ರಾಯಚೂರು: ಜಿಲ್ಲೆಗೆ ಏಮ್ಸ್ (AIMS) ಮಂಜೂರು ಮಾಡಲು ಮತ್ತು ರಾಯಚೂರು ನೂತನ ವಿಶ್ವವಿದ್ಯಾಲಯಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ( SFI ) ರಾಯಚೂರು ಜಿಲ್ಲಾ ಸಮಿತಿಯು ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ರಾಯಚೂರು ಜಿಲ್ಲೆ ಬಡತನದ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಈಗಲೂ ಈ ಭಾಗದ ಜನತೆಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಮತ್ತು ಶಿಕ್ಷಣ ಲಭಿಸುತ್ತಿಲ್ಲ, ಉತ್ತಮ ಚಿಕಿತ್ಸೆ ಮತ್ತು ವೈದ್ಯಕೀಯ ವಿದ್ಯಾಭ್ಯಾಸ ಕ್ಕಾಗಿ ದೂರದ ಹೈದ್ರಾಬಾದ್, ಬೆಂಗಳೂರು, ಚೆನೈ, ಪುಣೆ ಮತ್ತು ಬಾಂಬೆ ಯಂತಹ ನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ.
ಈ ಕಾರಣದಿಂದ ಈ ಭಾಗದ ಜನತೆಯು ಅನಾರೋಗ್ಯಕ್ಕೆ ತುತ್ತಾದ ಮೇಲೆ ಚೇತರಿಸಿಕೊಳ್ಳುವ ಬದಲು ಸಾವಿಗೆ ತುತ್ತಾಗೊದೆ ಹೆಚ್ಚಿದೆ. ಇನ್ನೂ ವೈದ್ಯಕೀಯ ಶಿಕ್ಷಣ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳು ಬಡತನ, ಭಾಷೆ ಮತ್ತು ಪ್ರಾದೇಶಿಕ ಅಸಮಾನತೆ ಹಾಗೂ ಭೌಗೋಳಿಕ ಪ್ರದೇಶದ ವಾತವರಣದ ಕಾರಣದಿಂದ ಕಲಿಕೆಯಿಂದ ದೂರ ಉಳಿಯುವಂತಾಗಿದೆ.
ಇನ್ನೂ ನಂಜುಡಪ್ಪ ವರದಿ ಸೇರಿ ಅನೇಕ ಅಧ್ಯಯನ ವರದಿಗಳು ರಾಯಚೂರಿನಲ್ಲಿ ಏಮ್ಸ್ (AIMS) ಸ್ಥಾಪನೆ ಆಗಬೇಕು ಎನ್ನುವ ಅಂಶವನ್ನು ಹೇಳಿವೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಎರಡು ವರ್ಷಗಳ ಹಿಂದೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರು ಸೇರಿ ಕೇಂದ್ರದ ತಂಡ ಸ್ಥಳ ಪರಿಶೀಲನೆ ಸೇರಿ ಒಂದಷ್ಟು ಸಮಾಲೋಚನೆಯನ್ನು ಮಾಡಿದೆ. ನಂತರ ಏಮ್ಸ್ ಮಂಜೂರಾತಿಗಾಗಿ ಜಿಲ್ಲೆಯ ಜನರ ಒತ್ತಾಯವು ಇದೆ.
ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಗೆ ಏಮ್ಸ್ (AIMS) ಸಂಸ್ಥೆಯನ್ನು ಮಂಜೂರು ಮಾಡಬೇಕು. ಹಾಗೂ ಅನೇಕ ಹೋರಾಟಗಳ ಪ್ರತಿಫಲವಾಗಿ ಕಳೆದ ಕೆಲವು ತಿಂಗಳ ಹಿಂದೆ ಯರಗೇರಾ ಸ್ನಾತಕೋತ್ತರ ಅಧ್ಯಯನ ಕೇಂದ್ರವು ರಾಯಚೂರು ನೂತನ ವಿಶ್ವವಿದ್ಯಾಲಯವಾಗಿ ಘೋಷಣೆ ಆಗಿದೆ. ಆದರೆ ಘೋಷಣೆ ಆಗಿ ಐದು ತಿಂಗಳು ಕಳೆದರು ಇಂದಿಗೂ ವಿಶ್ವವಿದ್ಯಾಲಯದ ನೂತನ ಪ್ರಕ್ರಿಯೆ ಸೇರಿ ಅಭಿವೃದ್ಧಿಯ ಯಾವ ಕೆಲಸಗಳು ನಡೆಯುತ್ತಿಲ್ಲ. ಇದಕ್ಕೆ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಯುಜಿಸಿಯಿಂದ ಬರಬೇಕಾದ ಅನುದಾನ ಬಂದಿಲ್ಲ. ಇದರಿಂದ ಯೂನಿವರ್ಸಿಟಿ ಶೈಕ್ಷಣಿಕ ಚಟುವಟಿಕೆಗಳು ಸೇರಿ ಎಲ್ಲಾದಕ್ಕೂ ಗ್ರಹಣ ಹಿಡಿದಂತೆ ಆಗಿದೆ. ಕೂಡಲೇ ಅನುದಾನವನ್ನು ಬಿಡುಗಡೆ ಮಾಡಿ ಶೈಕ್ಷಣಿಕ ಚಟುವಟಿಕೆಗಳು ಸೇರಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕು ಈ ಎರಡು ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಸಂಬಂಧಿಸಿದಂತೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಚರ್ಚಿಸಿ ಪೂರಕ ನಿರ್ಣಯ ಕೈಗೊಂಡು ಜಾರಿಗೆ ಮುಂದಾಗಬೇಕೆಂದು ಎಂದು ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.