- 1837 ಎಪ್ರಿಲ್ 5 ಅಮರ ಸುಳ್ಯ ಕೊಡಗು ಕೆನರಾ ಬಂಡಾಯ
- ಬ್ರಿಟಿಷ್ ಎದುರಿಗೆ ಸ್ವಾತಂತ್ರ್ಯ ಕಹಳೆ ಮತ್ತು ಇತಿಹಾಸದ ರೋಚಕ ಕತೆ.
ಇತಿಹಾಸದ ಯಾವುದೇ ಕಾಲಘಟ್ಟವನ್ನು ನೋಡಿ. ಯಾವುದೇ ಸ್ಥಳೀಯ ಜನಾಂಗ ತನ್ನ ನೆಲಕ್ಕೆ ಮತ್ತೊಂದರ ಪ್ರವೇಶವನ್ನು, ಆಕ್ರಮಣವನ್ನು ಸಹಿಸಿಯೇ ಇಲ್ಲ. ಮೊದಲು ‘ಹೊರದಬ್ಬು’ ವಿಕೆಯ ಪ್ರಕ್ರೀಯೆ ಸುರುವಾಗುತ್ತದೆ. ಇಲ್ಲದಿದ್ದರೆ ಪ್ರಥಮ ಘರ್ಷಣೆಯ ನಂತರ ನಿಧಾನವಾಗಿ ಒಳಗೊಳ್ಳುವಿಕೆಯ ಕಾರ್ಯ ಸಂಭವಿಸುತ್ತದೆ. ಏನಿದ್ದರೂ ಮೊದಲ ಕಾರ್ಯಸೂಚಿ ‘ಹೊರದಬ್ಬು’ ವಿಕೆಯ ಕಾರ್ಯಾಚರಣೆ ಮಾತ್ರ.
ಬಿರು ಬಿಸಿಲಿನ ಎತ್ತರದ ಗುಡ್ಡದ ಮೇಲೆ ಎದೆ ಸೆಟೆದು ನಿಂತಿರುವ ಈ ಕಟ್ಟಡ 1837ರಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಸಮರದ ಕಣ್ಣಿಗೆ ಕಾಣುವ ಏಕೈಕ ಸಾಕ್ಷಿ. ಈ ಕಟ್ಟಡ ಅಂದಿನ ಕಂಪೆನಿ ಸರ್ಕಾರದ ಖಾಜಾನೆಯಾಗಿತ್ತು. ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪವಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಎತ್ತರದ ಗುಡ್ಡದ ಮೇಲೆ ಇದು ನಿಂತಿದೆ. ಇದರ ಸುತ್ತಲೂ ಇದ್ದಿರಬಹುದಾದ ಕಂದಕ ಈಗ ಪಶ್ಚಿಮ ದಿಕ್ಕಲ್ಲಿ ಮಾತ್ರ ಗೋಚರ.
1837ರ ಮಾರ್ಚ್ 30ರಂದು ಸುಳ್ಯ ತಾಲೂಕಿನ ಉಬರಡ್ಕದ ಮದುವೆಗದ್ದೆಯಿಂದ ಹೊರಟ ದಂಡು ಮೊದಲು ಬೆಳ್ಳಾರೆಯ ಖಜಾನೆಯನ್ನು ವಶಪಡಿಸಿಕೊಳ್ಳುತ್ತದೆ. ಅಷ್ಟೊತ್ತಿಗೆ ಅಲ್ಲಿ ಸೇರಿದ್ದ ಯೋಧರ ಸಂಖ್ಯೆ ಸುಮಾರು 3000. ಅದರಲ್ಲಿ ಒಂದೆರಡು ಆನೆಗಳು ಆರೇಳು ಕುದುರೆಗಳು ಸೇರಿದ್ದವು. ಇಡೀ ಹೋರಾಟದ ಮುಖ್ಯ ನಿರ್ಧಾರಗಳನ್ನು ಕೆದಂಬಾಡಿ ರಾಮಯ್ಯ ಗೌಡ ಮತ್ತವರ ಸ್ನೇಹಿತರು ಈ ಸ್ಥಳದಲ್ಲಿ ತೆಗೆದುಕೊಂಡಿದ್ದಾರೆ ಎನ್ನುವುದೇ ಈ ಸ್ಥಳದ ಮಹತ್ವ. ಅದರಲ್ಲೂ ಪ್ರಮುಖವಾದುದು ಯುದ್ಧ ವ್ಯೂಹದ ರಚನೆ. ತರಬೇತಿ ಪಡೆದ ಸೈನಿಕರು ಎಷ್ಟಿದ್ದರೆಂದು ಹೇಳುವುದು ಕಷ್ಟ. ಆದರೆ ಸ್ಪಷ್ಟ ಗುರಿಯೊಂದು ಅವರ ಮುಂದಿತ್ತು. ಅಲ್ಲಿ ಸೇರಿದ್ದ ಜನರನ್ನು ನಾಲ್ಕು ವಿಭಾಗವಾಗಿಸಿ ಯುದ್ಧ ಗೆಲ್ಲಲು ನಾಲ್ಕು ದಾರಿಗಳಲ್ಲಿ ಕಳುಹಿಸಲಾಗಿತ್ತು. ಅಂತಿಮ ಉದ್ದೇಶ ಮಂಗಳೂರು ಮತ್ತು ಮಡಿಕೇರಿ ಕೋಟೆಯನ್ನು ವಶಕ್ಕೆ ಪಡೆದು ಬ್ರಿಟಿಷ್ ಅಧಿಪತ್ಯವನ್ನು ಕೊನೆಗಾಣಿಸುವುದು.
ಶ್ರೀ ವಿದ್ಯಾಧರ ಕುಡೆಕಲ್ಲು ಅವರ ಪುಸ್ತಕದಲ್ಲಿ ಇರುವ ದಾಖಲೆಗಳ ಪ್ರಕಾರ ಮೊದಲ ತಂಡವನ್ನು ಕುಂಬ್ಳೆ, ಕಾಸರಗೋಡು ಮತ್ತು ಮಂಜೇಶ್ವರಗಳನ್ನು ಗೆಲ್ಲಲು ಕಳುಹಿಸಿಕೊಡಲಾಗುತ್ತದೆ. ಅದರ ಮುಂದಾಳತ್ವ ವಹಿಸಿದವರು ಕುಡೆಕಲ್ಲು ಪುಟ್ಟ ಗೌಡ, ಕುಂಚಡ್ಕ ರಾಮಗೌಡ ಮತ್ತು ಚಿರಿಂಜಿ ಸುಬ್ರಾಯ. ಎರಡನೇ ಪಡೆ ಕಾರ್ಕಳ ಮತ್ತು ಬಂಟ್ವಾಳದತ್ತ. ಆದರೆ ಇದರ ನೇತೃತ್ವದ ದಾಖಲೆಗಳಿಲ್ಲ.
ಮೂರನೇ ತಂಡವನ್ನು ಗೂಜುಗೋಡು ಮಲ್ಲಪ್ಪ ಗೌಡ ಮತ್ತು ಅಪ್ಪಯ್ಯ ಗೌಡ ನಾಯಕತ್ವದಲ್ಲಿ ಉಪ್ಪಿನಂಗಡಿ, ಐಗೂರು ಮತ್ತು ಬಿಸಿಲೆ ಕಡೆಗೆ ಮುನ್ನೆಡೆಸಲಾಯಿತು. ಸೇನೆಯ ಪ್ರಧಾನ ಭಾಗ ಪುತ್ತೂರು, ಫರಂಗಿಪೇಟೆ ಮತ್ತು ಮಂಗಳೂರು ಕಡೆಗೆ. ಇದರ ನಾಯಕರು ಕೆದಂಬಾಡಿ ರಾಮಯ್ಯ ಗೌಡ, ಪುಟ್ಟ ಬಸಪ್ಪ ಮತ್ತು ಕುಕ್ಕನ್ನೂರು ಚೆನ್ನಯ್ಯ.
ಮೂರು ವಿಭಾಗಗಳ ಸೇನೆಗಳು ನಿಗದಿತ ಸ್ಥಳಗಳನ್ನು ಗೆದ್ದು 1837ರ ಎಪ್ರಿಲ್ 5ರಂದು ಮಂಗಳೂರನ್ನು ತಲುಪಿ ಅಲ್ಲಿಯ ಗುಡ್ಡದ ಮೇಲೆ ಹಾರಾಡುತ್ತಿದ್ದ ಬ್ರಿಟಿಷ್ ಕಂಪೆನಿ ಧ್ವಜವನ್ನು ಕೆಳಗಿಳಿಸಿ ಕೊಡಗಿನ ಹಾಲೇರಿ ವಂಶದ ಧ್ವಜವನ್ನು ಹಾರಿಸುತ್ತವೆ. ಅದುವೇ ಇಂದಿನ ‘ಬಾವುಟ ಗುಡ್ಡೆ’ . ಅಂದಿನಿಂದ 13 ದಿವಸ ಮಂಗಳೂರಿನಿಂದ ಬ್ರಿಟಿಷರನ್ನು ಹೊರದಬ್ಬಲಾಯಿತು.
ನಂತರದಲ್ಲಿ ಪ್ರತಿಹೋರಾಟ ನಡೆಸಿದ ಇಂಗ್ಲಿಷ್ ಸುಸಜ್ಜಿತ ಸೇನೆ ಮಂಗಳೂರನ್ನು ಮತ್ತೆ ಗೆಲ್ಲುತ್ತದೆ. ಈ ಘಟನೆ ಕುರಿತಂತೆ ತಪ್ಪಿತಸ್ಥರ ವಿರುದ್ಧ ವಿಚಾರಣೆಗಳನ್ನು ನಡೆಸಿದ ಕಂಪೆನಿ ಸರ್ಕಾರ ಹೋರಾಟದ ಪ್ರಮುಖರಾಗಿದ್ದ ಲಕ್ಷ್ಮಪ್ಪ ಬಂಗರಸ, ಉಪ್ಪಿನಂಗಡಿ ಮಂಜ, ಪುಟ್ಟ ಬಸಪ್ಪ ಯಾನೆ ಕಲ್ಯಾಣ ಸ್ವಾಮಿ, ಇವರುಗಳನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಮತ್ತು ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿಯ ಕೋಟೆಯಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿತು.
ಕೆದಂಬಾಡಿ ರಾಮಯ್ಯ ಗೌಡ ಮತ್ತಿತರರನ್ನು ದೇಶಾಂತರ ಶಿಕ್ಷೆಗೆ ಒಳಪಡಿಸಲಾಯಿತು. ಒಂದಷ್ಟು ವೀರರನ್ನು ಸ್ಥಳೀಯ ಬಂದಿಖಾನೆಗಳಲ್ಲಿ ಕೊಳೆಯಿಸಲಾಯಿತು. ಆ ಕಾಲಘಟ್ಟದಲ್ಲಿ ಬೇರೆ ಬೇರೆ ಜಾತಿ ಧರ್ಮದ ಜನ ಒಟ್ಟಾಗಿ ತಮ್ಮ ನೆಲವನ್ನು ಆಕ್ರಮಿಸಿದ, ತಮ್ಮ ಮೇಲೆ ನಡೆದ ಪರಕೀಯ ಆಡಳಿತವನ್ನು ಎಲ್ಲಾ ಭೇದಗಳ ಮರೆತು ಪ್ರತಿರೋಧಿಸಿದ, ಸ್ಥಳೀಯ ಜನರ ಹೆಮ್ಮೆಯ ಚರಿತ್ರೆ ಇದು.
ಗಮನಿಸಿ, ಇದು ನಡೆದಿರುವುದು 1837ರಲ್ಲಿ. ಅಂದರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857ಕ್ಕಿಂತ 20 ವರ್ಷಕ್ಕೂ ಮೊದಲು. ಆ ದಿನಗಳಲ್ಲಿ ದೇಶದುದ್ದಗಲಕ್ಕೂ ಬ್ರಿಟಿಷ್ ವಿರುದ್ಧ ನಡೆಯುತ್ತಿದ್ದ ಹೋರಾಟಗಳ ಚರಿತ್ರೆಯಲ್ಲಿ ನಮ್ಮೂರಿನ ಮಂದಿ ತಮ್ಮದೇ ಛಾಪನ್ನು ಮೂಡಿಸಿದ್ದರು ಎಂಬುದು ಇತಿಹಾಸದ ಹೆಮ್ಮೆಯ ಸಂಗತಿಯೇ ಸರಿ. ಅವರು “ನಮ್ಮದು ಸೂರ್ಯ ಮುಳುಗದ ನಾಡು” ಎಂದು ಬೀಗುತ್ತಿದ್ದ ಮಂದಿಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಕತ್ತಲೆಗೆ ತಳ್ಳಿದರು.
ಲೇಖನ: ಗೋಪಾಲ್ ಪೆರಾಜೆ