ಜಿ ಎನ್ ಮೋಹನ್
ಕ್ಯೂಬಾ ‘ಟೋಕಿಯೋ ಒಲಂಪಿಕ್ಸ್’ನಲ್ಲಿ 5 ಚಿನ್ನ ಸೇರಿದಂತೆ 16 ಪದಕಗಳನ್ನು ಗೆದ್ದಿದೆ. ಅಮೇರಿಕಾ ಹೇರಿರುವ ದಿಗ್ಬಂಧನದಿಂದಾಗಿ ಕ್ಯೂಬಾದಲ್ಲಿ ಕ್ರೀಡಾಪಟುಗಳಿಗೆ ಕನಿಷ್ಠ ಅಗತ್ಯವಿರುವ ಕ್ಯಾಲೋರಿ ಆಹಾರವೂ ಸಿಗುತ್ತಿಲ್ಲ. ಆದರೂ ಸಹಾ ಕ್ಯೂಬಾದ ಕ್ರೀಡಾಪಟುಗಳು ನೆಲಕ್ಕೊದ್ದು ಮುಗಿಲಿಗೆ ಜಿಗಿಯುತ್ತಿದ್ದಾರೆ.
ಟ್ರಂಪ್ ಸರ್ಕಾರ ಸೋತ ನಂತರ ಕ್ಯೂಬಾ ಪರಿಸ್ಥಿತಿ ಸುಧಾರಿಸುತ್ತದೆ ಎನ್ನುವ ಆಶಾಭಾವವನ್ನು ಎಲ್ಲರೂ ಹೊಂದಿದ್ದರು. ಆದರೆ ಜೋ ಬೈಡೆನ್ ಸರ್ಕಾರ ಕುಣಿಕೆಯನ್ನು ಇನ್ನಷ್ಟು ಬಿಗಿ ಮಾಡಿದೆ.
ಇಂತಹ ಸಂದರ್ಭದಲ್ಲಿ ನಾನು ‘ನನ್ನೊಳಗಿನ ಹಾಡು ಕ್ಯೂಬಾ’ ಕೃತಿಯಲ್ಲಿ ಬರೆದ ‘ಮೂತಿಗೆ ಗುದ್ದಬೇಕು’ ಎನ್ನುವ ಭಾಗವನ್ನು ನಿಮಗಾಗಿ ನೀಡುತ್ತಿದ್ದೇನೆ. ಕ್ಯೂಬಾ ಪರವಾಗಿ ಮನ ಕರಗದಿದ್ದರೆ ಕೇಳಿ…
ಮೂತಿಗೆ ಗುದ್ದಬೇಕು…
‘ಹವಾನಾದ ಕ್ರಾಂತಿ ಚೌಕದಿಂದ ನೇರವಾಗಿ ಅಮೇರಿಕಾದ ವೈಟ್ಹೌಸ್ಗೇ ಜಾವೆಲಿನ್ ಎಸೆಯುವವರು ನಮ್ಮಲ್ಲಿದ್ದಾರೆ’ – ಅಮೇರಿಕಾಗೆ ಕ್ಯೂಬಾ ಕೊಟ್ಟ ಎಚ್ಚರಿಕೆ ಇದು.
ಕ್ಯೂಬಾದ ಎಲ್ಲರೂ ಪ್ರೀತಿಸುವ ಕ್ರಾಂತಿಕಾರಿ ಜೋಸ್ಮಾರ್ಟಿ ಅವರ ಹೆಸರನ್ನೇ ಬಳಸಿಕೊಂಡು ಅಮೇರಿಕಾ ‘ರೇಡಿಯೋ ಜೋಸ್ ಮಾರ್ಟಿ’ ಪ್ರಸಾರ ಆರಂಭಿಸಿದಾಗ ಕ್ಯೂಬಾ ಹಾಗೂ ಅಮೇರಿಕಾದಲ್ಲಿ ಈ ಬಗ್ಗೆ ಖಂಡನೆಗಳ ಸುರಿಮಳೆಯಾಯಿತು. ಆಗ ಅಮೇರಿಕಾದ ಆಂತರಿಕ ವಿಷಯಗಳ ಸಹಾಯಕ ಕಾರ್ಯದರ್ಶಿ ‘ಕ್ಯೂಬಾ ನಿರ್ಲಕ್ಷಿಸಿರುವ ವಿಷಯಗಳಲ್ಲಿ ಅಲ್ಲಿನ ಯುವಜನರಿಗೆ ಅರಿವು ಮೂಡಿಸಲು ಈ ರೇಡಿಯೋ ಪ್ರಸಾರ ಆರಂಭಿಸಲಾಗಿದೆ. ಕ್ಯೂಬಾ ಸರ್ಕಾರ ನಿರ್ಲಕ್ಷಿಸಿರುವ ಕ್ರೀಡೆ ಹಾಗೂ ಸಂಗೀತದ ಬಗ್ಗೆ ರೇಡಿಯೋ ಮಾರ್ಟಿ ಪ್ರಸಾರ ಆರಂಭಿಸುತ್ತದೆ’ ಎಂದಾಗ ಕ್ಯೂಬಾ ಕೊಟ್ಟ ಉತ್ತರ ಇದು.
ಕ್ಯೂಬಾದ ಕುತ್ತಿಗೆಗೆ ಅಮೇರಿಕಾ ಕುಣಿಕೆ ಹಾಕಿದಾಗಲೂ ಸಹಾ ಬಾಕ್ಸಿಂಗ್ಗೆ ಹೆಸರಾದ ಕ್ಯೂಬಾ ಅಮೇರಿಕಾದ ಮೂತಿಗೆ ಗುದ್ದುವುದನ್ನು ಬಿಡಲಿಲ್ಲ. ಅದು ಒಲಿಂಪಿಕ್ಸ್ ಇರಲಿ. ಪ್ಯಾನ್ ಅಮೇರಿಕಾ ಕೂಟಗಳಿರಲಿ, ಲ್ಯಾಟಿನ್ ಅಮೇರಿಕಾ ಕ್ರೀಡಾಸ್ಪರ್ಧೆಗಳಿರಲಿ, ಐಬಿರೋ – ಅಮೇರಿಕಾ ದೇಶಗಳ ಕ್ರೀಡಾಕೂಟವಿರಲಿ ಅಥವಾ ಅಂಗವಿಕಲರ, ಬುದ್ಧಿಮಾಂದ್ಯರ ಅಂತಾರಾಷ್ಟ್ರೀಯ ಸ್ಪರ್ಧೆಗಳಿರಲಿ ಕ್ಯೂಬಾ ಸದಾ ಮೇಲುಗೈ ಪಡೆಯುತ್ತಲೇ ಬಂದಿದೆ.
ಹವಾನಾದಲ್ಲಿ 1991ರಲ್ಲಿ ನಡೆದ ಪ್ಯಾನ್ ಅಮೇರಿಕಾ ದೇಶಗಳ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಕ್ಯೂಬಾದ ರಾಷ್ಟ್ರಗೀತೆಯನ್ನು ಅಮೇರಿಕಾಗಿಂತ ಹತ್ತು ಬಾರಿ ಹೆಚ್ಚು ನುಡಿಸಲಾಯಿತು. ಕ್ಯೂಬಾ ಈ ಸ್ಪರ್ಧೆಯಲ್ಲಿ 140 ಪದಕಗಳನ್ನು ಗೆದ್ದರೆ ಅಮೇರಿಕಾ 130 ಪದಕಗಳೊಂದಿಗೆ ಹಿಂದೆ ನಿಲ್ಲಬೇಕಾಯಿತು.
