ಆಳುವವರು ನೇಣು ಹಾಕಿಕೊಳ್ಳುವುದಾದರೆ ಹಗ್ಗ ನಾನು ಕೊಡುವೆ!

ಅತ್ಯಂತ ಗಂಭೀರವಾಗಿ ತೀವ್ರಗೊಳ್ಳುತ್ತಿರುವ ಕೋವಿಡ್‌ ಎರಡನೇ ಅಲೆಯ ಭೀಕರತೆಯಿಂದಾಗಿ ಜನತೆ ಕಂಗಾಲಾಗಿದ್ದರೂ ಆಳುವ ಸರಕಾರಗಳು ಅದಕ್ಕೆ ಸ್ಪಂದಿಸಬೇಕಾದ ರೀತಿಯಲ್ಲಿ ಸ್ಪಂದನೆ ಮಾಡದೆ ಇರುವುದು. ಕರ್ನಾಟಕ ಹೈಕೋರ್ಟ್‌ ಹೇಳಿಕೆಯನ್ನು ಅತ್ಯಂತ ಬೇಜವಾಬ್ದಾರಿತನದಿಂದ ಖಂಡಿಸಿರುವ ಆಳುವ ಸರಕಾರದ ಜನಪ್ರತಿನಿಧಿಗಳ ಮಾತುಗಳ ಬಗ್ಗೆ ಅತ್ಯಂತ ಕಟುವಾಗಿ ಟೀಕಿಸಿರುವ ಲೇಖಕ ಕೆ ಪಿ ಸುರೇಶ್‌ ಅವರ ಅಭಿಪ್ರಾಯ.

ಸರಕಾರವೊಂದು ನನ್ನ ಕೈಲಿ ಇಷ್ಟೇ ಆಗೋದು ಎಂದು ಕೈ ಚೆಲ್ಲಿದ ಕ್ಷಣ ಅದು ಆಳುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತದೆ. ನನ್ನ ಕಿರಿಯ ಗೆಳೆಯನೊಬ್ಬ  ಕೊರೊನಾ ಪೀಡಿತ ತನ್ನ ಸಹೋದರಿಯನ್ನು ಸರಕಾರಿ ಕೋಟಾದಲ್ಲಿ 350 ವೈಟಿಂಗ್‌ ಲಿಸ್ಟ್‌  ಇದ್ದ ಕಾರಣ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾನಂತೆ. ಇದು ಹೊಸದೇನೂ ಅಲ್ಲ. ಎರಡು ತಿಂಗಳಿಂದ ಸಾವಿರಾರು ಮಂದಿ ಇಂಥಾ  ಸಂಕಟದಲ್ಲಿದ್ದಾರೆ. ದಿನವೊಂದಕ್ಕೆ ಕನಿಷ್ಠ 20 ಸಾವಿರ ಆಸ್ಪತ್ರೆ ಬಿಲ್ಲು.

ಇದನ್ನು ಓದಿ: ಕೋವಿಡ್‌ ಪರಿಹಾರ : ಬಾಯಿ ಮುಚ್ಚಿದ ಸಿಎಂ! – ಹಳ್ಳ ಹಿಡಿಯಿತೇ ಪಿಎಂ ಆತ್ಮನಿರ್ಭರ್!!

ಮೊನ್ನೆ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಪ್ರಕಾರ ಬೆಂಗಳೂರಿನ ಸಾವಿರಾರು ಮಂದಿಯ ಸಕಲ ನಗ, ಒಡವೆಗಳು  ಪಾನ್‌ ಬ್ರೋಕರುಗಳಲ್ಲಿ ಅಡವಿಡಲಾಗಿದೆ. ಅಡವಿಟ್ಟು ಪಡೆದ ಕಾಸಷ್ಟೂ ಖಾಸಗಿ ಆಸ್ಪತ್ರೆಗಳ ಪಾಲಾಗಿದೆ. ಸುದೈವದಿಂದ ಅವರ ಕೋವಿಡ್‌ ಪೀಡಿತ ಬಂಧು ಗುಣಮುಖರಾಗಿದ್ದರೆ ಅಷ್ಟಾದರೂ ನೆಮ್ಮೆದಿ. ಆದರೆ ಸಾವು ಕಂಡ  ಬಹುಪಾಲು ಮಂದಿಯ ಮನೆಯವರು ಇಂಥಾ ಸಂಕಟಕ್ಕೆ ಬಿದ್ದಿದ್ದಾರೆ. ಈ ಅಡವಿಟ್ಟ ಒಡವೆ, ನಗ ಮರಳಿ ಬಿಡಿಸಿಕೊಳ್ಳುವುದು ಕಷ್ಟ.  ಯಾಕೆಂದರೆ ಬಿಲ್ಲು ಆ ಪ್ರಮಾಣದಲ್ಲಿ ಇದೆ.

ಸರಕಾರವೊಂದು ತನ್ನ ಬೇಜವಾಬ್ದಾರಿತನದಿಂದ ಜನರನ್ನು ಸಾವಿನ ದವಡೆಗೆ ನೂಕುತ್ತಾ ಅವರನ್ನು ದರಿದ್ರಾವಸ್ಥೆಗೆ ತಳ್ಳುತ್ತಿದೆ. ಸಾವು ಮತ್ತು ಆರ್ಥಿಕ ದುರ್ಭರತೆ ಎರಡೂ ಒಂದು ಕುಟುಂಬವನ್ನು ಕಾಡುವುದು ಪರಮ ದುಃಖದ ಸಂಗತಿ.

ಇದನ್ನು ಓದಿ: ನಿಮ್ಮ ವೈಫಲ್ಯವನ್ನು ಎತ್ತಿ ಹಿಡಿದಿದ್ದಕ್ಕೆ ಕೋರ್ಟ್‌ ಅನ್ನು ದೂಷಿಸಬೇಡಿ

ಯಾವುದೇ ಕೋವಿಡ್‌ ಪ್ರಕರಣ ಖಾಸಗಿಯಲ್ಲಿ ದಾಖಲಾಗಿದ್ದರೂ ಸರಕಾರ ಅದರ ವೆಚ್ಚ ಭರಿಸಬೇಕು. ಸಾವಿನ ಆತಂಕದಲ್ಲಿರುವ ಮನುಷ್ಯನ ಜೀವ ಉಳಿಸುವುದಕ್ಕೆ ಸರಕಾರ ವೆಚ್ಚ ಮಾಡದಿದ್ದರೆ ಇನ್ನೇನು ಬಂತು?

ಈ ಕೊರೊನಾಕ್ಕಿಂತ ಮೊದಲು ಕೊಳವೆ ಬಾವಿಯಲ್ಲಿ ಮಗು  ಬಿದ್ದಾಗ; ಪ್ರವಾಹದಲ್ಲಿ ಯಾರೋ ದಿಮ್ಮಿ ಹಿಡಿದು ತೇಲುತ್ತಿದ್ದಾಗ ಲಕ್ಷಗಟ್ಟಲೆ ವೆಚ್ಚ ಮಾಡಿ ಸರಕಾರ ಅವರ ಜೀವ ಉಳಿಸಲು ಪ್ರಯತ್ನ ಮಾಡಿದೆ. ಟಿವಿಗಳು ಅವನ್ನು ಪ್ರಸಾರ ಮಾಡಿವೆ. ನಾವು ಅಂಥಾ ಜೀವ ಉಳಿಸುವ ಯತ್ನಕ್ಕೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ. ಪ್ರಯತ್ನ ವಿಫಲವಾಗಿ ಮಗು ಸತ್ತಾಗ ನಾವೂ  ಹನಿಗಣ್ಣಾಗಿದ್ದೇವೆ.

ಈಗ? ಸುತ್ತ ಮುತ್ತ ಜನ ಸಾಯುತ್ತಿದ್ದಾಗ  ಜನರಿಗೇನೋ ಕಣ್ಣಿರೂ ಬತ್ತುವಷ್ಟು ಎದೆ ಶೋಕಗ್ರಸ್ತವಾಗಿದೆ. ಸರಕಾರ  ಹಾಗಿರಲು ಸಾಧ್ಯವಿಲ್ಲ.

ವರ್ಷ ಪೂರ್ತಿ ನಮ್ಮಿಂದ ತೆರಿಗೆ ಸಂಗ್ರಹಿಸಿ ಅದನ್ನು ನಮ್ಮ ಕಷ್ಟಕ್ಕೆ ವೆಚ್ಚ ಮಾಡಲು ಸಿದ್ಧವಿರದ ಸರಕಾರ ಸರಕಾರವೇ ಅಲ್ಲ. ವಿಪತ್ತೊಂದನ್ನು ಎದುರಿಸಲು ಬೇಕಾದ ಸನ್ನದ್ಧತೆ, ತಯಾರಿ, ಪೂರೈಕೆ ವ್ಯವಸ್ಥೆ ಇದೆಲ್ಲವನ್ನೂ ಮಾಡಲೆಂದೇ ಸರಕಾರಕ್ಕೆ “ಯಾರನ್ನಾದರೂ ನೇಮಿಸಿ, ಎಷ್ಟಾದರೂ ವೆಚ್ಚ ಮಾಡಿ” ಎಂಬ ಅಧಿಕಾರ ಕೊಟ್ಟಿರುವುದು.

ಇದನ್ನು ಓದಿ: ಲಸಿಕೆಗಳೆ ಲಭ್ಯವಿಲ್ಲ 2ನೇ ಡೋಸ್ ಹೇಗೆ ನೀಡುತ್ತೀರಿ, ಏನಿದು ನಿಮ್ಮ ಲಸಿಕೆ ಅಭಿಯಾನ?’: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಈಗ ನೋಡಿದರೆ ಸದಾನಂದ ಗೌಡರಂಥವರು ನೇಣು ಹಾಕಿಕೊಳ್ಳಬೇಕಾ ಅನ್ನುತ್ತಾರೆ. ಹಾಕಿಕೊಳ್ಳುವುದೇ ಸರಿ ಎಂದು ನಾವು ಹೇಳಬೇಕಿದೆ.

ಈಗ  ಸಾಂಕ್ರಾಮಿಕದನ್ವಯ ವಿಷಮ ಪರಿಸ್ಥಿತಿ ಜಾರಿಯಲ್ಲಿದೆ. ಕೇಂದ್ರ ಸರಕಾರ ಸಕಲ ಅಧಿಕಾರ ಪಡೆದುಕೊಂಡಿದೆ. ಆದರೆ ಈ ಅಧಿಕಾರ ಯಾತಕ್ಕೆ ಪಡೆಯಿತೋ ಆ ಕರ್ತವ್ಯ ನಿರ್ವಹಿಸುತ್ತಿಲ್ಲ. ಎಲ್ಲದನ್ನೂ ನಿರ್ವಹಿಸುವ ಸಿಕಂದರ್‌ ಚೌಕಿದಾರ ನಾಪತ್ತೆಯಾಗಿದ್ದಾನೆ. ಮನೆ ಮನೆಗೆ ಸಿಎಎ ಮಾಡುವ ಉತ್ಸಾಹ ತೋರಿದ ಗೃಹ ಮಂತ್ರಿಯೂ ನಾಪತ್ತೆಯಾಗಿದ್ದಾನೆ. ಜವಾಬ್ದಾರಿಯಿಂದ ಜಾರಿಕೊಂಡು ಜನರು ತಮ್ಮ ಕಷ್ಟಕ್ಕೆ ತಾವೇ ಹೊಣೆಯೆಂಬಂತೆ ಅಲೆಯುತ್ತಿದ್ದಾರೆ. ಗಂಗೆಯಲ್ಲಿ ಹೆಣ ತೇಲಿಬರುತ್ತಿದೆ. ಕೇಂದ್ರ ಸರಕಾರ ವ್ಯಾಕ್ಸೀನ್‌ ಸರಬರಾಜು ಮಾಡದಿದ್ದರೆ ನಾವೇನು  ಮಾಡಲು ಸಾಧ್ಯ ಎಂದು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅಸಹಾಯಕತೆ ತೋರುತ್ತಾರೆ. ವ್ಯಾಕ್ಸೀನ್‌ ಸಾಯಲಿ, ಕನಿಷ್ಠ ಆಸ್ಪತ್ರೆಗೆ ಸೇರಬಯಸುವ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲು ಏನು ಕಷ್ಟ? ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿಯ ಬಿಲ್ಲು ತೆರುವುದನ್ನು ನೋಡುತ್ತಾ ಸರಕಾರವೊಂದು ನೋಡುತ್ತಾ ಕೂತಿದೆಯೆಂದರೆ ಒಂದೋ ಅದು ಆಳುವ ಹಕ್ಕು ಕಳಕೊಂಡಿದೆ ಅಥವಾ ಇಂಥಾ ದೋಚುವ ದುರುಳರೊಂದಿಗೆ ಶಾಮೀಲಾಗಿದೆ ಎಂದರ್ಥ.

Donate Janashakthi Media

Leave a Reply

Your email address will not be published. Required fields are marked *