ಡಾ. ಅಂಬೇಡ್ಕರ್ ಮತ್ತು ಏಕರೂಪ ನಾಗರಿಕ ಸಂಹಿತೆ

ಏಕರೂಪ ನಾಗರಿಕ ಸಂಹಿತೆಯನ್ನು ಹೇರುವ ಮೂಲಕ ಮುಸ್ಲಿಂ ಸಮುದಾಯವನ್ನು ಸಂಘರ್ಷಕ್ಕೆ ಪ್ರಚೋದಿಸಲು ಯಾವುದೇ ಸರ್ಕಾರ ಪ್ರಯತ್ನಿಸುವುದಿಲ್ಲ ಮತ್ತು ಹಾಗೆ ಮಾಡುವ ಸರ್ಕಾರವು ಹುಚ್ಚು ಸರ್ಕಾರವಾಗಿರುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು.

ಅಮೆರಿಕದಿಂದ ಪ್ರಧಾನಿಗಳು  ವಾಪಸಾದ ಕೂಡಲೇ ಸದ್ಯದಲ್ಲೇ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಮಧ್ಯಪ್ರದೇಶದಲ್ಲಿ ಬಿಜೆಪಿಯ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತ ಏಕರೂಪ ನಾಗರಿಕ ಸಂಹಿತೆ ತರುವುದು ಅಗತ್ಯ ಎಂದು ಹೇಳಿದರು. ಅದೇ ವೇಳೆಗೆ 22ನೇ ಕಾನೂನು ಆಯೋಗ ಈ ಬಗ್ಗೆ ಅಭಿಪ್ರಾಯಗಳನ್ನು ಆಹ್ವಾನಿಸಿತು-ಯಾವುದೇ ಕರಡನ್ನು ಮುಂದಿಡದೆ. 21ನೇ  ಕಾನೂನು ಆಯೋಗವೇ ಈ ಪ್ರಶ್ನೆಯನ್ನು ವಿಶದವಾಗಿ ಪರಿಶೀಲಿಸಿದ ನಂತರ ಸದ್ಯಕ್ಕೆ ಇದರ ಅಗತ್ಯವಿಲ್ಲ, ಅದು ಅಪೇಕ್ಷಣೀಯವೂ ಅಲ್ಲ ಎಂದಿರುವ ಸ್ವಲ್ಪಸಮಯದಲ್ಲೇ ಮತ್ತೆ ಈ ಪ್ರಶ್ನೆಯನ್ನು ಎಬ್ಬಿಸಿರುವುದೇಕೆ ಎಂಬ ಪ್ರಶ್ನೆ  ಸಹಜವಾಗಿಯೇ ಎದ್ದಿದೆ. ಏಕರೂಪ ನಾಗರಿಕ ಸಂಹಿತೆಯ ಪ್ರಶ್ನೆಯನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ, ಸ್ವತಃ ಅಂಬೇಡ್ಕರ್ ಅದನ್ನು ಬೆಂಬಲಿಸಿದ್ದಾರೆ ಎಂದು ಸಂಘಪರಿವಾರ ಪ್ರಚಾರ ಮಾಡುತ್ತಿದೆ.  ಇದು ನಿಜವೇ?

ನಮ್ಮ ಸಂವಿಧಾನ ರಚನೆಯಾದಾಗ ಈ ಪ್ರಶ್ನೆಯನ್ನು ಮೂರು ಹಂತಗಳಲ್ಲಿ ಚರ್ಚಿಸಲಾಯಿತು. ಮೊದಲಿಗೆ, “ಮೂಲಭೂತ ಹಕ್ಕುಗಳ ಉಪ-ಸಮಿತಿ”ಯಲ್ಲಿ ಚರ್ಚೆಗೆ ಬಂತು. ಜೆಪಿ ಕೃಪಲಾನಿ ಈ ಉಪಸಮಿತಿಯ ಅಧ್ಯಕ್ಷರಾಗಿದ್ದರು, ಮತ್ತು ಇತರ ಸದಸ್ಯರು: ಬಿ.ಆರ್.ಅಂಬೇಡ್ಕರ್  ಮೌಲಾನಾ ಅಬುಲ್ ಕಲಾಂ ಆಜಾದ್, ಕೆ ಎಂ ಮುನ್ಷಿ, ಅಲ್ಲಾಡಿ ಕೃಷ್ಣಸಾಮಿ ಅಯ್ಯರ್ , ರಾಜ್ ಕುಮಾರಿ ಅಮೃತ್ ಕೌರ್ , ಎಂ ಆರ್ ಮಸಾನಿ,  ಕೆ ಟಿ ಶಾ , ಜೈರಾಮ್ ದಾಸ್ ದೌಲತ್ ರಾಮ್, ಹಂಸಾ ಮೆಹ್ತಾ, ಶಂಕರ್ ರಾವ್ ದೇವ್. ಉಪಸಮಿತಿಯು ಮೂಲಭೂತ ಹಕ್ಕುಗಳನ್ನು ರೂಪಿಸುವಾಗ ಕೆಳಗಿನ ಎರಡು ವಿಧಗಳನ್ನು ನಿರ್ಧರಿಸಿತು.

1 ಕೂಡಲೇ ಜಾರಿಗೊಳಿಸಬೇಕಾದ ಮೂಲಭೂತ ಹಕ್ಕುಗಳು.

2) ಮುಖ್ಯವಾಗಿದ್ದರೂ,ಕಾಲಾನಂತರದಲ್ಲಿ ಕಾರ್ಯಗತಗೊಳಿಸಬೇಕಾದ ಗುರಿಗಳು. ಇವುಗಳನ್ನು “ಪ್ರಭುತ್ವ ನೀತಿಗಳ ನಿರ್ದೇಶಕ ತತ್ವಗಳು”  ಎಂದು ವ್ಯಾಖ್ಯಾನಿಸಲಾಗಿದೆ.

ಮೊದಲ ವಿಭಾಗವು ನ್ಯಾಯಾಲಯಗಳ ತೀರ್ಪಿಗೆ ಒಳಪಟ್ಟಿರುತ್ತದೆ. ಎರಡನೇ ವಿಭಾಗವು ನ್ಯಾಯಾಂಗ  ಪರಾಮರ್ಶೆಗೆ ಒಳಪಡುವುದಿಲ್ಲ. ಏಕರೂಪ ನಾಗರಿಕ ಸಂಹಿತೆಯನ್ನು ಮೂಲಭೂತ ಹಕ್ಕುಗಳಲ್ಲಿ ಅಳವಡಿಸುವುದು ಮೊದಲ ಸಲಹೆಯಾಗಿತ್ತು. ಅಂಬೇಡ್ಕರ್ ಕೂಡ ಅದನ್ನೇ ಪ್ರಸ್ತಾಪಿಸಿದರು. ಆದರೆ ಈ ಉಪಸಮಿತಿಯಲ್ಲಿ ಸುದೀರ್ಘ ಚರ್ಚೆಯ ನಂತರ ಅದನ್ನು “ಪ್ರಭುತ್ವ ನೀತಿಗಳ ನಿರ್ದೇಶಕ ತತ್ವಗಳು” ಗೆ    ಸೇರಿಸಲು ನಿರ್ಧರಿಸಲಾಯಿತು.

 ಏಕೆ ಈ ನಿರ್ಧಾರ?

ಒಂದೆಡೆ ಮುಸ್ಲಿಂ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇನ್ನೊಂದೆಡೆ ಹಿಂದೂ ಧರ್ಮದ ಬೆಂಬಲಿಗರಿಂದಲೂ  ತೀವ್ರ ವಿರೋಧ ವ್ಯಕ್ತವಾಗಿತ್ತು. ಏಕೆಂದರೆ, ಅವರಿಗೂ ಹಿಂದೂ ಸಂಪ್ರದಾಯಗಳ ವಿವಿಧ ಆಚರಣೆಗಳನ್ನು ಆಗ ಬದಲಾಯಿಸಬೇಕಾಗುತ್ತದೆ ಎಂದು ತಿಳಿದಿತ್ತು, ಅದನ್ನು ಅವರು ಬಯಸುತ್ತಿರಲಿಲ್ಲ.

ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಮತ್ತು ನಂತರ  ನಮ್ಮ ಗಣತಂತ್ರದ ಮೊದಲ ರಾಷ್ಟ್ರಪತಿಯಾದ  ರಾಜೇಂದ್ರ ಪ್ರಸಾದ್ ಅವರು ಮೂಲಭೂತ ಹಕ್ಕುಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಸೇರಿಸಿದರೆ ತಾನು ಅದಕ್ಕೆ ಸಹಿ ಹಾಕುವುದಿಲ್ಲ  ಎಂದು ಹೇಳಿದ್ದರು ಎಂಬುದು  ಗಮನಿಸಬೇಕಾದ ಸಂಗತಿ.  ಅದನ್ನು   ನಿರ್ದೇಶಕ  ತತ್ವಗಳಲ್ಲಿ ಅಳವಡಿಸಲು ರಾಜಿ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಮಹಿಳಾ ಸದಸ್ಯರಾದ ರಾಜಕುಮಾರಿ ಅಮೃತ್ ಕೌರ್ ಮತ್ತು ಹಂಸಾ ಮೆಹ್ತಾ ಮತ್ತು ಆಗ ಸಮಾಜವಾದಿಯಾಗಿದ್ದ ಎಂ. ಆರ್. ಮಸಾನಿ ಇದಕ್ಕೆ ಪರ್ಯಾಯ ಅಭಿಪ್ರಾಯ ವ್ಯಕ್ತಪಡಿಸಿದರು. ಆದಾಗ್ಯೂ, ಕೊನೆಗೆ ಬಹುಮತದಿಂದ ಅದನ್ನು ನಿರ್ದೇಶಕ ತತ್ವಗಳಲ್ಲಿ ಸೇರಿಸಲಾಯಿತು. ಅಂಬೇಡ್ಕರ್ ಅದರ ವಿರುದ್ಧ ಮತ ಚಲಾಯಿಸಲಿಲ್ಲ ಎಂಬುದು ಗಮನಾರ್ಹ.

ಧರ್ಮವನ್ನು ಆಧರಿಸಿದ ವೈಯಕ್ತಿಕ ಕಾನೂನುಗಳು ಭಾರತ ಒಂದು ರಾಷ್ಟ್ರವಾಗದಂತೆ ಹಿಂದಕ್ಕೆಳೆಯುವ ಅಂಶಗಳು, ಅವು ದೇಶವನ್ನು ಪ್ರತ್ಯೇಕ ಬಿಗಿಯಾದ ವಿಭಾಗಗಳಾಗಿ  ವಿಭಜಿಸುತ್ತವೆ. ಹಾಗಾಗಿ ಭಾರತೀಯರು ಮುಂದಿನ 5ರಿಂದ 10 ವರ್ಷಗಳಲ್ಲಿ ಏಕರೂಪದ ನಾಗರಿಕ ಕಾನೂನು ಪಡೆಯಬೇಕು ಎಂಬುದು ಪರ್ಯಾಯ ಟಿಪ್ಪಣಿಯನ್ನು ಸಲ್ಲಿಸಿದವರ ಅಭಿಪ್ರಾಯವಾಗಿತ್ತು.

ಡಾ. ಬಿ.ಆರ್.ಅಂಬೇಡ್ಕರ್ ಏಕರೂಪದ ನಾಗರಿಕ ಕಾನೂನನ್ನು ಮೂಲಭೂತ ಹಕ್ಕುಗಳ ಅಡಿಯಲ್ಲಿ ತರಬೇಕು ಮತ್ತು ಧರ್ಮವು ವೈಯಕ್ತಿಕ ಕಾನೂನುಗಳ ಆಧಾರವಾಗಿರಬಾರದು ಎಂದು ಭಾವಿಸಲು ಹಿಂದೂ  ಧರ್ಮವು ಅಸಮಾನತೆಯ ವಿವಿಧ ಅಂಶಗಳನ್ನು ಹೊಂದಿದೆ ಎಂಬುದು ಅವರ ವಿಶ್ಲೇಷಣೆ ಕಾರಣ. ಅದೇ ರೀತಿಯಲ್ಲಿ, ಇಸ್ಲಾಂ  ಭಾರತದಲ್ಲಿ  ಜಾರಿಗೆ ಬಂದ ರೀತಿಯಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ತಪ್ಪು ತತ್ವಗಳನ್ನು ಹೊಂದಿದೆ ಎಂಬುದೂ ಅವರ ಅಭಿಪ್ರಾಯವಾಗಿತ್ತು. ಆದ್ದರಿಂದ ವೈಯಕ್ತಿಕ ಕಾನೂನುಗಳಲ್ಲಿರುವ ಅಸಮಾನತೆಯ ಈ ಅಂಶಗಳನ್ನು ತೆಗೆದುಹಾಕುವುದು ಅವರ ಕಾಳಜಿಯಾಗಿತ್ತು.

ಅದೇ ರೀತಿಯಲ್ಲಿ ಮದುವೆ/ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಸಿಗಬೇಕಾದರೆ ಏಕರೂಪದ ನಾಗರಿಕ ಕಾನೂನು ಅಗತ್ಯ ಎಂಬುದು ಇಬ್ಬರು ಮಹಿಳಾ ಸದಸ್ಯರಾದ ರಾಜ್‌ಕುಮಾರ್ ಅಮೃತ್ ಕೌರ್‍ ಮತ್ತು ಹಂಸಾ ಮೆಹ್ತಾ ಅಭಿಪ್ರಾಯಪಡಲು ಕಾರಣ. ಏಕರೂಪ ಕಾನೂನು ಪ್ರತಿಪಾದಿಸಿದ ಮತ್ತೊಬ್ಬ ಸದಸ್ಯರಾದ  ಮಸಾನಿ  ನಂತರ ಅವರು ಸಮಾಜವಾದದ ವಿರೋಧಿಯಾದರೂ, ಸಂವಿಧಾನ ಸಭೆಯ ಘಟನೆಗಳ ಸಮಯದಲ್ಲಿ ಅವರು  ಸಮಾಜವಾದಿಯಾಗಿದ್ದರು. ಆದ್ದರಿಂದ ಅವರು ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸಿದುದರಲ್ಲಿ  ಆಶ್ಚರ್ಯವಿಲ್ಲ.  ಹಿಂದೂ ಸಂಪ್ರದಾಯವಾದಿ  ಮುಖಂಡರಾದ ಕೆ.ಎಂ. ಮುನ್ಷಿ ಬೆಂಬಲಿಸಿದ  ಉದ್ದೇಶ   ಅಂಬೇಡ್ಕರ್, ಅಮೃತ್  ಕೌರ್, ಹಂಸಾ ಮೆಹ್ತಾ, ಎಂ.ಆರ್.ಮಸಾನಿಯವರ ಉದ್ದೇಶವೇ ಆಗಿರಲಿಲ್ಲ. ಆದಾಗ್ಯೂ, ಮೂಲಭೂತ ಹಕ್ಕುಗಳ ಬದಲು ನಿರ್ದೇಶಕ   ಸೂತ್ರಗಳಲ್ಲಿ ಸೇರಿಸಿಕೊಳ್ಳುವ  ರಾಜಿ ಸೂತ್ರವನ್ನು ಅವರೂ ಒಪ್ಪಿಕೊಂಡರು.

