ಬಸ್ಸುಗಳ ಕಾರ್ಯಾಚರಣೆಗೂ ಇಳಿದಿದೆ ಅಮೆರಿಕ ಮೂಲದ ‘ಉಬರ್’; ಮೊದಲು ಕೊಲ್ಕತ್ತಾ, ಈಗ ದೆಹಲಿ
– ಸಿ.ಸಿದ್ದಯ್ಯ
ಒಂದು ವರ್ಷದ ಹಿಂದೆ ಕೊಲ್ಕತ್ತಾದಲ್ಲಿ ಬಸ್ ಸೇವೆಗೆ ಇಳಿದಿದ್ದ ‘ಉಬರ್’ ಅಪ್ಲಿಕೇಶನ್ ಈಗ ದೆಹಲಿ ಪ್ರೀಮಿಯಂ ಬಸ್ಸುಗಳ ಯೋಜನೆಯಡಿಯಲ್ಲಿ ಬಸ್ಸುಗಳನ್ನು ನಿರ್ವಹಿಸಲು ದೆಹಲಿ ಸಾರಿಗೆ ಇಲಾಖೆಯಿಂದ ಅಗ್ರಿಗೇಟರ್ ಪರವಾನಗಿ (aggregator license) ಯನ್ನು ಪಡೆದುಕೊಂಡಿದೆ. ಬೆಂಗಳೂರು ಮತ್ತು ಹೈದಾರಾಬಾದ್ ನಂತಹ ನಗರಗಳಲ್ಲಿಯೂ ಕಾರ್ಯಾಚರಣೆ ನಡೆಸಲು ಉಬರ್ ಸಿದ್ದತೆ ನಡೆಸುತ್ತಿದೆ. ಈ ಮೂಲಕ ಇಡೀ ರಸ್ತೆ ಸಾರಿಗೆ ವಲಯವನ್ನೇ ನುಂಗಿಹಾಕುವಲ್ಲಿ ವಿದೇಶಿ ಮತ್ತು ಸ್ವದೇಶಿ ಖಾಸಗಿ ಅಗ್ರಿಗೇಟರ್ ಕಂಪನಿಗಳು ದಾಪುಗಾಲು ಹಾಕುತ್ತಿವೆ. ಕ್ರಮೇಣವಾಗಿ, ಸರ್ಕಾರ ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುತ್ತದೆ. ಇವೆಲ್ಲವೂ ಭಾರತ ಸರ್ಕಾರದ ಮುಕ್ತ ಆರ್ಥಿಕ ನೀತಿ ಮತ್ತು ಖಾಸಗೀಕರಣ ನೀತಿಗಳ ಭಾಗವಾಗಿ ನಡೆಯುತ್ತಿವೆ
ಪ್ರಯಾಣಿಕರ ವಾಹನಗಳಾದ ಟ್ಯಾಕ್ಸಿ, ಆಟೋರಿಕ್ಷಾ, ಬೈಕ್ ಟ್ಯಾಕ್ಸಿಗಳು ಹಾಗೂ ಸರಕು ಸಾಗಣೆ ವಾಹನಗಳಾಯ್ತು, ಈಗ ಬಸ್ಸುಗಳ ಕಾರ್ಯಾಚರಣೆಗೂ ಇಳಿದಿವೆ ಅಗ್ರಿಗೇಟರ್ ಕಂಪನಿಗಳು. ಅಮೆರಿಕ ಮೂಲದ ಕಂಪನಿ ‘ಉಬರ್’ ಈಗ ಭಾರತದ ನಗರಗಳಲ್ಲಿ ಬಸ್ಸುಗಳ ಕಾರ್ಯಾಚರಣೆಗೆ ಇಳಿದಿದೆ.
“ಪ್ರಯಾಣಿಕರು ಆ್ಯಪ್ ನಲ್ಲಿ ‘ಉಬರ್ ಷಟಲ್’ ಆಯ್ಕೆಯನ್ನು ಆರಿಸಿಕೊಳ್ಳಬಹುದು ಮತ್ತು ನಗದು ರಹಿತ ಪಾವತಿಗಳ ಮೂಲಕ ಒಂದು ವಾರದ ಮುಂಚಿತವಾಗಿ ಸೀಟುಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು. ಈ ಬಸ್‌ಗಳು ನಿಮ್ಮ ಸರಾಸರಿ ವಾಹನಗಳಂತೆ ಇರುವುದಿಲ್ಲ – ವೈ-ಫೈ ಸಂಪರ್ಕ, ನಿಖರವಾದ ನ್ಯಾವಿಗೇಷನ್ ಗಾಗಿ GPS, ಭದ್ರತೆಗಾಗಿ CCTV, ಸುರಕ್ಷತೆಗಾಗಿ ಪ್ಯಾನಿಕ್ ಬಟನ್ ಗಳು ಮತ್ತು ಹೆಚ್ಚುವರಿ ಮೈಲಿ ಸೌಕರ್ಯಕ್ಕಾಗಿ 2×2 ಒರಗಿಕೊಳ್ಳುವ ಆಸನಗಳಂತಹ ಸೌಕರ್ಯಗಳನ್ನು ನಿರೀಕ್ಷಿಸಬಹುದು” ಎನ್ನುತ್ತದೆ ಉಬರ್ ಸಂಸ್ಥೆ.