ಆಹಾರ, ಹಣ್ಣು, ಹಾಲು ಇಲ್ಲದ ಸಮಯದಲ್ಲಿಯೂ ಕ್ಯೂಬಾ ಕ್ರೀಡೆಯಲ್ಲಿ ತನ್ನ ಹೆಜ್ಜೆಗಳನ್ನು ಹಿಂದೆ ಸರಿಸಿಲ್ಲ. 1972ರಲ್ಲಿ ಮ್ಯೂನಿಚ್ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ 14 ನೆಯ ಸ್ಥಾನ ಪಡೆದ ಕ್ಯೂಬಾ 1976 ರಲ್ಲಿ ಮಾಂಟ್ರಿಯಲ್ ಒಲಿಂಪಿಕ್ಸ್ ನಲ್ಲಿ ಎಂಟನೇ ಸ್ಥಾನಕ್ಕೆ ಏರಿತು. 1980 ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ನಂತರ 12 ವರ್ಷಗಳ ಕಾಲ ಕ್ಯೂಬಾ ಒಲಿಂಪಿಕ್ಸ್ ನ ರಾಜಕಾರಣದಿಂದ ಕ್ರೀಡೆಗೆ ಬಹಿಷ್ಕಾರ ಹಾಕಿತು. ಆದರೆ 1992ರಲ್ಲಿ ಬಾರ್ಸಿಲೋನಾದಲ್ಲಿ ಮತ್ತೆ ಕಾಣಿಸಿಕೊಂಡ ಕ್ಯೂಬಾ 172 ದೇಶಗಳ ಪೈಕಿ ಐದನೇ ಸ್ಥಾನ ಗಿಟ್ಟಿಸಿತು. ಅಟ್ಲಾಂಟದಲ್ಲಿ 9 ಚಿನ್ನದ ಪದಕ ಗೆದ್ದು 8ನೇ ಸ್ಥಾನದಲ್ಲಿತ್ತು. ಇದು ಅಮೇರಿಕಾಗೂ ಗೊತ್ತು.
ಅಮೇರಿಕಾದ ಮೂತಿಗೆ ಗುದ್ದುವುದು ಎಂದರೆ ಕ್ಯೂಬನ್ನರಿಗೆ ಸದಾ ಸಂತಸದ ವಿಷಯ. ಹೀಗಾಗಿಯೇ ಕ್ಯೂಬಾದ ಬಾಕ್ಸರ್ಗಳು ರಿಂಗ್ನೊಳಗಿಳಿದರೆ ಸಾಕು ಸದಾ ತಮಗೆ ಎದುರಾಳಿಯಾಗುವ ಅಮೇರಿಕಾದವರ ವಿರುದ್ಧ ಇರುವ ಸಿಟ್ಟನ್ನೆಲ್ಲಾ ಹರಿಯಬಿಡುತ್ತಾರೆ. “ನನಗೆ ಅಮೇರಿಕಾದವರ ಮೂತಿಗೆ ಇಕ್ಕುವುದು ಸದಾ ಸಂತೋಷ ನೀಡುತ್ತದೆ. ಏಕೆಂದರೆ ಕ್ಯೂಬಾದ ಎಲ್ಲ ಕಣ್ಣು ಅಮೇರಿಕಾದವರ ವಿರುದ್ಧ ಸೆಣಸಾಡುತ್ತಿರುವ ನಮ್ಮ ಮೇಲೆಯೇ ಇರುತ್ತದೆ” ಎನ್ನುತ್ತಾರೆ ಸದಾ ಚಿನ್ನದ ಪದಕ ಬಾಚುವ ಏರಿಯಲ್ ಫರ್ನಾಂಡಿಸ್.
ಬಾಕ್ಸಿಂಗ್ ನಲ್ಲಂತೂ ಕ್ಯೂಬಾ ಅಮೇರಿಕಾವನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸುತ್ತಲೇ ಇದೆ. ಅಮೇರಿಕಾದ ವಿರುದ್ಧ ಒಲಿಂಪಿಕ್ಸ್ ಪಂದ್ಯವೊಂದರಲ್ಲಿ 12ರ ಪೈಕಿ 11 ಪದಕ ಗೆದ್ದದ್ದು ಕ್ಯೂಬಾದಲ್ಲಿ ಸಂತಸದ ಹೊಳೆಯನ್ನೇ ಹರಿಸಿದೆ. ಆ ಕಳೆದುಕೊಂಡ ಒಂದು ಪದಕವೂ ರೆಫರಿಯ ಪೂರ್ವಾಗ್ರಹದಿಂದಾದದ್ದು ಎನ್ನುತ್ತಾರೆ ಕ್ಯೂಬಾದ ಕುಸ್ತಿಪಟುಗಳು.
