ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಯಾವಾಗ? ಕಲ್ಲು ಕ್ವಾರಿಯ ಕರಾಳತೆ ಹೇಗಿದೆ?

ಶಿವಮೊಗ್ಗ ಹಾಗೂ  ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟ ರಾಜ್ಯದಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆಯ ಕರಾಳತೆಯನ್ನು ಬಿಚ್ಚಿಟ್ಟಿದೆ.  ಕಲ್ಲುಗಣಿಗಾರಿಕೆಯಿಂದ ಏನೆಲ್ಲ ಹಾನಿಯಾಗ್ತಾ ಇದೆ? ಪ್ರಾಣಹಾನಿ ಸಂಭಿವಿಸುತ್ತಿದ್ದರು ಸರಕಾರ ಯಾಕೆ ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೆಕ್ ಹಾಕುತ್ತಿಲ್ಲ?

ಚಿಕ್ಕಬಳ್ಳಾಪುರ ತಾಲೂಕಿನ ಹಿರೇನಾಗವೇಲಿಯಲ್ಲಿ ಮಂಗಳವಾರ ಮಧ್ಯರಾತ್ರಿ ಜಿಲೆಟಿನ್‌ ಕಡ್ಡಿಗಳು ಸ್ಫೋಟಗೊಂಡು 6 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆಯನ್ನು ಖಂಡಿಸಿ ಚಿಕ್ಕಬಳ್ಳಾಪುರದಲ್ಲಿ ಜನಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಜಿಲೆಟಿನ್ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಇಬ್ಬರು ಮಾಲೀಖರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಮಾಲೀಕ ಹಾಗೂ ಪ್ರಮುಖ ಆರೋಪಿ ನಾಗರಾಜ್‌ ತಲೆ ಮರೆಸಿಕೊಂಡಿದ್ದಾನೆ. ಇತರೆ ಆರೋಪಿಗಳಾದ ರಾಘವೇಂದ್ರ ರೆಡ್ಡಿ, ಪ್ರವೀಣ್, ರಿಯಾಜ್, ಮಧುಸೂದನ್ ರೆಡ್ಡಿ ಬಂಧಿತ ಆರೋಪಿಗಳು. ಆರೋಪಿಗಳನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ. ಶ್ರೀ ಶಿರಡಿ ಸಾಯಿ ಎಜೆನ್ಸೀಜ್ ಎನ್ನುವ ಕಲ್ಲು ಕ್ವಾರಿಯು ಅನುಮತಿಯನ್ನು ಪಡೆಯದೆ ಅಕ್ರಮವಾಗಿ ಕಾರ್ಯವನ್ನು ನಿರ್ವಹಿಸುತ್ತಿತ್ತು. ಸರಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಎಂ.ಪಿ ಮುನಿವೆಂಕಟಪ್ಪ ಆಗ್ರಹಿಸಿದ್ದಾರೆ.

ಹಳ್ಳಿಗಳ ಬೆಟ್ಟಗುಡ್ಡಗಳನ್ನೆಲ್ಲ ನುಂಗಿ ಹಾಕುತ್ತಿರುವ ಕಲ್ಲು ಗಣಿಗಾರಿಕೆಯ ಬೇರು ರಾಜ್ಯಾದ್ಯಂತ ವ್ಯಾಪಿಸಿದ್ದು, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ  2 ಸಾವಿರಕ್ಕೂ ಅಧಿಕ ಅಕ್ರಮ ಗಣಿಗಾರಿಕೆ ಕ್ವಾರಿಗಳು ಪತ್ತೆಯಾಗಿವೆ! ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ, 2017-18 ರಲ್ಲಿ ರಾಜ್ಯದಲ್ಲಿ 404 ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. 2019 ರಿಂದ 2021 ರ ನಡುವೆ ಸುಮಾರು 1783 ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಅಂದರೆ ರಾಜ್ಯದಲ್ಲಿ 2187 ಅಕ್ರಮ ಕಲ್ಲುಗಣಿಗಾರಿಕೆಗಳು ಇವೆ ಎಂದು ಇಲಾಖೆಯ ದಾಖಲೆಗಳು ಹೇಳುತ್ತಿವೆ.

ಅಕ್ರಮ‌ ಕಲ್ಲು ಕ್ವಾರಿಗಳಿಗೆ ಅಂಕುಶ ಹಾಕುವಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ವಾಸ್ತವಾಂಶವನ್ನು 2019ರ ಸಿಎಜಿ ವರದಿ ಬೊಟ್ಟು ಮಾಡಿ ತೋರಿಸಿತ್ತು.  2018 ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಐಐಎಸ್ಸಿ (IISC) ಜಂಟಿ ಸಮೀಕ್ಷೆ ಸಮೀಕ್ಷೆಯನ್ನು ನಡೆಸಿ ಸ್ಯಾಟಲೈಟ್ ಚಿತ್ರಗಳ ಮೂಲಕ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಪತ್ತೆ ಮಾಡಿದ್ದರು. ಅವರ ವರದಿಯ ಪ್ರಕಾರವೂ 2000 ಕ್ಕೂ ಅಕ್ರಮ ಕಲ್ಲು ಕ್ವಾರಿಗಳಿರುವುದು ಸಾಬೀತಾಗಿದೆ. ಹಾಗಾದ್ರೆ ಅನುಮತಿ ಪಡೆದಿರುವ ಕಲ್ಲು ಕ್ವಾರಿಗಳು ಎಷ್ಟು ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತೆ? ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾಹಿತಿಯಂತೆ  ರಾಜ್ಯದಲ್ಲಿ ಇಲ್ಲಿವರೆಗೆ 450 ಅಲಂಕರಿತ ಕಲ್ಲು ಕ್ವಾರಿಗಳು  (ಟೈಲ್ಸ್ ಕಲ್ಲು) ಹಾಗೂ 300 ಸಾಮಾನ್ಯ ಕಲ್ಲು ಕ್ವಾರಿಗಳಿಗೆ ಅನುಮತಿ ನೀಡಲಾಗಿದೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಅನುಮತಿ ಪಡೆದ ಕಲ್ಲು ಗಣಿ ಗುತ್ತಿಗೆದಾರರು ತಮಗೆ ಮಂಜೂರಾದ ಗುತ್ತಿಗೆ ಪ್ರದೇಶದ ವ್ಯಾಪ್ತಿ ಮೀರಿ ಗಣಿಗಾರಿಕೆ, ಹೊರಗಡೆ ಅಥವಾ ಗುತ್ತಿಗೆ ಅವಧಿ ಮುಗಿದರೂ ಗಣಿಗಾರಿಕೆ ಮಾಡುತ್ತಿರುವುದು ಸಿಎಜಿ ವರದಿ ಮೂಲಕ ಬೆಳಕಿಗೆ ಬಂದಿದೆ. ಸಿಎಜಿ ವರದಿಯಲ್ಲಿನ ಒಂದು ಅಂಕಿಅಂಶವನ್ನು ಗಮನಿಸುವುದಾದರೆ, ಅಂದ್ರೆ ಅಕ್ರಮ ಗಣಿಗಾರಿಕೆ ಎಲ್ಲಿ ಹೆಚ್ಚೆಚ್ಚು ನಡೀತಾ ಇದೆ, ಎನ್ನುವ ಅಂಶವನ್ನು ಸಿಎಜಿ ವರದಿಯಲ್ಲಿ ಬಯಲು ಮಾಡಲಾಗಿದೆ.  ದಕ್ಷಿಣ ಕನ್ನಡ, ವಿಜಯಪುರ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಇಂಥ ಪ್ರಕರಣಗಳು  ಪತ್ತೆಯಾಗಿವೆ. ರಾಜ್ಯದಲ್ಲಿ‌ ಸುಮಾರು 957 ಕೋಟಿ 16 ಲಕ್ಷದ 93 ಸಾವಿರ  ಟನ್ ಗ್ರಾನೈಟ್ ಕಲ್ಲು ಖನಿಜ ಇದ್ದು, ಇದರ ವ್ಯಾಪ್ತಿ ಪ್ರದೇಶ ಎಷ್ಟಿದೆ ಅಂದರೆ ಸುಮಾರು 4,200 ಸ್ಕ್ವೇರ್ ಕಿಲೋ ಮೀಟರ್  ನಷ್ಟು ಇದೆ.

ಈ ಅಕ್ರಮ ಕಲ್ಲು ಗಾಣಿಗಾರಿಕೆಯನ್ನು ತಡೆ ಹಿಡಿಯದಿರುವುದಕ್ಕೆ ಕಾರಣವಿದೆ. ಆ ಕಾರಣ ಏನು ಅಂದ್ರೆ, ಅಧಿಕಾರಿಗಳು, ಕಲ್ಲು ಕ್ವಾರಿ ಮಾಲೀಕರು, ಸ್ಪೋಟಕ ಸಾಗಾಟಗಾರರ ನಡುವೆ ಒಂದು ನಂಟಿದೆ.  ಈ  ನಂಟಿನಿಂದಾಗಿಯೇ ಈ ಅಕ್ರಮ ಗಣಿಗಾರಿಕೆ ಹೆಚ್ಚಾಗುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ.  ಗಣಿ ಭೂ ವಿಜ್ಞಾನ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ಈ ಅಕ್ರಮ ಗಣಿಗಾರಿಕೆಗೆ ಲಾಭವಾಗಿದೆ. ಸಿಬ್ಬಂದಿ ಕೊರತೆ ಹಿನ್ನೆಲೆ  ಇರುವ ಕಲ್ಲು ಕ್ವಾರಿ, ಗಣಿಗಾರಿಕೆ ಪ್ರದೇಶಗಳಿಗೆ ನಿರಂತರ ತಪಾಸಣೆ ನಡೆಸಲು ಸಾಧ್ಯವಾಗುತ್ತಿಲ್ಲ. ತಪ್ಪಿತಸ್ಥರಿಂದ ಒಂದಷ್ಟು ದಂಡ ವಸೂಲಿ ಬಿಟ್ಟರೆ ಬೇರೆ ಕಾನೂನು ಕ್ರಮ ತೆಗೆದುಕೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪ್ರಬಲ ಕಾನೂನಿನ ಅಸ್ತ್ರ ಇಲ್ಲ ಹಾಗಾಗಿ ಈ ಅಕ್ರಮ ಕಲ್ಲು ಕ್ವಾರಿಗೆ  ತಡೆಯನ್ನು ಹಾಕಲಾಗುತ್ತಿಲ್ಲ.

ಅಕ್ರಮ ಕಲ್ಲು ಕ್ವಾರಿಗೆ ಸಂಬಂಧ  ಪಟ್ಟಂತೆ  2017 – 18 ರಲ್ಲಿ  114 ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. 6.13 ಕೋಟಿ ರೂ. ದಂಡವನ್ನು ವಸೂಲಿ ಮಾಡಲಾಗಿತ್ತು. 2018-19ರಲ್ಲಿ 413 ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಈ ಸಂಬಂಧ 108 ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಒಟ್ಟು 12.13 ಕೋಟಿ ರೂ. ದಂಡ ವಸೂಲಿ ಮಾಡಲಾಗಿತ್ತು. ಇನ್ನು 2019-20ರಲ್ಲಿ 266 ಅಕ್ರಮ ಕಲ್ಲು ಗಣಿಗಾರಿಕೆಯನ್ನು ಪತ್ತೆ ಹಚ್ಚಲಾಗಿತ್ತು. ಈ ಸಂಬಂಧ 117 ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. 9.08 ಕೋಟಿ ರೂ. ದಂಡ ವಸೂಲಿ ಮಾಡಲಾಗಿತ್ತು. ಜೊತೆಗೆ ರಾಜಕಾರಣಿಗಳ ಪ್ರಭಾವ ಬಳಸಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ ಅಕ್ರಮ ಕಲ್ಲು ಗಣಿಗಾರಿಕೆಗೆ ಅಂಕುಶ ಹಾಕುವವರು ಯಾರು ಎಂಬ ಪ್ರಶ್ನೆಗೆ ಸರಕಾರವೇ ಉತ್ತರ ನೀಡಬೇಕಿದೆ.

ಇನ್ನೂ ಕಲ್ಲುಕ್ವಾರಿಗೆ ಬಳಸುವ ಜಿಲೆಟಿನ್ ಸ್ಟಿಕ್ ಸಾಗಾಟ, ಬಳಕೆ ಹೇಗೆ? ಎಂಬುದರ ಬಗ್ಗೆ ತಿಳೀತಾ ಹೋಗೋಣ, ಕಲ್ಲು ಕ್ವಾರಿಯಲ್ಲಿ ಸ್ಫೋಟಕ್ಕಾಗಿ ಜಿಲೆಟಿನ್ ಸ್ಟಿಕ್​​ಗಳನ್ನು ಬಳಸಲಾಗುತ್ತದೆ. ಈ ಜಿಲೆಟಿನ್ ಬಳಕೆ ಮತ್ತು ಸಾಗಾಟಕ್ಕೆ ಪರವಾನಗಿ ಪಡೆಯುವುದು ಅಗತ್ಯವಾಗಿದೆ.  ಖನಿಜ ಮತ್ತು ಗಣಿಗಾರಿಕೆ (ಸ್ಫೋಟಕ) ನಿಯಂತ್ರಣ  ಕಾಯ್ದೆ 2012 ರಡಿ ನಿರ್ವಹಣಾ  ಪರವಾನಗಿ ಪಡೆಯಬೇಕು. ಪರವಾನಗಿ ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರತಿ ವರ್ಷ ಪರವಾನಗಿ ನವೀಕರಣ‌ ಮಾಡಬೇಕಾಗುತ್ತದೆ.  ಸ್ಫೋಟಕಗಳ ಖರೀದಿ, ಸಂಗ್ರಹ ಮತ್ತು ಸಾಗಣಿಕೆಗೆ ಪ್ರತ್ಯೇಕವಾಗಿ ಪರವಾನಗಿ ಪಡೆಯಬೇಕು. ಈ ಎಲ್ಲದಕ್ಕೂ ಪರವಾನಗಿ ಪಡೆದಿದ್ದರೆ ಮಾತ್ರ ಸ್ಫೋಟಕಗಳನ್ನು ನಿರ್ವಹಣೆ ಮಾಡಬಹುದಾಗಿದೆ. ಕಲ್ಲು ಗಣಿಗಾರಿಕೆಯ ಪರವಾನಗಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು, ಜಂಟಿ ನಿರ್ದೇಶಕರು, ಹಿರಿಯ ಭೂ ವಿಜ್ಞಾನಿಗಳು ಮಾತ್ರ ನೀಡಬಹುದಾಗಿದೆ. ಇವರ ಅನುಮತಿಯನ್ನು ಪಡೆಯದೆ ನಡೆಯುವ ಕಲ್ಲು ಕ್ವಾರಿಗಳು ಕಾನೂನು ಬಾಹಿರವಾಗಿರುತ್ತವೆ.

ರಾಜ್ಯದಲ್ಲಿ ಸಂಭವಿಸಿದ ಕಲ್ಲು ಕ್ವಾರಿ ಅವಘಡಗಳ ಕಡೆ ಒಂದಿಷ್ಟು ಕಣ್ಣನ್ನು ಹಾಯಿಸೋಣ, ಶಿವಮೊಗ್ಗದಲ್ಲಿ ಜ. 21ರಂದು ನಡೆದ ಡೈನಮೈಟ್ ಸ್ಫೋಟ ರಾಜ್ಯದಲ್ಲಿ ಸಂಭವಿಸಿದ ಅತಿ ದೊಡ್ಡ ಕಲ್ಲು ಕ್ವಾರಿ ಅವಘಡವಾಗಿದೆ. ಸುಮಾರು 7 ಮಂದಿ ಸಾವನಪ್ಪಿದ್ದು, ಸ್ಫೋಟದ ವ್ಯಾಪ್ತಿ ಸುತ್ತಮುತ್ತಲಿನ ಹಳ್ಳಿ, ಜಿಲ್ಲೆಗಳನ್ನೂ ಆವರಿಸಿತ್ತು. ಇದಾದ ಬಳಿಕ ಈಗ ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲೆಟಿನ್ ಸ್ಫೋಟ ಮತ್ತೊಂದು ಅತಿ ದೊಡ್ಡ ಕ್ವಾರಿ ಅವಘಡವಾಗಿದೆ. ಈ ಅವಘಡದಲ್ಲಿ ಈವರೆಗೆ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಕಳೆದ ಕೆಲ ವರ್ಷಗಳಿಂದ ರಾಜ್ಯದ ವಿವಿಧೆಡೆ ಕಲ್ಲು ಕ್ವಾರಿ ಅವಘಡಗಳು ನಡೆದಿರುವ ಪ್ರಕರಣಗಳು ವರದಿಯಾಗಿವೆ. ಆದರೆ, ಸಣ್ಣ ಪುಟ್ಟ ಗಾಯಗಳಾಗಿರುವುದು ವರದಿಯಾಗಿದ್ದು ಬಿಟ್ಟರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅವಘಡ ಸಂಭವಿಸಿರಲಿಲ್ಲ.

