ಮಹಿಳೆಯರಿಗೆ 2,100 ರೂ., ವಾರ್ಷಿಕ 2 ಎಲ್‌ಪಿಜಿ ಸಿಲಿಂಡರ್‌ ಫ್ರೀ – ಜಾರ್ಖಂಡ್‌ ಚುನಾವಣೆಗೆ ಬಿಜೆಪಿ ಗ್ಯಾರಂಟಿ

ರಾಂಚಿ: ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಕೇಂದ್ರ ಗೃಹಸಚಿವ ಅಮಿತ್‌ ಶಾ ಭಾನುವಾರ ಬಿಡುಗಡೆಗೊಳಿಸಿದರು.

ಬಿಜೆಪಿ ಜಾರ್ಖಂಡ್‌ನಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 2,100 ರೂ. ನೀಡುವುದು ಸೇರಿದಂತೆ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಬಿಜೆಪಿ ಈ ಗ್ಯಾರಂಟಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಜನರಿಗೆ ಉಚಿತ ಸೌಲಭ್ಯ ನೀಡಿದರೆ ಸೋಮಾರಿಗಳಾಗುತ್ತಾರೆ,  ಗ್ಯಾರಂಟಿಗಳಿಂದಾಗಿ ಆರ್ಥಿಕವಾಗಿ ನಷ್ಟವಾಗುತ್ತಿದೆ ಎಂದು ಕರ್ನಾಟಕದ ಗ್ಯಾರಂಟಿಗಳ ಬಗ್ಗೆ ಅಪಸ್ವರ ಎತ್ತಿದ್ದ ಬಿಜೆಪಿ ಈಗ ಅದ್ಯಾವ ಮುಖ ಇಟ್ಟುಕೊಂಡು ಗ್ಯಾರಂಟಿಗಳನ್ನು ಘೊಷಿಸಿದೆ ಎಂದಿದ್ದಾರೆ. ಬಿಜೆಪಿ ರಾಜಕೀಯಕ್ಕಾಗಿ ಏನು ಬೇಕಾದರೂ ಮಾಡುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಬಿಜೆಪಿಯ ಕಾಲೆಳದಿದ್ದಾರೆ.

ಬಿಜೆಪಿ ಪ್ರಣಾಳಿಕೆ ಏನು?
* ಪ್ರತಿ ಮನೆಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ಮತ್ತು ವಾರ್ಷಿಕ 2 ಉಚಿತ ಸಿಲಿಂಡರ್‌

* ನುಸುಳುಕೋರರು ಆಕ್ರಮಿಸಿಕೊಂಡಿರುವ ಆದಿವಾಸಿಗಳ ಭೂಮಿಯನ್ನು ಆದಿವಾಸಿಗಳಿಗೆ ಹಿಂದಿರುಗಿಸುವುದಾಗಿ ಪ್ರತಿಜ್ಞೆ

*  ಬುಡಕಟ್ಟು ಜನಾಂಗದವರನ್ನು ಮದುವೆಯಾಗುವ ನುಸುಳುಕೋರರ ಮಕ್ಕಳಿಗೆ ಬುಡಕಟ್ಟು ಸ್ಥಾನಮಾನ ರದ್ದು

* ಆದಿವಾಸಿಗಳನ್ನು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವ್ಯಾಪ್ತಿಯಿಂದ ಹೊರಗಿಡಲಾಗುವುದು

* ಪ್ರಶ್ನೆ ಪತ್ರಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ

* 5 ವರ್ಷಗಳಲ್ಲಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ಅವಕಾಶಗಳನ್ನು ಖಾತರಿಪಡಿಸುತ್ತೇವೆ

* 2,87,500 ಸರ್ಕಾರಿ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿ ನಡೆಯಲಿದ್ದು, ಮೊದಲ ಕ್ಯಾಬಿನೆಟ್‌ನಲ್ಲೇ ಪ್ರಕ್ರಿಯೆ ಶುರುವಾಗಲಿದೆ.

* 2025ರ ನವೆಂಬರ್‌ ಒಳಗೆ 1.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

81 ಸದಸ್ಯ ಬಲದ ಕ್ಷೇತ್ರಗಳಿಗೆ ನ.13 ಮತ್ತು 20 ರಂದು ಚುನಾವಣೆ  ನಡೆಯಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *