ವಿಧಾನಸಭೆಯ ಅವಧಿ ಪೂರ್ಣಗೊಳ್ಳಲಿದೆ. ಆ ಮೊದಲು ಚುನಾವಣೆ ನಡೆದು ಹೊಸ ಸರ್ಕಾರ ರಚನೆ ಆಗಬೇಕಿದೆ. ಆದರೆ ಅಮಿತ್ ಶಾ ರವರು ‘ಚುನಾವಣೆ ಅವಧಿ ಪೂರ್ಣಗೊಂಡಾಗ ಆಗಲಿ ಅಥವಾ ಅವಧಿಪೂರ್ವ ದಲ್ಲಾಗಲಿ ನಡೆದರೂ ಹೆಚ್ಚಿನ ಪರಿಣಾಮವೇನೂ ಇರುವುದಿಲ್ಲ’ ಎಂದು ಹೇಳಿದರಾದರೂ ಒಂದು ರೀತಿಯಲ್ಲಿ ಅವಧಿ ಪೂರ್ವದಲ್ಲಿ ಚುನಾವಣೆಗಳನ್ನು ನಡೆಸಿದರೆ ಹೆಚ್ಚಿನ ಲಾಭ ಬಿಜೆಪಿಗೆ ಬರಬಹುದೇ ಎನ್ನುವ ಬಗ್ಗೆ ಇನ್ನಷ್ಟು ಆಳವಾಗಿ ವಿಶ್ಲೇಷಣೆ ಮತ್ತು ವಿವರಣೆಗಳನ್ನು ಕೊಡುವಂತೆ ಸೂಚಿಸಿದ್ದಾರೆ.

ಈಗಾಗಲೇ ಸಂಘಪರಿವಾರ ರಾಜ್ಯದಲ್ಲಿ ಉಂಟು ಮಾಡಿರುವ ಅಲ್ಪಸಂಖ್ಯಾತರ ಮೇಲಿನ ಧಾಳಿಗಳು ದ್ವೇಷದ ಕೃತ್ಯಗಳಿಂದ ಮತದಾರರು ಕೋಮು ದೃವೀಕರಣಗೊಳ್ಳುತ್ತಿದ್ದು ಇದನ್ನು ಮತ್ತಷ್ಟು ವಿಸ್ತರಿಸಿ ಉಳಿಸಿಕೊಂಡರೆ ಆದಷ್ಟು ಹೆಚ್ಚಿನ ಲಾಭವನ್ನು ಪಡೆಯಬಹುದೇ ಎನ್ನುವುದು ಒಂದು ಯೋಚನೆ. ಅಮಿತ್ ಶಾ ಇಷ್ಟು ತರಾತುರಿಯಲ್ಲಿ ರಾಜ್ಯಕ್ಕೆ ಭೇಟಿ ನೀಡಿ ಪ್ರಮುಖರ ಸಭೆ ನಡೆಸಿದ ಔಚಿತ್ಯ ಏನು ಎನ್ನುವ ಕುತೂಹಲ ಇದ್ದೇ ಇದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಏನಿದೆ ಎನ್ನುವ ಕುರಿತು ಆರೆಸ್ಸೆಸ್ ತನ್ನದೇ  ಆಂತರಿಕ ಸಮೀಕ್ಷೆ ನಡೆಸಿದ ವರದಿಗಳು ಬಹಿರಂಗವಾಗಿವೆ. ಈಗಿನ ಪರಿಸ್ಥಿತಿ ಮುಂದುವರೆದರೆ 2023 ರಲ್ಲಿ ಬಿಜೆಪಿ ಬಹಳ ಶ್ರಮವಹಿಸಿದಲ್ಲಿ 65 ರಿಂದ 70 ಸ್ಥಾನಗಳು, ಕಾಂಗ್ರೆಸ್ 115 ರಿಂದ 120, ಜೆ.ಡಿ.ಎಸ್ 29 ರಿಂದ 34 ಸ್ಥಾನ ಗೆಲ್ಲುವ ಅಂದಾಜನ್ನು ಕಂಡುಕೊಂಡಿದೆ. ಬಿಜೆಪಿಯ ಸದ್ಯದ ಸ್ಥಿತಿಯಿಂದ ಶಕ್ತಿ ಹೆಚ್ಚಿಸಿಕೊಳ್ಳಲು ತನ್ನ `ಚಾಣಕ್ಯ'(?) ಅಮಿತ್ ಶಾ ರವರನ್ನು ತುರ್ತಾಗಿ ಕರೆಸಿಕೊಂಡಿದೆ.

