ಕೋಝಿಕ್ಕೋಡ್‌ನಲ್ಲಿ ಮೇ 14 ಮತ್ತು 15ರಂದು ನಡೆದ ಮೊದಲ ಅಖಿಲ ಭಾರತ ಡೈರಿ ರೈತರ ಕಾರ್ಯಾಗಾರದಲ್ಲಿ ಅಂಗೀಕರಿಸಲಾದ ಬೇಡಿಕೆಗಳ ಚಾರ್ಟರ್ ಎಲ್ಲಾ ಹೈನುಗಾರರಿಗೆ ನ್ಯಾಯಯುತ ಫಲದಾಯಕ ಬೆಲೆಯನ್ನು ಖಚಿತಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಹೈನುಗಾರರಿಗೆ ಡೈರಿ ಸಹಕಾರಿ ಸಂಘಗಳು ಮತ್ತು ಖಾಸಗಿ ಕಾರ್ಪೊರೇಟ್ ಡೈರಿಗಳ ಮಧ್ಯವರ್ತಿಗಳ ಮೂಲಕ ಪಡೆಯುವ ಬೆಲೆಯಲ್ಲಿ ಉತ್ಪಾದನಾ ವೆಚ್ಚವೂ ಸಿಗುತ್ತಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಾಲಿನ ದರವನ್ನು ಅರ್ಧಕ್ಕೆ ಇಳಿಸಲಾಗಿದ್ದು, ರೈತರಿಗೆ ಭಾರಿ ನಷ್ಟ ಮತ್ತು ದೊಡ್ಡ ಡೈರಿ ಕಾರ್ಪೊರೇಟ್ ಮತ್ತು ಸಹಕಾರಿ ಸಂಸ್ಥೆಗಳು ಆಕರ್ಷಕ ಲಾಭ ಗಳಿಸಿವೆ. ಸಹಕಾರಿ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಕಂಪನಿಗಳು ಹಾಲು ಉತ್ಪಾದಕರಿಗೆ ಅವರಿಂದ ಸಂಗ್ರಹಿಸಿದ ಹಾಲಿನ ಅನುಪಾತಕ್ಕೆ ಅನುಗುಣವಾಗಿ ಹೆಚ್ಚುವರಿ ದರದಲ್ಲಿ ಮೌಲ್ಯವರ್ಧಿತ ಹಾಲಿನ ಉತ್ಪನ್ನಗಳ ಕೈಗಾರಿಕಾ ಹೆಚ್ಚುವರಿ ಹಂಚಿಕೆಯನ್ನು ಖಚಿತಗೊಳಿಸಲು ಕೇಂದ್ರ ಸರ್ಕಾರವು ಕಾನೂನನ್ನು ಜಾರಿಗೊಳಿಸಬೇಕು ಎಂದು ಕಾರ್ಯಾಗಾರ ಒತ್ತಾಯಿಸಿತು.
ದೇಶದ ಇತರ ಭಾಗಗಳಲ್ಲಿನ ಹೈನುಗಾರರು ಹಸುವಿನ ಹಾಲಿಗೆ ರೂ.-17 ರಿಂದ ರೂ.-35 ರ ನಡುವೆ ಪಡೆಯುತ್ತಿದ್ದರೆ, ಕೇರಳ ಸಹಕಾರಿ ಡೈರಿ ಸಂಸ್ಥೆ MILMA ಪ್ರತಿ ಲೀಟರ್‌ಗೆ 38 ರೂಪಾಯಿಗಳನ್ನು ನೀಡುತ್ತದೆ , ಹಾಲಿನ ಮಾರಾಟದಿಂದ ಬರುವ ಆದಾಯದ 83% ಹಾಲು ಉತ್ಪಾದಕರಿಗೆ ಮೀಸಲಿಟ್ಟಿರುವುದರಿಂದ ಇದು ಸಾಧ್ಯವಾಗಿದೆ. ಬೇರೆಡೆಗಳಲ್ಲಿ ರೈತರಿಗೆ ಉತ್ಪಾದನಾ ವೆಚ್ಚವೂ ಸಿಗದೆ ನಷ್ಟವನ್ನು ಅನುಭವಿಸಬೇಕಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆಗೆ ತಿದ್ದುಪಡಿ ತಂದು ಹೈನುಗಾರಿಕೆಯನ್ನು ಅದರಲ್ಲಿ ಸೇರಿಸಬೇಕು ಮತ್ತು ಕನಿಷ್ಠ ಎರಡು ಹಾಲು ಜಾನುವಾರುಗಳನ್ನು ಹೊಂದಿರುವ ಮತ್ತು ಸಹಕಾರ ಸಂಘಕ್ಕೆ ಹಾಲು ನೀಡುವ ರೈತರಿಗೆ 100 ದಿನಗಳ ಕೂಲಿ ಒದಗಿಸಬೇಕು. ಇದು ಸಾಧ್ಯ ಎಂಬುದನ್ನು ಕೇರಳದ ಎಲ್‌ಡಿಎಫ್ ಸರ್ಕಾರವು ಅಯ್ಯಂಕಾಲಿ ನಗರ ಉದ್ಯೋಗ ಖಾತರಿ ಯೋಜನೆ (ಎಯುಇಜಿಎಸ್) ಮೂಲಕ ಜಾರಿಗೆ ತಂದ ಮಾದರಿಯು ತೋರಿಸುತ್ತದೆ. ಈ ಯೋಜನೆಯಡಿ ನಗರ ಪ್ರದೇಶದ ಹೈನುಗಾರರಿಗೆ ವರ್ಷಕ್ಕೆ 32,400 ರೂ. ಬಿಡುಗಡೆ ಮಾಡಲಾಗುತ್ತದೆ.ಇದನ್ನು ದೇಶಾದ್ಯಂತ ವಿಸ್ತರಿಸಿದರೆ, ಭಾರತದಲ್ಲಿ ಡೈರಿ ಕ್ಷೇತ್ರ ಮತ್ತು ಹಾಲು ಉತ್ಪಾದನೆಯಲ್ಲಿ ಅದ್ಭುತ ಅಭಿವೃದ್ಧಿಯನ್ನು ತರುತ್ತದೆ ಮತ್ತು ಗ್ರಾಮೀಣ ಪ್ರದೇಶದ ಜನರ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುತ್ತದೆ ಎಂದು ಕಾರ್ಯಾಗಾರ ಅಭಿಪ್ರಾಯ ಪಟ್ಟಿದೆ.
ಖಾಸಗಿ ಡೈರಿ ಕಾರ್ಪೊರೇಟ್ ಕಂಪನಿಗಳ ದೊಡ್ಡ ಪ್ರಮಾಣದ ಪ್ರವೇಶ ಮತ್ತು ವಿದೇಶಿ ಡೈರಿ ಉತ್ಪನ್ನಗಳ ಆಮದು ಡೈರಿ ಸಹಕಾರಿಗಳ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ. ಅನೇಕ ವಿದೇಶಿ ಕಂಪನಿಗಳು ಭಾರತೀಯ ಡೈರಿ ಕಂಪನಿಗಳೊಂದಿಗೆ ವಿಲೀನಗೊಂಡು ಇಂದು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿವೆ. ಡೈರಿ ಸಹಕಾರಿ ಸಂಸ್ಥೆಗಳು ತಮ್ಮ ಸರ್ಕಾರಗಳಿಂದ ಭಾರೀ ಸಬ್ಸಿಡಿಯನ್ನು ಪಡೆಯುವ ವಿದೇಶಿ ಕಾರ್ಪೊರೇಟ್ ಕಂಪನಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದಿರುವ ಕಾರ್ಯಾಗಾರ ಸಾಮ್ರಾಜ್ಯಶಾಹಿ ಶಕ್ತಿಗಳ ಒತ್ತಡದ ಅಡಿಯಲ್ಲಿ ಹಾಲು ಮತ್ತು ಹಾಲು ಆಧಾರಿತ ಉತ್ಪನ್ನಗಳ ಮೇಲೆ ಮುಕ್ತ ವ್ಯಾಪಾರಕ್ಕೆ ಅನುಮತಿ ನೀಡುವ ಮೂಲಕ ಭಾರತೀಯ ಮಾರುಕಟ್ಟೆಯನ್ನು ತೆರೆಯುವ ತನ್ನ ಯೋಜನೆಯಿಂದ ಕೇಂದ್ರ ಸರ್ಕಾರವು ಹಿಂದೆ ಸರಿಯಬೇಕು ಎಂದು ಆಗ್ರಹಿಸಿದೆ.
ಆರ್‌ಎಸ್‌ಎಸ್-ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಹಲವಾರು ರಾಜ್ಯಗಳಲ್ಲಿ ಗೋಹತ್ಯೆ ಸಮಸ್ಯೆಯನ್ನು ಕೋಮುವಾದೀಕರಿಸಿ ಜಾನುವಾರು ವ್ಯಾಪಾರವನ್ನು ನಿಷೇಧಿಸಿವೆ, ಹೀಗಾಗಿ ರೈತರ ಕುಟುಂಬಗಳ ಕುಟುಂಬದ ಆದಾಯದ 27% ಅನ್ನು ಒದಗಿಸುತ್ತಿದ್ದ ಜಾನುವಾರು ಆರ್ಥಿಕತೆಗೆ ಹಾನಿಯನ್ನುಂಟು ಮಾಡಿವೆ. ಈ ವಿವೇಚನಾರಹಿತ ಕ್ರಮವು ಡೈರಿ ರೈತರ ಮೇಲೆ ದ್ವಿಗುಣ ದುಷ್ಪರಿಣಾಮ ಬೀರಿದೆ- ಅವರ ಜಾನುವಾರು ಸಂಪತ್ತಿನಿಂದ ಆದಾಯವನ್ನು ಕಳೆದುಕೊಳ್ಳುವುದು ಮತ್ತು ನಿಂತಿರುವ ಬೆಳೆಗಳನ್ನು ನಾಶಪಡಿಸುವ ಬೀದಿ ದನಗಳ ಕಾಟ. ಕಾರ್ಯಾಗಾರವು ಆರ್‌ಎಸ್‌ಎಸ್-ಬಿಜೆಪಿ ನಾಯಕತ್ವದ ಕೋಮುವಾದಿ ಮನಸ್ಥಿತಿಯನ್ನು ಬಲವಾಗಿ ಖಂಡಿಸಿತು ಮತ್ತು ತಕ್ಷಣವೇ ಜಾನುವಾರು ವ್ಯಾಪಾರದ ಮಾರುಕಟ್ಟೆಗಳನ್ನು ತೆರೆಯಬೇಕು ಅಥವಾ ಆಯಾ ರಾಜ್ಯ ಸರ್ಕಾರಗಳು ಜಾನುವಾರುಗಳಿಗೆ ಮಾರುಕಟ್ಟೆ ಬೆಲೆಯನ್ನು ಪಾವತಿಸಲಿ ಮತ್ತು ಗೋಶಾಲೆಗಳಲ್ಲಿ ಅವುಗಳನ್ನು ಸಾಕಲಿ ಎಂದು ಒತ್ತಾಯಿಸಿದೆ..
ಈ ಮೊದಲ ಅಖಿಲ ಭಾರತ ಡೈರಿ ರೈತರ ಕಾರ್ಯಾಗಾರದಲ್ಲಿ 71 ಪ್ರತಿನಿಧಿಗಳು ಭಾಗವಹಿಸಿದ್ದರು. ಅಖಿಲ ಭಾರತ ಕಿಸಾನ್ ಸಭಾ ಮತ್ತು ಪಿ ಸುಂದರಯ್ಯ ಸ್ಮಾರಕ ಟ್ರಸ್ಟ್ ಜಂಟಿಯಾಗಿ ಈ ಕಾರ್ಯಾಗಾರವನ್ನು ಆಯೋಜಿಸಿದ್ದವು. ಕಾರ್ಯಾಗಾರವನ್ನು ಎಐಕೆಎಸ್ ಅಧ್ಯಕ್ಷ ಡಾ.ಅಶೋಕ್ ಢವಳೆ ಉದ್ಘಾಟಿಸಿದರು. ಎಐಕೆಎಸ್ ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್ ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಪಿ ಮೋಹನನ್ ಮಾಸ್ತರ್ ಮತ್ತು ಪನೋಳಿ ವಲ್ಸನ್ ಮಾತನಾಡಿದರು.
ಡಾ ಸುಧೀರ್ ಬಾಬು (ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ(ಕೆವಿಎಎಸ್‌ಯು)ದ ರಿಜಿಸ್ಟ್ರಾರ್ ಡಾ ದಿನೇಶ್ ಅಬ್ರೋಲ್ (ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಇನ್ಸ್ಟಿಟ್ಯೂಟ್ ಫಾರ್ ಸ್ಟಡೀಸ್‌ನಲ್ಲಿ ಫ್ಯಾಕಲ್ಟಿ), ವಿಜಯಂಬಾ ಆರ್ (ಭಾರತೀಯ ಅಂಕಿಅಂಶ ಸಂಸ್ಥೆ), ಇಂದರ್‌ಜಿತ್ ಸಿಂಗ್, ಡಾ ಅಜಿತ್ ನವಳೆ, ನವಳೆ, ರಂಜಿನಿ ಬಸು, ನಿಧೀಶ ಜಾನಿ ವಿಲ್ಲಟ್ ಮತ್ತು ಪಿ ಕೃಷ್ಣಪ್ರಸಾದ್ ವಿವಿಧ ಅಧಿವೇಶನಗಳನ್ನು ಉದ್ದೇಶಿಸಿ ಮಾತನಾಡಿದರು. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಕರ್ನಾಟಕ, ತ್ರಿಪುರ, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಹರಿಯಾಣ, ಗುಜರಾತ್, ಅಸ್ಸಾಂ, ಯುಪಿ ಮತ್ತು ಮಣಿಪುರದ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಅಖಿಲ ಭಾರತ ಡೈರಿ ರೈತರ ಒಕ್ಕೂಟ ರಚನೆ : ಪಿ.ಕೃಷ್ಣಪ್ರಸಾದ್, ಅಜಿತ್ ನವಲೆ, ಪದ್ಮಕುಮಾರ್ ಮತ್ತು ಮಹಮ್ಮದ್ ಅಲಿ ಸಂಯೋಜಕರಾಗಿರುವ ಮತ್ತು ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಮತ್ತು ಡೈರಿ ಸಹಕಾರಿಗಳ ಪ್ರತಿನಿಧಿಗಳಿರುವ ಸಂಘಟನಾ ಸಮಿತಿಯನ್ನು ಕಾರ್ಯಾಗಾರವು ನಿರ್ಧರಿಸಿತು. ಅಖಿಲ ಭಾರತ ಹೈನುಗಾರರ ಒಕ್ಕೂಟದ ರಚನೆಯು ಡೈರಿ ಸಹಕಾರಿ ಸಂಘಗಳನ್ನು ಸುಧಾರಿಸಲು ಮತ್ತು ರೈತರ ಹಿತಾಸಕ್ತಿ ಕಾಪಾಡಲು ಮಧ್ಯಪ್ರೇಶಿಸುತ್ತದೆ, ಈ ವಲಯದಲ್ಲಿ ಹೋರಾಟಗಳನ್ನು ಮುಂದಕ್ಕೆ ಕೊಂಡೊಯ್ಯುತ್ತದೆ.
ಡೈರಿ ರೈತರ ದಿನ : ನವೆಂಬರ್ 26, ವರ್ಗೀಸ್ ಕುರಿಯನ್ ಅವರ ಜನ್ಮದಿನವನ್ನು ಡೈರಿ ರೈತರ ದಿನವಾಗಿ ಆಚರಿಸಲು ಕಾರ್ಯಾಗಾರ ನಿರ್ಧರಿಸಿತು.
ಡೈರಿ ರೈತರ ಬೇಡಿಕೆ ಪಟ್ಟಿ: ಒಂದು ಜ್ಞಾಪನ ಪತ್ರ ಮತ್ತು ಬೇಡಿಕೆಗಳ ಪಟ್ಟಿಯನ್ನು ಸಂಬಂಧಪಟ್ಟ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಮತ್ತು ರಾಜ್ಯ ಮಟ್ಟದ ಸಂಘಟನೆಗಳನ್ನು ರಚಿಸಿ ಡೈರಿ ರೈತರ ಪ್ರಶ್ನೆಗಳ ಮೇಲೆ ಪ್ರತಿಭಟನಾ ಕಾರ್ಯಾಚರಣೆಗಳನ್ನು ನಡೆಸಲು ಕಾರ್ಯಾಗಾರ ನಿರ್ಧರಿಸಿದೆ.