ಎಐಕೆಎಸ್ ಅಖಿಲ ಭಾರತ ಸಮ್ಮೇಳನದ ಲೋಗೋ ಬಿಡುಗಡೆ

ನವದೆಹಲಿ :  ಅಖಿಲ ಭಾರತ ಕಿಸಾನ್‌ ಸಭಾ(ಎಐಕೆಎಸ್‌) ಸಂಘಟನೆಯ ಒಂದು ಕೋಟಿ 37 ಲಕ್ಷ ಸದಸ್ಯತ್ವವನ್ನು ಪ್ರತಿನಿಧಿಸಿ ದೇಶದ 24 ರಾಜ್ಯಗಳಿಂದ ಸುಮಾರು 800 ಪ್ರತಿನಿಧಿಗಳು ಭಾಗವಹಿಸಲಿರುವ 35ನೇ ಅಖಿಲ ಭಾರತ ಸಮ್ಮೇಳನ 2022 ಡಿಸೆಂಬರ್ 13-16 ರವರೆಗೆ ಕೇರಳ ರಾಜ್ಯದ ತ್ರಿಶ್ಯೂರ್ ನಡೆಯಲಿದೆ.

ನೆನ್ನೆ(ಅಕ್ಟೋಬರ್‌ 29) ಎಐಕೆಎಸ್‌ ಸಮ್ಮೇಳನದ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಈ ಸಂದರ್ಭದಲ್ಲಿ ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನನ್ ಮೊಲ್ಲಾ, ಎಐಕೆಎಸ್ ಅಧ್ಯಕ್ಷ ಡಾ.ಅಶೋಕ್ ಧವಳೆ, ಎಐಕೆಎಸ್ ಉಪಾಧ್ಯಕ್ಷ ಅಮ್ರಾ ರಾಮ್, ಎಐಕೆಎಸ್ ಜಂಟಿ ಕಾರ್ಯದರ್ಶಿಗಳಾದ ವಿಜುಕೃಷ್ಣನ್ ಹಾಗೂ ಪಿ ಶಣ್ಮುಗಮ್ ಮತ್ತು ಎಐಕೆಎಸ್ ಹಣಕಾಸು ಕಾರ್ಯದರ್ಶಿ ಪಿ ಕೃಷ್ಣಪ್ರಸಾದ್ ರವರು ಎಐಕೆಎಸ್ ನ 35ನೇ ಅಖಿಲ ಭಾರತ ಸಮ್ಮೇಳನದ ಲೋಗೋ ಬಿಡುಗಡೆಗೊಳಿಸಿ ಸಮ್ಮೇಳನದ ರೂಪುರೇಷೆಗಳ ಕುರಿತು ಮಾತನಾಡಿದರು.

ಎಐಕೆಎಸ್‌ ಸಂಘಟನೆಯ ಸದಸ್ಯತ್ವ ಕಳೆದ ಒಂದು ವರ್ಷದಲ್ಲಿ ಸುಮಾರು 20 ಲಕ್ಷದಷ್ಟು ಹೆಚ್ಚಳವಾಗಿದ್ದು  “ಹೋರಾಟ, ಕ್ರೂಢೀಕರಣ, ಪರ್ಯಾಯದ ಕಡೆಗೆ ಮುನ್ನಡೆ” ಎಂಬುದು ಈ ಸಮ್ಮೇಳನದ ಘೋಷವಾಕ್ಯವಾಗಿದೆ ಎಂದು ತಿಳಿಸಿದರು.

ಕಾರ್ಪೊರೇಟ್ ಪರವಾದ, ರೈತ ವಿರೋಧಿಯಾದ ಕರಾಳ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಳ್ವಿಕೆಯನ್ನು ಮಣಿಸಿದ 2020-21 ರ ವರ್ಷಗಳ ಕಾಲ ನಡೆದ ಐತಿಹಾಸಿಕ ಸಂಯುಕ್ತ ರೈತ ಚಳವಳಿ ನಂತರ ನಡೆಯುತ್ತಿರುವ ಈ ಸಮ್ಮೇಳನ ವು  ಬಿಜೆಪಿ -ಆರ್ ಎಸ್ ಎಸ್ ಆಳ್ವಿಕೆಯ ರೈತ ವಿರೋಧಿ, ಜನ ವಿರೋಧಿ, ಕಾರ್ಪೊರೇಟ್ ಪರ,ಕೋಮುವಾದಿ ಹಾಗೂ ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಸ್ವತಂತ್ರ ಮತ್ತು ಸಂಯುಕ್ತ ಹೋರಾಟಗಳನ್ನು ಬಲಗೊಳಿಸುವ ಉದ್ದೇಶಕ್ಕೆ ಪೂರಕವಾಗಿ ಅಗತ್ಯ ರಾಜಕೀಯ ಪ್ರಚಾರಾಂದೋಲನ ಮತ್ತು ಸಂಘಟನೆಯನ್ನು ಸಬಲಗೊಳಿಸುವ ಕುರಿತು ಚರ್ಚಿಸಲಿದೆ‌ ಎಂದು ತಿಳಿಸಿದರು.

ಅಭೂತಪೂರ್ವ ಕಿಸಾನ್ ಲಾಂಗ್ ಮಾರ್ಚ್ ನ ರೈತ ಹೋರಾಟದ ಸ್ಪೂರ್ತಿ, ಕೃಷಿಯಲ್ಲಿ ಹಾಗೂ ರೈತ ಚಳವಳಿಯಲ್ಲಿ ಮಹಿಳೆಯರು ವಹಿಸುತ್ತಿರುವ ಮುಂಚೂಣಿ ಪಾತ್ರ ಚಿತ್ರಿಸಿರುವ ಲೋಗೋ ಬಿಡುಗಡೆ ಕೂಡ ಮಾಡಲಾಯಿತು.

ಸಮ್ಮೇಳನಕ್ಕೆ ಲೋಗೋ ಚಿತ್ರ ಆಹ್ವಾನಿಸಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ಬಂದಿದ್ದ ಹಲವಾರು ಲೋಗೋಗಳಲ್ಲಿ ಕೇರಳ ರಾಜ್ಯದ ಎರ್ನಾಕುಲಂ ನ ಯುವ ಕಲಾವಿದ ಅಶ್ವಥ್ ರವರ ಚಿತ್ರ ಆಯ್ಕೆಯಾಗಿದ್ದು ಅವರಿಗೆ ಸಮ್ಮೇಳನದಲ್ಲಿ ಬಹುಮಾನ ವಿತರಿಸಲಾಗುವುದು ಹಾಗೂ ಸ್ಪರ್ಧೆಗೆ ಬಂದಿದ್ದ ಎಲ್ಲಾ ಲೋಗೋಗಳ ಪ್ರದರ್ಶನವನ್ನು ಸಮ್ಮೇಳನದಲ್ಲಿ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಲೋಗೋ ದಲ್ಲಿ ಇರುವ ಕೆಂಪು ಸೂರ್ಯ ಸಂಯುಕ್ತ ಹೋರಾಟಗಳ ವಿಜಯದ ಭರವಸೆಯ ಸಂಕೇತವಾಗಿದ್ದು, ರೈತಾಪಿ ಸಮುದಾಯವನ್ನು ದಿವಾಳಿಯಾಗಿಸುತ್ತಿರುವ ಕಾರ್ಪೊರೇಟ್ ಲೂಟಿಯ ನವ ಉದಾರವಾದಿ ಧೋರಣೆಗಳಿಗೆ, ದ್ವೇಷದ ಕೋಮುವಾದಿ ರಾಜಕೀಯಕ್ಕೆ ಪರ್ಯಾಯವಾಗಿ ಬಲಿಷ್ಠ ಕಾರ್ಮಿಕ -ರೈತ ಸಖ್ಯತೆ ಸಾಧಿಸಿ, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಬಲವಾಗಿ ರಕ್ಷಿಸಿಕೊಳ್ಳುವ ಭರವಸೆಯ ಅಭಿವ್ಯಕ್ತಿಯಾಗಿದೆ ಎಂದು ವಿವರಿಸಿದರು.

35ನೇ ಸಮ್ಮೇಳನದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬ್ರಿಟಿಷ್ ಸಾಮ್ರಾಜ್ಯಶಾಹಿ ಹಾಗೂ ಪಾಳೇಗಾರಿ ದಮನದ ವಿರುದ್ಧ ಹೋರಾಡಿದ್ದ ವೀರ ಸೇನಾನಿ ಬಿರ್ಸಾ ಮುಂಡ ರವರ ಜನ್ಮ ದಿನಾಚರಣೆ ದಿನವಾದ 15 ನವೆಂಬರ್ 2022ರಂದು ದೇಶದ ಎಲ್ಲಾ ಗ್ರಾಮಗಳಲ್ಲಿ ಧ್ವಜ ದಿನಾಚರಣೆ ನಡೆಸಿ ಎಐಕೆಎಸ್ ಬಾವುಟ ಹಾರಿಸಲಾಗುವುದು. ಸಮ್ಮೇಳನದ ಭಾವುಟವು, ಪುನ್ನಪ್ರ ವಯಲಾರ್ ನಿಂದ  ಧ್ವಜ ಸ್ತಂಭ ಕಯ್ಯೂರಿನಿಂದ ಮೆರವಣಿಗೆ ಬರಲಿದ್ದು ಡಿಸೆಂಬರ್ 12 ರಂದು ತ್ರಿಶ್ಯೂರ್ ತಲುಪಲಿದೆ.

ಹುತಾತ್ಮ ಜ್ಯೋತಿ ಜಾಥಾ

ಇದೇ ಹಿನ್ನೆಲೆಯಲ್ಲಿ ಎರಡು ಹುತಾತ್ಮ ಜ್ಯೋತಿ ಜಾಥಾಗಳು ಹೊರಡುತ್ತಿದ್ದು, ತೆಲಂಗಾಣ ಸಶಸ್ತ್ರ ರೈತ ಹೋರಾಟದ ಸ್ಥಳವಾದ ಹಾಗೂ ಈ ಹೋರಾಟದ ಮೊದಲ ಹುತಾತ್ಮ ದೊಡ್ಡಿ ಕೊಮರಯ್ಯ ರವರ ಗ್ರಾಮವಾದ ಜಂಗಾವ್ ನಿಂದ ಹೊರಡುವ ಜಾಥದ ನೇತೃತ್ವವನ್ನು ಎಐಕೆಎಸ್ ಹಣಕಾಸು ಕಾರ್ಯದರ್ಶಿ ಪಿ.ಕೃಷ್ಣಪ್ರಸಾದ್ ವಹಿಸಿದ್ದರೆ ಮತ್ತೊಂದು ಜಾಥಾವು ಎಐಕೆಎಸ್ ಜಂಟಿ ಕಾರ್ಯದರ್ಶಿ ವಿಜು ಕೃಷ್ಣನ್ ನೇತೃತ್ವದಲ್ಲಿ ಮೇಲ್ಜಾತಿ ಪಾಳೇಗಾರಿ ಭೂ ಮಾಲೀಕರು ಹಾಗೂ ಅವರ ಗೂಂಡಾಗಳಿಂದ  44 ಕೃಷಿ ಕೂಲಿಕಾರರು ಕೊಲೆಯಾಗಿದ್ದ ತಮಿಳುನಾಡಿನ ಕಿಲ್ವನ್ಮಣಿ ಯಿಂದ ಹೊರಟು ಸೇಲಂ ಮೂಲಕ ಸಾಗುತ್ತಾ ಅಲ್ಲಿ ಸೇಲಂ ಜೈಲ್ ಹುತಾತ್ಮರಿಗೆ ಗೌರವ ಸಲ್ಲಿಸಲಿದೆ. (1950 ಪೆಬ್ರವರಿ 11 ರಂದು ರೈತ ಚಳವಳಿಯ ನಾಯಕರು ಸೇರಿದಂತೆ 22 ಜನ ಸಂಗಾತಿಗಳು ಪೊಲೀಸ್ ಗೋಲಿಬಾರ್ ಗೆ ಹುತಾತ್ಮರಾಗಿದ್ದರು.) ಈ ಎರಡೂ ಜಾಥಾಗಳು ತಮ್ಮ ಮಾರ್ಗದ ಉದ್ದಕ್ಕೂ ಸಭೆಗಳನ್ನು ನಡೆಸಿಕೊಂಡು ಡಿಸೆಂಬರ್ 12 ರಂದು ಸಮ್ಮೇಳನದ ಸ್ಥಳವಾದ ತ್ರಿಶ್ಯೂರ್ ತಲುಪಲಿದೆ.

ಡಿಸೆಂಬರ್ 16ರಂದು ಒಂದು ಲಕ್ಷ ರೈತರ ಬೃಹತ್ ರ‍್ಯಾಲಿ ಹಾಗೂ ಬಹಿರಂಗ ಸಭೆ ಮೂಲಕ ಸಮ್ಮೇಳನ ಸಮಾರೋಪಗೊಳ್ಳಲಿದ್ದು ಕೇರಳ ರಾಜ್ಯದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಬಹಿರಂಗ ಸಭೆ ಉದ್ಘಾಟಿಸಲಿದ್ದು ಎಐಕೆಎಸ್ ನ ವಿವಿಧ ನಾಯಕರು ಸಭೆಯನ್ನು ಉದ್ದೇಶಿಸಿ ಮಾತಾನಾಡಲಿದ್ದಾರೆ.

34ನೇ ಅಖಿಲ ಭಾರತ ಸಮ್ಮೇಳನ ಐದು ವರ್ಷಗಳ ಹಿಂದೆ ಹರ್ಯಾಣದ ಹಿಸ್ಸಾರ್ ನಲ್ಲಿ 2017 ರ ಆಕ್ಟೋಬರ್ ರಲ್ಲಿ ನಡೆದಿತ್ತು.

Donate Janashakthi Media

Leave a Reply

Your email address will not be published. Required fields are marked *