ಹಿಂಗಾರು ಕನಿಷ್ಟ ಬೆಂಬಲ ಬೆಲೆಗಳ ಘೋಷಣೆಯಲ್ಲೂ ರೈತರಿಗೆ ವಂಚನೆ, ನಷ್ಟ
ಜೂನ್ 7, 2023 ರಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2023-24ರ ಹಿಂಗಾರಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್‍ಪಿ) ಘೋಷಿಸಿದೆ. ಇವು ಅನ್ಯಾಯಯುತವಾಗಿದ್ದು, ರೈತರ ನಿರೀಕ್ಷೆಗಳನ್ನು ಸುಳ್ಳಾಗಿಸಿವೆ ಮತ್ತು ಅವರ ಆದಾಯದಲ್ಲಿ ಭಾರಿ ನಷ್ಟವನ್ನು ಉಂಟುಮಾಡುತ್ತದೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಹೇಳಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿಕೊಂಡಂತೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬದಲು, ಹೆಚ್ಚುತ್ತಿರುವ ಲಾಗುವಾಡು ವೆಚ್ಚಗಳು ಮತ್ತು ಜತೆಗೆ ಈ ಅನ್ಯಾಯಯುತ ಎಂಎಸ್‍ಪಿ ಬಹುಪಾಲು ರೈತರನ್ನು, ವಿಶೇಷವಾಗಿ ಸಣ್ಣ, ಅತಿ ಸಣ್ಣ, ಮಧ್ಯಮ ರೈತರು ಮತ್ತು ಹಿಡುವಳಿದಾರರನ್ನು ಸಾಲದ ಸುಳಿಯಲ್ಲಿ ತಳ್ಳುತ್ತದೆ. ಸ್ವಾಮಿನಾಥನ್ ಆಯೋಗದ ಶಿಫಾರಸಿನ ಪ್ರಕಾರ ಸಿ2+50%( C2+50 %) ಎಂಎಸ್‌ಪಿ ನೀಡಲಾಗುವುದು ಎಂದು 2014ರಲ್ಲಿ ಪ್ರಧಾನಿ ನೀಡಿದ ದೀರ್ಘಕಾಲದ ಆಶ್ವಾಸನೆ ಚುನಾವಣಾ ಲೊಳಲೊಟ್ಟೆಯಾಗಿಯೇ ಉಳಿದಿದೆ. ಒಂದೇ ಒಂದು ಬೆಳೆಗೂ ಈ ಸೂತ್ರದ ಪ್ರಕಾರ ಎಂಎಸ್‌ಪಿ ನಿಗದಿಯಾಗಿಲ್ಲ ಎಂದು ಎಐಕೆಎಸ್ ಹೇಳಿದೆ.
C2 ಅಂದರೆ ಒಂದು ಬೆಳೆಯ ಸಮಗ್ರ ವೆಚ್ಚ. ಕೃಷಿ ಬೆಲೆಗಳು ಮತ್ತು ವೆಚ್ಚಗಳ ಆಯೋಗ (ಸಿಎಸಿಪಿ) ಒಂದು ಬೆಳೆಯ ವೆಚ್ಚವನ್ನು ಲೆಕ್ಕ ಹಾಕಲು A2+FL ನ್ನು ಪರಿಗಣಿಸುತ್ತದೆ. ಇದು C2 ಗಿಂತ ಕಡಿಮೆ ಇರುತ್ತದೆ. ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿರುವುದು C2ನ್ನು ಪರಿಗಣಿಸಬೇಕು ಎಂಬುದನ್ನು ಇಲ್ಲಿ ಗಮನಿಸಬೇಕು.
