ಏರ್ ಇಂಡಿಯಾಗೆ ‘ಟಾಟಾ’ ಹೇಳಿದ ಸರಕಾರ

ನವದೆಹಲಿ: ಸರ್ಕಾರಿ ಸ್ವಾಧೀನದಲ್ಲಿದ್ದ ದೇಶದ ಪ್ರತಿಷ್ಠಿತ ವಿಮಾನ ಯಾನ ಸಂಸ್ಥೆ ‘ಏರ್ ಇಂಡಿಯಾ’ ಇದೀಗ ಟಾಟಾ ಗ್ರೂಪ್ ಪಾಲಾಗಿದೆ. ಈ ಮೂಲಕ 68 ವರ್ಷಗಳ ಬಳಿಕ ಏರ್ ಇಂಡಿಯಾ ಮತ್ತೊಮ್ಮೆ ಟಾಟಾ ಸನ್ಸ್ ಗ್ರೂಪ್​ನ ಕೈ ಸೇರಿದಂತಾಗಿದೆ.

ನಷ್ಟದಲ್ಲಿ ಮುಳುಗಿರುವ ಏರ್​ ಇಂಡಿಯಾದ ಹೂಡಿಕೆಯನ್ನು ಸಂಪೂರ್ಣ ಹಿಂತೆಗೆಯುವ ಸರ್ಕಾರದ ಯೋಜನೆಯಂತೆ ಆಹ್ವಾನಿಸಲಾಗಿದ್ದ ಖರೀದಿಯ ಬಿಡ್​ಗಳಲ್ಲಿ, ‘ಟಾಟಾ ಗುಂಪಿನ ಟಾಲೇಸ್​ ಕಂಪೆನಿಯ 18,000 ಕೋಟಿ ರೂಪಾಯಿಗಳ ಬಿಡ್​ ಗೆದ್ದಿದೆ. ತನ್ನ ಶೇಕಡ 100 ರಷ್ಟು ಪಾಲನ್ನು ಟಾಟಾ ಕಂಪೆನಿಗೆ ಮಾರುತ್ತಿರುವ ಕೇಂದ್ರ ಸರ್ಕಾರಕ್ಕೆ, 2,700 ಕೋಟಿ ರೂಪಾಯಿ ನಗದು ಲಭಿಸಲಿದೆ ಎನ್ನಲಾಗಿದೆ. ಟಾಟಾ ಏರ್​ಲೈನ್ಸ್​ ಎಂಬ ಹೆಸರಿನಿಂದ ಜೆ.ಆರ್.ಡಿ. ಟಾಟಾ ಅವರೇ ಆರಂಭಿಸಿದ್ದ ಏರ್​ ಇಂಡಿಯಾ ಕಂಪೆನಿ ಇದೀಗ ಮರಳಿ ತವರು ಸಂಸ್ಥೆಯ ತೆಕ್ಕೆಗೇ ಸೇರುತ್ತಿದೆ.

ಟಾಟಾ ಕಂಪೆನಿಯ ವಿನ್ನಿಂಗ್ ಬಿಡ್, ಕಂಪೆನಿಯ ಮಾರಾಟಕ್ಕೆ ಸರ್ಕಾರ ನಿಗದಿಪಡಿಸಿದ್ದ 12,906 ಕೋಟಿ ರೂಪಾಯಿ ರಿಸರ್ವ್​ ಪ್ರೈಸ್​ಗಿಂತ ಸುಮಾರು 5000 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.​ ಏರ್​ ಇಂಡಿಯಾದ ಮಾಲೀಕತ್ವ ಪಡೆಯುತ್ತಿರುವ ಟಾಟಾ ಕಂಪೆನಿ, ಒಂದು ವರ್ಷದ ತನಕ ಎಲ್ಲಾ ನೌಕರರನ್ನೂ ಉದ್ಯೋಗದಲ್ಲಿ ಮುಂದುವರೆಸಬೇಕು. ಎರಡನೇ ವರ್ಷದಿಂದ ವಾಲೆಂಟರಿ ರಿಟೈರ್​ಮೆಂಟ್​ ಸ್ಕೀಮ್​(ವಿಆರ್​ಎಸ್)ನ ಅವಕಾಶ ನೀಡಬಹುದು ಎಂದು ಸರ್ಕಾರ ಷರತ್ತು ವಿಧಿಸಿದೆ.

ಏರ್​ ಇಂಡಿಯಾ ಮತ್ತೆ ಟಾಟಾ ಗುಂಪಿಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಟಾಟಾ ಗುಂಪಿನ ಮುಖ್ಯಸ್ಥ ರತನ್ ಟಾಟಾ ಅವರು, ಭಾವುಕವಾದ ಸಂದೇಶವನ್ನು ಟ್ವೀಟ್ ಮಾಡಿದ್ದು, ‘ವೆಲ್ಕಮ್ ಬ್ಯಾಕ್, ಏರ್ ಇಂಡಿಯ’ ಎಂದಿದ್ದಾರೆ. ಏರ್ ಇಂಡಿಯಾ ಪುನರ್​ನಿರ್ಮಾಣಕ್ಕೆ ಮಹತ್ವದ ಪ್ರಯತ್ನ ನಡೆಯಲಿದೆ ಎಂದಿದ್ದು, ಜೆಆರ್​ಡಿ ಟಾಟಾ ಅವರಿರುವ ಹಳೆಯ ಏರ್ ಇಂಡಿಯಾ ವಿಮಾನದ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ.

ಸ್ಥಾಪಕ ಯಾರು ? 1932 ರಲ್ಲಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್‌ ಸಂಸ್ಥೆಯನ್ನು ಆರಂಭಿಸಿದರು. ಸ್ವತಃ ಪೈಲಟ್‌ ಆಗಿದ್ದ ಜೆಆರ್‌ಡಿ ಟಾಟಾ ತಾವೇ ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು. ಮೊದಲ ಹಾರಾಟವು ಕರಾಚಿಯಿಂದ ಬಾಂಬೆಗೆ ನಡೆಸಿತು. ಹ್ಯಾವಿಲ್ಯಾಂಡ್‌ ಪುಸ್‌ ಮಾತ್‌ ಮೊದಲ ವಿಮಾನ. ಆಗ ಬಾಂಬೆ ವಿಮಾನ ನಿಲ್ದಾಣದಲ್ಲಿ ಸರಿಯಾದ ರನ್‌ವೇ ಇರಲಿಲ್ಲ. ರೇಡಿಯೋ ಸಿಗ್ನಲ್‌, ನ್ಯಾವಿಗೇಶನ್‌ ವ್ಯವಸ್ಥೆ ಯಾವುದೂ ಇರಲಿಲ್ಲ. ಅಹಮದಾಬಾದ್‌, ಬಾಂಬೆ, ಚೆನ್ನೈ, ತಿರುವನಂತಪುರಂ ನಡುವೆ 1933 ರಲ್ಲಿ ಪ್ರಯಾಣಿಕ ಹಾಗೂ ಸರಕು ವಿಮಾನಗಳು ಹಾರಾಟ ನಡೆಸಿದವು. ಆಗ ದಿಲ್ಲಿಯಿಂದ ಬಾಂಬೆಗೆ ಇದ್ದ ಟಿಕೆಟ್‌ ದರ ಕೇವಲ 75 ರೂ.

ಬಾಂಬೆ-ಇಂದೋರ್‌-ಭೋಪಾಲ್‌-ಗ್ವಾಲಿಯರ್‌-ದಿಲ್ಲಿ ನಡುವೆ 1937ರಲ್ಲಿ ಹಾರಾಟ ಆರಂಭವಾಯಿತು. 1938 ರಲ್ಲಿ ಸಂಸ್ಥೆಗೆ ರೇಡಿಯೋ ಅಳವಡಿಸಿದ ಮೊದಲ ವಿಮಾನ ಡ್ರ್ಯಾಗನ್‌ ರಾಪಿಡ್‌ ಡಿಎಚ್‌-89 ವಿಮಾನ ಸೇರ್ಪಡೆಯಾಗಿತ್ತು.

