ಪರಿಶಿಷ್ಟ ಜಾತಿ ಫೆಡರೇಷನ್ ಗಾಗಿ ಅಂಬೇಡ್ಕರ್ ಮುಂದಿಟ್ಟ ಪ್ರಣಾಳಿಕೆ

ಬಡತನ ನಿವಾರಣೆಯು ಅಂಬೇಡ್ಕರ್ ಅವರ ಗಮನವನ್ನು ತೀವ್ರವಾಗಿ ಸೆಳೆಯುತ್ತದೆ. ಭಾರತದಂತಹ ಬಡ ದೇಶದಲ್ಲಿ ಮೊಟ್ಟಮೊದಲ ಆದ್ಯತೆ ಇರುವುದು ಸಂಪತ್ತಿನ ಸೃಷ್ಟಿಗಾಗಿ ಎನ್ನುವ ಅಂಬೇಡ್ಕರ್, ಗಾಂಧೀಜಿಯವರ ಆಧುನಿಕ ಕೈಗಾರಿಕೆಗಳ ವಿರೋಧಿ ನಿಲುವನ್ನು ಒಪ್ಪುವುದಿಲ್ಲ. ನಮ್ಮ ದೇಶದ ಜನರನ್ನು ಬಡತನದಿಂದ ಮೇಲೆತ್ತಲು ಬಹಳ ವೇಗವಾದ ಕೈಗಾರಿಕೀಕರಣ ಆಗಬೇಕು ಎನ್ನುವುದು ಅವರ ಆಶಯ. ಅವರು ಎಲ್ಲಾ ಮೂಲಭೂತ ಮತ್ತು ಮುಖ್ಯ ಕೈಗಾರಿಕೆಗಳಲ್ಲಿ ಸಾರ್ವಜನಿಕ ರಂಗವೇ ಇರಬೇಕು ಎಂದು ಪ್ರತಿಪಾದಿಸುತ್ತಾರೆ. ಆದರೆ ಎಲ್ಲೆಲ್ಲಿ ಖಾಸಗಿಯವರಿಗೆ ಸಾಧ್ಯವೊ ಅಲ್ಲಿ ಅವರನ್ನು ಮುಂದಕ್ಕೆ ಬಿಡುವುದು ಒಳ್ಳೆಯದು, ಅವರ ಮುಂದೊಡಗೂ ಸಹ ಕೈಗಾರಿಕಾ ಪ್ರಗತಿಗೆ ಇರಲಿ ಎಂಬುದು ಅವರ ಅಭಿಪ್ರಾಯ.

-ಡಾ. ಮಂಜುನಾಥ್. ಬಿ.ಆರ್

ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್ ನ ಪ್ರಣಾಳಿಕೆ ಎಂಬ ಈ 1951ನೇ ಇಸವಿಯ ದಸ್ತಾವೇಜಿನಲ್ಲಿ ಇರತಕ್ಕಂತಹ ಕೆಲವೊಂದು ಮುಖ್ಯವಾದ ವಿಷಯಗಳ ಬಗ್ಗೆ ಮಾತ್ರ ನಾನು ನನಗೆ ನಿಗದಿತವಾದ ಸಮಯದಲ್ಲಿ ಮಾತನಾಡಲು ಇಷ್ಟಪಡುತ್ತೇನೆ. ದಸ್ತಾವೇಜು ಮೊಟ್ಟಮೊದಲನೆಯದಾಗಿ ಪಕ್ಷದ ಮೂಲ ತತ್ವಗಳ ಕುರಿತು ಮಾತನಾಡುತ್ತದೆ. ಅದೆಂದರೆ ಸಮಾನತೆ, ಸ್ವಾತಂತ್ರ್ಯ ಮತ್ತು ಬಂಧುತ್ವ. ಇದು ಅಂಬೇಡ್ಕರ್ ಅವರು ಬದುಕಿನದ್ದಕ್ಕೂ ಅನೇಕ ಬಾರಿ ಪ್ರತಿಪಾದಿಸಿರುವಂತಹ ಫ್ರೆಂಚ್ ಮಹಾಕ್ರಾಂತಿಯು ಎತ್ತಿ ಹಿಡಿದ ಪರಿಕಲ್ಪನೆಗಳು. ಜಾತಿ

ಅದಕ್ಕೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಇರುವ ವ್ಯಾಖ್ಯಾನವನ್ನು ಒಪ್ಪುತ್ತಲೇ ಅಂಬೇಡ್ಕರ್, ಇನ್ನೂ ಕೆಲವು ಮಾತುಗಳನ್ನು ಅದಕ್ಕೆ ಸೇರಿಸುತ್ತಾರೆ. ಅವರು ಹೇಳುವುದು, ಸಮಾನತೆ ಇಲ್ಲದ ದೇಶದಲ್ಲಿ ಸ್ವಾತಂತ್ರ ಬಂದರೆ ಆಗ ಅತ್ಯಂತ ಬಲಿಷ್ಠವಾದ ವರ್ಗ ಅಥವಾ ಸಮುದಾಯ ಬೇರೆಯವರನ್ನು ಶೋಷಿಸಲು ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುತ್ತದೆ ಅಷ್ಟೇ. ಹಾಗಾಗಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಇಲ್ಲದ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲ. ಆದರೆ ಸ್ವಾತಂತ್ರ್ಯವಿಲ್ಲದ ಸಮಾನತೆಯು ಸಮಾಜದಲ್ಲಿನ ಮೂಲಭೂತ ಜನತಾಂತ್ರಿಕ ಹಕ್ಕುಗಳನ್ನೇ ನಾಶ ಮಾಡಿಬಿಡುತ್ತದೆ, ಜನತೆಯ ಮುಂದೊಡಗನ್ನು ಹಾಳು ಮಾಡುತ್ತದೆ. ಜಾತಿ

ಹೀಗಾಗಿ ಸ್ವಾತಂತ್ರ್ಯವಿಲ್ಲದ ಸಮಾನತೆ ಸಹ ನಮಗೆ ಅಪೇಕ್ಷಣೀಯವಲ್ಲ. ಮತ್ತು ಸಮಾನತೆ ಮತ್ತು ಸ್ವಾತಂತ್ರ್ಯಗಳನ್ನು ನಾವು ಗಳಿಸಿಕೊಂಡರೂ ಸಹ ಜನತೆಯ ನಡುವೆ ನಿಜವಾದ ಭಾವನಾತ್ಮಕ ಬೆಸುಗೆ, ಎಂದರೆ ಸಹಜವಾದ ಬಂಧುತ್ವ ಇಲ್ಲದಿದ್ದರೆ ಆಗ ಸಮಾನತೆ ಮತ್ತು ಸ್ವಾತಂತ್ರ್ಯಗಳನ್ನು ಹೊರಗಿನಿಂದ ಪೊಲೀಸನೊಬ್ಬ ಹೇರಿದಂತಾಗುತ್ತದೆ ಎನ್ನುತ್ತಾರೆ. ಜಾತಿ

ಇದನ್ನೂ ಓದಿ: ಕೆಎಸ್ಸಾರ್ಟಿಸಿ ಬಸ್ ಪುನಃ ಓಡಿಸಲು ಪ್ರತಿಭಟನೆ – ಪರ್ಮಿಟ್ ಇದ್ದೂ ಓಡಿಸದ ಖಾಸಗೀ ಬಸ್ ಮಾಲೀಕರ ಪರವಾನಿಗೆ ರದ್ದಿಗೆ ಆಗ್ರಹ

ಇದನ್ನು ಪ್ರಸ್ತಾಪಿಸಿದ ಅಂಬೇಡ್ಕರ್ ರವರು ನಮ್ಮ ಸಮಾಜವು ಚಾರಿತ್ರಿಕವಾಗಿ ಅನುಭವಿಸುತ್ತಾ ಬಂದಿರುವ ಅಸಮಾನತೆಗಳ ಬಗ್ಗೆ ಕೂಡ ಬೆಳಕು ಚೆಲ್ಲುತ್ತಾರೆ. ಸಮಾನತೆ ನಾವು ಸಾಧಿಸಬೇಕಾದ ಆದರ್ಶ. ಸಮಾನತೆ ದೇಶದಲ್ಲಿರುವ ಎಲ್ಲರಿಗೂ ಸಿಕ್ಕಬೇಕಾದದ್ದು ಎಂಬುದರಲ್ಲಿ ಸಂಶಯವಿಲ್ಲ, ಆದರೆ ಇರತಕ್ಕಂತಹ ಸೀಮಿತ ಅವಕಾಶಗಳಲ್ಲಿ ಮೊದಲ ಹಕ್ಕು, ಯಾರಿಗೆ ಇದುವರೆಗೂ ಅವಕಾಶಗಳೇ ಸಿಕ್ಕಿಲ್ಲವೋ ಅವರಿಗೆ ಇರಬೇಕು ಎಂದು ವಾದಿಸುತ್ತಾ ಅವರು ಮೀಸಲಾತಿಯನ್ನು ಮುಂದುವರೆಸಬೇಕಾದ ಅಗತ್ಯದ ಬಗ್ಗೆ ಹೇಳುತ್ತಾರೆ. ಜಾತಿ

ಸಿದ್ಧಾಂತದ ಬಗ್ಗೆ ಮಾತನಾಡುತ್ತಾ ಅವರು ನಾವು ಯಾವುದೇ ಒಂದು ನಿಶ್ಚಿತ ಸಿದ್ದಾಂತಕ್ಕೆ ಗಾಂಧಿವಾದ ಅಥವಾ ಮಾರ್ಕ್ಸ್ ವಾದ ಈ ಯಾವುದೇ ಒಂದಕ್ಕೆ ಕಟ್ಟುಬೀಳದೆ ನಮ್ಮ ಜನತೆಯ ಕಲ್ಯಾಣಕ್ಕಾಗಿ ಎಲ್ಲ ಕಡೆಯಿಂದಲೂ ಒಳ್ಳೆಯ ಅಂಶಗಳನ್ನು ಸ್ವೀಕರಿಸಬೇಕು ಎಂದು ಬಯಸುತ್ತೇನೆ ಎನ್ನುತ್ತಾರೆ. ಆಡಳಿತಕ್ಕೆ ಸಂಬಂಧಪಟ್ಟಂತೆ ತಮ್ಮ ಪಕ್ಷದ ಕಾರ್ಯಕ್ರಮವನ್ನು ಮುಂದಿಡುತ್ತಾ ಅವರು ಕಾನೂನು ಎಲ್ಲರಿಗೂ ಸಮನಾಗಿರಬೇಕು, ಆಡಳಿತ ನಿಷ್ಪಕ್ಷಪಾತವಾಗಿರಬೇಕು, ರಾಜ್ಯವು ಯಾವುದೇ ಒಂದು ಧರ್ಮಕ್ಕೆ ಸೇರಿರಬಾರದು, ಸಮಾನ ನ್ಯಾಯ ಎಲ್ಲರಿಗೂ ದೊರಕುವಂತಾಗಬೇಕು ಎಂದು ಪ್ರತಿಪಾದಿಸುತ್ತಾರೆ. ಜಾತಿ

ಬಡತನ ನಿವಾರಣೆಯು ಅಂಬೇಡ್ಕರ್ ಅವರ ಗಮನವನ್ನು ತೀವ್ರವಾಗಿ ಸೆಳೆಯುತ್ತದೆ. ಭಾರತದಂತಹ ಬಡ ದೇಶದಲ್ಲಿ ಮೊಟ್ಟಮೊದಲ ಆದ್ಯತೆ ಇರುವುದು ಸಂಪತ್ತಿನ ಸೃಷ್ಟಿಗಾಗಿ ಎನ್ನುವ ಅಂಬೇಡ್ಕರ್, ಗಾಂಧೀಜಿಯವರ ಆಧುನಿಕ ಕೈಗಾರಿಕೆಗಳ ವಿರೋಧಿ ನಿಲುವನ್ನು ಒಪ್ಪುವುದಿಲ್ಲ. ನಮ್ಮ ದೇಶದ ಜನರನ್ನು ಬಡತನದಿಂದ ಮೇಲೆತ್ತಲು ಬಹಳ ವೇಗವಾದ ಕೈಗಾರಿಕೀಕರಣ ಆಗಬೇಕು ಎನ್ನುವುದು ಅವರ ಆಶಯ. ಅವರು ಎಲ್ಲಾ ಮೂಲಭೂತ ಮತ್ತು ಮುಖ್ಯ ಕೈಗಾರಿಕೆಗಳಲ್ಲಿ ಸಾರ್ವಜನಿಕ ರಂಗವೇ ಇರಬೇಕು ಎಂದು ಪ್ರತಿಪಾದಿಸುತ್ತಾರೆ. ಆದರೆ ಎಲ್ಲೆಲ್ಲಿ ಖಾಸಗಿಯವರಿಗೆ ಸಾಧ್ಯವೊ ಅಲ್ಲಿ ಅವರನ್ನು ಮುಂದಕ್ಕೆ ಬಿಡುವುದು ಒಳ್ಳೆಯದು, ಅವರ ಮುಂದೊಡಗೂ ಸಹ ಕೈಗಾರಿಕಾ ಪ್ರಗತಿಗೆ ಇರಲಿ ಎಂಬುದು ಅವರ ಅಭಿಪ್ರಾಯ. ಜಾತಿ

ಇಲ್ಲಿ ಅವರು ಜವಾಹರಲಾಲ್ ನೆಹರು ಅವರ ಆರ್ಥಿಕ ಸಿದ್ಧಾಂತಕ್ಕೆ ಹತ್ತಿರವಾಗಿರುವಂತೆ ಕಾಣುತ್ತಾರೆ. ಕೆಲವೊಂದು ಕ್ಷೇತ್ರಗಳಲ್ಲಿ ವಿಶೇಷವಾಗಿ ಕೃಷಿಗೆ ಸಂಬಂಧಿಸಿದಂತಹ ಕೆಲವು ಕಸಬುಗಳಲ್ಲಿ ಬಹಳ ಕಾಲ ಗುಡಿ ಕೈಗಾರಿಕೆ ಮುಂದುವರಿಯಬೇಕಾಗುತ್ತದೆ ಎಂಬುದು ಅವರ ಧೋರಣೆ. ಒಟ್ಟಿನಲ್ಲಿ ನಮ್ಮ ಜನತೆಯಲ್ಲಿ ನಿರುದ್ಯೋಗ ಮತ್ತು ಅರೆ ಉದ್ಯೋಗದಿಂದ ನೊಂದಿರುವ ಎಲ್ಲರಿಗೂ ಕೂಡ ಉದ್ಯೋಗವನ್ನು ಖಾತ್ರಿಪಡಿಸಬೇಕು ಎಂಬುದು ಅವರ ಆಗ್ರಹ. ಬೇರೆ ಬೇರೆ ಸಂದರ್ಭಗಳಲ್ಲಿ ಅವರು ಕೈಗಾರಿಕೀಕರಣ ಹಾಗೂ ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ಸೋವಿಯತ್ ಮಾದರಿಯನ್ನು ಮೆಚ್ಚಿಕೊಂಡಿರುವುದನ್ನು ನಾವಿಲ್ಲಿ ನೆನಪಿಗೆ ತಂದುಕೊಳ್ಳಬಹುದು. ಅವರ ನಿಲುವು ಪ್ರಭುತ್ವ ಸಮಾಜವಾದದ (ಸ್ಟೇಟ್ ಸೋಶಿಯಲಿಸಂ) ಪರ ಎಂಬ ಗ್ರಹಿಕೆ ಇದೆ. ಜಾತಿ

ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಸಹ ಅಂಬೇಡ್ಕರ್ ಅವರ ನಿಲುವುಗಳು ನಮಗೆ ಆಸಕ್ತಿದಾಯಕವಾಗಿವೆ. ಕೃಷಿ ರಂಗವೂ ಕೂಡಲೇ ಆಧುನೀಕರಣಕ್ಕೆ ಮತ್ತು ಯಾಂತ್ರೀಕರಣಕ್ಕೆ ತೆರೆದುಕೊಳ್ಳಬೇಕು ಎಂದು ಅವರು ಬಲವಾಗಿ ವಾದಿಸುತ್ತಾರೆ. ಸಣ್ಣಪುಟ್ಟ ಹಿಡುವಳಿಗಳು ಯಾಂತ್ರಿಕರಣಕ್ಕೆ ಅಡೆತಡೆಯಾಗುತ್ತವೆ. ಚಿಕ್ಕ ಜಮೀನಿನಲ್ಲಿ ಯಂತ್ರಗಳ ಉಪಯೋಗ ಕಾರ್ಯಸಾಧುವಲ್ಲ. ಆದ್ದರಿಂದ ಹಲವು ಜನರ ಸಣ್ಣಪುಟ್ಟ ಭೂ ಹಿಡುವಳಿಗಳನ್ನು ಒಂದು ಕಡೆಗೆ ತಂದು ಸಹಕಾರಿ ಕೃಷಿ ಮತ್ತು ಸಾಮುದಾಯಿಕ ಕೃಷಿಗೆ ಅವುಗಳನ್ನು ಒಳಪಡಿಸಬೇಕು ಎಂದು ಅವರು ಹೇಳುತ್ತಾರೆ. ಸಹಕಾರಿ ಕೃಷಿ ಮತ್ತು ಸಾಮುದಾಯಿಕ ಕೃಷಿ ಎಂಬ ಎರಡು ಪರಿಕಲ್ಪನೆಗಳೂ ಸಹ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ಒಕ್ಕೂಟದಲ್ಲಿ ಚಾಲ್ತಿಗೆ ಬಂದಂಥವು ಎಂಬುದನ್ನು ನಾವು ಮರೆಯಬಾರದು. ಜಾತಿ

ಅಲ್ಲಿ ಆದಂತೆಯೇ ಭಾರತದಲ್ಲಿಯೂ ಸಹ ಪ್ರಭುತ್ವವೇ ಮುಂದೆ ಬಂದು ಆಧುನಿಕ ಯಂತ್ರಗಳನ್ನು, ಉಪಕರಣಗಳನ್ನು, ವಿದ್ಯುತ್ ಶಕ್ತಿಯನ್ನು, ವೈಜ್ಞಾನಿಕವಾಗಿ ಆಯ್ಕೆ ಮಾಡಿದ ಬೀಜಗಳನ್ನು ಮತ್ತು ಆಧುನಿಕ ಗೊಬ್ಬರಗಳನ್ನು ಉಚಿತವಾಗಿ ಸರಬರಾಜು ಮಾಡಬೇಕು; ತನ್ಮೂಲಕ ಬಡ ರೈತರು ಲಾಭದಾಯಕವಾಗಿ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು ಎಂದು ವಾದಿಸುವಾಗ ಅಂಬೇಡ್ಕರ್ ಅತ್ಯಂತ ತೀವ್ರವಾದ ಪ್ರಗತಿಗಾಮಿಯಾಗಿ ಕಾಣಿಸಿಕೊಳ್ಳುತ್ತಾರೆ. ಅಂಕಿ ಅಂಶಗಳ ಮೂಲಕ ಅವರು ಭಾರತದಲ್ಲಿ ಸುಮಾರು 93 ಮಿಲಿಯನ್ ಎಕರೆಗಳಷ್ಟು ಕೃಷಿ ಯೋಗ್ಯ ಬೀಳು ಭೂಮಿ ಇದೆ, ಅದನ್ನು ಬಡ ರೈತರ ನಡುವೆ ಹಂಚಬೇಕು ಎಂದು ವಾದಿಸುತ್ತಾ

