ಸರ್ಕಾರಿ ನೌಕರರಿಗೆ ಆರ್‌ಎಸ್‌ಎಸ್‌ ಸೇರಲು ಅವಕಾಶ, ಧಾರ್ಮಿಕ ತಾರತಮ್ಯದ ಕಾರ್ಯನಿರ್ವಹಣೆಯಿಂದ ಸಮಾಜಕ್ಕೆ ದೊಡ್ಡ ಅಪಾಯ

-ಸಿ.ಸಿದ್ದಯ್ಯ

ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಲು ಇದ್ದ ನಿಷೇದವನ್ನು ಮೋದಿ ಸರಕಾರ ಹಿಂತೆಗೆದುಕೊಂಡಿದೆ. ಕೇಂದ್ರದ ಈ ನಿರ್ಧಾರಕ್ಕೆ ಕಾರಣಗಳೇನು? ಆರ್‌ಎಸ್‌ಎಸ್‌ ನಲ್ಲಿ ಏನಾದರೂ ಬದಲಾವಣೆಯಾಗಿದೆಯೇ? ಜನರ ನಡುವೆ ಒಡಕುಂಟು ಮಾಡಿ ರಾಜಕೀಯ ಅಧಿಕಾರ ಪಡೆಯುವ ಅದರ ತಂತ್ರ ಬದಲಾಗಿದೆಯೇ? 1948ರಲ್ಲಿ ಮಹಾತ್ಮ ಗಾಂಧೀಜಿಯವರ ಹತ್ಯೆ ಮತ್ತು 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ದ್ವೇಷದ ವಿಷವನ್ನು ಎರಚಿದ ಕೆಟ್ಟ ಸಿದ್ಧಾಂತಕ್ಕೆ ಅದು ಇಂದಿಗೂ ಬದ್ಧವಾಗಿದೆ.

ಜಾತಿ, ಧರ್ಮದ ಭೇದ ಮರೆತು ತಟಸ್ಥವಾಗಿ ಕಾರ್ಯನಿರ್ವಹಿಸಬೇಕಾದ ಸರಕಾರಿ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ತೊಡಗುವುದರಿಂದ, ಸಮಾಜಕ್ಕೆ ದೊಡ್ಡ ಅಪಾಯ ಎದುರಾಗಲಿದೆ. ಸರ್ಕಾರಿ ನೌಕರರು ಧಾರ್ಮಿಕ ಪ್ರಜ್ಞೆ ಮತ್ತು ಧಾರ್ಮಿಕ ತಾರತಮ್ಯದಿಂದ ಕಾರ್ಯನಿರ್ವಹಿಸಲು ಅವಕಾಶವಾಗುತ್ತದೆ. ಸರ್ಕಾರಿ ಯಂತ್ರವನ್ನು ಹಿಂದುತ್ವ ಮಾಡುವ ಉದ್ದೇಶದಿಂದ ಮೋದಿ ಸರ್ಕಾರ ಇಂತಹ ಕ್ರಮ ಕೈಗೊಂಡಿದೆ. ಇದು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ.

ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ಕ್ಕೆ ಸೇರುವ ನಿಷೇಧವನ್ನು ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ಹಿಂತೆಗೆದುಕೊಂಡಿದೆ. 2024 ಜುಲೈ 9 ರಂದು ಪ್ರಧಾನ ಮಂತ್ರಿಯವರ ಅಡಿಯಲ್ಲಿ ನೇರವಾಗಿ ಬರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT), 1966ರಿಂದ ಜಾರಿಯಲ್ಲಿದ್ದ ನಿಷೇಧವನ್ನು ಹಿಂಪಡೆದು ಯಾವುದೇ ಹಿಂಜರಿಕೆ ಇಲ್ಲದೆ ಹೊಸ ಆದೇಶವನ್ನು ಹೊರಡಿಸಿದೆ. ಆದರೆ, ಇದು ಬಹಿರಂಗಕ್ಕೆ ಬಂದಿದ್ದು ಜುಲೈ 22 ರಂದು. ಅಂದರೆ 13 ದಿನಗಳ ನಂತರ! ಅದೂ ಕೂಡಾ ಸರ್ಕಾರಿ ಮೂಲದಿಂದ ಬಹಿರಂಗಗೊಳ್ಳಲ್ಲಿಲ್ಲ ಬದಲಾಗಿ, ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಮಾಡಿದ “ಸರ್ಕಾರಿ ನೌಕರರು ಆರ್‌ ಎಸ್‌ ಎಸ್‌ ನ ಚಟುವಟಿಕೆಗಳಲ್ಲಿ ಭಾಗವಹಿಸದಂತೆ 58 ವರ್ಷಗಳ ಹಿಂದೆ ಆದೇಶ ಹೊರಡಿಸಲಾಗಿದೆ. ಸಂವಿಧಾನಕ್ಕೆ ವಿರುದ್ಧವಾದ ಈ ಆದೇಶವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹಿಂಪಡೆದಿರುವುದು ಸ್ವಾಗತಾರ್ಹ….” ಎಂಬ ಟ್ವಿಟ್ ಮೂಲಕ!

