ಆಕ್ಷೇಪಾರ್ಹ ಪ್ರಕಟಣೆ, ಪ್ರಸಾರಗಳ ವಿರುದ್ಧ ಕ್ರಮ: ಕೇರಳ ಕಾನೂನು

ತಿರುವನಂತಪುರ: ಮಾಧ್ಯಮಗಳಲ್ಲಿ ಉದ್ದೇಶಪೂರ್ವಕವಾಗಿ ಅಥವಾ ಬೇಜವಾಬ್ದಾರಿಯಿಂದ ಹೇಳಿಕೆಗಳನ್ನು ಪ್ರಕಟಿಸುವ ಅಥವಾ ಪ್ರಸಾರ  ಮಾಡುವವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ₹ 10,000 ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕೊಡುವ ಸುಗ್ರೀವಾಜ್ಞೆಗೆ ಕೇರಳದ ರಾಜ್ಯಪಾಲ ಅರೀಫ್‌ ಮೊಹಮ್ಮದ್‌ ಖಾನ್‌ ಅವರು ಶನಿವಾರ ಸಹಿ ಮಾಡಿದ್ದಾರೆ.

ಕೇರಳ ಪೊಲೀಸ್‌ ಕಾಯ್ದೆಗೆ ಮಾಡಿರುವ ಈ ತಿದ್ದುಪಡಿಗೆ ಎಂದಿನಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸಿವೆ. ‘ಮಾಧ್ಯಮಗಳನ್ನು ದಮನಿಸಲು ಮತ್ತು ಟೀಕಾಕಾರರನ್ನು ಶಿಕ್ಷಿಸಲು ಈ ಕಾನೂನು ಬಳಕೆಯಾಗುವ ಅಪಾಯವಿದೆ’ ಎಂದು ಅವು ಹೇಳಿವೆ.

ಪ್ರತಿಪಕ್ಷಗಳ ಟೀಕೆಗೆ ಉತ್ತರ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಪತ್ರಿಕಾ ಸ್ವಾತಂತ್ರ್ಯಕ್ಕೆ ಈ ಕಾನೂನಿನಿಂದ ಯಾವುದೇ ಅಡ್ಡಿಯಾಗುವುದಿಲ್ಲ. ಕಾನೂನಿನ ಬಗ್ಗೆ ವಿರೋಧಪಕ್ಷಗಳ ಗ್ರಹಿಕೆ ಆಧಾರರಹಿತ’ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ಹೇಳಿದೆ.

ಮಾಧ್ಯಮ ಸ್ವಾತಂತ್ರ್ಯವನ್ನು ಕಾಪಾಡುವುದರ ಜತೆಗೆ ನಾಗರಿಕರಿಗೆ ಸಂವಿಧಾನವು ಖಾತರಿಪಡಿಸಿರುವ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಘನತೆಯನ್ನು ಕಾಪಾಡುವ ಜವಾಬ್ದಾರಿಯೂ ಸರ್ಕಾರದ ಮೇಲಿರುತ್ತದೆ. ಒಬ್ಬನ ಸ್ವಾತಂತ್ರ್ಯವು ಇನ್ನೊಬ್ಬನ ಮೂಗು ಆರಂಭವಾಗುವಲ್ಲಿ ಕೊನೆಗೊಳ್ಳುತ್ತದೆ ಎಂಬ ನೀತಿಯನ್ನು ಗೌರವಿಸಬೇಕು. ಈ ನೀತಿಯನ್ನು ಮೀರಿದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಕಾಂಗ್ರೆಸ್‌ ವಿರೋಧ: ಹೊಸ ಕಾನೂನಿನ ಬಗ್ಗೆ ಟ್ವೀಟ್‌ ಮೂಲಕ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ, ‘ಕೇರಳದ ಎಲ್‌ಡಿಎಫ್‌ ಸರ್ಕಾರ ರೂಪಿಸಿರುವ ಹೊಸ ಕಾನೂನು ಅಚ್ಚರಿ ಮೂಡಿಸಿದೆ’ ಎಂದಿದ್ದಾರೆ.

ಪಿ.ಚದಂಬರಂ ಅವರ ಟ್ವೀಟ್‍ಗೆ ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರೇ ಹಿಂದೆ ನಡೆದುಕೊಂಡ ಘಟನೆಯನ್ನು ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಮಾಡಿದ್ದ ಟ್ವೀಟ್‍ ಅನ್ನು ಟ್ಯಾಗ್‍ ಮಾಡಿ ವೈರಲ್‍ ಮಾಡಿದ್ದಾರೆ.

2012ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಟ್ವೀಟ್‍ ಮಾಡಿದ್ದ ಶ್ರೀನಿವಾಸನ್‍ ಅವರನ್ನು ಮಾಹಿತಿ ತಂತ್ರಜ್ಞಾನ ಕಾಯಿದೆ 66A ಸೆಕ್ಷನ್‍ ಅಡಿಯಲ್ಲಿ ಪುದುಚೇರಿಯ ಸ್ಥಳೀಯ ಸಿಐಡಿಯ ಅಪರಾಧ ವಿಭಾಗದ ಪೊಲೀಸರು  ಬಂಧಿಸಿದ್ದರು. ಈ ವೇಳೆ  ಕಾರ್ತಿ ಮಾಡಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯ ಜವಾಬ್ದಾರಿಯುತ ನಿರ್ಭಂಧಗಳನ್ನು ಹೊಂದಿದೆ. ಮಾನಹಾನಿ ಟ್ವೀಟ್‍ಗಳ ವಿರುದ್ಧ ಪರಿಹಾರ ಪಡೆಯುವ ಸಾಂವಿಧಾನಿಕ ಹಕ್ಕುಗಳನ್ನು ಹೊಂದಿದ್ದೇನೆ ಎಂದು ಟ್ವೀಟ್‍ ಮಾಡಿದ್ದರು. ಇದನ್ನು ಜಾಲತಾಣಿಗರು ನೆನಪಿಸಿದ್ದಾರೆ. (https://www.opindia.com/2020/11/ chidambaram-shock-freedom-expression-irony-karti/)

ಮುಖ್ಯಮಂತ್ರಿ ಸಮರ್ಥನೆ: ‘ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಲಿ, ನಿಷ್ಪಕ್ಷಪಾತ ಮಾಧ್ಯಮದ ವಿರುದ್ಧವಾಗಲಿ ಈ ಕಾನೂನನ್ನು ಬಳಸುವುದಿಲ್ಲ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದ್ದಾರೆ.

‘ಸಂವಿಧಾನದ ಪರಿಧಿಯೊಳಗೆ ಸರ್ಕಾರವನ್ನು ಟೀಕಿಸುವ ವ್ಯಕ್ತಿ ಅಥವಾ ಮಾಧ್ಯಮದ ವಿರುದ್ಧ ಈ ಕಾನೂನಿನಡಿ ಕ್ರಮ ಕೈಗೊಳ್ಳುವುದಿಲ್ಲ. ಜನರ  ವೈಯಕ್ತಿಕ ಇಷ್ಟಾನಿಷ್ಟಗಳನ್ನು, ರಾಜಕೀಯ ಅಥವಾ ರಾಜಕೀಯೇತರ ಹಿತಾಸಕ್ತಿಗಳನ್ನು ಟೀಕೆಗೆ ಬಳಸುವುದು, ಕುಟುಂಬಗಳ ಶಾಂತಿ ಕದಡುವುದು ಮುಂತಾದವು ಪತ್ರಿಕೋದ್ಯಮದ ವ್ಯಾಪ್ತಿಯೊಳಗೆ ಬರುವುದಿಲ್ಲ. ಅವೆಲ್ಲವೂ ವೈಯಕ್ತಿಕ ದ್ವೇಷ ಸಾಧನೆಗಳಾಗಿರುತ್ತವೆ. ಅನೇಕ ಸಂದರ್ಭಗಳಲ್ಲಿ ಇಂಥ ಟೀಕೆಗಳ ಹಿಂದೆ ಆರ್ಥಿಕ ಲಾಭದ ಗುರಿ ಇರುತ್ತದೆ. ಕೆಲವು ಆನ್‌ಲೈನ್‌ ಮಾಧ್ಯಮಗಳು ಸಾಮಾಜಿಕ ಮಾಧ್ಯಮಗಳನ್ನು ಸತತವಾಗಿ ದುರುಪಯೋಗಪಡಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ದೂರುಗಳು ಬರುತ್ತಿವೆ. ಆದ್ದರಿಂದ ಕಾನೂನು ರೂಪಿಸುವುದು ಅಗತ್ಯವಾಗಿದೆ’ ಎಂದು ಅವರು ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

 ಆಕ್ಷೇಪ ಯಾಕೆ?: ಸಾಮಾಜಿಕ ಮಾಧ್ಯಮಗಳಲ್ಲಿ ವಿಶೇಷವಾಗಿ ಮಹಿಳೆಯರಿಗೆ ಆಗುತ್ತಿರುವ ತೇಜೋವಧೆಯನ್ನು ತಡೆಯುವ ಉದ್ದೇಶದಿಂದ ಕೇರಳ ಪೊಲೀಸ್‌ ಕಾಯ್ದೆಗೆ ‘118–ಎ’ ಸೆಕ್ಷನ್‌ ಅನ್ನು ಸೇರಿಸಲು ಸರ್ಕಾರ ತೀರ್ಮಾನಿಸಿತ್ತು. ಆದರೆ, ರಾಜ್ಯಪಾಲರು ಸಹಿ ಮಾಡಿರುವ ಸುಗ್ರೀವಾಜ್ಞೆಯಲ್ಲಿ ‘ಸಾಮಾಜಿಕ ಮಾಧ್ಯಮ’ ಎಂಬ ಪದ ಬಳಕೆಯಾಗಿಲ್ಲ. ಬದಲಿಗೆ ‘ಯಾವುದೇ ರೀತಿಯ ಸಂವಹನ’ ಎಂದು ನಮೂದಿಸಲಾಗಿದೆ.

ಆದ್ದರಿಂದ ಈ ಕಾನೂನಿನ ಉದ್ದೇಶ, ಮುಖ್ಯವಾಹಿನಿಯ ಮಾಧ್ಯಮಗಳನ್ನು ಮತ್ತು ಅವುಗಳ ಮೂಲಕ ರಾಜಕಾರಣಿಗಳನ್ನು ಟೀಕಿಸುವವರನ್ನು ನಿಯಂತ್ರಿಸುವುದೇ ಆಗಿದೆ ಎಂಬ ಆತಂಕ ಉಂಟಾಗಿದೆ. ಅದೂ ಅಲ್ಲದೆ, ಯಾರಿಗೋ ಆದ ಅವಮಾನ, ತೇಜೋವಧೆಯ ವಿರುದ್ಧ ಯಾರು ಬೇಕಾದರೂ ದೂರು ದಾಖಲಿಸಬಹುದಾದಂಥ ಅವಕಾಶವನ್ನೂ ಈ ಕಾನೂನು ನೀಡುತ್ತದೆ.ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ವಿಚಾರಗಳ ಪ್ರಸಾರವನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಐಟಿ ಕಾಯ್ದೆಯ ಸೆಕ್ಷನ್‌ 66–ಎ ಹಾಗೂ ಕೇರಳ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 118–ಡಿ ಅನ್ನು ಹಿಂದೆ ಸುಪ್ರೀಂ ಕೋರ್ಟ್‌ ರದ್ದುಪಡಿಸಿತ್ತು.

ಮಾಧ್ಯಮಗಳು ಸಿಪಿಎಂ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿವೆ ಎಂದು ಮುಖ್ಯಮಂತ್ರಿ ವಿಜಯನ್‌ ಹಾಗೂ ಆ ಪಕ್ಷದ ಕೆಲವು ನಾಯಕರು ಹಲವು ಬಾರಿ ಆರೋಪಿಸಿದ್ದರು

Donate Janashakthi Media

Leave a Reply

Your email address will not be published. Required fields are marked *