ದೇಶದಲ್ಲಿನ ಗಮನಾರ್ಹ ಸಂಪತ್ತಿನ ಅಸಮಾನತೆಯನ್ನು ಬಹಿರಂಗಪಡಿಸಿದ ಅಂಬಾನಿ ಮಗನ ಮದುವೆ

-ಸಿ,ಸಿದ್ದಯ್ಯ

ಪಡಿತರದ ಮೂಲಕ ತಿಂಗಳಿಗೆ 5 ಕೆಜಿ ಉಚಿತ ಧಾನ್ಯಗಳನ್ನು ಪಡೆಯುತ್ತಿರುವ 80 ಕೋಟಿ ಜನರಿರುವ ದೇಶದಲ್ಲಿ, 5,000 ಕೋಟಿ ರೂ. ವೆಚ್ಚ ಮಾಡಿ ಅಂಬಾನಿ ಕುಟುಂಬ ತನ್ನ ಮಗನ ಮದುವೆ ಮಾಡಿದೆ. ಕೆಲವರು ಇದನ್ನು ‘ಕಷ್ಟಪಟ್ಟು ಗಳಿಸಿದ ಹಣವನ್ನು ಈ ರೀತಿ ಖರ್ಚುಮಾಡುವುದು ತಪ್ಪೇನೂ ಅಲ್ಲ ಎನ್ನುತ್ತಾರೆ, ಮತ್ತೆ ಕೆಲವರು ಇದನ್ನು ಭಾರತದಲ್ಲಿ ಬೆಳೆಯುತ್ತಿರುವ ಅಸಮಾನತೆಯ ಸಂಕೇತವಾಗಿ ಕಾಣುತ್ತಾರೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೆಲವರು ಮಾತ್ರ ಅತ್ಯಧಿಕ ಸಂಪತ್ತನ್ನು ಗಳಿಸಲು ಅವಕಾಶ ಮತ್ತು ಬಹುಸಂಖ್ಯಾತ ಜನರು ಕಡು ಬಡತನದಲ್ಲಿರಲು ಕಾರಣವೇನು? ಇದಕ್ಕೆ ಉತ್ತರ ‘ಶ್ರಮದ ಶೋಷಣೆಯನ್ನು ಅಂತರ್ಗತ ವ್ಯವಸ್ಥಿತ ವಿದ್ಯಮಾನ’ ವನ್ನಾಗಿ ಮಾಡಿಕೊಂಡಿರುವ  ಬಂಡವಾಳಶಾಹಿ ವ್ಯವಸ್ಥೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದ ಬಂಡವಾಳಗಾರರ ಸಂಪತ್ತು ಅತಿ ವೇಗದಲ್ಲಿ ಬೆಳೆಯುತ್ತಿರುವುದಕ್ಕೆ ಕಾರಣವೆಂದರೆ, ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಲು ಹೆಚ್ಚಿನ ಅವಕಾಶ ಮಾಡಿಕೊಟ್ಟಿರುವ ಭಾರತದ ಪ್ರಭುತ್ವ.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಸಹೋದ್ಯೋಗಿ ಉದ್ಯಮಿಯ ಪುತ್ರಿ ರಾಧಿಕಾ ಮರ್ಚೆಂಟ್ ಅವರ ವಿವಾಹ 2024ರ ಜುಲೈ ನಲ್ಲಿ ಮುಂಬೈನಲ್ಲಿ ಮೂರು ದಿನಗಳ ಕಾಲ ನಡೆಯಿತು. ಅಂದಾಜಿನ ಪ್ರಕಾರ ಐದು ತಿಂಗಳ ಮದುವೆಯ ವೆಚ್ಚ 5,000 ಕೋಟಿ ರೂ. (600 ಮಿಲಿಯನ್ ಅಮೆರಿಕನ್  ಡಾಲರ್ ಗಿಂತಲೂ ಹೆಚ್ಚು. ಇದು ಅಂಬಾನಿ ಸಂಪತ್ತಿನ ಶೇ. 0.5ರಷ್ಟು ಮಾತ್ರವೇ ಆಗಿದೆ ಎಂದು ‘ದಿ ಗಾರ್ಡಿಯನ್ ‘ ವರದಿ ಮಾಡಿದೆ). ಈ ಮದುವೆ ಕಾರ್ಯಕ್ರಮಕ್ಕೆ ಭಾರತದ ಪ್ರಧಾನಿ ಸೇರಿದಂತೆ ದೇಶ ವಿದೇಶಗಳಿಂದ ಹಲವು ಗಣ್ಯರು, ಸಿನಿಮಾ ನಟರುಗಳು… ಬಂದಿದ್ದನ್ನು ಸುದ್ದಿಮಾಧ್ಯಮಗಲ್ಲಿ ನೋಡಿದ್ದೇವೆ.