ಸರಕಾರಿ ಸ್ವಾಮ್ಯಕ್ಕೆ : ಎರಡನೇ ಮಹಾಯುದ್ಧದ ನಂತರ ಟಾಟಾ ಏರ್‌ಲೈನ್ಸ್‌ ಅನ್ನು ಸಾರ್ವಜನಿಕ ಕಂಪನಿಯಾಗಿ ಪರಿವರ್ತಿಸಲಾಯಿತು, ಏರ್‌ ಇಂಡಿಯಾ ಲಿಮಿಟೆಡ್‌ ಎಂದು ಮರುನಾಮಕರಣ ಮಾಡಲಾಯಿತು. 1948 ರಲ್ಲಿ ಬಾಂಬೆ, ಕೈರೋ, ಜಿನೀವಾ ಮತ್ತು ಲಂಡನ್‌ ನಡುವೆ ಅಂತಾರಾಷ್ಟ್ರೀಯ ಸೇವೆಗಳು ಆರಂಭವಾದವು. ಏರ್‌ ಇಂಡಿಯಾ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ ರಚನೆಯಾಯಿತು.

ಭಾರತ ಸರಕಾರವು 1953 ರಲ್ಲಿ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳನ್ನು ರಾಷ್ಟ್ರೀಕೃತಗೊಳಿಸಿತು. ಈ ವೇಳೆ ಸರ್ಕಾರವು ಇಂಡಿಯನ್‌ ಏರ್‌ಲೈನ್ಸ್‌ ಕಾರ್ಪೊರೇಶನ್‌ ಮತ್ತು ಏರ್‌ ಇಂಡಿಯಾ ಲಿಮಿಟೆಡ್‌ ಎಂಬ ಎರಡು ನಿಗಮಗಳನ್ನು ರಚಿಸಿತ್ತು. 1962ರಲ್ಲಿ ಏರ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಕಾರ್ಪೊರೇಷನ್ನು ಏರ್‌ ಇಂಡಿಯಾ ಎಂದು ಸಂಕ್ಷಿಪ್ತಗೊಳಿಸಲಾಯಿತು.

ಮೊದಲ ಮಾರಾಟ ಯತ್ನ: ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ 2001ರಲ್ಲಿ ಏರ್‌ಲೈನ್‌ ಮಾರಾಟದ ಮೊದಲ ಪ್ರಯತ್ನ ಮಾಡಿತು. ಏರ್‌ ಇಂಡಿಯಾದ ಶೇ. 40ರಷ್ಟು ಶೇರುಗಳನ್ನು ಮಾರಾಟಕ್ಕಿಡಲಾಗಿತ್ತು. 2007 ರಲ್ಲಿ ಏರ್‌ ಇಂಡಿಯಾ ತನ್ನ ದೇಶೀಯ ಘಟಕ ಇಂಡಿಯನ್‌ ಏರ್‌ಲೈನ್ಸ್‌ನೊಂದಿಗೆ ವಿಲೀನಗೊಂಡಿತ್ತು.

2017ರಿಂದಲೂ ಏರ್‌ ಇಂಡಿಯಾ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಯತ್ನ ನಡೆದಿತ್ತು. ಆದರೆ ಆ ಯತ್ನಗಳು ಫಲ ನೀಡಿರಲಿಲ್ಲ. ಇದು ಮೂರನೆಯ ಪ್ರಯತ್ನವಾಗಿತ್ತು. ಏರ್‌ ಇಂಡಿಯಾದ ಸಾಲದಲ್ಲಿ ಎಷ್ಟು ಪಾಲನ್ನು ತಾವು ವಹಿಸಿಕೊಳ್ಳಲು ಸಿದ್ಧ ಎಂಬುದನ್ನು ಬಿಡ್ ಮಾಡುವ ಕಂಪನಿಗಳೇ ತಿಳಿಸಬಹುದು ಎಂದು ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಹೇಳಿತ್ತು.

2018ರಲ್ಲಿ ಸರಕಾರ ಸಂಸ್ಥೆಯ ಮಾರಾಟಕ್ಕೆ ಪ್ರಯತ್ನಿಸಿತು. 50,000 ಕೋಟಿ ರೂ. ಗಿಂತ ಅಧಿಕ ಸಾಲವನ್ನು ಏರ್ ಇಂಡಿಯಾ ಸಂಸ್ಥೆಯ ಅನುಭವಿಸುತ್ತಿತ್ತು. ಈ ಬಾರಿ, ಸಂಸ್ಥೆಯಲ್ಲಿನ ಶೇ.24 ಷೇರುಗಳನ್ನು ಉಳಿಸಿಕೊಳ್ಳಲು ಸರಕಾರ ನಿರ್ಧರಿಸಿತು. ಆದರೆ ಯಾವುದೇ ಬಿಡ್‌ ಬಾರದ ಕಾರಣ ಯತ್ನ ವಿಫಲವಾಗಿತ್ತು.

2012ರಲ್ಲಿ ಯುಪಿಎ ಸರ್ಕಾರ ₹32 ಸಾವಿರ ಕೋಟಿಗಳ ಪರಿಹಾರ ಕೊಡುಗೆ ನೀಡಿತ್ತು. ಈ ನೆರವಿನ ಬಳಿಕವೂ ಸಂಸ್ಥೆಯು ನಷ್ಟದ ನಂಟು ಕಳಚಿಕೊಳ್ಳಲು ವಿಫಲವಾಗಿತ್ತು. ಪ್ರತಿವರ್ಷ ಸಾಲದ ಹೊರೆ ಬೆಟ್ಟದಂತೆ ಬೆಳೆಯುತ್ತಲೇ ಸಾಗಿತ್ತು.

2020ರಲ್ಲಿ ಮಾರಾಟಕ್ಕೆ ಸರಕಾರ ಮತ್ತೊಂದು ಯತ್ನ ನಡೆಸಿತು. ಈ ಬಾರಿ ಸರಕಾರ ಶೇ.100 ಷೇರುಗಳನ್ನೂ ಕೊಟ್ಟುಬಿಡುವುದಾಗಿ ಹೇಳಿತ್ತು. ಬಿಡ್ ನಲ್ಲಿ ಟಾಟಾ ಸನ್ಸ್ ಗೆದ್ದು ಏರ್ ಇಂಡಿಯಾವನ್ನು ಮರಳಿ ಪಡೆದಿದೆ. ಸದ್ಯ ಏರ್‌ ಇಂಡಿಯಾ 60,074 ಕೋಟಿ ರೂ.ಗಳ ಸಾಲ ಹೊಂದಿದೆ. ಇದರಲ್ಲಿ 23,286 ಕೋಟಿ ರೂ.ಗಳನ್ನು ಟಾಟಾ ಸನ್ಸ್ ಭರಿಸಬೇಕಿದೆ. ಉಳಿದುದನ್ನು ವಿಶೇಷ ಉದ್ದೇಶ ವೆಹಿಕಲ್‌ ಮೂಲಕ ಸರಕಾರ ಭರಿಸಲಿದೆ.

ಆರ್ಥಿಕ ಹೊರೆಯ ನೆಪದಿಂದಾಗಿ ಸರಕಾರಿ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾ ಈಗ ಮತ್ತೆ ಖಾಸಗೀ ಪಾಲಾಗಿದೆ. ಸಾರ್ವಜನಿಕ‌ ಕ್ಷೇತ್ರಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಕೇಂದ್ರ ಸರಕಾರ ಚಾಲನೆ ನೀಡಿದೆ. ಸರಕಾರಗಳು ಸಮರ್ಥವಾಗಿ ನಿಭಾಯಿಸದರ ಪರಿಣಾಮ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ.

Donate Janashakthi Media

Leave a Reply

Your email address will not be published. Required fields are marked *