ಇದನ್ನೂ ಓದಿ: ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಡಿಪಿಆರ್‌ಗೆ ಕೇಂದ್ರದ ಒಪ್ಪಿಗೆ

1966 ರಲ್ಲಿ ಕೇಂದ್ರ ಸರ್ಕಾರವು ಆರ್‌ಎಸ್‌ಎಸ್‌ ಮತ್ತು ಜಮಾತ್-ಎ-ಇಸ್ಲಾಮಿ ಆಯೋಜಿಸುವ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದನ್ನು ನಿಷೇಧಿಸಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಜಮಾತ್-ಎ-ಇಸ್ಲಾಮಿಯ ಇವುಗಳ ಯಾವುದೇ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದು ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸುವಿಕೆಗೆ ಸಮಾನವಾಗಿದೆ, ಆದ್ದರಿಂದ ಇದು ಕೇಂದ್ರ ನಾಗರಿಕ ಸೇವೆಗಳ (ನಡತೆ) ನಿಯಮ, 1964, 5 ರ ಉಪ-ನಿಯಮ (1) ರ ನಿಬಂಧನೆಗಳ ಉಲ್ಲಂಘನೆಯಾಗುತ್ತದೆ.

ಅದಾದ ನಂತರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಆಡಳಿತದಲ್ಲಿಯೂ ಈ ನಿಷೇಧ ಮುಂದುವರಿದಿತ್ತು. ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿಯೂ ನಿಷೇಧ ಮುಂದುವರೆಯಿತು. ವಾಜಪೇಯಿ ಸರ್ಕಾರದ ಅವಧಿಯಲ್ಲಿಯೂ, ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿಯೂ ತೆಗೆದುಕೊಳ್ಳದ ನಿರ್ಧಾರವನ್ನು ಈಗ ಇದ್ದಕ್ಕಿದ್ದಂತೆ ಏಕೆ ತೆಗೆದುಕೊಂಡಿದೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಸುಮಾರು 58 ವರ್ಷಗಳಷ್ಟು ಹಳೆಯದಾದ ನಿಷೇಧವನ್ನು ತೆಗೆದುಹಾಕುವ ಮೊದಲು ಏಕೆ ಕನಿಷ್ಠ ಚರ್ಚೆಯನ್ನೂ ನಡೆಸಲಿಲ್ಲ? ಒಂದು ಕಡೆ ಸಂಸತ್ತಿನ ಅಧಿವೇಶನಗಳು ಸಮೀಪಿಸುತ್ತಿದ್ದಂತೆ ಈ ಕುರಿತು ಚರ್ಚೆ ಮಾಡುವ ಬದಲು ಆದೇಶ ಹೊರಡಿಸುವ ಅಗತ್ಯವೇನಿತ್ತು? ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿರುವ ಬಿಜೆಪಿ, ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಲಾಭ ಪಡೆಯಲು ಕೋಮುದ್ವೇಷ ಕೆರಳಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಈ ವಿವಾದಾತ್ಮಕ ನಿರ್ಧಾರ ಕೈಗೊಂಡಿದೆ ಎಂಬ ವಾದ ಸತ್ಯಕ್ಕೆ ದೂರವಿಲ್ಲ. ಈ ಕ್ರಮವು ರಾಜಕೀಯ ಪ್ರೇರಿತವಾಗಿದೆ ಮತ್ತು ಅಧಿಕಾರಶಾಹಿಗಳ “ಹಿಂದುತ್ವೀಕರಣ” ವನ್ನು ಕಾನೂನುಬದ್ಧಗೊಳಿಸುತ್ತದೆ.

ಸದ್ದಿಲ್ಲದೆ ಮಾಡಿದ್ದೇಕೆ?

ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು 400 ಸೀಟು ಗೆಲ್ಲುತ್ತೇವೆ ಎಂದು ಹೇಳಿದ್ದರು. ಆದರೆ ಬಿಜೆಪಿ ಗೆದ್ದಿದ್ದು 240 ಸ್ಥಾನ ಮಾತ್ರ. ಅಲ್ಲದೆ, ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾದ ಉತ್ತರಪ್ರದೇಶದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. “ಚುನಾವಣಾ ಫಲಿತಾಂಶದ ನಂತರ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವೆ ಸಂಘರ್ಷದ ವರದಿಗಳು ಬಂದಿದ್ದವು, ಆರ್‌ಎಸ್‌ಎಸ್‌ ಅನ್ನು ಸಂತೃಪ್ತಿಗೊಳಿಸಲು ಅದರ ಮೇಲಿದ್ದ 58 ವರ್ಷಗಳ ನಿರ್ಭಂದವನ್ನು ಮೋದಿ ಸರ್ಕಾರ ತೆಗೆದುಹಾಕಿದೆ” ಎಂದು ಮಾದ್ಯಮಗಳಲ್ಲಿ ಚರ್ಚೆಗಳಾಗುತ್ತಿವೆ. ಮಾತ್ರವಲ್ಲ, ಈ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ ಸಕ್ರಿಯವಾಗಿ ತೊಡಗಿಕೊಳ್ಳಲಿಲ್ಲ ಎಂದೂ ಕೆಲ ಮಾದ್ಯಮಗಳು ಹೇಳುತ್ತಿವೆ.

ಮೋದಿ ನೇತೃತ್ವದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವಿನ ಸ್ಪಷ್ಟವಾದ ಸೈದ್ದಾಂತಿಕ ಉದ್ವಿಗ್ನತೆ, ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ‘ಕೇಸರಿ ಪಕ್ಷವು ಹಿಂದಿನಂತೆ ಆರ್‌ಎಸ್‌ಎಸ್ ಮೇಲೆ ಅವಲಂಬಿತವಾಗಿಲ್ಲ’ ಎಂದು ಹೇಳಿಕೆ ನೀಡಿದ್ದು, ಮೋದಿ ನೇತೃತ್ವದಲ್ಲಿ ಬಿಜೆಪಿಯ ಸ್ವಾಯತ್ತ ಕಾರ್ಯನಿರ್ವಹಣೆಯನ್ನು ಪ್ರತಿಪಾದಿಸಿದ್ದು…. ಇವೆಲ್ಲವೂ ಆರ್‌ಎಸ್‌ಎಸ್‌ ನ ತಂತ್ರಗಳೇ ವಿನಃ ಇದರಲ್ಲಿ ಸತ್ಯಾಂಶಗಳಿಲ್ಲ. ದೇಶದ ಜನತೆ ಬಿಜೆಪಿ ಆಡಳಿತದಿಂದ ಬೇಸತ್ತು ಅದರಿಂದ ದೂರವಾಗತೊಡಗಿದ್ದಾರೆ. ಇದನ್ನು ಅರಿತಿರುವ ಅರೆಸ್ಸೆಸ್ ಸೋಲನ್ನು ಬಿಜೆಪಿ ಮತ್ತು ಅದರ ಕೆಲ ನಾಯಕರ  ಮೇಲೆ ಹೊರಿಸುವ ಮೂಲಕ ತಾನು ಸೋಲಿನ ಹೊಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಲ್ಲದೆ ಇದು ಬೇರೇನೂ ಅಲ್ಲ.

ತನ್ನ ಯಾವುದೇ ಯೋಜನೆ ಅಥವಾ ತಾನು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳನ್ನು ಸುದ್ದಿ ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡುವ ಮೋದಿ ಸರ್ಕಾರ, ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂಬ ನಿಷೇಧ ತೆರವುಮಾಡಿದ ವಿಷಯಕ್ಕೆ ಸಂಬಂಧಿಸಿ  ಯಾಕಾಗಿ ಪ್ರಚಾರ ಮಾಡಲಿಲ್ಲ? ಕನಿಷ್ಟಪಕ್ಷ ಈ ವಿಷಯವನ್ನು ಸರ್ಕಾರವೇ ಏಕೆ ಬಹಿರಂಗ ಪಡಿಸಲಿಲ್ಲ? ಇದನ್ನು ಬಿಜೆಪಿಯ ಮಾಧ್ಯಮ ವಿಭಾಗದ ಮೂಲಕವೇ ಏಕೆ ಬಹಿರಂಗಪಡಿಸಲಾಯಿತು? ಇಂತಹ ಪ್ರಶ್ನೆಗಳು ಮೂಡಿಬರುತ್ತವೆ.

ಆರ್‌ಎಸ್‌ಎಸ್‌ ನಲ್ಲಿ ಏನಾದರೂ ಬದಲಾವಣೆಯಾಗಿದೆಯೇ?

1964ರ ಸೇವಾ ನಿಯಮಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಬಾರದು. ಅಷ್ಟೇ ಅಲ್ಲ. ರಾಜಕೀಯ ಚಟುವಟಿಕೆಗಳಿಗೆ ಅನುಕೂಲವಾಗುವ ಯಾವುದೇ ಆಂದೋಲನದಲ್ಲಿ ತೊಡಗಬಾರದು. ನವೆಂಬರ್ 30, 1966 ರಂದು, ಈ ನಿಬಂಧನೆಗಳನ್ನು ಆಧರಿಸಿ, ಕೇಂದ್ರ ಸರ್ಕಾರವು RSS ಮತ್ತು ಜಮಾತ್-ಎ-ಇಸ್ಲಾಮಿ ವಿರುದ್ಧ ಈ ನಿಷೇಧದ ಆದೇಶವನ್ನು ಹೊರಡಿಸಿತು. 1970 ಮತ್ತು 1980 ರ ದಶಕದಲ್ಲಿ ಕೇಂದ್ರವು ಈ ನಿರ್ದೇಶನಗಳಿಗೆ ಹೆಚ್ಚಿನ ಸ್ಪಷ್ಟೀಕರಣಗಳನ್ನು ನೀಡಿತು. ಇದೀಗ ಮೋದಿ ಸರಕಾರ ಆರ್‌ಎಸ್‌ಎಸ್‌ಅನ್ನು ಈ ಪಟ್ಟಿಯಿಂದ ಹೊರಗಿಟ್ಟಿದೆ. ಈ ನಿರ್ಧಾರಕ್ಕೆ ಕಾರಣಗಳೇನು? ಆರ್‌ಎಸ್‌ಎಸ್‌ ನಲ್ಲಿ ಏನಾದರೂ ಬದಲಾವಣೆಯಾಗಿದೆಯೇ? ಜನರ ನಡುವೆ ಒಡಕನ್ನು ಉಂಟುಮಾಡಿ ರಾಜಕೀಯ ಅಧಿಕಾರ ಪಡೆಯುವ ಅದರ ತಂತ್ರ ಬದಲಾಗಿದೆಯೇ?

1948ರಲ್ಲಿ ಮಹಾತ್ಮ ಗಾಂಧೀಜಿಯವರ ಹತ್ಯೆ ಮತ್ತು 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ದ್ವೇಷದ ವಿಷವನ್ನು ಹರಡಿದ ಕೆಟ್ಟ ಸಿದ್ಧಾಂತಕ್ಕೆ ಆರ್‌ಎಸ್‌ಎಸ್‌ ಇಂದಿಗೂ ಬದ್ಧವಾಗಿದೆ. ನಿಜವಾಗಿ ಹೇಳಬೇಕೆಂದರೆ ಅದು ಅಂದಿಗಿಂತ ಇಂದು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ಹತ್ತು ವರ್ಷಗಳ ಅಧಿಕಾರದ ಅವಧಿಯಲ್ಲಿ ಕೋಮು ವಿಷಬೀಜ ಬಿತ್ತುವ ವಿಷಯಗಳನ್ನು ಪಠ್ಯಪುಸ್ತಕಗಳು ಮತ್ತು ಚಲನಚಿತ್ರ ಕಥೆಗಳಲ್ಲಿ ಸೇರಿಸಲಾಗಿದೆ. ಇದರಿಂದ ಜನರು ತಮ್ಮ ನೆರೆಹೊರೆಯವರ ಬಗ್ಗೆ ಅನುಮಾನ ವ್ಯಕ್ತಪಡಿಸುವಂತಾಗಿದೆ. ಇಂತಹ ಅಪಾಯವಿದ್ದರೂ ಆರ್‌ಎಸ್‌ಎಸ್‌ ನಲ್ಲಿ ಯಾವ ಬದಲಾವಣೆಯಾಗಿದೆ  ಎಂದು ಮೋದಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ? ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಗೆ ಮಾತ್ರವಲ್ಲದೆ ಜಮಾತ್-ಎ-ಇಸ್ಲಾಮಿಗೆ ಸೇರುವುದನ್ನೂ ನಿಷೇಧಿಸಲಾಯಿತು. ಆದರೆ ಈಗ ಕೇಂದ್ರ ಸರ್ಕಾರ ಆರ್‌ಎಸ್‌ಎಸ್‌ ಮೇಲಿನ ಆ ನಿಷೇಧವನ್ನು ಮಾತ್ರ ತೆಗೆದುಹಾಕಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ

1925ರ ಸೆಪ್ಟೆಂಬರ್‌ನಲ್ಲಿ ವಿಜಯದಶಮಿಯಂದು ಆರ್‌ ಎಸ್‌ ಎಸ್ ಸ್ಥಾಪನೆಯಾಯಿತು. ಅದು ರಾಷ್ಟ್ರೀಯ ಆಂದೋಲನ ತೀವ್ರ ಸ್ವರೂಪ ಪಡೆದಿದ್ದ ಸಂದರ್ಭ. ಅಂತಹ ಸಂದರ್ಭದಲ್ಲಿ ರೂಪುಗೊಂಡ ಈ ಸಂಘಟನೆಯ ಉದ್ದೇಶ ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸುವುದಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಇರುವುದೇ ಇದಕ್ಕೆ ಸಾಕ್ಷಿ. ಜಾತಿ ಮತ್ತು ಧರ್ಮ, ಭಾರತೀಯ ರಾಷ್ಟ್ರೀಯತೆ ಮತ್ತು ಅದರ ಭಾಗವಾಗಿದ್ದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಪರಿಕಲ್ಪನೆಗಳನ್ನು ಮೀರಿದ ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಆರ್‌ಎಸ್‌ಎಸ್‌ ಮೊದಲಿನಿಂದಲೂ ವಿರೋಧಿಸಿತು. ಅದು ಮೂಲ ಭಾರತೀಯ ರಾಷ್ಟ್ರೀಯತೆಯಿಂದ ದೂರವಾಗುತ್ತಲೇ ಹಿಂದೂ ರಾಷ್ಟ್ರೀಯತೆಯನ್ನು ಪೋಷಿಸಿತು. ಅಷ್ಟಕ್ಕೇ ನಿಲ್ಲದೆ ಮುಸ್ಲಿಮರು ಮತ್ತು ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ದ್ವೇಷವನ್ನು ಹುಟ್ಟುಹಾಕಿತು.

ಮೊದಲ ಬಾರಿಗೆ ಪಟೇಲ್  ರಿಂದ ಆರ್‌ಎಸ್‌ಎಸ್‌ ನಿಷೇಧ

ಮಹಾತ್ಮ ಗಾಂಧಿಯವರನ್ನು ಆರೆಸ್ಸೆಎಸ್ ಸದಸ್ಯನಾಗಿದ್ದ ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ ಮೂರು ದಿನಗಳ ನಂತರ, ಫೆಬ್ರವರಿ 4, 1948 ರಂದು ಭಾರತದ ಮೊದಲ ಉಪಪ್ರಧಾನಿ ಮತ್ತು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರ್‌ಎಸ್‌ಎಸ್‌ ಅನ್ನು ಮೊದಲ ಬಾರಿಗೆ ನಿಷೇಧಿಸಿದರು. ಭಾರತ ಸರ್ಕಾರವು ಫೆಬ್ರವರಿ 2, 1948 ರ ತನ್ನ ನಿರ್ಣಯದಲ್ಲಿ, “ನಮ್ಮ ದೇಶದಲ್ಲಿ ಕೆಲಸ ಮಾಡುತ್ತಿರುವ ದ್ವೇಷ ಮತ್ತು ಹಿಂಸಾಚಾರವು ರಾಷ್ಟ್ರದ ಸ್ವಾತಂತ್ರ್ಯವನ್ನು ಹಾಳುಮಾಡುವ ಮತ್ತು ಭಾರತದ ನ್ಯಾಯಯುತ ಹೆಸರನ್ನು ಕತ್ತಲೆಗೊಳಿಸುವ ಶಕ್ತಿಗಳನ್ನು ಬೇರುಸಹಿತ ಕಿತ್ತೊಗೆಯಲು ಸಂಕಲ್ಪ ಮಾಡುತ್ತದೆ” ಎಂದು ಘೋಷಿಸಿತು