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ

ಮುಖೇಶ್ ಅಂಬಾನಿ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿಯಾಗಿದ್ದು, ಫೋರ್ಬ್ಸ್ ಪ್ರಕಾರ 116 ಬಿಲಿಯನ್ ಡಾಲರ್  ನಿವ್ವಳ ಆಸ್ತಿ ಹೊಂದಿದ್ದಾರೆ. ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಅವರು ರಿಲಯನ್ಸ್ ಇಂಡಸ್ಟ್ರೀಸ್ ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ದೂರಸಂಪರ್ಕ ಮತ್ತು ಚಿಲ್ಲರೆ ವ್ಯಾಪಾರವನ್ನು ಒಳಗೊಂಡಿರುವ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ.

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಕ್ಷಿಣ ಮುಂಬೈನಲ್ಲಿರುವ 27 ಅಂತಸ್ತಿನ ಗೋಪುರದ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದಾರೆ. ಇದರ ಮೌಲ್ಯ ಸುಮಾರು 15,000 ಕೋಟಿ ರೂ. ($2 ಬಿಲಿಯನ್). ಅಮೇರಿಕನ್ ಆರ್ಕಿಟೆಕ್ಚರಲ್ ಸಂಸ್ಥೆ ಪರ್ಕಿನ್ಸ್ & ವಿಲ್ ವಿನ್ಯಾಸಗೊಳಿಸಿದ ಮತ್ತು ಆಸ್ಟ್ರೇಲಿಯಾದ ಲೈಟನ್ ಹೋಲ್ಡಿಂಗ್ಸ್ ನಿರ್ಮಿಸಿದ ಆಂಟಿಲಿಯಾ ಬಕಿಂಗ್ಹ್ಯಾಮ್ ಅರಮನೆಯ ನಂತರ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಕಟ್ಟಡವು ಮೂರು ಹೆಲಿಪ್ಯಾಡ್‌ಗಳು, 160-ಕಾರ್ ಗ್ಯಾರೇಜ್ ಮತ್ತು ಖಾಸಗಿ ಚಲನಚಿತ್ರ ಮಂದಿರವನ್ನು ಒಳಗೊಂಡಿದೆ.

ಅಗಾಧವಾದ ಅಸಮಾನತೆ

ಭಾರತದಲ್ಲಿ ದಿನದಿಂದ ದಿನಕ್ಕೆ ಜನರ ಕೊಳ್ಳುವ ಶಕ್ತಿ ಕುಗ್ಗುತ್ತಿರುವ ಸನ್ನಿವೇಶದಲ್ಲಿ, ಅಂಬಾನಿ ಕುಟುಂಬದ ಈ ‘ರಾಯಲ್’ ಮದುವೆಯು ಭಾರತದಲ್ಲಿನ ಆರ್ಥಿಕ ಅಸಮಾನತೆ ಎಷ್ಟು ಅಗಾಧವಾದ ಅಂತರವನ್ನು ಹೊಂದಿದೆ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿ ಕೊಟ್ಟಿದೆ. ಈಗ ಇದರ ಬಗ್ಗೆ ದೇಶ ವಿದೇಶಗಳಲ್ಲಿ ಸಾಕಷ್ಟು ಚರ್ಚೆಗಳೂ ನಡೆಯುತ್ತಿವೆ. ಇಂತಹ ಅದ್ದೂರಿ ಮದುವೆಗಳನ್ನು ಸಮರ್ಥಿಸಿಕೊಳ್ಳುವ ಜನರೂ ನಮ್ಮಲ್ಲಿದ್ದಾರೆ. ಅವರ ಪ್ರಕಾರ, ಅವರು ಕಷ್ಟಪಟ್ಟು ಹಣ ಸಂಪಾದಿಸಿದ್ದಾರೆ. ಅವರು ಬಂಡವಾಳ ಹೂಡಿಕೆ ಮಾಡಿ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಲಾಭ ಗಳಿಸಿದ್ದಾರೆ, ಅವರು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದಾರೆ. ‘ಯಾರಾದರೂ ಆಗಿರಲಿ, ಅವರು ತಾವು ಸಂಪಾದಿಸಿದ ಹಣವನ್ನು ಖರ್ಚು ಮಾಡುವ ಹಕ್ಕನ್ನು ಹೊಂದಿರುತ್ತಾರೆ’ ಎನ್ನುತ್ತಾರೆ. ಹಣೆಬರಹ, ಅದೃಷ್ಟ ಇವುಗಳನ್ನು ನಂಬುವವರ ಪ್ರಕಾರ, ‘ಅವರು ಅದೃಷ್ಟವಂತರು, ಅವರು ದೇವರಿಂದ ಪಡೆದುಕೊಂಡು ಬಂದ ಸೌಭಾಗ್ಯ;ಅಸಮಾನತೆ

