ಬೃಂದಾ ಕಾರಟ್
ಅನು: ಲವಿತ್ರ
ತೆಲಂಗಾಣದಲ್ಲಿ ಗೃಹ ಸಚಿವರು ನಿಜಾಮ ಶರಣಾದ್ದನ್ನು ಮುಸ್ಲಿಂ ವರ್ಸಸ್ ಹಿಂದೂ ಎನ್ನುವಂತೆ ಬಿಂಬಿಸಿದರು. ಹೌದು, ತೆಲಂಗಾಣದಲ್ಲಿ “ವಿಮೋಚನೆ” ನಡೆದಿತ್ತು ಆದರೆ ಅದು ಅಮಿತ್ ಶಾ ಉಸುರಿದ ‘ಕ್ರೊನೋಲೊಜಿ’ ಅಲ್ಲ. ಒಪ್ಪಂದವನ್ನು ಉಲ್ಲಂಘಿಸಿದ ನಿಜಾಮನನ್ನು ‘ರಾಜಪ್ರಮುಖ’ನಾಗಿ ಮಾಡಲಾಯಿತು. ಆತನ ದಬ್ಬಾಳಿಕೆಯ ವಿರುದ್ಧ ಹೋರಾಡಿದವರನ್ನು ಶಿಕ್ಷಿಸಲಾಯಿತು. ಇದು ತಿರುಗುಮುರುಗಾದ ‘ವಿಮೋಚನೆ’! ಇಷ್ಟೇ ಅಲ್ಲ- ಅವರು ಕೃತಜ್ಞತೆಯಿಂದ ಸ್ಮರಿಸಿಕೊಂಡ ಹಿಂದೂ ಮಹಾಸಭಾದ ಪೂಜ್ಯ ಮುಖಂಡರೇ ತಿರುವಾಂಕೂರಿನ ಮಹಾರಾಜ ಕೂಡ ನಿಜಾಮನಂತೆಯೇ ಭಾರತದಿಂದ ಸ್ವತಂತ್ರವಾಗಿರುವ ಘೋಷಣೆಯನ್ನು ಮಾಡಿದ್ದನ್ನು ಬೆಂಬಲಿಸಿದರು ಮತ್ತು ಇದೇ ಶಾ ರವರ ಸರಕಾರ ಪಾಕಿಸ್ತಾನದೊಂದಿಗೆ ‘ಸ್ಟಾಂಡ್‍ಸ್ಟಿಲ್’ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಹೇಳಿ ಭಾರತದಿಂದಲೂ ಸ್ವತಂತ್ರವಾಗಿ ಉಳಿಯುವ ಉದ್ದೇಶವನ್ನು ಘೋಷಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿಸಿಂಗರ ಜನ್ಮದಿನವನ್ನು ಅಲ್ಲಿ ರಜಾದಿನವಾಗಿ ಘೋಷಿಸಿದೆ!
ಗೃಹ ಸಚಿವ ಅಮಿತ್ ಶಾರವರಿಗೆ ಹೈದರಾಬಾದ್ ನಿಜಾಮ್ ಭಾರತಕ್ಕೆ ಸೇರ್ಪಡೆಯಾದ ವಾರ್ಷಿಕೋತ್ಸವವನ್ನು ಆಚರಿಸಲು ತೆಲಂಗಾಣಕ್ಕೆ ಭೇಟಿ ಮಾಡಿದ ಸಂದರ್ಭದಲ್ಲಿ ಅನೇಕ ವಿಷಯಗಳನ್ನು ಹೇಳಲಿಕ್ಕಿತ್ತು. ಸೆಪ್ಟೆಂಬರ್ 17ನ್ನು ನಿಜಾಮ ಮತ್ತು ರಜಾಕಾರರ ಆಳ್ವಿಕೆಯಿಂದ ‘ವಿಮೋಚನಾ ದಿನ’ವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದರು. ನಮಗೆ ತಿಳಿದಿರುವಂತೆ ರಜಾಕಾರರು, ಪಾಕಿಸ್ತಾನಕ್ಕೆ ಹೋಗಲು ಅನುಮತಿ ಪಡೆದ ಖಾಸಿಂ ರಿಜ್ವಿಯ ನಿಯಂತ್ರಣದಲ್ಲಿದ್ದ ನಿಜಾಮರ ಖಾಸಗಿ ಸಶಸ್ತ್ರ ಪಡೆಗಳು. ತೆಲಂಗಾಣವನ್ನು ಆಳುವವರು ಮತ್ತು ಭಾರತವನ್ನು ಆಳಿದವರು ಇಂದಿನ ರಜಾಕಾರ್‌ಗಳಿಗೆ ಹೆದರುತ್ತಿದ್ದಾರೆ, ಅದಕ್ಕಾಗಿಯೇ ಅವರು ಈ ದಿನಾಚರಣೆ ಮಾಡಿಲ್ಲ ಎಂದು ಶಾ ಆರೋಪಿಸಿದರು. ನಿಜಾಮ್ ಮತ್ತು ರಜಾಕಾರರ ವಿರುದ್ಧ, ಶಾ ಪ್ರಕಾರ, ಹೋರಾಡಿದವರಿಗೆ ತಮ್ಮ ಕೃತಜ್ಞತೆಯ ಸಂದೇಶದಲ್ಲಿ, ನಿರ್ದಿಷ್ಟವಾಗಿ ಹಿಂದೂ ಮಹಾಸಭಾ ಮತ್ತು ಆರ್ಯ ಸಮಾಜವನ್ನು ಮಾತ್ರ ಉಲ್ಲೇಖಿಸಿದ್ದಾರೆ. ಮತ್ತು ಸಹಜವಾಗಿಯೇ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗಂತೂ ಕೃತಜ್ಞತೆಯನ್ನು ಸಲ್ಲಿಸಿದರು. ಭಾರತದ ಗೃಹ ಸಚಿವರು ನಿಜಾಮ್ ಭಾರತಕ್ಕೆ ಸೇರ್ಪಡೆಯಾದದ್ದನ್ನು ಹಿಂದು ವರ್ಸಸ್ ಮುಸ್ಲಿಂ ಎನ್ನುವಂತೆ ಬಿಂಬಿಸಿದರು. ಮತ್ತು ಭಾರತೀಯ ಸೇನೆಯು “ಉಕ್ಕಿನ ಮನುಷ್ಯ” ಪಟೇಲ್ ಅವರ ನಾಯಕತ್ವದಲ್ಲಿ ನಿರಂಕುಶ ಮುಸ್ಲಿಂ ಆಡಳಿತಗಾರನ ಹಿಡಿತದಿಂದ ರಾಜ್ಯವನ್ನು “ವಿಮೋಚನೆ” ಮಾಡುವ ಒಂದು ಮಾದರಿ ಪ್ರಕರಣವೆಂದು ಪ್ರಸ್ತುತಪಡಿಸಿದರು.