ಸರ್ಕಾರವು C2+50% ವನ್ನು ಅನುಷ್ಠಾನಗೊಳಿಸದ ಕಾರಣ ಭತ್ತ ಬೆಳೆಯುವ ರೈತರು ಅನುಭವಿಸಿದ ನಷ್ಟವು ಸುಮಾರು ಕ್ವಿಂಟಾಲಿಗೆ ರೂ.683.5 ಆಗಿದೆ. ಉತ್ಪಾದಕತೆ ಸರ್ಕಾರದ ಅಂದಾಜಿನಂತೆ 4 ಟನ್/ಹೆಕ್ಟೇರ್ ಎಂದು ಪರಿಗಣಿಸಿದರೆ ಸಿ2 ವೆಚ್ಚವನ್ನು ಗಣನೆಗೆ ತೆಗೆದುಕೊಂಡರೆ ಅನುಭವಿಸಿದ ನಷ್ಟವು ಹೆಕ್ಟೇರಿಗೆ ರೂ.27340 ಆಗುತ್ತದೆ. ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ, ಎಳ್ಳು, ಮತ್ತು ಹತ್ತಿಯಲ್ಲಿ, ಪ್ರತಿ ಕ್ವಿಂಟಾಲ್‌ನ ನಷ್ಟವು ಸುಮಾರು ರೂ.2000 ನಿಂದ ರೂ.3000ಗಿಂತಲೂ ಹೆಚ್ಚಾಗಿರುತ್ತದೆ.
ಕೆಳಗಿನ ಕೋಷ್ಟಕವು ಅನ್ಯಾಯದ, ಫಲದಾಯಕವಲ್ಲದ ಎಂಎಸ್‍ಪಿ ಯಿಂದ ರೈತರು ಅನುಭವಿಸಿದ ದೊಡ್ಡ ನಷ್ಟವನ್ನು ತೋರಿಸುತ್ತದೆ.
ಬೆಳೆ | A2+FL | C2 | C 2 -A2+FL | ಎಂ ಎಸ್ ಪಿ | C2+50 % | ರೈತರಿಗೆ ನಷ್ಟ /ಪ್ರತಿ ಕ್ವಿಂ.ಗೆ |
ಗೋದಿ | 1128 | 1652 | 524 | 2275 | 2478 | 203 |
ಬಾರ್ಲಿ | 1158 | 1614 | 456 | 1850 | 2421 | 571 |
ಕಡಲೆ | 3400 | 4547 | 1147 | 5440 | 6820.5 | 1380.5 |
ಮಸೂರ್ | 3405 | 4890 | 1485 | 6425 | 7335 | 910 |
ಸಾಸಿವೆ | 2855 | 4068 | 1213 | 5650 | 6102 | 452 |
ಸೂರ್ಯಕಾಂತಿ | 3807 | 5414 | 1607 | 5800 | 8121 | 2321 |
ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದ ಭತ್ತದ ಯೋಜಿತ ಉತ್ಪಾದನಾ ವೆಚ್ಚದ ಅಂದಾಜುಗಳು ಸಿ.ಎ.ಸಿ.ಪಿ.ಅಂದಾಜು ಮಾಡಿರುವುದಕ್ಕಿಂತ ಹೆಚ್ಚಿರುವುದನ್ನು ಗಮನಿಸಬೇಕು. ಅಂತೆಯೇ, ಹೆಚ್ಚಿನ ಬೆಳೆಗಳಲ್ಲಿ ರಾಜ್ಯದ ಅಂದಾಜುಗಳು ಸಿ.ಎ.ಸಿ.ಪಿ.ಅಂದಾಜು ಗಳಿಗಿಂತ ಹೆಚ್ಚು. ಆದ್ದರಿಂದ ವಾಸ್ತವದಲ್ಲಿ, ಮೊದಲು ಸಿ.ಎ.ಸಿ.ಪಿ. ರಾಜ್ಯಗಳಲ್ಲಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಪಾತ್ರವನ್ನು ವಹಿಸುತ್ತದೆ ಮತ್ತು ನಂತರ ಅಖಿಲ ಭಾರತ ವೆಚ್ಚದ ಅಂದಾಜುಗಳನ್ನು ತಲುಪಲು ಸರಾಸರಿ ತೂಕವನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಕೇರಳದಲ್ಲಿ ಭತ್ತದ ಸಿ2(C2) ವೆಚ್ಚವು ರಾಜ್ಯದ ಅಂದಾಜಿನ ಪ್ರಕಾರ ರೂ.2847/ಕಿಂ. ಆಗಿದ್ದರೆ, ಸಿ.ಎ.ಸಿ.ಪಿ.ಅಂದಾಜು ರೂ.2338/ಕ್ವಿಂ.ಮಾತ್ರ. ಭತ್ತಕ್ಕೆ ಸಿ 2(C2) ವೆಚ್ಚದ ಪಂಜಾಬ್ ರಾಜ್ಯದ ಅಂದಾಜು ರೂ..2089/ಕ್ವಿಂ. ಆಗಿದ್ದರೆ ಸಿ.ಎ.ಸಿ.ಪಿ. ಅದನ್ನು ರೂ..1462/ ಕ್ವಿಂ. ಎಂದು ಯೋಜಿಸುತ್ತದೆ. ತೊಗರಿಯಲ್ಲಿ ಸಿ2 ವೆಚ್ಚವನ್ನು ಕರ್ನಾಟಕ ರಾಜ್ಯವು ರೂ.9588/ಕ್ವಿಂ. ಎಂದು ಅಂದಾಜಿಸಿದರೆ, ಸಿ.ಎ.ಸಿ.ಪಿ.ಅಂದಾಜು ರೂ.5744/ಕ್ವಿಂ. ಮಾತ್ರ, ಅಂದರೆ ರೂ.3844/ಕ್ವಿಂ.ಕಡಿಮೆ. ಹತ್ತಿಗೆ ತೆಲಂಗಾಣ ರಾಜ್ಯದ ಅಂದಾಜು ರೂ.11031/ಕ್ವಿಂ. ಆಗಿದ್ದರೆ, ಸಿಎಸಿಪಿ ಅಂದಾಜು ರೂ.6264/ಕ್ವಿಂ. ಅಂದರೆ ರೂ.4767/ಕ್ವಿಂ. ಕಡಿಮೆ. ರಾಜ್ಯಗಳು ಸೂಚಿಸಿದ ಎಂಎಸ್‍ಪಿಯ ಸರಾಸರಿಯನ್ನು ಗಣನೆಗೆ ತೆಗೆದುಕೊಂಡರೆ ಸರಾಸರಿ ಎಂಎಸ್‍ಪಿ ರೂ.2960/ಕ್ವಿಂ.ಆಗುತ್ತಿತ್ತು. ಬಿಜೆಪಿ ಸರ್ಕಾರದ ಘೋಷಣೆಯು ರಾಜ್ಯದ ಸರಾಸರಿಗಿಂತ ರೂ..776/ಕ್ವಿಂ. ನಷ್ಟು ಕಡಿಮೆಯಾಗಿದೆ. ಇದು ಇತರ ಬೆಳೆಗಳಿಗೂ ಅನ್ವಯಿಸುತ್ತದೆ.
ಈ ರೀತಿಯಾಗಿ ಎಲ್ಲಾ ಬೆಳೆಗಳಿಗೆ ಕಡಿಮೆ ಉತ್ಪಾದನಾ ವೆಚ್ಚದ ಲೆಕ್ಕಾಚಾರದಿಂದಾಗಿ ಮತ್ತು ಇವನ್ನೆಲ್ಲ ಪರಿಗಣಿಸಿದ ಅಖಿಲ ಭಾರತ ಸರಾಸರಿ ಇನ್ನೂ ಕಡಿಮೆಯಾಗಿದೆ. ವೆಚ್ಚದ ಲೆಕ್ಕಾಚಾರದಲ್ಲಿಯೇ ರೈತರಿಗೆ ಮೊದಲು ಮೋಸವಾಗುತ್ತದೆ. ಹೆಚ್ಚಿನ ಉತ್ಪಾದನಾ ವೆಚ್ಚವನ್ನು ಹೊಂದಿರುವ ರಾಜ್ಯಗಳಲ್ಲಿನ ರೈತರು ಎರಡನೇ ಬಾರಿ ವಂಚನೆಗೊಳಗಾಗುತ್ತಾರೆ ಏಕೆಂದರೆ ಈ ಅಖಿಲ ಭಾರತ ಸರಾಸರಿ ವೆಚ್ಚವು ಅವರ ವಾಸ್ತವಿಕ ವೆಚ್ಚಕ್ಕಿಂತ ಕಡಿಮೆಯೇ ಇರುತ್ತದೆ. ಇದಲ್ಲದೆ ಯಾವುದೇ ಖಚಿತವಾದ ಸಂಗ್ರಹಣೆ ಇಲ್ಲದಿರುವುದರಿಂದ ಈ ಎಂಎಸ್‍ಪಿ ಗಳು ಬಹುತೇಕ ಕಾಲ್ಪನಿಕ ಅಥವಾ ಕಾಗದದ ಮೇಲೆಯೇ ಉಳಿಯುವುದರಿಂದ ಮೂರನೇ ಬಾರಿ ರೈತರು ವಂಚನೆಗೊಳಗಾಗುತ್ತಾರೆ, ಯಾವುದೇ ಸಂದರ್ಭದಲ್ಲಿ ಎ2+ ಎಫ್‍ಎಲ್ (A2+FL) ವೆಚ್ಚಗಳು ಸಿ 2 ವೆಚ್ಚಗಳಿಗಿಂತ ತುಂಬಾ ಕಡಿಮೆ. ಅಂತಹ ವೆಚ್ಚದ ಲೆಕ್ಕಾಚಾರಗಳ ಆಧಾರದ ಮೇಲೆ ಎಂಎಸ್‍ಪಿ ಯನ್ನು ನಿರ್ಧರಿಸಲಾಗುತ್ತದೆ. ಇದೂ ಸಾಲದೆಂಬಂತೆ ಸಿ.ಎ.ಸಿ.ಪಿ.ಮತ್ತು ಬಿಜೆಪಿ ಸರ್ಕಾರವು ರಾಜ್ಯಗಳು ಉತ್ಪಾದನಾ ಬೋನಸ್ ಅಥವಾ ಪ್ರೋತ್ಸಾಹಕಗಳನ್ನು ನೀಡುವುದನ್ನು ನಿರುತ್ಸಾಹಗೊಳಿಸುತ್ತವೆ, ಉದಾಹರಣೆಗೆ ಕೇರಳದಲ್ಲಿ ಭತ್ತಕ್ಕೆ ನೀಡಲಾದ ರೂ.780/ಕ್ವಿಂ. ಬೋನಸ್, ಜಾರ್ಖಂಡ್‌ನಲ್ಲಿ ರೂ.110/ಕ್ಯೂಕ್ವಿಂ., ತಮಿಳುನಾಡು ಮತ್ತು ಬಿಹಾರದಲ್ಲಿ ರೂ.75/ಕ್ವಿಂ. ಇತ್ಯಾದಿ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಂಎಸ್‍ಪಿ ಯನ್ನು ಪರಿಷ್ಕರಿಸಬೇಕು ಮತ್ತು ಸಿ2+50% ಸೂತ್ರದ ಪ್ರಕಾರ ಅದನ್ನು ಹೆಚ್ಚಿಸಬೇಕು ಮತ್ತು ಆ ದರಗಳಲ್ಲಿ ಸಂಗ್ರಹಣೆಯ ಖಾತ್ರಿ ನೀಡಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಒತ್ತಾಯಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಅಲ್ಲಿ ದತ್ತಾಂಶ ಸಂಗ್ರಹಣೆ ನಡೆಯುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿರುವ ಎಐಕೆಎಸ್, ಬಿಜೆಪಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರವನ್ನೂ ಸೇರಿಸಿ ಅಲ್ಲಿಯ ರೈತರಿಂದಲೂ ಸಂಗ್ರಹಣೆಯ ಖಾತರಿ ನೀಡಬೇಕು ಎಂದು ಆಗ್ರಹಿಸಿದೆ.. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ರೈತರಿಗೆ ಮಾಡುತ್ತಿರುವ ವಿಶ್ವಾಸದ್ರೋಹದ ವಿರುದ್ಧ ಪ್ರತಿಭಟಿಸಲು ಮತ್ತು ಅವರ ಮೋಸದ ದಾವೆಗಳನ್ನು ಬಯಲಿಗೆಳೆಯಲು ಎದ್ದು ನಿಲ್ಲಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.