ಆದರೆ, ಬಂಡವಾಳಗಾರರ ಸಂಪತ್ತು ಇಷ್ಟೊಂದು ಅಗಾದ ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವೇನು? ಇದಕ್ಕೆ ಮೊದಲ ಕಾರಣ, ಶ್ರಮದ ಶೋಷಣೆಯನ್ನು ‘ಅಂತರ್ಗತ ವ್ಯವಸ್ಥಿತ ವಿದ್ಯಮಾನ’ ವನ್ನಾಗಿ ಮಾಡಿಕೊಂಡಿರುವ  ಬಂಡವಾಳಶಾಹಿ ವ್ಯವಸ್ಥೆ. ಇದು ಬಂಡವಾಳಶಾಹಿಗಳಿಗೆ ‘ಲಾಭ’ದ ಹೆಸರಿನಲ್ಲಿ ಶೋಷಣೆ ಮಾಡಿ ಹೆಚ್ಚೆಚ್ಚು ಗಳಿಸಿಕೊಳ್ಳಲು ಪ್ರಭುತ್ವವೇ ನೀತಿ ನಿಯಮಗಳನ್ನು ರೂಪಿಸಿರುತ್ತದೆ. ಅಂದರೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾನೂನು ಬದ್ದವಾಗಿಯೇ ಶೋಷಣೆ ಮಾಡಲು ಬಂಡವಾಳಗಾರರಿಗೆ ಅವಕಾಶ ಮಾಡಿಕೊಡಲಾಗುತ್ತದೆ.

ಶ್ರಮದ ಶೋಷಣೆಯನ್ನು ‘ಅಂತರ್ಗತ ವ್ಯವಸ್ಥಿತ ವಿದ್ಯಮಾನ’ವಾಗಿ ಕಾರ್ಲ್ ಮಾರ್ಕ್ಸ್  ನೋಡುತ್ತಾರೆ. ಬೂರ್ಜ್ವಾ, ಬಂಡವಾಳದ ಮಾಲೀಕರು ಮತ್ತು ಭೂರಹಿತ ಅಥವಾ ಕಡಿಮೆ ಭೂಮಿಯನ್ನು ಹೊಂದಿರುವ ಶ್ರಮಜೀವಿಗಳ ನಡುವೆ ವಿಭಜಿಸಲ್ಪಟ್ಟ ಅಸಹನೀಯ ಅಸಮಾನ ಸಮಾಜ ಈ ಬಂಡವಾಳಶಾಹಿ ವ್ಯವಸ್ಥೆ ಎನ್ನುತ್ತಾರೆ ಮಾರ್ಕ್ಸ್.

ಅಂಬಾನಿ ಕುಟುಂಬ ಮಾತ್ರವಲ್ಲ, ಅದಾನಿ, ಟಾಟಾ, ಬಿರ್ಲಾ… ಇಂತಹ ದೊಡ್ಡ ಬಂಡವಾಳಗಾರರ ಸಂಪತ್ತು ಏರಿಕೆಯಾಗಲು ಬಂಡವಾಳಶಾಹಿ ವ್ಯವಸ್ಥೆಯಲ್ಲಿನ ಇಂತಹ ಶೋಷಣಾ ನೀತಿ ನಿಯಮಗಳು ಕಾರಣವಾಗಿವೆ.ಅಸಮಾನತೆ

ಬಾಡಿಗೆ-ಬಡ್ಡಿ-ಲಾಭ-ದರ

ಬಂಡವಾಳದಾರರು ತಾವು ಉತ್ಪಾಧಿಸುವ ಸರಕುಗಳಿಗೆ ಹಾಗೂ ಸೇವೆಗಳಿಗೆ ತಾವೇ ದರ ನಿಗದಿ ಮಾಡುತ್ತಾರೆ. (ರೈತರಿಗೆ ಇಂತಹ ಹಕ್ಕುಗಳಿಲ್ಲ ಎಂಬುದನ್ನು ಗಮನಿಸಬೇಕು) ಈ ರೀತಿ ದರ ನಿಗದಿ ಮಾಡುವಾಗ, ಅದನ್ನು ಉತ್ಪಾದಿಸಲು ಬಳಸುವ ಕಚ್ಚಾವಸ್ತುಗಳ ಮೌಲ್ಯ, ಕಾರ್ಮಿಕರ ವೇತನದ ವೆಚ್ಚ, ಜೊತೆಗೆ ಲಾಭವನ್ನೂ ಸೇರಿಸಿ ದರ ನಿಗದಿಮಾಡುತ್ತಾರೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೂ, ಇತ್ತೀಚೆಗೆ ಜಿಯೋ ಮತ್ತು ಏರ್ಟೆಲ್  ರೀಚಾರ್ಜ್ ದರವನ್ನು ವಿಪರೀತ ಎನ್ನುವಂತೆ ಹೆಚ್ಚಳ ಮಾಡಿರುವುದಕ್ಕೆ ಇವ್ಯಾವುವೂ ಸಮರ್ಥ ಕಾರಣವಲ್ಲ, ಬದಲಿಗೆ ಲಾಭದ ದೃಷ್ಟಿಯಿಂದ ಮಾಡಿದ ಶೋಷಣೆಯಾಗಿದೆ.

ಬಂಡವಾಳದಾರರು ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಾರೆ. ಅದರಿಂದ ಒಂದಷ್ಟು ಜನರಿಗೆ ಉದ್ಯೋಗವೂ ಸಿಗುತ್ತದೆ. ಲಕ್ಷಾಂತರ ಜನರು ಇದರಿಂದ ಬದುಕು ಕಂಡುಕೊಳ್ಳುತ್ತಾರೆ. ತಮ್ಮ ಸರಕುಗಳಿಗೆ ಲಾಭ ಸೇರಿಸಿ ‘ದರ’ ನಿಗದಿ ಮಾಡಿದರೆ ತಪ್ಪೇನು? ಲಾಭ ಗಳಿಸಲಿಕ್ಕಾಗಿಯೇ ಅಲ್ಲವೇ ಬಂಡವಾಳ ಹೂಡಿಕೆ ಮಾಡುವುದು? ಲಾಭವೇ ಇಲ್ಲದೆ, ಯಾರಾದರೂ ಯಾಕಾಗಿ ಹೂಡಿಕೆ ಮಾಡಬೇಕು? ಈ ಒಂದು ಪ್ರಶ್ನೆಯೇ, ಹೂಡಿಕೆದಾರರು ತಮ್ಮ ಲಾಭಕ್ಕಾಗಿ ಹೂಡಿಕೆ ಮಾಡುತ್ತಾರೆ ವಿನಹ, ಜನರಿಗೆ ಉದ್ಯೋಗ ಕೊಡಬೇಕು ಅಥವಾ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂಬ ಕಾಳಜಿಯಿಂದ ಅಲ್ಲ ಎಂಬುದನ್ನು ಸ್ವಷ್ಟಪಡಿಸುತ್ತದೆ.

ಇದನ್ನು ಓದಿ : ಗ್ರಾಮೀಣ ಬಡವರನ್ನು ಕೃಷಿ ಕೂಲಕಾರರ ಸಂಘದ ಜೊತೆ ಐಕ್ಯಗೊಳಿಸಬೇಕು – ಎ ವಿಜಯ ರಾಘವನ್ ಕರೆ

ಹೂಡಿಕೆದಾರರು ತಮ್ಮ ಸರಕುಗಳಿಗೆ ದರ ನಿಗದಿ ಮಾಡುವಾಗ, ಅದನ್ನು ಉತ್ಪಾದಿಸಲು ಬಳಸುವ ಕಚ್ಚಾವಸ್ತುಗಳ ಮೌಲ್ಯ, ಉತ್ಪಾದನೆಗೆ ತಗಲುವ ವೆಚ್ಚ, ಕಾರ್ಮಿಕರ ವೇತನ ಜೊತೆಗೆ ‘ಲಾಭ’ವನ್ನಷ್ಟೇ ಸೇರಿಸಿ ದರ ನಿಗದಿ ಮಾಡುವುದಿಲ್ಲ, ತಾವು ಹೂಡಿಕೆ ಮಾಡಿರುವ ಬಂಡವಾಳಕ್ಕೆ ‘ಬಡ್ಡಿ’ ಲೆಕ್ಕಹಾಕಿ ಅದನ್ನೂ ‘ದರ’ ದಲ್ಲಿ ಸೇರಿಸುತ್ತಾರೆ. ತಾವು ಉದ್ಯಮ ಸ್ಥಾಪನೆ ಮಾಡಿರುವ ಭೂಮಿಗೂ ‘ಬಾಡಿಗೆ’ ಲೆಕ್ಕ ಹಾಕಿ ಅದನ್ನೂ ‘ದರ’ದಲ್ಲಿ ಸೇರಿಸುತ್ತಾರೆ. ‘ಬಾಡಿಗೆ’, ‘ಬಡ್ಡಿ’ ಇವೂ ಕೂಡಾ ಲಾಭವೇ.ಅಸಮಾನತೆ

ತಮ್ಮ ಉದ್ಯಮದ ಭೂಮಿಗೆ ಬಾಡಿಗೆ ಲೆಕ್ಕ ಹಾಕಿದರೆ ತಪ್ಪೇನು? ತಾವು ಹೂಡಿಕೆ ಮಾಡುವ ಬಂಡವಾಳಕ್ಕೆ ಬಡ್ಡಿ ಲೆಕ್ಕ ಹಾಕಿದರೆ ತಪ್ಪೇನು? ಇಂತಹ ಪ್ರಶ್ನೆಗಳೂ ಮೂಡುತ್ತವೆ. ಸರಕುಗಳ ದರದಲ್ಲಿ ಸೇರಿಸಿರುವ ಲಾಭದ ಹಣದಿಂದ ಭೂಮಿ ಖರೀದಿಸುತ್ತಾರೆ, (ಕೆಲವೊಮ್ಮೆ, ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವ ಹೆಸರಿನಲ್ಲಿ ಸರ್ಕಾರಗಳೇ ಉಚಿತವಾಗಿ ಅಥವಾ ಕಡಿಮೆ ಬೆಲೆಯಲ್ಲಿ ಭೂಮಿ ಒದಗಿಸಿಕೊಡುತ್ತವೆ.)  ಅದೇ  ಭೂಮಿಯಲ್ಲಿ ಉದ್ಯಮ ಸ್ಥಾಪಿಸಿ, ಆ ಭೂಮಿಗೆ ‘ಬಾಡಿಗೆ’ ಲೆಕ್ಕ ಹಾಕುತ್ತಾರೆ. ಲಾಭದಿಂದ ಬರುವ ಹಣವನ್ನು ‘ಹೂಡಿಕೆ’ ಮಾಡಿ, ಆ ಹೂಡಿಕೆಗೆ ‘ಬಡ್ಡಿ’ ಸೇರಿಸುತ್ತಾರೆ, ಅದರ ಜೊತೆಗೆ ಮೂರನೆಯದಾಗಿ ‘ಲಾಭ’ ಸೇರಿಸಿ, ತಮ್ಮ ಸರಕುಗಳಿಗೆ ‘ದರ’ ನಿಗದಿ ಮಾಡುತ್ತಾರೆ. ಒಟ್ಟು ಈ ಮೂರೂ ಕೂಡಾ ಶೋಷಣೆಗಳೇ ಆಗಿರುತ್ತವೆ.

ಶ್ರಮ ಶೋಷಣೆ

ಶ್ರಮ ಶೋಷಣೆ ಮೂಲಕವೂ ಬಂಡವಾಳದಾರರು ತಮ್ಮ ಬಂಡವಾಳವನ್ನು ವೃದ್ಧಿಸಿಕೊಳ್ಳುತ್ತಾರೆ. ಕಡಿಮೆ ವೇತನ, ಹೆಚ್ಚಿನ ಅವಧಿಯ ಕೆಲಸ, ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ… ಮುಂತಾದ ರೀತಿಯಲ್ಲಿ ಕಾರ್ಮಿಕರನ್ನು ಶೋಷಣೆ ಮಾಡುತ್ತಾರೆ. ವಿದೇಶಿ ಸಂಸ್ಥೆಗಳಿಗೆ ಹೊರಗುತ್ತಿಗೆ ಮೂಲಕ ಮಾಡಿಕೊಡುವ ಕೆಲಸಗಳಿಗೆ ಡಾಲರ್ ಲೆಕ್ಕದಲ್ಲಿ ಹೆಚ್ಚು ಹಣ ಪಡೆದು, ಅಂತಹ ಕೆಲಸ ಮಾಡುವ ಉದ್ಯೋಗಿಗಳಿಗೆ ರೂಪಾಯಿ ಲೆಕ್ಕದಲ್ಲಿ ಕಡಿಮೆ ವೇತನ ಕೊಡುವ ಮೂಲಕವೂ ಶ್ರಮ ಜೀವಿಗಳನ್ನು ಶೋಷಣೆ ಮಾಡಿ ಹೆಚ್ಚಿನ ಲಾಭ ಗಳಿಸುತ್ತಾರೆ.

