ಗಡಿಯಲ್ಲಿ ವೀರ; ಹಿಂದುತ್ವದ ಹಳ್ಳಿಯಲ್ಲಿ ‘ಅಸ್ಪೃಶ್ಯ’ — ಸಾವಿನಲ್ಲೂ ಜಾತಿಯ ಕ್ರೌರ್ಯ!

ಬಾಗಲಕೋಟೆ :ದೇಶಕ್ಕಾಗಿ ಸೈನಿಕನಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ವ್ಯಕ್ತಿಗೆ, ದಲಿತ ಎಂಬ ಕಾರಣಕ್ಕಾಗಿ ಸಮಾನ ಗೌರವ ನೀಡದ ಅಮಾನವೀಯ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಮಾಜಿ ಸೈನಿಕ ಹನುಮಂತಪ್ಪ ಹರಿಜನ ಅವರ ಅಂತ್ಯಕ್ರಿಯೆಯ ವೇಳೆ ನಡೆದಿದೆ. ಸಾವಿನಲ್ಲೂ ಅಸ್ಪೃಶ್ಯತೆ ಆಚರಣೆ ನಡೆದಿದೆ ಎಂದರೆ ನಾವು ಎಂತಹ ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ? ರಾಷ್ಟ್ರಭಕ್ತಿ, ಸಂಸ್ಕೃತಿ, ಹಿಂದೂ ಏಕತೆ ಎಂಬ ಘೋಷಣೆಗಳನ್ನು ಕೂಗುವ ಮತೀಯವಾದಿಗಳೇ ಸೈನಿಕನನ್ನು ಅವಮಾನಿಸಿದ್ದು ದೇಶದ್ರೋಹವಲ್ಲದೆ ಇನ್ನೇನು? ಆ ರಾಷ್ಟ್ರಭಕ್ತಿಯ ಅರ್ಥವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಹನುಮಂತಪ್ಪ ಹರಿಜನ (55) ಅವರು ಸಣ್ಣ ವಯಸ್ಸಿನಲ್ಲೇ ದೇಶದ ಸೇನೆಗೆ ಸೇರಿ ಬರೋಬ್ಬರಿ 20 ವರ್ಷಗಳ ಕಾಲ ಗಡಿಯಲ್ಲಿ ಸೇವೆ ಸಲ್ಲಿಸಿದ್ದರು. ಸೈನಿಕನಿಗೆ ದೇಶದ ಭದ್ರತೆಯೇ ಮೊದಲ ಆದ್ಯತೆಯಾಗಿತ್ತು. ಆದರೆ, ಅವರು ನಿಧನರಾದಾಗ ಅವರ ದೇಹಕ್ಕೆ ಸಲ್ಲಿಸಬೇಕಾದ ಕನಿಷ್ಠ ಗೌರವವನ್ನು ನೀಡುವಲ್ಲಿ ಗ್ರಾಮದ ಒಂದು ವರ್ಗದ ಜನರು ವಿಫಲರಾಗಿದ್ದಾರೆ. ಮೃತ ಸೈನಿಕ ‘ದಲಿತ’ ಎಂಬ ಒಂದೇ ಕಾರಣಕ್ಕೆ ಇಡೀ ಗ್ರಾಮದ ಹೋಟೆಲ್‌ಗಳು ಮತ್ತು ಅಂಗಡಿಗಳನ್ನು ಮುಚ್ಚಿದ್ದು ಯಾವ ನ್ಯಾಯ?

ಅಂತ್ಯಕ್ರಿಯೆಗೆ ಬಂದಿದ್ದ ನೂರಾರು ಜನರಿಗೆ ಕುಡಿಯಲು ನೀರು ಸಿಗದಂತೆ, ಹಸಿವಾದಾಗ ತುತ್ತು ಅನ್ನ ಸಿಗದಂತೆ ಅಂಗಡಿಗಳ ಬಾಗಿಲು ಹಾಕಿದ್ದು ಜಾತೀಯತೆಯ ಅಟ್ಟಹಾಸವಲ್ಲದೆ ಮತ್ತೇನು? ದೇಶ ಕಾಯ್ದ ಮಗನಿಗೆ ಅಂತಿಮ ನಮನ ಸಲ್ಲಿಸಲು ಬಂದ ಬಂಧು-ಮಿತ್ರರಿಗೆ ಈ ರೀತಿ ಅವಮಾನ ಮಾಡುವುದು ನಾಗರಿಕ ಪ್ರಪಂಚ ತಲೆತಗ್ಗಿಸುವಂತಹ ಸಂಗತಿಯಾಗಿದೆ.

ದಲಿತರು ಅಂತ್ಯಕ್ರಿಯೆಗೆ ಬರುತ್ತಾರೆ, ಅವರು ತಮ್ಮ ಅಂಗಡಿಗೆ ಬಂದರೆ ಅಥವಾ ಹೋಟೆಲ್‌ಗೆ ಬಂದರೆ ‘ಮೈಲಿಗೆ’ಯಾಗುತ್ತದೆ ಎಂಬ ಕೊಳಕು ಮನಸ್ಥಿತಿ ಇನ್ನೂ ಕೆಲವು ಜನರ ತಲೆಯಲ್ಲಿ ಮನೆಮಾಡಿದೆ. ಮಾಜಿ ಸೈನಿಕನ ಅಂತ್ಯಕ್ರಿಯೆಯ ಸಮಯದಲ್ಲಿ ಅಂಗಡಿಗಳನ್ನು ಬಂದ್ ಮಾಡಿರುವುದು ಕೇವಲ ಪ್ರತಿಭಟನೆಯಲ್ಲ, ಅದು ಅಸ್ಪೃಶ್ಯತೆಯ ಕ್ರೂರ ರೂಪ.

ಘಟನೆ ನಡೆದ ನಂತರ ಇಳಕಲ್ ತಹಸೀಲ್ದಾರ್ ಅಮರೇಶ್ ಪಮ್ಮಾರ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾರ್ಚ್ 2 ರಂದು ಶಾಂತಿ ಸಭೆ ಕರೆಯಲಾಗಿದೆ. ಆದರೆ ಪ್ರಶ್ನೆ ಇರುವುದು ಇಷ್ಟೇ, ಪ್ರತಿ ಬಾರಿ ಇಂತಹ ಘಟನೆಗಳು ನಡೆದಾಗ ಶಾಂತಿ ಸಭೆ ನಡೆಸಿದರೆ ಅಸ್ಪೃಶ್ಯತೆ ತೊಲಗುತ್ತದೆಯೇ? ಸಂವಿಧಾನ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ಆಡಳಿತ ವ್ಯವಸ್ಥೆ ಏಕೆ ಹಿಂದೆ ಸರಿಯುತ್ತಿದೆ? ಶಾಂತಿ ಸಭೆಗಳು ಕೇವಲ ಸಾಂತ್ವನಕ್ಕೆ ಸೀಮಿತವಾಗಬಾರದು, ಬದಲಿಗೆ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಜನಪರ ಸಂಘಟನೆಗಳು ಆಗ್ರಹಿಸಿವೆ.

 

 

Donate Janashakthi Media

Leave a Reply

Your email address will not be published. Required fields are marked *