ಈ ವಿಡಿಯೋ ನೋಡಿ : ಶಿವಮೊಗ್ಗದಲ್ಲಿ ಬಾರೀ ಸ್ಪೋಟ 07 ಸಾವು

ರಾಜ್ಯದಲ್ಲಿ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ 2802 ಕಲ್ಲು ಗಣಿಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸರ್ಕಾರಕ್ಕೆ 1500 ಕೋಟಿ ರೂ. ವಾರ್ಷಿಕ ಆದಾಯ ಬರುತ್ತಿದೆ. 1 ಟನ್ ಕಲ್ಲಿಗೆ 650 ರೂ.ನಿಂದ 700 ರೂ.ವರೆಗೆ ದರ ನಿಗದಿ ಮಾಡಲಾಗಿದೆ. ಕಿ.ಮೀ ಆಧಾರದ ಮೇಲೆ ಸಾಗಾಣಿಕ ವೆಚ್ಚವನ್ನು ತೆಗೆದುಕೊಳ್ಳಲಾಗುತ್ತಿದೆ. 60 ರೂ. ರಾಜಧನ, 30 ರೂ. ಜಿಲ್ಲಾ ನಿರ್ವಹಣೆ ನಿಧಿ ಮತ್ತು ಇನ್ನಿತರ ಸೇರಿ ಪ್ರತಿ ಟನ್ ಕಲ್ಲಿಗೆ ಒಟ್ಟು 107 ರೂ. ಶುಲ್ಕವನ್ನು ಸರ್ಕಾರಕ್ಕೆ ಕಟ್ಟಲಾ ಗುತ್ತಿದೆ. ವಾರ್ಷಿಕ ಸಾವಿರಾರು ಮಿಲಿಯನ್ ಮೆಟ್ರಿಕ್ ಟನ್ ಕಲ್ಲು ತೆಗೆಯಲಾಗುತ್ತಿದೆ.

ಈ ಕಲ್ಲು ಕ್ವಾರಿಯಿಂದ ಏನೆಲ್ಲ ಹಾನಿಯಾಗುತ್ತೆ, ಪರಿಸರದ ಮೇಲೆ, ಮನುಷ್ಯನ ಮೇಲೆ ಅದು ಹೇಗೆ ಪರಿಣಾಮ ಬೀರುತ್ತೆ ಅನ್ನೋದನ್ನಾ ತಿಳಿತಾ ಹೋಗೋಣ?:  ಪರಿಸರಕ್ಕೆ ಹಾನಿ ಉಂಟುಮಾಡುವ ಅಧಿಕೃತ ಮತ್ತು ಅನಧಿಕೃತ ಕಲ್ಲು ಗಣಿಕಾರಿಕೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕೆಂದು ಪರಿಸರವಾದಿಗಳು, ರೈತರು ಸೇರಿ ನಾನಾ ಸಂಘಟನೆಗಳು ಈಗಾಗಲೇ ಸಾಕಷ್ಟು ಬಾರಿ ಹೋರಾಟ ನಡೆಸಿದ್ದರೂ ಸರ್ಕಾರ ಸುರಕ್ಷತಾ ಕ್ರಮಕೈಗೊಂಡಿಲ್ಲ. ಜಲ್ಲಿ, ಸೈಜುಗಲ್ಲು, ಬೋಲ್ಡರ್ಸ್, ದಿಂಡುಗಲ್ಲು, ಕಲ್ಲುಪುಡಿ, ಅಲಂಕಾರಿಕ ಶಿಲೆ ಮತ್ತು ಗ್ರಾನೈಟ್ ಗಣಿಗಾರಿಕೆಯಿಂದಾಗಿ ಪರಿಸರಕ್ಕೆ ಅಪಾರ ಹಾನಿಯಾಗುತ್ತದೆ. ಕ್ವಾರಿಗಳಿಂದ ಬರುವ ಧೂಳು ಹಾಗೂ ಸ್ಪೋಟಕ ವಸ್ತು ಬಳಕೆಯಿಂದ ಸ್ಥಳೀಯರಿಗೆ ತೊಂದರೆಯಾಗುತ್ತದೆ. ಆದ್ದರಿಂದ ರಾಜ್ಯದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಬೇಕೆಂಬುದು ಪರಿಸರವಾದಿಗಳ ಆಗ್ರಹವಾಗಿದೆ.

ಅಕ್ರಮ ಕಲ್ಲು ಗಣಿಗಾರಿಕೆಗೆ ಸ್ಥಳೀಯ ರಾಜಕಾರಣಿಗಳ ಕೃಪಾಕಟಾಕ್ಷವಿದೆ ಎಂಬ ಆರೋಪಗಳಿವೆ. ಚುನಾವಣೆ ಸಂದರ್ಭದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಗಣಿ ಮಾಲೀಕರ ಪಾತ್ರ ಪ್ರಮುಖವಾಗಿರುತ್ತದೆ. ಹೀಗಾಗಿ ಗಣಿಗಾರಿಕೆಗೆ ಅನುಮತಿ ಕೊಡಿಸುವುದರಲ್ಲಿ ಹಾಗೂ ಅಕ್ರಮ ಗಣಿಗಾರಿಕೆ ನಡೆಸುವುದರಲ್ಲಿ ಸ್ಥಳೀಯ ಮುಖಂಡರ ಕೈವಾಡವಿರುತ್ತದೆ ಎಂಬ ಆರೋಪಗಳು ಕೋಡಾ ಕೇಳಿ ಬರುತ್ತಿವೆ. ದುರ್ಘಟನೆ ನಡೆದಾಗ ಟ್ವೀಟ್, ಫೆಸ್ಬುಕ್,  ಮೂಲಕ ಸರಕಾರ ಮತ್ತು ಅಧಿಕಾರಿಗಳು ಸಂತಾಪ ಸೂಚಿಸಿ, ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿ ಸುಮ್ಮನಾಗುತ್ತಾರೆ. ದುರ್ಘಟನೆಯಲ್ಲಿ ಸಾವೀಗೀಡಾದ ಕುಟುಂಬಗಳಿಗೂ ಸರಿಯಾದ ಪರಿಹಾರವನ್ನು ಇನ್ನೂ ನೀಡುತ್ತಿಲ್ಲ. ಆ ಪರಿಹಾರವನ್ನು ಪಡೆಯುವುದಕ್ಕೆ ಕುಟುಂಬಗಳು ಇಲಾಖೆಯಿಂದ ಇಲಾಖೆಗೆ  ಓಡಾಡುವ ಪರಿಸ್ಥಿತಿ ಇದೆ. ಎಲ್ಲದಕ್ಕಿಂತ ಮುಖ್ಯವಾಗಿ ಇಂತಹ ದುರ್ಘಟನೆಗಳು ನಡೆಯದಂತೆ ಸರಕಾರ ಎಚ್ಚರಿಕೆ ವಹಿಸಬೇಕಿದೆ. ಅಕ್ರಮ ಕಲ್ಲುಗಣಿಗಾರಿಕೆಗೆ ಬ್ರೆಕ್  ಹಾಕಲು ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *