ಎಲ್ಲರ ಕಣ್ಣು ಲೋಕಸಭಾ ಸ್ಪೀಕರ್ ಮೇಲೆ!

-ಗುರುರಾಜ ದೇಸಾಯಿ

3ನೇ ಅವಧಿಯ‌ ಎನ್‌ಡಿಎ ಸರ್ಕಾರದಲ್ಲಿ ಲೋಕಸಭಾ ಸ್ಪೀಕರ್ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಕೇಳಿ ಬರುತ್ತಿವೆ. ಜಿಸ್ಕಾ ಸ್ಪೀಕರ್, ಉಸ್ಕಿ ಸರ್ಕಾರ್’ ಎಂದು ಹೇಳಲಾಗುತ್ತದೆ. ಹಾಗಾಗಿ ಎಲ್ಲರ ಕಣ್ಣು ಲೋಕಸಭಾ ಸ್ಪೀಕರ್ ಮೇಲೆ ನೆಟ್ಟಿದೆ. ಕಣ್ಣು

ಜೂನ್ 24ರಿಂದ ಪ್ರಾರಂಭವಾಗುವ 18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಮುಂಚಿತವಾಗಿ, ಸ್ಪೀಕರ್ ಆಯ್ಕೆ ಕುರಿತು ಎನ್ಡಿಎ ಮಿತ್ರಪಕ್ಷಗಳ ನಿರ್ಣಾಯಕ ಸಭೆ ಈ ವಾರ ನಡೆಯಲಿದೆ. ಜೂನ್ 26ಕ್ಕೆ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ. ಲೋಕಸಭಾ ಸ್ಪೀಕರ್ ಹುದ್ದೆ ವಿಚಾರ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕಣ್ಣು

ಯಾಕೆ ಸ್ಪಿಕರ್ ಹುದ್ದೆಯ ಮೇಲೆ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷ ಟಿಡಿಪಿ ಹಾಗೂ ಜೆಡಿಯು ಪಟ್ಟು ಹಿಡಿದಿದೆ ಎಂಬುದು ಪ್ರಮುಖವಾದ ವಿಚಾರ. ಈ ಚರ್ಚೆ ಏಳೋದಕ್ಕೆ ಕಾರಣ ಇದೆ. ಆ ಕಾರಣ ಏನು ಅಂದ್ರೆ 1999ರಲ್ಲಿ ನಡೆದ ಘಟನೆ. ಆ ಘಟನೆ ಏನು ಅನ್ನೊದನ್ನ ನೋಡೋಣ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಸಿಎಂ ಸಿದ್ದರಾಮಯ್ಯ ಯೋಗಭ್ಯಾಸ

ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಸ್ಪೀಕರ್ ಹುದ್ದೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಯಾಕೆ ಅಂದ್ರೆ, 1999 ರಲ್ಲಿ ಸ್ಪೀಕರ್ ನಿರ್ಧಾರದಿಂದಾಗಿ ವಾಜಪೇಯಿ ಸರ್ಕಾರ ಹೇಗೆ ಪತನಗೊಂಡಿತು ಎಂಬುದರ ಮೂಲಕ ಈ ಹುದ್ದೆ ನಿರ್ಣಾಯಕವಾಗಿದೆ. 1999 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಲೋಕಸಭೆಯಲ್ಲಿ ವಿಶ್ವಾಸ ನಿರ್ಣಯವನ್ನು ಕಳೆದುಕೊಂಡ ನಂತರ ಪತನವಾಯಿತು, ಹಲವಾರು ಇತರ ಪಕ್ಷದ ನಾಯಕರ ಬೆಂಬಲದ ಭರವಸೆಯ ಹೊರತಾಗಿಯೂ. ಕೇವಲ ಒಂದು ಮತವು ವಾಜಪೇಯಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸಿತು ಮತ್ತು ಲೋಕಸಭೆಯ ಸ್ಪೀಕರ್ರವರ ಅಧಿಕಾರವನ್ನು ಎತ್ತಿ ತೋರಿಸಿತು. ಇದು ಸಭಾಧ್ಯಕ್ಷರ ಮತವಲ್ಲ, ಆದರೆ ಅವರ ನಿರ್ಧಾರವು ಸರ್ಕಾರದ ಕುಸಿತಕ್ಕೆ ಕಾರಣವಾಯಿತು.

1999ರಲ್ಲಿ ಅಟಲ್ ಬಿಹಾರ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬಿಜೆಪಿಯ ಬಲ ತೀರಾ ಕಡಿಮೆಯಿದ್ದರೂ ಇದೇ ಪರಿಸ್ಥಿತಿ ಇತ್ತು. ಆಗ ಸ್ಪೀಕರ್ ಪಾತ್ರ ನಿರ್ಣಾಯಕವಾಯಿತು. ಒಡಿಶಾ ಕಾಂಗ್ರೆಸ್ ನಾಯಕ ಗಿರಿಧರ್ ಗಮಾಂಗ್ ಅವರು ಚಲಾಯಿಸಿದ ಒಂದೇ ಒಂದು ಮತ ಸರ್ಕಾರ ಪತನಕ್ಕೆ ಕಾರಣವಾಯಿತು.

ಗಿರಿಧರ್ ಸಿಂಗ್ ಅವರು, 1999ರಲ್ಲಿ ಒಡಿಶಾದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದರು, ಆದರೆ ಇನ್ನೂ ಸಂಸತ್ತಿನ ಸದಸ್ಯರಾಗಿದ್ದರು, ಅಂದರೆ ಅವರು ಮೊದಲು ಸಂಸದರಾಗಿದ್ದರು, ನಂತರ ಮುಖ್ಯಮಂತ್ರಿಯಾದರು, 6 ತಿಂಗಳ ಕಾಲಾವಕಾಶ ಇದ್ದ ಕಾರಣ ಅವರು ಸಂಸತ್ತಿಗೆ ರಾಜೀನಾಮೆ ನಿಡಿರಲಿಲ್ಲ. ಅದೇ ವೇಳೆ ರಚನೆಗೊಂಡಿದ್ದ ವಾಜಪೇಯಿ ಸರ್ಕಾರ 13 ನೇ ದಿನಕ್ಕೆ ವಿಶ್ವಾಸಮತ ಯಾಚಿಸಲು ಮುಂದಾಗಿತ್ತು. ತೆಲುಗು ದೇಶಂ ಪಕ್ಷದಿಂದ ಲೋಕಸಭಾ ಸ್ಪೀಕರ್ ಆಗಿದ್ದ ಜಿಎಂಸಿ ಬಾಲಯೋಗಿ ಅವರು ಗಮಾಂಗ್ ಅವರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟರು.

ವಿಶ್ವಾಸಮತ ಯಾಚನೆಯ ನಂತರ ಅಂತಿಮವಾಗಿ ಎನ್ಡಿಎಗೆ 269 ಮತ್ತು ಅದರ ವಿರುದ್ಧ 270 ಮತಗಳು ಬಿದ್ದವು. ಒಂದೇ ಒಂದು ಮತ ಸರ್ಕಾರವನ್ನು ವಜಾಗೊಳಿಸಲು ಕಾರಣವಾಯಿತು. ಗಮನಿಸಬೇಕಾದ ಸಂಗತಿಯೆಂದರೆ,ಸ್ಪೀಕರ್ ಅವರ ನಿರ್ಧಾರ ಮತ್ತು ವಿವೇಚನಾ ಶಕ್ತಿಯು ಲೋಕಸಭೆಯಲ್ಲಿ ವಿಶ್ವಾಸ ಮತವನ್ನು ಕಳೆದುಕೊಳ್ಳುವಂತಾಯಿತು. ಈಗಾಗಲೆ ಇದರಿಂದ ಪಾಠ ಕಲಿತಿರುವ ಬಿಜೆಪಿ ನಿರ್ಣಾಯಕ ಸ್ಪೀಕರ್ ಸ್ಥಾನವನ್ನು ಬಿಟ್ಟುಕೊಡುತ್ತದೆಯೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಪಕ್ಷಗಳು ಈ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಅಧಿಕಾರ ಮತ್ತೆ ಜನರ ಮನದಲ್ಲಿ ಮೂಡಿದೆ. ಎನ್ಡಿಎ ಎರಡನೇ ಅತಿದೊಡ್ಡ ಘಟಕವಾದ ತೆಲುಗು ದೇಶಂ ಪಕ್ಷ (ಟಿಡಿಪಿ) ಸ್ಪೀಕರ್ ಹುದ್ದೆಯನ್ನು ಕೋರಿದೆ ಎಂಬ ಚರ್ಚೆಗಳು ಕೇಳಿ ಬರ್ತಾಇವೆ. ಪ್ರಾಸಂಗಿಕವಾಗಿ, 1999 ರಲ್ಲಿ ವಾಜಪೇಯಿ ಸರ್ಕಾರದ ಪತನಕ್ಕೆ ಪ್ರಮುಖ ಪಾತ್ರ ವಹಿಸಿದವರು ಟಿಡಿಪಿಯ ಸ್ಪೀಕರ್. ಪ್ರಧಾನಿ ನರೇಂದ್ರ ಮೋದಿ ಅವರು 71 ಸಚಿವರೊಂದಿಗೆ ಸತತ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಖಾತೆಗಳನ್ನೂ ಹಂಚಿಕೆ ಮಾಡಲಾಗಿದೆ. ಲೋಕಸಭೆಯ ಸ್ಪೀಕರ್ ಹುದ್ದೆ ಯಾರಿಗೆ ಎಂಬುದು ಈಗ ಸಸ್ಪೆನ್ಸ್ ವಿಚಾರವಾಗಿದೆ.

ಮೈತ್ರಿಕೂಟದ ಬೆಂಬಲದೊಂದಿಗೆ ಸರ್ಕಾರ ನಡೆಸಬೇಕಾದ ಬಿಜೆಪಿಗೆ ಸ್ಪೀಕರ್ ಹುದ್ದೆ ಹೆಚ್ಚು ನಿರ್ಣಾಯಕವಾಗುತ್ತದೆ.2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳಲ್ಲಿ ಗೆಲುವು ಪಡೆಯಿತು. ಆದರೆ ಬಹುಮತಕ್ಕೆ ಬೇಕಾದ 272 ಸ್ಥಾನಗಳು ಸಿಗದ ಕಾರಣ ಮಿತ್ರಪಕ್ಷಗಳ ಸಹಾಯದೊಂದಿಗೆ ಸರ್ಕಾರ ರಚನೆ ಮಾಡಿದೆ. ಆಬ್ಕಿ ಬಾರ್ ಚಾರ್ಸೌ ಪಾರ್ ಎಂದಿದ್ದ ಬಿಜೆಪಿಯ ದುರಹಾಂಕರಕ್ಕೆ ಮತದಾರರು ಬಹುಮತ ಸಿಗದಂತೆ ಮಾಡಿದ್ದನ್ನ ನೆನಪಿಸಿಕೊಳ್ಳಬೇಕು.

ನರೇಂದ್ರ ಮೋದಿ ಹಾಗೂ ಅವರ ಮಂತ್ರಿಮಂಡಲದ ಪ್ರಮಾಣ ವಚನದ ನಂತರ, ವಿವಿಧ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವುದು ದೊಡ್ಡ ತೊಡಕಾಗಬಹುದು ಎಂದು ವಿಶ್ಲೇಷಿಸಲಾಗಿತ್ತು. ಅಮಿತ್ ಶಾ ಅವರಿಗೆ ಗೃಹಖಾತೆಯನ್ನು ನೀಡಬಾರದು ಎಂದು ಟಿಡಿಪಿ ಹಾಗೂ ಜೆಡಿಯು ಪಟ್ಟು ಹಿಡಿದಿದ್ದವು. ಈ ಎಲ್ಲಾ ಸಮಸ್ಯೆಗಳನ್ನು ಮೇಲ್ನೊಟಕ್ಕೆ ಬಿಜೆಪಿ ಸುಲಭವಾಗಿ ಪರಿಹರಿಸಿಕೊಂಡಂತೆ ಕಾಣುತ್ತಿದೆ. ಇದು ಬೂದಿ ಮುಚ್ಚಿದ ಕೆಂಡ ಯಾವಾಗ ಬೇಕಾದರೂ ಕಿಡಿ ಹತ್ತಿಕೊಳ್ಳಬಹುದು ಎಂದು ಹೇಳಲಾಗುತ್ತದೆ.

ಟಿಡಿಪಿಯ 16 ಸಂಸದರು ಮತ್ತು ಜೆಡಿಯು 12 ಸಂಸದರನ್ನು ಒಳಗೊಂಡ ಸರ್ಕಾರ ರಚನೆಯಾಗಿದೆ. ಎರಡು ಪಕ್ಷಗಳು ಹಕ್ಕು ಚಲಾಯಿಸಿರುವುದರಿಂದ ಬಿಜೆಪಿ ಲೋಕಸಭೆಯಲ್ಲಿ ಅವರಿಗೆ ಅವರದ್ದೆ ಆದ ಸ್ಥಾನಗಳನ್ನು ಬಿಟ್ಟುಕೊಡಬೇಕಿದೆ. ಸದ್ಯಕ್ಕೆ ಟಿಡಿಪಿ ಸ್ಪೀಕರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ ಎಂದು ವರದಿಯಾಗಿದೆ. ಟಿಡಿಪಿ ಸ್ಪರ್ದೆ ಮಾಡಿದರೆ ಇಂಡಿಯಾ ಕೂಟ ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಉದ್ದವಠಾಕ್ರೆ ಬಣದ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ನೀವು ಲೋಕಸಭೆಯಲ್ಲಿ ಉನ್ನತ ಸ್ಥಾನಗಳನ್ನು ಪಡೆಯಬೇಕು ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿಯಾಗಿದೆ. ಜೆಡಿಯು ಉನ್ನತ ಸ್ಥಾನದ ಮೇಲೆ ತನ್ನ ಹಕ್ಕು ಸಾಧಿಸಲು ಸಲಹೆ ನೀಡಿದರು.ಹಾಗಾಗಿ ಜೆಡಿಯೂ ಲೋಕಸಭಾ ಡೆಪ್ಯೂಟ್ ಸ್ಪಿಕರ್ ಮೇಲೆ ಕಣ್ಣಿಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಇದೆಲ್ಲವನ್ನೂ ಸೂಕ್ಷವಾಗಿ ಗಮನಿಸುತ್ತಿರುವ ಇಂಡಿಯಾ ಕೂಟವು ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಸ್ಪರ್ದಿಸುವ ಸಾದ್ಯತೆ ಇದು ಎಂದು ಹೇಳಲಾಗುತ್ತಿದೆ.

ಇತ್ತಿಚೆಗೆ ಮಹಾರಾಷ್ಟ್ರದಲ್ಲಿ ಜನವರಿ 2024ರಲ್ಲಿ ಸ್ಪೀಕರ್ ರಾಹುಲ್ ನಾರ್ವೇಕರ್ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ‘ನೈಜ’ ಶಿವಸೇನೆ ಪಕ್ಷದ ಸ್ಥಾನಮಾನ ನೀಡಿರುವುದು. ಶಿಂಧೆ ನೇತೃತ್ವದ ಶಾಸಕರ ಬಣವು ಜೂನ್ 2022ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ತಿರುಗಿಬಿದ್ದಿತ್ತು. ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಫೆಬ್ರವರಿ 2023ರಲ್ಲಿ, ಪಕ್ಷಾಂತರ ವಿರೋಧಿ ಕಾನೂನಿನ ಪ್ರಕಾರ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ನೆನಪಿಸಿಕೊಳ್ಳಬೇಕಿದೆ.

ಹಾಗಾಗಿ ಸ್ಪೀಕರ್ ಯಾರಾಗ್ತಾರೋ ಅವರದ್ದೆ ಸರ್ಕಾರ ಎಂಬುದಂತು ನಿಜ. ಅಕಸ್ಮಾತ್ ಸ್ಪಿಕರ್ ಹುದ್ದೆ ಬಿಜೆಪಿಗೆ ಸಿಕ್ಕರೆ ರಾಜಕೀಯದಲ್ಲಿ ಯಾವ ಬೆಳವಣಿಗೆ ಬೇಕಾದರೂ ನಡೆಯಬುದು. ಆಪರೇಷನ್ ಕಮಲಕ್ಕೆ ಬಿಜೆಪಿ ಮುಂದಾಗಬಹುದು, ಇಡಿ, ಸಿಬಿಐ ನಂತಹ ಸ್ವಾಯತ್ತ ಸಂಸ್ಥೆಗಳನ್ನು ತೋರಿಸಿ, ಹೆದರಿಸಿ ಸಂಸದರನ್ನು ತನ್ನತ್ತ ಸೆಳೆದುಕೊಳ್ಳವ ಕೆಟ್ಟದಾದ ಪ್ರಯತ್ನವನ್ನು ಮಾಡಬಹುದು.

ಇತ್ತ ಉಸಿರು ಗಟ್ಟುವ ವಾತಾವರಣದಲ್ಲಿ ಹೆಚು ಕಾಲ ಉಸಿರಾಟ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ, ಟಿಡಿಪಿ ಮತ್ತು ಜೆಡಿಯೂ ಎನ್ಡಿಎ ಕೂಟದಿಂದ ಹೊರ ಬಂದರೂ ಅಚ್ಚರಿ ಇಲ್ಲ.. ಇಷ್ಟೆಲ್ಲ ಅಚ್ಚರಿಗಳನ್ನು ಹುಟ್ಟುಹಾಕಿರುವ ಸ್ಪೀಕರ್ ಸ್ಥಾನಕ್ಕೆ ಯಾರೂ ಕೂಡಬಹುದು. 26ರ ವರೆಗೆ ಕಾದು ನೋಡಬೇಕಿದೆ.

ಇದನ್ನೂ ನೋಡಿ: ಸ್ಪೀಕರ್‌ ಹುದ್ದೆಯ ಮೇಲೆ ಎಲ್ಲರ ಕಣ್ಣು – ಸ್ಪೀಕರ್‌ ಯಾರಾಗ್ತಾರೋ ಅವರದ್ದೆ ಸರ್ಕಾರ! Janashakthi Media

Donate Janashakthi Media

Leave a Reply

Your email address will not be published. Required fields are marked *