2025 ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಮಾಸ್ಟರ್ ಜೊನಾಥನ್ ಗೇವಿನ್ ಆಂಟೋನಿ ಅವರು ವೈಯಕ್ತಿಕ ವಿಭಾಗದಲ್ಲಿ ಮೊದಲ ಚಿನ್ನದ ಪದಕವನ್ನುಗೆದ್ದು, ಇತಿಹಾಸವನ್ನು ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಜೊನಾಥನ್ ಗೇವಿನ್ ಆಂಟೋನಿ ಅರ್ಹತಾ ಸುತ್ತಿನಲ್ಲಿ ಒಲಿಂಪಿಯನ್ ಸೌರಭ್ ಚೌಧರಿ ಅವರನ್ನು ಸೋಲಿಸಿ ಫೈನಲ್‌ಗೆ ಮುನ್ನಡೆಯುವಲ್ಲಿ ಯಶಸ್ವಿಯಾದರು.
ಇದು ಕರ್ನಾಟಕದ ಪಾಲಿಗೆ ಇದೊಂದು ಹೆಮ್ಮೆಯ ಕ್ಷಣವಾಗಿದ್ದು 15 ವರ್ಷದ ಶೂಟರ್ ಮಾಸ್ಟರ್ ಜೊನಾಥನ್ ಗೇವಿನ್ ಆಂಟೋನಿ ಅವರು ಉತ್ತರಾಖಂಡದಲ್ಲಿ ನಡೆದ 2025ರ ರಾಷ್ಟ್ರೀಯ 0.177 ಏರ್ ಪಿಸ್ತೂಲ್ ಶೂಟಿಂಗ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಈ ಮೂಲಕ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಜೊನಾಥನ್ ಆಂಟೋನಿ ಅವರು ಸರ್ವಿಸಸ್ ರವೀಂದರ್ ಸಿಂಗ್ ಮತ್ತು ಗುರ್‌ಪ್ರೀತ್ ಸಿಂಗ್ ಅವರಿಗಿಂತ ಅಗ್ರಸ್ಥಾನ ಪಡೆದರು.
ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹಾಕ್-ಐ ಸ್ಪೋರ್ಟ್ಸ್ ರೈಫಲ್ ಮತ್ತು ಪಿಸ್ತೂಲ್ ಶೂಟಿಂಗ್ ಅಕಾಡೆಮಿಯಲ್ಲಿ ರಾಷ್ಟ್ರೀಯ ಎ-ಗ್ರೇಡ್ ಪ್ರಮಾಣೀಕೃತ ತರಬೇತುದಾರ ಶ್ರೀ ಶರಣೇಂದ್ರ ಕೆ.ವೈ ಅವರ ಪರಿಣಿತ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಜೋನಾಥನ್ ಅವರು ಈ ಕ್ರೀಡಾಕೂಟದಲ್ಲಿ ಅತ್ಯುತ್ತಮ ಕೌಶಲ್ಯ ಮತ್ತು ದೃಢತೆಯನ್ನು ಪ್ರದರ್ಶಿಸಿದ್ದಾರೆ.
ಈ ಚಿನ್ನದ ಪದಕವು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದ್ದು, ಈ ಮೂಲಕ ಭಾರತದ ಶೂಟಿಂಗ್ ಕ್ರೀಡೆಗಳಲ್ಲಿ ರಾಜ್ಯದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಜೊನಾಥನ್ ಅವರ ಯಶಸ್ಸು ರಾಷ್ಟ್ರದಾದ್ಯಂತ ಮಹತ್ವಾಕಾಂಕ್ಷಿ ಹೊಂದಿರುವ, ಯುವ ಶೂಟರ್‌ಗಳಿಗೆ ಸ್ಫೂರ್ತಿಯಾಗಿದೆ.