ನವದೆಹಲಿ: ನೆರೆಯ ದೇಶ ಪಾಕಿಸ್ತಾನದ ಅನೇಕ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಇದುವರೆಗೆ ಸಾವಿಗೀಡಾದವರೆ ಸಂಖ್ಯೆ 1,061ಕ್ಕೆ ಏರಿಕೆಯಾಗಿದೆ.
ಕಳೆದ ಒಂದು ದಶಕದಲ್ಲೇ ಅತ್ಯಂತ ಭೀಕರ ಪ್ರವಾಹ ಇದಾಗಿದೆ ಎಂದು ವರದಿಯಾಗಿದ್ದು, ಬಲೂಚಿಸ್ತಾನ ಹಾಗೂ ಸಿಂಧ್ ಭಾಗದಲ್ಲಿ ಹಲವು ದಿನಗಳಿಂದ ಆಗುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಇದರಿಂದಾಗಿ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.
ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಶನಿವಾರದಂದು, 119 ಜನರು ಸಾವನ್ನಪ್ಪಿದ್ದಾರೆ. ಬಲೂಚಿಸ್ತಾನದಲ್ಲಿ ನಾಲ್ಕು ಮಂದಿ, ಗಿಲ್ಗಿಟ್ ಬಾಲ್ಟಿಸ್ತಾನ್‌ದಿಂದ ಆರು, ಖೈಬರ್ ಪಖ್ತುಂಖ್ವಾದಿಂದ 31 ಮತ್ತು ಸಿಂಧ್‌ನಿಂದ 76 ಸಾವುಗಳು ವರದಿಯಾಗಿವೆ.
ಜೂನ್‌ನಿಂದ ಆರಂಭವಾದ ಮಳೆಯಿಂದಾಗಿ ಇದುವರೆಗೆ ಹಲವು ಅನಾಹುತಗಳಿಂದ 1000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಲೆಕ್ಕವಿಲ್ಲದಷ್ಟು ಮನೆಗಳು ಕೊಚ್ಚಿಹೋಗಿವೆ, ಪ್ರಮುಖ ಕೃಷಿಭೂಮಿ ನಾಶವಾಗಿದೆ. ಸಂಪೂರ್ಣವಾಗಿ ನಾಶ ವಾದ ಮನೆಗಳು-2,18,000 ಹಾಗೂ ಹಾನಿಗೊಳಗಾದ ಮನೆಗಳ ಸಂಖ್ಯೆ-4,52,000 ಎಂದು ಅಂದಾಜಿಸಲಾಗಿದೆ. ಮಳೆ, ಪ್ರವಾಹದಲ್ಲಿ ಸಿಲುಕಿದ 51,275 ಮಂದಿಯನ್ನು ರಕ್ಷಿಸಲಾಗಿದೆ. 4,98,442 ಮಂದಿಯನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಎರಡು ಮಿಲಿಯನ್ ಹೆಕ್ಟರ್ ಕೃಷಿ ಭೂಮಿ ನಾಶಕವಾಗಿದ್ದು, 7,94,000ರಷ್ಟು ಜಾನುವಾರುಗಳಿಗೆ ಅಪಾಯ ತಂದೊಡ್ಡಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ನಿರಂತರವಾಗಿ ಸುರಿಯತ್ತಿರುವ ಭಾರೀ ಮಳೆಯಿಂದಾಗಿ ಪರಿಹಾರ ಕಾರ್ಯಾಚರಣೆಗೂ ತೊಡಕು ಉಂಟಾಗಿದೆ. ಸಂತ್ರಸ್ತರಿಗೆ ಆಹಾರ ಪದಾರ್ಥಗಳು ಸೇರಿದಂತೆ ಕನಿಷ್ಟ ಸೌಕರ್ಯಗಳನ್ನು ತಲುಪಿಸಲು ಹೆಲಿಕಾಪ್ಟರ್‌ಗಳ ಹಾರಾಟವು ಇಲ್ಲಿ ಕಷ್ಟವಾಗಿದೆ.
ಪ್ರವಾಹದ ಪರಿಣಾಮದಿಂದಾಗಿ 4 ದಶಲಕ್ಷಕ್ಕೂ ಹೆಚ್ಚು ಜನರ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದು, ಪಾಕಿಸ್ತಾನ ಸರಕಾರವು ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ದೇಶದ ಕೆಲವು ಭಾಗಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿದೆ. ಪಾಕಿಸ್ತಾನದ ಕನಿಷ್ಠ 110 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಒಟ್ಟು 72 ಜಿಲ್ಲೆಗಳನ್ನು ವಿಪತ್ತು ಪೀಡಿತ ಎಂದು ಘೋಷಿಸಲಾಗಿದೆ, ದೇಶವು ಒಂದು ದಶಕದಲ್ಲಿಯೇ ಅತ್ಯಂತ ಭೀಕರವಾದ ನೈಸರ್ಗಿಕ ವಿಕೋಪದಿಂದ ಬಳಲುತ್ತಿದೆ.
ಪ್ರವಾಹದಿಂದ ನದಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಮತ್ತು ಸೇತುವೆಗಳನ್ನು ಕೊಚ್ಚಿಕೊಂಡು ಹೋಗಿದ್ದು, ಉತ್ತರದ ನೂರಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.
ಪಾಕಿಸ್ತಾನದ ಪ್ರಸ್ತುತ ಸ್ಥಿತಿಯು 2010 ರ ಪ್ರವಾಹದೊಂದಿಗೆ ಸಚಿವ ರೆಹಮಾನ್ ಹೋಲಿಸಿದ್ದಾರೆ. ಈ ವಾರದ ಆರಂಭದಲ್ಲಿ ಪ್ರಸ್ತುತ ಪರಿಸ್ಥಿತಿ ಕೆಟ್ಟದಾಗಿದ್ದು, 2010ರಲ್ಲಿ ನೀರು ಉತ್ತರದಿಂದ ಹರಿಯುತ್ತಿರಲಿಲ್ಲ. ಆಗ ಮಳೆಯು ಹೆಚ್ಚು ವಿನಾಶಕಾರಿಯಾಗಿತ್ತು. ಪಾಕಿಸ್ತಾನವು ಈ ವರ್ಷದ ಮೊದಲ ಭಾರೀ ಮಳೆಯನ್ನು ಕಂಡಿದೆ. ಅಲ್ಲದೆ ಸೆಪ್ಟೆಂಬರ್‌ನಲ್ಲಿ ಮತ್ತೊಂದು ಋತುವಿನ ಮಳೆಯ ಪುನರಾವರ್ತನೆಯ ಸಾಧ್ಯತೆಯನ್ನು ಕಾಣಬಹುದು ಎಂದು ಅಂಕಿಅಂಶಗಳು ಹೇಳಿವೆ ಎಂದು ಹೇಳಿದ್ದಾರೆ.
ಟೊಮೊಟೋ ಬೆಲೆ ಕೆಜಿಗೆ 500-ಈರುಳ್ಳಿ 400 ರೂಪಾಯಿ
ಪ್ರವಾಹದಿಂದಾಗಿ ತರಕಾರಿಗಳು ಹಾಗೂ ಇತರ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಈ ಕಾರಣದಿಂದಾಗಿ, ತರಕಾರಿ ಸೇರಿದಂತೆ ಅನೇಕ ಅಗತ್ಯ ಆಹಾರ ಪದಾರ್ಥಗಳ ಕೊರತೆಯ ಬಿಕ್ಕಟ್ಟು ಉಂಟಾಗಿದೆ. ಸಾವಿರಾರು ಎಕರೆ ಟೊಮೊಟೋ, ಈರುಳ್ಳಿ ಹಾಗೂ ತರಕಾರಿ ಫಸಲು ಹಾಳಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಪಾಕಿಸ್ತಾನದ ಜನತೆ ಇದೀಗ ಟೊಮೇಟೋ ಕೆಜಿಗೆ 500 ರೂಪಾಯಿ ಆಗಿದ್ದರೆ, ಈರುಳ್ಳಿ ಕೆಜಿಗೆ 400 ರೂಪಾಯಿಯ ಗಡಿ ಮುಟ್ಟಿದೆ.
ಪಾಕಿಸ್ತಾನದ ಸುದ್ದಿ ವಾಹಿನಿ ಸಮಾ ಟಿವಿ ವರದಿಯ ಪ್ರಕಾರ, ಟೊಮ್ಯಾಟೊ ಬೆಲೆ ಸರ್ಕಾರಿ ಬೆಲೆಗೆ ಹೋಲಿಸಿದರೆ 6 ಪಟ್ಟು ಹೆಚ್ಚಾಗಿದೆ. ಸರಕಾರ ಟೊಮೇಟೊ 80 ರೂ. ನಿಗದಿ ಮಾಡಿದ್ದರೆ, ಮಾರುಕಟ್ಟೆಯಲ್ಲಿ ಕೆಜಿಗೆ 500 ರೂ.ಗೆ ಮಾರಾಟವಾಗುತ್ತಿದೆ. ಅದೇ ರೀತಿ, ಈರುಳ್ಳಿಯ ಅಧಿಕೃತ ದರ ಕೆಜಿಗೆ 61 ರೂ. ಆದರೆ ಅದು 400 ರೂ.ಗಿಂತ ಸುಮಾರು 7 ಪಟ್ಟು ಹೆಚ್ಚಿಗೆ ಮಾರಾಟವಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರವಾಹದಿಂದಾಗಿ ಪಾಕಿಸ್ತಾನ ಕನಿಷ್ಠ $5.5 ಬಿಲಿಯನ್ ನಷ್ಟವಾಗಿದೆ. ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಕಬ್ಬು ಮತ್ತು ಹತ್ತಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ, ಪಾತಾಳಕ್ಕೆ ಕುಸಿದಿದ್ದು, ಅದರ ನಡುವೆಯೂ ಜನ ಬದುಕುತ್ತಿದ್ದಾರೆ. ಈವರೆಗೂ ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಇನ್ನೇನು ಆರ್ಥಿಕ ಸಹಾಯ ಕೇಳಬೇಕು ಎನ್ನುವ ನಿಟ್ಟಿನಲ್ಲಿ ರಾಜಕೀಯ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ದೇಶದ ಬಹುತೇಕ ಭಾಗಗಳಲ್ಲಿ ಆಹಾರದ ಅಭಾವ ಹಾಗೂ ತೀವ್ರ ಬೆಲೆ ಏರಿಕೆ ಸಮಸ್ಯೆ ತಂದೊಡ್ಡಿದೆ. ಪಾಕಿಸ್ತಾನದಲ್ಲಿನ ಹಣದುಬ್ಬರ ಎಷ್ಟು ತೀವ್ರವಾಗಿದೆ ಎಂದರೆ, ದಿನಬಳಕೆಯ ಅಗತ್ಯ ತರಕಾರಿಗಳ ದರ ಗಗನಕ್ಕೇರಿದೆ. ತರಕಾರಿಗಳ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಪಾಕಿಸ್ತಾನವೀಗ ಭಾರತದ ಸಹಾಯ ಕೋರಿದೆ.
ತರಕಾರಿಗಳ ಬೆಲೆ ನಿಯಂತ್ರಿಸಲು ಲಾಹೋರ್‌ನ ತರಕಾರಿ ಮಾರುಕಟ್ಟೆಯ ಡೀಲರ್‌ಗಳು ಭಾರತದಿಂದ ಟೊಮೇಟೋ ಹಾಗೂ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. ಟೊಮೆಟೊ ಮತ್ತು ಈರುಳ್ಳಿ ಮಾತ್ರವಲ್ಲದೆ, ಲಾಹೋರ್ ಸೇರಿದಂತೆ ಪಾಕಿಸ್ತಾನದ ಪಂಜಾಬ್‌ನ ಹಲವು ಭಾಗಗಳಲ್ಲಿ, ಎಲ್ಲಾ ತರಕಾರಿಗಳ ಬೆಲೆ ದಾಖಲೆಯ ಮಟ್ಟದಲ್ಲಿದೆ.
ಪ್ರವಾಹದಿಂದಾಗಿ ಬಲೂಚಿಸ್ತಾನ, ಸಿಂಧ್ ಮತ್ತು ದಕ್ಷಿಣ ಪಂಜಾಬ್‌ನಿಂದ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಟೊಮೆಟೊ, ಈರುಳ್ಳಿ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈರುಳ್ಳಿ ಮತ್ತು ಟೊಮೇಟೊ ಬೆಲೆ ಕೆಜಿಗೆ 700 ರೂಪಾಯಿ ದಾಟಬಹುದು ಎಂಬ ಆತಂಕ ಎದುರಾಗಿದೆ. ಅದೇ ರೀತಿ ಆಲೂಗಡ್ಡೆ ಕೂಡ ಕೆಜಿ ಕೆಲ ತಿಂಗಳ ಹಿಂದೆ 40 ರೂಪಾಯಿ ಇದ್ದರೆ, ಮುಂದಿನ ದಿನದಲ್ಲಿ ಇದು 120 ರೂಪಾಯಿ ತಲುಪಬಹುದು ಎನ್ನಲಾಗಿದೆ.