ಆರ್‌ಎಸ್‌ಎಸ್‌ ಹಿಂದೂ ಮಹಾಸಭಾದ “ಉಗ್ರವಾದಿ ವಿಭಾಗ” ಎಂದು ನಂಬಿದ್ದ ಪಟೇಲ್ ಅವರು “ಸರ್ಕಾರ ಮತ್ತು ಪ್ರಭುತ್ವದ ಅಸ್ತಿತ್ವಕ್ಕೆ ಸ್ಪಷ್ಟ ಬೆದರಿಕೆಯನ್ನು ರಚಿಸಿದ್ದಾರೆ…” ಎಂದಿದ್ದರು. ನಂತರ ಸೆಪ್ಟೆಂಬರ್ ತಿಂಗಳಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಎಂ.ಎಸ್.ಗೋಲ್ವಾಲ್ಕರ್ ಅವರಿಗೆ ಬರೆದ ಪತ್ರದಲ್ಲಿ, ಆರ್‌ಎಸ್‌ಎಸ್‌ ಕಾರ್ಯಕರ್ತರು ಮತ್ತು ನಾಯಕರ ಭಾಷಣಗಳು “ಕೋಮು ವಿಷದಿಂದ ತುಂಬಿವೆ”, ಅದಕ್ಕಾಗಿಯೇ ಗಾಂಧಿ ಕೊಲ್ಲಲ್ಪಟ್ಟರು ಎಂದು ಬರೆದಿದ್ದರು

ಒಂದು ವರ್ಷದ ನಂತರ, ಜುಲೈ 11, 1949 ರಂದು, ಗೋಲ್ವಾಲ್ಕರ್ ಅವರು ಸಂವಿಧಾನ ಮತ್ತು ರಾಷ್ಟ್ರಧ್ವಜಕ್ಕೆ ನಿಷ್ಠರಾಗಿರಲು ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿ ಉಳಿಯಲು ಅದರ ರಾಜಕೀಯ ಕೆಲಸವನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ ನಂತರ RSS ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು.

ಜುಲೈ 18, 1948 ರಂದು ಪಟೇಲ್ ಹಿಂದೂ ಮಹಾಸಭಾದ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಬರೆದ ಪತ್ರದಲ್ಲಿ, “ಹಿಂದೂ ಮಹಾಸಭಾದ ತೀವ್ರವಾದಿ ವಿಭಾಗವು [ಗಾಂಧಿ ಕೊಲ್ಲುವ] ಪಿತೂರಿಯಲ್ಲಿ ಭಾಗಿಯಾಗಿದೆ ಎಂಬುದರಲ್ಲಿ ನನ್ನ ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲ. ಆರ್‌ಎಸ್‌ಎಸ್‌  ಚಟುವಟಿಕೆಗಳು ಸರ್ಕಾರ ಮತ್ತು ರಾಜ್ಯದ ಅಸ್ತಿತ್ವಕ್ಕೆ ಸ್ಪಷ್ಟ ಅಪಾಯವನ್ನುಂಟುಮಾಡಿವೆ. ನಿಷೇಧದ ಹೊರತಾಗಿಯೂ ಆ ಚಟುವಟಿಕೆಗಳು ಕಡಿಮೆಯಾಗಿಲ್ಲ ಎಂದು ನಮ್ಮ ವರದಿಗಳು ತೋರಿಸುತ್ತವೆ. ವಾಸ್ತವವಾಗಿ, ಸಮಯ ಕಳೆದಂತೆ, ಆರ್‌ಎಸ್‌ಎಸ್‌  ವಲಯಗಳು ಹೆಚ್ಚು ಧಿಕ್ಕರಿಸುತ್ತಿವೆ ಮತ್ತು ಹೆಚ್ಚುತ್ತಿರುವ ಕ್ರಮದಲ್ಲಿ ತಮ್ಮ ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿವೆ.” ಎಂದು ಆರೋಪಿಸಿದರು.

