ವೆನೆಜುವೆಲಾ ಮೇಲೆ ಅಮೆರಿಕ ವಾಯು ಬಾಂಬ್ ದಾಳಿ!

ಮೆರಿಕ: ದೇಶದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಕಠಿಣ ಎಚ್ಚರಿಕೆಯ ಬೆನ್ನಲ್ಲೇ, ವೆನೆಜುವೆಲಾ ಮೇಲೆ ಅಮೆರಿಕ ಜನವರಿ 3ರ ಬೆಳಗಿನ ಜಾವ 2:00 ರ ಸುಮಾರಿಗೆ ಭೀಕರ ವಾಯು ಬಾಂಬ್ ದಾಳಿ ನಡೆಸಿದೆ ಎಂಬ ವರದಿ ಬೆಳಕಿಗೆ ಬಂದಿದೆ.

ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಮುಂಜಾನೆ ವೇಳೆ ಕೇಳಿಬಂದ ಭಾರೀ ಸ್ಫೋಟಗಳ ಶಬ್ದಗಳು ಮತ್ತು ಯುದ್ಧವಿಮಾನಗಳ ಘರ್ಜನೆ ನಗರವನ್ನೇ ಬೆಚ್ಚಿಬೀಳುವಂತೆ ಮಾಡಿವೆ.

ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಪ್ರಕಾರ, ಜನವರಿ 3ರ ಮುಂಜಾನೆ ಕ್ಯಾರಕಾಸ್‌ನ ವಿವಿಧ ಭಾಗಗಳಲ್ಲಿ ಕನಿಷ್ಠ ಏಳು ಸ್ಫೋಟಗಳ ಶಬ್ದಗಳು ಕೇಳಿಬಂದಿವೆ. ಈ ವೇಳೆ ಹಾರುತ್ತಿದ್ದ ಯುದ್ಧವಿಮಾನಗಳು ನಗರ ಆಕಾಶದಲ್ಲಿ ಕಂಡುಬಂದಿದ್ದು, ನಿವಾಸಿಗಳು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಆಕಾಶದೆತ್ತರಕ್ಕೆ ಬೆಂಕಿ ಚಿಮ್ಮಿದ ದೃಶ್ಯಗಳು ಕಂಡುಬಂದಿದೆ.

ಇದನ್ನೂ ಓದಿ: ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಯೋಜನೆ ಅನುಷ್ಠಾನಕ್ಕೆ ಅನುಮೋದನೆ | ರೈತರ ಭೂಮಿ ಕಸಿದುಕೊಳ್ಳಲು ಸಿದ್ಧತೆ

ಸ್ಫೋಟಗಳ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಲವು ವೀಡಿಯೊಗಳಲ್ಲಿ, ಕ್ಯಾರಕಾಸ್‌ನ ವಿವಿಧ ಪ್ರದೇಶಗಳಲ್ಲಿ ಬೆಂಕಿ, ಹೊಗೆ ಆವರಿಸಿದ ಆಕಾಶ ಮತ್ತು ಜನರು ಆತಂಕದಿಂದ ಓಡಾಡುತ್ತಿರುವ ದೃಶ್ಯಗಳು ಕಾಣಿಸುತ್ತಿವೆ. ಈ ವೀಡಿಯೊಗಳು ಕ್ಷಣಾರ್ಧದಲ್ಲೇ ವೈರಲ್ ಆಗಿದೆ.

ಸ್ಪ್ಯಾನಿಷ್ ರಾಷ್ಟ್ರೀಯ ಸುದ್ದಿ ಸಂಸ್ಥೆ ಇಎಫ್‌ಇ (EFE) ನೀಡಿರುವ ವರದಿ ಪ್ರಕಾರ, ವೆನೆಜುವೆಲಾದ ಪ್ರಮುಖ ಸೇನಾ ನೆಲೆಗಳಾದ ಫೋರ್ಟ್ ಟಿಯುನಾ ಹಾಗೂ ಲಾ ಕಾರ್ಲೋಟಾ ಮಿಲಿಟರಿ ಬೇಸ್ ಸುತ್ತಮುತ್ತ ಯುದ್ಧವಿಮಾನಗಳು ಹಾರುತ್ತಿದ್ದಾಗ ಸ್ಫೋಟಗಳು ಸಂಭವಿಸಿವೆ. ಫೋರ್ಟ್ ಟಿಯುನಾ ವೆನೆಜುವೆಲಾದ ಅತಿದೊಡ್ಡ ಹಾಗೂ ಅತ್ಯಂತ ಪ್ರಮುಖ ಸೇನಾ ಕೋಟೆಗಳಲ್ಲಿ ಒಂದಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ಯಾರಕಾಸ್ ನಿವಾಸಿಯೊಬ್ಬರು, ‘ಇಡೀ ನೆಲ ನಡುಗಿದಂತೆ ಅನುಭವವಾಯಿತು. ದೂರದಲ್ಲಿ ಸ್ಫೋಟಗಳ ಶಬ್ದಗಳು, ವಿಮಾನಗಳ ಘರ್ಜನೆ ಕೇಳಿಸುತ್ತಿತ್ತು.. ಇದು ತುಂಬಾ ಭಯಾನಕ ಅನುಭವ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ದಾಳಿಯಲ್ಲಿ ಸಾವು-ನೋವುಗಳ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ವೆನೆಜುವೆಲಾ ಸರ್ಕಾರವೂ ಮತ್ತು ಅಮೆರಿಕದ ಅಧಿಕಾರಿಗಳೂ ಈ ಕುರಿತು ಸ್ಪಷ್ಟವಾದ ಹೇಳಿಕೆ ನೀಡಿಲ್ಲ. ಆದರೂ, ಟ್ರಂಪ್ ಇತ್ತೀಚೆಗೆ ವೆನೆಜುವೆಲಾ ಸರ್ಕಾರದ ವಿರುದ್ಧ ನೀಡಿದ್ದ ಕಠಿಣ ಹೇಳಿಕೆಗಳು ಮತ್ತು ಎಚ್ಚರಿಕೆಗಳನ್ನು ಗಮನಿಸಿದರೆ, ಈ ಘಟನೆಗೆ ರಾಜಕೀಯ ಹಾಗೂ ಸೈನಿಕ ಹಿನ್ನೆಲೆ ಇರಬಹುದೆಂಬ ಅನುಮಾನಗಳು ವ್ಯಕ್ತವಾಗಿದೆ.

ವೆನೆಜುವೆಲಾ ಅಧ್ಯಕ್ಷ ಮಡುರೊ, ಪತ್ನಿ ಸೆರೆ: ಟ್ರಂಪ್‌ ವೆನೆಜುವೆಲಾ ಮೇಲಿನ ವೈಮಾನಿಕ ದಾಳಿ ಬಳಿಕ ಅಮೆರಿಕ ಪಡೆಗಳು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್ ಸೋಶಿಯಲ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ವೆನೆಜುವೆಲಾ ಮತ್ತು ಅದರ ಅಧ್ಯಕ್ಷನ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ಜತೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಮಡುರೊ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆದು ದೇಶದಿಂದ ಹೊರಗೆ ಕಳುಹಿಸಲಾಯಿತು ಎಂದು ಹೇಳಿದ್ದಾರೆ.

ಇದನ್ನೂ ನೋಡಿ: 2025 ಹಿನ್ನೋಟ | ಮರೆಯಲಾಗದ ಮರೆಯಬಾರದ ವರ್ಷ 2025 | ಗುರುರಾಜ ದೇಸಾಯಿ ಕೆ.ಎಸ್.ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *