ಮುನೀರ್ ಕಾಟಿಪಳ್ಳ
ತುಂಡು ಭೂಮಿಯ ಒಡೆತನಕ್ಕೆ
ಕನವರಿಸಿದ್ದ ನನ್ನಜ್ಜ
ಕೊರಗ ತನಿಯನ ಸೋದರ
ತಾಯಿ ಬೈದೆತಿಯ ಕೊನೆ ಮಗ
ಅಂಗೈ ಅಗಲದ ಭೂಮಿಯ ಕನಸು
ಅತನಿಗೆ ಹಸಿವಿನ ಪ್ರಶ್ನೆಯಷ್ಟೇ
ಆಗಿರಲಿಲ್ಲ
ಮನುಷ್ಯರಂತೆ ಬದುಕ ಬೇಕಿತ್ತು
ಬಾಳ ಬೇಕಿತ್ತು
ಶತಮಾನದಿಂದ ತಗ್ಗಿಸಿದ ತಲೆ
ಮೇಲೆತ್ತಬೇಕಾಗಿತ್ತು
ಯಜಮಾನನ ಕಂಬಕ್ಕೆ ಕಟ್ಟಿ ಬಡಿದಿದ್ದರು
ಅಂಗಲ ದಾಟಿದ್ದಕ್ಕೆ ಬೆನ್ನ ಮೇಲೆ
ಬಾಸುಂಡೆ ಮೂಡಿಸಿದ್ದರು
ಸೂರ್ಯ ಉದಿಸುವ ಮುನ್ನ
ಬಾಗಿಸಿದ ಬೆನ್ನು
ಸೂರ್ಯಾಸ್ತಕ್ಕೆ ಮುಂಚೆ
ಎತ್ತಲು ಅವಕಾಶ ವಿರಲಿಲ್ಲ
ಅಷ್ಟೊಂದು ದುಡಿದಿದ್ದ ನನ್ನಜ್ಜ
ಕೊರಗ ತನಿಯನ ಸೋದರ
ತಾಯಿ ಬೈದತಿಯ ಕೊನೆಯ ಮಗ
ಆದರೂ ಭೂಮಿಯ ಒಡೆಯರಿಗೆ
ತೃಪ್ತಿ ಇರಲಿಲ್ಲ
ನಮ್ಮ ಹೆಣ್ಣುಗಳು ಅವರ ಮನೆಯ
ಚಾಕರಿಯ ಮೂಕ ಪ್ರಾಣಿಗಳು
ಮೈಮುಚ್ಚದ ಬಟ್ಟೆಯಲ್ಲಿ
ಎಷ್ಟೊಂದು ತೂತು !
ನನ್ನಜ್ಜ ನೊಂದಿದ್ದ
ಮೈ ಸೋತು ನಿದ್ರೆಗೆ ಜಾರಿದಾಗಲೆಲ್ಲ
ತುಂಡು ಭೂಮಿಯ ಕನವರಿಕೆ
ಯಜಮಾನನ ಎದುರು ತಲೆ ಎತ್ತಿ ನಿಂತ
ಕನಸು…
ಹಾಗೆ ಕನಸು ಬಿದ್ದ ಬೆಳಗು
ತಾನು ಉತ್ತ ತುಂಡು
ಭೂಮಿಯ ಒಡೆತನಕ್ಕಾಗಿ
ಧಣಿಯ ಬಳಿ ಅಂಗಲಾಚಿದ್ದಾನೆ
ಮನೆಯ ಹೆಣ್ಣು ಮಕ್ಕಳು
ಮಾನ ಮುಚ್ಚುವಂತೆ ಬಟ್ಟೆ ಧರಿಸಲಿ
ಎಂಬ ದುಬಾರಿ ಆಸೆ
ಅಷ್ಟಕ್ಕೇ ಧಣಿಯ ಜನಗಳು
ದನಕ್ಕೆ ಬಡಿದಂತೆ ಬಡಿದರು
ದರ ದರನೆ ಎಳೆದು ಅಂಗಲದಾಚೆ
ಎಸೆದರು
ಪಾಪ ನನ್ನಜ್ಜ
ರಾತ್ರಿ ಇಡೀ ದುಡಿಯ ಬಡಿದ
ಡೋಲು ಹಿಡಿದು ಕುಣಿದ
ಮತ್ತೇನು ಮಾಡಬಹುದಿತ್ತು ಆತ !
