ಮುಕೇಶ್ ಅಂಬಾನಿಯ ಒಡೆತನದ ರಿಲಯಂಸ್ ರಿಟೇಲ್ ಲಿಮಿಟೆಡ್ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರೈತರಿಂದ ಕನಿಷ್ಟ ಬೆಂಬಲ ಬೆಲೆಗಿಂತ ಹೆಚ್ಚಿನ ದರದಲ್ಲಿ1000 ಕ್ವಿಂಟಲ್ ಸೋನ ಮಸೂರಿ ಭತ್ತವನ್ನು ಖರೀದಿಸುವ ಒಂದು ವ್ಯವಹಾರವನ್ನು ಕುದುರಿಸಿದೆ. ಇದು ಎಪಿಎಂಸಿ ಕಾಯ್ದೆಯ ತಿದ್ದುಪಡಿಯ ನಂತರ ಒಂದು ದೊಡ್ಡ ಕಾರ್ಪೊರೇಟ್ ನಡೆಸಿರುವ ಮೊದಲ ದೊಡ್ಡ ವ್ಯವಹಾರ ಎಂದು ಟಿ.ಎನ್.ಎನ್ ಸುದ್ದಿ ಸಂಸ್ಥೆ ವರದಿ ಮಾಡಿದೆ (ಜನವರಿ 10).
‘ಸ್ವಾಸ್ಥ್ಯ ಫಾರ್ಮರ್ಸ್ ಪ್ರೊಡ್ಯೂಸಿಂಗ್ ಕಂಪನಿ’( ಎಸ್.ಎಸ್.ಪಿ.ಸಿ.-ರೈತ ಉತ್ಪಾದನಾ ಕಂಪನಿ)ಯೊಂದಿಗೆ ಈ ಒಪ್ಪಂದ ಆಗಿದೆ. ಇದುವರೆಗೆ ಎಣ್ಣೆ ವ್ಯಾಪಾರದಲ್ಲಿದ್ದ ಈ ಸಂಸ್ಥೆ ಈಗ ಭತ್ತ ಖರೀದಿ ಮತ್ತು ಮಾರಾಟದ ಕ್ಷೇತ್ರವನ್ನು ಪ್ರವೇಶಿಸಿದೆ ಎನ್ನಲಾಗಿದೆ. ಸುಮಾರು 1100 ರೈತರು ಈ ಕಂಪನಿಯಲ್ಲಿ ಹೆಸರು ನೋಂದಾಯಿಸಿದ್ದಾರಂತೆ. ರಿಲಯಂಸ್ ರಿಟೇಲ್ ಕಂಪನಿ ಇವರಿಂದ ಭತ್ತವನ್ನು ಕ್ವಿಂಟಲ್‍ಗೆ 1950ರೂ. ದರದಲ್ಲಿ ಸೋನ ಮಸೂರಿ ಭತ್ತವನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಕೇಂದ್ರ ಸರಕಾರ ಈ ಬಾರಿ ಮುಂಗಾರು ಬೆಳೆಗಳಿಗೆ ಘೋಷಿಸಿದ ಕನಿಷ್ಟ ಬೆಂಬಲ ಬೆಲೆಗಳಲ್ಲಿ ಭತ್ತಕ್ಕೆ ಘೋಷಿಸಿರುವುದು ಕ್ವಿಂಟಲ್‍ಗೆ 1860ರೂ. ಅಂದರೆ ಅಂಬಾನಿ ಕಂಪನಿ ಕನಿಷ್ಟ ಬೆಂಬಲ ಬೆಲೆಗಿಂತ 82ರೂ. ಹೆಚ್ಚು!
ನಿಜವಾಗಿಯೂ ಹೆಚ್ಚು? ಖಂಡಿತಾ ಅಲ್ಲ ಎಂದಿದೆ ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ದ ಫೇಸ್ ಬುಕ್ ಟಿಪ್ಪಣಿ.
ಕನಿಷ್ಟ ಬೆಂಬಲ ಬೆಲೆ ಘೋಷಿಸುವುದು ಸಾಮಾನ್ಯ ಮತ್ತು ಗ್ರೇಡ್ ‘ಎ’ ಭತ್ತಕ್ಕೆ. ಸೋನ ಮಸೂರಿ ಒಂದು ಸುಪರ್ ಫೈನ್ ವೆರೈಟಿ. ಇದರ ಜೊತೆಗೆ ತೇವಾಂಶ 16ಶೇ.ಕ್ಕಿಂತ ಕಡಿಮೆಯಿರಬೇಕು ಎಂಬ ಷರತ್ತೂ ಇದೆ.
ಅಲ್ಲದೆ ಕೇಂದ್ರ ಸರಕಾರ ಕನಿಷ್ಟ ಬೆಂಬಲ ಬೆಲೆ(ಎಂ.ಎಸ್.ಪಿ.)ಯನ್ನು ಸ್ವಾಮಿನಾಥನ್ ಅಯೋಗದ ಶಿಫಾರಸಿನಂತೆ ಸಿ2+50% ಸೂತ್ರದಂತೆ ಪ್ರಕಟಿಸುತ್ತಿಲ್ಲ. ಈ ಸೂತ್ರದ ಪ್ರಕಾರ ಸಾಮಾನ್ಯ ಭತ್ತಕ್ಕೆ ಈ ವರ್ಷದ ಮುಂಗಾರಿನಲ್ಲಿ ರೂ. 2428.50 ಇರಬೇಕಾಗಿದೆ ಎಂದು ಎಐಕೆಎಸ್ ಲೆಕ್ಕ ಹಾಕಿತ್ತು(ಜೂನ್2, 2020ರ ಅದರ ಹೇಳಿಕೆ).
ಇದನ್ನೂ ಓದಿ : ರೈತರಿಂದ “ಅಂಬಾನಿ – ಆದಾನಿ” ಕಂಪನಿ ವಸ್ತುಗಳ ಬಾಯ್ಕಟ್ ಅಭಿಯಾನ
ದಿಲ್ಲಿಯನ್ನು ಸುತ್ತುವರೆದಿರುವ ರೈತರು ಎಂ.ಎಸ್.ಪಿ.ಯನ್ನು ಈ ಸಿ2+50% ಸೂತ್ರದಂತೆ ಎಲ್ಲ ಬೆಳೆಗಳಿಗೆ ಘೋಷಿಸಬೇಕು, ಮತ್ತು ಇದನ್ನು ಕಾನೂನಾತ್ಮಕಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬೇಕು.
ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ಅಂಬಾನಿ ಒಡೆತನದ ಇನ್ನೊಂದು ಕಂಪನಿ ಜಿಯೊ ಇನ್ಫೊಕಾಂ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನಲ್ಲಿ ಜನವರಿ 4ರಂದು ಸಲ್ಲಿಸಿದ ಅಫಿಡವಿಟ್‍ನಲ್ಲಿ ದೇಶದಲ್ಲಿ ಈಗ ಚರ್ಚೆಯಲ್ಲಿರುವ ಮೂರು ಕೃಷಿ ಕಾಯ್ದೆಗಳು ಮತ್ತು ಎಪಿಎಂಸಿಗಳನ್ನು ಕಳಚಿ ಹಾಕುವುದು ಮುಂತಾದವುಗಳಿಮದ ಅಂಬಾನಿ ಕಂಪನಿಗಳು ಯಾವ ರೀತಿಯಲ್ಲೂ ಪ್ರಯೋಜನ ಪಡೆಯುತ್ತಿಲ್ಲ, ತಾವೇನೂ ಕಾರ್ಪೊರೇಟ್ ಅಥವ ಕಾಟ್ರಾಕ್ಟ್ ಕೃಷಿ ಕ್ಷೇತ್ರದಲ್ಲಿ ಇಲ್ಲ, ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಕೃಷಿ ಜಮೀನುಗಳನ್ನು ಖರೀದಿಸಿಲ್ಲ ಎಂದು ಹೇಳಿಕೊಂಡಿದೆ.
ಈ ಅಫಿಡವಿಟ್ ತಪ್ಪು ದಾವೆಗಳಿಂದ ತುಂಬಿದೆ ಎಂದು ಇದಕ್ಕೆ ಪ್ರತಿಕ್ರಿಯಿಸುತ್ತ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎ.ಐ.ಕೆ.ಎಸ್.ಸಿ.ಸಿ.) ಹೇಳಿದೆ. “ರಿಲಯಂಸ್ ನ ಅಫಿಡವಿಟ್ ತಾನು ಬೆಳೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿಲ್ಲ, ಕೃಷಿ ಭೂಮಿಯನ್ನು ಖರೀದಿಸುತ್ತಿಲ್ಲ ಎಂಬೆಲ್ಲ ತಪ್ಪು ದಾವೆಗಳಿಂದ ತುಂಬಿದೆ. ಇಂತಹ ದಾವೆಗಳನ್ನು ಮುಂದಿಡುವ ಮೊದಲು ಅದು ಮಹಾರಾಷ್ಟ್ರದ ರಾಯಗಡ, ಮತ್ತು ಇತರ ಸ್ಥಳಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ವಹಿಸಿಕೊಂಡಿರುವ ಜಮೀನುಗಳನ್ನು ಹಿಂದಿರುಗಿಸಬೇಕಾಗುತ್ತದೆ” ಎಂದು ಎ.ಐ.ಕೆ.ಎಸ್.ಸಿ.ಸಿ. ಸವಾಲು ಹಾಕಿದೆ.
ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಅಂಬಾನಿ/ಅದಾನಿ ಕಂಪನಿಗಳ ಉತ್ಪನ್ನಗಳನ್ನು/ಸೇವೆಗಳನ್ನು ಬಹಿಷ್ಕರಿಸುವ ಚಳುವಳಿ ಜೋರಾಗಿ ನಡೆದಿರುವ ಹಿನ್ನೆಲೆಯಲ್ಲಿ ಜಿಯೊ ಇನ್ಫೊಕಾಂ ಈ ಅಫಿಡವಿಟನ್ನು ತನ್ನ ದೂರಿನೊಂದಿಗೆ ಸಲ್ಲಿಸಿದೆ.