ಬೆಂಗಳೂರು: ಇದೀಗ ರಾಜಧಾನಿ ಬೆಂಗಳೂರಿನಲ್ಲೂ ಯಾದಗಿರಿಯಲ್ಲಿ ನಡೆದಂತೆ ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಅ.29 ಭಾನುವಾರ ಬೆಂಗಳೂರಿನಲ್ಲಿ ನಡೆದ ಕೆಇಎ ಎಸ್‌ಡಿಎ ಪರೀಕ್ಷೆ ಮತ್ತು ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ ಕಾಲೇಜು ಡಿಗ್ರಿ ಬ್ಲಾಕ್ ನಲ್ಲಿ ಎಸ್ ಡಿ ಎ ಪರೀಕ್ಷೆ ನಡೆಯುವ ವೇಳೆ ಹಾಲ್‌ನಲ್ಲಿ ಹಾಕಲಾಗಿದ್ದ ಸಿಸಿ ಕ್ಯಾಮೆರಾ ಮುಚ್ಚಲಾಗಿದ್ದು, ಅಭ್ಯರ್ಥಿಗಳಿಗೆ ಪರೀಕ್ಷಾ ಅಕ್ರಮಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಿಸಿ ಕ್ಯಾಮೆರಾ ಮುಚ್ಚಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಕ್ಕೆ ಸಿಸಿ ಕ್ಯಾಮೆರಾ ಹಾಳಾಗಿದೆ ಎಂದು ಕಾಲೇಜು ಸಿಬ್ಬಂದಿ ಉತ್ತರಿಸಿದ್ದಾರೆ. ವಿವಿಧ ಇಲಾಖೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯುವಾಗ ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ಸಿಸಿಟಿವಿ ಕ್ಯಾಮೆರಾ ಇರಲೇಬೇಕು. ಪರೀಕ್ಷೆ ನಡೆಯುವ ಕೊಠಡಿಯಲ್ಲಿ ಸಿಸಿಟಿವಿ ಹಾಳಾಗಿರುವುದು ಮೊದಲೇ ಪರೀಕ್ಷಿಸಲಿಲ್ಲವೇಕೆ ಎಂಬುದು ಪ್ರಶ್ನೆ ಕೇಳಿಬಂದಿದ್ದು, ಪರೀಕ್ಷಾ ಅಕ್ರಮ ನಡೆದಿದೆ ಎಂದೇ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ನಿಗಮ ಮಂಡಳಿಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿದೆ. ಕಲಬುರಗಿ, ಯಾದಗಿರಿಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿದ ಬೆನ್ನಲ್ಲೇ ಇದೀಗ ಬೆಂಗಳೂರಿನ ಜ್ಯೋತಿ ನಿವಾಸ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ.