ಗೋಧಿಯ ಸಂಪೂರ್ಣ ಸಂಗ್ರಹಣೆ ಮತ್ತು 500 ರೂ./ಕ್ವಿಂಟಾಲ್ ಬೋನಸ್‌: ಎಐಕೆಎಸ್ ಒತ್ತಾಯ

ಹವಾಮಾನ ಬದಲಾವಣೆ ಮತ್ತು ಉತ್ಪಾದನಾ ವೆಚ್ಚದಲ್ಲಿ ಅನಿಯಂತ್ರಿತ ಏರಿಕೆಯಿಂದಾಗಿ ಉತ್ಪಾದನೆಯಲ್ಲಿನ ಕುಸಿತವನ್ನು ಪರಿಗಣಿಸಿ ಗೋಧಿಯನ್ನು ಸಂಗ್ರಹಿಸಲು ಪ್ರತಿ ಕ್ವಿಂಟಾಲ್‌ಗೆ ರೂ 500 ಬೋನಸ್ ನೀಡುವಂತೆ ಅಖಿಲ ಭಾರತ ಕಿಸಾನ್‍  ಸಭಾ(ಎಐಕೆಎಸ್) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಸರ್ಕಾರಿ ಸಂಸ್ಥೆಗಳು ಸಾಕಷ್ಟು ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದ ಕಾರಣ ರೈತರು ಕಡಿಮೆ ಪ್ರಮಾಣದ ಉತ್ಪಾದನೆ ಮತ್ತು ಕಡಿಮೆ ಮಟ್ಟದ ಖರೀದಿಯ  ದುಪ್ಪಟ್ಟು ಸಂಕಟವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ರೈತರು ಕತಾಶ ಮಾರಾಟಕ್ಕೆ ಇಳಿಯಲೇಬೇಕಾದ, ಅದರಿಂದಾಗಿ ಈ ಬಿಕ್ಕಟ್ಟಿನ ಸಮಯದಲ್ಲಿ ಗಳೀಕೆ ಇನ್ನಷ್ಟು ಕಡಿಮೆಯಾಗುವ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ತಮ್ಮ ಗೋಧಿಯನ್ನು ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿದ ರೈತರಿಗೂ ಈ ಬೋನಸ್ ನೀಡಬೇಕು ಎಂದು ಎಐಕೆಎಸ್‍ ಹೇಳಿದೆ.

ಗೋಧಿ ಉತ್ಪಾದಿಸುವ ಬಹುತೇಕ ಪ್ರದೇಶಗಳಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿ ವಿಪರೀತ ಮತ್ತು ಅಕಾಲಿಕ ಬಿಸಿಲಿನ ವಾತಾವರಣದಿಂದಾಗಿ ಈ ವರ್ಷ ಉತ್ಪಾದನೆಯ 20-25% ನಷ್ಟು ಬೆಳೆ ನಷ್ಟದಿಂದ ರೈತರು ತೀವ್ರ ನಷ್ಟವನ್ನು ಎದುರಿಸುತ್ತಿದ್ದಾರೆ. ಆಗಲೂ ಮೋದಿ ಸರ್ಕಾರ ಈ ವರ್ಷ ಘೋಷಿತ ಕೋಟಾದ 4.44 ಕೋಟಿ ಟನ್ ಗೋಧಿಯ ಅರ್ಧದಷ್ಟನ್ನೂ ಖರೀದಿಸಿಲ್ಲ. ನಿಗದಿತ ಪ್ರಮಾಣದ ಗೋಧಿಯನ್ನು ಸಂಗ್ರಹಿಸಲು ಸರ್ಕಾರಿ ಸಂಸ್ಥೆಗಳು ಮುಂದಾಗದಿದ್ದರೆ, ಮುಂದಿನ ದಿನಗಳಲ್ಲಿ ಆಹಾರ ಭದ್ರತೆಗೆ ಅಪಾಯ ಉಂಟಾಗಬಹುದು  ಮತ್ತು ಹಿಟ್ಟು ಮತ್ತು ಇತರ ಆಹಾರ ಧಾನ್ಯಗಳ ಬೆಲೆಗಳು ತೀವ್ರವಾಗಿ ಏರಬಹುದು ಎಂದು ಎಐಕೆಎಸ್ ಎಚ್ಚರಿಸಿದೆ.

ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಖಾಸಗಿ ವ್ಯಾಪಾರಿಗಳು ಮತ್ತು ಕಾರ್ಪೊರೇಟ್ ಕಂಪನಿಗಳು ಕಾಳ ದಾಸ್ತಾನು ಮತ್ತು ಲಾಭಕೋರತನಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಖರೀದಿಯಲ್ಲಿ ನಿರತವಾಗಿವೆ. ಮತ್ತೊಂದೆಡೆ ವ್ಯಾಪಾರಸ್ಥರು ಹಿಟ್ಟು/ಆಟ್ಟಾ ಬೆಲೆಯನ್ನು ಏರಿಸುತ್ತಿದ್ದಾರೆ, ಹೀಗೆ ಕಾಳಸಂತೆಯ ಮೂಲಕ ಭಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಏಜೆನ್ಸಿಗಳನ್ನು ಹಿಂತೆಗೆದುಕೊಳ್ಳುವ ಮೂಲಕ, ಮೋದಿ ಸರ್ಕಾರವು ಕೃಷಿ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳಲು ಖಾಸಗಿ ವ್ಯಾಪಾರಿಗಳು ಮತ್ತು ದೊಡ್ಡ ಆಹಾರ ಕಾರ್ಪೊರೇಟ್ ಗಳಿಗೆ ಉತ್ತೇಜನೆ ನೀಡಲು ಪ್ರಯತ್ನಿಸುತ್ತಿದೆ, ಈ ಮೂಲಕ ಕೃಷಿಯನ್ನು ಕೈವಶಮಾಡಿಕೊಳ್ಳಲು ಕಾರ್ಪೊರೇಟ್ ಗಳಿಗೆ ಅನುಕೂಲ ಕಲ್ಪಿಸಿ ಕೊಡುತ್ತಿದೆ.

ಮೋದಿ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಗೋಧಿ ರಫ್ತಿಗೆ ಉತ್ತೇಜನ ನೀಡುತ್ತ ಬಂದಿದೆ. 2020-21ರಲ್ಲಿ 21.55 ಲಕ್ಷ ಟನ್‌ಗಳಷ್ಟಿದ್ದ ಗೋಧಿ ರಫ್ತು 2021-22ರಲ್ಲಿ 72.15 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಈ ನೀತಿಯು ದೇಶೀಯ ಆಹಾರ ಸಂಗ್ರಹದ ಮೇಲೆ ಪರಿಣಾಮ ಬೀರಿತು ಮತ್ತು ಗೋಧಿ ದಾಸ್ತಾನು ಕೊರತೆಯಿಂದಾಗಿ ಮೋದಿ ಸರ್ಕಾರವು ಮೊದಲು ಗೋಧಿಯನ್ನು ವಿತರಿಸಿದ ಪ್ರದೇಶಗಳಲ್ಲಿ ಅಕ್ಕಿಯನ್ನು ವಿತರಿಸ ಬೇಕಾಗಿ ಬಂತು. ಮೋದಿ ಸರ್ಕಾರವು ಈ ಅತಂತ್ರದ ಪರಿಸ್ಥಿತಿಯನ್ನು ನಿರ್ವಹಿಸಲು ಅಸಮರ್ಥವಾಗಿದೆ. ಇದು ರೈತರು ವ್ಯಾಪಕವಾಗಿ ಹತಾಶ ಮಾರಾಟಕ್ಕೆ ಇಳಿಯುವಂತೆ ಮಾಡಿ ಅವರ ಸಂಕಟಗಳನ್ನು ಹೆಚ್ಚಿಸುವುದರೊಂದಿಗೇ ಜನಗಳ ಆಹಾರ ಭದ್ರತೆಯನ್ನು ನಾಶಪಡಿಸುವ ಅಪಾಯಕ್ಕೆ ಕಾರಣವಾಗುತ್ತದೆ.  ಇದೀಗ ಮೋದಿ ಸರ್ಕಾರದ  ರೈತ ವಿರೋಧಿ ನೀತಿ ಎಂದು ಎಐಕೆಎಸ್ ಬಲವಾಗಿ ಪ್ರತಿಭಟಿಸಿದೆ.

Donate Janashakthi Media

Leave a Reply

Your email address will not be published. Required fields are marked *