ಬ್ಯಾಂಕುಗಳಿಂದ ಸಾಲ ಮತ್ತು ಮನ್ನಾ

ಇದು ಒಂದೆಡೆಯಾದರೆ, ಉದ್ಯಮಿಗಳು ‘ಹೂಡಿಕೆ’ಗಾಗಿ ಸಾರ್ವಜನಿಕ ಬ್ಯಾಂಕುಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಾರೆ. ಈ ರೀತಿ ಪಡೆದ ಸಾಲದ ಹಣವನ್ನು ಉದ್ಯಮಗಳಲ್ಲಿ ‘ಹೂಡಿಕೆ’ ಮಾಡುತ್ತಾರೆ. ಪಡೆದ ಸಾಲವನ್ನು ಮರುಪಾವತಿ ಮಾಡದೆ, ವಸೂಲಾಗದ ಸಾಲದ ಪ್ರಮಾಣ(ಎನ್.ಪಿ.ಎ.) ಹೆಚ್ಚಾಗಲು ಕಾರಣರಾಗುತ್ತಾರೆ. ಇಂತಹ ಬಹಳಷ್ಟು ಸಾಲಗಳನ್ನು ಬ್ಯಾಂಕುಗಳು ಮನ್ನಾ ಮಾಡುತ್ತವೆ. ಆಶ್ಚರ್ಯವೆಂದರೆ, ತಮ್ಮ ಸಂಪತ್ತನ್ನು ವೃದ್ದಿಸಿಕೊಳ್ಳುತ್ತಿರುವ ಉದ್ಯಮಿಗಳ ಸಾಲವನ್ನೂ ಕೂಡಾ ‘ವಸೂಲಿ ಮಾಡಲು ಸಾಧ್ಯವಿಲ್ಲ’ ಎಂಬ ಕಾರಣ ನೀಡಿ ಬ್ಯಾಂಕುಗಳು ಮನ್ನಾ ಮಾಡುತ್ತವೆ!!  2014-15ರಿಂದ 2022-23ರ  ನಡುವಿನ ಒಂಬತ್ತು ಹಣಕಾಸು ವರ್ಷಗಳಲ್ಲಿ ಬ್ಯಾಂಕುಗಳು 14.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕೆಟ್ಟ ಸಾಲವನ್ನು (ವಸೂಲಾಗದ ಸಾಲ ಅಥವಾ ಎನ್.ಪಿ.ಎ.) ಮನ್ನಾ ಮಾಡಿವೆ ಎಂದು, 2023ರ ಆಗಸ್ಟ್ ನಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್  ಕರದ್  ಲಿಖಿತ ಉತ್ತರದಲ್ಲಿ ಸಂಸತ್ತಿಗೆ ತಿಳಿಸಿದ್ದಾರೆ. ಒಟ್ಟು 14,56,226 ಕೋಟಿ ರೂ.ಗಳಲ್ಲಿ ದೊಡ್ಡ ಕೈಗಾರಿಕೆಗಳು ಮತ್ತು ಸೇವೆಗಳ ಸಂಸ್ಥೆಗಳ ಸಾಲ ಮನ್ನಾ 7,40,968 ಕೋಟಿ ರೂ.

ಯಾವ ದೊಡ್ಡ ಕೈಗಾರಿಕೆಗಳಿಗೆ ಅಥವಾ ಯಾವ ಉದ್ಯಮಿಗಳಿಗೆ ಈ 14 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ ಎಂಬ ವಿವರಗಳನ್ನು ಮಾತ್ರ ಸರ್ಕಾರ ಅಥವಾ ರಿಸರ್ವ್  ಬ್ಯಾಂಕ್  ಬಹಿರಂಗಪಡಿಸುವುದಿಲ್ಲ. ಇವೆಲ್ಲವೂ ಸಾರ್ವಜನಿಕರ ಹಣ ಎಂಬುದನ್ನು ಗಮನಿಸಬೇಕು. ಒಮ್ಮೆ ಸುಪ್ರೀಂ ಕೋರ್ಟ್ ‘500 ಕೋಟಿ ರೂ.ಗಳಿಗಿಂತ ಹೆಚ್ಚು ಸಾಲ ಪಡೆದು ಮರುಪಾವತಿಸದೇ ಇರುವ ಉದ್ಯಮಿಗಳ ಪಟ್ಟಿ ಕೊಡಿ’ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕೇಳಿತ್ತು. ಆದರೆ, ಕೇಂದ್ರ ಸರ್ಕಾರ ಈ ಮಾಹಿತಿಯನ್ನು ಹಂಚಿಕೊಳ್ಳಲು ಮುಂದಾಗಲಿಲ್ಲ.ಅಸಮಾನತೆ

ಕಾರ್ಪೊರೇಟ್ ತೆರಿಗೆ ಕಡಿತ

ಬ್ಯಾಂಕುಗಳಿಂದ ಪಡೆದ ಸಾಲ ಮನ್ನಾ ಸಾಲದೆಂಬಂತೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆಯನ್ನೂ ಕಡಿತಗೊಳಿಸಿತು. ಈ ಮೂಲಕ, ಉದ್ಯಮಿಗಳ ಸಂಪತ್ತು ಮತ್ತಷ್ಟು ವೃದ್ಧಿಸಲು ಪ್ರಭುತ್ವವೇ ನೆರವಾಗಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ 2019 ರಲ್ಲಿ, ಆಗ ಅಸ್ತಿತ್ವದಲ್ಲಿರುವ ಕಂಪನಿಗಳಿಗೆ ಮೂಲ ಕಾರ್ಪೊರೇಟ್ ತೆರಿಗೆಯನ್ನು ಶೇ. 30 ರಿಂದ ಶೇ. 22ಕ್ಕೆ ಕಡಿತಗೊಳಿಸಿತು; ಮತ್ತು ಅಕ್ಟೋಬರ್ 1, 2019 ರ ನಂತರ ಸಂಯೋಜಿತವಾದ ಹೊಸ ಉತ್ಪಾದನಾ ಸಂಸ್ಥೆಗಳಿಗೆ, ಶೇ. 25 ರಿಂದ ಶೇ. 15 ಕ್ಕೆ ಇಳಿಸಿತು.

ಆದಾಯ ಮತ್ತು ಕಾರ್ಪೊರೇಟ್ ತೆರಿಗೆ ದರಗಳ ಮೇಲೆ ವಿಧಿಸಲಾಗುವ ಸ್ವಚ್ಛ ಭಾರತ್ ಸೆಸ್ ಮತ್ತು ಶಿಕ್ಷಣ ಸೆಸ್‌ಗಳಂತಹ ಸರ್‌ಚಾರ್ಜ್‌ಗಳು ಮತ್ತು ಸೆಸ್‌ಗಳನ್ನು ಪರಿಗಣಿಸಿದ ನಂತರ ಅಸ್ತಿತ್ವದಲ್ಲಿರುವ ಘಟಕಗಳಿಗೆ ಪರಿಣಾಮಕಾರಿ ತೆರಿಗೆ ದರವು ಹಿಂದಿನ ಶೇಕಡಾ 34.94 ಕ್ಕೆ ಹೋಲಿಸಿದರೆ ಶೇಕಡಾ 25.17 ಆಗಿದೆ. (ಶೇ.9.77 ರಷ್ಟು ಕಡಿಮೆ) ಹೊಸ ಘಟಕಗಳಿಗೆ, ಇದು ಈ ಹಿಂದೆ 29.12 ಪ್ರತಿಶತಕ್ಕೆ ಹೋಲಿಸಿದರೆ 17.01 ಶೇಕಡಾ.

ಕಾರ್ಪೊರೇಟ್ ತೆರಿಗೆ ಕಡಿತದ ಕಾರಣ 2020-21 ರ ಒಂದು ವರ್ಷದಲ್ಲಿ ಸರ್ಕಾರವು 1 ಲಕ್ಷದ 241 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ.

ಅಂದರೆ, ಪ್ರತಿ ವರ್ಷ ತೆರಿಗೆ ಕಡಿತದಿಂದಾಗಿ ಉಳಿದ ಒಂದು ಲಕ್ಷ ಕೋಟಿ ರೂ. ದೊಡ್ಡ ಉದ್ಯಮಿಗಳ ಸಂಪತ್ತಿಗೆ ಸೇರ್ಪಡೆಯಾಗುತ್ತದೆ ಎಂದರ್ಥ. ಸರ್ಕಾರ ಸಂಪನ್ನೂಲ ಸಂಗ್ರಹಿಸಲು ಒಂದೆಡೆ ಜನಸಾಮಾನ್ಯರು ಕೊಳ್ಳುವ ಸರಕು ಮತ್ತು ಪಡೆಯುವ ಸೇವೆಗಳ ಮೇಲೆ ಪರೋಕ್ಷ ತೆರಿಗೆ ಹೆಚ್ಚಿಸುತ್ತದೆ, ಮತ್ತೊಂದೆಡೆ ದೊಡ್ಡ ಉದ್ಯಮಿಗಳು ಕೊಡುತ್ತಿದ್ದ ತೆರಿಗೆಯ ಪ್ರಮಾಣವನ್ನು ಕಡಿಮೆ ಮಾಡಿದೆ. ಅಸಮಾನತೆ

ONGC ಬ್ಲಾಕ್ ನಿಂದ ಅನಿಲ ಕಳವು

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ತನ್ನ ಹಕ್ಕುಗಳನ್ನು ಹೊಂದಿಲ್ಲದ ಬ್ಲಾಕ್  ಗಳಿಂದ ಅನಿಲವನ್ನು ಹೊರತೆಗೆಯುವ ಮೂಲಕ 1.729 ಬಿಲಿಯನ್‌ ಡಾಲರ್  ಗೂ ಹೆಚ್ಚು ವಂಚನೆ ಮಾಡಿದೆ ಎಂದು ಸಾರ್ವಜನಿಕ ಸಂಸ್ಥೆಯಾದ ONGC (ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್  ಕಾರ್ಪೊರೇಷನ್) ಆರೋಪಿಸಿದೆ. ರಿಲಯನ್ಸ್  ತಮ್ಮ ಬ್ಲಾಕ್‌ಗಳ ಸಾಮಾನ್ಯ ಗಡಿಗೆ ಸಮೀಪದಲ್ಲಿ ಬಾವಿಗಳನ್ನು ಕೊರೆದು ONGC ಯ ಪಕ್ಕದ ಬ್ಲಾಕ್‌ನಿಂದ ಅನಿಲವನ್ನು ಪಂಪ್ ಮಾಡಿದೆ ಎಂದು 2014ರಲ್ಲಿ ONGC ದೂರು ನೀಡಿತ್ತು. 10 ವರ್ಷಗಳು ಕಳೆದ ನಂತರವೂ ಸದ್ಯ ಈ ಪ್ರಕರಣ ದೆಹಲಿ ಹೈಕೋರ್ಟ್ ಮುಂದಿದೆ.

ಇನ್ನು, ನಮ್ಮದೇ ನೆಲದಾಳದಿಂದ ಹೊರತೆಗೆಯುವ ತೈಲ ಮತ್ತು ಅನಿಲಕ್ಕೂ (ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಆಯಿಲ್, ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳು) ಅಂತರಾಷ್ಟ್ರೀಯ ಮಾರುಕಟ್ಟೆ ದರ ನಿಗದಿ ಮಾಡಿ ಜನರನ್ನು ಶೋಷಣೆ ಮಾಡುವ ಮೂಲಕವೂ ಬಂಡವಾಳಗಾರರು ತಮ್ಮ ಸಂಪತ್ತನ್ನು ವೃದ್ದಿಸಿಕೊಳ್ಳುತ್ತಾರೆ.

ಬಂಡವಾಳಗಾರರು ಸಾರ್ವಜನಿಕರಿಗೆ ಸೇರಿರುವ ಪ್ರಕೃತಿ ಸಂಪತ್ತನ್ನು ಹೇಗೆಲ್ಲಾ ದೋಚಿ ತಮ್ಮ ಸಂಪತ್ತನ್ನು ವೃದ್ಧಿಸಿಕೊಳ್ಳುತ್ತಾರೆ, ಅವರ ಸರಕು ಮತ್ತು ಸೇವೆಗಳ ಮೇಲೆ ಹೇಗೆಲ್ಲಾ ಮೋಸದ ದರ ನಿಗದಿ ಮಾಡಿ ಶೋಷಣೆ ಮಾಡುತ್ತಾರೆ ಎಂಬುದಕ್ಕೆ ಇವು ಕೆಲವು ಉದಾಹರಣೆಯಷ್ಟೆ.  ಅಸಮಾನತೆ

ಕೊನೆಯದಾಗಿ: 2020 ರ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ಉತ್ತೇಜಕ ಪ್ಯಾಕೇಜ್ ನಲ್ಲಿ ಬಂಡವಾಳದಾರರಿಗೆ ಸಿಕ್ಕಿದ್ದೆಷ್ಟೊ?

ಇದನ್ನು ನೋಡಿ : ಮೊಹರಂ |ಧರ್ಮಗಳ ಸಂಕೋಲೆ ಮೀರಿ ಅಸ್ಮಿತೆ ಸೃಷ್ಟಿಸಿಕೊಂಡ ಹಬ್ಬ – ರಹಮತ್‌ ತರೀಕರೆJanashakthi Media

 

Donate Janashakthi Media

Leave a Reply

Your email address will not be published. Required fields are marked *