ಉತ್ತರಪ್ರದೇಶ: ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಅಖಿಲೇಶ್ ಯಾದವ್ ಆಯ್ಕೆ

ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸಮಾಜವಾದಿ ಪಕ್ಷದ 111 ಶಾಸಕರು ಅಖಿಲೇಶ್‌ ಯಾದವ್ ಅವರನ್ನು ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ವಕ್ತಾರರು ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ಪ್ರಸ್ತಾಪಿಸುವ ವಿಷಯಗಳ ಕುರಿತು ಚರ್ಚಿಸಲು ಅಖಿಲೇಶ್‌ ಯಾದವ್ ಸಮಾಜವಾದಿ ಪಕ್ಷದ ಮಿತ್ರಪಕ್ಷಗಳ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಉತ್ತರ ಪ್ರದೇಶ ಚುನಾವಣಾ ಫಲಿತಾಂಶಗಳು ಏನನ್ನು ಸೂಚಿಸುತ್ತಿವೆ?

ಅಖಿಲೇಶ್ ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಯ ಕುಟುಂಬದ ಭದ್ರಕೋಟೆಯಾದ ಕರ್ಹಾಲ್‌ನಿಂದ ಮೊದಲ ಬಾರಿ  ಶಾಸಕರಾಗಿ ಆಯ್ಕೆಯಾದ ನಂತರ ಈ ವಾರ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2024ರ ಸಾರ್ವತ್ರಿಕ ಚುನಾವಣೆ ಮತ್ತು 2027ರ ವಿಧಾನಸಭೆ ಚುನಾವಣೆ ಎರಡರಲ್ಲಿಯೂ ರಾಜಕೀಯವಾಗಿ ಮಹತ್ವ ಪಡೆದಿರುವ ರಾಜ್ಯದಲ್ಲಿ ಬಿಜೆಪಿ ವಿರುದ್ಧ ವಿಧಾನಸಭೆಯಲ್ಲಿ ಪ್ರಬಲ ವಿರೋಧಪಕ್ಷ ರೂಪಿಸಲು ಅವರು ಬಯಸಿದ್ದಾರೆ ಎನ್ನಲಾಗಿದೆ.

ಪಕ್ಷದಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿರುವ ಅಖಿಲೇಶ್ ಯಾದವ್ ಅವರು ಪಕ್ಷದ ಸೋಲಿನ ಬಳಿಕ ಪಲಾಯನ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಜನರಲ್ಲಿ ಮೂಡಬಾರದು ಎಂಬ ಉದ್ದೇಶದಿಂದ ಮತ್ತು ಪಕ್ಷದ ಮತ ಹಂಚಿಕೆಯ ಪ್ರಮಾಣವನ್ನು ಗಮನದಲ್ಲಿ ಇರಿಸಿಕೊಂಡು ರಾಜ್ಯ ರಾಜಕಾರಣದಲ್ಲಿಯೇ ಉಳಿದುಕೊಳ್ಳುವುದು ಸೂಕ್ತ ಎಂದು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 273 ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡಿದೆ. ಸಮಾಜವಾದಿ ಪಕ್ಷ ಕಳೆದ ಬಾರಿಗಿಂತ ಸಾಕಷ್ಟು ಚೇತರಿಕೆ ಕಂಡಿದೆ.

Donate Janashakthi Media

Leave a Reply

Your email address will not be published. Required fields are marked *