ಸಂವಿಧಾನ ರಚನಾ ಸಭೆಯಲ್ಲಿ ಚರ್ಚೆಗಳು

ಎರಡನೆಯ ಹಂತದಲ್ಲಿ 23.11.1948 ರಂದು ಪೂರ್ಣ ಸಂವಿಧಾನ ಸಭೆಯಲ್ಲಿ ಸಾಮಾನ್ಯ ನಾಗರಿಕ ಸಂಹಿತೆಯ ಬಗ್ಗೆ  ವಿವರವಾದ ಚರ್ಚೆ ನಡೆಯಿತು. ಕೊನೆಗೆ ರಾಜಿ ಸೂತ್ರದಂತೆ ಅದನ್ನು ನಿರ್ದೇಶಕ   ಸೂತ್ರಗಳಲ್ಲಿ ಸೇರಿಸಲಾಯಿತು. ಸಾಮಾನ್ಯ ಕಾನೂನುಗಳು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅಂಬೇಡ್ಕರ್,  ಸಮಾನ ಕ್ರಿಮಿನಲ್‍ ಕಾನೂನುಗಳೆಲ್ಲ ಈಗಾಗಲೇ ಅಂಗೀಕರಿಸಲ್ಪಟ್ಟಿವೆ ಮತ್ತು ಆಸ್ತಿ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಾಮಾನ್ಯ ಕಾನೂನುಗಳಿವೆ ಮತ್ತು ಮದುವೆ/ಆಸ್ತಿ ವಿಷಯಗಳಲ್ಲಿ ಮಾತ್ರ ವೈಯಕ್ತಿಕ ಕಾನೂನುಗಳಿವೆ. ಮುಂದೆ ಇದರಲ್ಲಿಯೂ ಬದಲಾವಣೆ ತರಲು “ನಿರ್ದೇಶಕ’ ಸೂತ್ರಗಳಲ್ಲಿ ಸೇರಿಸಲಾಗಿದೆ ಎಂದರು. “ಈ ವಿಷಯದ ಬಗ್ಗೆ ಮುಸ್ಲಿಮರ ಭಾವನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ” ಎಂದ ಅಂಬೇಡ್ಕರ್ ಪ್ರಭುತ್ವವು ಏಕರೂಪದ ನಾಗರಿಕ ಕಾನೂನುಗಳನ್ನು ಎಲ್ಲ ನಾಗರಿಕರಿಗೆ ತರಲು  ಪ್ರಯತ್ನಿಸುತ್ತದೆ ಎಂದು ಹೇಳುತ್ತದೆ ಎಂದರು. ಇದನ್ನು ತಕ್ಷಣವೇ ತರಲಾಗುವುದು ಎಂದಲ್ಲ. ಎಲ್ಲ ಸಮುದಾಯಗಳ ಸಮ್ಮತಿಯನ್ನು ಪಡೆದ ನಂತರವೇ ತರಬೇಕು ಎನ್ನುತ್ತ 1937ರಲ್ಲಿ ಮುಸ್ಲಿಮರಿಗೆ ಷರಿಯ ಕಾನೂನನ್ನು ಜಾರಿಗೆ ತಂದಾಗ ಅದು ಸ್ವಇಚ್ಛೆಯ ಮೇಲೆ ನಿಂತಿತ್ತು ಎಂದೂ ಅಂಬೇಡ್ಕರ್ ನೆನಪಿದರು.

02.12.1948 ರಂದು ನಡೆದ ಮತ್ತೊಂದು ಚರ್ಚೆಯ ಸಂದರ್ಭದಲ್ಲಿ ಮತ್ತೆ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು. ಏಕರೂಪದ ನಾಗರಿಕ ಕಾನೂನನ್ನು ಹೇರುವ ಮೂಲಕ ಮುಸ್ಲಿಂ ಸಮುದಾಯವನ್ನು ಸಂಘರ್ಷಕ್ಕೆ ಪ್ರಚೋದಿಸಲು ಯಾವುದೇ ಸರ್ಕಾರ ಪ್ರಯತ್ನಿಸುವುದಿಲ್ಲ ಮತ್ತು ಹಾಗೆ ಮಾಡುವ ಸರ್ಕಾರವು  ಹುಚ್ಚು ಸರ್ಕಾರವಾಗಿರುತ್ತದೆ ಎಂದು ಆಗ ಉತ್ತರಿಸಿದ ಅಂಬೇಡ್ಕರ್ , ಮುಸ್ಲಿಂ ಸದಸ್ಯರು ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ಈ ಆಧಾರದ ಮೇಲೆ ಏಕರೂಪದ ನಾಗರಿಕ ಸಂಹಿತೆಯ ಪ್ರಶ್ನೆಯನ್ನು ನಿರ್ದೇಶಕ ತತ್ವಗಳ ಅಡಿಯಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.

ಉದಾತ್ತತೆಯ ಸುಳಿವೇ ಇಲ್ಲ

ಪ್ರಭುತ್ವನೀತಿಗಳ ನಿರ್ದೇಶಕ ತತ್ವಗಳಲ್ಲಿ ಉದ್ಯೋಗದ ಹಕ್ಕು, ಜೀವನ ವೇತನ(ಕನಿಷ್ಟವೇತನವಲ್ಲ), ಕಾರ್ಮಿಕರು ಕಾರ್ಖಾನೆಗಳ ನಿರ್ವಹಣೆಯಲ್ಲಿ ಭಾಗವಹಿಸುವ ಹಕ್ಕು, ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ , ನೈಸರ್ಗಿಕ ಸಂಪನ್ಮೂಲಗಳನ್ನು ಸಾಮಾನ್ಯ ಒಳಿತಿಗಾಗಿ  ಹಂಚಿಕೊಳ್ಳುವುದು,  ಕೆಲವೇ ಜನರಲ್ಲಿ ಸ್ವತ್ತುಗಳು ಮತ್ತು ಸಂಪನ್ಮೂಲಗಳ ಕೇಂದ್ರೀಕರಣವನ್ನು ತಪ್ಪಿಸುವುದು ಮುಂತಾದವುಗಳು ಕೂಡ ಇವೆ. ಸಂಘ ಪರಿವಾರದವರು ಇವುಗಳ ಬಗ್ಗೆ, ವಿಶೇಷವಾಗಿ ಪ್ರಜಾಪ್ರಭುತ್ವವನ್ನು ವಿಸ್ತರಿಸುವ ಕಾರ್ಮಿಕರ ಹಕ್ಕುಗಳ ಬಗ್ಗೆ ಮತ್ತು  ಆರ್ಥಿಕ ಸಮಾನತೆ ಹೆಚ್ಚುತ್ತಿದೆ ಎಂಬ ಕಳವಳ ಉಂಟಾಗಿರುವ ಸಮಯದಲ್ಲಿ ಆರ್ಥಿಕ ಅಸಮಾನತೆಯನ್ನು ತಪ್ಪಿಸಬೇಕು ಎಂಬ ತತ್ವದ ಬಗ್ಗೆ ಏಕೆ ಮೌನವಾಗಿದ್ದಾರೆ? ಈ ಬಗ್ಗೆ ತುರ್ತು ಏಕಿಲ್ಲ? ಕೇವಲ ಏಕರೂಪ ನಾಗರಿಕ ಸಂಹಿತೆಯ ಬಗ್ಗೆಯೇ ಏಕೆ ಈಗ ಈ ತರಾತುರಿ?

ಈ ಮೇಲೆ ಹೇಳಿದಂತೆ ಆಗ ಅಂಬೇಡ್ಕರ್ ಮತ್ತು ಇತರರು ಏಕರೂಪದ ನಾಗರಿಕ ಕಾನೂನನ್ನು ಪ್ರತಿಪಾದಿಸಿದಾಗ ಸಮಾನತೆಯನ್ನು ತರುವ ಉದಾತ್ತ ಉದ್ದೇಶ ಹೊಂದಿದ್ದರು. ಭಾರತೀಯ ಸಮಾಜವನ್ನು ಭಾರತೀಯ ಸಮಾಜವನ್ನು ಜಾತಿ/ಲಿಂಗ ಅಸಮಾನತೆಯಿಂದ ಮುಕ್ತಗೊಳಿಸುವುದು ಅವರ ಗುರಿಯಾಗಿತ್ತು. ಆದರೆ ಇಂದು ಏಕರೂಪದ ನಾಗರಿಕ ಕಾನೂನಿನ ಬಗ್ಗೆ ಮಾತನಾಡುವವರ  ಉದ್ದೇಶವನ್ನು ಯಾವುದೇ ರೀತಿಯಲ್ಲಿ ಉದಾತ್ತವೆಂದು ಹೇಳಲು ಸಾಧ್ಯವಿಲ್ಲ. ಬುಡಕಟ್ಟು ಜನರು, ಕ್ರೈಸ್ತರು ಮತ್ತು ಸಿಖ್ಖರಿಗೆ ಏಕರೂಪದ ನಾಗರಿಕ ಕಾನೂನಿನಿಂದ ವಿನಾಯಿತಿ ನೀಡುವ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಹಾಗಿದ್ದರೆ ಮುಸ್ಲಿಮರನ್ನು ಮಾತ್ರ ಪ್ರತ್ಯೇಕಿಸುವುದು ಏಕೆ? ಕೇವಲ ಚನಾವಣಾ ಲಾಭಕ್ಕಾಗಿ ಮತ್ತು ಮತೀಯ ವಿಭಜನೆಯನ್ನು ತೀಕ್ಷ್ಣಗೊಳಿಸುವುದು ಮಾತ್ರ ಸಂಘ ಪರಿವಾರದ ಉದ್ದೇಶ ಎಂಬುದು ಸ್ಪಷ್ಟವಾಗಿದೆ.

ಅಂಬೇಡ್ಕರ್ ಅವರು ಸಾಮಾನ್ಯ ನಾಗರಿಕ ಕಾನೂನನ್ನು ಹೇರಬಾರದು ಮತ್ತು ಭವಿಷ್ಯದಲ್ಲಿ ಅದನ್ನು ಬಯಸಿದವರಿಗೆ ಮಾತ್ರ ಅನ್ವಯಿಸಬೇಕು ಎಂದು ಹೇಳಿದರು. ಇದು ಕೇವಲ ಪ್ರಜಾಸತ್ತಾತ್ಮಕ ವಿಧಾನವಲ್ಲ; ಆಯಾ ಸಮುದಾಯಗಳೇ ಮುಂದೆ ಬಂದು ಅವನ್ನು ಸ್ವೀಕರಿಸಲು ಅನುಕೂಲಕರ ವಾತಾವರಣ ನಿರ್ಮಿಸಬೇಕು ಆಯಾ ಸಮುದಾಯಗಳೇ ಮುಂದೆ ಬಂದು ಅವರನ್ನು ಸ್ವೀಕರಿಸಲು ಅನುಕೂಲಕರ ವಾತಾವರಣ ನಿರ್ಮಿಸಬೇಕು ಎಂಬ ಚಿಂತನೆ ಅದರ ಹಿಂದಿದೆ.ಮುಸ್ಲಿಮರ ಮೇಲೆ ಏಕರೂಪ ನಾಗರಿಕ ಸಂಹಿತೆಯನ್ನು ಹೇರುವ ಸರ್ಕಾರ ಹುಚ್ಚುಸರ್ಕಾರವಾಗುತ್ತದೆ ಎಂದು ಅಂಬೇಡ್ಕರ್ ಹೇಳಿದರು.

ಇಂದಿನ ಸರ್ಕಾರ ಅದಕ್ಕಿಂತಲೂ ಮುಂದೆ ಹೋಗಿ ತನ್ನ ಉಗ್ರ ರಾಜಕೀಯಕ್ಕೆ ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂಬುದು ನಿಸ್ಸಂದೇಹ, ಇದನ್ನು ಎದುರಿಸುವ ದೊಡ್ಡ ಸವಾಲು ಪ್ರಜಾಸತ್ತಾತ್ಮಕ ಶಕ್ತಿಗಳ ಮುಂದಿದೆ.

(ಕೃಪೆ- ತೀಕದಿರ್  ದೈನಿಕದಲ್ಲಿ ಆಗಸ್ಟ್ 12ರಂದು ಪ್ರಕಟವಾಗಿರುವ  ಲೇಖನದ ಭಾವಾನುವಾದ-ಸಿಚಿ)

 

Donate Janashakthi Media

Leave a Reply

Your email address will not be published. Required fields are marked *