ಪಂಚಕುಲ: ಭಾರತೀಯ ವಾಯುಪಡೆಯ (IAF) ಜಾಗ್ವಾರ್ ಯುದ್ಧ ವಿಮಾನವೊಂದು ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಶುಕ್ರವಾರ ಪತನಗೊಂಡಿದೆ. ತರಬೇತಿಗಾಗಿ ಅಂಬಾಲಾ ವಾಯುನೆಲೆಯಿಂದ ಟೇಕಾಪ್ ಆದ ನಂತರ ವಿಮಾನ ಪತನವಾಗಿದೆ.
ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಹಾರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ :ಸೇಡಂ| 2 ಬೈಕ್ ಮುಖಾಮುಖಿ ಡಿಕ್ಕಿ; ನಾಲ್ವರು ಸಾವು
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಭಾರತೀಯ ವಾಯುಪಡೆ ಪೋಸ್ಟ್ ಮಾಡಿದ್ದು, ಅಸಮರ್ಪಕ ಕಾರ್ಯನಿರ್ವಹಣೆ ನಂತರ ಐಎಎಫ್‌ನ ಜಾಗ್ವಾರ್ ವಿಮಾನವೊಂದು ಇಂದು ದಿನನಿತ್ಯದ ತರಬೇತಿ ವೇಳೆ ಅಂಬಾಲಾದಲ್ಲಿ ಪತನಗೊಂಡಿದೆ. ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ.
ವಿಮಾನ ಪತನದ ನಂತರ ನೆಲದ ಮೇಲೆ ಯಾರಿಗೂ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪಂಚಕುಲ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿದ್ದಾರೆ ಎಂದು ಪಂಚಕುಲ ಜಿಲ್ಲೆಯ ಎಸ್‌ಎಚ್‌ಒ, ರಾಯ್ಪರ್ ರಾಣಿ ದೂರವಾಣಿಯಲ್ಲಿ ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಳೆದ ತಿಂಗಳು ಎರಡು ಆಸನಗಳ ಮಿರಾಜ್ 2000 ಯುದ್ಧ ವಿಮಾನವು ಮಧ್ಯಪ್ರದೇಶದ ಶಿವಪುರಿ ಬಳಿ ತರಬೇತಿಯ ಸಮಯದಲ್ಲಿ ಅಪಘಾತಕ್ಕೀಡಾಗಿತ್ತು. ಅಪಘಾತಕ್ಕೂ ಮುನ್ನ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ಪಾರಾಗಿದ್ದರು.
ನವೆಂಬರ್ 2024 ರಲ್ಲಿ ಉತ್ತರ ಪ್ರದೇಶದ ಆಗ್ರಾ ಬಳಿಯ ಮೈದಾನದಲ್ಲಿ ತರಬೇತಿಯ ಸಮಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಮಿಗ್ -29 ಯುದ್ಧ ವಿಮಾನ ಪತನವಾಗಿತ್ತು. ಈ ಘಟನೆಯಲ್ಲೂ ಪೈಲಟ್ ವಿಮಾನದಿಂದ ಹೊರಗೆ ಹಾರಿ ಪ್ರಾಣಪಾಯದಿಂದ ಪಾರಾಗಿದ್ದರು.
ಇದನ್ನು ಓದಿ :ಬೆಂಗಳೂರು| ಸಬ್-ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