ಈಗ ರಾಜ್ಯದಲ್ಲಿ ತೀವ್ರಗೊಂಡಿರುವ ಕೋಮು ವಿಭಜಕ ಧ್ರುವೀಕರಣವನ್ನು ಮತ್ತಷ್ಟು ವಿಸ್ತರಿಸುವುದರ ಜೊತೆಗೆ ಕೆಲವು ನಿರ್ದಿಷ್ಟ ಗುರಿಗಳನ್ನು ಅಮಿತ್ ಶಾ ನೀಡಿದ್ದಾರೆ. ಹೆಚ್ಚಿನ ಸ್ಥಾನಗಳನ್ನು ಗಳಿಸಬೇಕೆಂದರೆ ವಿಶೇಷವಾಗಿ ದಕ್ಷಿಣ ಕರ್ನಾಟಕಕ್ಕೆ ಹೆಚ್ಚಿನ ಒತ್ತು ನೀಡಬೇಕೆಂಬುದು ಪ್ರಮುಖವಾದ ಒಂದು ಅಂಶ. ಅಂದರೆ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಈ ಭಾಗದಲ್ಲಿ ಶತಾಯಗತಾಯ ಮೇಲುಗೈ ಸಾಧಿಸಲು ಕಾರ್ಯಸೂಚಿಯನ್ನು ನೀಡಲಾಗಿದೆ. ಅದರಂತೆ ಅತ್ಯಂತ ಪ್ರಭಾವಶಾಲಿ ಗಳಾದ 50 ರಿಂದ 60- ವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಗಳಲ್ಲಿರುವ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೆಳೆಯುವುದು ಒಂದು ಗುರಿ. ಇದಕ್ಕಾಗಿ ರಾಜ್ಯದ ಅಧ್ಯಕ್ಷರ ನೇತೃತ್ವದಲ್ಲಿ ಒಂದು ವಿಶೇಷ ಸಮಿತಿಯನ್ನು ನೇಮಕ ಮಾಡಲಾಗಿದೆ.

ಈಗಾಗಲೇ ಸಂಘಪರಿವಾರ ಈ ವಿಭಾಗದಲ್ಲಿ ತನ್ನ ಆಪರೇಷನ್ನನ್ನು ತೀವ್ರ ಗೊಳಿಸಿರುವುದು ಮತ್ತು ಒಂದಿಷ್ಟು ಮುನ್ನಡೆ ಸಾಧಿಸುತ್ತಿರುವುದನ್ನು ಗಮನಿಸಬಹುದು. ಈ ಭಾಗದಲ್ಲಿ ರಾಜಕೀಯವಾಗಿ ಬಿಜೆಪಿಗೆ ಅಷ್ಟೊಂದು ಶಕ್ತಿ ಇರುವುದು ಮೇಲ್ನೋಟದಲ್ಲಿ ಕಾಣುವುದಿಲ್ಲ. ಪ್ರಸಕ್ತವಾಗಿ ರಾಜಕೀಯ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಮತ್ತು ಸಾಧಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಪೈಪೋಟಿ ಇದ್ದೇ ಇದೆ. ಈ ಪ್ರದೇಶ ಮಂಡ್ಯ ಹಾಸನ ರಾಮನಗರ ಮತ್ತು ಬೆಂಗಳೂರನ್ನು ಒಳಗೊಂಡಂತೆ ಒಕ್ಕಲಿಗರ ನಡುವಿನ ರಾಜಕೀಯದಲ್ಲಿ ಎರಡು ಪಕ್ಷಗಳು ಅಸ್ತಿತ್ವ ಪಡೆದುಕೊಂಡಿವೆ.

ವಿಶೇಷವಾಗಿ, ಜೆಡಿಎಸ್ ಗೆ ನೆಲೆ ಇರುವುದು ಈ ಭಾಗದಲ್ಲಿ. ಹೀಗಾಗಿ ಒಂದು ಕಡೆಯಲ್ಲಿ ಕಾಂಗ್ರೆಸ್ ಮತ್ತೊಂದು ಕಡೆಯಲ್ಲಿ ಬಿಜೆಪಿ ಇವೆರಡರ ನಡುವಿನಲ್ಲಿ ಜೆಡಿಎಸ್ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿದೆ. ಇಂತಹ ಒಂದು ಹಣಾಹಣಿಯ ನಡುವಿನಲ್ಲಿ ಬಿಜೆಪಿ ಪ್ರಮುಖ ನಾಯಕರುಗಳನ್ನು ಸೆಳೆದುಕೊಂಡರೆ ತಾನು ಬೇರೂರಲು ಸಾಧ್ಯ ಎನ್ನುವ ಯೋಚನೆಯಲ್ಲಿದೆ. ಇದರ ಜೊತೆಯಲ್ಲಿ ಅಮಿತ್ ಶಾ ಕೊಟ್ಟಿರುವ ಸೂಚನೆ ಕುರುಬರು ಮತ್ತು ಒಕ್ಕಲಿಗರು ಅಲ್ಲದೇ ವಾಲ್ಮೀಕಿ ನಾಯಕರ ನಡುವೆ ಮತ್ತಷ್ಟು ಗಮನವನ್ನು ಕೇಂದ್ರೀಕರಿಸಬೇಕು ಎನ್ನುವುದು. ಅಂದರೆ ಹಿಂದುಳಿದ ವರ್ಗಗಳಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಜಾತಿ ವಾರಾಗಿ ಒತ್ತು ನೀಡಬೇಕು ಮತ್ತು ಅದಕ್ಕೆ ತಕ್ಕಂತಹ ಕಾರ್ಯಾಚರಣೆಗೂ ಇಳಿಯಬೇಕು ಎನ್ನುವುದು ನಿರ್ದೇಶನದ ಸ್ಪಷ್ಟ ಸೂಚನೆ. ಕರ್ನಾಟಕದಲ್ಲಿ  ಕಾಂಗ್ರೆಸ್ ಪಕ್ಷಕ್ಕೆ ಈಗಲೂ ಹಿಂದುಳಿದ ವರ್ಗಗಳ ಬೆಂಬಲ ಪ್ರಮುಖವಾಗಿದೆ. ಅದನ್ನು ಕಿತ್ತುಕೊಳ್ಳುವ ಸೂಚನೆ ಅಮಿತ್ ಶಾ ರವರ ಚುನಾವಣಾ ತಂತ್ರಗಾರಿಕೆಯ ಜಾರಿಯ ಪೂರ್ವಭಾವಿ ಸಿದ್ಧತೆಯಾಗಿದೆ. ಈಗ ಮೊದಲಿನಂತೆ ಲಿಂಗಾಯಿತರ ಮೇಲಿನ ಹಿಡಿತ ಯಡಿಯೂರಪ್ಪನವರಿಗೆ ಇಲ್ಲಾ ಎನ್ನುವುದು ಈ ಸಮೀಕ್ಷೆಯ ಒಂದು ಅವಲೋಕನದ ಅಂಶವಂತೆ. ಹಾಗಾಗಿ ಇರುವ ಲಿಂಗಾಯತರ ಜೊತೆಗೆ  ಇನ್ನಷ್ಟು ಹೊಸ ಮತದಾರರ ಕಡೆಗೆ ಕೈಹಾಕುವುದು ಅದರ ಲೆಕ್ಕಾಚಾರ. ಆರ್.ಎಸ್.ಎಸ್. ನ ಅಂತರಿಕ ಸಮೀಕ್ಷೆ ವರದಿ ವಾಸ್ತವ ಏನೇ ಇರಲಿ ಒಂದಂತೂ ನಿಜ. ರಾಷ್ಟ್ರದ ಮತ್ತು ರಾಜ್ಯದ ಜನ ಬಿಜೆಪಿಯ ಆಡಳಿತದಲ್ಲಿ ಬೇಸರಗೊಳ್ಳುತ್ತಿದ್ದು ಬೆಲೆ ಏರಿಕೆಯಂತಹ ಜೀವನ ನಿರ್ವಹಣೆಯ ಭಾರ ಬಾಧೆಗಳಿಂದ ಜನರಲ್ಲಿ ಅತೃಪ್ತಿ ಹೆಚ್ಚುತ್ತಿದೆ. ಅದು ಯಾವುದೇ ಸ್ವರೂಪದಲ್ಲಿ ಸ್ಫೋಟಗೊಳ್ಳಬಹುದು ಎನ್ನುವ ವಾಸ್ತವಿಕ ಅಂದಾಜು ಬಿಜೆಪಿ ನಾಯಕತ್ವಕ್ಕೆ ಇದೆ. ಹಾಗಾಗಿ, ಅದನ್ನು ಬೇರೆ ಕಡೆಗೆ ತಿರುಗಿಸಿ ದಿಕ್ಕುತಪ್ಪಿಸುವ ಮತ್ತು ಅಧಿಕಾರವನ್ನು ಗಟ್ಟಿಗೊಳಿಸಿಕೊಳ್ಳುವ ರಾಜಕೀಯ ತಂತ್ರಕ್ಕೆ ಮೊರೆ ಹೋಗಿದೆ. ಈ ಕಾರಣದಿಂದ ತಮ್ಮದೇ ಆದ ಲೆಕ್ಕಾಚಾರಗಳ ಯೋಚನಾ ಲಹರಿಯಲ್ಲಿ ಇರುವ ಬಿಜೆಪಿ ನಾಯಕರುಗಳಿಗೆ ಚಾಟಿಯೇಟು ಕೊಟ್ಟು ಪೂರ್ಣಪ್ರಮಾಣದಲ್ಲಿ ಚುನಾವಣೆಯ ಕೆಲಸಕ್ಕೆ ಇಳಿಯಲು ಅಮಿತ್ ಶಾ ಮೂಲಕ ಪ್ರಯತ್ನ ಆರಂಭಗೊಂಡಿದೆ.

ಈ ನಡುವಿನಲ್ಲಿ ಮತ್ತೊಂದು ಬೆಳವಣಿಗೆಯೆಂದರೆ ಸಂಘಪರಿವಾರ ನಡೆಸಿರುವ ಕೋಮು ಉದ್ರೇಕತೆ ಮತ್ತು ಶಾಂತಿ ಕದಡುವ ಕೃತ್ಯಗಳ ವಿರುದ್ಧ ಕೈಗಾರಿಕೋದ್ಯಮಿಗಳು ತೀವ್ರ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಇಂತಹ ವಾತಾವರಣ ಕೈಗಾರಿಕಾ ಸ್ನೇಹಿ ಅಭಿವೃದ್ಧಿಗೆ ಮಾರಕವಾಗಲಿದೆ. ಅದನ್ನು ತಡೆಯಲು ರಾಜ್ಯದ ಮುಖ್ಯಮಂತ್ರಿಗಳು, ಸರ್ಕಾರ ಪ್ರಯತ್ನಿಸಬೇಕು ಎಂದು ಬಯೋಟೆಕ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ರವರು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿನ ಈಗಿನ ಬೆಳವಣಿಗೆಗಳು ರಾಜ್ಯದಲ್ಲೂ ಮತ್ತು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದಾಗಿದೆ. ಅಧಿಕಾರಕ್ಕೆ ಬಂದಾಗ ಬಸವರಾಜ ಬೊಮ್ಮಾಯಿ ಅವರು ನವ ಕರ್ನಾಟಕ ನಿರ್ಮಾಣದ ಕನಸನ್ನು ಮುಂದಿಟ್ಟಿದ್ದರು. ಈಗಲೂ ಅಭಿವೃದ್ಧಿಯ ರಾಜಕಾರಣದ ಪ್ರತಿನಿಧಿ ತಾವಾಗಬೇಕು ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸುತ್ತಾರೆ. ಅದರ ಭಾಗವಾಗಿ ಮುಂದಿನ ಕೆಲ ತಿಂಗಳುಗಳಲ್ಲಿ ಅಂತರಾಷ್ಟ್ರೀಯ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಡೆಸಿ ಬಂಡವಾಳವನ್ನು ಸೆಳೆದು ರಾಜ್ಯದಲ್ಲಿ ಅಭಿವೃದ್ದಿ ಸಾಧಿಸಬೇಕು ಎನ್ನುವ ಅಭಿವೃದ್ಧಿಯ ರೂಪುರೇಷಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.

ಯಡಿಯೂರಪ್ಪನವರನ್ನು ಬದಲಾಯಿಸಿ ಬೊಮ್ಮಾಯಿ ಅವರನ್ನು ಅಧಿಕಾರದಲ್ಲಿ ಕುಳ್ಳಿರಿಸಿದ ಬಳಿಕ ಅವರ ಆಜ್ಞೆಗಳು ಜಾರಿಯಾಗುತ್ತಲಿದ್ದರೂ ಸಂಘ ಪರಿವಾರಕ್ಕೆ ತೃಪ್ತಿ ಇಲ್ಲ. ಅಧಿಕಾರದಲ್ಲಿ ಆರೆಸ್ಸೆಸ್ಸಿನ ಕೈಗೊಂಬೆ ಕಟ್ಟಾಳುವನ್ನೇ ಸ್ಥಾಪಿಸಲು ಸತತವಾಗಿ ಪ್ರಯತ್ನಿಸುತ್ತಾ ಬರಲಾಗಿದೆ. ಅಂದರೆ ಬೊಮ್ಮಾಯಿ ಅವರನ್ನು ಬದಲಾಯಿಸುವುದು ಅದರ ಆಂತರಿಕ ನಿರ್ಧಾರವೂ ಇರಬಹುದು. ಅದಕ್ಕೆ ಬೇಕಾಗಿರುವ ಕಾರ್ಯಾಚರಣೆಯೂ ಗುಪ್ತ ಅಜೆಂಡಾಗಳಲ್ಲಿ ಇರಬಹುದು. ಇದಕ್ಕಾಗಿ ಆರೆಸ್ಸೆಸ್ಸಿನ ಬಿ.ಎಲ್. ಸಂತೋಷ್ ಮತ್ತು ಸಿ.ಟಿ. ರವಿ ಜಂಟಿಯಾಗಿ ಕೆಲಸ ಮಾಡುತ್ತಿರುವ ಮಾತುಗಳು ಇವೆ. ಯತ್ನಾಳ್ ಅವರು ಹೇಗೋ ಯಡಿಯೂರಪ್ಪನವರ ಬೆನ್ನು ಬಿದ್ದಿದ್ದಾರೆ.

ಈ ಸನ್ನಿವೇಶದಲ್ಲಿ ಆಂತರಿಕ ಬೇಗುದಿ ಗಳಲ್ಲಿ ಇರುವ ಕಾಂಗ್ರೆಸ್, ಬಹುಮುಖೀಯ ದಾಳಿಗಳಿಗೆ ಒಳಗಾಗಿರುವ ಜೆಡಿಎಸ್ ಪಕ್ಷಗಳು ಹೇಗೆ ಬಿಜೆಪಿಯನ್ನು ಎದುರಿಸಿ ನಿಲ್ಲುತ್ತವೆ, ತಡೆಯುತ್ತವೆ ಎನ್ನುವುದು ಒಂದು ಪ್ರತ್ಯೇಕ ಪ್ರಶ್ನೆ. ಬಿಜೆಪಿಯ ಎಲ್ಲಾ ಒಳಹೊರ ಪಿತೂರಿಯ ಹುನ್ನಾರಗಳನ್ನು ಸೋಲಿಸಿ ಅಧಿಕಾರಕ್ಕೆ ಬರದಂತೆ ತಡೆಯಲು, ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಡ ಮತ್ತು ಪ್ರಜಾಸತ್ತಾತ್ಮಕ, ಜಾತ್ಯತೀತ ಶಕ್ತಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಒಂದು ನಿಜವಾದ ಜನ ಪರ್ಯಾಯವನ್ನು ಕಟ್ಟುತ್ತವೆ ಎನ್ನುವುದು ಕೂಡ ಬಹಳ ಮಹತ್ವದ ಸಂಗತಿ.

Donate Janashakthi Media

Leave a Reply

Your email address will not be published. Required fields are marked *