ರೆ. ಅಲ್ಲದೆ ಅದೇ ರೀತಿಯಲ್ಲಿ 93 ಮಿಲಿಯನ್ ಎಕರೆಗಳಷ್ಟು ಕೃಷಿ ಯೋಗ್ಯವಲ್ಲದ ಬೀಳು ಭೂಮಿ ಇದೆ. ಆದರೆ ಆಧುನಿಕ ವಿಜ್ಞಾನದ ಸಹಾಯದಿಂದ ಅವುಗಳನ್ನು ಅರಣ್ಯಗಳನ್ನಾಗಿ ಪರಿವರ್ತಿಸಿ ಪರಿಸರ ಸಮತೋಲನಕ್ಕೆ ಯತ್ನಿಸಬೇಕು ಎಂಬ ತಮ್ಮ ಕಾಲಕ್ಕೆ ಅತ್ಯಂತ ಮುಂದುವರಿದ ಪರಿಸರ ಸಂರಕ್ಷಣಾ ಪರಿಕಲ್ಪನೆಯನ್ನು ಸಹ ಅವರು ಮುಂದಿಟ್ಟಿದ್ದಾರೆ. ಕೃಷಿ ಕಾರ್ಮಿಕರ ಪರಿಸ್ಥಿತಿಯ ಬಗ್ಗೆ ಮರುಗುವ ಅವರು, ಇವರಲ್ಲಿ ಬಹುತೇಕ ಜನ ಹಿಂದಿನ ಸಮಾಜಗಳಲ್ಲಿ ಆಸ್ತಿಯ ಹಕ್ಕನ್ನು ಹೊಂದಿಲ್ಲದೆ ಇದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರು. ಜಾತಿ

ಭೂಮಿ ಹಂಚಿಕೆಯಲ್ಲಿ ಅವರಿಗೆ ಆದ್ಯತೆ ಇರಬೇಕು. ಇಷ್ಟಾಗಿಯೂ ಕೃಷಿ ಕ್ಷೇತ್ರದಲ್ಲಿ ಉಳಿಯುವ ಭೂ ವಿಹೀನ ಕಾರ್ಮಿಕರ ಎಲ್ಲ ಹಕ್ಕುಗಳನ್ನು ರಕ್ಷಿಸಬೇಕು ಎನ್ನುತ್ತಾ, ಭಾವುಕರಾಗಿ ಯಾವ ಕಾರ್ಮಿಕನೂ ಶೋಷಣೆಗೆ ಒಳಗಾಗಬಾರದು, ಅಂತಹ ವ್ಯವಸ್ಥೆಯನ್ನು ನಾವು ಸೃಷ್ಟಿಸಬೇಕು ಎಂದು ಘೋಷಿಸುತ್ತಾರೆ. ಕೃಷಿಯಲ್ಲಿ ವಿದ್ಯುತ್ತನ್ನು ಯಥೇಚ್ಛವಾಗಿ ಉಪಯೋಗಿಸಬೇಕು ಅದಕ್ಕಾಗಿ ವಿದ್ಯುತ್ ಉತ್ಪಾದನೆಯ ಮುಂದೊಡಗು ಅವಶ್ಯ. ಜಲ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದು ಸಹ ಅವರು ಹೇಳುತ್ತಾರೆ. ಜಾತಿ

ಈ ಸಮಯದಲ್ಲಿ ನಾವು ಲೆನಿನ್ ಅವರು ರಷ್ಯಾದ ಸಮಾಜವಾದಿ ಕ್ರಾಂತಿಯ ನಂತರ “ಸಮಾಜವಾದ ಎಂದರೆ, (ಉತ್ಪಾದನಾ ಸಾಮಗ್ರಿಗಳು, ಜಮೀನು ಇವುಗಳ ಮೇಲೆ ಸಾಮಾಜಿಕ ಒಡೆತನ ಇರುವ) ಸೋವಿಯತ್ ಪರಮಾಧಿಕಾರ ಮತ್ತು ವಿದ್ಯುತ್ ಶಕ್ತಿ ಎಂಬ ಜನಪ್ರಿಯ ಘೋಷಣೆಯನ್ನು ಮುಂದಿಟ್ಟಿದ್ದನ್ನು ನೆನಪಿಸಿಕೊಳ್ಳಬಹುದು. ಜಾತಿ

ಭಾಷಾವಾರು ಪ್ರಾಂತ್ಯಗಳ ರಚನೆ ಆಗಲೇಬೇಕು, ಭ್ರಷ್ಟಾಚಾರದ ನಿಗ್ರಹ ಅತ್ಯಂತ ಅವಶ್ಯಕ ಹಾಗೂ ದೇಶದ ಬಡತನವನ್ನು ನಿರ್ಮೂಲನಗೊಳಿಸಲು ಜನಸಂಖ್ಯೆಯ ಮೇಲೆ ನಿಯಂತ್ರಣ ಅವಶ್ಯಕ ಎಂಬ ಮಾತುಗಳನ್ನು ಅವರು ಹೇಳಿದ್ದಾರೆ. ಇದಲ್ಲದೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಅವರು ಕಾಂಗ್ರೆಸ್ ಹೇಗೆ ಭ್ರಷ್ಟಾಚಾರದ ಕೂಪವಾಗಿದೆ ಎಂಬುದನ್ನು ವಿವರಿಸುತ್ತಾರೆ. ಆ ಭ್ರಷ್ಟಾಚಾರಕ್ಕೆ ಮುಖ್ಯ ಕಾರಣ,ಕಾಂಗ್ರೆಸ್ ಬಂಡವಾಳಶಾಹಿಗಳ ಹಿಡಿತದಲ್ಲಿರುವುದು ಎನ್ನುವ ಅವರು, ನೇರವಾಗಿ ಕಾಂಗ್ರೆಸ್ ಪಕ್ಷದ ಮೂಲಭೂತ ವರ್ಗ ಲಕ್ಷಣ ಬಂಡವಾಳಶಾಹಿ ಎಂದು ನಿರೂಪಿಸುತ್ತಾರೆ. ಜನಕಲ್ಯಾಣ ಕಾರ್ಯಕ್ರಮಗಳಿಗೆ ಸಂಪನ್ಮೂಲಗಳನ್ನು ಕೂಡಿಸುವ ವಿಷಯದಲ್ಲಿ ತಮ್ಮವಾದಗಳನ್ನು ಮಂಡಿಸುತ್ತಾ ಅವರು ಗಾಂಧೀಜಿ ಮತ್ತು ಕಾಂಗ್ರೆಸ್ ಎತ್ತಿ ಹಿಡಿದ ಪಾನನಿಷೇಧದ ಕಾರ್ಯಕ್ರಮವನ್ನು ಒಪ್ಪುವುದಿಲ್ಲ. ಅವರು ಹೇಳುವುದು ಪಾನನಿಷೇಧ ಎಂಬುದು ಕಾರ್ಯ ಸಾಧುವಾದ ಕಾರ್ಯಕ್ರಮವಲ್ಲ, ಪಾನ ನಿಷೇಧದಿಂದಾಗಿ ಮನೆಮನೆಯೂ ಕಳ್ಳ ಭಟ್ಟಿಗಳಾಗಿ ಹೆಂಗಸರು ಮತ್ತು ಮಕ್ಕಳ ಪರಿಸ್ಥಿತಿಯನ್ನು ಅಧೋಗತಿಗೆ ತಳ್ಳಲ್ಪಟ್ಟಿದ್ದಾರೆ ಎನ್ನುತ್ತಾರೆ. ಜಾತಿ

ಅದರ ಬದಲಿಗೆ ಈ ಉದ್ಯಮದ ಮೇಲೆ ಸಾಕಷ್ಟು ತೆರಿಗೆಯನ್ನು ಹೇರಿ ತನ್ಮೂಲಕ ಸರ್ಕಾರದ ಕಾರ್ಯಕ್ರಮಗಳಿಗೆ ಹಣವನ್ನು ಹೊಂದಿಸಬೇಕು ಎನ್ನುತ್ತಾರೆ. ಬಹಳ ತೀವ್ರಗಾಮಿಯಾದ ಎಡಪಂಥೀಯ ದೃಷ್ಟಿಕೋನವಾಗಿ ಕಾಣುವ ಇನ್ನೊಂದು ಅಂಶವೆಂದರೆ ಅಂಬೇಡ್ಕರ್ ಅವರು ಉಗ್ರ ರಾಷ್ಟ್ರಾಭಿಮಾನವನ್ನು ಎತ್ತಿ ಹಿಡಿಯದೆ, ಸೈನ್ಯದ ಮೇಲಿನ ಖರ್ಚನ್ನು ತೀವ್ರವಾಗಿ ಕಡಿತಗೊಳಿಸಬೇಕು, ಆ ಹಣವನ್ನು ಜನಕಲ್ಯಾಣಕ್ಕೆ ವಿನಿಯೋಗಿಸಬೇಕು ಎನ್ನುತ್ತಾರೆ. ಜನವಿರೋಧಿಯಾದ ಪ್ರಭುತ್ವವೊಂದರ ಅಂಗಗಳನ್ನು ಬಲಪಡಿಸಬಾರದು, ಸರ್ಕಾರದ ಖರ್ಚಿನ ಆದ್ಯತೆಯು ಜನತೆಯ ಅಭಿವೃದ್ಧಿಗಾಗಿ ಎಂಬ ಎಡಪಂಥೀಯ ನಿಲುವಿಗೆ ಇದು ಹತ್ತಿರವಾದದ್ದು. ಅಲ್ಲದೆ ಅವರು ರಾಷ್ಟ್ರದಿಂದ ರಾಷ್ಟ್ರ, ಮಾನವನಿಂದ ಮಾನವನ ಶೋಷಣೆ ಇಲ್ಲದಂತಹ ವ್ಯವಸ್ಥೆಯನ್ನು ಸೃಷ್ಟಿಸುವುದು ಅಗತ್ಯ ಎಂದು ಒತ್ತಿ ಹೇಳುತ್ತಾರೆ. ಜಾತಿ

ಕೊನೆಯಲ್ಲಿ ಅವರು ತಮ್ಮ ಪಕ್ಷವು ಯಾವೆಲ್ಲ ರಾಜಕೀಯ ಪಕ್ಷಗಳ ಜೊತೆಗೆ ಸಹಕರಿಸಬಹುದು ಎಂಬುದನ್ನು ಮಂಡಿಸುತ್ತಾರೆ. ಅದರಲ್ಲಿ ಅವರು ಮೊಟ್ಟ ಮೊದಲನೆಯಾದಾಗಿ ತಿರಸ್ಕರಿಸುವುದು ಹಿಂದೂ ಮಹಾಸಭಾ ಅನ್ನು. ಹಿಂದೂ ಮಹಾಸಭಾ ಎಂದರೆ ಹಿಂದಿನ ಬಿಜೆಪಿ ಎಂದೇ ನಾವು ಗ್ರಹಿಸಬೇಕು. ಏಕೆಂದರೆ ಆಗಿನ್ನೂ ಭಾರತೀಯ ಜನತಾ ಪಕ್ಷವಾಗಲಿ ಅಥವಾ ಅದರ ಮುಂಚಿನ ಅವತಾರವಾದ ಭಾರತೀಯ ಜನಸಂಘವಾಗಲಿ ಹುಟ್ಟಿರಲಿಲ್ಲ. ಅಂಬೇಡ್ಕರ್ ಅವರಿಗೆ ಕಮ್ಯುನಿಷ್ಟರೊಂದಿಗೆ ಕೂಡ ಸಹಕಾರ ಸಾಧ್ಯವಿಲ್ಲ ಎಂಬ ಭಾವನೆಯು ಆ ಸಂದರ್ಭದಲ್ಲಿ ಬಂದಿದ್ದಂತೆ ಕಾಣುತ್ತದೆ. ಜಾತಿ

