ಮಾಲೆಗಾಂವ್ ಸ್ಫೋಟದ ಎಲ್ಲ ಆರೋಪಿಗಳ ಖುಲಾಸೆ

ನವದೆಹಲಿ: ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‍ಐಎ) ನ್ಯಾಯಾಲಯವೊಂದು ಜುಲೈ 31ರಂದು, 17 ವರ್ಷಗಳ ಹಿಂದೆ, ಸಪ್ಟಂಬರ್ 29, 2008ರಂದು ಮಹಾರಾಷ್ಟ್ರದ ಮಾಲೇಗಾಂವ್‍ನಲ್ಲಿ ನಡೆದ ಸ್ಫೋಟದ ತೀರ್ಪನ್ನು ನೀಡಿ ಎಲ್ಲಾ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿದೆ. 

ಈ ಸ್ಫೋಟಗಳು ಆರು ಅಮಾಯಕರನ್ನು ಸಾಯಿಸಿದ್ದವು ಮತ್ತು  ಸುಮಾರು ನೂರು ಜನರು ಗಾಯಗೊಂಡಿದ್ದರು. ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಆಗ ಸೇವೆಯಲ್ಲಿದ್ದ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಇತರರು ಸೇರಿದಂತೆ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಮತ್ತು ಕಾರ್ಯವಿಧಾನದ ಲೋಪಗಳ ಕಾರಣದಿಂದ ಖುಲಾಸೆಗೊಳಿಸಲಾಗಿದೆ.

ಮೊದಲು ಈ ಪ್ರಕರಣದ ಆರಂಭಿಕ ವಿಚಾರಣೆಯ ವೇಳೆಯಲ್ಲಿ ಅದಕ್ಕೆ ವಿಶೇಷ ಪಬ್ಲಿಕ್‍ ಪ್ರಾಸಿಕ್ಯೂಟರ್ ಆಗಿದ್ದ ರೋಹಿಣಿ ಸಾಲ್ಯಾನ್ ಇದಕ್ಕೆ ಪ್ರಕ್ರಿಯಿಸುತ್ತ ಇದನ್ನು ತಾನು ನಿರೀಕ್ಷಿಸಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದ ತಡೆಯಾಜ್ಞೆ ತೆರವು ಸಂಬಂಧ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ವಾದ ಮಂಡನೆ

“ ಹೀಗಾಗುತ್ತದೆ ಎಂದು ಗೊತ್ತಿತ್ತು. ನಿಜವಾದ ಸಾಕ್ಷ್ಯಗಳನ್ನು ನೀವು ಸಲ್ಲಿಸದಿದ್ದರೆ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ಅಂತಿಮವಾಗಿ ಸಾಕ್ಷ್ಯವನ್ನು ಸಲ್ಲಿಸಿದ ಪ್ರಾಸಿಕ್ಯೂಟರ್ ನಾನಲ್ಲ. ನಾನು 2017ರಿಂದಲೇ ಹೊರಗಿದ್ದೆ, ಅದರ ಮೊದಲು ನಾನು ಬಹಳಷ್ಟು ಸಾಕ್ಷ್ಯಗಳನ್ನು ಕೊಟ್ಟಿದ್ದೆ ಮತ್ತು ಸುಪ್ರಿಂ ಕೋರ್ಟ್‍ ಅವೆಲ್ಲವನ್ನೂ ಎತ್ತಿ ಹಿಡಿದಿತ್ತು. ಅವೆಲ್ಲ ಎಲ್ಲಿ ಮಾಯವಾದವು?” ಎಂದು ಅವರು ‘ಇಂಡಿಯನ್‍ ಎಕ್ಸ್ ಪ್ರೆಸ್‍ ಪತ್ರಿಕೆಯೊಂದಿಗೆ ಮಾತನಾಡುತ್ತ ಹೇಳಿದ್ದಾರೆ.

ಸರಕಾರ ಎನ್‍ಐಎ ಮೂಲಕ ತನಗೆ ಈ ಪ್ರಕರಣದಲ್ಲಿ ಆರೋಪಿಗಳ ವಿಷಯದಲ್ಲಿ ‘ಮೆದು’ವಾಗಿರಲು  ಒತ್ತಡ ಹಾಕುತ್ತಿದೆ ಎಂದು 2015ರಲ್ಲಿ ಇವರು ಸಾರ್ವಜನಿಕವಾಗಿ ಹೇಳಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನಂತರ ತಮ್ಮ ಹುದ್ದೆಗೆ ಅವರು ರಾಜೀನಾಮೆ ನೀಡಿ ಹೊರಬಂದರು.

ಮೊದಲಿಗೆ ಈ ಪ್ರಕರಣದ ತನಿಖೆಯನ್ನು  ಮಹಾರಾಷ್ಟ್ರದ ಎಟಿಎಸ್‍ ನಡೆಸಿತ್ತು. ಆರಂಭದಲ್ಲಿ  ಮಹಾರಾಷ್ಟ್ರದ ಪ್ರಸಿದ್ಧ ಪೋಲೀಸ್‍ ಅಧಿಕಾರಿ ಹೇಮಂತ್‍ ಕರ್ಕರೆ ಇದಕ್ಕೆ  ನೇತೃತ್ವ ನೀಡಿದ್ದರು.  ಜನವರಿ 2009ರಲ್ಲಿ ಎಟಿಎಸ್ ಒಂದು ವಿವರವಾದ 4500 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿತು. ಅದರಲ್ಲಿ ಪ್ರಜ್ಞಾ ಠಾಕುರ್‍ ಮತ್ತು ಪುರೋಹಿತ್‍ ಸೇರಿದಂತೆ 12 ಆರೋಪಿಗಳನ್ನು ಗುರುತಿಸಲಾಗಿತ್ತು. ಇವರು ರಾಯಗಢ ಕೋಟೆ, ದೇವಲಾಲಿ, ಪುಣೆ, ಭೋಪಾಲ, ಇಂದೋರ್, ಫರಿದಾಬಾದ್, ಕೊಲ್ಕತ ಮತ್ತು ನಾಶಿಕ್‍ನಲ್ಲಿ ಸಭೆಗಳನ್ನು ಯೋಜಿಸಿದ್ದರು.

ಸ್ಫೋಟಕಗಳನ್ನು ಪುರೋಹಿತ್‍ ಜಮ್ಮು -ಕಾಶ್ಮೀರದಲ್ಲಿ ಡ್ಯೂಟಿಯಲ್ಲಿ ಇದ್ದಾಗ ಸೇನಾ ದಾಸ್ತಾನಿನಿಂದ ಪಡೆಯಲಾಯಿತು. ಬಾಂಬ್‍ ಅಸೆಂಬ್ಲಿಯನ್ನು ದೇವಲಾಲಿಯಲ್ಲಿ ಸುಧಾಕರ್ ಚತುರ್ವೇದಿ ಎಂಬವರ ಮನೆಯಲ್ಲಿ ನಡೆಸಲಾಯಿತು ಮತ್ತು ಅದರ ಕೀಲಿಕೈಯನ್ನು ಮಿಲಿಟರಿ ಗುಪ್ತಚರ ಕಚೇರಿಯಲ್ಲಿ ಇಡಲಾಗಿತ್ತು. ಪುರೋಹಿತ್‍ ಮತ್ತು ಇತರು ಆರಂಭಿಸಿದರೆನ್ನಲಾದ ‘ಅಭಿನವ್‍ ಭಾರತ್’ ಎಂಬ ಗುಂಪಿನ ಮೂಲಕ ಹಿಂದೂರಾಷ್ಟ್ರ ಸ್ಥಾಪಿಸುವ ಒಂದು ತೀವ್ರಗಾಮಿ ಯೋಜನೆಯನ್ನು ರೂಪಿಸಲಾಗಿತ್ತು ಎಂದು ಆರೋಪಿಸಲಾಗಿತ್ತು.

ಪ್ರಜ್ಞಾ ಠಾಕುರ್ , ಪುರೋಹಿತ್ ‍ಮತ್ತಿತರರು ಮುಸ್ಲಿಂ ಸಮುದಾಯದ ಮೇಲೆ “ಹಗೆ” ತೀರಿಸಿಕೊಳ್ಳುವ ಮತ್ತು ಭೀತಿ ಹುಟ್ಟಿಸುವ ಒಂದು ವ್ಯಾಪಕ ಪಿತೂರಿಯ ಭಾಗವಾಗಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿತ್ತು. ಈ ಪ್ರಕರಣದ ಆಸುಪಾಸಿನಲ್ಲಿ 2003 ಮತ್ತು 2006ರಲ್ಲಿ ನಡೆದ ನಾಂದೇಡ್‍ ಮತ್ತು ಪರ್ಬಾನಿ ಮಸೀದಿ ಸ್ಫೋಟ, 2007ರ ಹೈದರಾಬಾದಿನ ಮೆಕ್ಕಾ ಮಸೀದಿ ಸ್ಫೋಟ, ಅಜ್ಮೇರ್ ಷರೀಫ್ ದರ್ಗಾ ಸ್ಫೋಟ ಮತ್ತು ಸಮ್‍ಜೌತ ಎಕ್ಸ್ ಪ್ರೆಸ್ ಸ್ಫೋಟಗಳ ಭಾಗವಾಗಿತ್ತು ಎಂದು ಅದು ಹೇಳಿತ್ತು.

ಆದರೆ ಈ ಎಲ್ಲ ಪ್ರಕರಣಗಳನ್ನು 2011 ರಲ್ಲಿ ಎನ್‍ಐಎ ಗೆ ವರ್ಗಾಯಿಸಲಾಯಿತು. 2014ರ ನಂತರ ತನಿಖೆಯ ಸ್ವರೂಪವೇ  ಬದಲಾಯಿತು. ಬಹುಶಃ ರೋಹಿಣಿ ಸಾಲ್ಯಾನ್‍  ಮೇಲಿನ ಒತ್ತಡ ಇದರ ಭಾಗವೇ.  ವ್ಯಾಪಕ ಪಿತೂರಿಯ ಅಂಶವನ್ನು ಸದ್ದಿಲ್ಲದೆ ಮೂಲೆಗೆ ಹಾಕಲಾಯಿತು ಎನ್ನಲಾಗಿದೆ. 2016ರಲ್ಲಿ ಈ ಪ್ರಕರಣದ ಪೂರಕ ಆರೋಪ ಪಟ್ಟಿಯನ್ನು ಅದು ಸಲ್ಲಿಸಿತು. 2018ರಲ್ಲಿ ವಿಚಾರಣೆ ಆರಂಭವಾಯಿತು. 323 ಸಾಕ್ಷಿಗಳ ಪರೀಕ್ಷಣೆಯಾಯಿತು, ಅವರಲ್ಲಿ 39 ಮಂದಿ ತಿಗುಗಿ ಬಿದ್ದರು, ಇವರಲ್ಲಿ ಹೆಚ್ಚಿನವರು ಸೇನಾ ಅಧಿಕಾರಿಗಳು ಮತ್ತು ಇತರ ಫಿರ್ಯಾದಿ(ಪ್ರಾಸಿಕ್ಯೂಷನ್) ಸಾಕ್ಷಿಗಳು ಎಂದು ವರದಿಯಾಗಿದೆ. ಈಗ  ಫಿರ್ಯಾದಿ ವಕೀಲೆಯಾಗಿದ್ದು ಒತ್ತಡಕ್ಕೆ ತಲೆಬಾಗದೆ ರಾಜೀನಾಮೆ ನೀಡಿದ ರೋಹಿಣಿ ಸಾಲ್ಯಾನ್‍ ಹೇಳುವಂತೆ ನಿರೀಕ್ಷಿತ ತೀರ್ಪು ಬಂದಿದೆ.

ನ್ಯಾಯದ ಅಣಕ-ಸಿಪಿಐ(ಎಂ) ಪೊಲಿಟ್‍ಬ್ಯುರೊ

ಈ ತೀರ್ಪಿನ ಬಗ್ಗೆ ಗಾಬರಿ ಮತ್ತು ತೀವ್ರ ನಿರಾಶೆಯನ್ನು ವ್ಯಕ್ತಪಡಿಸುತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಮತ್ತು ಕಾರ್ಯವಿಧಾನದ ಲೋಪಗಳ ನೆಪದಲ್ಲಿ ಖುಲಾಸೆಗೊಳಿಸಲಾಗಿದೆ ಎಂಬುದು ನ್ಯಾಯದ ಅಣಕವಾಗಿದೆ ಎಂದು ಹೇಳಿದೆ.

ಗಮನಿಸಬೇಕಾದ ಸಂಗತಿಯೆಂದರೆ, ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‍ಐಎ) ಪಿತೂರಿಗಾರರು ಮುಸ್ಲಿಂ ಸಮುದಾಯದ ಒಂದು ವಿಭಾಗವನ್ನು ಭಯಭೀತಗೊಳಿಸಲು, ಅಗತ್ಯ ಸೇವೆಗಳನ್ನು ಅಸ್ತವ್ಯಸ್ತಗೊಳಿಸಲು, ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಮತ್ತು ರಾಜ್ಯದ ಆಂತರಿಕ ಭದ್ರತೆಗೆ ಬೆದರಿಕೆ ಹಾಕಲು ಈ ಅಪರಾಧವನ್ನು ಸಂಯೋಜಿಸಿದ್ದರು ಎನ್ನುತ್ತ, ಇದಕ್ಕೆ ಅನುಗುಣವಾದ ಶಿಕ್ಷೆಯನ್ನು ಕೋರಿತ್ತು ಎಂದು ವರದಿಯಾಗಿದೆ. ಇದು ಉಗ್ರಗಾಮಿ ಹಿಂದುತ್ವ ಗುಂಪಿನಿಂದ ನಡೆದ ಭಯೋತ್ಪಾದಕ ಕೃತ್ಯದ ಸಂತ್ರಸ್ತರಿಗೆ ಅನಗತ್ಯ ವಿಳಂಬ ಮತ್ತು ಅಂತಿಮವಾಗಿ ನ್ಯಾಯ ನಿರಾಕರಣೆಯ ಮತ್ತೊಂದು ಪ್ರಕರಣವಾಗಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಆರೋಪಿಗಳಿಗೆ ಆರ್‌ಎಸ್‌ಎಸ್-ಬಿಜೆಪಿ ಆರಂಭದಿಂದಲೂ ಕೃಪಾಪೋಷಣೆ ಮತ್ತು ಬೆಂಬಲ ನೀಡುತ್ತ ಬಂದಿದೆ. ಬಿಜೆಪಿ ಪ್ರಜ್ಞಾ ಸಿಂಗ್‍ರನ್ನು ತಮ್ಮ ಅಭ್ಯರ್ಥಿಯನ್ನಾಗಿ ಮಾಡಿ ಸಂಸದೆಯಾಗಿ ಆಯ್ಕೆ ಮಾಡಿತು.

ಅಪರಾಧದ ಗಂಭೀರ ಸ್ವರೂಪದ ದೃಷ್ಟಿಯಿಂದ ಸರ್ಕಾರವು ಎನ್ಐಎ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೆಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸರಕಾರವನ್ನು ಒತ್ತಾಯಿಸಿದೆ.

ಆದರೆ ಗೃಹ ಸಚಿವ ಅಮಿತ್ ಷಾ ಸಂಸತ್ತಿನಲ್ಲಿ ಯಾವುದೇ ಹಿಂದೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ ಒಂದು ದಿನದ ನಂತರ ಈ ತೀರ್ಪು ಬಂದಿದೆ. ಅತ್ತ ತೀರ್ಪು ನೀಡಿದ ಎನ್‍ಐಎ ನ್ಯಾಯಾಧೀಶರು “ಭಯೋತ್ಪಾದನೆಗೆ ಧರ್ಮವಿಲ್ಲ, ಏಕೆಂದರೆ ಯಾವ ಧರ್ಮವೂ ಹಿಂಸಾಚಾರವನ್ನು ಪ್ರತಿಪಾದಿಸಲು ಸಾಧ್ಯವಿಲ್ಲ” ಎಂದಿರುವುದಾಗಿ ವರದಿಯಾಗಿದೆ.

ಇದನ್ನೂ ನೋಡಿ: ವೇತನ ಹೆಚ್ಚಳದಲ್ಲಿ ತಾರತಮ್ಯ | 4 ಸಾರಿಗೆ ನಿಗಮಗಳ ಸಿಬ್ಬಂದಿಯಿಂದ ಉಪವಾಸ ಸತ್ಯಾಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *