ಲಿಂಗಸಗೂರು: ಪಟ್ಟಣದ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ನಾಗರತ್ನಾ ಅವರ ಕರ್ತವ್ಯ ಲೋಪದಿಂದ ಸರಿಯಾದ ಸಮಯಕ್ಕೆ ಊಟ ಹಾಗೂ ಸೌಲಭ್ಯಗಳು ಸಿಗದ ಕಾರಣ ಸಹಾಯಕ ಆಯುಕ್ತರ ನಿವಾಸದ ಮುಂದೆ ಗುರುವಾರ ತಡರಾತ್ರಿ 11 ಗಂಟೆಗೆ ಎಸ್ಎಫ್ಐ ವಿದ್ಯಾರ್ಥಿನಿಯರ ಉಪ ಸಮಿತಿ ನೇತೃತ್ವದಲ್ಲಿ ಧಿಡೀರ್ ಪ್ರತಿಭಟನೆ ನಡೆಸಿದರು. ಹಾಸ್ಟೆಲ್
ಪುರಸಭೆ ವ್ಯಾಪ್ತಿಯ ಹುಲಿಗುಡ್ಡದ ಹತ್ತಿರ ಇರುವ ಸದರಿ ವಸತಿ ನಿಲಯದಲಿ ಸುಮಾರು 170 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಇಂದು ಸರಿಯಾದ ಸಮಯಕ್ಕೆ ಊಟ ನೀಡಿಲ್ಲವೆಂದು ತಾಲೂಕಾ ಅಧಿಕಾರಿ ಹಾಗೂ ನಿಲಯದ ಮೇಲ್ವಿಚಾರಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾತ್ರಿ ಸಹಾಯಕ ಆಯುಕ್ತರ ವಸತಿ ಗೃಹದ ಮುಂದೆ ಪ್ರತಿಭಟನೆ ನಡೆಸಿದರು.
ಹಸಿವಿನಿಂದ ಅಸ್ವಸ್ಥ: ಪ್ರತಿಭಟನೆ ನಡೆಸುವಾಗ ಹಸಿವಿನಿಂದ ವಿದ್ಯಾರ್ಥಿ ನಿ ಪ್ರಿಯಾಂಕಾ ಅಸ್ವಸ್ಥಗೊಂಡಿದ್ದು, ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆಯುತ್ತಲೆ ವಿದ್ಯಾರ್ಥಿನಿಯರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು.
ಸಹಾಯಕ ಆಯುಕ್ತರ ಮನೆಯಮುಂದೆ ಸುಮಾರು 2 ಗಂಟೆಗಳ ತನಕ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿ ನಿಯರ ಗೋಳು ಕೇಳುವವರಿಲ್ಲದಂತಾಗಿದೆ. ಸಂಬಂಧಿಸಿದ ನಿಲಯದ ವಾರ್ಡನ್ ನಾಗರತ್ನ ತಡವಾಗಿ ಬಂದು ವಿದ್ಯಾರ್ಥಿ ನಿಯರ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ರಾತ್ರಿ 12ರ ನಂತರವು ಪ್ರತಿಭಟನೆ ನಡೆದಿತ್ತು.
ಇದನ್ನು ಓದಿ : ಎಸ್‌ಐಟಿಗೆ ಸುಳಿವಾಗಬಲ್ಲದೆನ್ನುವ ದೇವೇಗೌಡರ ಹುಟ್ಟುಹಬ್ಬಕ್ಕೆ ವಿದೇಶದಿಂದ ಬಂದ ಕರೆಯ ಊಹಾಪೋಹ
ಸಹಾಯಕ ಆಯುಕ್ತರು ರಜೆಯ ಮೇರೆಗೆ ಊರಿಗೆ ತೆರಳಿದ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ಮಲ್ಲಪ್ಪ ಯರದಾಳ ಹಾಗೂ ಹಟ್ಟಿ ಸಿಪಿಐ ಹೊಸಕೇರಪ್ಪ ಮಾತನಾಡಿ, ಸಮಸ್ಯೆಗಳನ್ನು ಸರಿಪಡಿಸಿ ಹಾಸ್ಟೆಲ್ ನಲ್ಲಿ ಉತ್ತಮ ವಾತಾವರಣ ನಿರ್ಮಿಸಲಾಗುವುದು ಹೋರಾಟ ಕೈ ಬಿಡಿ ಎಂದು ಮನವೊಲಿಸಿದರು.
ಹಾಸ್ಟೆಲ್ ಗಳು ಮೂಲಭೂತ ಸೌಕರ್ಯಗಳಿಲ್ಲದೆ ಹಂದಿಗಳ ಗೂಡಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಹಾಸ್ಟಲ್ ಗಳು ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ತೊಂದರೆಯಾಗುತ್ತಿದ್ದು ಫಲಿತಾಂಶದಲ್ಲಿ ಭಾರೀ ಹೊಡೆತ ಬೀಳುತ್ತಿದೆ. ಬಾಲಕಿಯರ ವಸತಿ ನಿಲಯದಲ್ಲಿ ಬಗ್ಗೆ ಅನೇಕ ಬಾರಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಸೇರಿ ಸಂಬಂಧ ಪಟ್ಟವರಿಗೆ ದೂರು ಸಲ್ಲಿಸಿದ್ದೇವೆ. ಆದ್ರೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಇದು ಇಲಾಖೆಯ ಅಸಡ್ಡೆಯನ್ನು ತೋರಿಸುತ್ತದೆ. ಈ ಸಮಸ್ಯೆ ಒಂದು ವಾರದೊಳಗೆ ಪರಿಹರಿಸಿಲ್ಲ ಎಂದರೆ ರಾಯಚೂರು ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಮಾಡಲು ಎಸ್ಎಫ್ಐ ಸಂಘಟನೆ ತೀರ್ಮಾನಿಸಿದೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಹೇಳಿದರು.
ಈ ವೇಳೆ ಎಸ್ ಎಫ್ ಐ ವಿದ್ಯಾರ್ಥಿನಿಯರ ಉಪ ಸಮಿತಿಯ ಮುಖಂಡರಾದ ಬಸಮ್ಮ, ನಾಗರತ್ನಾ, ಸುಷ್ಮಿತಾ, ಸುಮಾ, ತ್ರಿವೇಣಿ, ರತ್ನಾ, ಕೀರ್ತಿ, ಯಲ್ಲಮ್ಮ ಡಿವೈ ಎಫ್ ಐ ಜಿಲ್ಲಾ ಸಮಿತಿ ಸದಸ್ಯ ಶರಣಬಸವ ಆನೆಹೊಸೂರು, ಆಟೋ ಚಾಲಕರ ಸಂಘ ದ ಬಾಬಾ ಜಾನಿ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಇದ್ದರು.
ಇದನ್ನು ನೋಡಿ : ಮಣ್ಣಿನ ಮಕ್ಕಳು’ ಎಂದು ಹೇಳಿಕೊಂಡು ದೌರ್ಜನ್ಯ ನಡೆಸಿದ್ದೆ ಜಾಸ್ತಿ | ರೇವಣ್ಣ ರಿಪಬ್ಲಿಕ್Janashakthi Media