ಕ್ರಾಂತಿಗೆ ಮುನ್ನ ಕ್ಯೂಬಾ ಒಲಿಂಪಿಕ್ಸ್ನಲ್ಲಿ ಒಂದೇ ಒಂದು ಪದಕವನ್ನೂ ಪಡೆದಿರಲಿಲ್ಲ ಎಂಬುದು ಕ್ಯೂಬಾ ಸರ್ಕಾರ ನೀಡಿರುವ ಆದ್ಯತೆಗಳನ್ನು ಸಾರಿಹೇಳುತ್ತದೆ. ಕುಸ್ತಿ, ಬೇಸ್ಬಾಲ್, ಮಹಿಳೆಯರ ವಾಲಿಬಾಲ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದು ಹ್ಯಾಂಡ್ಬಾಲ್, ಫೀಲ್ಡ್ ಹಾಕಿಯಲ್ಲಿಯೂ ಪ್ರೀತಿ ಹೊಂದಿದೆ.
ಕ್ಯೂಬಾದ ನೆತ್ತಿಯನ್ನು ಸಿಕ್ಕ ವಿಷಯಕ್ಕೆಲ್ಲಾ ಮೊಟಕುವ ಅಮೇರಿಕಾ ಈ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಕ್ಯೂಬನ್ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಹೋದರೆ ಸಾಕು ಹಣದ ಥೈಲಿ ತೋರಿಸಿ ತಮ್ಮ ಕಡೆ ಸೆಳೆಯುವ ಹಿಂಬಾಗಿಲ ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತದೆ. ಕ್ಯೂಬಾದ ನೋವಿನ ಸಂಗತಿಗಳಲ್ಲಿ ಇದೂ ಒಂದು.
ಕ್ಯೂಬಾದ ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ಕೇವಲ ಅಮೇರಿಕಾದ ಕ್ರೀಡಾಪಟುಗಳ ಮೇಲಲ್ಲ, ಡಾಲರ್ನ ಥೈಲಿಗಳ ಮೇಲೂ ಗೆದ್ದು ಬರಬೇಕು. ಹಣದ ಥೈಲಿಯ ಮುಂದೆ ದೇಶದ ಅಭಿಮಾನವೇ ಮುಖ್ಯ ಎಂಬುದನ್ನು ಸಾರಿ ಸಾರಿ ಹೇಳಬೇಕಾದ ಪರಿಸ್ಥಿತಿ ಇದೆ. ಕ್ಯೂಬಾದ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ನಲ್ಲಿ ಗೆಲ್ಲುವ ಚಿನ್ನದ ಪದಕಕ್ಕಿಂತಲೂ ಮತ್ತೆ ತಾಯ್ನಾಡಿಗೆ ಹೊತ್ತು ತರುವ ಈ ಸ್ವಾಭಿಮಾನವೇ ಬೆಲೆಯುಳ್ಳದ್ದು. ಬಾರ್ಸಿಲೋನಾ ಒಲಿಂಪಿಕ್ಸ್ನಲ್ಲಿ ಕ್ಯೂಬಾ 31 ಪದಕಗಳನ್ನು ಗೆದ್ದಿತು ಎನ್ನುವುದಕ್ಕಿಂತಲೂ ಅಲ್ಲಿಗೆ ಹೋದ 200 ಮಂದಿ ಕ್ರೀಡಾಪಟುಗಳು ಎಲ್ಲರೂ ಹಿಂದಿರುಗಿ ಬಂದರು ಎಂಬುದು ಹೆಮ್ಮೆಯ ಸಂಗತಿ.
ಕ್ಯೂಬಾ ಇಂದು ಬಡತನದ ನಡುವೆಯೂ ಸುಮಾರು 30 ದೇಶಗಳಿಗೆ ಕ್ರೀಡೆಯಲ್ಲಿ ತಾಂತ್ರಿಕ ಸಹಕಾರ ನೀಡುತ್ತಿದೆ. ಕ್ಯೂಬಾದ ಕ್ರೀಡಾಶಾಲೆಗಳಲ್ಲಿ 15 ದೇಶಗಳ 250ಕ್ಕೂ ಹೆಚ್ಚು ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಕ್ಯೂಬಾದಲ್ಲಿ ನಡೆದ ಅಂತಾರಾಷ್ಟ್ರೀಯ ಸೌಹಾರ್ದ ಸಮ್ಮೇಳನದಲ್ಲಿ ಫಿಡೆಲ್ಕ್ಯಾಸ್ಟ್ರೋ ಹೆಮ್ಮೆಯಿಂದ ಹೇಳಿದ್ದೂ ಇದನ್ನೇ. ‘ಅಮೇರಿಕಾದ ಆರ್ಥಿಕ ದಿಗ್ಬಂಧನದ ನಡುವೆಯೂ ಕ್ಯೂಬಾ ತಲಾ ಆದಾಯಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚು ದೈಹಿಕ ಹಾಗೂ ಕ್ರೀಡಾ ಶಿಕ್ಷಕರನ್ನು ಹೊಂದಿದೆ.’
ಕ್ಯೂಬಾ ತನ್ನ ಸಂಕಷ್ಟದಲ್ಲಿಯೂ ಕ್ರೀಡೆಗೆ ಹಣದ ಕೊರತೆಯಾಗದಂತೆ ನೋಡಿಕೊಂಡಿದೆ. ಕ್ರೀಡೆಗಾಗಿ 102.8 ದಶಲಕ್ಷ ಪೆಸೋಗಳನ್ನು ಮೀಸಲಿರಿಸಿದೆ. ಕ್ಯೂಬಾಕ್ಕೆ ಒದಗಿರುವ ಕಷ್ಟ ಕ್ರೀಡಾಪಟುಗಳಿಗೂ ಗೊತ್ತು. ತಾವು ಗೆದ್ದ ಹಣದ ಬಹುತೇಕ ಭಾಗವನ್ನು ಮತ್ತೆ ಕ್ರೀಡೆಗೇ ನೀಡುತ್ತಾರೆ. ತಮ್ಮ ನಂತರವೂ ಅಮೇರಿಕಾದ ಮೂತಿಗೆ ಗುದ್ದುವವರು ಮುಂದುವರಿಯಲಿ ಎಂದು.
ಅಮೇರಿಕಾದಲ್ಲಿ ನಡೆಯುವ ಹಲವು ಅಂತಾರಾಷ್ಟೀಯ ಸ್ಪರ್ಧೆಗಳಿಗೆ ಕ್ಯೂಬಾ ಕ್ರೀಡಾಪಟುಗಳಿಗೆ ಕೊನೆಯ ನಿಮಿಷದಲ್ಲಿ ವೀಸಾ ನೀಡುವ, ಎಷ್ಟೋ ವೇಳೆ ಸ್ಪರ್ಧೆಯ ಫಲಿತಾಂಶ ಬಂದ ಮೇಲೆ ವೀಸಾ ನೀಡುವ, ಡಾಲರ್ ಹಿಡಿದು ಬೆಂಬತ್ತಿ ಪೀಡಿಸುವ ಒತ್ತಡದ ತಂತ್ರವನ್ನು ಅಮೇರಿಕಾ ನಡೆಸುತ್ತಲೇ ಬಂದಿದೆ.
ಒಲಂಪಿಕ್ಸ್ ಸಿಐಎಗೆ ಪ್ರಮುಖ ಹಬ್ಬ ಎನ್ನುತ್ತಾರೆ ಸಿಐಎನ ಅಧಿಕಾರಿಯಾಗಿದ್ದು ಈಗ ಅದನ್ನು ತೊರೆದಿರುವ ಫಿಲಿಪ್ ಆಗೀ. ಬಾರ್ಸಿಲೋನಾ ಒಲಿಂಪಿಕ್ಸ್ ಸಂದರ್ಭದಲ್ಲಿ ತಾವು ಒಂದೂವರೆ ವರ್ಷ ಮುಂಚಿತವಾಗಿಯೇ ಅಮೇರಿಕಾ ರಾಯಭಾರ ಕಚೇರಿಯ ಸಹಾಯಕ ಎಂಬ ಹೆಸರಿನಲ್ಲಿ ಗೂಢಾಚಾರಿಕೆ ನಡೆಸುತ್ತಿದ್ದುದನ್ನು. ಕ್ರೀಡಾಪಟುಗಳ ಚೆನ್ನತ್ತಿ ಹೋಗುತ್ತಿದ್ದುದನ್ನೂ, ದೇಶ ದೇಶಗಳಿಂದ ಮಾಹಿತಿ ವಿನಿಯಮ ಮಾಡಿಕೊಳ್ಳುತ್ತಿದ್ದುದನ್ನೂ ‘ಇನ್ಸೈಡ್ ದಿ ಕಂಪನಿ’ ಎಂಬ ಸಿ.ಐ.ಎ.ಯನ್ನು ಬಯಲಿಗಿಡುವ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ.
ಕ್ಯೂಬಾದ ನಾಯಕರ ಕ್ರೀಡಾ ಆಸಕ್ತಿಯೂ ಸಿಐಎಗೆ ಮುಖ್ಯ ವಿಷಯ. ಕ್ಯೂಬಾದಲ್ಲಿ ಕ್ರಾಂತಿಯಾದ ಎರಡು ವರ್ಷಗಳಲ್ಲಿಯೇ ನ್ಯಾಷನಲ್ ಸ್ಪೋರ್ಟ್, ಫಿಸಿಕಲ್ ಎಜುಕೇಶನ್ ಅಂಡ್ ರಿಕ್ರಿಯೇಷನ್ ಇನ್ಸ್ಟಿಟ್ಯೂಟ್ (ಇಂದರ್) ಸ್ಥಾಪಿಸಲಾಯಿತು. ಇಡೀ ಕ್ಯೂಬಾದಲ್ಲಿ ಕ್ರೀಡಾ ಚಟುವಟಿಕೆಗಳು ಈ ಸಂಸ್ಥೆಯ ಕಣ್ಗಾವಲಿನಲ್ಲಿ ನಡೆಯುತ್ತದೆ. ಈ ‘ಇಂದರ್’ನ ನಿರ್ದೇಶಕರಾಗಿದ್ದ ಆಲ್ಬರ್ಟೋಪ್ಯೂಗ್ ಡೆ ಲಾ ಬಾರ್ಕಾ ಅವರನ್ನೇ ಸಿಐಎ ತನ್ನ ಬುಟ್ಟಿಗೆ ಹಾಕಿಕೊಂಡಿತು. ಆದರೆ ಇವರು ಕ್ಯೂಬಾ ಪರ ಬೇಹುಗಾರ ಎಂಬುದು ಗೊತ್ತಿರಲಿಲ್ಲ. ಫಿಡೆಲ್ ಕ್ಯಾಸ್ಟ್ರೋ ಅವರ ಕ್ರೀಡಾ ಆಸಕ್ತಿ, ಇಂದರ್ಗೆ ಭೇಟಿ ನೀಡುವ ಅವಧಿ ಎಲ್ಲವನ್ನೂ ಸಿಐಎ ವಿಚಾರಿಸಿತ್ತು. ಫಿಡೆಲ್ಕ್ಯಾಸ್ಟ್ರೋ ಈಗಲೂ ಮೀನು ಹಿಡಿಯಲು ಹೋಗುತ್ತಾರಾ ಎಂಬುದರ ಬಗ್ಗೆ ವಿಶೇಷ ಆಸಕ್ತಿ ತೋರಿಸಿತ್ತು.
‘ಫಿಡೆಲ್ಕ್ಯಾಸ್ಟ್ರೋ ಈಗಲೂ ಕ್ರೀಡೆಗಳನ್ನು ನೋಡಲು ಹೋಗುತ್ತಾರಾ, ಸದ್ಯದಲ್ಲಿಯೇ ಅವರು ವೀಕ್ಷಕರಾಗಿ ಭಾಗವಹಿಸಲಿರುವ ಕ್ರೀಡಾಸ್ಪರ್ಧೆ ಯಾವುದು? ಇಂಡಿಯಾನ ಪೊಲೀಸ್ನಲ್ಲಿ ನಡೆಯಲಿರುವ 10ನೆಯ ಪ್ಯಾನ್ ಅಮೇರಿಕನ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಬಗ್ಗೆ ಯೋಚಿಸುತ್ತಿದ್ದಾರಾ ಎಂಬ ಬಗ್ಗೆ ಮಾಹಿತಿ ನೀಡಲು ಸಿಐಎ ನನಗೆ ಆದೇಶಿಸಿತ್ತು’ ಎಂದು ಆಲ್ಬರ್ಟೋ ಬಹಿರಂಗ ಪಡಿಸಿದ್ದಾರೆ.
ಕ್ಯೂಬಾದ ಸಂವಿಧಾನ ಕ್ರೀಡೆಯನ್ನು ಪ್ರತಿಯೊಬ್ಬರ ಹಕ್ಕನ್ನಾಗಿಸಿದೆ. ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿಯೇ ಗುರುತಿಸುತ್ತದೆ. ನೋಡಿ ಕಲಿ ಮಾಡಿ ತಿಳಿ ಎಂದು ಬೋಧಿಸುತ್ತದೆ. ಹೀಗಾಗಿಯೇ ಕ್ರೀಡೆಗಳಲ್ಲಿ ಎತ್ತರೆತ್ತರಕ್ಕೆ ಏರುತ್ತಲೇ ಇದೆ.
ಕ್ಯೂಬಾದ ಮೇಲೆ ವಿಧಿಸಿರುವ ಆರ್ಥಿಕ ದಿಗ್ಬಂಧನದಿಂದಾಗಿ ಪ್ರತೀ ಪ್ರಜೆಯೂ ಶೇ.57ರಷ್ಟು ಕ್ಯಾಲೋರಿಗಳನ್ನು ಕಳೆದುಕೊಂಡಿದ್ದಾರೆ. ಆದರೂ ಸಹಾ ಅಮೇರಿಕಾಗೆ ಕ್ಯೂಬನ್ನರು ವಿಶೇಷ ಆಹಾರ ಸೇವಿಸುತ್ತಿದ್ದಾರೆ ಎಂಬ ಗುಮಾನಿ. ಕ್ಯೂಬಾದ ಕ್ರೀಡಾಪಟುಗಳ ಆಹಾರ ಸೂತ್ರವನ್ನು ಪತ್ತೆ ಹಚ್ಚಲೆಂದೇ ಹಲವು ಸಿಐಎ ಅಧಿಕಾರಿಗಳನ್ನು ಬಿಡಲಾಗಿದೆ.
ಆದರೆ ‘ಅಮೇರಿಕಾದ ಮುಂದೆ ಕ್ಯೂಬಾದ ಬಾವುಟ ಬಾಗಬಾರದು’ ಎಂಬ ಒಂದೇ ಸೂತ್ರ ಕ್ಯೂಬಾವನ್ನು ಮತ್ತೆ ಮತ್ತೆ ಮೇಲೆದ್ದು ನಿಲ್ಲುವಂತೆ ಮಾಡುತ್ತಿದೆ ಎಂಬುದು ಮಾತ್ರ ಅಮೇರಿಕಾಗೆ ಗೊತ್ತಾಗಲೇ ಹೋಗಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಕ್ಯೂಬಾದ ಪ್ರಮುಖ ಆಟಗಾರರು