ಅದಕ್ಕಿರುವ ಒಂದು ಮುಖ್ಯ ಕಾರಣವೆಂದರೆ ಸಮಾಜವಾದಿ ರಾಷ್ಟ್ರಗಳಲ್ಲಿ ಜನತಂತ್ರದ ಅಭಾವವಿದೆ, ಕಮ್ಯುನಿಸ್ಟರು ಈ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಭಾರತವು ಪ್ರಜಾಸತ್ತಾತ್ಮಕ ಹಕ್ಕುಗಳ ಕಡಿತಕ್ಕೆ ಒಳಗಾಗಬಹುದು ಎಂಬ ಆತಂಕ ಅವರಲ್ಲಿ ಬಲವಾಗಿತ್ತು. ಮತ್ತೆ ,ಆಗಷ್ಟೇ ತೆಲಂಗಾಣ ಶಸಸ್ತ್ರ ಹೋರಾಟ ಮುಗಿದಿದ್ದು, ಆ ದುಸ್ಸಾಹಸದ ಪ್ರಯತ್ನಗಳು ಅಪ್ರಸ್ತುತ ಎಂದು ಅವರಿಗೆ ಅನ್ನಿಸಿರಬಹುದು ಎಂಬ ಅಭಿಪ್ರಾಯವೂ ಇದೆ. ಸಮಾಜವಾದಿ ಪಕ್ಷ, ಕಿಸಾನ್ ಮಜದೂರ್ ಪಕ್ಷ ಮುಂತಾದ ಶಕ್ತಿಗಳೊಂದಿಗೆ ಅಂದಿನ ಸಂದರ್ಭದಲ್ಲಿ ಒಕ್ಕೂಟವನ್ನು ರಚಿಸಿಕೊಳ್ಳಲು ಅಂಬೇಡ್ಕರ್ ಸಿದ್ಧರಿದ್ದರು. ಜಾತಿ

ಈ ಅಭಿಪ್ರಾಯಗಳೊಂದಿಗೆ ಷೆಡ್ಯೂಲ್ಟ್ ಕ್ಯಾಸ್ಟ್ ಫೆಡರೇಶನ್ ನ ಪ್ರಣಾಳಿಕೆ ಎಂಬ ಈ ದಸ್ತಾವೇಜು ಮುಕ್ತಾಯಕ್ಕೆ ಬರುತ್ತದೆ. ಇಂದು ಫ್ಯಾಸಿಸಮ್ ನ ವಿರುದ್ಧ ಮತ್ತು ಹಿಂದುತ್ವವಾದಿ ಆಕ್ರಮಣಗಳ ವಿರುದ್ಧ ನಾವೆಲ್ಲರೂ ಜಂಟಿಯಾಗಿ ಹೋರಾಟಕ್ಕೆ ಸೇರಬೇಕಾದ ಸಂದರ್ಭದಲ್ಲಿ ನಾವು ವಿವಿಧ ರಾಜಕೀಯ ಶಕ್ತಿಗಳು ಮತ್ತು ಅಂಬೇಡ್ಕರ್ ಅವರ ಅನುಯಾಯಿಗಳು ಅನುಸರಿಸಬೇಕಾದ ಪರಸ್ಪರ ಅರಿಯುವಿಕೆ ಮತ್ತು ಸಹಕಾರದ ಬಗ್ಗೆ ಒಂದಿಷ್ಟು ಯೋಚನೆ ಮಾಡಬೇಕಾದದ್ದು ಅಗತ್ಯವಾಗಿದೆ.

ಅಂಬೇಡ್ಕರ್ ಬದುಕಿನ ಉದ್ದಕ್ಕೂ ಸಹ ಪುರೋಹಿತಶಾಹಿಯನ್ನು, ಬ್ರಾಹ್ಮಣೀಯ ಚಿಂತನೆಯನ್ನು ಹಾಗೂ ಎಲ್ಲಾ ಸನಾತನವಾದಿ ಪರಂಪರೆಯನ್ನು ಧಿಕ್ಕರಿಸಿ ನಡೆದವರು, ಮನುಸ್ಮೃತಿಯನ್ನು ಅಲ್ಲಗಳೆದವರು, ವಿಜ್ಞಾನ ಮತ್ತು ಪ್ರಗತಿಯನ್ನು ಎತ್ತಿ ಹಿಡಿದವರು ಎಂಬುದನ್ನು ನಾವು ಮರೆಯಬಾರದು. ಅಲ್ಲದೆ ಅವರು 1930ರ ದಶಕದಿಂದಲೂ ಅನೇಕ ಬಾರಿ ಕಮ್ಯುನಿಸಂ ಅನ್ನು ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ಮತ್ತು ಅವರೊಂದಿಗೆ ಸಹಕರಿಸಿ ಹೋರಾಟಗಳನ್ನು ಸಹ ಕಟ್ಟಿದ್ದಾರೆ. ಅಂದಿನ ಸಂದರ್ಭದಲ್ಲಿ ಎರಡು ಕಡೆಯಿಂದಲೂ ಕೂಡ ಕೆಲವೊಮ್ಮೆ ಆವೇಶದ ಮಾತುಗಳು, ಪರಸ್ಪರ ದೂಷಣೆ ನಡೆದಿದೆ. ಆದರೆ ಪರಸ್ಪರ ಟೀಕೆಯಲ್ಲಿ ಇರಬಹುದಾದ ಅನೇಕ ಸತ್ಯಗಳನ್ನು ಎಲ್ಲರೂ ಗ್ರಹಿಸಬೇಕು. ಆದರೆ ವೈದಿಕಶಾಹಿ ಮತ್ತು ಕಾರ್ಪೊರೇಟ್ ಶಕ್ತಿಗಳ ವಿರುದ್ಧದ ಹೋರಾಟವನ್ನು ಹಿಮ್ಮೆಟ್ಟಿಸಬೇಕಾದ ಅಗತ್ಯವನ್ನು ನಾವು ಎಂದಿಗೂ ಮರೆಯಬಾರದು.

ಅಂಬೇಡ್ಕರ್ ವಾಸ್ತವದಲ್ಲಿ ವರ್ಗರಹಿತ ಸಮಾಜವನ್ನು, ಶೋಷಣೆ ಇಲ್ಲದ ಸಮಾಜವನ್ನು ಆಶಿಸಿದ್ದರು ಎಂಬುದಕ್ಕೆ ಅನೇಕ ಪುರಾವೆಗಳಿವೆ. ಖ್ಯಾತ ಲೇಖಕರಾದ ಗೋಪಾಲ್ ಗುರು ಅವರು ತಮ್ಮ “ ಫುಡ್ ಆಸ್ ಎ ಮೆಟಾಫರ್ ಇನ್ ಕಲ್ಚರಲ್ ಹೈರಾರ್ಕಿ” ಎಂಬ ತಮ್ಮ ಒಂದು ಪ್ರಬಂಧದಲ್ಲಿ ಒಂದು ಆಹಾರ ಪದಾರ್ಥದ ರೂಪಕದ ಮೂಲಕ ಅಂಬೇಡ್ಕರ್ ಸಮಾಜವಾದದ ಬಗ್ಗೆ ಹೊಂದಿದ್ದಂತಹ ಕಳಕಳಿಯನ್ನು ಚಿತ್ರಿಸುತ್ತಾರೆ. ಅಂಬೇಡ್ಕರ್ ಅದನ್ನು ವ್ಯಕ್ತಪಡಿಸಲು ‘ಪೂರನ್ ಪುಳಿ’ ಎಂಬ ರೂಪಕವನ್ನು ಉಪಯೋಗಿಸಿದ್ದರು ಎನ್ನುತ್ತಾರೆ. ಮರಾಠಿಯಲ್ಲಿ ಪೂರನ್ ಪುಳಿ ಶಬ್ದದ ಅನುವಾದ ಹೂರಣ ತುಂಬಿದ ಹೋಳಿಗೆ ಎಂದಾಗುತ್ತದೆ. ಅದರಲ್ಲಿ ಫ್ರೆಂಚ್ ಮಹಾಕ್ರಾಂತಿಯ ಆಶಯಗಳಾದ ಸ್ವಾತಂತ್ರ ಸಮಾನತೆ ಮತ್ತು ಭ್ರಾತೃತ್ವಗಳು ಒಬ್ಬಟ್ಟಿನ ಹೊರ ಭಾಗದ ಮೈದಾಹಿಟ್ಟಿನ ಕವಚದಂತೆ, ಆದರೆ ಒಳಗಿರುವ ಹೂರಣ ಅತ್ಯಂತ ಮುಖ್ಯವಾದದ್ದು; ಆ ಹೂರಣವೇ ಸೋವಿಯತ್ ಕ್ರಾಂತಿ ಜಾರಿಗೆ ತಂದ ಸಮಾಜವಾದ ಎನ್ನುತ್ತಾರೆ.

ಇಲ್ಲಿ ನಾನು ಆನಂದ ತೇಲ್ ತುಂಬ್ಡೆ ಅವರು “ಐಕಾನೊಕ್ಲಾಸ್ಟ್” ಪುಸ್ತಕದಲ್ಲಿ ಹೇಳಿರುವ ಮಾತುಗಳನ್ನು ಉದ್ದರಿಸಿ ನನ್ನ ಈ ಭಾಷಣವನ್ನು ಮುಗಿಸುತ್ತೇನೆ. ತ್ರಯಂಬಕ್ ವಿಷ್ಣು ಪರವಾಟೆ ಎಂಬುವರಿಗೆ 1947ರ ಸೆಪ್ಟೆಂಬರ್ ತಿಂಗಳಿನಲ್ಲಿ ನೀಡಿರುವ ಸಂದರ್ಶನದಲ್ಲಿ, ಅಂಬೇಡ್ಕರ್ ಅವರು ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿ ಎಂಬ ಗುಂಪಿನಲ್ಲಿ ಇರುವ ಸಮಾಜವಾದಿಗಳನ್ನು ಉದ್ದೇಶಿಸಿ ಈ ಮಾತುಗಳನ್ನು ಹೇಳುತ್ತಾರೆ:

“ಸಮಾಜವಾದಿ ಎಂದು ಹೇಳಿಕೊಳ್ಳುವ ಯಾರಿಗೇ ಆಗಲಿ ಕ್ರಾಂತಿಯ ಪರಿಕಲ್ಪನೆ ಏನು ಎಂಬುದನ್ನು ಮುಂದಿಡಲಿಕ್ಕೆ ಆಗಬೇಕು. ಪ್ರತಿಯೊಬ್ಬ ಮನುಷ್ಯನು ಒಂದು ಪ್ರಾಣಿಯಂತೆ ಹೊಟ್ಟೆ ಹೊರೆದುಕೊಳ್ಳುವುದಕ್ಕಾಗಿ ಪ್ರತಿದಿನ 12 ರಿಂದ 14 ಗಂಟೆ ದುಡಿಯಬೇಕು ಎಂಬುದು ಬಹಳ ದುಃಖದಾಯಕ ಸಂಗತಿ. ಜೀವ ವಿಕಾಸವು ಮನುಷ್ಯನಿಗೆ ಉಡುಗೊರೆಯಾಗಿ ನೀಡಿರುವ ಆತನ ಬುದ್ಧಿ – ಮನಸ್ಸುಗಳು ಅರಳಿಕೊಳ್ಳಲು ಅವನಿಗೆ ವಿರಾಮ ಎಂಬುದೇ ಸಿಗುತ್ತಿಲ್ಲ.

ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯು ಪ್ರತಿಯೊಬ್ಬ ಮನುಷ್ಯನಿಗೂ ವಿರಾಮವನ್ನು ಖಚಿತಪಡಿಸಬಲ್ಲದು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲಾ ಆವಿಷ್ಕಾರಗಳು, ಉತ್ಪಾದನಾ ಸಾಧನಗಳು ಮತ್ತು ಯಂತ್ರಗಳು ಜನತೆಯ ಹಿತಾಸಕ್ತಿಗಾಗಿ ಸಾಮಾಜಿಕ ನಿಯಂತ್ರಣದಲ್ಲಿಲ್ಲದೆ, ಬಂಡವಾಳಶಾಹಿ ವರ್ಗದ ಕೈಯಲ್ಲಿರುವುದರಿಂದ ಅವುಗಳ ಲಾಭಗಳು ಪ್ರತಿಯೊಬ್ಬರಿಗೂ ದಕ್ಕುತ್ತಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ವಿರಾಮವನ್ನು ಒದಗಿಸಬೇಕೆಂಬುದೇ ಕ್ರಾಂತಿ ಎಂದು ನಾನು ಭಾವಿಸುತ್ತೇನೆ”

ಮೇಲೆ ಹೇಳಿರುವ ಈ ಮಾತುಗಳು ಕಮ್ಯುನಿಸ್ಟ್ ಸಿದ್ದಾಂತವು ಆಶಿಸುವಂತೆ ಶ್ರಮ ಎಂಬುದು ಮನುಷ್ಯನಿಗೆ ಮೇಲಿನಿಂದ ಹೇರಲ್ಪಟ್ಟ ಕರ್ತವ್ಯವಾಗದೆ, ಆತನ ಒಳಗಿನಿಂದಲೇ ಬರುವ ಮುಖ್ಯ ಅವಶ್ಯಕತೆ ಆಗಬೇಕು, ಹಾಗಾಗುವುದು ಶೋಷಣೆ ಇಲ್ಲದ ಸಮಾಜದಲ್ಲಿ ಎಂಬ ಮುನ್ನೋಟಕ್ಕೆ ಹತ್ತಿರವಾಗಿದೆ ಎಂಬುದು ಅಚ್ಚರಿಯ ಸಂಗತಿ. ಅಲ್ಲದೆ ಅಂತಹ ಪರಿಸ್ಥಿತಿ ದೊರೆಯಬೇಕೆಂದರೆ ಉತ್ಪಾದನಾ ಸಾಮಗ್ರಿಗಳ ಮೇಲೆ ಸಾಮಾಜಿಕ ಒಡೆತನ ಇರಬೇಕು ಎಂಬುದು ಸಹ ಅಂಬೇಡ್ಕರ್ ಅವರಿಗೆ ಸ್ಪಷ್ಟವಾಗಿದೆ.

ಅಂಬೇಡ್ಕರ್ ಅನುಯಾಯಿಗಳು ಮತ್ತು ಎಡಪಂಥೀಯರು ಒಂದಾಗಿ ಮುಂದೆ ಸಾಗಲು ಅವರ ಈ ಮಾತುಗಳು ಆರಂಭ ಬಿಂದುವಾಗಬೇಕು ಸಹ. ಸಮಾಜವಾದದಲ್ಲಾಗಲಿ ಅಥವಾ ಪಕ್ಷದೊಳಗಿನ ಆಂತರಿಕ ವಾತಾವರಣದಲ್ಲಾಗಲಿ ಅನೇಕ ಬಾರಿ ಕಂಡು ಬಂದಿರುವ ಜನತಂತ್ರದ ಅಭಾವದ ಕುರಿತು ಅಂಬೇಡ್ಕರ್ ಅಥವಾ ಇತರ ಚಿಂತಕರು ಮಾಡಿರುವ ಟೀಕೆಗಳನ್ನು ಧನಾತ್ಮಕವಾಗಿ ಸ್ವೀಕರಿಸುವುದು ಒಳ್ಳೆಯದು. ನಿಜ, ಸಾಮ್ರಾಜ್ಯಶಾಹಿಗಳ ಆಕ್ರಮಣ, ಒಳಗಿನಿಂದ ಕ್ರಾಂತಿಯ ದ್ರೋಹಿಗಳು ನಡೆಸಿದ ಸಂಚು ಹಾಗೂ ಹಿಂದೆ ಇದ್ದ ಜಾರ್ ಚಕ್ರವರ್ತಿಯ ಕ್ರೂರ ಆಡಳಿತ ವ್ಯವಸ್ಥೆಯ ಪ್ರಭಾವ ಇವೆಲ್ಲವುಗಳಿಂದಾಗಿ ಸೋವಿಯತ್ ರಷ್ಯಾದಲ್ಲಿ ಜನತಂತ್ರವನ್ನು ಜಾರಿಗೊಳಿಸುವಾಗ ಕಂಡುಬಂದಂತಹ ಕೆಲವೊಂದು ಕೊರತೆಗಳು ಐತಿಹಾಸಿಕವಾದವು.

ಆದರೆ ಕಮ್ಯುನಿಸ್ಟ್ ಚಳುವಳಿ ಅಲ್ಲಿಂದ ಬಹಳಷ್ಟು ಮುಂದೆ ಸಾಗಿ ಬಂದಿದೆ. ಕಮ್ಯುನಿಸ್ಟ್ ಸಿದ್ದಾಂತ ಮತ್ತು ಪಕ್ಷದ ಕಾರ್ಯವೈಖರಿಯ ಮೂಲತತ್ವಗಳನ್ನು ಉಳಿಸಿಕೊಂಡೇ, ಗಂಭೀರವಾದ ದೋಷಗಳನ್ನು ಹೊರದೂಡುವ ಬಗ್ಗೆ ಎಡಪಂಥೀಯರು ಚಿಂತಿಸಲೇಬೇಕು. ಹಾಗೂ 40–50ರ ದಶಕಗಳ ಐತಿಹಾಸಿಕ ಕಾಲಘಟ್ಟದಲ್ಲಿ ನಡೆದ ಉದ್ವೇಗಪೂರ್ಣ ಮಾತುಗಳನ್ನು, ವಾದಗಳನ್ನು, ಅವುಗಳಲ್ಲಿ ಕಂಡು ಬಂದ ಅತಿರೇಕಗಳನ್ನು ಎರಡೂ ಕಡೆಯವರು ಸಹ ಮುಂದುವರೆಸಬಾರದು. ಮತ್ತು ಅಂಬೇಡ್ಕರ್ ಅವರ ನೈಜ ಸಮ ಸಮಾಜದ ಆಶಯಗಳನ್ನು ಈಡೇರಿಸುವಲ್ಲಿ ಕಮ್ಯುನಿಸ್ಟ್ ತತ್ವ ಮತ್ತು ಸಿದ್ದಾಂತದ ಮೂಲ ಪ್ರಮೇಯಗಳು ಎಷ್ಟು ವೈಜ್ಞಾನಿಕವಾಗಿವೆ ಎಂಬುದನ್ನು ಕಷ್ಟಪಟ್ಟು ಎಲ್ಲರಿಗೂ ವಿವರಿಸಬೇಕಾದದ್ದು ಮಾರ್ಕ್ಸ್ ವಾದಿಗಳ ಹೊಣೆ.

ಒಟ್ಟಿನಲ್ಲಿ ಇಂದು ಫ್ಯಾಸಿಸ್ಟ್ ವಿರೋಧಿಗಳಾದ ಎಲ್ಲ ಮಿತ್ರ ಶಕ್ತಿಗಳು ಒಂದಾಗಿ ಮುನ್ನಡೆಯಬೇಕು ಎಂಬುದನ್ನು ಇಂದಿನ  ಸಂದರ್ಭದಲ್ಲಿ ನಾವೆಲ್ಲರೂ ಮನನ ಮಾಡಿಕೊಳ್ಳಬೇಕು.

ಇದು ಕ್ರಿಯಾ ಪ್ರಕಾಶನ  ಜನಶಿಕ್ಷಣ ಟ್ರಸ್ಟ್‌ ನವರು  13 – 4- 2025 ರಂದು ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ಸಂಪಾದಿತ ರೂಪ

ಇದನ್ನೂ ನೋಡಿ: ನಿಶಿಕಾಂತ್ ದುಬೆ, ಧನ್ಕರ್‌ ಅವರ ಸುಪ್ರೀಂಕೋರ್ಟ್ ವಿರುದ್ಧ ಮಾತುಗಳು ನ್ಯಾಯಾಂಗ ನಿಂದನೆಯಲ್ಲವೇ? Janashakthi Media

Donate Janashakthi Media

Leave a Reply

Your email address will not be published. Required fields are marked *