“ನಿಮ್ಮ ಮೊದಲ ರೈಡ್ ಅನ್ನು ಉಚಿತವಾಗಿ ಪಡೆಯಿರಿ ಮತ್ತು 100 ರೈಡ್‌ಗಳಲ್ಲಿ 45% ವರೆಗೆ ರಿಯಾಯಿತಿ ಪಡೆಯಿರಿ. ಇಂದು ಉಬರ್ ಶಟಲ್ ಅನ್ನು ಪ್ರಯತ್ನಿಸಿ!” ಇದು ಉಬರ್ ನ ಜಾಹಿರಾತು.
“ದೆಹಲಿಯಲ್ಲಿ ಆರಾಮದಾಯಕ, ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣವನ್ನು ಆನಂದಿಸಲು Uber ಷಟಲ್ ಒಂದು ಹೊಸ ಮಾರ್ಗವಾಗಿದೆ. ನೂಕುನುಗ್ಗಲಿನಲ್ಲಿ ಬೀಳಲು ಮತ್ತು ಕಿಕ್ಕಿರಿದ ಬಸ್ ಗಳಲ್ಲಿನ ನೂಕುನುಗ್ಗಲು, ಮೆಟ್ರೋದಲ್ಲಿ ಗಂಟೆಗಳನ್ನು ಕಳೆಯಲು ಅಥವಾ ದಟ್ಟವಾದ ದಟ್ಟಣೆಯಲ್ಲಿ ಓಡಿಸಲು ಕಾಯುವ ಅಗತ್ಯವಿಲ್ಲ.” ದೆಹಲಿಯ ಟ್ಯಾಕ್ಸಿ, ಆಟೋ, ಸರ್ಕಾರಿ ಬಸ್ಸುಗಳಲ್ಲಿ ಸಂಚರಿಸುವ ಗ್ರಾಹಕರನ್ನು ತನ್ನತ್ತ ಸೆಳೆಯುವ ಮಾರುಕಟ್ಟೆ ತಂತ್ರಗಾರಿಕೆ ಇದು. ಉಬರ್, ಒಲಾ, ರ್ಯಾಪಿಡೋ ಮತ್ತು ಈ ಹಿಂದೆ ಇದ್ದ, ನಂತರ ಒಲಾಗೆ ಮಾರಿಕೊಂಡ ‘ಟ್ಯಾಕ್ಸಿ ಫಾರ್ ಶ್ಯೂರ್’ ನಂತಹ ಅಗ್ರಿಗೇಟರ್ ಕಂಪನಿಗಳು ಏನೆಲ್ಲಾ ಮಾರುಕಟ್ಟೆ ತಂತ್ರಗಾರಿಕೆ ಮಾಡಿದವು, ನಂತರ ಗ್ರಾಹಕರನ್ನು, ಟ್ಯಾಕ್ಸಿ, ಆಟೋ ಚಾಲಕ/ಮಾಲೀಕರನ್ನು ಹೇಗೆಲ್ಲಾ ಸುಲಿಗೆ ಮಾಡುತ್ತಿದ್ದಾರೆ ಎಂಬುದನ್ನು ನಾವು ಹೀಗಾಗಲೇ ನೋಡಿದ್ದೇವೆ, ಅನುಭವಿಸುತ್ತಿದ್ದೇವೆ.
ಬೆಂಗಳೂರಿಗೂ ಬರಲಿದೆ
2024ರ ಫೆಬ್ರವರಿ 22 ರಂದು ಉಬರ್ ಸಿಇಒ ದಾರಾ ಖೋಸ್ರವ್ ಶಹಿ ‘X’ (ಹಿಂದಿನ ಟ್ವಿಟ್ಟರ್) ನಲ್ಲಿ ಮಾಡಿದ ಟ್ವಿಟ್ ಹೀಗಿದೆ: @Uber ಷಟಲ್ ಬಸ್ ಅನ್ನು ನಮ್ಮ ಬೆಂಗಳೂರು ಕಛೇರಿಯಲ್ಲಿ ಪರಿಶೀಲಿಸಲು ಅದರ ಹಿಂದೆ ಇರುವ ಭಾರಿ ಪ್ರತಿಭಾವಂತ ತಂಡದ ಜೊತೆಗೆ ಉತ್ಸುಕನಾಗಿದ್ದೇನೆ. ಕಾರುಗಳು, ಬೈಕ್‌ಗಳು, ಆಟೋಗಳು ಮತ್ತು ಬಸ್‌ಗಳು – ಭಾರತದಲ್ಲಿ ಉಬರ್ ಒನ್-ಸ್ಟಾಪ್ ಮೊಬಿಲಿಟಿ ಹಬ್ (one-stop mobility hub) ಆಗಿದೆ.
ಬೆಂಗಳೂರಿನಲ್ಲಿಯೂ ಉಬರ್ ಬಸ್ಸುಗಳ ಕಾರ್ಯಾಚರಣೆಗೆ ಇಳಿದರೆ, ಟ್ಯಾಕ್ಸಿ, ಆಟೋರಿಕ್ಷಾ ಕೊಂಡು ಸ್ವಯಂ ಉದ್ಯೋಗ ಕಂಡುಕೊಂಡಿರುವ ನಗರದ ಇನ್ನಷ್ಟು ಚಾಲಕರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತದೆ. ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ. ಸಂಸ್ಥೆಗಳ ಬಹತೇಕ ಉದ್ಯೋಗಗಳು ಇಲ್ಲದಂತಾಗುತ್ತದೆ.
ಕಂಡಕ್ಟರ್ ಇಲ್ಲದ ಬಸ್ಸುಗಳು
ಇಂದು ಬಸ್ಸುಗಳಲ್ಲಿ ಟಿಕೆಟ್ ಕೊಡಲು ಕಂಡಕ್ಟರ್ ಇರುತ್ತಾರೆ. ಉಬರ್ ಬಸ್ಸುಗಳಿಗೆ ಚಾಲಕರಷ್ಟೇ ಸಾಕು. (ಮುಂದಿನ ದಿನಗಳಲ್ಲಿ ಚಾಲಕ ರಹಿತ ಬಸ್ಸುಗಳು ಬಂದರೆ ಚಾಲಕರ ಅಗತ್ಯವೂ ಇರುವುದಿಲ್ಲ.) ಏಕೆಂದರೆ, ಉಬರ್ ಬಸ್ಸುಗಳ ಪ್ರಯಾಣಿಕರು ಮೊದಲೇ, ಆಫ್ ಮೂಲಕ ಬಸ್ ಹತ್ತುವ ಮತ್ತು ಇಳಿಯುವ ಸ್ಥಳವನ್ನು ಸೂಚಿಸಿ ಸೀಟು ಕಾಯ್ದಿರಿಸಬಹುದು. ಪ್ರಯಾಣ ಮಾಡುವ ಒಂದು ವಾರ ಮುಂಚಿತವಾಗಿಯೂ ಗೊತ್ತುಪಡಿಸಬಹುದು. ನಾವೀಗ ರೈಲು ಮತ್ತು ಬಸ್ಸುಗಳಲ್ಲಿ ದೂರ ಪ್ರಯಾಣಕ್ಕೆ ಕೆಲ ದಿನಗಳ ಹಿಂದೆಯೇ ಸೀಟು ಕಾಯ್ದಿರಿಸುತ್ತೇವಲ್ಲಾ ಹಾಗೆ. ನೀವು ಸೂಚಿಸುವ ಪ್ರಯಾಣದ ದೂರವನ್ನು ಅವಲಂಭಿಸಿ ಸಂಸ್ಥೆ ದರ ನಿಗದಿ ಮಾಡುತ್ತದೆ. ಈ ದರವನ್ನು ಆನ್ ಲೈನ್ ಮೂಲಕ ಪಾವತಿಸಬೇಕು. ಚಾಲಕನಿಗೆ ನಿಮ್ಮ ಮೊಬೈಲ್ ನಲ್ಲಿ ಗೊತ್ತುಪಡಿಸಿದ್ದನ್ನು ತೋರಿಸಿದರೆ ಸಾಕು. ಮುಂದಿನ ದಿನಗಳಲ್ಲಿ ನಗದು ರಹಿತ ವ್ಯವಹಾರದ ಮೂಲಕ ಖರೀದಿಸಿದ ಟಿಕೆಟ್ ಅನ್ನು ಮೊಬೈಲ್ ನಲ್ಲಿ ಅಥವಾ ಉಬರ್ ನೀಡುವ ಸ್ಮಾರ್ಟ್ ಕಾರ್ಡ್ ಅನ್ನು ಸ್ಕ್ಯಾನ್ ಮಾಡಿ ಬಸ್ಸು ಹತ್ತುವ ವ್ಯವಸ್ಥೆ ಬರಬಹುದು. ಇಂತಹ ವ್ಯವಸ್ಥೆ ಬಂದಾಗ ಚಾಲಕನಿಗೆ ಟಿಕೆಟ್ ತೋರಿಸುವ ಅಗತ್ಯ ಬರುವುದಿಲ್ಲ.
ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಕ್ಯೂಆರ್ ಟಿಕೆಟ್ ಅಥವಾ ಇಂದಿನ ಮೆಟ್ರೋ ಕಾರ್ಡ್ ರೀತಿಯಲ್ಲಿ ಮೆಟ್ರೋ ರೈಲು, ಬಸ್ಸು, ರೈಲು ಪ್ರಯಾಣಕ್ಕೆ, ಅಂಗಡಿಗಳಲ್ಲಿ ಸರಕುಗಳನ್ನು ಖರೀದಿಸಲು ಮತ್ತು ಇನ್ನಿತರೆ ವ್ಯವಹಾರಕ್ಕೆ ಒಂದೇ ಸ್ಮಾರ್ಟ್ ಕಾರ್ಡ್ ಬಳಕೆ ಮಾಡುವ ವ್ಯವಸ್ಥೆ ಬರಬಹುದು. ಟೋಲ್ ರಸ್ತೆಗಳಿಗೆ ನಗದು ಕೊಡುವ ವ್ಯವಹಾರ ಸದ್ಯದಲ್ಲೇ ಇಲ್ಲವಾಗುತ್ತದೆ. ಈಗ ಮೊದಲೇ ನಿರ್ಧಿಷ್ಟ ಹಣ ಠೇವಣಿ ಇಡುವ ಪಾಸ್ಟ್ಯಾಗ್ ವ್ಯವಸ್ಥೆ ಇದೆ. ಪಾಸ್ಟ್ಯಾಗ್ ಇಲ್ಲದಿದ್ದರೆ ಎರಡರಷ್ಟು ದರ ವಸೂಲಿ ಮಾಡುವುದನ್ನು ನೋಡಿದ್ದೇವೆ. ಮುಂದಿನ ದಿನಗಳಲ್ಲಿ ಈ ರಸ್ತೆಗಳಲ್ಲಿ ಟೋಲ್ ಪ್ಲಾಜಾಗಳೇ ಇರುವುದಿಲ್ಲ. ಇಲ್ಲಿ ಟೋಲ್ ರಹಿತ ರಸ್ತೆಗಳನ್ನಾಗಿ ಮಾಡುವ ಯೋಜನೆ ಕೇಂದ್ರ ಸರ್ಕಾರದ್ದು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 2024ರ ಮಾರ್ಚ್ 28 ರಂದು ನೀಡಿದ ಹೇಳಿಕೆ ನೋಡಿ: “ಟೋಲ್ ಅನ್ನು ಕೊನೆಗೊಳಿಸುತ್ತಿದ್ದು, ಹೊಸ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು. ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ ಮತ್ತು ನೀವು ಬಳಕೆಮಾಡುವ ರಸ್ತೆಯ ಮೊತ್ತಕ್ಕೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ.” ಇದರರ್ಥ, ಟೋಲ್ ರಸ್ತೆ ಬಳಕೆಗೆ ನಗದು ಅಥವಾ ಫಾಸ್ ಟ್ಯಾಗ್ ಉಪಯೋಗಕ್ಕೆ ಬರುವುದಿಲ್ಲ ಎಂದಾಯಿತು.
2019 ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆ
ದೈತ್ಯ ಕಂಪನಿಗಳು ಸಂಪೂರ್ಣ ರಸ್ತೆ ಸಾರಿಗೆ ವಲಯದ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುವ ಉದ್ದೇಶದಿಂದ, 2019 ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯು ಪ್ರಧಾನ ಕಾಯಿದೆಯ ಸೆಕ್ಷನ್ 93 ಕ್ಕೆ ಷರತ್ತು 36 ಅನ್ನು ಪರಿಚಯಿಸಿತು. ಈ ಷರತ್ತು ಇಂತಹ ಕಂಪನಿಗಳಿಗೆ ಪರವಾನಗಿ ನೀಡುತ್ತದೆ. ಸಾರಿಗೆ ವಲಯದ ಕಾರ್ಮಿಕ ಸಂಘಟನೆಗಳು ಈ ತಿದ್ದುಪಡಿ ಕಾಯ್ದೆಯನ್ನು ಬಲವಾಗಿ ವಿರೋಧಿಸಿ, ಮುಷ್ಕರ ಸೇರಿದಂತೆ ರಾಷ್ಟ್ರವ್ಯಾಪಿ ಹೋರಾಟಗಳನ್ನು ಸಂಘಟಿಸಿದ್ದವು. ವಿರೋಧದ ಹೊರತಾಗಿಯೂ, ಸಂಸತ್ತು ಜುಲೈ 31, 2019 ರಂದು ತಿದ್ದುಪಡಿ ಕಾಯಿದೆಯನ್ನು ಅನುಮೋದಿಸಿತು ಮತ್ತು ಇದು ಆಗಸ್ಟ್ 8, 2019 ರಂದು ರಾಷ್ಟ್ರಪತಿಯವರ ಒಪ್ಪಿಗೆಯನ್ನು ಪಡೆಯಿತು. ಇದರ ಪರಿಣಾಮ ಈಗ ಉಬರ್ ಸಂಸ್ಥೆ ಬಸ್ಸುಗಳ ಕಾರ್ಯಾಚರಣೆಗೆ ಇಳಿಯಲು ಅವಕಾಶ ಸಿಕ್ಕಿದೆ.
ಖಾಸಗಿ ಎಲೆಕ್ಟ್ರಿಕ್ ಬಸ್ಸುಗಳು
ಈಗಾಗಲೇ ಬೆಂಗಳೂರು ನಗರ ಸಾರಿಗೆ(ಬಿಎಂಟಿಸಿ)ಯಲ್ಲಿ ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಒಂದಷ್ಟು ಎಲೆಕ್ಟ್ರಿಕ್ ಬಸ್ಸುಗಳು ಕಾರ್ಯಾಚರಣೆಗೆ ಇಳಿದಿವೆ. ಈ ಬಸ್ಸುಗಳು ಖಾಸಗಿ ಒಡೆತನ ಹೊಂದಿವೆ. ಇವುಗಳ ಚಾಲಕರು ಖಾಸಗಿ ಮಾಲೀಕರಿಗೆ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಈ ಚಾಲಕರಿಗೆ ಉದ್ಯೋಗದ ಭದ್ರತೆ ಎಂಬುದಿಲ್ಲ. ಈ ಬಸ್ಸುಗಳ ಕಂಡಕ್ಟರ್ ಗಳು ಮಾತ್ರ ಬಿಎಂಟಿಸಿ/ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ನೌಕರರು!!
ಕೇಂದ್ರದ ಮೋದಿ ಸರ್ಕಾರವು, ವಿದ್ಯುತ್ ವಾಹನಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ FAME (Fast Adoption and Manufacturing of Electric Vehicles in India) ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈಗ FAME-2 ಯೋಜನೆ ಜಾರಿಯಲ್ಲಿದೆ. ಇದರ ಪ್ರಕಾರ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡುವ ಖಾಸಗಿ ಕಂಪನಿಗಳಿಗೆ ಪ್ರತಿ ಬಸ್ಸಿಗೆ 50 ಲಕ್ಷ ರೂಗಳನ್ನು ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ. (FAME-1 ಯೋಜನೆಯಲ್ಲಿ ರೂ. 80 ಲಕ್ಷ ಸಬ್ಸಿಡಿ ನೀಡಲಾಗುತ್ತಿತ್ತು). ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿ.ಸಿ.ಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಬಸ್ಸುಗಳ ಖಾಸಗಿ ಮಾಲಿಕರು ಈ ಸಬ್ಸಿಡಿಯನ್ನು ಪಡೆದುಕೊಂಡಿದ್ದಾರೆ.
ಇದನ್ನು ಓದಿ : ಲೋಕಸಭೆ ಚುನಾವಣೆ: 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಇವಿಎಂ ಮೂಲಕ ಚಲಾವಣೆಯಾದ ಮತಗಳಿಗಿಂತ ಅಧಿಕ ಮತಗಳ ಎಣಿಕೆ
ಬಿಎಂಟಿಸಿ ಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ಬಗ್ಗೆ ಸಿಐಟಿಯು ಸಂಘಟನೆ ಹೀಗೆ ಹೇಳುತ್ತದೆ: ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಹೆಸರಲ್ಲಿ ಸರ್ಕಾರಿ ಸಾರಿಗೆ ನಿಗಮಗಳಲ್ಲಿ ವಿದ್ಯುತ್ ಬಸ್ಸುಗಳನ್ನು ಕ್ರಮೇಣ ಹೆಚ್ಚಿಸಲಾಗುತ್ತಿದೆ. ಪ್ರಸ್ತುತ ಬಿಎಂಟಿಸಿ ನಿಗಮದಲ್ಲಿ 470 ವಿದ್ಯುತ್ ಬಸ್‍ಗಳು ಕಾರ್ಯಾಚರಣೆ ಮಾಡುತ್ತಿವೆ. ಸದ್ಯದಲ್ಲೇ 921 ವಿದ್ಯುತ್ ಬಸ್ಸುಗಳು ಸೇರ್ಪಡೆ ಆಗಲಿವೆ. ಮುಂದಿನ ಕೆಲವು ತಿಂಗಳಲ್ಲಿ ಇನ್ನೂ 1500 ವಿದ್ಯುತ್ ಬಸ್ಸುಗಳು ಸೇರ್ಪಡೆ ಆಗಲಿವೆ ಎಂದು ಸರ್ಕಾರ ಹೇಳಿದೆ. ಈಗಾಗಲೇ ಬಿಎಂಟಿಸಿ ಯ ಕೆಲವು ಡಿಪೋಗಳನ್ನು ಖಾಸಗಿ ವಿದ್ಯುತ್ ಬಸ್ ಕಂಪನಿಗಳಿಗೆ ನೀಡಲಾಗಿದೆ. ಅಲ್ಲಿದ್ದ ಬಿಎಂಟಿಸಿ ನಿಗಮದ ಕಾರ್ಮಿಕರನ್ನು ಬೇರೆ ಡಿಪೋಗಳಿಗೆ ವರ್ಗಾಯಿಸಲಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ 3-4 ವರ್ಷಗಳಲ್ಲಿ ಬಿಎಂಟಿಸಿ ಪೂರ್ಣವಾಗಿ ಖಾಸಗಿ ವಿದ್ಯುತ್ ಬಸ್ಸುಗಳಿಂದ ತುಂಬಿ ಹೋಗಲಿದೆ. ಆಗ ಬಿಎಂಟಿಸಿ ಯು ಸರ್ಕಾರಿ ನಿಗಮವಾಗಿ ಉಳಿಯುವ ಅಗತ್ಯವೇ ಇರುವುದಿಲ್ಲ. ಇನ್ನು ನಿಗಮದ ಕಾರ್ಮಿಕರು ಮತ್ತು ಡಿಪೋಗಳು ಇರಬೇಕಾದ ಪ್ರಶ್ನೆ ಬರುವುದಿಲ್ಲ. ಬಿಎಂಟಿಸಿ ಸಂಪೂರ್ಣ ಖಾಸಗೀಕರಣಗೊಳ್ಳುತ್ತದೆ. ಇದೇ ಪರಿಸ್ಥಿತಿ ಕ್ರಮೇಣವಾಗಿ ಕೆ.ಎಸ್.ಆರ್.ಟಿ.ಸಿ. ಮತ್ತು ಉಳಿದ ನಿಗಮಗಳಿಗೂ ಬರುತ್ತದೆ.
ವಿದ್ಯುತ್ ಬಸ್ಸುಗಳು ಮಾಲಿನ್ಯ ರಹಿತವಾಗಿವೆ. ಪರಿಸರ ಮತ್ತು ಮಾಲಿನ್ಯ ರಕ್ಷಣೆ ದೃಷ್ಟಿಯಿಂದ ಈಗಿರುವ ಡೀಸೆಲ್ ಬಸ್ಸುಗಳಿಗಿಂತ ವಿದ್ಯುತ್ ಬಸ್ಸುಗಳು ಉಪಯುಕ್ತ. ಆದರೆ, ವಿದ್ಯುತ್ ಬಸ್ಸುಗಳನ್ನು ಸರ್ಕಾರವೇ ಖರೀದಿಸದೇ ಇರುವುದೇಕೆ? ಖಾಸಗಿ ಕಂಪನಿಗಳು ಮಾತ್ರ ವಿದ್ಯುತ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಬೇಕು ಎಂಬುದೇಕೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರಿಗೆ ನಿಗಮಗಳಿಗೆ ಸಬ್ಸಿಡಿಯನ್ನು ನೀಡದಿರುವುದೇಕೆ? ಎಂದು ಸಿಐಟಿಯು ಪ್ರಶ್ನಿಸುತ್ತದೆ.
ಎಲೆಕ್ಟ್ರಿಕ್ ಬಸ್ಸುಗಳು ಉಬರ್ ಜೊತೆ ಸೇರಿದರೆ ?
ಉಬರ್ ಸಂಸ್ಥೆ ತನ್ನ ಸ್ವಂತ ಬಸ್ಸುಗಳನ್ನು ಖರೀದಿಸುವುದಿಲ್ಲ. ಈಗ ಟ್ಯಾಕ್ಸಿ, ಆಟೋರಿಕ್ಷಾಗಳನ್ನು ಹೇಗೆ ತಮ್ಮ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆಯೋ, ಅದೇ ರೀತಿ ಬಸ್ಸುಗಳ ಮಾಲೀಕರು ಬೇರೆಯವರಾಗಿರುತ್ತಾರೆ. “ಉಬರ್ ಸರ್ಕಾರಿ ಮತ್ತು ಖಾಸಗಿ ಬಸ್ ವಾಹಕಗಳೊಂದಿಗೆ ತನ್ನ ರೋಲ್ ಔಟ್ ಗಾಗಿ ಇತರ ಹಲವು ರಾಜ್ಯಗಳೊಂದಿಗೆ ಸಕ್ರಿಯ ಸಂವಾದ ನಡೆಸುತ್ತಿದೆ. ಇವು ಡೈನಾಮಿಕ್ ಮಾರ್ಗಗಳಾಗಿವೆ ಮತ್ತು ಗರಿಷ್ಠ ಬಳಕೆಯ ಪ್ರದೇಶಗಳನ್ನು ಗುರುತಿಸಲು ನಮ್ಮ ಅಸ್ತಿತ್ವದಲ್ಲಿರುವ ನೆಟ್ ವರ್ಕ್ ನಿಂದ ಡೇಟಾವನ್ನು ಬಳಸುತ್ತೇವೆ.” ಎಂದು ಉಬರ್ ಹೇಳಿಕೊಂಡಿದೆ.
ಈ ಎಲೆಕ್ಟ್ರಿಕ್ ಬಸ್ಸುಗಳು ಉಬರ್ ಅಥವಾ ಇನ್ನಿತರೆ ಅಗ್ರಿಗೇಟರ್ ಕಂಪನಿಗಳ ಜೊತೆ ಸೇರಿ ಕಾರ್ಯಾಚರಣೆಗೆ ಮುಂದಾಗುತ್ತವೆ. ಸರ್ಕಾರ ಇದಕ್ಕೆ ಅನುಮತಿ ಕೊಡುತ್ತದೆ. ಅಂತಹ ಸಂದರ್ಭದಲ್ಲಿ ಬಿಎಂಟಿಸಿ ಅಥವಾ ಕೆ.ಎಸ್.ಆರ್.ಟಿ.ಸಿ. ಜೊತೆ ವ್ಯವಹರಿಸುವ ಅಗತ್ಯ ಈ ಎಲೆಕ್ಟ್ರಿಕ್ ಬಸ್ಸುಗಳ ಖಾಸಗಿ ಮಾಲೀಕರಿಗೆ ಇರುವುದಿಲ್ಲ. ಬೇಡಿಕೆ ಇರುವ ಮತ್ತು ಗರಿಷ್ಠ ಬಳಕೆಯ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಮಾತ್ರ ಬಸ್ಸುಗಳ ಕಾರ್ಯಾಚರಣೆ ಮಾಡುತ್ತವೆ. ಏಕೆಂದರೆ, ಬಂಡವಾಳಗಾರರಿಗೆ ಲಾಭ ಮುಖ್ಯವೇ ವಿನಃ, ಜನತೆಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂಬ ಭದ್ದತೆ ಇರುವುದಿಲ್ಲ. ವಿರಳ ಪ್ರಯಾಣಿಕರು ಇರುವ ಪ್ರದೇಶಗಳ ಜನರಿಗೆ ಬಸ್ ಸೌಲಭ್ಯ ಇಲ್ಲದಂತಾಗುತ್ತದೆ, ಅಥವಾ ಬಸ್ಸುಗಳಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬರುತ್ತದೆ.
ಬಿಎಂಟಿಸಿ ಉಳಿಯುತ್ತದೆಯೇ?
ಈ ಅಗ್ರಿಗೇಟರ್ ಕಂಪನಿಗಳು ಜಾಹಿರಾತುಗಳ ಮೂಲಕ ಮತ್ತು ಉಚಿತ, ರಿಯಾಯಿತಿ ದರ,… ಇತ್ಯಾದಿ ಆಮಿಷಗಳ ಮೂಲಕ ಪ್ರಯಾಣಿಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತವೆ. ಇಂತಹ ಅನುಭವ ಟ್ಯಾಕ್ಸಿ ಮತ್ತು ಆಟೋರಿಕ್ಷಾ ಕಾರ್ಯಾಚರಣೆಯಲ್ಲಿ ನಮಗೆ ಈಗಾಗಲೇ ಆಗಿದೆ. ಸಹಸ್ರಾರು ಕೋಟಿ ಬಂಡವಾಳ ಹೂಡುವ ಇಂತಹ ವಿದೇಶಿ ಮತ್ತು ಸ್ವದೇಶಿ ಅಗ್ರಿಗೇಟರ್ ಕಂಪನಿಗಳ ಎದುರು ನಮ್ಮ ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿ.ಸಿ ಪೈಪೋಟಿ ನಡೆಸಲಾಗುತ್ತದೆಯೇ? ಸರ್ಕಾರದ ಸಂಸ್ಥೆಯನ್ನು ಉಳಿಸಿ, ಬೆಳಸಬೇಕು ಎಂಬ ಪ್ರಮಾಣಿಕ ಖಾಳಜಿಯುಳ್ಳ ಅಧಿಕಾರಿಗಳು ನಮ್ಮಲ್ಲಿದ್ದಾರೆಯೇ? ಖಾಸಗಿ ಬಂಡವಾಳಗಾರರ ಜೊತೆ ಕೈಜೋಡಿಸಿ ಸರ್ಕಾರಿ ಉದ್ಯಮಗಳನ್ನು ನಾಶ ಮಾಡುವ ಅಧಿಕಾರಿಗಳೂ ನಮ್ಮಲ್ಲಿದ್ದಾರೆ. ಒಂದು ವೇಳೆ ಅಂತಹ ಪ್ರಾಮಾಣಿಕ ಅಧಿಕಾರಿಗಳು ಇದ್ದರೂ, ಮುಕ್ತ ಆರ್ಥಿಕ ನೀತಿಗಳ ಪರವಾಗಿರುವ ಸರ್ಕಾರ ಅಧಿಕಾರಿಗಳಿಗೆ ಪ್ರೊತ್ಸಾಹ ಕೊಡುತ್ತದೆಯೇ ಎಂಬ ಪ್ರಶ್ನೆಯೂ ಉದ್ಬವಿಸುತ್ತದೆ.
ಇವೆಲ್ಲದರ ಪರಿಣಾಮ ಸರ್ಕಾರಿ ಬಸ್ಸುಗಳು ನಷ್ಟ ಹೊಂದುತ್ತವೆ. ಹೊಸ ಬಸ್ಸುಗಳ ಖರೀದಿ ಕುಂಠಿತವಾಗುತ್ತದೆ. ನೌಕರರು ನಿವೃತ್ತಿ ಹೊಂದಿದ ಕಾರಣದಿಂದ ತೆರವಾಗುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದನ್ನು ಈಗಾಗಲೇ ನಿಲ್ಲಿಸಿಬಿಟ್ಟಿದ್ದಾರೆ. ತೀರಾ ಅಗತ್ಯ ಎನಿಸಿದರೆ, ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಗ್ರಿಗೇಟರ್ ಕಂಪನಿಗಳ ಬಸ್ಸುಗಳ ಸಂಖ್ಯೆ ಹೆಚ್ಚುತ್ತಿದ್ದಂತೆ, ಸರ್ಕಾರಿ ಬಸ್ಸುಗಳು ಕಡಿಮೆಯಾಗುತ್ತಾ ಹೋಗುತ್ತವೆ. ಅಂತಹ ಸಂದರ್ಭ ಬಂದಾಗ ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಹುದ್ದೆಗಳ ನೇಮಕದ ಅಗತ್ಯವೇ ಬರುವುದಿಲ್ಲ. ಇದನ್ನು ತಡೆಗಟ್ಟಲು ಇರುವ ಮಾರ್ಗವೆಂದರೆ, ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳ ನೌಕರರು, ಅಧಿಕಾರಿಗಳು, ಸಾರ್ವಜನಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರು ಒಟ್ಟಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾಸಗೀಕರಣ ನೀತಿಗಳ ವಿರುದ್ದ ದೊಡ್ಡ ಮಟ್ಟದ ಹೋರಾಟ ನಡೆಸುವುದು. ಇದಕ್ಕೆ ಸಿದ್ದರಾಗೋಣ.
AIRTWF ನಿಂದ ವಿರೋಧ
ದೆಹಲಿಯಲ್ಲಿ ಬಸ್ಸುಗಳನ್ನು ನಿರ್ವಹಿಸಲು ಉಬರ್ ಕಂಪನಿಗೆ ಪರವಾನಗಿ ನೀಡಿರುವುದನ್ನು ಆಲ್ ಇಂಡಿಯಾ ರೋಡ್ ಟ್ರಾನ್ಸ್ ಪೋರ್ಟ್ ವರ್ಕರ್ಸ್ ಫೆಡರೇಶನ್ (AIRTWF) ಬಲವಾಗಿ ವಿರೋಧಿಸಿದೆ. ಮೇ 21 ರಂದು ಹೊರಡಿಸಿದ ತನ್ನ ಹೇಳಿಕೆಯಲ್ಲಿ, ಇದು ದೆಹಲಿ ಸಾರಿಗೆ ನಿಗಮ (DTC) ಮತ್ತು ಅದರ ಚಾಲಕರು, ನಿರ್ವಾಹಕರು, ಒಟ್ಟಾರೆಯಾಗಿ ದೆಹಲಿ ಸಾರಿಗೆ ನಿಗಮದ ನೌಕರರಿಗೆ ಹಾಗೂ ಅಲ್ಲಿನ ಜನರಿಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ ಎಂದಿರುವ ಫೆಡರೇಶನ್, ಬಸ್ಸುಗಳನ್ನು ನಿರ್ವಹಿಸಲು ಉಬರ್ ಗೆ ನೀಡಿರುವ ಅನುಮತಿಯನ್ನು ಹಿಂಪಡೆಯುವಂತೆ ದೆಹಲಿ ಸರ್ಕಾರವನ್ನು ಒತ್ತಾಯಿಸಿದೆ.
ಈ ಕಳವಳಗಳನ್ನು ಪರಿಹರಿಸಲು ಮತ್ತು ಡಿಟಿಸಿ ಮೂಲಕ ಸಾರ್ವಜನಿಕ ಸಾರಿಗೆಯನ್ನು ಸುಧಾರಿಸುವ ಮಾರ್ಗಗಳನ್ನು ಅನ್ವೇಷಿಸಲು ಎಲ್ಲಾ ಕಾರ್ಮಿಕ ಸಂಘಗಳು ಮತ್ತು ಪ್ರಯಾಣಿಕರ ಸಂಘಗಳೊಂದಿಗೆ ಸಭೆಯನ್ನು ಆಯೋಜಿಸಲು ಅದು ಸಲಹೆ ನೀಡಿದೆ.
ಈ ಕ್ರಮವು ಒಟ್ಟಾರೆಯಾಗಿ ಸುಮಾರು 90 ಪ್ರತಿಶತದಷ್ಟು ಸಣ್ಣ ಮಾಲೀಕರು-ಕಮ್-ಚಾಲಕರನ್ನು ತೊಡೆದುಹಾಕಲು ಕಾರಣವಾಗುತ್ತದೆ. ದೇಶದಲ್ಲಿ ಸಾರಿಗೆ ವಾಹನಗಳು. Uber/Ola ನಂತಹ ಅಗ್ರಿಗೇಟರ್ ಕಂಪನಿಗಳು ಚಾಲಕರನ್ನು ಹೇಗೆ ಶೋಷಣೆ ಮಾಡುತ್ತವೆ, ಅವರು ಕಷ್ಟಪಟ್ಟು ದುಡಿದ ಹಣವನ್ನು ಹೇಗೆ ಹಿಂಡುತ್ತವೆ, ಚಾಲಕರ ನಡುವೆ ಮುಷ್ಕರ ಮತ್ತು ಆತ್ಮಹತ್ಯೆಗೆ ಕಾರಣವಾಗುತ್ತವೆ ಎಂಬುದನ್ನು ಗಮನಿಸುವುದು ಯೋಗ್ಯವಾಗಿದೆ. ಹೆಚ್ಚುವರಿಯಾಗಿ, ಪ್ರಯಾಣಿಕರು ಪಾರದರ್ಶಕತೆ ಇಲ್ಲದೆ ಹೆಚ್ಚಿನ ದರಗಳನ್ನು ಎದುರಿಸುತ್ತಾರೆ, ವಿವಿಧ ತೊಂದರೆಗಳನ್ನು ಎದುರಿಸುತ್ತಾರೆ.
ಡಿಟಿಸಿ ಒದಗಿಸುವ ಅಸಮರ್ಪಕ ಸಾರ್ವಜನಿಕ ಸಾರಿಗೆಯಿಂದಾಗಿ ಪ್ರಯಾಣಿಕರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಸವಾಲುಗಳ ಬೆಳಕಿನಲ್ಲಿ, DTC ಅನ್ನು ವಿಸ್ತರಿಸುವುದು ನಿರ್ಣಾಯಕ ಮತ್ತು ತುರ್ತು, ಇದು ಪ್ರಯಾಣಿಕರ ಪ್ರಯಾಣದ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸುತ್ತದೆ ಎಂದು ಖಚಿತಪಡಿಸುತ್ತದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಿಂದಲೂ ಆರ್ಥಿಕ ನೆರವು ಬೇಕಾಗುತ್ತದೆ ಎಂದು ಫೆಡರೇಶನ್ ಹೇಳಿದೆ.
ಇದನ್ನು ನೋಡಿ : ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದ 18 ಕ್ಷೇತ್ರಗಳಲ್ಲಿ 15ರಲ್ಲಿ ಎನ್‌ಡಿಎ ಗೆ ಸೋಲು