ಸಮಾಜಕ್ಕೆ ದೊಡ್ಡ ಅಪಾಯ ಎದುರಾಗಲಿದೆ

ಮೋದಿ ಸರ್ಕಾರದ ಇಂದಿನ ನಿರ್ಧಾರದಿಂದಾಗಿ ಜಾತಿ, ಧರ್ಮದ ಭೇದ ಮರೆತು ತಟಸ್ಥವಾಗಿ ಕಾರ್ಯನಿರ್ವಹಿಸಬೇಕಾದ ಸರಕಾರಿ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಬಹಿರಂಗವಾಗಿ ತೊಡಗಲು ಅನುಕೂಲವಾಗಿದೆ. ಸರ್ಕಾರಿ ನೌಕರರು ಧಾರ್ಮಿಕ ಪ್ರಜ್ಞೆ ಮತ್ತು ಧಾರ್ಮಿಕ ತಾರತಮ್ಯದಿಂದ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ಸರ್ಕಾರಿ ಯಂತ್ರವನ್ನು ಹಿಂದುತ್ವ ಮಾಡುವ ಉದ್ದೇಶದಿಂದ ಮೋದಿ ಸರ್ಕಾರ ಇಂತಹ ಕ್ರಮ ಕೈಗೊಂಡಿದೆ. ಆ ಮೂಲಕ ಆರ್‌ಎಸ್‌ಎಸ್‌ ನ ಪ್ರಮುಖ ಗುರಿಯಾದ ‘ಹಿಂದೂ ರಾಷ್ಟ್ರ’ ನಿರ್ಮಾಣದ ಗುರಿಯ ಕಡೆಗೆ ಹೆಜ್ಜೆ ಹಾಕತೊಡಗಿದೆ.

ಸಂವಿಧಾನದತ್ತವಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು ಧಾರ್ಮಿಕ ಸಿದ್ಧಾಂತದ ಮೂಲಕ ನಡೆಯುವ ಆರ್‌ಎಸ್‌ ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಅದು ದೇಶಕ್ಕೆ ಅತ್ಯಂತ ಅಪಾಯಕಾರಿ. ಇದು ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾದುದಾಗಿದೆ. ಇದನ್ನು ಎದುರಿಸಲು ಎಡ, ಪ್ರಜಾಸತ್ತಾತ್ಮಕ ಮತ್ತು ಜಾತ್ಯಾತೀತ ಶಕ್ತಿಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಪಣತೊಡಬೇಕಿದೆ.

ಸಂವಿಧಾನದತ್ತವಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು ಧಾರ್ಮಿಕ ಸಿದ್ಧಾಂತದ ಮೂಲಕ ನಡೆಯುವ ಆರ್‌ ಎಸ್‌ ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಅದು ದೇಶಕ್ಕೆ ಅತ್ಯಂತ ಅಪಾಯಕಾರಿ.

ದ್ವೇಷ ಮತ್ತು ಹಿಂಸಾಚಾರದ ಮೂಲಕ ರಾಷ್ಟ್ರದ ಸ್ವಾತಂತ್ರ್ಯವನ್ನು ಹಾಳುಮಾಡುವ

ಗೃಹ ವ್ಯವಹಾರಗಳ ಸಚಿವಾಲಯದ ದಾಖಲೆಗಳಲ್ಲಿ ಲಭ್ಯವಿರುವ ಸಂವಹನದ ಕೆಲವು ಅಂಶಗಳು ಹೀಗಿವೆ:

ಫೆಬ್ರವರಿ 2, 1948 ರ ಅವರ ನಿರ್ಣಯದಲ್ಲಿ, ಭಾರತ ಸರ್ಕಾರವು “ನಮ್ಮ ದೇಶದಲ್ಲಿ ಕೆಲಸ ಮಾಡುತ್ತಿರುವ ದ್ವೇಷ ಮತ್ತು ಹಿಂಸಾಚಾರದ ಮೂಲಕ ರಾಷ್ಟ್ರದ ಸ್ವಾತಂತ್ರ್ಯವನ್ನು ಹಾಳುಮಾಡುವ ಮತ್ತು ಭಾರತದ ನ್ಯಾಯಯುತ ಹೆಸರನ್ನು ಹಾಳುಮಾಡುವ ಶಕ್ತಿಗಳನ್ನು ಬೇರುಸಹಿತ ಕಿತ್ತೊಗೆಯಲು ಸಂಕಲ್ಪವನ್ನು ಘೋಷಿಸಿತು. ಈ ನೀತಿಯ ಅನುಸಾರವಾಗಿ ಭಾರತ ಸರ್ಕಾರವು ಮುಖ್ಯ ಆಯುಕ್ತರ ಪ್ರಾಂತ್ಯಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕಾನೂನುಬಾಹಿರವೆಂದು ಘೋಷಿಸಲು ನಿರ್ಧರಿಸಿದೆ. ರಾಜ್ಯಪಾಲರ ಪ್ರಾಂತ್ಯಗಳಲ್ಲಿಯೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ.

ಅನಪೇಕ್ಷಿತ ಮತ್ತು ಅಪಾಯಕಾರಿ ಚಟುವಟಿಕೆಗಳನ್ನು ಸಂಘದ ಸದಸ್ಯರು ನಡೆಸುತ್ತಿದ್ದಾರೆ. ದೇಶದ ಹಲವಾರು ಭಾಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವೈಯಕ್ತಿಕ ಸದಸ್ಯರು ಬೆಂಕಿ ಹಚ್ಚುವಿಕೆ, ದರೋಡೆ, ಡಕಾಯಿತಿ ಮತ್ತು ಕೊಲೆಗಳನ್ನು ಒಳಗೊಂಡ ಹಿಂಸಾಚಾರದಲ್ಲಿ ತೊಡಗಿದ್ದಾರೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದಾರೆ ಎಂದು ಕಂಡುಬಂದಿದೆ. ಭಯೋತ್ಪಾದಕ ವಿಧಾನಗಳನ್ನು ಆಶ್ರಯಿಸಲು, ಬಂದೂಕುಗಳನ್ನು ಸಂಗ್ರಹಿಸಲು, ಸರ್ಕಾರದ ವಿರುದ್ಧ ಅಸಮಾಧಾನವನ್ನು ಸೃಷ್ಟಿಸಲು ಮತ್ತು ಪೋಲೀಸ್ ಮತ್ತು ಮಿಲಿಟರಿಯನ್ನು ವಶಪಡಿಸಿಕೊಳ್ಳಲು ಜನರನ್ನು ಉತ್ತೇಜಿಸುವ ಕರಪತ್ರಗಳನ್ನು ಅವರು ಪ್ರಸಾರ ಮಾಡುತ್ತಿರುವುದು ಕಂಡುಬಂದಿದೆ. ಈ ಚಟುವಟಿಕೆಗಳನ್ನು ಗೌಪ್ಯತೆಯ ಹೊದಿಕೆಯಡಿಯಲ್ಲಿ ನಡೆಸಲಾಗಿದೆ ಮತ್ತು ಸಂಘವನ್ನು ತನ್ನ ಸಾಂಸ್ಥಿಕ ಸಾಮರ್ಥ್ಯದಲ್ಲಿ ವ್ಯವಹರಿಸಲು ಈ ಚಟುವಟಿಕೆಗಳು ಎಷ್ಟು ಹೊಣೆಗಾರಿಕೆಯನ್ನು ನೀಡುತ್ತವೆ ಎಂಬುದನ್ನು ಸರ್ಕಾರವು ಕಾಲಕಾಲಕ್ಕೆ ಪರಿಗಣಿಸಿದೆ.

ಸಂಘದ ಆಕ್ಷೇಪಾರ್ಹ ಮತ್ತು ಹಾನಿಕಾರಕ ಚಟುವಟಿಕೆಗಳು ನಿರಂತರವಾಗಿ ಮುಂದುವರೆದಿವೆ ಮತ್ತು ಸಂಘದ ಚಟುವಟಿಕೆಗಳಿಂದ ಪ್ರಾಯೋಜಿತ ಮತ್ತು ಪ್ರೇರಿತವಾದ ಹಿಂಸಾಚಾರದ ಆರಾಧನೆಯು ಅನೇಕ ಬಲಿಪಶುಗಳನ್ನು ಹೊಂದಿದೆ. ಇತ್ತೀಚಿನ ಮತ್ತು ಅತ್ಯಂತ ಅಮೂಲ್ಯವಾದದ್ದು ಗಾಂಧೀಜಿಯೇ.

ಈ ಪರಿಸ್ಥಿತಿಯಲ್ಲಿ ಉಗ್ರ ಸ್ವರೂಪದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವ ಹಿಂಸಾಚಾರವನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಬದ್ಧ ಕರ್ತವ್ಯವಾಗಿದೆ ಮತ್ತು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸಂಘವನ್ನು ಕಾನೂನುಬಾಹಿರ ಸಂಘವೆಂದು ಘೋಷಿಸಲು ನಿರ್ಧರಿಸಿದೆ….”

ಇದನ್ನೂ ನೋಡಿ: ವಯನಾಡ್​​ ಭೂಕುಸಿತ : ‘ಪುಟ್ಟ ಮಕ್ಕಳಿಗೆ ಎದೆಹಾಲು ಬೇಕಿದ್ದರೆ ತಿಳಿಸಿʼ | Janashakthi Media |wayanad landslide

Donate Janashakthi Media

Leave a Reply

Your email address will not be published. Required fields are marked *