ನೀವು ಇದನ್ನು ತಿರುಚಿದ ಇತಿಹಾಸವೆಂದೋ, ಸತ್ಯದ ಕೊರತೆಯೆಂದೋ ಅಥವಾ ಸುಳ್ಳುಗಳ ಕಂತೆಯೆಂದೋ, ಏನು ಬೇಕಾದರೂ ಕರೆಯಬಹುದು.
ಹೌದು, ತೆಲಂಗಾಣದಲ್ಲಿ “ವಿಮೋಚನೆ” ನಡೆದಿತ್ತು ಆದರೆ ಅದು ಅಮಿತ್ ಶಾ ಉಸುರಿದ ‘ಕ್ರೊನೋಲೊಜಿ’(ಘಟನಾಕ್ರಮ) ಅಲ್ಲ. ನಿಜಾಮರ ಆಳ್ವಿಕೆಯು “ದೊರಾ” ಎಂದು ಕರೆಯಲ್ಪಡುತ್ತಿದ್ದ ಜಮೀನ್ದಾರರು, ದೇಶಮುಖರನ್ನು ಆಧರಿಸಿದ್ದ ಕ್ರೂರ ಊಳಿಗಮಾನ್ಯ ದಬ್ಬಾಳಿಕೆಯಾಗಿತ್ತು. ನಿಜಾಮರ ಆಳ್ವಿಕೆಗೆ ಬಲವಾದ ಬೆಂಬಲದ ನೆಲೆಯನ್ನು ಒದಗಿಸಿದ ಹಿಂದೂ ಮೇಲ್ಜಾತಿಯ ಗ್ರಾಮೀಣ ಕುಲೀನರು ಇದರಲ್ಲಿ ಸೇರಿದ್ದರು. ನಿಜಾಮ ಆಳ್ವಿಕೆಯ ಸಂಕೇತಗಳಾದ ಈ ಹಿಂದೂ ಮತ್ತು ಮುಸ್ಲಿಂ ದಮನಕೋರರನ್ನು ಬೆಂಬಲಿಸಲು ರಜಾಕಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಯಿತು. ಈ ವ್ಯವಸ್ಥೆಯು ನಿಜಾಮರ ಬೊಕ್ಕಸವನ್ನು ದುಬಾರಿ ಗೇಣಿ, ಬಲವಂತದ ಬಿಟ್ಟಿ ದುಡಿಮೆಯ “ವೆಟ್ಟಿ” ವ್ಯವಸ್ಥೆ, ಸಾಮೂಹಿಕ ಒಕ್ಕಲೆಬ್ಬಿಸುವುದು ಮತ್ತು ಸಾಗುವಳಿ ರೈತರಿಂದ ಭೂಮಿಯ ಸ್ವಾಧೀನ, ಭೂಮಾಲೀಕ ಕುಟುಂಬಗಳಿಗೆ ಉಚಿತ ಸೇವೆಗಳನ್ನು ಒದಗಿಸುವ ಮೂಲಕ ಮಾಡುವ ಕಂದಾಯ ಸಂಗ್ರಹವನ್ನು ಆಧರಿಸಿತ್ತು. ಬಡ ಗ್ರಾಮೀಣ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ವಿಪರೀತವಾಗಿತ್ತು.
ಧರ್ಮದ ಅಂಶ ಇರಲಿಲ್ಲ
1946 ರಲ್ಲಿ, ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಆಂಧ್ರ ಮಹಾಸಭಾದ ಮೂಲಕ ಈಗಿನ ತೆಲಂಗಾಣದ ಜಿಲ್ಲೆಗಳಲ್ಲಿ ನಿಜಾಮನ ಈ ಆಳ್ವಿಕೆಯನ್ನು ದ್ವೇಷಿಸಲಾರಂಭಿಸಿದ್ದ ರೈತರು, ಭೂರಹಿತರು, ಕುಶಲಕರ್ಮಿಗಳು, ಮಹಿಳೆಯರು ನಿಜಾಮ ಆಡಳಿತದ ವಿರುದ್ಧ ಶಸ್ತ್ರಗಳನ್ನು ಎತ್ತಿದರು. ಈ ಹೋರಾಟವು ಊಳಿಗಮಾನ್ಯ ದಬ್ಬಾಳಿಕೆಯ ಭಾರೀ ಹೊರೆಯಿಂದ ರೈತ ಮತ್ತು ಭೂರಹಿತ ಕಾರ್ಮಿಕರು, ದಲಿತರು ಮತ್ತು ಆದಿವಾಸಿಗಳ ವಿಮೋಚನೆಗಾಗಿ ಆಗಿತ್ತು. ಈ ಹೋರಾಟದಲ್ಲಿ ಧರ್ಮದ ಅಂಶ ಇರಲಿಲ್ಲ. ಹೇಗೆ ಹೋರಾಟಗಾರರು ಹಿಂದೂ ಮತ್ತು ಮುಸ್ಲಿಂ ರೈತರಾಗಿದ್ದರೋ ಅದೇ ರೀತಿ ದಬ್ಬಾಳಿಕೆ ಮಾಡುವವರು ಹಿಂದೂ ಮತ್ತು ಮುಸ್ಲಿಂ ಇಬ್ಬರೂ ಆಗಿದ್ದರು. ನಂತರದ ವರ್ಷಗಳಲ್ಲಿ, ಹೋರಾಟವನ್ನು ಹಿಂತೆಗೆದುಕೊAಡ 1951ರ ವರೆಗೆ, ನಿಜಾಮ ಮತ್ತು ರಜಾಕಾರರ ಬಲವನ್ನು ಎದುರಿಸಿ, ರೈತರು ಹೋರಾಡಿ 3,000 ಕ್ಕೂ ಹೆಚ್ಚು ಹಳ್ಳಿಗಳನ್ನು ವಿಮೋಚನೆಗೊಳಿಸಿದರು. ನ್ಯಾಯ ಮತ್ತು ಸಮಾನತೆಯ ಆಧಾರದ ಮೇಲೆ “ಗ್ರಾಮರಾಜ್ಯ” ಸ್ಥಾಪಿಸಿದರು ಮತ್ತು 10 ಲಕ್ಷ ಎಕರೆ ಭೂಮಿ ಹಂಚಿಕೆ ಮಾಡಿದರು; ಜೊತೆಗೆ ಜಾತಿ ವ್ಯವಸ್ಥೆ ಮತ್ತು ಮಹಿಳೆಯರ ಅಧೀನತೆಯ ವಿರುದ್ಧ ಸಾಮಾಜಿಕ ಸಂಬಂಧಗಳಲ್ಲಿ ಆಮೂಲಾಗ್ರ ಪರಿವರ್ತನೆಗೆ ಪ್ರಯತ್ನಿಸಿದರು. ಈ ಹೋರಾಟದಲ್ಲಿ 4,000ಕ್ಕೂ ಹೆಚ್ಚು ಜನ ಹುತಾತ್ಮರಾಗಿದ್ದರು. ಈ ಹೋರಾಟದ ಪ್ರತೀಕ ಜಲಗಾಂವ ತಾಲೂಕಿನ ಪಾಲಕುರ್ತಿ ಗ್ರಾಮದಲ್ಲಿ ಶೋಷಿತ ವರ್ಗದ ವೀರ ಮಹಿಳೆ ಐಲಮ್ಮ. ಈ ಪ್ರದೇಶದ ದುಷ್ಟ ದೇಶಮುಖ ವಿ ರಾಮಚಂದ್ರ ರೆಡ್ಡಿ, ಅವಳು ಮತ್ತು ಅವಳ ಕುಟುಂಬವು ಗೇಣಿದಾರರಾಗಿದ್ದ ಅವರ ಹೊಲದಿಂದ ಬಲವಂತವಾಗಿ ಬೆಳೆ ಕಟಾವು ಮಾಡಲು ತನ್ನ ಶಸ್ತ್ರಸಜ್ಜಿತ ಗೂಂಡಾಗಳನ್ನು ಕಳುಹಿಸಿದನು. ಆಂಧ್ರ ಮಹಾಸಭೆ ಮತ್ತು ಕೆಂಪು ಬಾವುಟದ ಬೆಂಬಲದೊAದಿಗೆ ಹೋರಾಡಿ ಅಂತಿಮವಾಗಿ ತನ್ನ ಬೆಳೆ ಲೂಟಿಯನ್ನು ಆಕೆ ತಡೆಯುತ್ತಾಳೆ. ಅದು ಇಡೀ ಹುಲ್ಲುಗಾವಲನ್ನು ಸುಟ್ಟು ಹಾಕುವ ಕಿಡಿಯಾಗಿತ್ತು, ಪ್ರತಿರೋಧದ್ಲ ಬೆಂಕಿ ಹರಡಿತು. ಊಳಿಗಮಾನ್ಯ ದಬ್ಬಾಳಿಕೆಯಿಂದ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ವಿಮೋಚನೆಗಾಗಿ ನಡೆದ ಈ ಹೋರಾಟವು ನಿಜಾಮನ ಆಳ್ವಿಕೆಯನ್ನು ಬಹಳವಾಗಿ ದುರ್ಬಲಗೊಳಿಸಿತು. ಈ ಸಂದರ್ಭದಲ್ಲಿ ಎಲ್ಲಿಯೂ ಆರ್ಯ ಸಮಾಜ ಮತ್ತು ಹಿಂದೂ ಮಹಾಸಭಾದ ಪತ್ತೆಯೇ ಇರಲಿಲ್ಲ. ಅಂದಿನ ಪ್ರಮುಖ ಕಮ್ಯುನಿಸ್ಟ್ ಸಂಘಟಕರೂ, ನಂತರ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಪಿ ಸುಂದರಯ್ಯ ಅವರು ಬರೆದ ಪುಸ್ತಕದಲ್ಲಿ ಈ ಭವ್ಯ ಇತಿಹಾಸ ಲಭ್ಯವಿದೆ.
ನಿಜಾಮರು ಭಾರತಕ್ಕೆ ಸೇರಲು ನಿರಾಕರಿಸಿದ್ದು ಇತಿಹಾಸದ ಸತ್ಯ. ರೈತರ ವಿಮೋಚನಾ ಹೋರಾಟದ ಮತ್ತು ಭಾರತ ಸರ್ಕಾರದ ಒತ್ತಡದಲ್ಲಿ, ಆತ ನವೆಂಬರ್ 1947 ರಲ್ಲಿ “ನಿಲುಗಡೆ ಒಪ್ಪಂದ”(ಸ್ಟಾಂಡ್‌ಸ್ಟಿಲ್ ಅಗ್ರಿಮೆಂಟ್) ಕ್ಕೆ ಸಹಿ ಹಾಕಿದರು. ಇದು ಕಾನೂನುಬದ್ಧವಾಗಿ ಆತನಿಗೆ ಒಂದು ವರ್ಷದ ಸಂಕ್ರಮಣದ ಸಮಯವನ್ನು ನೀಡಿತು. ಈ ಸಮಯದಲ್ಲಿ ವಿದೇಶಾಂಗ ವ್ಯವಹಾರಗಳು, ರಕ್ಷಣೆ ಮತ್ತು ಸಂವಹನಗಳು ಭಾರತ ಸರ್ಕಾರದ ನಿಯಂತ್ರಣದಲ್ಲಿರಬೇಕು. ಮತ್ತು ಆತನಿಗೆ ಆಂತರಿಕ ವ್ಯವಹಾರಗಳ ಮೇಲಿನ ನಿಯಂತ್ರಣಕ್ಕೆ ಮಾತ್ರ ಅನುಮತಿಯಿತ್ತು. ಪಟೇಲ್ ಗೃಹ ಸಚಿವರಾಗಿದ್ದರು. ರಾಜಿ ಮಾಡಿಕೊಂಡಿದ್ದು ಅವರೇ. ಮುಂದಿನ ಆರು ತಿಂಗಳೊಳಗೆ, ಪಟೇಲರು ತೆಲಂಗಾಣದಿಂದ ಭಾರತೀಯ ಸೈನ್ಯವನ್ನು ಹಿಂತೆಗೆದುಕೊಂಡು ರಜಾಕಾರರಿಗೆ ಕ್ಷೇತ್ರವನ್ನು ಮುಕ್ತಗೊಳಿಸಲಾಯಿತು. ನಿಜಾಮ ಈ ಅವಧಿಯನ್ನು ರೈತ ಹೋರಾಟದ ವಿರುದ್ಧ ಸಶಸ್ತ್ರ ಆಕ್ರಮಣ ಮಾಡಲು, ತನ್ನ ಸ್ವಂತ ಆಳ್ವಿಕೆಯನ್ನು ಗಟ್ಟಿಗೊಳಿಸಲು, ಪಾಕಿಸ್ತಾನದೊಂದಿಗೆ ರಹಸ್ಯ ಸಂಪರ್ಕಗಳನ್ನು ನಿರ್ವಹಿಸಲು ಬಳಸಿದರು – ಆದರೆ ಆತನಿಗೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಒಪ್ಪಂದವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಭಾರತ ಸರ್ಕಾರವು ಅಂತಿಮವಾಗಿ ಕಾರ್ಯಾಚರಣೆ ನಡೆಸಲು ನಿರ್ಧರಿಸಿದಾಗ, ಆತ ತುಂಬಾ ದುರ್ಬಲಗೊಂಡಿದ್ದರು, ಭಾರತೀಯ ಸೇನೆಗೆ ಶರಣಾಗಲು ಕೇವಲ ನಾಲ್ಕು ದಿನಗಳಷ್ಟೇ ಸಾಕಾಯಿತು. ಭಾರತದೊಂದಿಗೆ ಸೇರ್ಪಡೆಯ ದಸ್ತಾವೇಜಿಗೆ ಆತ ಸಹಿ ಹಾಕಿದರು. ಆದರೆ ನೆಹರು-ಪಟೇಲ್ ಜೋಡಿ ಆತನಿಗೆ ‘ರಾಜ ಪ್ರಮುಖ್’ ಎಂಬ ನಾಮಮಾತ್ರದ ಪಾತ್ರವನ್ನು ಮರಳಿಸಿತು – ಈ ಘಟನಾಕ್ರಮ(‘ಕ್ರೊನೋಲೊಜಿ’) ಅಮಿತ್ ಶಾ ಅವರ ಕಥನದಲ್ಲಿ ಇಲ್ಲ. ಇದೊಂದು ವಿಚಿತ್ರ ರೀತಿಯ “ವಿಮೋಚನೆ” – ದಮನಕೋರನಿಗೆ ‘ರಾಜಪ್ರಮುಖ’ ಎಂಬ ಪುರಸ್ಕಾರ ! ಸೇನೆಯು ತೆಲಂಗಾಣದಲ್ಲಿ ಉಳಿದುಕೊಂಡಿತು, ರೈತರ ಸಶಸ್ತ್ರ ಹೋರಾಟದ ಮೇಲೆ ಹರಿಹಾಯಲು. ಅದರ ದೌರ್ಜನ್ಯಗಳು ರಜಾಕಾರರಿಗಿಂತ ಕಡಿಮೆಯೇನೂ ಇರಲಿಲ್ಲ. 10,000 ಕ್ಕೂ ಹೆಚ್ಚು ಕಮ್ಯುನಿಸ್ಟರನ್ನು ಬಂಧನ ಶಿಬಿರಗಳಲ್ಲಿ ಅಮಾನವೀಯ ಪರಿಸ್ಥಿತಿಗಳಲ್ಲಿ ಬಂಧಿಸಿಡಲಾಯಿತು ಮತ್ತು ಅಲ್ಲಿ ಅನೇಕರು ನಾಶವಾದರು. ಇನ್ನೂ 50,000 ದಷ್ಟು ಜನರು ಸೇನಾ ಶಿಬಿರಗಳಲ್ಲಿ ಕ್ರೂರ ಚಿತ್ರಹಿಂಸೆಗೆ ಗುರಿಯಾಗಿದ್ದರು. ರೈತರಿಂದ ನಿಜಾಮರ ಆಡಳಿತದ ವಿರುದ್ಧದ “ಗ್ರಾಮರಾಜ್ಯ”ದ, ವಿಮೋಚನೆಯ ಗಳಿಕೆಯನ್ನು ಭಾರತೀಯ ಸೇನೆಯು ಹೊಸಕಿ ಹಾಕಿತು. ನಿಜಾಮನು ತನ್ನ ಸಂಪತ್ತು ಮತ್ತು ತನ್ನ ಸ್ಥಾನಮಾನವನ್ನು ಉಳಿಸಿಕೊಂಡರೆ ಮತ್ತು ಊಳಿಗಮಾನ್ಯ ದಮನಕೋರರ ಆಳ್ವಿಕೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸಿದರೆ, ಇತ್ತ ನಿಜಾಮನ ವಿರುದ್ಧದ ಹೋರಾಟಗಾರರಿಗೆ ಶಿಕ್ಷೆಯಾಯಿತು. ಇದು ತಿರುಮುರುಗಾದ “ವಿಮೋಚನೆ”ಯಾಗಿತ್ತು.
ಹಿಂದೂ ಮಹಾಸಭಾದ ದ್ವಂದ್ವ ಪಾತ್ರ
ಆದರೆ ಅಮಿತ್ ಶಾ ಹೊಗಳಿದ ಆರ್ಯ ಸಮಾಜ ಮತ್ತು ಹಿಂದೂ ಮಹಾಸಭಾದ ಪಾತ್ರವೇನು? ನಿಜಾಮನ ವಿರುದ್ಧದ ಹೋರಾಟದಲ್ಲಿ ಅವರ ಪಾತ್ರವೇನೂ ಇರಲಿಲ್ಲ. ಆತ ಶರಣಾದ ನಂತರವೇ ಈ ಎರಡು ಸಂಘಟನೆಗಳು ರಜಾಕಾರರ ಹಿಂದಿನ ದೌರ್ಜನ್ಯಗಳಿಗೆ ಪ್ರತೀಕಾರವಾಗಿ ಮುಸ್ಲಿಮರ ವಿರುದ್ಧ ಕೋಮು ದಾಳಿಯ ಅಲೆಯನ್ನು ಪ್ರಾರಂಭಿಸಿದವು. ಪರಿಸ್ಥಿತಿಯನ್ನು ಅಂದಾಜು ಮಾಡಲು ಕೇಂದ್ರ ಸರ್ಕಾರವು ‘ಸದ್ಭಾವನಾ (ಗುಡ್ವಿಲ್) ಮಿಷನ್’ ಅನ್ನು ಕಳುಹಿಸಿತು. ಇದಕ್ಕೆ ಪಂಡಿತ್ ಸುಂದರ್ ಲಾಲ್ ನೇತೃತ್ವ ವಹಿಸಿದ್ದರು. ಕೇವಲ ಮೂರು ಜಿಲ್ಲೆಗಳು ಮಾತ್ರ ಕೋಮುಗಲಭೆಯಿಂದ ಮುಕ್ತವಾಗಿವೆ ಎಂದು ಅವರು ತಮ್ಮ ವರದಿಯಲ್ಲಿ ತಿಳಿಸಿದ್ದರು. ಈ ಮೂರು ಜಿಲ್ಲೆಗಳು ಸಶಸ್ತ್ರ ವಿಮೋಚನಾ ಹೋರಾಟ ನಡೆದ ಸ್ಥಳಗಳು. ಈಗಿನ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿರುವ ಉಸ್ಮಾನಾಬಾದ್, ಗುಲ್ಬರ್ಗಾ, ಬೀದರ್ ಮತ್ತು ನಾಂದೇಡ್ ನಲ್ಲಿ ಪರಿಸ್ಥಿತಿ ಕೆಟ್ಟದಾಗಿತ್ತು. ‘ಸುಂದರ್‌ಲಾಲ್ ವರದಿ’ ಅಲ್ಪಸಂಖ್ಯಾತರಾಗಿದ್ದ ಗ್ರಾಮೀಣ ಪ್ರದೇಶಗಳಲ್ಲಿನ ಬಡ ಮುಸ್ಲಿಮರು ಮುಖ್ಯ ಬಲಿಪಶುಗಳು ಎಂಬ ವಾಸ್ತವತೆಯನ್ನು ವಿವರಿಸಿದೆ. ಸಾವಿರಾರು ಜನರನ್ನು ಕೊಂದರು, ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಯಿತು, ಬಲವಂತವಾಗಿ ಹಣೆಯ ಮೇಲೆ ಹಚ್ಚೆ ಹಾಕುವ ಮೂಲಕ ಮತಾಂತರಗಳನ್ನು ಮಾಡಲಾಯಿತು. ಇದನ್ನು ಎಸಗಿದ ಅಪರಾಧಿಗಳು ಯಾರು? “ಶೋಲಾಪುರದ ಸುಪರಿಚಿತ ಹಿಂದೂ ಸಂಘಟನೆಗೆ ಸೇರಿದ ಹಲವಾರು ಶಸ್ತ್ರಸಜ್ಜಿತ ವ್ಯಕ್ತಿಗಳು ಈ ಗಲಭೆಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಕೆಲವು ಸಂದರ್ಭಗಳಲ್ಲಿ ಅವರೇ ಗಲಭೆಕೋರರನ್ನು ಮುನ್ನಡೆಸಿದ್ದಾರೆ ಎಂಬ ಖಚಿತ ಸೂಚನೆಗಳು ನಮಗೆ ಸಿಕ್ಕಿವೆ ” ಎಂದು ವರದಿಯಲ್ಲಿ ಹೇಳಲಾಗಿದೆ. ಯಾವುದು ಈ “ಸುಪರಿಚಿತ ಹಿಂದೂ ಸಂಘಟನೆ” ? ಆ ಪ್ರದೇಶಗಳಲ್ಲಿ ಆ ಸಮಯದಲ್ಲಿ ಹಿಂದೂ ಮಹಾಸಭಾ ಮತ್ತು ಆರ್ಯ ಸಮಾಜ ಈ ಎರಡು ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದವು. ಕೋಮುಗಲಭೆಗೆ ಕಾರಣರಾದ ಯಾರನ್ನೂ ಬಂಧಿಸಲಿಲ್ಲ. ವರದಿಯು ಕಮ್ಯುನಿಸ್ಟರನ್ನು ಉಲ್ಲೇಖಿಸಿದೆ, ಆದರೆ ಅವರ ಸಶಸ್ತ್ರ ಹೋರಾಟವನ್ನು ಕೋಮು ಗಲಭೆಗಳೊಂದಿಗೆ ಗೊಂದಲ ಮಾಡಿಕೊಂಡಿದೆ.
ಹಿಂದೂ ಮಹಾಸಭಾದ ಪಾತ್ರಕ್ಕೆ ಮತ್ತೊಂದು ಅಷ್ಟೇ ಮಹತ್ವದ ಐತಿಹಾಸಿಕ ಪುರಾವೆ ಇದೆ. ಮಹಾರಾಜರು ಹಿಂದೂ ರಾಜ್ಯವನ್ನು ಸ್ಥಾಪಿಸುವುದಾದರೆ ಭಾರತದಿಂದ ಸ್ವಾತಂತ್ರ‍್ಯವನ್ನು ಘೋಷಿಸುವ ಹಕ್ಕಿಗೆ ಅದರ ವಿರೋಧ ಇರಲಿಲ್ಲ. ಜೂನ್ 1947 ರಲ್ಲಿ, ತಿರುವಾಂಕೂರಿನ ಮಹಾರಾಜ ಶ್ರೀ ಚಿಥಿರ ತಿರುನಾಳ್ ತನ್ನ ದಿವಾನ ಸಿ ಪಿ ರಾಮಸ್ವಾಮಿ ಅಯ್ಯರ್ ಮೂಲಕ ಭಾರತದಿಂದ ಸ್ವತಂತ್ರವಾದ ರಾಜ್ಯವನ್ನು ಸ್ಥಾಪಿಸುವ ಉದ್ದೇಶವನ್ನು ಘೋಷಿಸಿದರು. “ರೇರ್ ಅರ್ಥ್‍ಸ್ : ಕೋಲ್ಡ್ ವಾರ್ಸ್ ಇನ್ ದಿ ಆನಲ್ಸ್ ಆಫ್ ಟ್ರಾವಂಕೂರ್” (ಅಪರೂಪದ ಮಣ್ಣುಗಳು: ತಿರುವಾಂಕೂರಿನ ಇತಿಹಾಸದ ಪುಟಗಳಲ್ಲಿ ಶೀತಲ ಸಮರಗಳು) ಎಂಬ ಪ್ರಬಂಧದಲ್ಲಿ, ಪ್ರೊಫೆಸರ್ ಇಟ್ಟಿ ಅಬ್ರಹಾಂ ಈ ಆತ್ಮವಿಶ್ವಾಸಕ್ಕೆ ಕಾರಣ ಅಲ್ಲಿದ್ದ ಅಪರೂಪದ ಮಣ್ಣುಗಳು ಮತ್ತು ಥೋರಿಯಂ ನಿಕ್ಷೇಪಗಳು ಎಂದು ಹೇಳುತ್ತಾರೆ. ಅವರ ಪ್ರಕಾರ, ತಿರುವಾಂಕೂರು ಬ್ರಿಟಿಷ್ ಹಿತಾಸಕ್ತಿಗಳೊಂದಿಗೆ ರಹಸ್ಯ ಮಾತುಕತೆಗಳನ್ನು ನಡೆಸಿತ್ತು. ಜೂನ್ 11, 1947 ರಂದು ಅಯ್ಯರ್ ತಿರುವಾಂಕೂರಿನ ಸ್ವಾತಂತ್ರ‍್ಯವನ್ನು ಘೋಷಿಸಿದರು. ಅವರು ಖಾನ್ ಬಹದ್ದೂರ್ ಅಬ್ದುಲ್ ಕರೀಮ್ ಅವರನ್ನು ಪಾಕಿಸ್ತಾನಕ್ಕೆ ತಿರುವಾಂಕೂರಿನ ಪ್ರತಿನಿಧಿ ಎಂದು ಘೋಷಿಸಿದರು! ಇದು ನಿಜಾಮ ಮಾಡಿದ್ದಕ್ಕಿಂತಲೂ ಹೆಚ್ಚು! ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ನೇತೃತ್ವದಲ್ಲಿ ತಿರುವಾಂಕೂರಿನ ಜನರು ಇದರ ವಿರುದ್ಧ ಸಜ್ಜುಗೊಂಡಾಗ, ಮಹಾರಾಜರು ಹಿಂದೂ ಮಹಾ ಸಭೆಯಿಂದ ಬೆಂಬಲವನ್ನು ಪಡೆದರು. ಇಂದಿನ ಆಡಳಿತಗಾರರ ಪೂಜ್ಯಮೂರ್ತಿಯಾಗಿರುವ ವಿ.ಡಿ.ಸಾವರ್ಕರರು ಅಯ್ಯರ್‌ಗೆ ಒಂದು ವಾರದೊಳಗೆ ಟೆಲಿಗ್ರಾಮ್ ಕಳುಹಿಸಿದರು. ಅದರ ಪಠ್ಯವು ಅಬ್ರಹಾಂ ರವರ ಪ್ರಬಂಧದಲ್ಲಿ ಲಭ್ಯವಿದೆ. ಅದು ಹೀಗಿದೆ: “ಹೈದರಾಬಾದಿನ ಮುಸ್ಲಿಂ ಆಳರಸ ನಿಜಾಮ, ಈಗಾಗಲೇ ತನ್ನ ಸ್ವಾತಂತ್ರ‍್ಯವನ್ನು ಘೋಷಿಸಿದ್ದಾರೆ ಮತ್ತು ಇತರ ಮುಸ್ಲಿಂ ಸಂಸ್ಥಾನಗಳು ಹಾಗೆ ಮಾಡುವ ಸಾಧ್ಯತೆಯಿದೆ. ಹಿಂದೂ ಸಂಸ್ಥಾನಗಳು ತಮಗೂ ಅದೇ ಹಕ್ಕುಗಳಿವೆ ಎಂದು ಪ್ರತಿಪಾದಿಸುವ ಧೈರ್ಯ ತೋರುತ್ತಿವೆ …ನಾನು ಮಹಾರಾಜರನ್ನು ಮತ್ತು ನಮ್ಮ ಹಿಂದೂ ರಾಜ್ಯವಾದ ತಿರುವಾಂಕೂರ್‌ನ ಸ್ವಾತಂತ್ರ‍್ಯವನ್ನು ಘೋಷಿಸುವ ದೂರದೃಷ್ಟಿಯ ಮತ್ತು ಧೈರ್ಯದ ಸಂಕಲ್ಪವನ್ನು ಬೆಂಬಲಿಸುತ್ತಿದ್ದೇನೆ”. ಇದೀಗ ಹಿಂದೂ ಮಹಾಸಭಾದ ನೇತಾರನ ಬಾಯಿಂದಲೇ ಹೊರಬಂದಿರುವ ಅದರ ನಿಜವಾದ ಪಾತ್ರ ಎನ್ನಬಹುದು. ನಿಜಾಮನ ವಿರುದ್ಧ ಹೋರಾಡುವ ಬದಲು, ಅವರು ಆತನ ಸ್ವಾತಂತ್ರ‍್ಯವನ್ನು ಅನಿವಾರ್ಯವೆಂದು ಸ್ವೀಕರಿಸಿದರು ಮತ್ತು ಅದನ್ನು ಇನ್ನೊಂದು ಸಂಸ್ಥಾನ- ಒಂದು ಹಿಂದೂ ಸಂಸ್ಥಾನ – ಭಾರತಕ್ಕೆ ಸೇರಿಕೊಳ್ಳದಿರಲು ಕಾರಣವಾಗಿ ಬಳಸಿಕೊಂಡರು.
ಸುಳ್ಳು ‘ಕ್ರೊನೋಲೊಜಿ’ಯ ಪ್ರಯತ್ನ
ಮಹಾರಾಜರುಗಳು ಮತ್ತು ಪಾಳೆಯಗಾರರ ಧಾರ್ಮಿಕ ಗುರುತು ಚರಿತ್ರೆಯನ್ನು ಹುಸಿಯಾಗಿಸುವುದಕ್ಕೆ ಅನುಗುಣವಾಗಿರುವ ವರೆಗೆ ಅವರ ಬಗ್ಗೆ ಮೃದು ಭಾವನೆ ಹಿಂದುತ್ವ ಬಲಪಂಥಕ್ಕೆ ರಕ್ತಗತವಾಗಿರುವ ಸಂಗತಿ. ಅವರ ದಬ್ಬಾಳಿಕೆಗೆ ಅವರದೇ ಧಾರ್ಮಿಕ ಪಂಥದ ರೈತರು ಮತ್ತು ಬಡವರು ಗುರಿಯಾಗಿದ್ದರು ಎಂಬುದು ಅವರಿಗೆ ಬೇಕಾಗಿಲ್ಲ, ಏಕೆಂದರೆ ಅವರಿಗೆ ಧರ್ಮ ಎಂಬುದು ರಾಜಕೀಯಕ್ಕೆ ಸಂಬಂಧಿಸಿದ್ದು, ನಂಬಿಕೆಗೆ ಸಂಬಂಧಿಸಿದ್ದಲ್ಲ. ನಿಜಾಮ ಆಳ್ವಿಕೆಯನ್ನು ಮುಸ್ಲಿಮ್ ವರ್ಸಸ್ ಹಿಂದೂ ಎಂದು ತಪ್ಪಾಗಿ ವರ್ಣಿಸುತ್ತಾರೆ, ತಿರುವಾಂಕೂರು ಮಹಾರಾಜ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರಂತಹ ಇತರ ಆಳರಸರು ಭಾರತದ ಏಕತೆಗೆ ವಿರುದ್ಧವಾಗಿ ಮಾಡಿದ ಉಲ್ಲಂಘನೆಯ ಅಪರಾಧಗಳನ್ನು ಕ್ಷಮಿಸುತ್ತಾರೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಾರಾಜ ಹರಿಸಿಂಗ್ ಅವರ ಜನ್ಮದಿನವನ್ನು ರಜಾದಿನವಾಗಿ ಆಚರಿಸಲಾಗುವುದು ಎಂದು ಕೇಂದ್ರ ಸರ್ಕಾರದ ನಾಚಿಕೆಗೇಡಿನ ಘೋಷಣೆಯು ಇತಿಹಾಸವನ್ನು ಸುಳ್ಳು ‘ಕ್ರೊನೋಲೊಜಿ’(ಘಟನಾಕ್ರಮ)ಯಾಗಿ ಬದಲಾಯಿಸುವ ಪ್ರಯತ್ನವಾಗಿದೆ. ಹರಿ ಸಿಂಗ್ ಅವರು ಮೊದಲು ಪಾಕಿಸ್ತಾನದೊಂದಿಗೆ “ಸ್ಟಾಂಡ್ ಸ್ಟಿಲ್”(ನಿಲುಗಡೆ) ಒಪ್ಪಂದಕ್ಕೆ ಸಹಿ ಹಾಕುವ ಇಚ್ಛೆಯನ್ನು ಘೋಷಿಸಿದರು. ತದನಂತರ ಭಾರತ ಮತ್ತು ಪಾಕಿಸ್ತಾನ ಎರಡರಿಂದಲೂ ಸ್ವತಂತ್ರವಾಗಿ ಉಳಿಯುವ ಉದ್ದೇಶವನ್ನು ಘೋಷಿಸಿದರು. ಭಾರತವನ್ನು ಸೇರಬೇಕು ಎಂಬ ಶೇಖ್ ಅಬ್ದುಲ್ಲಾ ಮತ್ತು ನ್ಯಾಶನಲ್ ಕಾನ್ಫರೆನ್ಸ್ ನೇತೃತ್ವದಲ್ಲಿ ಮುಸ್ಲಿಂ ರೈತರ ಬೃಹತ್ ಜನಾಂದೋಲನಗಳು ಮತ್ತು ಊಳಿಗಮಾನ್ಯ ವಿರೋಧಿ ಹೋರಾಟಗಳ ಒತ್ತಡದ ಅಡಿಯಲ್ಲಿ ಅವರು ಅಂತಿಮವಾಗಿ ಭಾರತಕ್ಕೆ ಸೇರ್ಪಡೆಯ ಪತ್ರಕ್ಕೆ ಸಹಿ ಹಾಕಬೇಕಾಯಿತು. ಇಂದು, ಹರಿ ಸಿಂಗ್ ಅವರನ್ನು ವೈಭವೀಕರಿಸಲಾಗಿದೆ ಮತ್ತು ಕಾಶ್ಮೀರವು ಭಾರತದೊಂದಿಗೆ ಉಳಿಯಲು ಹೋರಾಡಿದವರನ್ನು ಧಾರ್ಮಿಕ ಗುರುತಿನ ಸಂಕುಚಿತ ಮಸೂರದ ಮೂಲಕ ನಿಂದಿಸಲಾಗುತ್ತಿದೆ
ಸಂಗತಿಗಳಿಂದ ಸತ್ಯವನ್ನು ಹೆಕ್ಕಿ ತೆಗೆಯಬೇಕಂತೆ. ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಅನುಸರಿಸ ಬಯಸಬಹುದಾದ ಒಂದು ಜಾಣ ಗಾದೆಯಿದು.