ಕೊರಗ ತನಿಯನ ಸೋದರ
ತಾಯಿ ಬೈದತಿಯ ಕೊನೆಯ ಮಗ
ಹಾಗೆ ತುಂಡು ಭೂಮಿಯ ಕನವರಿಕೆಯಲ್ಲೆ
ಕಾಯ ಮರೆತು ಮಾಯವಾದ ನನ್ನಜ್ಜ
ಕೊರಗ ತನಿಯನ ಸೋದರ
ತಾಯಿ ಬೈದೆತಿಯ ಕೊನೆಯ ಮಗ
ಅಜ್ಜನ ಮೊಮ್ಮಗ ನಾನು
ತುಂಡು ಭೂಮಿಯ ಹಕ್ಕಿಗೆ
ಬಾವುಟ ಎತ್ತಿದ್ದೇನೆ
ಮೆರವಣಿಗೆಗೆ ಅಜ್ಜನ
ಮೊಮ್ಮಕ್ಕಳನ್ನೆಲ್ಲಾ
ಕೂಗಿ ಕರೆಯುತ್ತಿದ್ದೇನೆ
ಚೋಮನ ದುಡಿ, ಕೊರಗನ ಡೋಲು
ಎಲ್ಲವನ್ನೂ ನಿದ್ದೆಗೆಟ್ಟು ಬಾರಿಸುತ್ತಿದ್ದೇನೆ
ಕಿವಿ ತೂತಾಗುವಂತೆ ಶಬ್ದ ಸಿಡಿಯಬೇಕು
ಧಣಿಗಳಷ್ಟೇ ಅಲ್ಲ ಮೊಮ್ಮಕ್ಕಳೆಲ್ಲಾ ಅದುರಿ
ಎಚ್ಚರಗೊಳ್ಳಬೇಕು
ಕಟ್ಟಿದ ಕನಸಿನಲ್ಲೇ ಮಾಯವಾದ
ಅಜ್ಜನ ಮೊಮ್ಮಗ ನಾನು
ತಾಯಿ ಬೈದೆತಿಯ ಕೊನೆ ಮಗನ
ಮೊಮ್ಮಗ ನಾನು
ಹಸಿವು ನೀಗಲಷ್ಟೇ ಅಲ್ಲ
ಧಣಿಗಳ ಮುಂದೆ ತಲೆ ಎತ್ತಿ ನಿಲ್ಲಬೇಕು
ಬಾಗಿದ ಬೆನ್ನು ನೆಟ್ಟಗೆ ಮಾಡಿ
ಆಂಗಲ ದಾಟಿ ನಡೆಯಬೇಕು
ನನ್ನಜ್ಜನ ಬಂಡಾಯಕ್ಕೆ
ಈಗಲಾದರು ಗೆಲುವಾಗಬೇಕು
ಆದರೂ ಗೊತ್ತು
ಧಣಿಯ ಮನೆಯ ಕಂಬಕ್ಕೆ ನನ್ನನ್ನು
ಕಟ್ಟುತ್ತಾರೆ
ಬೆನ್ನ ಚರ್ಮ ಕಿತ್ತು ಹೋಗುವಂತೆ
ಬಡಿಯುತ್ತಾರೆ
ಆದರೂ ಅಜ್ಜನ ಮೊಮ್ಮಗ ನಾನು
ಆತ ಕೊರಗ ತನಿಯನ ಸೋದರ
ತಾಯಿ ಬೈದತಿಯ ಕೊನೆಯ ಮಗ
ತುಳುನಾಡ ನನ್ನಜ್ಜಂದಿರು ಏರಿಸಿದ್ದು
ಕೆಂಪು ಧ್ವಜ
ನಾನೂ ಅದೇ ಕೆಂಪಿನ ವಂಶದವನು
ನೀವು ಕಟ್ಟಿ ಹಾಕಿ ಬಡಿದಷ್ಟು
ನನ್ನ ದುಡಿ, ಡೋಲುಗಳು
ಮತ್ತಷ್ಟು ಜೋರಾಗಿ ಶಬ್ದ ಮೊಳಗಿಸಲಿದೆ
ಕೈಯಲ್ಲಿ ಹಿಡಿದ ಬಾವುಟ ಪಟಪಟಿಸಲಿದೆ
ನನ್ಬಜ್ಜ ಕೊರಗ ತನಿಯನ ಸೋದರ
ತಾಯಿ ಬೈದೆತಿಯ ಕೊನೆ ಮಗ
ನಾನವನ ಮೊಮ್ಮಗ